೬೧. ವಾಲಿಯ ಮರಣ


ರಾಮನ ಮಾತಿಗೆ ಸುಗ್ರೀವ ಒಪ್ಪಿ ಮತ್ತೆ ಕಿಷ್ಕಿಂಧೆಗೆ ಹೊರಟ. ಅವನ ಹಿಂದೆ ರಾಮ, ಲಕ್ಷ್ಮಣ, ಹನುಮಂತ, ಮತ್ತಿತರೂ ಹೊರಟರು. ಸುತ್ತಮುತ್ತಲಿನ ಪರಿಸರವನ್ನು ನೋಡುತ್ತಾ ಹೊರಟ ಅವರಿಗೆ ಒಂದು ಅವ್ಯಕ್ತವಾದ ಗಂಧರ್ವಗಾನ ಕೇಳಿಸಿತು. ಅಲ್ಲಿದ್ದ ಮರಗಳಿಗೆ ಗಿಳಿ ಬಣ್ಣದ ಹೊಗೆ ಸುತ್ತಿಕೊಂಡಿತ್ತು. ರಾಮ ಅದರ ಬಗ್ಗೆ ವಿಚಾರಿಸಿದಾಗ, ಸಗ್ರೀವ ನಡೆಯುತ್ತಲೇ ಹೇಳಿದ: “ರಾಮ, ಮುಂಚೆ ಇಲ್ಲಿ ಸಪ್ತಜನರೆಂಬ ೭ ಋಷಿಗಳಿದ್ದರು. ಅವರು ತಲೆಕಾಲು ಮೇಲೆಕೆಳಗಾಗಿ ೭೦೦ ವರ್ಷ ತಪಸ್ಸು ಮಾಡಿದರು. ೭೦೦ ವರ್ಷಗಳಲ್ಲಿ ಪ್ರತಿ ೭ ರಾತ್ರಿಗೊಮ್ಮೆ ಮಾತ್ರ ಗಾಳಿಯನ್ನು ಆಹಾರವಾಗಿ ಸೇವಿಸುತ್ತಿದ್ದರು. ಅವರ ತಪಸ್ಸಿಗೆ ಮೆಚ್ಚಿದ ಇಂದ್ರ ಅವರನ್ನು ಸ್ವರ್ಗಕ್ಕೆ ಕರೆದುಕೊಂಡು ಹೋದ. ಅವರ ತಪಃಶ್ಶಕ್ತಿ ಇನ್ನೂ ಈ ವನದಲ್ಲಿದೆ. ಆದ್ದರಿಂದಲೇ ಇಂದಿಗೂ ಈ ವನದೊಳಕ್ಕೆ ಕ್ರೂರ ಮೃಗಗಳು ಹೋಗುವುದಿಲ್ಲ. ನೀನು ಮತ್ತು ಲಕ್ಷ್ಮಣ ಅದರ ಕಡೆ ನಮಸ್ಕಾರ ಮಾಡಿ.”

ಸುಗ್ರೀವನು ಹೇಳಿದಂತೆ ರಾಮಲಕ್ಷ್ಮರು ಆ ವನದ ಕಡೆ ನಮಸ್ಕಾರ ಮಾಡಿದರು. ನಂತರ ಎಲ್ಲರೂ ಉತ್ಸಾಹದಿಂದ ಹೊರಟರು. ಕಿಷ್ಕಿಂಧೆ ಸೇರಿದ ಮೇಲೆ ಸುಗ್ರೀವ ಜೋರಾಗಿ ಕೂಗುತ್ತಾ ಮತ್ತೆ ವಾಲಿಯನ್ನು ಕರೆದ. ವಾಲಿ ಹೊರಗೆ ಬರುವಾಗ ಅವನ ಪತ್ನಿ ತಾರೆ (ಸುಷೇಣನ ಮಗಳು) ತಡೆದು ಹೇಳಿದಳು: “ಆತುರಪಟ್ಟು ಹೋಗಬೇಡ. ಸುಗ್ರೀವ ಕೇವಲ ಒಂದು ಗಂಟೆಯ ಹಿಂದೆಯಷ್ಟೇ ಬಂದಿದ್ದ. ನವರಂಧ್ರಗಳಲ್ಲಿ ರಕ್ತಕಾರಿಸಿಕೊಂಡು ಹೋದವನು ಅಷ್ಟು ಬೇಗ ಮತ್ತೆ ಬಂದನೆಂದರೆ ನಿನಗೆ ಅನುಮಾನ ಬರುತ್ತಿಲ್ಲವೇ? ಅವನು ಯುದ್ಧಕ್ಕೆ ಕರೆಯುತ್ತಿರುವುದು ನನಗೆ ಅನುಮಾನ ತರಿಸುತ್ತಿದೆ. ಅವನು ಕರೆಯುವ ರೀತಿಯಲ್ಲಿ ಬದಲಾವಣೆಯಾಗಿದೆ. ಧ್ವನಿಯಲ್ಲಿ ಈಗ ತಾನೇ ಏಟು ತಿಂದ ಬಲಹೀನತೆ ಕಾಣುತ್ತಿಲ್ಲ. ಬದಲಾಗಿ ಧೈರ್ಯ, ಗರ್ವಗಳು ಕಾಣುತ್ತಿದೆ. ಸುಗ್ರೀವನ ಹಿಂದೆ ಯಾರದೋ ಸಹಾಯ ಇರಬೇಕು. ನೀನು ಅವನ ಜೊತೆ ಯುದ್ಧ ಮಾಡುವಾಗ ಬೇರೆ ಯಾರಿಂದಲಾದರೂ ತೊಂದರೆ ಬರಬಹುದು. ಸುಗ್ರೀವನಿಗೆ ಜನರ ಜೊತೆ ಸ್ನೇಹ ಮಾಡಿಕೊಳ್ಳುವ ಕುಶಲತೆಯಿದೆ. ನನಗೆ ಗೂಢಾಚಾರರಿಂದ, ಅಂಗದನಿಂದ (ತಾರೆ-ವಾಲಿಯ ಮಗ) ತಿಳಿದುದೇನೆಂದರೆ, ಸುಗ್ರೀವನಿಗೆ ಇಕ್ಷ್ವಾಕು ವಂಶದ ಮಹಾಬಲರಾದ ದಶರಥನ ಕುಮಾರರು, ರಾಮಲಕ್ಷ್ಮರ, ಜೊತೆ ಸ್ನೇಹವಾಗಿದೆ. ನೀನು ನಿನ್ನ ಬಲವನ್ನು ನಂಬಿದ್ದೀಯ. ಸುಗ್ರೀವನ ಬುದ್ದಿಯ ಕುರಿತೂ ಯೋಚಿಸು. ಸುಗ್ರೀವ ನಿನ್ನ ತಮ್ಮನೆಂಬುವುದನ್ನೂ ಮರೆತು ಅವನ ಪತ್ನಿಯನ್ನು ಅನುಭವಿಸುತ್ತಿದ್ದೀಯ. ಅವನನ್ನು ನಿನ್ನ ಪಕ್ಕ ಇಟ್ಟುಕೊಳ್ಳುವ ಬದಲು ಅವನ ಶತೃತ್ವ ಬೆಳೆಸಿಕೊಂಡಿದ್ದೀಯ. ಇದು ನಮ್ಮ ಕುಟುಂಬದ ಸಮಸ್ಯೆ. ಇಲ್ಲಿ ಮೂರನೆಯ ವ್ಯಕ್ತಿ ಮಧ್ಯಪ್ರವೇಶಿಸಬಾರದು. ನನ್ನ ಮಾತು ಕೇಳಿ ಸುಗ್ರೀವನಿಗೆ ಯೌವರಾಜ್ಯ ಪಟ್ಟಾಭಿಷೇಕ ಮಾಡು. ನಿನ್ನ ಬಲವೂ ಬೆಳೆಯುತ್ತದೆ. ಇಂದು ನಿನ್ನ ತಮ್ಮ ರಾಮನ ಆಶ್ರಯದಲ್ಲಿದ್ದಾನೆ. ರಾಮನಂತೆ ಆಶ್ರಯ ಕೊಡುವ ವ್ಯಕ್ತಿ ಈ ಪ್ರಪಂಚದಲ್ಲಿ ಯಾರೂ ಇಲ್ಲ.  ಒಮ್ಮೆ ಯೋಚಿಸು.”

ವಾಲಿಯ ಕಾಲ ಸಮೀಪಿಸಿತ್ತು. ಅಲ್ಲಿಯವರೆಗೂ ತಾರೆಯ ಮಾತು ಕೇಳಿ ಅಭ್ಯಾಸವಾಗಿದ್ದ ವಾಲಿಗೆ ಅಂದು ಅವಳ ಮಾತು ಕೇಳಬೇಕೆನಿಸಲಿಲ್ಲ. ಸುಗ್ರೀವನ ಮೇಲೆ ಯುದ್ಧಕ್ಕೆ ಹೊರಟ!

ಯುದ್ಧ ಹೋರಾಹೋರಿಯಾಗಿ ಆರಂಭವಾಯಿತು. ಸುಗ್ರೀವ ಮರಗಳನ್ನು ಕಿತ್ತು ವಾಲಿಯನ್ನು ಹೊಡೆದ. ಆದರೆ ವಾಲಿಯ ಕೊರಳಲ್ಲಿದ್ದ ಇಂದ್ರನ ಮಾಲೆಯಿಂದ ಸುಗ್ರೀವನ ಶಕ್ತಿ ನಶಿಸುತ್ತಿತ್ತು. ಆದರೆ ಈ ಬಾರಿ ಸುಗ್ರೀವ ಓಡಿ ಹೋಗದೆ ಮತ್ತೆ ಮತ್ತೆ ರಾಮನಿಗಾಗಿ ಎಲ್ಲ ಕಡೆ ನೋಡುತ್ತಿದ್ದ. ಸುಗ್ರೀವನ ಶಕ್ತಿ ತಗ್ಗುವುದನ್ನು ಗಮನಿಸಿದ ರಾಮ ತನ್ನ ಬಿಲ್ಲಿಗೆ ಬಾಣವನ್ನು ಸಂಧಿಸಿದ. ಯುಗಾಂತದ ಸಮಯದಲ್ಲಿ ಪ್ರಳಯರುದ್ರನ ಧ್ವನಿಯಂತಿತ್ತು ರಾಮ ಹೆದೆಯೇರಿಸಿದ ಧ್ವನಿ! ಮೃಗಗಳು ದಿಕ್ಕಾಪಾಲಾಗಿ ಓಡಿದವು. ಪಕ್ಷಿಗಳು ಆಕಾಶಕ್ಕೆ ಹಾರಿದವು. 
ರಾಘವೇಣ ಮಹಾಬಾಣೋ ವಾಲಿ ವಕ್ಷಸಿ ಪಾತಿತಃ
ರಾಮನ ಬಾಣದ ಶಬ್ದವನ್ನು ಕೇಳಿ ವಾಲಿ ಆ ದಿಕ್ಕಿನ ಕಡೆ ನೋಡಿದ. ಆ ಕಡೆ ತಿರುಗುವುಷ್ಟರಲ್ಲಿ ವೇಗವಾಗಿ ಬಂದ ರಾಮನ ಬಾಣ ವಾಲಿಯ ಹೃದಯವನ್ನು ಹೊಕ್ಕಿತ್ತು! ವಾಲಿ ಕೆಳಗೆ ಬಿದ್ದ. ತಕ್ಷಣ ರಾಮಲಕ್ಷ್ಮರು, ಸುಗ್ರೀವನ ಮಂತ್ರಿಗಳು ಅಲ್ಲಿಗೆ ಬಂದರು. ಪಕ್ಕದಲ್ಲಿ ಸುಗ್ರೀವ ಕೈ ಕಟ್ಟಿ ನಿಂತುಕೊಂಡ. ವಾಲಿ ಕಷ್ಟದಿಂದ ತೊದಲುತ್ತಾ, “ರಾಮ! ನಿನ್ನನ್ನು ಧಾರ್ಮಿಕ, ಪರಾಕ್ರಮಿ ಎನ್ನುತ್ತಾರೆ. ನಿನ್ನ ಜೊತೆಯಲ್ಲಲ್ಲದೆ ಬೇರೆಯವರ ಜೊತೆ ಯುದ್ಧ ಮಾಡುವಾಗ ಹಿಂದಿನಿಂದ ಬಾಣ ಬಿಡಲು ನಾಚಿಕೆಯಾಗುವುದಿಲ್ಲವೇ? ಯುದ್ಧವನ್ನು ಬಂಗಾರಕ್ಕಾಗಿ, ಬೆಳ್ಳಿಗಾಗಿ ಅಥವಾ ಭೂಮಿಗಾಗಿ ಮಾಡಬೇಕು. ಆದರೆ ನನಗೂ ನಿನಗೂ ಈ ಯಾವ ವಿಷಯಗಳಲ್ಲಿ ತಗಾದೆಯಿದೆ? ನನ್ನ ಚರ್ಮ ಹಾಕಿಕೊಳ್ಳುವುದಕ್ಕೆ, ಮಾಂಸ ತಿನ್ನುವುದಕ್ಕೆ ಬರುವುದಿಲ್ಲ. ನಾನು ಮರಗಳ ಮೇಲಿರುವ ಎಲೆ, ಹಣ್ಣುಗಳನ್ನು ತಿಂದು ಬದುಕುವ ಶಾಕಾಹಾರಿ ಮೃಗ. ನೀನು ಮನುಷ್ಯ! ಧರ್ಮವೆಂಬ ಮುಖವಾಡ ಹೊದ್ದಿರುವ ಮಾಹಾಪಾಪಿ. ಕೈಯಲ್ಲಿ ಬಿಲ್ಲು ಹಿಡಿದು, ಕಂಡ ಪ್ರತಿ ಪ್ರಾಣಿಯನ್ನೂ ಹಿಂಸಿಸುವ ಸ್ವಭಾವವಿರುವವನು. ನೀನು ಕಾಮಿ. ಆದ್ದರಿಂದಲೇ ವಿನಾ ಕಾರಣ ನನ್ನ ಮೇಲೆ ಬಾಣ ಬಿಟ್ಟಿದ್ದೀಯ. ನನ್ನ ಎದುರಿಗೆ ಬಂದು ಯುದ್ಧ ಮಾಡಿದ್ದರೆ ಇಷ್ಟು ಹೊತ್ತಿಗೆ ನಿನ್ನನ್ನು ಯಮನ ಬಳಿ ಕಳಿಸುತ್ತಿದ್ದೆ. ಐದು ರೀತಿಯ ಮಾಂಸವನ್ನು ಮಾತ್ರ ಬ್ರಾಹ್ಮಣರು, ಕ್ಷತ್ರಿಯರು ತಿನ್ನಬೇಕೆಂದು ಧರ್ಮಶಾಸ್ತ್ರ ಹೇಳುತ್ತದೆ (ತ್ರೇತೆಯಲ್ಲಿ ಬ್ರಾಹ್ಮಣರೂ ಮಾಂಸ ತಿನ್ನುತ್ತಿದ್ದರು. ಕಲಿಕಾಲದಲ್ಲಿ ಅದು ನಿಷಿದ್ಧ. ಅರಣ್ಯಕಾಂಡದಲ್ಲಿ ಅಗಸ್ತ್ಯರು ವಾತಾಪಿ, ಇಲ್ವಲರನ್ನು ಕೊಲ್ಲುವ ಮೊದಲು ಮಾಂಸಾಹಾರ ಮಾಡುತ್ತಾರೆ). ಐದು ಬೆರಳಿರುವ ಪ್ರಾಣಿಗಳಲ್ಲಿ ಮುಳ್ಳುಹಂದಿಯ ಮಾಂಸವನ್ನು ತಿನ್ನಬಹುದು. ಆಮೆಯ ಮಾಂಸವನ್ನು ತಿನ್ನಬಹುದು. ಹಸಿಮಾಂಸವನ್ನು ತಿನ್ನಬಾರದು. ಒಂದು ವೇಳೆ ತಿಂದರೆ ರಾಜನನ್ನು ಕೊಂದ, ಹಸುವನ್ನು ಕೊಂದ, ಬ್ರಾಹ್ಮಣನನ್ನು ಕೊಂದ ಪಾಪ ಬರುತ್ತದೆ. ನೀನು ನನ್ನನ್ನು ಕೊಂದ ಕಾರಣವೇನು? ನೀನು ಮಾಡಿದ್ದು ತಪ್ಪಲ್ಲವೇ? ನಿನ್ನ ಹೆಂಡತಿಯನ್ನು ಕಾಡಿನಲ್ಲಿ ಹುಡುಕುತ್ತಾ ಅಲೆಯುತ್ತಿರುವೆಯಂತೆ? ನಿನ್ನ ಹೆಂಡತಿಯನ್ನು ಹೊತ್ತುಕೊಂಡು ಹೋದ ರಾವಣ ನನ್ನ ಕಿಂಕರ. ನೀನು ನನಗೆ ಒಂದು ಮಾತು ಹೇಳಿದ್ದರೆ ನಾನು ಅವನನ್ನು ಪ್ರಾಣಿಯನ್ನು ಎಳೆದುಕೊಂಡು ಬಂದಂತೆ ಎಳೆದುಕೊಂಡು ಬಂದು ಬಿಸಾಕುತ್ತಿದ್ದೆ. ನೀನು ನನಗೆ ಹೇಳದೆ ನನ್ನನ್ನೇ ಗೆಲ್ಲಲಾಗದ ಸುಗ್ರೀವನ ಆಶ್ರಯ ಪಡೆದಿದ್ದೀಯ. ಸುಗ್ರೀವನಿಗಾಗಿ ನನ್ನನ್ನು ಕೊಂದಿದ್ದೀಯ. ಇದು ಕಿರಾಯಿ ಹತ್ಯೆಯಲ್ಲವೇ?” ಎಂದು ರಾಮನನ್ನು ಪ್ರಶ್ನಿಸಿ ಮುಂದೆ ಮಾತಾಡಲು ಶಕ್ತಿಯಿಲ್ಲದೆ ಸುಮ್ಮನಾದ.

ವಾಲಿಯ ಪ್ರಶ್ನೆಗೆ ಉತ್ತರವಾಗಿ ರಾಮ ಹೇಳಿದ:
ಧರ್ಮಂ ಅರ್ಥಂ ಚ ಕಾಮಂ ಚ ಸಮಯಂ ಚ ಅಪಿ ಲೌಕಿಕಂ
ಅವಿಜ್ಞಾಯ ಕಥಂ ಬಾಲ್ಯಾತ್ ಮಾಂ ಇಹ ಅದ್ಯ ವಿಗರ್ವಸಿ
ನಿನಗೆ ಏನು ತಿಳಿದಿದೆಯೆಂದು ನನ್ನ ಮೇಲೆ ಆರೋಪ ಮಾಡುತ್ತಿದ್ದೀಯ? ಮಕ್ಕಳಂತೆ ಮಾತಾಡಬೇಡ. ಧರ್ಮ, ಅರ್ಥ, ಕಾಮ, ಮೋಕ್ಷ ವಿಚಾರಗಳಲ್ಲಿ ಏನಾದರೂ ಸಂದೇಹವಿದ್ದರೆ ಬಲ್ಲವರನ್ನು ಕೇಳಿ ತಿಳಿದುಕೊಳ್ಳಬೇಕು. ಪ್ರದೇಶ ಇಕ್ಷ್ವಾಕು ವಂಶಕ್ಕೆ ಸೇರುತ್ತದೆ. ಈಗ ನಮ್ಮ ವಂಶವನ್ನು ಭರತ ಪಾಲನೆ ಮಾಡುತ್ತಿದ್ದಾನೆ. ನಮ್ಮ ರಾಜ್ಯದಲ್ಲಿ ಅಧರ್ಮವೇನಾದರೂ ನಡೆದರೆ ಅದನ್ನು ನಿಗ್ರಹಿಸುವ ಅಧಿಕಾರ ನಮಗಿದೆ. ನಿನಗೆ ಕಾಮವೊಂದುಳಿದು ಬೇರೇನೂ ಗೊತ್ತಿಲ್ಲ. ನಿನಗೆ ಧರ್ಮಾಧರ್ಮ ವಿಚಕ್ಷಣೆಮಾಡುವ ಅಧಿಕಾರವಿಲ್ಲ. ಹಿರಿಯಣ್ಣ, ವಿದ್ಯೆ ಕಲಿಸಿದ ಗುರು ತಂದೆಯ ಸಮಾನ. ಅಂತೆಯೇ ಜೊತೆಯಲ್ಲಿ ಹುಟ್ಟಿದ ತಮ್ಮ, ತನ್ನ ಬಳಿ ವಿದ್ಯೆ ಕಲಿತ ಶಿಷ್ಯ ಪುತ್ರರ ಸಮಾನ. ನಿನ್ನ ತಂದೆ ಮರಣಿಸಿರುವುದರಿಂದ ನಿನ್ನ ತಮ್ಮನಿಗೆ ನೀನು ತಂದೆಯ ಸಮಾನ. ಸುಗ್ರೀವನ ಪತ್ನಿ ರುಮೆ ನಿನಗೆ ಸೊಸೆಯ ಸಮಾನ. ಆದರೆ ಸುಗ್ರೀವನು ಬದುಕಿರುವಂತೆಯೇ ಅವನ ಪತ್ನಿಯನ್ನು ಅನುಭವಿಸಿ, ನಿನ್ನ ಪತ್ನಿಯನ್ನಾಗಿ ಮಾಡಿಕೊಂಡಿದ್ದೀಯ. ಮಾವ ತನ್ನ ಸೊಸೆಯನ್ನು ಕಾಮದಿಂದ ನೋಡಿದರೆ ಎಷ್ಟು ದೋಷವೋ ಅಷ್ಟೇ ದೋಷ ನಿನ್ನ ಕೃತ್ಯಕ್ಕೂ ಇದೆ. ಧರ್ಮದ ಪ್ರಕಾರ ಇದಕ್ಕೆ ಮರಣವೇ ಶಿಕ್ಷೆ. ನೀನು ರಾಜ. ನೀನು ಧರ್ಮ ತಪ್ಪಿದರೆ ನಿನ್ನ ಹಿಂದೆಯಿರುವವರೂ ಧರ್ಮ ತಪ್ಪುತ್ತಾರೆ. ನಾನು ಕ್ಷತ್ರಿಯ. ನಿನ್ನನ್ನು ಶಿಕ್ಷಿಸುವ ಅಧಿಕಾರ ನನಗಿದೆ. ತಪ್ಪು ಎಂದು ತಿಳಿದೂ ನಾನು ನಿನ್ನನ್ನು ಶಿಕ್ಷಿಸದಿದ್ದರೆ, ನೀನು ಮಾಡಿದ ಪಾಪ ನನಗೆ ಬರುತ್ತದೆ. ಹಿಂದೆ ಇಕ್ಷ್ವಾಕು ವಂಶದಲ್ಲಿಯೇ ಮಾಂಧಾತನೆಂಬ ನಮ್ಮ ಪೂರ್ವಿಕ ಶ್ರಮಿಕನೆಂಬುವವನನ್ನು ದೋಷಕ್ಕಾಗಿಯೇ ಕೊಂದ
ಇನ್ನು ನೀನು ಕೇಳಿದ ಪ್ರಶ್ನೆಗಳಿಗೆ ಉತ್ತರ: ಮೊದಲೆನೆಯದು, ನಿನ್ನ ಜೊತೆ ಸ್ನೇಹ ಮಾಡಿದ್ದರೆ, ಸೀತೆಯನ್ನು ತಂದುಕೊಡುತ್ತಿದ್ದೆ. ಆದರೆ ನಾನು ನಿನ್ನಂತಹ ಅಧರ್ಮಿಯ ಜೊತೆ ಸ್ನೇಹ ಮಾಡುವುದಿಲ್ಲ. ಎರಡೆನೆಯದು, ನಾನು ನಿನ್ನನ್ನು ಮರದ ಹಿಂದಿನಿಂದ, ನೀನು ಬೇರೆಯವರ ಜೊತೆ ಯುದ್ಧ ಮಾಡುತ್ತಿದ್ದಾಗ, ಕೊಂದೆನೆಂಬುದು.
ಮೇ ತತ್ರ ಮನಸ್ತಾಪೋ ಮನ್ಯುಃ ಹರಿಪುಂಗವ
ವಾಗುರಾಭಿಃ ಪಾಶೈಃ ಕೂಟೈಃ ಚ ವಿವಿಧೈಃ ನರಾಃ
ನಾನು ಮಾನವ. ನೀನು ವಾನರ. ಮಾಂಸಾಹಾರಿಯಾದ ಕ್ಷತ್ರಿಯ ಯಾವುದಾದರೂ ಮೃಗವನ್ನು ಕೊಲ್ಲಬೇಕಾದರೆ, ಮೃಗ ಸ್ತ್ರೀ ಮೃಗದ ಜೊತೆ ಸಂಗಮಿಸುವ ವೇಳೆಯನ್ನು ಹೊರತು, ಬೇರೆ ಯಾವ ರೀತಿಯಿಂದಲಾದರೂ, ಸಮಯದಲ್ಲಾದರೂ ಕೊಲ್ಲಬಹುದು.  ನಾನು ಮೃಗವಾದ ನಿನ್ನನ್ನು ಕೊಲ್ಲಬಹುದು ಎಂದು ತಿಳಿದೇ ಹೊಡೆದೆ. ಇದು ಅಧರ್ಮವಲ್ಲ. ನೀನು ಸಾಯುವ ಮುನ್ನ ರೋಷದಿಂದ ನನ್ನನ್ನು ಪ್ರಶ್ನಿಸುತ್ತಿದ್ದೀಯ ಅಷ್ಟೆ."


(ಒಂದು ಸಂದೇಹವನ್ನು ಬಗೆಹರಿಸಬೇಕಾಗುತ್ತದೆ. ವಾಲಿ ಬಿಲದಲ್ಲಿದ್ದಾಗ, ಅವನು ಸತ್ತನೆಂದುಕೊಂಡು ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿದ ಮೇಲೆ, ಅವನು ವಾಲಿಯ ಪತ್ನಿಯಾದ ತಾರೆಯನ್ನು ತನ್ನ ಪತ್ನಿಯನ್ನಾಗಿ ಮಾಡಿಕೊಂಡಿದ್ದ. ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಸಂಧ್ಯಾವಂದನೆ ಮಾಡಿ, ರಾಜ್ಯ ಪಾಲನೆ ಮಾಡುವ ವಾನರರಿಗೆ ಕೆಲವು ನಿಯಮಗಳಿರುತ್ತವೆ. ವಾನರರಲ್ಲಿ ಸ್ತ್ರೀಯರು ತಮ್ಮ ಗಂಡ ಸತ್ತುಹೋದರೆ ಮೈದುನನನ್ನು ಮರುಮದುವೆಯಾಗಬಹುದು. ಆದ್ದರಿಂದಲೇ ತಾರೆ ಸುಗ್ರೀವನನ್ನು ವಿವಾಹವಾಗುತ್ತಾಳೆ. ಕಾರಣದಿಂದ ಸುಗ್ರೀವನದು ಇಲ್ಲಿ ತಪ್ಪಿಲ್ಲ. ಆದರೆ ವಾಲಿ ಸುಗ್ರೀವ ಬದುಕಿರುವುದು ತಿಳಿದೂ ರುಮೆಯನ್ನು ಹೆಂಡತಿಯಾಗಿ ಮಾಡಿಕೊಂಡಿದ್ದ. ಅದು ವಾಲಿಯ ದೋಷ. ಇದು ವಾನರರಿಗೆ ಮಾತ್ರ ಅನ್ವಯ. ಮನುಷ್ಯರಿಗಲ್ಲ. ಹಾಗೆಯೇ ವಾಲಿ ಇಂದ್ರ ಕೊಟ್ಟ ಮಾಲೆಯನ್ನು ಹಾಕೊಕೊಂಡರೆ ಅವನಿಗೆ ಅಪಾರವಾದ ಉತ್ಸಾಹ ಬರುತ್ತದೆ. ವಾಲಿಯ ಜೊತೆ ಯಾರಾದರೂ ನೇರವಾಗಿ ಯುದ್ಧ ಮಾಡಿದರೆ, ಅವರ ಅರ್ಧದಷ್ಟು ಶಕ್ತಿ ವಾಲಿಗೆ ಬರುತ್ತದೆ. ಇದು ವಾಲಿಗೆ ಬ್ರಹ್ಮದೇವರಿಂದ ಬಂದ ವರ. ವಾಲಿ ರಾವಣನ ಜೊತೆ ಸ್ನೇಹವನ್ನೂ ಮಾಡಿಕೊಂಡಿದ್ದ. ಅದರ ಪ್ರಕಾರ ವಾಲಿ ಪಡೆದ ಸ್ತ್ರೀ ರಾವಣನಿಗೂ ಸೇರುತ್ತಾಳೆ. ವಾಲಿಯ ಶತ್ರು ರಾವಣನಿಗೂ ಶತ್ರು.)

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ