೪೨. ಅತ್ರಿ ಮಹರ್ಷಿಗಳ ಆಶ್ರಮದಲ್ಲಿ
ಭರತ ಹೋದ ಮೇಲೆ ಅಲ್ಲಿದ್ದ ತಾಪಸಿಗಳೆಲ್ಲಾ ರಾಮನ ಬಳಿ ಬಂದು, “ಇಲ್ಲಿ ಖರನೆಂಬ ರಾಕ್ಷಸನಿದ್ದಾನೆ. ನೀನು ಇಲ್ಲಿಗೆ ಬಂದಿರುವುದನ್ನು ತಿಳಿದು ಅವನು ಯಾವ ಕ್ಷಣದಲ್ಲಾದರೂ ಯುದ್ಧಕ್ಕೆ ಬರಬಹುದು. ಈಗ ನಮಗೆ ಪ್ರತಿದಿನವೂ ಕಷ್ಟಕೊಡುತ್ತಿದ್ದಾನೆ. ಆದ್ದರಿಂದ ನಾವು ಇಲ್ಲಿರಲಾರದೆ ಯಾವುದಾದರೂ ದೂರ ಪ್ರದೇಶಕ್ಕೆ ಹೋಗಬೇಕೆಂದಿದ್ದೇವೆ. ನೀನು ನಮ್ಮ ಜೊತೆ ಬರುತ್ತೀಯಾ?” ಎಂದು ಕೇಳಿದರು.
‘ಇಲ್ಲಿಗೆ ಭರತ, ಶತೃಘ್ನ, ಕೌಸಲ್ಯ, ಸುಮಿತ್ರ, ಕೈಕೆ ಬಂದಿದ್ದರು. ಇಲ್ಲೇ ಇದ್ದರೆ ನನಗೆ ಅವರ ಜ್ಞಾಪಕ ಹೆಚ್ಚಾಗುತ್ತದೆ. ಇಲ್ಲಿಗೆ ಬಂದಿದ್ದ ಸೈನ್ಯದಲ್ಲಿನ ಪ್ರಾಣಿಗಳ ಮಲ ಮೂತ್ರಗಳಿಂದ ಈ ಪ್ರದೇಶ ಅಶುಚಿಯಾಗಿದೆ’ ಎಂದುಕೊಳ್ಳುತ್ತ ರಾಮ ಸೀತಾಲಕ್ಷ್ಮಣರ ಸಹಿತ ತಾಪಸಿಗಳ ಜೊತೆ ಹೊರಟ.
ಕೆಲವು ದೂರ ಪ್ರಯಾಣಿಸಿದ ನಂತರ ಅವರು ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಬಂದರು. ಅತ್ರಿ ಮಹರ್ಷಿಗಳು ಅವರಿಗೆ ಸ್ವಾಗತ ಕೋರಿ ತಮ್ಮ ಪತ್ನಿಯ ಪರಿಚಯ ಮಾಡಿದರು: “ಇವಳು ನನ್ನ ಪತ್ನಿ ಅನಸೂಯ (ಕರ್ದಮ ಪ್ರಜಾಪತಿ - ದೇವಹುತಿಯರ ಮಗಳು). ವೃದ್ಧಳು. ಇವಳು ಒಂದು ಬಾರಿ ದೇವತೆಗಳಿಗಾಗಿ ೧೦ ರಾತ್ರಿಗಳನ್ನು ಒಂದು ರಾತ್ರಿಯನ್ನಾಗಿ ಮಾಡಿದಳು. ದೇಶದಲ್ಲಿ ೧೦ ವರ್ಷಗಳ ಕಾಲ ಕ್ಷಾಮ ಬಂದಾಗ, ಬರಿದಾಗಿದ್ದ ಗಂಗೆಯನ್ನು ತನ್ನ ತಪಃಶಕ್ತಿಯಿಂದ ತುಂಬಿ ಹರಿಸಿದಳು. ಪ್ರಜೆಗಳಿಗೆ ಅನ್ನ ಕೊಟ್ಟಳು. ಹತ್ತು ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿ ಸರ್ವಭೂತಗಳಿಂದ ಪೂಜಿಸಲ್ಪಡುತ್ತಿರುವವಳು. ರಾಮ! ಸೀತೆಯನ್ನು ಅನುಸೂಯೆಯ ಬಳಿ ಕಳಿಸು. ಅವಳು ಸೀತೆಯನ್ನು ಒಂದು ಬಾರಿ ನೋಡಲಿ.”
ತನ್ನ ಬಳಿ ಬಂದ ಸೀತೆಯನ್ನು ಮಡಿಲಲ್ಲಿ ಕೂರಿಸಿಕೊಂಡು ಅನುಸೂಯಾ ದೇವಿ ಹೇಳಿದರು: “ಸೀತಾ! ನೀನು ಮಹಾ ಪತಿವ್ರತೆ. ಪತಿಯನ್ನು ಅನುಸರಿಸಿ ಕಾಡಿಗೆ ಬಂದಿದ್ದೀಯ ಎಂದು ಕೇಳಿದೆ. ದುರಾತ್ಮನಾಗಿರಬಹುದು, ನಿರ್ಧನಿಕನಾಗಿರಬಹುದು, ಹೀನನಾಗಿರಬಹುದು, ಪತಿತನಾಗಿರಬಹುದು, ದುರ್ಗುಣನಾಗಿರಬಹುದು ಆದರೆ ಸ್ತ್ರೀಗೆ ಪತಿಯೇ ದೈವ ಎಂಬುದು ನನ್ನ ವಿಶ್ವಾಸ. ನಿನ್ನ ಅಭಿಪ್ರಾಯವೇನು?”
“ನಾನು ತವರು ಮನೆಯಲ್ಲಿದ್ದಾಗಲೂ ನನಗೆ ಇದೇ ಮಾತುಗಳನ್ನು ಹೇಳಿದರು, ಪಾಣಿಗ್ರಹಣ ಕಾಲದಲ್ಲಿಯೂ ಇದನ್ನೇ ಹೇಳಿದರು, ಅತ್ತೆಯ ಮನೆಗೆ ಬಂದಾಗ ಕೌಸಲ್ಯಾದೇವಿಯೂ ಇದನ್ನೇ ಹೇಳಿದರು, ಅರಣ್ಯಕ್ಕೆ ಹೋಗುವಾಗಲೂ ಕೌಸಲ್ಯೆ ಇದೇ ಮಾತು ಹೇಳಿದರು. ಆದರೆ ನನ್ನ ಅದೃಷ್ಟವೇನೆಂದರೆ ತಂದೆ, ತಾಯಿ, ಸೋದರರು, ಗುರು ಹೇಗೆ ನನ್ನನ್ನು ಪ್ರೀತಿಸುತ್ತಿದ್ದರೋ ಹಾಗೆಯೇ ರಾಮನೂ ನನ್ನನ್ನು ಪ್ರೀತಿಸುತ್ತಾನೆ. ಅವನು ಧರ್ಮ ತಿಳಿದವನು, ಜಿತೇಂದ್ರಿಯ. ಇಂತಹ ಪತಿಯನ್ನು ಪ್ರೀತಿಸುವುದರಲ್ಲಿ ಏನು ದೊಡ್ಡತನವಿದೆ?”
ಸೀತೆಯ ಮಾತುಗಳನ್ನು ಕೆಳಿದ ಅನಸೂಯಾದೇವಿ ಸಂತೋಷದಿಂದ, “ಸೀತಾ! ನಿನಗೆ ಕೆಲವು ಬಟ್ಟೆಗಳನ್ನು ಕೊಡುತ್ತೇನೆ. ಇವು ಎಂದೂ ಮಾಸುವುದಿಲ್ಲ. ಕೆಲವು ಹೂಗಳನ್ನು ಕೊಡುತ್ತೇನೆ. ಇವು ಎಂದೂ ಬಾಡುವುದಿಲ್ಲ. ಇವನ್ನು ನೀನು ಇಟ್ಟುಕೊಂಡರೆ ನಿನ್ನ ಪತಿ ನಿನ್ನನ್ನು ನೋಡಿದ ತಕ್ಷಣ ಸಂತೋಷಗೊಳ್ಳುತ್ತಾನೆ. ಲಕ್ಷ್ಮಿದೇವಿ ಮಹಾವಿಷ್ಣುವನ್ನು ಆನಂದಗೊಳಿಸಿದಂತೆ ನೀನು ರಾಮನನ್ನು ಆನಂದಪಡಿಸು” ಎಂದರು.
ಸೀತೆ ಅನುಸೂಯಾದೇವಿ ಕೊಟ್ಟವನ್ನು ಉಟ್ಟುಕೊಂಡು ಅತ್ರಿ, ಅನಸೂಯೆಯರಿಗೆ ನಮಸ್ಕರಿಸಿ, ರಾಮನ ಬಳಿ ಬಂದಳು. ರಾಮ, “ಸೀತಾ! ಯಾರೂ ಪಡೆಯದ ಬಹುಮಾನ ಪಡೆದಿದ್ದೀಯ” ಎಂದು ಸೀತೆಯನ್ನು ನೋಡಿ ಹೆಮ್ಮೆಪಟ್ಟ.
ಸಂತರ ಅನುಸೂಯಾ ದೇವಿ ಸೀತೆಗೆ, “ನಿನ್ನ ಮದುವೆಯ ಬಗ್ಗೆ ತಿಳಿಯಬೇಕೆಂದು ನನಗೆ ಆಸೆಯಾಗುತ್ತಿದೆ. ನನಗೆ ಅದರ ಬಗ್ಗೆ ಹೇಳು” ಎಂದರು.
ಸೀತೆ ವಿವರಿಸಿದಳು: “ಜನಕ ಮಹಾರಾಜ ಭೂಮಿಯನ್ನು ಅಗೆಯುವಾಗ ನೇಗಿಲಿಗೆ ತಗುಲಿ ಮೇಲೆ ಬಂದದ್ದರಿಂದ ನನ್ನನ್ನು ‘ಸೀತೆ’ ಎಂದು ಕರೆದರು. ನನ್ನ ತಂದೆ ನನ್ನನ್ನು ಕಷ್ಟಪಟ್ಟು ಬೆಳೆಸಿದರು. ನನಗೆ ವಯಸ್ಸು ಬಂದಾಗ ಶಿವಧನಸ್ಸಿಗೆ ಹೆದೆಯೇರಿಸಿದವನಿಗೆ ನನ್ನನ್ನು ಕೊಡುವುದಾಗಿ ನಿರ್ಣಯಿಸಿದರು. ರಾಮ ಶಿವಧನಸ್ಸನ್ನು ಮುರಿದ. ತಕ್ಷಣವೇ ನನ್ನ ತಂದೆ ನನಗೆ ಒಂದು ಮಾಲೆಯನ್ನು ಕೊಟ್ಟು, ನನ್ನ ಕೈಯನ್ನು ರಾಮನ ಕೈಯಲ್ಲಿಟ್ಟು, ಧಾರೆಯೆರೆಯಲು ಜಲಕಲಶ ತಂದರು. ಆದರೆ ರಾಮ ‘ನಾನು ಕ್ಷತ್ರಿಯನಾದ್ದರಿಂದ ಶಿವಧನಸ್ಸನ್ನು ಮುರಿದಿದ್ದೇನೆ. ನಿಮ್ಮ ಮಗಳನ್ನು ನೀವು ಕೊಟ್ಟ ಮಾತ್ರಕ್ಕೆ ಪತ್ನಿಯಾಗಿ ಸ್ವೀಕರಿಸಲು ಬರುವುದಿಲ್ಲ. ಈ ಕನ್ಯೆ ನನಗೆ ಸರಿಯಾದವಳೆಂದು ನಮ್ಮ ತಂದೆ ನಿರ್ಣಯಿಸಬೇಕು. ಅವರು ಅಂಗೀಕರಿಸಿದರೆ ನಾನು ನಿಮ್ಮ ಮಗಳನ್ನು ಸ್ವೀಕರಿಸುತ್ತೇನೆ’ ಎಂದ. ಆಗ ನಮ್ಮ ತಂದೆ ದೂತರನ್ನು ಕಳಿಸಿ ದಶರಥ ಮಹಾರಾಜರಿಗೆ ಹೇಳಿಕಳಿಸಿದರು. ಅವರು ಬಂದು ನಮ್ಮ ವಂಶ ವೃತ್ತಾಂತವನ್ನು ಕೇಳಿ ಮದುವೆಗೆ ಸಮ್ಮತಿಸಿದರು. ಅಂದಿನಿಂದ ನಾನು ರಾಮನ ಅರ್ಧಾಂಗಿ”. ಸೀತೆಯ ಮಾತುಗಳನ್ನು ಕೇಳಿ ಅನೂಸೂಯಾದೇವಿ ತುಂಬಾ ಸಂತೋಷಪಟ್ಟರು.
ಅವರು ತಮ್ಮ ಮುಂದಿನ ದಾರಿಯನ್ನು ಕುರಿತು ಅತ್ರಿ ಮಹರ್ಷಿಗಳನ್ನು ಕೇಳಿದಾಗ, ಅವರು, “ಇಲ್ಲಿ ರಾಕ್ಷಸರು, ಕ್ರೂರ ಮೃಗಗಳು ಇರುತ್ತವೆ. ಋಷಿಗಳು ಹಣ್ಣು ತಂದುಕೊಳ್ಳುವ ಒಂದು ದಾರಿಯಿದೆ. ನೀವು ಹುಷಾರಾಗಿ ಆ ದಾರಿಯಲ್ಲಿ ಹೋಗಿ” ಎಂದು ಆ ದಾರಿಯನ್ನು ತೋರಿಸಿದರು. ಅತ್ರಿ ಮಹರ್ಷಿ, ಅನಸೂಯಾ ದೇವಿಯವರ ಆಶೀರ್ವಾದಗಳನ್ನು ಪಡೆದುಕೊಂಡು, ಸೀತಾರಾಮಲಕ್ಷ್ಮರು ಆ ದಾರಿಯಲ್ಲಿ ಮೇಘಗಳಲ್ಲಿ ಸೂರ್ಯನು ಹೋದಂತೆ ತಮ್ಮ ಪ್ರಯಾಣವನ್ನು ಮುಂದುವರೆಸಿದರು.
ದಾರಿಯಲ್ಲಿ ತಾಪಸಿಗಳ ಆಶ್ರಮ ಸಿಕ್ಕಿತು.
ಪುಣ್ಯೈಃ ಚ ನಿಯತ ಆಹಾರೈಃ ಶೋಭಿತಂ ಪರಮ ಋಷಿಭಿಃ
ತತ್ ಬ್ರಹ್ಮಾ ಭವನ ಪ್ರಖ್ಯಂ ಬ್ರಹ್ಮಾ ಘೋಷ ನಿನಾದಿತಂ
ಬ್ರಹ್ಮಾ ವಿಧ್ಭಿಃ ಮಹಾ ಭಾಗೈಃ ಬ್ರಾಹ್ಮಣೈಃ ಉಪಶೋಭಿತಂ
ಆ ಆಶ್ರಮದ ತಾಪಸಿಗಳು ಹಸಿವನ್ನು ಜಯಿಸಿ ನಿಯಮಿತ ಆಹಾರ ತಿನ್ನುವವರು, ವೈದಿಕರು. ಆ ಆಶ್ರಮದಿಂದ ಯಾವಾಗಲೂ ಕೇಳಿಬರುತ್ತಿದ್ದ ವೇದಘೋಷ, ಅಲ್ಲಿ ಬ್ರಹ್ಮ ಸಭೆ ನಡೆಯುತ್ತಿದೆಯೇನೋ ಅನ್ನಿಸುತ್ತಿತ್ತು. ಆಶ್ರಮದ ಬಳಿ ಯಾಗಾದಿಗಳಿಗೆ ಉಪಯೋಗಿಸುವ ಸಮಿತ್ತು ಮುಂತಾದ ಉಪಕರಣಗಳು, ಅಲಂಕಾರ ಮಾಡಲು ಹೂವಿನ ಹಾರಗಳು, ಮೊಸರು, ಅಕ್ಷತೆ ಮುಂತಾದ ಪದಾರ್ಥಗಳಿದ್ದವು.
ರೂಪ ಸಂಹನನಂ ಲಕ್ಷ್ಮಿಂ ಸೌಕುಮಾರ್ಯಂ ಸುವೇಷತಾಂ
ದದೃಶು್ ವಿಸ್ಮತ ಆಕಾರಾ ರಾಮಸ್ಯ ವನ ವಾಸಿನಃ
ವೈದೇಹೀಂ ಲಕ್ಷ್ಮಣಂ ರಾಮಂ ನೇತ್ರೈ್ ಅನಿಮಿಷೈ್ ಇವ
ಆಶ್ಚರ್ಯ ಭೂತಾನ್ ದದೃಶುಃ ಸರ್ವೇತೇ ವನ ವಾಸಿನಃ
ಆ ಆಶ್ರಮದ ಬಳಿ ಬಂದ ನಂತರ ರಾಮ ತನ್ನ ಬಿಲ್ಲಿನ ಹಗ್ಗವನ್ನು ಸಡಿಲಿಸಿ ಒಳಗೆ ಹೋದ. ಸೀತಾರಾಮಲಕ್ಷ್ಮಣರನ್ನು ನೋಡಿದ ಋಷಿಗಳು ಅವರ ಸೌಂದರ್ಯವನ್ನು ನೋಡಿ ವಿಸ್ಮಯಪಟ್ಟರು. ಬ್ರಹ್ಮ ತೇಜಸ್ಸಿನಿಂದ ಕೂಡಿದ ರಾಮನನ್ನು ನೋಡಿ ಋಷಿಗಳು, "ಮಹಾನುಭಾವ ನಾವೆಲ್ಲರೂ ನಿನಗೆ ನಮಸ್ಕರಿಸಬೇಕು! ನೀನು ರಾಜ. ರಾಜಕುಟುಂಬದಿಂದ ಬಂದವನು. ಇಂದ್ರನ ನಾಲ್ಕನೇ ಒಂದು ಅಂಶ ರಾಜನಲ್ಲಿರುತ್ತದೆ. ವನದಲ್ಲಿರುವವರನ್ನು, ನಗರದಲ್ಲಿರುವವರನ್ನು ರಾಜ ತನ್ನ ಶಾಸನದಿಂದ ರಕ್ಷಿಸುತ್ತಾನೆ. ದುರ್ಬಲರಿಗೆ ರಾಜನ ಬಲವೇ ರಕ್ಷೆ, ಬಲದ ಅಹಂಕಾರವಿರುವವರಿಗೆ ರಾಜನ ಬಲವೇ ಶಿಕ್ಷೆ. ರೈತರು, ವರ್ತಕರು ರಾಜನಿಗೆ ಕಂದಾಯ ಕಟ್ಟುವಂತೆ ನಾವೂ ನಿನಗೆ ಕಂದಾಯ ಕೊಡುತ್ತೇವೆ. ನಮ್ಮ ತಪಸ್ಸಿನ ಫಲದ ಆರನೇ ಒಂದು ಭಾಗ ರಾಜನಿಗೆ ಹೋಗುತ್ತದೆ. ನೀನು ಧರ್ಮಾತ್ಮ. ನಮ್ಮನ್ನು ರಕ್ಷಿಸದಿದ್ದರೆ ಧರ್ಮ ತಪ್ಪಿದವನಾಗುತ್ತೀಯ. ನಮ್ಮನ್ನು ಅನೇಕ ರಾಕ್ಷಸರು ಪೀಡಿಸುತ್ತಿದ್ದಾರೆ. ಅವರಿಂದ ನಮ್ಮನ್ನು ರಕ್ಷಿಸು" ಎಂದರು.
ರಾಮ ಅವರಿಗೆ ಭರವಸೆ ಕೊಟ್ಟು, ಅರ್ಘ್ಯ ಪಾದ್ಯಾದಿಗಳನ್ನು ಸ್ವೀಕರಿಸಿ ಅಲ್ಲಿಂದ ಹೊರಟ.
Comments
Post a Comment