೪೪. ಸೀತೆಯ ಸಂದೇಹ

ಶರಭಂಗರ ಆಶ್ರಮದಲ್ಲಿವೈಖಾನಸರು (ವಿಖಾನಸ ಮಹರ್ಷಿಯ ಸಂಪ್ರದಾಯದವರು), ತರಗೆಲೆಗಳನ್ನು ತಿಂದು ಬದುಕುವವರು, ಸೂರ್ಯ, ಕೇವಲ ಚಂದ್ರ ಕಿರಣಗಳನ್ನು, ಗಾಳಿಯನ್ನು, ನೀರನ್ನು ಸೇವಿಸಿ ಬದುಕುವವರು, ನಿಂತೇ ನಿದ್ದೆ ಮಾಡುವವರು, ಮರದ ಮೇಲೆ ತಪಸ್ಸು ಮಾಡುವವರು, ಯಾವಾಗಲೂ ದರ್ಭೆಯ ಮೇಲೆಯೇ ಇರುವವರು, ಹೀಗೆ ಮುಂತಾದ ವಿವಿಧ ರೀತಿಯ ತಾಪಸಿಗಳಿದ್ದರು

ಶರಭಂಗರು ಹೋದ ಮೇಲೆ ಅವರೆಲ್ಲರೂ ರಾಮನ ಬಳಿ ಬಂದು, "ರಾಮ! ಇಲ್ಲಿ ತಪಸ್ಸು ಮಾಡಿಕೊಳ್ಳುತ್ತಿರುವ ನಮ್ಮನ್ನು ರಾಕ್ಷಸರು ಪೀಡಿಸುತ್ತಿದ್ದಾರೆ. ನಮ್ಮ ತಪಃಶಕ್ತಿಯಿಂದ ಅವರನ್ನು ನಿಗ್ರಹಿಸಬಲ್ಲೆವು. ಆದರೆ ನಾವು ಜಿತಕ್ರೋಧರು, ಕೋಪವನ್ನು ಜಯಿಸಿದವರು. ರಾಕ್ಷಸರು ಅಜ್ಞಾನದಿಂದ ನಮ್ಮನ್ನು ಹಿಂಸಿಸುತ್ತಿದ್ದಾರೆ, ಅವರನ್ನು ನಾವು ಕ್ಷಮಿಸಿದ್ದೇವೆ. ನೀನು ನಮಗೆ ತಾಯಿಯಂತಹವನು. ನಾವು ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಂತೆ. ನೀನು ಕ್ಷತ್ರಿಯನಾದ್ದರಿಂದ ನಮ್ಮನ್ನು ರಕ್ಷಿಸುವುದು ನಿನ್ನ ಧರ್ಮ. ನಿನಗೆ ಸತ್ಯ, ಧರ್ಮಗಳ ಸ್ವರೂಪ ತಿಳಿದಿದೆ, ಅವನ್ನು ಅನುಷ್ಠಾನ ಮಾಡುವುದೂ ತಿಳಿದಿದೆ. ತಾಯಿ ಮಕ್ಕಳನ್ನು ರಕ್ಷಿಸಿದಂತೆ ರಾಜ ಋಷಿಗಳನ್ನು ರಕ್ಷಿಸಬೇಕು. ಆದ್ದರಿಂದ ನಾವು ನಿನ್ನನ್ನು ಕೇಳಿಕೊಳ್ಳುತ್ತಿದ್ದೇವೆ.
ಏಹಿ ಪಶ್ಯ ಶರೀರಾಣಿ ಮುನೀನಾಂ ಭಾವಿತ ಆತ್ಮಾನಾಂ
ಹತಾನಾಂ ರಾಕ್ಷಸೈಃ ಘೋರೈಃ ಬಹೂನಾಂ ಬಹುಧಾ ವನೇ
ಈ ರಾಕ್ಷಸರು ಯಾರ ಗೋಜಿಗೂ ಹೋಗದ, ತಮ್ಮ ಪಾಡಿಗೆ ತಾವು ತಪಸ್ಸು ಮಾಡಿಕೊಂಡಿರುವ ಎಷ್ಟೋ ಜನರನ್ನು ಕೊಂದಿದ್ದಾರೆ! ಚಿತ್ರಕೂಟ ಪರ್ವತದಲ್ಲಿ, ದಂಡಕಾರಣ್ಯದಲ್ಲಿ, ಮಂದಾಕಿನಿ ನದಿಯ ದಡಗಳಲ್ಲಿ ಇರುವ ಎಷ್ಟೋ ಮುನಿಗಳು ಈಗ ಇಲ್ಲ. ರಾಮ ನಾವು ನಿನಗೆ ಎರೆಡು ಕೈ ಜೋಡಿಸಿ ಕೇಳಿಕೊಳ್ಳುತ್ತಿದ್ದೇವೆ. ನಮ್ಮನ್ನು ರಕ್ಷಿಸುತ್ತೀಯಾ?" ಎಂದು ಕೇಳಿಕೊಂಡರು.
"ನೀವು ನನಗೆ ಶರಣಾಗಬಾರದು, ಆಜ್ಞಾಪಿಸಬೇಕು. ನೀವು ಹೇಳಿದ್ದು ಕೇಳಿ ನನಗೆ ನಾಚಿಕೆಯಾಗುತ್ತಿದೆ. ಅರಣ್ಯದಲ್ಲಿ ವಾಸಿಸುತ್ತಿರುವ ಋಷಿಗಳನ್ನು ನಾನು ರಕ್ಷಿಸುತ್ತೇನೆ. ನನ್ನ ಮತ್ತು ನನ್ನ ತಮ್ಮನ ಶಕ್ತಿಯನ್ನು ನೋಡುವಿರಂತೆ" ಎಂದು ರಾಮ ಅವರಿಗೆ ಅಭಯ ಕೊಟ್ಟು ಅವರ ಜೊತೆಯೇ ಸುತೀಕ್ಷ್ಣರ ಆಶ್ರಮಕ್ಕೆ ಹೊರಟ.

ಅವರು ಅಲ್ಲಿಗೆ ಸೇರುವ ಹೊತ್ತಿಗೆ ಸುತೀಕ್ಷ್ಣರು ತಪಸ್ಸು ಮಾಡುತ್ತಿದ್ದರು. ಅವರ ಆಶ್ರಮ ಶೋಭಾಯಮಾನವಾಗಿತ್ತು. ರಾಮ ಸೀತಾ ಲಕ್ಷ್ಮಣರ ಜೊತೆ ಆಶ್ರಮದ ಒಳಕ್ಕೆ ಹೋಗಿ, ಅವರ ಬಳಿ ಕುಳಿತು ಹೇಳಿದ: "ಮಹಾತ್ಮ! ನನ್ನನ್ನು ರಾಮನೆನ್ನುತ್ತಾರೆ. ಒಂದು ಬಾರಿ ನೀವು ನಮ್ಮನ್ನು ನೋಡಿ, ನಮ್ಮ ಜೊತೆ ಮಾತನಾಡಬೇಕೆಂದು ಆಶಿಸುತ್ತಿದ್ದೇನೆ."
"ರಾಮ! ದೇವೇಂದ್ರನು ನನ್ನ ಬಳಿ ಬಂದು, ನನ್ನ ತಪಸ್ಸಿಗೆ ಮೆಚ್ಚಿ ನನ್ನನ್ನು ಊರ್ಧ್ವ ಲೋಕಕ್ಕೆ ಕರೆದುಕೊಂಡು ಹೋಗಲು ಬಂದಿದ್ದ. ಆದರೆ ನಾನು ರಾಮನನ್ನು ದರ್ಶಿಸಿ, ಅವನಿಗೆ ಆತಿಥ್ಯ ಕೊಟ್ಟು ಬರುತ್ತೇನೆಂದು ಹೇಳಿದೆ. ನಾನೂ ನಿನ್ನ ದರ್ಶನಕ್ಕೇ ಕಾದಿದ್ದೇನೆ" ಎಂದು ಸುತೀಕ್ಷ್ಣರೂ, ಶರಭಗರಂತೆಯೇ ತಮ್ಮ ತಪಸ್ಸನ್ನು ರಾಮನಿಗೆ ಕೊಡುತ್ತೇನೆಂದು ಹೇಳಿದರು.
"ನೀವು ಸಂಪಾದಿಸಿದ ಲೋಕಗಳಲ್ಲಿ ನಾನು ವಿಹರಿಸಲು ಇಚ್ಚಿಸುವುದಿಲ್ಲ, ನಾನೂ ನಿಮ್ಮಂತೆಯೇ ತಪಸ್ಸು ಮಾಡಿ ಅವನ್ನು ಸಂಪಾದಿಸಿಕೊಳ್ಳುತ್ತೇನೆ. ನಾವು ತಪಸ್ಸು ಮಾಡಿಕೊಳ್ಳಲು ಯೋಗ್ಯವಾದ ಜಾಗವನ್ನು ತೋರಿಸಿ."
"ಹಾಗಾದರೆ ಇಲ್ಲೇ ಹತ್ತಿರದಲ್ಲಿ ಅನೇಕ ಆಶ್ರಮಗಳಿವೆ. ಅವನ್ನು ನೋಡಿ ಬಾ. ಅನಂತರ ನಿನಗೆ ಹೇಳುತ್ತೇನೆ."
"ನನಗೂ ಆಶ್ರಮಗಳನ್ನು ನೋಡಬೇಕೆಂದಿದೆ. ಅವನ್ನು ದರ್ಶಿಸಿ ಋಷಿಗಳ ಆಶೀರ್ವಾದ ಪಡೆದು ಬರುತ್ತೇನೆ."

ರಾತ್ರಿ ಅವರು ಸುತೀಕ್ಷ್ಣರ ಆಶ್ರಮದಲ್ಲೇ ತಂಗಿದರು. ಮರುದಿನ ಸ್ನಾನ, ಸಂಧ್ಯಾದಿಗಳನ್ನು ಮುಗಿಸಿ ರಾಮ ಸುತೀಕ್ಷ್ಣರ ಆಶೀರ್ವಾದಕ್ಕಾಗಿ ಅವರ ಬಳಿ ಬಂದ. ಅವರು, "ರಾಮ! ನೀನು ಇಲ್ಲೇ ಇದ್ದು ನಿನ್ನ ತಪಸ್ಸನ್ನಾಚರಿಸು. ಇಲ್ಲಿ ಯಾವುದೇ ತೊಂದರೆಯಿಲ್ಲ. ಆಗಾಗ ಮೃಗಗಳು ಬರುತ್ತಿರುತ್ತವೆ. ಸಮಯದಲ್ಲಿ ಸ್ವಲ್ಪ ಹುಷಾರಾಗಿದ್ದರೆ ಸಾಕು." ಎಂದರು.
"ಮೃಗಗಳನ್ನು ನೋಡಿದರೆ ಧನಸ್ಸು ನನ್ನ ಕೈಗೆ ಬರುತ್ತದೆ. ಆಶ್ರಮಗಳಿಗೆ ಮೃಗಗಳು ಬಂದರೆ ಋಷಿಗಳನ್ನು ರಕ್ಷಿಸಲು ನಾನು ಬಾಣ ಪ್ರಯೋಗ ಮಾಡುತ್ತೇನೆ. ಓಡಿ ಹೋಗುತ್ತಿರುವ ಮೃಗಗಳನ್ನು ನೋಡಿ ಬ್ರಹ್ಮಜ್ಞಾನಿಗಳಾದ ನಿಮಗೆ ಕರುಣೆ ಬರಬಹುದು. ಬಾಣ ಪ್ರಯೋಗ ಮಾಡಿದ ನಾನು ಕಂಟಕನಾಗಿ ಕಾಣಬಹುದು. ಆದರಿಂದ ನಾನು ಇಲ್ಲಿ ಇರಬಾರದು. ನನಗೆ ಬೇರೆ ಆಶ್ರಮವೇ ಆಗಲಿ. ನೀವು ಅದಕ್ಕೆ ಯೋಗ್ಯವಾದ ಪ್ರದೇಶವನ್ನು ನಿರ್ಣಯಿಸಿ. ಅಷ್ಟರಲ್ಲಿ ನಾನು ಮಿಕ್ಕ ತಾಪಸಿಗಳ ಆಶ್ರಮ ದರ್ಶಿಸಿ ಬರುತ್ತೇನೆ."
"ಹಾಗೆಯೇ ಆಗಲಿ."

ಸೀತೆ ಕೊಟ್ಟ ಕೋದಂಡಗಳನ್ನು ಹಿಡಿದು ರಾಮ ಲಕ್ಷ್ಮಣರು ಹೊರಟರು. ದಾರಿಯಲ್ಲಿ ಸೀತೆ ರಾಮನಿಗೆ, "ನಾನು ದೊಡ್ಡವರ ಬಳಿ ಧರ್ಮವನ್ನು ತುಂಬಾ ಸೂಕ್ಷ್ಮವಾಗಿ ಆಚರಿಸಬೇಕೆಂದು ಕೇಳಿದ್ದೇನೆ. ನೀವು ಧರ್ಮಾಚರಣೆಗಾಗಿ, ತಂದೆಗೆ ಕೊಟ್ಟ ಮಾತಿನಂತೆ ಅರಣ್ಯಕ್ಕೆ ಬಂದು ತಾಪಸಿಯಂತೆ ಬಾಳುತ್ತೇನೆಂದು ಹೇಳಿದಿರಿ. ಮನುಷ್ಯನಿಗೆ ಕಾಮದ ಕಾರಣದಿಂದ ಮೂರು ದುರ್ಗುಣಗಳು ಬರುತ್ತವೆ. ಒಂದು ಅಸತ್ಯವನ್ನಾಡುವುದು, ನೀವು ಅಸತ್ಯವನ್ನು ನುಡಿದಿಲ್ಲ, ಎಂದಿಗೂ ನುಡಿಯುವುದಿಲ್ಲ ಎಂಬುದು ನನಗೆ ಗೊತ್ತು. ಎರಡೆನೇಯದು ಪರಸ್ತ್ರೀ ವ್ಯಾಮೋಹ. ನೀವು ಪರಸ್ತ್ರೀ ವ್ಯಾಮೋಹ ಇಲ್ಲದವರೆಂಬುದು ಲೋಕ ಪ್ರಸಿದ್ಧ. ಮೂರನೆಯದು,
ತೃತೀಯಂ ಯದ್ ಇದಂ ರೌದ್ರಂ ವರ ಪ್ರಾಣ ಅಭಿಹಿಂಸನಂ
ವಿನಾಕಾರಣವಾಗಿ ಬೇರೆಯವರ ಮೇಲೆ ವೈರವಿಲ್ಲದಿದ್ದರೂ ಅವರನ್ನು ಹಿಂಸಿಸಬೇಕೆಂದುಕೊಳ್ಳುವುದು. ಮೂರನೆಯ ದೋಷ ನಿಮ್ಮಲ್ಲಿ ಇಂದು ನನಗೆ ಕಾಣಿಸಿತ್ತಿದೆ. ನೀವು ತಾಪಸಿಗಳ ಆಶ್ರಮಕ್ಕೆ ಹೋದಾಗ ಅವರು ತಮ್ಮನ್ನು ಹಿಂಸಿಸುವ ರಾಕ್ಷಸರಿಂದ ರಕ್ಷಿಸಬೇಕೆಂದು ಕೇಳಿದರು. ನೀವು, 'ಈಗ ನನ್ನ, ನನ್ನ ತಮ್ಮನ ಪೌರುಷ ನೋಡುವಿರಂತೆ, ನಿಮ್ಮನ್ನು ಹಿಂಸಿಸುವ ರಾಕ್ಷಸರನ್ನು ಸಂಹಿಸುತ್ತೇನೆ' ಎಂದು ಪ್ರತಿಜ್ಞೆ ಮಾಡಿದಿರಿ. ಆದರೆ ನಿಮಗೆ ರಾಕ್ಷಸರ ಮೇಲೆ ಪ್ರತ್ಯಕ್ಷವಾದ ವೈರವೇನಿದೆ? ಅವರೇನಾದರೂ ನಿಮಗೆ ಅಪಕಾರ ಮಾಡಿದ್ದಾರೆಯೇ? ಹಾಗೇನಾದರೂ ಆಗಿದ್ದರೆ ನಿಮ್ಮ ಕ್ಷತ್ರಿಯ ಧರ್ಮದ ಪ್ರಕಾರ ಅವರನ್ನು ಸಂಹರಿಸಿ. ಈಗ ನೀವು ತಾಪಸಿಯಂತೆ ಅರಣ್ಯದಲ್ಲಿ ತಿರುಗುವವರು. ಋಷಿಗಳು ಕೇಳಿದ ತಕ್ಷಣ ಒಬ್ಬ ರಾಜನಂತೆ ಅವರನ್ನು ರಕ್ಷಿಸುವೆನೆಂದು ಹೇಗೆ ಪ್ರತಿಜ್ಞೆ ಮಾಡಿದಿರಿ? ಇದು ಕಾಮಜನಿತವಾದ ಮೂರನೆಯ ದೋಷ. ಅದು ನಿಮ್ಮಲ್ಲಿದೆ. ಆದ್ದರಿಂದ ದಂಡಕಾರಣ್ಯ ನನಗೆ ಇಷ್ಟವಿಲ್ಲ. ಸುಡುವ ಅಗ್ನಿ ತನ್ನ ಸುತ್ತ ಇರುವ ವಸ್ತುಗಳನ್ನು ನಿಧಾನವಾಗಿ ಆವರಿಸಿ ಸುಡುವಂತೆ ನಿಮಗಿರುವ ದೋಷದಿಂದ ಕ್ರಮ ಕ್ರಮವಾಗಿ ಮೃಗಗಳನ್ನು, ರಾಕ್ಷಸರನ್ನು ಸಂಹರಿಸುತ್ತೀರ. ನಿಮ್ಮ ರಾಕ್ಷಸರ ಮಧ್ಯೆ ನಿಷ್ಕಾರಣವಾಗಿ ಶತ್ರುತ್ವ ಏರ್ಪಡುತ್ತದೆ. ಅದು ನನಗೆ ಇಷ್ಟವಿಲ್ಲ. ನನ್ನ ಮಾತಿಗೆ ಆಧಾರವೇನೆಂದು ನೀವು ಕೇಳಬಹುದು. ಕಥೆ ಕೇಳಿ

ಪೂರ್ವದಲ್ಲಿ ಒಬ್ಬ ಮಹಾನುಭಾವ ಮಹೋಗ್ರವಾದ ತಪಸ್ಸು ಮಾಡಿದ. ಅದನ್ನು ಭಂಗ ಪಡಿಸಲು ಇಂದ್ರನು ಒಬ್ಬ ಯೋಧನ ವೇಷ ಧರಿಸಿ, ಒಂದು ದೊಡ್ಡ ಖಡ್ಗ ಹಿಡಿದುಕೊಂಡು ಅವನ ಬಳಿ ಬಂದು, 'ಅಯ್ಯಾ! ನಾನು ಆಪತ್ತಿನಲ್ಲಿದ್ದೇನೆ. ನಾನು ಸೈನಿಕ ಎಂಬುದು ತಿಳಿದು ಕೆಲವರು ನನ್ನನ್ನು ಓಡಿಸಿಕೊಂಡು ಬರುತ್ತಿದ್ದಾರೆ. ಅವರಿಗೆ ಗುರುತು ಸಿಗಬಾರದೆಂದರೆ ಖಡ್ಗ ನನ್ನ ಬಳಿ ಇರಬಾರದು. ನಾನು ಮತ್ತೆ ಬರುವವರೆಗೂ ಖಡ್ಗ ನಿಮ್ಮಲ್ಲೇ ಇರಲಿ' ಎಂದು ಹೇಳಿ ಖಡ್ಗವನ್ನು ಕೊಟ್ಟು ಯೋಧನ ವೇಷದಲ್ಲಿದ್ದ ಇಂದ್ರ ಹೊರಟು ಹೋದ. ಮತ್ತೆ ಅವನು ಬಂದು ಖಡ್ಗ ಕೇಳಿದಾಗ ಕೊಡದಿದ್ದರೆ ತಾನು ಮಾತಿಗೆ ತಪ್ಪಿದವನಾಗುತ್ತೇನೆಂದು ಋಷಿ ತಾನು ಕೂರುವ ದರ್ಭಾಸನದ ಕೆಳಗೆ ಅದನ್ನು ಇಟ್ಟುಕೊಂಡರು. ತಪಸ್ಸು ಮಾಡುವಾಗ ಒಮ್ಮೊಮ್ಮೆ ಅದನ್ನು ನೋಡುತ್ತಿದ್ದರು. ಹಾಗೆಯೇ ಕೆಲವು ಕಾಲ ಸರಿದ ನಂತರ, ಸುಮ್ಮನೆ ಅದನ್ನು ನೋಡುವುದು ಕಷ್ಟವೆಂದು ಅದರ ಮೇಲೆ ಕೈಯಿಟ್ಟು ಕುಳಿತುಕೊಳ್ಳುತ್ತಿದ್ದರು. ಖಡ್ಗದ ಮೇಲೆ ಕೈಯಿಟ್ಟದ್ದರಿಂದ ಋಷಿಗೆ ರಜೋಗುಣ ಬಂದು ಅದನ್ನು ಕೈಲಿಟ್ಟುಕೊಂಡು ತಿರುಗಲು ಪ್ರಾರಂಭಿಸಿದರು. ಸ್ವಲ್ಪ ಕಾಲದಲ್ಲಿ ಅವರಿಗೆ ಖಡ್ಗದಿಂದ ಅರಣ್ಯದ ಮರ, ಕೊಂಬೆಗಳನ್ನು ಕಡಿಯಬೇಕೆನಿಸಿತು. ನಂತರ ಮೃಗಗಳನ್ನು ಕೊಲ್ಲಬೇಕೆನಿಸಿತು. ಇನ್ನೂ ಸ್ವಲ್ಪದಿನದ ನಂತರ ಕಳ್ಳತನ, ಹತ್ಯೆಗಳನ್ನು ಮಾಡಬೇಕೆನಿತು

ರಾಮ! ಇಂದ್ರ ಮಾಡಿದ್ದೇನು? ಕೇವಲ ಕತ್ತಿ ಕೊಟ್ಟು ಹೊರಟುಹೋದ. ಆದರೆ ಋಷಿ ಹಂತಕನಾಗಿ ಪ್ರಾಣ ಬಿಟ್ಟ. ಒಂದೊಂದು ವಸ್ತುವಿಗೆ ಒಂದೊಂದು ಲಕ್ಷಣವಿರುತ್ತದೆ. ನೀವು ಕೋದಂಡ, ಬಿಲ್ಲುಗಳನ್ನು ಹಿಡಿದಿರುವುದೇಕೆ? ೧೪ ವರ್ಷಗಳ ನಂತರ ಅಯೋಧ್ಯೆಗೆ ಹೋದ ಮೇಲೆ ನೀವು ಇಂತಹ ಪ್ರತಿಜ್ಞೆ ಮಾಡಿ. ಬಿಲ್ಲು, ಬಾಣಗಳನ್ನು ಹಿಡಿಯಿರಿ. ಈಗ ಇವೆಲ್ಲ ಏಕೆ? ನೀವು, 'ನಾನು ರಾಜನಲ್ಲ. ಆದರೆ ಕ್ಷತ್ರಿಯ. ಆದ್ದರಿಂದ ಕೋದಂಡಗಳನ್ನು ಹಿಡಿಯುವುದು ತಪ್ಪಲ್ಲ' ಎಂದು ಹೇಳಬಹುದು. ನಿಮ್ಮನ್ನು ಯಾರಾದರೂ ರಕ್ಷಿಸಿ ಎಂದು ಕೇಳಿಕೊಂಡಾಗ ಅವರನ್ನು ಕಾಪಾಡಿ. ಆದರೆ ಎಲ್ಲಿಯೋ ಇರುವ ಋಷಿಗಳನ್ನು ಯಾರೋ ರಾಕ್ಷಸ ಹಿಂಸೆ ಮಾಡುತ್ತಿದ್ದಾನೆ ಎಂದು ಇಡೀ ರಾಕ್ಷಸ ಸಮೂಹವನ್ನೇ ಕೊಲ್ಲುತ್ತೇನೆ ಎಂದು ಪ್ರತಿಜ್ಞೆ ಮಾಡುವುದು ನನಗೆ ಹಿಡಿಸಲಿಲ್ಲ. ನಾನು ಸ್ತ್ರೀ. ಒಂದು ವೇಳೆ ಆತುರದಲ್ಲಿ ಮಾತುಗಳನ್ನು ಆಡಿರಬಹುದು. ನೀವು ನಿಮ್ಮ ತಮ್ಮನ ಜೊತೆ ಮಾತಾಡಿ, ಆಲೋಚಿಸಿ ಒಂದು ನಿರ್ಣಯಕ್ಕೆ ಬನ್ನಿ" ಎಂದಳು.

ಸೀತೆಯ ಮಾತಿಗೆ ರಾಮ ನಿಧಾನವಾಗಿ ಉತ್ತರಿಸಿದ: "ಸೀತಾ! ರಾಕ್ಷಸರು ತಮ್ಮನ್ನು ಹಿಂಸಿಸುತ್ತಾರೆಂದು ತಾಪಸಿಗಳು ನನ್ನಲ್ಲಿ ಶರಣರಾದರು.
ತೇ ಆರ್ತಾ ದಂಡಕಾರಣ್ಯೇ ಮುನಯಃ ಸಂಶಿತ ಪ್ರತಾಃ
ಮಾಂ ಸೀತೇ ಸ್ವಯಂ ಆಗಮ್ಯ ಶರಣ್ಯಾಃ ಶರಣಂ ಗತಾಃ
ಆಗ ನನಗೆ ಎಷ್ಟು ಸಂಕೋಚವಾಯಿತು ಗೊತ್ತೇ? ಅವರಿಗೆ ಕಷ್ಟ ಬಂದರೆ, ಅದನ್ನು ತಿಳಿದು, ರಾಕ್ಷಸ ಸಂಹಾರ ಮಾಡಿ ಅವರು ಶಾಂತವಾಗಿ ತಪಸ್ಸು ಮಾಡಿಕೊಳ್ಳುವಂತೆ ಮಾಡಬೇಕು. ಅವರಿಗೆ ಕಷ್ಟವಿದೆಯೇ ಎಂದು ನಾನು ಕೇಳಲಿಲ್ಲ. ಅವರೇ ಬಂದು ಕೇಳಿದಾಗ ಮಾತ್ರ ನಾನು ಪ್ರತಿಜ್ಞೆ ಮಾಡಿದೆ. ಅದೇ ಕ್ಷಾತ್ರ ಧರ್ಮ. ಒಂದು ಬಾರಿ ಮಾತು ಕೊಟ್ಟ ಮೇಲೆ ನನ್ನ ಪ್ರಾಣವಿರುವವರೆಗೂ ಅದಕ್ಕೆ ಬದ್ಧನಾಗಿರುತ್ತೇನೆ. ನನ್ನ ಪ್ರತಿಜ್ಞೆ ನೆರವೇರಿಸಲು ಅವಶ್ಯಕವಾದರೆ ನಿನ್ನನ್ನೂ, ಲಕ್ಷ್ಮಣನನ್ನೂ, ಇನ್ನೂ ಬೇಕಾದರೆ ನನ್ನ ಪ್ರಾಣವನ್ನೇ ಬಿಡುತ್ತೇನೆಯಾಗಲೀ ಪರಿಸ್ಥಿಯ ಪರಿಣಾಮದಿಂದ ಮಾತು ತಪ್ಪುವುದಿಲ್ಲ. ಈಗ ಪ್ರತಿಜ್ಞೆ ಮಾಡಿದ್ದೇನೆಯಾದ್ದರಿಂದ ರಾಕ್ಷಸ ಸಂಹಾರ ಮಾಡಿಯೇ ತೀರುತ್ತೇನೆ."

"ನೀವು ಹೇಗೆ ನಿರ್ಣಯಿಸಿದರೆ ಹಾಗೆ" ಎಂದು ಸೀತೆ ಸಂತೋಷದಿಂದ ಹೇಳಿದಳು.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ