೪೭. ಶೂರ್ಪಣಖಿ
ಪಂಚವಟಿಯಲ್ಲಿ ರಾಮಲಕ್ಷ್ಮಣಸೀತೆಯರು ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದರು. ಕೆಲವು ದಿನಗಳ ನಂತರ ಭಗವಂತನ ನಿಶ್ಚಯದಂತೆ ಅಲ್ಲಿಗೆ ಒಬ್ಬ ರಾಕ್ಷಸಿ ಬಂದಳು. ಅವಳ ಹೆಸರು ಶೂರ್ಪಣಖಿ (ಮರದಂತಹ ಉಗುರುಳ್ಳವಳು). ಮದಿಸಿದ ಆನೆಯಂತೆ ನಡೆಯುವ, ಅರಳಿದ ಪದ್ಮದಂತಹ ಕಣ್ಣುಗಳುಳ್ಳ, ಅಪಾರವಾದ ತೇಜಸ್ಸಿನಿಂದ ಕೂಡಿದ, ಮನ್ಮಥನ ಸೌಂದರ್ಯವನ್ನು ಮೀರಿಸಿದವನಾದ ರಾಮನನ್ನು ಅವಳು ನೋಡಿದಳು. ರಾಮನನ್ನು ನೋಡಿದ ಅವಳಿಗೆ ಅವನ ಮೇಲೆ ವಿಶೇಷವಾದ ಕಾಮವುಂಟಾಯಿತು.
ರಾಮನನ್ನು ನೋಡಿದರೆ, “ಆಹಾ! ಎಷ್ಟು ಚೆನ್ನಾಗಿದ್ದಾನೆ!” ಎನಿಸಿದರೆ, ಶೂರ್ಪಣಖಿಯನ್ನು ನೋಡಿದರೆ, “ಅಯ್ಯೋ! ಇವಳೇನು ಹೀಗಿದ್ದಾಳೆ!” ಎನ್ನುವಂತಿದ್ದಳು. ರಾಮನ ಹೊಟ್ಟೆ ಹೊರಗೆ ಬರದೆ ಒಳಗೇ ಇರುತ್ತದೆ, ಶೂರ್ಪಣಖಿಯದು ಹಂಡೆಯಂತಹ ದೊಡ್ಡ ಹೊಟ್ಟೆ. ರಾಮನದು ವಿಶಾಲವಾದ ಕಣ್ಣು, ಶೂರ್ಪಣಖಿಯದು ವಿಕೃತ ಕಣ್ಣು. ರಾಮನದು ಅಂದವಾದ ಕೇಶ, ಶೂರ್ಪಣಖಿಯದು ಕೆಂಪಾದ ಅಸಹ್ಯಕರವಾದ ಕೇಶ. ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವವನು ರಾಮ, ಮಕ್ಕಳು ಹೆದರುವ ಮುಖದವಳು ಶೂರ್ಪಣಖಿ. ರಾಮನದು ಮಧುರ ಕಂಠ, ಶೂರ್ಪಣಖಿ ಮಾತಾಡಿದರೆ ನಾಯಿ ಬೊಗಳುವಂತಿರುತ್ತದೆ. ರಾಮ ಯೌವನದಲ್ಲಿರುವವನು, ಶೂರ್ಪಣಖಿ ಮುದುಕಿಯಂತಿದ್ದಳು. ರಾಮ ಯಾವಾಗಲೂ ನ್ಯಾಯವಾದಿ, ಶೂರ್ಪಣಖಿಯದು ಯಾವಾಗಲೂ ದುಷ್ಟಸ್ವಭಾವ. ರಾಮನನ್ನು ಯಾರಾದರೂ ನೋಡಿದರೆ ಸಂತೋಷಿಸುತ್ತಾರೆ, ಶೂರ್ಪಣಖಿಯನ್ನು ನೋಡಿದರೆ ಭಯಗೊಳ್ಳುತ್ತಾರೆ. ಶೂರ್ಪಣಖಿ ರಾಮನನ್ನು ನೋಡಿ, “ನೀನು ಇಷ್ಟು ಸುಂದರವಾಗಿದ್ದೀಯ, ಜಟೆ ಕಟ್ಟುಕೊಂಡಿದ್ದೀಯ. ನಿನ್ನಂತೆಯೇ ಇನ್ನೊಬ್ಬ ಪುರುಷ ಕಾಣಿಸುತ್ತಿದ್ದಾನೆ. ಆದರೆ ಇಲ್ಲಿ ಇವಳಾರೋ ಅಂದವಿಕಾರವಾದ ಸ್ತ್ರೀ ಕಾಣಿಸುತ್ತಿದ್ದಾಳೆ. ನೀವು ಯಾರು?” ಎಂದು ಕೇಳಿದಳು.
ಸುಳ್ಳು ಹೇಳದ, ತನ್ನನ್ನು ಬಯಸಿ ಬಂದವಳೆಂದು ಅಸಂಬದ್ಧವಾದ ಮಾತುಗಳನ್ನು ಆಡಲು ಇಷ್ಟಪಡದ ರಾಮ, “ನಾನು ದಶರಥ ಮಹಾರಾಜನ ದೊಡ್ಡ ಮಗ. ನನ್ನನ್ನು ರಾಮನೆನ್ನುತ್ತಾರೆ. ಅವನು ನನ್ನ ತಮ್ಮ ಲಕ್ಷ್ಮಣ. ಇವಳು ನನ್ನ ಪತ್ನಿ ಸೀತೆ. ನಾವು ನಮ್ಮ ತಂದೆಯ ಮಾತಿನಂತೆ ಅರಣ್ಯಕ್ಕೆ ಬಂದಿದ್ದೇವೆ. ಇಲ್ಲಿ ತಾಪಸಿಗಳ ಜೊತೆ ಧರ್ಮದಿಂದ ಜೀವನವನ್ನು ನಡೆಸಿತ್ತಿದ್ದೇವೆ. ನೀನು ಯಾರು?”
ಶೂರ್ಪಣಖಿ ಗರ್ವದಿಂದ, “ಅಹಂ ಶೂರ್ಪಣಖಾ ನಾಮ ರಾಕ್ಷಸೀ ಕಾಮರೂಪಿಣೀ
ಅರಣ್ಯಂ ವಿಚರಾಮಿ ಇದಂ ಏಕಾ ಸರ್ವ ಭಯಂಕರಾ
ರಾವಣೋ ನಾಮ ಮೇ ಭ್ರಾತಾ ಯದಿ ತೇ ಶ್ರೋತ್ರಂ ಆಗತಃ
ವೀರೋ ವಿಶ್ರವಸಃ ಪುತ್ರೋ ಯದಿ ತೇ ಶ್ರೋತ್ರಂ ಆಗತಃ
ನನ್ನ ಹೆಸರು ಶೂರ್ಪಣಖಿ. ನಾನು ಕಾಮರೂಪಿ. ನಾನು ಭಯಂಕರವಾದ ರೀತಿಗಳಲ್ಲಿ ಈ ಕಾಡಿನಲ್ಲೆಲ್ಲಾ ಸಂಚರಿಸುತ್ತೇನೆ. ವಿಶ್ರವಸುವಿನ ಕುಮಾರನಾದ ರಾವಣ ನನ್ನ ಅಣ್ಣ. ನನಗೆ ಕುಂಭಕರ್ಣನೆಂಬ ಇನ್ನೊಬ್ಬ ಅಣ್ಣನಿದ್ದಾನೆ. ರಾಕ್ಷಸ ಬುದ್ಧಿಯಿಲ್ಲದ, ಯಾವಾಗಲೂ ಧರ್ಮ ಧರ್ಮ ಎನ್ನುವ ವಿಭೀಷಣನೆಂಬ ಅಣ್ಣನೂ ಇದ್ದಾನೆ. ಭಯಂಕರ ಯುದ್ಧಮಾಡುವ ಖರದೂಷಣರೆಂಬುವವರೂ ನನ್ನ ಅಣ್ಣಂದಿರು. ನಾನು ಪ್ರಪಂಚದಲ್ಲಿ ಯಾರನ್ನೂ ಲೆಕ್ಕಿಸುವುದಿಲ್ಲ. ನನಗೆ ಅಪಾರವಾದ ಬಲವಿದೆ. ಸ್ವೇಚ್ಛವಾಗಿ ವಿಹರಿಸುತ್ತೇನೆ. ಇಂದು ನಿನ್ನನ್ನು ನೋಡಿದಮೇಲೆ, ನಿನ್ನನ್ನು ಪತಿಯಾಗಿ ಪಡೆಯಬೇಕೆಂಬ ಆಸೆಯಾಗಿದೆ. ನೀನು ನನ್ನನ್ನು ಪತ್ನಿಯಾಗಿ ಸ್ವೀಕರಿಸಿ ಸುಖಪಡು” ಎಂದು ಹೇಳಿ ಸೀತೆಯ ಕಡೆ ತಿರುಗಿ, “ಇವಳ್ಯಾರು? ಇಷ್ಟು ಅಸಹ್ಯವಾಗಿದ್ದಾಳೆ. ಇವಳೇನಾ ನಿನ್ನ ಪತ್ನಿ? ಇವಳು ನಿನಗೆ ತಕ್ಕವಳಲ್ಲ. ನೀನು ನನ್ನನ್ನು ಸ್ವೀಕರಿಸಿದರೆ, ಮೊದಲು ಇವಳನ್ನು ತಿಂದು ನಂತರ ನಿನ್ನ ತಮ್ಮನನ್ನೂ ತಿಂದುಬಿಡುತ್ತೇನೆ. ನಂತರ ನಾವು ಆರಾಮವಾಗಿ ಕಾಡಿನಲ್ಲಿ ವಿಹರಿಸಬಹುದು” ಎಂದಳು.
ವಿಶೇಷವಾದ ಕಾಮದಿಂದ ಪುರುಷನ ಬಳಿ ತನ್ನ ನಾಚಿಕೆಯನ್ನು ಮರೆತು, ಬಾಯಿ ಬಿಟ್ಟು ಕೇಳಿದಾಗ ಅವಳನ್ನು ಒಮ್ಮೆಲೇ ನಿರಾಕರಿಸಿದರೆ ಅವಳ ಮನಸ್ಸಿಗೆ ನೋವಾಗುತ್ತದೆ. ಹೆಣ್ಣನ್ನು ನೋಯಿಸಿ ಮಾತಾನಾಡಬಾರದಾದ್ದರಿಂದ, ಸ್ವಲ್ಪಹೊತ್ತು ಅತ್ತಿತ್ತ ತಿರುಗಿಸಿದರೆ ಅವಳಿಗೆ ಬಂದ ಖಾಯಿಲೆ ಹೋಗುತ್ತದೆಂದುಕೊಂಡು, ಕಿರುನಗೆಯಿಂದ ರಾಮ ಹೇಳಿದ: “ನನಗೆ ವಿವಾಹವಾಗಿದೆಯಮ್ಮ. ನನ್ನ ಪತ್ನಿಯ ಮೇಲೆ ನನಗೆ ತುಂಬಾ ಪ್ರೀತಿಯಿದೆ. ಅವಳನ್ನು ಬಿಟ್ಟು ನಿನ್ನನ್ನು ಹೇಗೆ ಸ್ವೀಕರಿಸಲಿ? ಎರಡನೆಯ ಪತ್ನಿಯಾಗಿರಲು ಹೆಂಗಸರು ಇಷ್ಟಪಡುವುದಿಲ್ಲ. ಆದ್ದರಿಂದ ಎಲ್ಲ ವಿಧದಲ್ಲಿಯೂ ನನ್ನ ಹಾಗೇ ಇರುವ, ಹಲವು ಕಾಲದಿಂದ ಹೆಣ್ಣಿನಿಂದ ದೂರವಿರುವ ನನ್ನ ತಮ್ಮನು ಒಪ್ಪಿಕೊಂಡರೆ ಅವನಿಗೆ ಪತ್ನಿಯಾಗಿರು.”
ರಾಮನಿಂದ ತಿರಸ್ಕೃತಳಾದ ಶೂರ್ಪಣಖಿ ಲಕ್ಷ್ಮಣನ ಬಳಿ ಬಂದು, "ನಾನು ನಿನಗೆ ಸರಿಯಾದ ಪತ್ನಿಯಾಗುತ್ತೇನೆ. ನೀನು ಎಷ್ಟು ತೇಜಸ್ಸುಳ್ಳುವನಾಗಿದ್ದೀಯೋ ನಾನೂ ಅಷ್ಟೇ ತೇಜಸ್ಸುಳ್ಳವಳಾಗಿದ್ದೇನೆ. ನಾವಿಬ್ಬರೂ ತುಂಬು ಯೌವ್ವನದಲ್ಲಿದ್ದೇವೆ. ನಾವಿಬ್ಬರೂ ಸಂತೋಷವಾಗಿ ಕಾಲ ಕಳೆಯೋಣ. ನನ್ನನ್ನು ಸ್ವೀಕರಿಸು" ಎಂದಳು.
ಲಕ್ಷ್ಮಣ, "ನಾನೇ ಒಬ್ಬ ದಾಸ. ನನ್ನನ್ನು ಕಟ್ಟಿಕೊಂಡರೆ ನೀನೂ ದಾಸಿಯಾಗುತ್ತೀಯ ಆದ್ದರಿಂದ ನನ್ನನ್ನಲ್ಲದೆ ನನ್ನ ಅಣ್ಣನನ್ನು ಕೇಳು. ನಿನ್ನಂತಹ ಸುಂದರಿಯನ್ನು ನೋಡಿದ ಮೇಲೆ ಅಣ್ಣ ವೃದ್ಧಳಾದ ಅತ್ತಿಗೆಯ ಜೊತೆ ಹೇಗಿರುತ್ತಾನೆ? ಅವಳನ್ನು ಬಿಟ್ಟು ನಿನ್ನ ಬಳಿಯೇ ಬರುತ್ತಾನೆ. ಅವನನ್ನೇ ಕೇಳು" ಎಂದು ವ್ಯಂಗ್ಯವಾಡಿದ.
ಅದನ್ನೇ ನಿಜವೆಂದುಕೊಂಡ ಶೂರ್ಪಣಖಿ ಸೀತೆಯನ್ನು ಕೊಲ್ಲಲು ಭಯಂಕರ ರೂಪವನ್ನು ತಾಳಿ ಸೀತೆಯ ಮೇಲೆ ಬಿದ್ದಳು. ಅವಳನ್ನು ನೋಡಿದ ಸೀತೆ ಹಿಂದಕ್ಕೆ ಓಡಿ ಹೋದಳು. ಇದನ್ನು ನೋಡಿದ ರಾಮ ಲಕ್ಷ್ಮಣನಿಗೆ, "ನೋಡಿದೆಯಾ ಲಕ್ಷ್ಮಣ! ಇಂತಹ ಅನಾರ್ಯರ ಜೊತೆ ಹಾಸ್ಯ ಮಾಡಬಾರದು. ನೀನು ಹೇಳಿದ್ದು ನಿಜವೆಂದುಕೊಂಡು ಸೀತೆಯನ್ನೇ ಕೊಲ್ಲಲು ಹೋದಳು. ಇವಳು ಸ್ತ್ರೀ. ಕೈ, ಕಾಲು ತೆಗೆದರೆ ಅಂಗವೈಕಲ್ಯ ಬರುತ್ತದೆ. ಸೌಂದರ್ಯವೆಲ್ಲ ಮುಖದ್ದೇ ಎಂದುಕೊಂಡು, ಸುಂದರಿಯೆನೆಂಬ ಅಹಂಕಾರದಿಂದ ಇರುವ ಇವಳ ಕಿವಿ ಮೂಗುಗಳನ್ನು ಕೊಯ್ದುಬಿಡು" ಎಂದ. ಅಣ್ಣನ ಮಾತಿನಂತೆ ಲಕ್ಷ್ಮಣ ಶೂರ್ಪಣಖಿಯ ಕಿವಿ, ಮೂಗುಗಳನ್ನು ಕೊಯ್ದುಬಿಟ್ಟ.
ಖತಿಗೊಂಡ ಶೂರ್ಪಣಖಿ ಜೋರಾಗಿ ಅಳುತ್ತಾ ಆ ಕಾಡಿನಲ್ಲೇ ಇದ್ದ ತನ್ನ ಅಣ್ಣಂದಿರಾದ ಖರ ದೂಷಣರ ಬಳಿ ಹೋದಳು.
ಖರ: "ಇದೇನು ಕಿವಿ ಮೂಗುಗಳನ್ನು ಕೊಯ್ಸಿಕೊಂಡಿದ್ದೀಯ? ತನ್ನ ಪಾಡಿಗೆ ತಾನು ನಿಧಾನವಾಗಿ ತೆವಳುತ್ತಿದ್ದ ಹಾವನ್ನು ಕೆಣಕಿದವರು ಯಾರು? ನಿನ್ನನ್ನು ಮುಟ್ಟಿದವನು ಯಾರು? ಅವನು ಈ ಭೂಮಿಯಲ್ಲಿ ಎಲ್ಲಿದ್ದರೂ ಬದುಕುವುದಿಲ್ಲ. ನನ್ನ ಬಾಣಗಳಿಂದ ಅವನ ರಕ್ತ ಹೀರಿಬಿಡುತೇನೆ. ಅವನೆಲ್ಲಿದ್ದಾನೆ?"
ಶೂರ್ಪಣಖಿ: "ಇಲ್ಲೇ ಹತ್ತಿರದಲ್ಲಿ ಯೌವ್ವನದಲ್ಲಿರುವ ಇಬ್ಬರು ಅಣ್ಣ ತಮ್ಮಂದಿರಿದ್ದಾರೆ. ನಾರು ಮಡಿಯುಟ್ಟು, ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ ತಾಪಸಿಗಳಂತೆ ಒಂದು ಸುಂದರವಾದ ಆಶ್ರಮವನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಧಾರ್ಮಿಕರು. ದಶರಥನ ಮಕ್ಕಳೆಂದು ಹೇಳಿದರು. ಅವರ ಹೆಸರು ರಾಮ-ಲಕ್ಷ್ಮಣರು. ಅವರನ್ನು ನೋಡಿದರೆ ರಾಜಕುಮಾರರೆನ್ನಬೇಕೋ, ಗಂಧರ್ವರೆನ್ನಬೇಕೋ ಗೊತ್ತಿಲ್ಲ. ಆದರೆ ಅವರ ಮಧ್ಯೆ ಒಬ್ಬಳು ಅಂದವಾದ ಸ್ತ್ರೀಯಿದ್ದಾಳೆ. ಅವಳ ಕಾರಣದಿಂದಲೇ ನನ್ನ ಕಿವಿ ಮೂಗುಗಳನ್ನು ಕೊಯ್ದಿದ್ದಾರೆ. ಅಣ್ಣಾ! ನನಗೆ ಒಂದು ಆಸೆಯಿದೆ. ನೀನು ಆ ರಾಮನನ್ನು ಕೊಲ್ಲಬೇಕು. ಅವನ ಶರೀರದಿಂದ ಬರುವ ಬಿಸಿರಕ್ತವನ್ನು ಹಿಡಿದು ಕುಡಿಯಬೇಕು. ನನ್ನ ಕೋರಿಕೆಯನ್ನು ತೀರಿಸುತ್ತೀಯಾ?"
"ನೀನು ಕೋರಿದ ಮೇಲೆ ತೀರಿಸದಿರುವುದಕ್ಕಾಗುತ್ತದೆಯೇ? ಖಂಡಿತ ತೀರಿಸುತ್ತೇನೆ."
Comments
Post a Comment