೪೯. ರಾವಣ
ರಾಮ ಖರ ದೂಷಣರನ್ನು ಕೊಂದದ್ದನ್ನು ಅಕಂಪನನೆಂಬ ರಾಕ್ಷಸ ನೋಡಿ, ಆ ವಿಷಯವನ್ನು ರಾವಣನಿಗೆ ತಿಳಿಸಲು ಲಂಕೆಗೆ ಓಡಿದ. ರಾವಣನ ಪಾದದ ಮೇಲೆ ಬಿದ್ದು ಖರ ದೂಷಣರ ಹತ್ಯೆಯನ್ನು ವಿವರಿಸಿದ. ರಾವಣ ಕೋಪದಿಂದ, "ಈ ರಾಮನೆಂದರೆ ಯಾರು? ಅವರು ದಂಡಕಾರಣ್ಯದಲ್ಲಿ ಏಕಿದ್ದಾರೆ? ಅವರ ಜೊತೆಯಿರುವ ಸ್ತ್ರೀ ಯಾರು? ೧೪೦೦೦ ಮಂದಿಯನ್ನು ರಾಮ ಕೊಂದದ್ದೇಕೆ?" ಎಂದು ಪ್ರಶ್ನಿಸಿದ.
"ರಾಮ ಸಾಮಾನ್ಯ ವ್ಯಕ್ತಿಯಲ್ಲ. ದಶರಥನ ಮಗ. ತೇಜಸ್ವಿ. ಅವನ ತಮ್ಮ ಲಕ್ಷ್ಮಣ ಅವನಿಗೆ ಬಲಗೈ, ಅವನ ಹೊರ ಪ್ರಾಣದಂತಿರುತ್ತಾನೆ. ಎಲ್ಲ ಸಮಯದಲ್ಲಿಯೂ ತನ್ನ ಅಣ್ಣನನ್ನು ಕಾಪಾಡುವುದೇ ಅವನ ಧ್ಯೇಯ. ರಾಮ ತನ್ನ ಪತ್ನಿ ಸೀತೆಯೊಡನೆ ೧೪ ವರ್ಷ ವನವಾಸ ಮಾಡಲು ದಂಡಾಕಾರಣ್ಯಕ್ಕೆ ಬಂದಿದ್ದಾನೆ. ಋಷಿಗಳು ರಾಕ್ಷಸರಿಂದ ಆಗುತ್ತಿರುವ ತೊಂದರೆಯನ್ನು ಅವನ ಬಳಿ ಹೇಳಿಕೊಂಡಾಗ, ಅವರ ಶತ್ರುಗಳು ತನಗೂ ಶತ್ರುಗಳೆಂದು ಹೇಳಿ, ರಾಕ್ಷಸರನ್ನು ಕೊಲ್ಲುತ್ತೇನೆಂದು ಮಾತು ಕೊಟ್ಟಿದ್ದಾನೆ. ಅದರ ಪ್ರಕಾರ ದಂಡಕಾರಣ್ಯದಲ್ಲಿ ಎಲ್ಲಿಯೂ ರಾಕ್ಷಸರೇ ಇಲ್ಲದ ಪರಿಸ್ಥಿತಿ ಕಲ್ಪಿಸಿದ್ದಾನೆ. ಅವನು ತನ್ನ ಬಾಣಗಳಿಂದ ಭೂಮಿಯನ್ನು ಕಂಪಿಸಬಲ್ಲನು. ಕಂಪಿಸುತ್ತಿರುವ ಭೂಮಿಯನ್ನು ನಿಲ್ಲಿಸಬಲ್ಲನು. ಸಮುದ್ರಗಳನ್ನು ಕ್ಷೋಭಿಸಬಲ್ಲನು. ಪರ್ವತಗಳನ್ನು ಅಲ್ಲಾಡಿಸಬಲ್ಲನು."
"ಹಾಗಾದರೆ ನಾನು ಈಗಲೇ ಆ ರಾಮನನ್ನು ಸಂಹರಿಸುತ್ತೇನೆ."
"ನೀವು ಆತುರಪಟ್ಟು ಹೋಗಬೇಡಿ. ಜೋರಾಗಿ ಹರಿದು ಬರುತ್ತಿರುವ ಪ್ರವಾಹಕ್ಕೆ ಎದುರು ಹೋಗುವುದು ಒಳ್ಳೆಯದಲ್ಲ. ಅವನ ಮುಂದೆ ನೀವು ನಿಲ್ಲಲಾಗುವುದಿಲ್ಲ. ಅವನನ್ನು ಸಂಹರಿಸಲು ಒಂದು ದಾರಿಯಿದೆ. ರಾಮನ ಹೆಂಡತಿ ಸೀತೆ ಸುಂದರಿ. ಅವಳ ಸಮಾನವಾಗಿ ಯಕ್ಷ, ಕಿನ್ನರ, ಗಂಧರ್ವ, ರಾಕ್ಷಸ, ಮನುಷ್ಯರಲ್ಲಿ ಯಾರೂ ಇಲ್ಲ. ಸಮಯ ನೋಡಿ, ರಾಮನಿಲ್ಲದಿದ್ದಾಗ ಸೀತೆಯನ್ನು ತಂದು ಹೆಂಡತಿಯಾಗಿ ಮಾಡಿಕೊಳ್ಳಿ. ಸೀತೆ ಪಕ್ಕದಲ್ಲಿಲ್ಲದಿದ್ದರೆ ರಾಮ ಬದುಕುವುದಿಲ್ಲ. ಸೀತೆಯನ್ನು ಕಳೆದುಕೊಂಡು ರಾಮ ತನ್ನಷ್ಟಕ್ಕೆ ತಾನೇ ಪ್ರಾಣ ಬಿಡುತ್ತಾನೆ. ಈ ಕಪಟೋಪಾಯದಿಂದಲೇ ರಾಮನನ್ನು ಮುಗಿಸಬೇಕು.”
ಅಕಂಪನನ ಮಾತನ್ನು ಒಪ್ಪಿಕೊಂಡು ರಾವಣ ಮಾರೀಚನ ಆಶ್ರಮಕ್ಕೆ ಬಂದು, “ನಾನು ಒಂದು ಮುಖ್ಯವಾದ ಕೆಲಸದ ಮೇಲೆ ಬಂದಿದ್ದೇನೆ. ನೀನು ಮಾಯೆಯನ್ನು ತಿಳಿದವನು. ಸೀತಾಪಹರಣಕ್ಕೆ ನನಗೆ ಸಹಾಯ ಮಾಡು” ಎಂದು ಕೇಳಿದ.
ಮಾರೀಚ, “ನಿನಗೆ ಯಾರು ಹೇಳಿದರು ಸೀತಾಪಹರಣ ಮಾಡಲು? ಬಹುಶಃ ನಿನ್ನನ್ನು ಸಂಹರಿಸಲು ನಿನ್ನ ಶತ್ರು ಸಲಹೆ ಕೊಡುವವನಂತೆ ನಟಿಸಿ ಮೋಸ ಮಾಡಿದ್ದಾನೆ. ಅವನು ಸಮಸ್ತ ದಾನವರನ್ನು ನಾಶ ಮಾಡಲು ಪ್ರತಿಜ್ಞೆ ಮಾಡಿರಬಹುದು. ಅದನ್ನು ನೆರವೇರಿಸಿಕೊಳ್ಳಲು ನಿನಗೆ ರಾಮನ ಮೇಲೆ ವೈರ ಹುಟ್ಟಿಸಿದ್ದಾನೆ. ರಾಮನ ಮೇಲೆ ಯುದ್ಧ ಮಾಡುವವನು ಬದುಕನು. ಅವನ ಶಕ್ತಿ ಸಾಮರ್ಥ್ಯಗಳು ನನಗೆ ತಿಳಿದಿದೆ. ನನ್ನ ಮಾತು ಕೇಳಿ ಸೀತಾಪಹರಣದ ಆಲೋಚನೆ ಬಿಡು” ಎಂದ.
“ನೀನು ಇಷ್ಟು ಹೇಳಿದ ಮೇಲೆ ಈ ಯೋಚನೆಯನ್ನು ಬಿಟ್ಟುಬಿಡುತ್ತೇನೆ” ಎಂದು ಹೇಳಿ ರಾವಣ ಹೊರಟು ಹೋದ.
(ಮೇಲಿನ ಕಥೆಯ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳಿವೆ. ಇದನ್ನು ನಿಜವಾಗಿಯೂ ವಾಲ್ಮೀಕಿ ಮಹರ್ಷಿಗಳು ಬರೆದಿದ್ದಾರಾ ಅಥವಾ ಯಾರೋ ಬೇರೆಯವರು ಬರೆದು ರಾಮಾಯಣಕ್ಕೆ ಸೇರಿಸಿದ್ದಾರಾ? ಪ್ರಧಾನ ಪಾತ್ರ ಪ್ರವೇಶಿಸುವಾಗ ವಾಲ್ಮೀಕಿಗಳು ಆ ಪಾತ್ರದ ಬಗ್ಗೆ ಸ್ವಲ್ಪ ಪರಿಚಯ, ವಿವರಣೆ ನೀಡುತ್ತಾರೆ. ಆದರೆ ಇಲ್ಲಿ ರಾವಣ ಪಾತ್ರದ ಬಗ್ಗೆ ಯಾವುದೇ ಪರಿಚಯವಿಲ್ಲ. ಮಾರೀಚ ಆ ರೀತಿ ಮಾತನಾಡಿದಾಗ ರಾವಣ ಅಷ್ಟು ಸುಲಭವಾಗಿ ವಾಪಸ್ಸು ಬರುತ್ತಾನೆಯೇ? ಕೇವಲ ಒಬ್ಬ ರಾಕ್ಷಸ ಹೇಳಿದ ಮಾತ್ರಕ್ಕೆ ರಾವಣ ಸೀತಾಪಹರಣಕ್ಕೆ ಹೊರಡುತ್ತಾನೆಯೇ? ಶೂರ್ಪನಖಿ ಆಕಾಶದಲ್ಲಿ ಹೋದರೆ, ಅಕಂಪನ ಭೂ ಮಾರ್ಗದಲ್ಲಿ ಲಂಕೆಗೆ ಹೊರಟ. ಇದರ ಪ್ರಕಾರ ಶೂರ್ಪನಖಿ ಲಂಕೆ ಮೊದಲು ಹೋಗಬೇಕಾಗಿತ್ತು. ಆದರೆ ಅಕಂಪನ ಹೇಗೆ ಮೊದಲು ಬಂದ? ಈ ಸಂದರ್ಭಗಳು ವಾಲ್ಮೀಕಿ ಮಹರ್ಷಿಗಳ ರಚನಾ ಶೈಲಿಗೆ ವಿರುದ್ಧವಾಗಿದೆ. ಆದ್ದರಿಂದ ಕೆಲವು ವಿದ್ವಾಂಸರು ಇದನ್ನು ಅಂಗೀಕರಿಸಿಲ್ಲ. ಇವು ಬಹುಶಃ ರಾಮಾಯಣದ್ದಲ್ಲದ್ದಾಗಿರಬಹುದು. ಈ ಎಲ್ಲ ಕಾರಣಗಳಿಂದ ಈ ಸರ್ಗಗಳನ್ನು ವಿವಾದಾಸ್ಪದ ಸರ್ಗಗಳಾಗಿ ವಿಂಗಡಿಸಿದ್ದಾರೆ. ಇವುಗಳ ಸಾಧ್ಯಾಸಾಧ್ಯಗಳು ಪರಮೇಶ್ವರನಿಗೇ ತಿಳಿಯಬೇಕು. ಕಥೆ ಮುಂದುವರೆಸೋಣ....)
ಅಕಂಪನ ಹೊರಟ ಮೇಲೆ ಶೂರ್ಪಣಖಿ ಲಂಕೆಗೆ ಬಂದಳು. ಇಂದ್ರನ ಸುತ್ತ ದೇವತೆಗಳು ಕೂತಂತೆ, ರಾವಣನ ಸುತ್ತ ಮಂತ್ರಿಗಳು ಕೂತಿದ್ದರು. ರಾವಣ ದೇವ, ಗಂಧರ್ವ, ಯಕ್ಷ, ಕಿಂಪುರುಷರಿಂದ ಅವಧ್ಯ. ಆ ಸಭೆಯಲ್ಲಿ ಬಾಯಿ ಬಿಟ್ಟು ಕೂತಿರುವ ರಾವಣನನ್ನು ನೋಡಿದರೆ, ಬಾಯಿ ತೆಗೆದು ಮೇಲೆ ಬರುತ್ತಿರುವ ಯಮಧರ್ಮನನ್ನು ನೋಡಿದಂತಿತ್ತು.
ದೇವ ಅಸುರ ವಿಮರ್ದೇಷು ವಜ್ರ ಅಶನಿ ಕೃತ ವ್ರಣಂ
ಐರಾವತ ವಿಷಾಣ ಅಗ್ರೈಃ ಉತ್ಕೃಷ್ಟ ಕಿಣ ವಕ್ಷಸಂ
ವಿಂಶತ್ ಭುಜಂ ದಶಗ್ರೀವಂ ದರ್ಶನೀಯ ಪರಿಚ್ಛದಂ
ವಿಶಾಲ ವಕ್ಷಸಂ ವೀರಂ ರಾಜ ಲಕ್ಷ್ಮಣ ಲಕ್ಷಿತಂ
ದೇವತೆಗಳ ವಿರುದ್ಧ ಅನೇಕ ಬಾರಿ ಯುದ್ಧ ಮಾಡಿದ್ದರಿಂದ ರಾವಣನ ಮೇಲೆ ಗಾಯದ ಗುರುತುಗಳಿದ್ದವು. ಇಂದ್ರನ ವಜ್ರಾಯುಧದ ಏಟಿನ ಗುರುತು, ಐರಾವತ ತನ್ನ ದಂತಗಳಿಂದ ತಿವಿದ ಗಾಯ ಕಾಣಿಸುತ್ತಿತ್ತು. ರಾವಣ ೨೦ ಕೈ, ೧೦ ತಲೆ, ಅಗಲವಾದ ಎದೆ, ಬಂಗಾರದ ಕುಂಡಲಗಳು, ವಿಶಾಲವಾದ ಭುಜ, ಬಿಳಿಯ ಮೈ, ಪರ್ವತದಂತಹ ಬಾಯಿ ಮುಂತಾದ ರಾಜಲಕ್ಷಣಗಳಿಂದ ಶೋಭಿಸುತ್ತಿದ್ದ. ಒಮ್ಮೆ ಶ್ರೀ ಮಹಾವಿಷ್ಣುವಿನ ಚಕ್ರದ ಮೇಲೆ ಹೊಡೆದಾಡುವಾಗ ಆದ ಗಾಯಗಳು, ಇನ್ನೂ ಮುಂತಾದ ದೇವತೆಗಳ ಆಯುಧಗಳ ಗುರುತುಗಳು ಅವನ ಶರೀರದ ಮೇಲಿದ್ದವು. ಅಷ್ಟು ಗಾಯಗಳಾಗಿದ್ದರೂ ಅವನ ವರ್ಚಸ್ಸು ಸ್ವಲ್ಪವೂ ಕುಗ್ಗಿಲ್ಲ. ರಾವಣ ಹಲವು ಬಾರಿ ಸಾಗರವನ್ನೇ ಕ್ಷೋಭಿಸುತ್ತಿದ್ದ, ಬೆಟ್ಟಗಳನ್ನು ಎಸೆಯುತ್ತಾ ವ್ಯಾಯಾಮ ಮಾಡುತ್ತಿದ್ದ, ಸುಮ್ಮಸುಮ್ಮನೆ ದೇವತೆಗಳ ಮೇಲೆ ಯುದ್ಧ ಮಾಡುತ್ತಿದ್ದ. ಯಾರಾದರೂ ಧರ್ಮ ಮಾರ್ಗವನ್ನು ಪಾಲಿಸುತ್ತಿದ್ದರೆ ಅವರನ್ನು ಹಿಂಸಿಸುತ್ತಿದ್ದ. ಬೇರೆಯವರ ಪತ್ನಿಯರನ್ನು ಬಲವಂತವಾಗಿ ತಂದು ಅನುಭವಿಸುತ್ತಿದ್ದ.
ಅವನಿಗೆ ವಿವಿಧ ಶಸ್ತ್ರಾಸ್ತ್ರಗಳ ಪ್ರಯೋಗ, ಉಪಸಂಹಾರಗಳು ತಿಳಿದಿತ್ತು. ಯಾರಾದರೂ ಯಜ್ಞ ಮಾಡುತ್ತಿದ್ದರೆ ತನಗಿದ್ದ ಶಕ್ತಿಯಿಂದ ಅದನ್ನು ಧ್ವಂಸ ಮಾಡುತ್ತಿದ್ದ. ಒಮ್ಮೆ ಪಾತಾಳದಲ್ಲಿದ್ದ ವಾಸುಕಿಯನ್ನು ಓಡಿಸಿದ್ದ, ತಕ್ಷಕನ ಹೆಂಡತಿಯನ್ನು ತಂದು ತನ್ನ ಹೆಂಡತಿಯನ್ನಾಗಿ ಮಾಡಿಕೊಂಡಿದ್ದ. ಕೈಲಾಸದಲ್ಲಿದ್ದ ಕುಬೇರನ ಮೇಲೆ ಯುದ್ಧ ಮಾಡಿ ಅವನ ಪುಷ್ಪಕ ವಿಮಾನವನ್ನು ಅಪಹರಿಸಿದ್ದ (ವಾಸ್ತವದಲ್ಲಿ ಕುಬೇರ ರಾವಣನ ಅಣ್ಣ. ಕುಬೇರ ಮೊದಲ ಹೆಂಡತಿಯ ಮಗ, ರಾವಣ ಎರಡನೆಯ ಹೆಂಡತಿಯ ಮಗ). ಉತ್ತರ ಭಾರತದಲ್ಲಿ ಚೈತ್ರರಥವೆಂಬ ವನವಿದೆಯೆಂದು ಯಾರೋ ಹೇಳಿದರೆ, ಅದನ್ನು ನೋಡಿ, ತನ್ನಲ್ಲಿಲ್ಲದ ಅಷ್ಟು ಸುಂದರವಾದ ವನ ಬೇರೆಲ್ಲೂ ಇರಬಾರದೆಂದು ಅದನ್ನು ನಾಶ ಮಾಡಿದ್ದ. ಹಾಗೆಯೇ ಸ್ವರ್ಗದಲ್ಲಿದ್ದ ನಂದನವನವನ್ನೂ ನಾಶಮಾಡಿದ್ದ. ಕೆಲವು ಬಾರಿ ಆಕಾಶದಲ್ಲಿ ನಿಂತು ಸೂರ್ಯ ಚಂದ್ರರ ಚಲನೆಯನ್ನು ನಿಲ್ಲಿಸುತ್ತಿದ್ದ.
ಒಮ್ಮೆ ರಾವಣ ಬ್ರಹ್ಮನನ್ನು ಕುರಿತು ೧೦೦೦ ವರ್ಷಗಳ ಕಾಲ ತಪಸ್ಸು ಮಾಡಿದ. ಅಷ್ಟು ಕಾಲ ತಪಸ್ಸು ಮಾಡಿದರೂ ಬ್ರಹ್ಮ ದೇವರು ಪ್ರತ್ಯಕ್ಷವಾಗದ ಕಾರಣ ತನ್ನ ಹತ್ತು ತಲೆಗಳನ್ನು ತೆಗೆದು ಅಗ್ನಿಯಲ್ಲಿ ಹಾಕಿದ. ಆಗ ಬ್ರಹ್ಮ ದೇವರು ಪ್ರಸನ್ನರಾಗಿ ಏನು ಬೇಕೆಂದು ಕೇಳಿದಾಗ ರಾವಣ,
“ದೇವ ದಾನವ ಗಂಧರ್ವ ಪಿಶಾಚ ಪತಂಗ ಉರಗೈಃ
ಅಭಯಂ ಯಸ್ಯ ಸಂಗ್ರಾಮೇ ಮೃತ್ಯುತೋ ಮಾನುಷಾದ್ ಋತೇ
ನಾನು ನಾಗ, ಯಕ್ಷ, ಗಂಧರ್ವ, ಕಿನ್ನರ, ಕಿಂಪುರುಷರಿಂದ ಹತನಾಗಬಾರದು" ಎಂದು ವರ ಕೇಳಿದ. ಆದರೆ ಮನುಷ್ಯರಿಂದ ಮರಣಿಸಬಾರದೆಂದು ಕೇಳಲಿಲ್ಲ.
ಯಜ್ಞಗಳಲ್ಲಿ ದೇವತೆಗಳಿಗೆ ಅರ್ಪಿಸುವ ಸೋಮರಸವನ್ನು ಅಪಹರಿಸುತ್ತಿದ್ದ. ಎಲ್ಲಾದರೂ ಯಜ್ಞ ಪೂರ್ತಿಯಾಗುತ್ತಿದ್ದರೆ ಅಲ್ಲಿಗೆ ಬಂದು ಅದನ್ನು ಧಂಸ ಮಾಡುವುದು ರಾವಣನಿಗೆ ತುಂಬಾ ಇಷ್ಟ. ಅವನು ಸರ್ವಕಾಲದಲ್ಲಿಯೂ ದುಷ್ಟನಾಗಿಯೇ ಇರುತ್ತಿದ್ದ. (ಒಮ್ಮೆ ಅವನು ಕೈಲಾಸ ಪರ್ವತವನ್ನು ಎತ್ತಬೇಕೆಂದು ನೋಡಿದಾಗ, ಶಿವನು ತನ್ನ ಹೆಬ್ಬೆರಳಿನಿಂದ ಆ ಪರ್ವತವನ್ನು ತುಳಿದ. ಆಗ ರಾವಣನ ಎರೆಡು ಕೈಗಳೂ ಪರ್ವತದ ಕೆಳಗೆ ಸಿಕ್ಕಿಕೊಂಡಾಗ ಜೋರಾಗಿ ಕಿರುಚಿದ. ಮೂರುಲೋಕಗಳಿಗೂ ಕೇಳಿಸುವಂತೆ ಕೂಗಿದನಾದ ಕಾರಣ (ರವ - ಮಾಡಿದನಾದ ಕಾರಣ) ಅವನನ್ನು 'ರಾವಣ' ಎಂದು ಕರೆದರು).
Comments
Post a Comment