೨೮. ಕೌಸಲ್ಯೆಯ ಪ್ರಲಾಪ
ಒಳಗೆ ಬಂದ ರಾಮನನ್ನು ನೋಡಿದ ಕೌಸಲ್ಯಾ ದೇವಿ ಓಡುತ್ತಾ ರಾಮನ ಬಳಿ ಬಂದು, "ಮಗು ರಾಮ! ನಿನಗೆ ಯುವರಾಜ್ಯ ಪಟ್ಟಾಭಿಷೇಕ ನಡೆಯುತ್ತಿರುವುದು ನನಗೆ ಬಹಳ ಆನಂದವಾಗಿದೆ, ನಮ್ಮ ವಂಶದಲ್ಲಿ ಹುಟ್ಟಿದ ಎಲ್ಲ ಹಿರಿಯರಂತೆ ನೀನು ಕೂಡ ಕೀರ್ತಿಯನ್ನು ಸಂಪಾದಿಸು" ಎಂದು ಹೇಳಿ ರಾಮನಿಗೆ ಕುಳಿತು ಕೊಳ್ಳಲು ಒಂದು ಬಂಗಾರದ ಆಸನವನ್ನು ತೋರಿಸಿದಳು.
ರಾಮ ಆ ಆಸನವನ್ನು ಒಮ್ಮೆ ಸ್ಪರ್ಶಿಸಿ, "ಅಮ್ಮಾ! ನಾನು ಕುಳಿತುಕೊಳ್ಳಲು ಸಮಯವಿಲ್ಲ. ತಂದೆಯವರು ಭರತನಿಗೆ ಪಟ್ಟಾಭಿಷೇಕವನ್ನು ಮಾಡಲಿದ್ದಾರೆ, ನನ್ನನ್ನು ೧೪ ಸಂವತ್ಸರಗಳು ಅರಣ್ಯವಾಸ ಮಾಡಲು ಹೇಳಿದ್ದಾರೆ, ಹಾಗಾಗಿ ನಾನು ದಂಡಕಾರಣ್ಯಕ್ಕೆ ಹೊರಟು ಹೋಗುತ್ತಿದ್ದೇನೆ. ನಾನು ದರ್ಭೆಯಿಂದ ಮಾಡಿದ ಆಸನದ ಮೇಲೆ ಕೂರಬೇಕೇ ಹೊರತು ಇಂಥಹುದರ ಮೇಲಲ್ಲ. ನಿನ್ನ ಆಶೀರ್ವಾದ ಪಡೆದು ಹೊರಡಲು ಇಲ್ಲಿ ಬಂದೆ" ಎಂದ.
ಈ ಮಾತನ್ನು ಕೇಳಿದ ಕೌಸಲ್ಯೆ ನಿಟ್ಟ ನಿಲುವಿಗೇ ಕೆಳಕ್ಕೆ ಕುಸಿದಳು.
ಸ್ವಲ್ಪ ಶುಶ್ರೂಷೆ ಮಾಡಿದ ನಂತರ ಬಾಹ್ಯ ಸ್ಮೃತಿಗೆ ಬಂದು, "ರಾಮ, ನೀನು ಹೇಳಿದ ಮಾತು ಕೇಳಿದ ಮೇಲೆ ನನಗೆ ಮಕ್ಕಳೇ ಹುಟ್ಟಬಾರದಿತ್ತು ಎಂದೆನಿಸಿತ್ತಿದೆ. ಮಕ್ಕಳಿಲ್ಲದಿದ್ದರೆ ಎಲ್ಲರೂ ನನ್ನನ್ನು ಬಂಜೆ ಎನ್ನುತ್ತಿದ್ದರಷ್ಟೆ, ಅದಕ್ಕೆ ಮೀರಿದ ದುಃಖ ಇರುತ್ತಿರಲಿಲ್ಲ. ಆದರೆ ಈದಿನ ನನಗಾಗುತ್ತಿರುವ ನೋವು ಅಸಮಾನ್ಯವಾದುದು. ರಾಮ, ನಿನಗೊಂದು ನಿಜ ಹೇಳುತ್ತೇನೆ ಕೇಳು.
ನ ದೌಬುಷ್ಟ ಪೂರ್ವಂ ಕಲ್ಯಾಣಂ ಸುಖಂ ಪತಿ ಪೌರುಷೆ ||
ಅಪಿ ಪುತ್ರೇ ವಿಪಶ್ಯೇಯಂ ಇತಿ ರಾಮ ಆಸ್ಥಿತಂ ಮಯಾ ||
ನಾನು ದಶರಥನಿಗೆ ಪತ್ನಿಯಾಗಿ ಯಾವ ಮಂಗಳವಾದ ಆನಂದವನ್ನೂ ಹೊಂದಲಿಲ್ಲ. ಅವನು ಕೈಕೆಯ ವಶವಾಗಿದ್ದಾನೆ. ಅವಳ ಮನಸ್ಸಿಗೆ ನೋವಾಗುತ್ತದೆಯೆಂದು, ಒಬ್ಬ ಜೇಷ್ಠ ಪತ್ನಿಗೆ ಕೊಡಬೇಕಾದ ಮರ್ಯಾದೆಯನ್ನು ನನಗೆ ಕೊಡದೆ, ದಾಸೀಜನರ ಸಮಾನವಾಗಿ ನಡೆಸಿಕೊಂಡಿದ್ದಾನೆ. ಈದಿನ ನಿನಗೆ ಯುಕ್ತ ವಯಸ್ಸಿನಲ್ಲಿ ಪಟ್ಟಾಭಿಷೇಕ ನಡೆದು ಯುವರಾಜನಾದರೆ, ನಿನ್ನನ್ನು ನೋಡುತ್ತಾ, ನಿನ್ನ ಪರಿಪಾಲನೆಯನ್ನು ಕಣ್ತುಂಬಿ ಕೊಂಡು ರಾಜಮಾತೆಯಾಗಿ ಆನಂದವನ್ನು ಅನುಭವಿಸಬಹುದೆಂಬ ಕಲ್ಪನೆಯಲ್ಲಿದ್ದೆ. ಆದರೆ ನನಗೆ ಅದೂ ಸಿಗದೇ ಹೋಯಿತು. ಬಂಜರು ಭೂಮಿಯಲ್ಲಿ ಬೀಜವನ್ನು ಬಿತ್ತಿದರೆ ಹೇಗೆ ಮೊಳಕೆ ಬರದೆ ನಿಷ್ಪ್ರಯೋಜಕವೋ ಹಾಗೆ ನಾನು ಮಾಡಿದ ವ್ರತಗಳು, ಪೂಜೆಗಳು ನಿಷ್ಪ್ರಯೋಜಕವಾದವು. ರಾಮ! ನನ್ನ ಮೇಲೆ ದೈವಾನುಗ್ರಹವಿಲ್ಲ. ನೀನು ಹೊರಟು ಹೋದರೆ ನನ್ನನ್ನು ನೋಡಿಕೊಳ್ಳುವರಾರು? ನೀ ಹೋದಮೇಲೆ ಈ ರಾಜ್ಯದಲ್ಲಿ ನಾನು ಯಾರನ್ನು ನೋಡುತ್ತಾ ಬದುಕ ಬೇಕು? ನಾನು ಪ್ರಾಣಬಿಡುತ್ತೇನೆ.”
ಇಲ್ಲಿಯವರೆಗೂ ಅವರ ಸಂಭಾಷಣೆಯನ್ನು ಕೇಳಿದ ಲಕ್ಷ್ಮಣ ಕೋಪದಿಂದ, "ಅಣ್ಣಾ! ತಂದೆಯವರಿಗೆ ಮುಪ್ಪು ಬಂದರೂ ಕಾಮವು ತೀರಲಿಲ್ಲ. ವಿಷಯಸುಖಗಳಿಗೆ ಬಗ್ಗಿ ಕೈಕೆಯೊಂದಿಗೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಯಾವ ಅಪರಾಧವನ್ನೂ ಮಾಡದ ನಿನ್ನನ್ನು ಅಡವಿ ಪಾಲು ಮಾಡಿದ್ದಾರೆ. ನೀನೇನೋ ಧರ್ಮ, ಪಿತೃವಾಕ್ಯ ಪರಿಪಾಲನೆಯೆಂದು ಅಡವಿಗೆ ಹೋಗುತ್ತಿರುವೆ. ಆದರೆ ಅಮ್ಮ ಇಲ್ಲಿ ನೋವನ್ನು ಅನುಭವಿಸುತ್ತಾಳೆ. ಕೈಲಾಗದವನಂತೆ ನೀನು ಅರಣ್ಯಕ್ಕೆ ಹೋಗುವುದೇಕೆ? ನೀನು ಒಮ್ಮೆ ಸರಿ ಎನ್ನು, ನಾನು ನನ್ನ ಅಸ್ತ್ರ-ಶಸ್ತ್ರಗಳಿಂದ ಅಯೋಧ್ಯೆಯಲ್ಲಿನ ಆನೆಗಳ ಹಿಂಡನ್ನು ಪರ್ವತದಂತೆ ಕಟ್ಟಿ ಹಾಕುತ್ತೇನೆ. ಭರತನ ಹೆಸರು ಹೇಳಿದವರನ್ನು, ಭರತನು ರಾಜನಾಗಬೇಕೆನ್ನುವವರನ್ನು ಕೇವಲ ಒಂದು ಬಾಣದಿಂದ ಕೊಲ್ಲುತ್ತೇನೆ. ಧರ್ಮಾತ್ಮನಾದ ಮಗನನ್ನು ಅಡವಿಗೆ ಕಳಿಸುತ್ತಿರುವ ದಶರಥನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳುತ್ತೇನೆ. ನಿನ್ನನ್ನು ರಕ್ಷಿಸದಿದ್ದರೆ ನಿನ್ನೊಂದಿಗೆ ನಾನಿದ್ದು ಏನು ಪ್ರಯೋಜನ, ನನಗೆ ಅನುಮತಿ ನೀಡು” ಎಂದ.
ಲಕ್ಷಣನ ಮಾತನ್ನು ಕೇಳಿದ ಕೌಸಲ್ಯೆ, "ರಾಮ! ನಿನ್ನನ್ನು ಬಿಟ್ಟು ನಾನು ಇರಲಾರೆ. ಇದ್ದರೆ ನಾನು ನಿನ್ನೊಂದಿಗೆ ಇರಬೇಕು, ಇಲ್ಲವೇ ನೀನು ನನ್ನೊಂದಿಗಿರಬೇಕು. ನಿನ್ನ ಜೊತೆ ನಾನೂ ಅಡವಿಗೆ ಬರುತ್ತೇನೆ. ನೀನು ಏನು ತಿನ್ನುತ್ತೀಯೋ ನನಗೂ ಅದೇ ಕೊಡು. ಇಲ್ಲವಾದರೆ ಲಕ್ಷ್ಮಣನು ಹೇಳಿದ ಬಗ್ಗೆ ಅಲೋಚಿಸು. ತಂದೆಯ ಮಾತು ಹೇಗೆ ಮಕ್ಕಳು ಕೇಳಬೇಕೋ ಹಾಗೆಯೇ ತಾಯಿಯ ಮಾತು ಕೂಡ ಕೇಳಬೇಕು. ತಂದೆಯು ಅನುಮತಿ ನೀಡಿದಕ್ಕೆ ನೀನು ಹೊರಟು ನಿಂತಿದ್ದೀಯ. ಆದರೆ ತಾಯಿಯಾದ ನಾನು ನಿನಗೆ ಅನುಮತಿ ನೀಡುತ್ತಿಲ್ಲ. ಒಂದು ವೇಳೆ ನೀನು ನನ್ನ ಮಾತನ್ನು ಕೇಳದೆ ಅಡವಿಗೆ ಹೋದರೆ ನಾನು ವಿಷ ಸೇವಿಸಿ ಸಾಯುತ್ತೇನೆ. ನೀನು ಮಾತ್ರ ಅಡವಿಗೆ ಹೋಗ ಕೂಡದು" ಎಂದಳು.
ರಾಮ: “ಅಮ್ಮಾ! ನೀನು ಹೇಳಿದ್ದೇನು ತಪ್ಪಿಲ್ಲ. ಒಂದಾನೊಂದು ಕಾಲದಲ್ಲಿ ಖಂಡ ಎಂಬ ಒಬ್ಬ ಮಹರ್ಷಿ ಇದ್ದರು. ಅವರ ತಂದೆ ಒಮ್ಮೆ ಗೋವನ್ನು ಕೊಲ್ಲಲು ಆಜ್ಞಾಪಿಸಿದರು. ಅವರ ಆಜ್ಞೆಯನ್ನು ಮೀರದೆ ಮಹರ್ಷಿ ಗೋವನ್ನು ಕೊಂದರು. ಪರಶುರಾಮನನ್ನು ಅವನ ತಂದೆ ಜಮದಗ್ನಿ ಕರೆದು ಅವನ ತಾಯಿ ರೇಣುಕೆಯ ಶಿರಸ್ಸನು ಕತ್ತರಿಸಲು ಹೇಳಿದಾಗ ಪರಶುರಾಮ ಕಾರಣವನ್ನೂ ಕೇಳದೆ ತನ್ನ ತಾಯಿಯ ಕತ್ತನ್ನು ಕತ್ತರಿಸಿದ. ಹಾಗೆಯೇ ನಮ್ಮ ವಂಶದಲ್ಲಿ ಪೂರ್ವಿಕನಾದ ಸಗರ ಚಕ್ರವರ್ತಿ ತನ್ನ ಅರವತ್ತು ಸಾವಿರ ಕುಮಾರರನ್ನು ಈ ಭೂಮಿಯನ್ನು ಅಗಿಯಲು ಹೇಳಿದಾಗ, ಹಾಗೆ ಮಾಡುವುದು ಪಾಪವೆಂದು ಅವರು ಅಲೋಚಿಸಲಿಲ್ಲ. ತಂದೆ ಹೇಳಿದನೆಂದು ಮಾಡಿದರು. ಒಂದೇ ವಿಷಯದಲ್ಲಿ ತಂದೆ ಮತ್ತು ತಾಯಿಯ ಮಾತನ್ನು ಕೇಳಬೇಕಾಗಿ ಬಂದರೆ ತಂದೆಯ ಮಾತನ್ನೇ ಗೌರವಿಸ ಬೇಕು. ನಾನೀಗ ತಾಯಿ ಮಾತು ಕೇಳಿ ಇಲ್ಲಿಯೇ ನಿಂತರೆ ಪೂರ್ವದಲ್ಲಿ ನಮ್ಮ ವಂಶದಲ್ಲಿ ತಂದೆ ಮಾತು ಕೇಳಿದವರು ಅವಿವೇಕಿಗಳಾಗುತ್ತಾರೆ. ನಾನು ಅವರ ವರ್ತನೆಯನ್ನು ಅವಮಾನಿಸಕೂಡದು. ಅದಕ್ಕಾಗಿ ನಾನೀಗ ದಶರಥ ಮಹಾರಾಜನ ಮಾತನ್ನು ಗೌರವಿಸಿ ಅಡವಿಗೆ ಹೋಗಲೇ ಬೇಕು".
Comments
Post a Comment