೬೬. ದಕ್ಷಿಣದಲ್ಲಿ ಹುಡುಕಾಟ


ಎಲ್ಲರಿಗೂ ಸೀತೆಯನ್ನು ಹುಡುಕಲು ದಾರಿ ತೋರಿಸಿದ ಮೇಲೆ ಸುಗ್ರೀವ ಹನುಮಂತನನ್ನು ಕರೆದು, "ಹನುಮ! ನಿನಗಿರುವ ಪರಾಕ್ರಮ, ತೇಜಸ್ಸು, ಬುದ್ದಿ, ವೇಗ ಭೂಮಿಯಲ್ಲಿರುವ ಯಾವ ಪ್ರಾಣಿಗೂ ಇಲ್ಲ. ನಿನ್ನ ತಂದೆ ವಾಯುದೇವನಿಗಿರುವ ಗಮನ ಶಕ್ತಿ ನಿನಗಿದೆ. ನಿನ್ನ ಮೇಲೆಯೇ ನಾನು ನಂಬಿಕೆಯಿಟ್ಟಿದ್ದೇನೆ. ನೀನೇ ಸೀತೆಯ ಜಾಡನ್ನು ಕಂಡುಹಿಡಿಯಬೇಕು" ಎಂದ.

ಅಷ್ಟು ಕೋಟಿ ವಾನರರಿದ್ದರೂ ಸುಗ್ರೀವ ಹನುಮಂತನಿಗೆ ಪ್ರತ್ಯೇಕವಾಗಿ ಹೇಳಿದ್ದರಿಂದ ರಾಮನಿಗೆ ಹನುಮಂತನ ಮೇಲೆ ನಂಬಿಕೆಯುಂಟಾಯಿತು. ಆಗ ಅವನು ಹನುಮಂತನಿಗೆ, "ಹನುಮಾ! ವಾನರ ರೂಪದಲ್ಲಿರುವ ನಿನ್ನನ್ನು ನೋಡಿದರೆ ಸೀತೆ ಹೆದರಬಹುದು. ನಿನಗೆ ಉಂಗುರವನ್ನು ಕೊಡುತ್ತೇನೆ. ಇದನ್ನು ತೋರಿಸಿದರೆ ಅವಳು ಸಮಾಧಾನ ಪಡುತ್ತಾಳೆ" ಎಂದು ಹೇಳಿ ಅವನಿಗೆ ತನ್ನ ಬಳಿಯಿರುವ ಉಂಗುರ ಕೊಟ್ಟ. ಹನುಮ ಉಂಗುರವನ್ನು ಪಡೆದು ರಾಮನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಹೊರಡಲು ಅನುವಾದ. ಸುಗ್ರೀವ ಎಲ್ಲರಿಗೂ ಬೇಗ ಹೊರಡಲು ಆದೇಶಿಸಿದ.

ವಾನರರು ಸಂತೋಷದಿಂದ ಕೇಕೆ ಹಾಕುತ್ತಾ ಹೊರಟರು. ಒಬ್ಬ, "ನೀವೆಲ್ಲ ಏಕೆ? ನಾನೊಬ್ಬನೇ ಸೀತೆಯನ್ನು ಕಂಡುಹಿಡಿಯುತ್ತೇನೆ" ಎಂದರೆ, ಮತ್ತೊಬ್ಬ, "ನಾನು ಭೂಮಿಯನ್ನೇ ಸೀಳುತ್ತನೆ" ಎಂದ. ಮಗದೊಬ್ಬ, "ನಾನು ಸಮುದ್ರಗಳನ್ನೇ ಕಲಿಸಿಬಿಡುತ್ತೇನೆ" ಎಂದ. "ನಾನು ಪರ್ವತಗಳನ್ನು ಬೀಳಿಸುತ್ತೇನೆ", "ನಾನು ಹೋಗುವ ದಾರಿಯಲ್ಲಿ ಇನ್ನು ಮರಗಳು ಕಾಣಿಸುವುದಿಲ್ಲ. ನನ್ನ ವೇಗಕ್ಕೆ ಅವೆಲ್ಲ ಮುರಿದು ಬೀಳಬೇಕು", "ನೀವೆಲ್ಲ ವಿಶ್ರಾಂತಿ ಪಡಿಯಿರಿ, ಹತ್ತು ತಲೆಯ ಹುಳವನ್ನು ತಂದು ರಾಮ ಪಾದದಲ್ಲಿ ಹಾಕುತ್ತೇನೆ" ಎಂಬ ಕೂಗುಗಳೂ ಕೇಳಿಸಿದವು. ವಾನರರೆಲ್ಲ ತೊಡೆ ತಟ್ಟುತ್ತಾ, ಮೇಲೆ ಕೆಳಗೆ ಎಗುರುತ್ತಾ ಸಂತೋಷದಿಂದ ಸುಗ್ರೀವ ಆದೇಶಿಸಿದಂತೆ ನಾಲ್ಕು ದಿಕ್ಕುಗಳಿಗೂ ಹೋದರು.

ಎಲ್ಲರೂ ಹೋದ ಮೇಲೆ ರಾಮ ಸುಗ್ರೀವನನ್ನು, "ನಿನಗೆ ಎಲ್ಲ ದಿಕ್ಕುಗಳ ವಿಶೇಷಗಳು ಹೇಗೆ ತಿಳಿದಿದೆ?" ಎಂದು ಕೇಳಿದ. "ನನ್ನನ್ನು ಕೊಲ್ಲಲು ವಾಲಿ ಹಿಂದೆ ಬರುತ್ತಿದ್ದಾಗ ನಾನು ಭೂಮಿಯನ್ನೆಲ್ಲ ತಿರುಗಿದೆ. ಆದರೂ ಅವನು ಹಿಂದೆ ಬರುತ್ತಲೇ ಇದ್ದ. ಕೊನೆಗೆ ಹನುಮನ ಸಲಹೆಯಂತೆ ಋಷ್ಯಮೂಕ ಪರ್ವತದ ಮೇಲೆ ಕುಳಿತೆ.

ವಾನರರೆಲ್ಲ ಹೋದ ಮೇಲೆ ರಾಮ, ಲಕ್ಷ್ಮಣ, ಸುಗ್ರೀವರಿಗೆ ಸ್ವಲ್ಪ ನೆಮ್ಮದಿಯಾಯಿತು. ಸುಗ್ರೀವನ ಆದೇಶದಂತೆ ದಿಕ್ಕುಗಳಲ್ಲಿ ಹೋದ ವಾನರರಲ್ಲಿ ದಿಕ್ಕಿನವರು ಒಂದು ತಿಂಗಳಲ್ಲಿ ಹಿಂದೆ ಬಂದರು. ಅವರಿಗೆ ಸೀತೆ ಎಲ್ಲಿಯೂ ಸಿಕ್ಕಿರಲಿಲ್ಲ. ದಕ್ಷಿಣ ದಿಕ್ಕಿನವರು ಇನ್ನೂ ಬಂದಿರಲಿಲ್ಲ.

ದಕ್ಷಿಣಕ್ಕೆ ಹೋದ ವಾನರರು ವಿಂಧ್ಯ ಪರ್ವತಕ್ಕೆ ಹೋಗಿ ಅದರಲ್ಲಿರುವ ಗುಹೆ, ಮರ, ಸರೋವರಗಳು, ಮಾರ್ಗ ಮಧ್ಯದಲ್ಲಿನ ನದಿ, ಗ್ರಾಮ, ಪಟ್ಟಣಗಳಲ್ಲೆಲ್ಲ ಸೀತೆಯನ್ನು ಹುಡುಕುತ್ತಾ ಹೊರಟರು. ಸ್ವಲ್ಪ ದೂರ ಹೋದ ಮೇಲೆ ಅವರಿಗೆ ನಿರ್ಜನವಾದ ಅರಣ್ಯ ಸಿಕ್ಕಿತು. ಅಲ್ಲಿ ಹಣ್ಣು, ಎಲೆ, ಪ್ರಾಣಿ ಏನೊಂದೂ ಕಾಣಲಿಲ್ಲ. ಬಹಳ ಹಿಂದೆ ಕಂಡು ಋಷಿ ಪ್ರಾಂತದಲ್ಲಿ ವಾಸಿಸುತ್ತಿದ್ದರು. ಅವರ ತಪಃಶಕ್ತಿಗೆ ದೇವತೆಗಳೂ ಭಯಪಡುತ್ತಿದ್ದರು. ಅವರ ಮಗ ಅರಣ್ಯದಲ್ಲಿ ಪ್ರಾಣ ಬಿಟ್ಟಿದ್ದ. ಅದರಿಂದ ಕಂಡು ಮಹರ್ಷಿಗೆ ಒಂದು ರೀತಿಯ ಖೇದವಾಗಿ ಅರಣ್ಯದಲ್ಲಿ ಮನುಷ್ಯರಾಗಲೀ, ಪ್ರಾಣಿಗಳಾಗಲೀ, ಪಕ್ಷಿಗಳಾಗಲೀ ಇರಬಾರದೆಂದು ಶಪಿಸಿದ್ದರು

ಅವರು ಅರಣ್ಯದಿಂದ ಮುಂದೆ ಹೋದರು. ಒಂದು ಗುಹೆಯಿಂದ ಭಯಂಕರವಾದ ಆಕಾರವುಳ್ಳ ಒಬ್ಬ ರಾಕ್ಷಸ ಹೊರಬಂದು ವಾನರರ ಮೇಲೆ ಬೀಳಲು ಹೋದ. ಅವನನ್ನು ನೋಡಿದ ಅಂಗದ ಅವನು ರಾವಣನೇ ಎಂದುಕೊಂಡು ಅವನ ತಲೆಯ ಮೇಲೆ ಒಂದು ಗುದ್ದು ಗುದ್ದಿದ. ಏಟಿಗೆ ರಾಕ್ಷಸ ರಕ್ತ ಕಾರುತ್ತಾ ಕೆಳಗೆ ಬಿದ್ದು ಸತ್ತ. ನಂತರ ಅವರು ರಾಕ್ಷಸನ ಗುಹೆಯೆಲ್ಲ ಹುಡುಕಿದರೂ ಅವರಿಗೆ ಸೀತೆ ಕಾಣಲಿಲ್ಲ. ಎಲ್ಲರೂ ಹಸಿವು ಬಾಯಾರಿಕೆಗಳಿಂದ ಕಂಗೆಟ್ಟರು. ಎಲ್ಲಾದರೂ ಒದ್ದೆಯಾದ ರೆಕ್ಕೆಗಳಿರುವ ಪಕ್ಷಿಗಳು ಕಾಣಿಸುತ್ತವೆಯೋ ಎಂದು ಸುತ್ತಲೂ ನೋಡಿದರು. ಅವರಿಗೆ ಒಂದು ಬಿಲದಿಂದ ಪಕ್ಷಿಗಳು ಬರುವುದು ಕಾಣಿಸಿತು. ಅವುಗಳ ಹಿಂದೆ ಕೆಲವು ಜೀವಿಗಳೂ ಒದ್ದೆಯಾದ ಶರೀರದಿಂದ ಹೊರಗೆ ಬಂದವು. ನೀರು ಸಿಕ್ಕಬಹುದೆಂದು ವಾನರರು ಬಿಲದೊಳಗೆ ಹೋದರು. ಒಳಗೆಲ್ಲ ಕತ್ತಲಿದ್ದರಿಂದ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಒಳಗೆ ಹೋದರು

ಸ್ವಲ್ಪ ದೂರ ಹೋದ ಮೇಲೆ ಅವರಿಗೆ ಒಂದು ಅದ್ಭುತ ಕಾಣಿಸಿತು. ಅಲ್ಲಿ ಇಲ್ಲದ ಮರವೇ ಇರಲಿಲ್ಲ. ಗಿಡಗಳೆಲ್ಲ ಹೂ, ಹಣ್ಣುಗಳಿಂದ ಸಮೃದ್ದವಾಗಿದ್ದವು. ದೊಡ್ಡ ದೊಡ್ಡ ಮರಗಳಿಗೆ ಜೇನು ಕಟ್ಟಿತ್ತು. ಸರೋವರಗಳು ಬಂಗಾರದ ತಾವರೆಗಳಿಂದ ಕಂಗೊಳಿಸುತ್ತಿತ್ತು. ಸರೋವರದ ನೀರು ಸಿಹಿಯಾಗಿತ್ತು. ಹತ್ತಿರದಲ್ಲಿ ಬೆಳ್ಳಿ, ಬಂಗಾರಗಳಿಂದ ಮಾಡಿದ ಬಹುಮಹಡಿ ಕಟ್ಟಡಗಳು ಕಾಣಿಸಿದವು. ಎಲ್ಲಿನೋಡಿದರೂ ಬಂಗಾರದ ಆಸನಗಳು, ಶಯನಗಳೇ ಕಾಣಿಸುತ್ತಿದ್ದವು. ವಾನರರಿಗೆ ಅದನ್ನೆಲ್ಲ ನೋಡಿ ಆಶ್ಚರ್ಯವಾಯಿತು. ಸರೋವರದ ನೀರು ಕುಡಿದು ತಮ್ಮ ಬಾಯಾರಿಕೆ ನೀಗಿಸಿಕೊಂಡರು. ಸ್ವಲ್ಪ ದೂರದಲ್ಲಿ ಕೃಷ್ಣಾಜಿನ ಹೊದ್ದು, ನಾರು ಮಡಿಯುಟ್ಟಿದ್ದ ಒಬ್ಬಳು ಸ್ತ್ರೀ ಕಾಣಿಸಿದಳು. ಅವಳ ಬಳಿ ಹೋಗಿ ನಮಸ್ಕಾರ ಮಾಡಿ ವಾನರರು, "ನಮಗೆ ತುಂಬಾ ಆಶ್ಚರ್ಯವಾಗಿದೆ. ಹೊರಗಿನಿಂದ ಕೇವಲ ಒಂದು ಬಿಲ ಕಾಣಿಸುತ್ತದೆ. ಆದರೆ ಒಳಗೆ ಒಂದು ಅದ್ಭುತವೇ ಇದೆ. ಗುಹೆ, ಕೋಟೆಗಳು ಯಾರದ್ದು? ನಮಗೆ ತುಂಬಾ ವಿಚಿತ್ರವಾಗಿದೆ" ಎಂದರು
ಸ್ತ್ರೀ ಹೇಳಿದಳು: "ಪೂರ್ವದಲ್ಲಿ ದಾನವ ರಾಜನ ಬಳಿ ಮಯನೆಂಬ ಶಿಲ್ಪಿಯಿದ್ದ. ಅವನಿಗೆ ಹಲವಾರು ಮಾಯಾವಿದ್ಯೆಗಳು ಸಿದ್ಧಿಸಿದ್ದವು. ಅವನು ಬಂಗಾರದಿಂದ ಪ್ರದೇಶವನ್ನು ನಿರ್ಮಿಸಿದ. ಮಯ ಬ್ರಹ್ಮನನ್ನು ಕುರಿತು ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿದ. ಅವನ ತಪಸ್ಸಿಗೆ ಮೆಚ್ಚಿ ಬ್ರಹ್ಮದೇವರು ವಿಶೇಷವಾದ ವರಗಳನ್ನು, ಶುಕ್ರಾಚಾರ್ಯರ ಸಂಪತ್ತನ್ನು ಕೊಟ್ಟರು. ಆದರೆ ಮಯ 'ಹೇಮ' ಎಂಬ ಅಪ್ಸರಸ್ತ್ರೀಯ ಮೇಲೆ ಆಸೆಯಿಟ್ಟುಕೊಂಡಿದ್ದಾನೆಂದು ತಿಳಿದು ಇಂದ್ರ ವಜ್ರಾಯುಧದಿಂದ ಅವನನ್ನು ಸಂಹರಿಸಿದ. ಬ್ರಹ್ಮದೇವರು ಮಯ ಮೆಚ್ಚಿದ ಅಪ್ಸರೆಗೆ ಗುಹೆ ಸೇರುತ್ತದೆಯೆಂದು ತೀರ್ಪು ಕೊಟ್ಟರು. ಹೇಮ ಇದರ ಕಾವಲಿಗೆ ನನ್ನನ್ನು ನೇಮಿಸಿದ್ದಾಳೆ. ನಾನು ಮೇರುಸಾವರ್ಣಿಯ ಮಗಳು. ನನ್ನ ಹೆಸರು ಸ್ವಯಂಪ್ರಭ. ಸಂಗೀತ, ನೃತ್ಯಗಳಲ್ಲಿ ಪ್ರವೀಣೆಯಾದ ಹೇಮ ನನ್ನ ಸ್ನೇಹಿತೆ. ನಿಮ್ಮನ್ನು ನೋಡಿದರೆ ತುಂಬಾ ದಣಿವಾದಂತೆ ಕಾಣಿಸುತ್ತಿದ್ದೀರ. ಹೊಟ್ಟೆ ತುಂಬಾ ಹಣ್ಣು, ಜೇನು, ನೀರನ್ನು ಸೇವಿಸಿ ವಿಶ್ರಾಂತಿ ಪಡೆಯಿರಿ. ನಂತರ ನೀವು ಯಾರು, ಇಲ್ಲಿಗೇಕೆ ಬಂದಿರಿ ಎಂಬುದನ್ನು ತಿಳಿಸಿ."


ವಾನರರು ಹೊಟ್ಟೆತುಂಬ ತಿಂದು ವಿಶ್ರಾಂತಿ ಪಡೆದರು. ನಂತರ ಹನುಮಂತ ಸ್ವಯಂಪ್ರಭೆಗೆ ರಾಮನ ವನವಾಸ, ಸೀತಾಪಹರಣ, ರಾಮ-ಸುಗ್ರೀವರ ಸ್ನೇಹ, ತಮಗೆ ವಹಿಸಿರುವ ಕೆಲಸ ಎಲ್ಲವನ್ನೂ ವಿವರಿಸಿ ಸೀತೆಯ ಬಗ್ಗೆ ಅವಳಿಗೇನಾದರೂ ತಿಳಿದಿದೆಯೇನೋ ಎಂದು ವಿಚಾರಿಸಿದ. ಆದರೆ ಸ್ವಯಂಪ್ರಭೆ, " ಗುಹೆಗೆ ಮೃಗಗಳನ್ನು ಬಿಟ್ಟು ಬೇರೆ ಬೇರೆ ಯಾರಾದರೂ ಬಂದರೆ ಸಜೀವವಾಗಿ ಹೊರಗೆ ಹೋಗರು. ಆದರೆ ನಿಮ್ಮನ್ನು ನೋಡಿದರೆ ನನಗೆ ಕನಿಕರವಾಗುತ್ತಿದೆ. ನೀವು ಇಲ್ಲಿಗೆ ಬಂದು ತಿಂಗಳಾಗಿದೆ. ನಿಮ್ಮನ್ನು ನನ್ನ ತಪಃಶಕ್ತಿಯಿಂದ ಹೊರಗೆ ಕಳಿಸುತ್ತೇನೆ. ನೀವು ಕಣ್ಣು ಮುಚ್ಚಿಕೊಳ್ಳಿ" ಎಂದಳು. ಅವರು ಕಣ್ಣು ಮುಚ್ಚಿದ ಮರುಕ್ಷಣದಲ್ಲಿ ವಿಂಧ್ಯಪರ್ವತದ ಮೇಲೆ ಬಂದಿದ್ದರು. ಆಷ್ಟರಲ್ಲಿ ಕೆಲವು ತಿಂದಳುಗಳೇ ಸಂದಿದ್ದವು (ವಾನರರು ಗುಹೆಯೊಳಗಿದ್ದ ಹೊತ್ತೂ ಅವರಿಗೆ ಸಮಯ ತಿಳಿಯಲಿಲ್ಲ).

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ