೭೧. ಹನುಮನ ಚಿಂತೆ
ಲಂಕೆಯೆಲ್ಲ ಹುಡುಕಿದ್ದೇನೆ. ಯಾವ ಮನೆಯನ್ನೂ ಬಿಡಲಿಲ್ಲ. ಇಲ್ಲಿ ಗಂಧರ್ವ, ಯಕ್ಷ, ಕಿನ್ನರ, ರಾಕ್ಷಸ ಸ್ತ್ರೀಯರು ಕಾಣಿಸುತ್ತಿದ್ದಾರೆ. ಆದರೆ ಸೀತೆ ಮಾತ್ರ ಕಾಣಿಸುತ್ತಿಲ್ಲ" ಎಂದು ಹನುಮ ಶೋಕಿಸಿದ. ನಂತರವೇ, "ಯಾರು ಶೋಕಕ್ಕೆ ಬಾಗುವನೋ ಅವನಿಗೆ ಏನೂ ಸಾಧಿಸಲಾಗುವುದಿಲ್ಲ. ಮತ್ತೆ ಸೀತೆಯನ್ನು ಹುಡುಕುತ್ತೇನೆ. ಲಂಕೆಯನ್ನೆಲ್ಲ ಹುಡುಕುತ್ತೇನೆ" ಎಂದುಕೊಂಡ. ಆದರೆ ಹನುಮನಿಗೆ ಸೀತೆ ಸಿಗದ ಹತಾಶೆಯಲ್ಲಿ ವಿವಿಧ ಯೋಚನೆಗಳು ಬರಲಾರಂಭಿಸಿದವು.
"ಇಷ್ಟು ದೊಡ್ಡ ಲಂಕೆಯಲ್ಲಿ ಒಂದು ಅಂಗುಲ ಬಿಡದೆ ಹುಡುಕಿದರೂ ಸೀತೆ ಸಿಗಲಿಲ್ಲ. ಬಹುಶಃ ಮೈಮೇಲೆ ಅರೆವಸ್ತ್ರವಿರುವ ಅಥವಾ ವಸ್ತ್ರವಿಲ್ಲದ ಸ್ತ್ರೀಯರನ್ನು ನೋಡಿದ್ದರಿಂದ ನನ್ನ ಧರ್ಮಕ್ಕೆ ಚ್ಯುತಿ ಬಂದೀತೇ? ನಾನು ಹುಡುಕುತ್ತಿರುವುದು ಸ್ತ್ರೀಯನ್ನು. ಆದ್ದರಿಂದ ಹುಡುಕುವಾಗ ಸ್ತ್ರೀಯರನ್ನು ಸೀತೆಯೋ ಅಲ್ಲವೋ ಎಂಬುದನ್ನು ತಿಳಿಯಲು ನೋಡಲೇಬೇಕು. ನಾನು ಅವರನ್ನು ಹಾಗೆ ನೋಡಿದ್ದೇನೆಯೇ ಹೊರತು ನನ್ನ ಮನಸ್ಸು ಯಾವ ಕ್ಷಣದಲ್ಲಿಯೂ ವಿಕಾರಗೊಂಡಿಲ್ಲ. ನಾನು ಪವಿತ್ರವಾಗಿಯೇ ಇದ್ದೇನೆ. ಸೀತಾದರ್ಶನ ಮಾಡದೆ ಹಿಂತಿರುಗಿ ಉಳಿದ ವಾನರರ ಬಳಿ ಹೋದರೆ ಅವರು ಸುಗ್ರೀವನ ಭಯದಿಂದ ಪ್ರಾಯೋಪ್ರವೇಶ ಮಾಡುತ್ತಾರೆ. ನಾನು ಹೋಗಿ ಸುಗ್ರೀವನಿಗೆ ಈ ಮಾತನ್ನು ಹೇಳಿದರೆ ಅವನು ರಾಮನಿಗೆ ಸಹಾಯ ಮಾಡಲು ತನಗೆ ಆಗಲಿಲ್ಲವೆಂದು ಪ್ರಾಣ ಬಿಡುತ್ತಾನೆ. ಸೀತೆಯೂ ಇಲ್ಲ, ಈಗ ಇದ್ದ ಸ್ನೇಹಿತನೂ ಹೋದನೆಂಬ ಶೋಕದಿಂದ ರಾಮನೂ ಮರಣಿಸುತ್ತಾನೆ. ರಾಮನಿಲ್ಲದಿದ್ದರೆ ಲಕ್ಷ್ಮಣನಿಲ್ಲ. ಈ ವಾರ್ತೆ ಅಯೋಧ್ಯೆಯನ್ನು ತಲುಪಿದರೆ ಅಲ್ಲಿರುವ ಕೌಸಲ್ಯೆ, ಸುಮಿತ್ರೆ, ಕೈಕೆ, ಭರತ, ಶತೃಘ್ನರೂ ಮರಣಿಸುತ್ತಾರೆ. ನಾನು ಈ ವಾರ್ತೆಯನ್ನೇಕೆ ತೆಗೆದುಕೊಂಡು ಹೋಗಬೇಕು? ಬಹುಶಃ ರಾವಣ ಸೀತೆಯನ್ನು ಅಪಹರಿಸುತ್ತಿರುವಾಗ ಸೀತೆ ಸಮುದ್ರಕ್ಕೆ ಧುಮುಕಿರಬಹುದು. ಛೆ! ಸೀತೆ ಅಷ್ಟು ಪುಕ್ಕಲಿಯಲ್ಲ! ಅಥವಾ ರಾವಣನ ಬಳಿ ಅವಳು ಹೋಗಲಿಲ್ಲವೆಂದು ಅವನೇನಾದರೂ ಅವಳನ್ನು ಕೊಂದು ತಿಂದಿರಬಹುದೇ? ಇಲ್ಲ ಇಲ್ಲ! ಕಾಮುಕ ತಾನು ಕಾಮಿಸಿದ ಸ್ತ್ರೀಯನ್ನು ಕೊಂದಿರುವುದಿಲ್ಲ. ರಾಕ್ಷಸರು ಕೊಂದಿರಬಹುದೇ? ಇರಲಿಕ್ಕಿಲ್ಲ. ರಾವಣ ಕಾಮಿಸಿದ ಸ್ತ್ರೀಯನ್ನು ರಾಕ್ಷಸರು ಮುಟ್ಟುವ ಧೈರ್ಯ ಮಾಡುವುದಿಲ್ಲ. ರಾವಣನೇ ಸೀತೆಯ ಜಾಡು ಸಿಕ್ಕದಂತೆ ಎಲ್ಲೋ ಬಚ್ಚಿಟ್ಟಿರಬೇಕು. ಆದ್ದರಿಂದ ನಿದ್ದೆ ಹೋಗುತ್ತಿರುವ ರಾವಣನ್ನು ಈಗಲೇ ಕೊಂದು ರಾಮನ ಪಾದದ ಬಳಿ ಹಾಕುತ್ತೇನೆ…. ಇಲ್ಲ! ಸೀತೆ ಸಿಗದಿದ್ದಾಗ ಇವನನ್ನು ಕೊಂದು ಏನಾಗಬೇಕಿದೆ? ನಾನು ಹಿಂದಕ್ಕೆ ಹೋಗುವುದೇ ಇಲ್ಲ. ಸೀತೆ ಸಿಗುವವರೆಗೂ ವಾನಪ್ರಸ್ಥನಾಗುತ್ತೇನೆ. ಇಲ್ಲವೇ ಅಗ್ನಿಪ್ರವೇಶ ಮಾಡುತ್ತೇನೆ. ಸಮುದ್ರಕ್ಕೆ ಧುಮುಕ್ಕುತ್ತೇನೆ…. ಛೆ! ಸಾಯುವುದೇ? ಆತ್ಮಹತ್ಯೆ ಮಹಾಪಾಪ! ನಾನು ಮತ್ತೆ ಉತ್ಸಾಹ ಪಡೆಯುತ್ತೇನೆ.
ನಮೋಸ್ತು ರಾಮಾಯ ಸಲಕ್ಷ್ಮಣಾಯ, ದೇವ್ಯೈಚ ತಸ್ಮೈ ಜನಕಾತ್ಮಜಾಯೈ
ನಮೋಸ್ತು ರುದ್ರೇಂದ್ರ ಯಮನಿಲೇಭ್ಯೋ, ನಮೋಸ್ತು ಚಂದ್ರಾರ್ಕ ಮರುದ್ಗಣೇಭ್ಯಃ
(ಇದನ್ನು ರಾಮಾಯಣ ಪ್ರಾರ್ಥನಾ ಶ್ಲೋಕವಾಗಿ ಪರಿಗಣಿಸುತ್ತಾರೆ)
ಲಕ್ಷ್ಮಣ ಜೊತೆ ಕೂತಿರುವ ರಾಮನಿಗೆ ನಮಸ್ಕಾರ, ಸೀತೆಗೆ ನಮಸ್ಕಾರ, ರುದ್ರ, ಇಂದ್ರ, ಯಮ, ವಾಯು, ಚಂದ್ರ, ಸೂರ್ಯ, ದೇವತೆಗಳೆಲ್ಲರಿಗೆ ನಮಸ್ಕಾರ. ನನಗೆ ಸೀತೆ ಸಿಗುವಂತೆ ಆಶೀರ್ವಾದ ಮಾಡಿ" ಎಂದುಕೊಂಡು ಹೋಗುತ್ತಿರುವಾಗ ಹನುಮನ ಎದುರಿಗೆ ಅಶೋಕವನ ಕಾಣಿಸಿತು!
ಬಿಲ್ಲಿನಿಂದ ಹೊರ ಬಂದ ಬಾಣದಂತೆ ಹನುಮ ಅಶೋಕ ವನದೊಳಗೆ ಬಂದಿಳಿದ. ಅಲ್ಲಿದ್ದ ಮರಮರಗಲ್ಲಿಯೂ ಸೀತೆಯನ್ನು ಹುಡುಕಿದ. ಅಶೋಕವನ ರಾವಣ ತನ್ನ ತಪಃಶಕ್ತಿಯಿಂದ ನಿರ್ಮಿಸಿದ ಒಂದು ಬೆಟ್ಟ. ಅದರಲ್ಲಿ ಒಂದು ನದಿಯೂ ಇತ್ತು. ಅಶೋಕವನದಲ್ಲಿ ಹುಡುಕುತ್ತಿದ್ದಾಗ ಹನುಮನಿಗೆ ದೂರದಲ್ಲಿ ಸಾವಿರ ಕಂಬಗಳುಳ್ಳ ಒಂದು ಪ್ರಾಸಾದ ಕಾಣಿಸಿತು. ಅದು ಸೈನಿಕರು ವಿಶ್ರಾಂತಿ ಪಡೆಯಲು ಕಟ್ಟಿದ ಕಟ್ಟಡ. ಅಲ್ಲಿ ಶಿಂಶುವಾ ಎಂಬ ಮರವಿತ್ತು. ಆ ಮರದ ಮೇಲೆ ಹತ್ತಿ ಅದರ ಕೊಂಬೆಗಳ ಸಂದಿನಿಂದ ನೋಡಿದಾಗ ರಾಕ್ಷಸ ಸ್ತ್ರೀಯರ ಮಧ್ಯದಲ್ಲಿ ಸೀರೆಯುಟ್ಟ ಒಬ್ಬ ಹೆಂಗಸಿದ್ದಳು. ಅವಳು ಸೀತೆಯಿರಬಹುದೇನೋ ಎಂದು ಎಲೆಗಳನ್ನು ಪಕ್ಕಕ್ಕೆ ಸರಿಸಿ ನೋಡಿದಾಗ, ಮಣ್ಣು ಹಿಡಿದ ಸೀರೆಯುಟ್ಟು, ಉಪವಾಸದಿಂದ ದೇಹವೆಲ್ಲ ಕ್ಷೀಣಿಸಿ ದೀನಳಾಗಿದ್ದ, ಬಿಕ್ಕಳಿಸಿ ಅಳುತ್ತಿದ್ದ, ಶುಕ್ಲಪಕ್ಷಕ್ಕೆ ಮೊದಲು ಬರುವ ಚಂದ್ರರೇಖೆಯಂತಿದ್ದ, ತಪಸ್ಸು ಮಾಡದ ವಿನಾ ತಿಳಿಯದ ಪ್ರಕಾಶದಿಂದ ಬೂದಿಮುಚ್ಚಿದ ಕೆಂಡದಂತೆ ಹಸಿರು ಸೀರೆಯುಟ್ಟು ತನ್ನ ಆಸೆ ತೀರದೆ ನಾಚಿಕೆಯಿಂದ ತಲೆತಗ್ಗಿಸಿದ್ದ ಸೀತೆ ಹನುಮನಿಗೆ ಕಾಣಿಸಿದಳು. ಸೀತೆಯನ್ನು ನೋಡಿ ಹನುಮನ ಕಣ್ಣಲ್ಲಿ ಆನಂದಬಾಷ್ಪಗಳು ಉದುರಿದವು. ಕಪ್ಪು ಕಣ್ಣುಗಳಿದ್ದ ಸೀತೆಯನ್ನು ನೋಡಿದ ಅವನಿಗೆ ತಕ್ಷಣ ರಾಮ ಜ್ಞಾಪಕ ಬಂದ. ಸೀತೆಯನ್ನು ನೋಡುವುದು ಎಂದರೆ ಪ್ರಕೃತಿಯನ್ನು ನೋಡುವುದು. ಆ ಪ್ರಕೃತಿಯಲ್ಲಿ ಪುರುಷನು ಕಾಣಿಸಿ ಹನುಮನಿಗೆ ಪತಿಪತ್ನಿಯರ ಅದ್ವೈತ ದರ್ಶನವಾಯಿತು!
ಸೀತೆಯನ್ನು ನೋಡಿ ಹನುಮ, 'ಹತ್ತು ತಿಂಗಳುಗಳ ಕಾಲ ಹೀಗೆ ಶೋಕಿಸುತ್ತಿರುವ ಸೀತೆಯನ್ನು ನೋಡದೆ ರಾಮ ಯಾರೂ ಮಾಡದ ಕೆಲಸ ಮಾಡಿದ್ದಾನೆ. ಅವನು ಗಟ್ಟಿ ಮನಸ್ಸು. ಸೀತೆಯ ಮನಸ್ಸು ರಾಮನ ಬಳಿಯಿದೆ. ರಾಮನ ಮನಸ್ಸು ಸೀತೆಯ ಬಳಿಯಿದೆ. ಆದ್ದರಿಂದಲೇ ಇಬ್ಬರೂ ಇಷ್ಟು ದಿನ ಬದುಕಿದ್ದಾರೆ. ಮೂರು ಲೋಕದಲ್ಲಿರುವ ಐಶ್ವರ್ಯವನ್ನೆಲ್ಲ ಸೇರಿಸಿದರೂ ಸೀತೆಯ ಹದಿನಾರನೆಯ ಒಂದು ಭಾಗವೂ ಆಗುವುದಿಲ್ಲ. ಕಪ್ಪಾದ ಕೂದಲು, ಕೆಂಪಾದ ತುಟಿ, ಸಣ್ಣ ನಡು, ಪದ್ಮದಂತಹ ಕಣ್ಣುಗಳಿಂದ ತಾಯಿ ಶಿಂಶುವಾ ವೃಕ್ಷದ ಕೆಳಗೆ ಕೂತಿದ್ದಾಳೆ. ಗುರುವಿನ ಬಳಿ ವಿದ್ಯೆ ಕಲಿತ ಲಕ್ಷ್ಮಣನಿಂದ ಆರಾಧಿಸಲ್ಪಡುವ ಸೀತೆ, ಹಿರಿಯರಿಂದ ಹೊಗಳಿಸಿಕೊಳ್ಳುವ ಸೀತೆ, ರಾಮನ ಪತ್ನಿಯಾದ ಸೀತೆ, ರಾಮ ಲಕ್ಷ್ಮಣರ ಮಧ್ಯದಲ್ಲಿ ನಡೆಯಬೇಕಾದ ಸೀತೆ, ದಶರಥನ ಸೊಸೆ, ಜನಕನ ಮಗಳಾದ ಸೀತೆಯೇ ಹೀಗೆ ರಾಕ್ಷಸರ ಮಧ್ಯೆ ಹತ್ತು ತಿಂಗಳಿಂದ ಒಂದೇ ಸೀರೆಯನ್ನುಟ್ಟು ಕೂತಿದ್ದಾಳೆಂದರೆ…..
ಯದಿ ಸೀತಾಪಿ ದುಃಖರ್ತಾ ಕಾಲೋಪಿ ದುರತಿಕ್ರಮಃ
ಈ ಕಾಲವೆನ್ನುವುದು ಏನನ್ನಾದರೂ ಮಾಡಬಲ್ಲುದು. ಅದನ್ನು ಅತಿಕ್ರಮಿಸಲು ಯಾರಿಗೂ ಸಾಧ್ಯವಿಲ್ಲ. ಸೀತೆಯ ಕಾರಣದಿಂದಲೇ ೧೪ ಸಾವಿರಕ್ಕೊ ಹೆಚ್ಚು ರಾಕ್ಷಸರು ಸತ್ತರು. ಸೀತೆಯಿಂದಲೇ ಸುಗ್ರೀವ ರಾಜನಾದ. ವಾಲಿ ಸತ್ತ. ಅಮ್ಮಾ! ನೀನು ಇಲ್ಲಿ ಕೂತಿದ್ದೀಯ. ನಿನ್ನ ಕಾರಣದಿಂದ ಎಷ್ಟು ಕಥೆ ನಡೆಯುತ್ತಿದೆ ಎಂದು ನಿನಗೆ ತಿಳಿದಿದೆಯಾ? ನಿನಗೆ ನಿನ್ನ ತಾಯಿ ಭೂದೇವಿಯ ಹೋಲಿಕೆ ಬಂದಿದೆ. ಆದ್ದರಿಂದಲೇ ನಿನಗೆ ಇಷ್ಟು ಸಹನೆ. ಶೀಲ, ವಯಸ್ಸು, ನಡತೆ, ವಂಶ, ಶರೀರ ಎಂಬ ಐದು ಲಕ್ಷಣಗಳಲ್ಲಿಯೂ ನೀನು ರಾಮನಿಗೆ ಸರಿಯಾದವಳು. ನಮ್ಮ ಸೀತೆಯ ಮುಂದೆ ರಾಮ ನಿಂತರೂ ಅವಳ ಕಣ್ಣುಗಳು ಶಾಂತವಾಗಿಯೇ ಇರುತ್ತದೆ. ನಿನಗೆ ಹೋಲಿಸಿದರೆ ರಾಮನೇ ಕೋಪಿಷ್ಠ!' ಎಂದುಕೊಂಡ.
Comments
Post a Comment