೫೮. ರಾಮ-ಹನುಮರ ಭೇಟಿ
ಶಬರಿಯನ್ನು ಬೀಳ್ಕೊಟ್ಟು ರಾಮಲಕ್ಷ್ಮಣರು ಪಂಪಾ ಸರೋವರವನ್ನು ಸೇರಿದರು. ಪಂಪಾ ಸರೋವರದಲ್ಲಿದ್ದ ಕಮಲ, ಅದರಲ್ಲಿ ಆಡುತ್ತಿದ್ದ ಮೀನುಗಳನ್ನು ನೋಡಿ ಸೀತೆಯನ್ನು ನೆನಪಿಸಿಕೊಂಡು ರಾಮ ವಿಷಣ್ಣನಾಗಿ ಲಕ್ಷ್ಮಣನಿಗೆ, “ನೋಡು ಲಕ್ಷ್ಮಣ! ಈ ಜಾಗ ಎಷ್ಟು ಚೆನ್ನಾಗಿದೆ. ಮರಗಳು, ಅದರಲ್ಲಿನ ಹೂಗಳು, ಗಾಳಿಗೆ ಅಲ್ಲಾಡುತ್ತಿರುವ ಪುಷ್ಪಗುಚ್ಛಗಳನ್ನು ನೋಡುತ್ತಿದ್ದರೆ ವಾಯುದೇವ ಇದರೊಂದಿಗೆ ಆಟವಾಡುತ್ತಿದ್ದಾನೋ ಅನಿಸುತ್ತಿದೆ. ಮರಗಳಿಗೆ ಸುತ್ತಿಕೊಂಡಿರುವ ಬಳ್ಳಿಗಳನ್ನು ನೋಡು ಎಷ್ಟು ಸುಂದರವಾಗಿದೆ. ಇವೆಲ್ಲ ಸೀತೆ ನನ್ನ ಪಕ್ಕದಲ್ಲಿರದ ಜ್ಞಾಪಕವನ್ನು ಪುನಾ ಪುನಾ ತರಿಸುತ್ತಿದೆ. ಯಾರೂ ಕೇಳದೆಯೇ ಮೋಡಗಳು ಮಳೆ ಸುರಿಸುತ್ತಿವೆ. ಮರಗಳು ಹೂಗಳನ್ನು ಸ್ಫುರಿಸುತ್ತಿವೆ. ಇವು ಮರಗಳೋ ಅಥವಾ ಹೂಗಳನ್ನು ಸ್ಫುರಿಸುವ ಮೋಡಗಳೋ?
ಮತ್ತ ಕೋಕಿಲ ಸನ್ನಾದೈಃ ನರ್ತಯನ್ ಇವ ಪಾದವಾನ್
ಶೈಲ ಕಂದರ ನಿಷ್ಕಾ್ರಂತಃ ಪ್ರಗೀತ ಇವ ಚ ಅನಿಲಃ
ಬೀಸುತ್ತಿರುವ ಗಾಳಿ ವಿಚಿತ್ರವಾದ ಶಬ್ದ ಮಾಡುತ್ತಿದೆ. ಕೋಗಿಲೆಯ ಹಾಡು ಕೇಳಿಸುತ್ತಿದೆ. ವಾಯು ಹಾಡುತ್ತಿದ್ದಾನೆ, ಮರಗಿಡಗಳು ನಾಟ್ಯವಾಡುತ್ತಿವೆ, ಕೋಗಿಲೆ ಮರದ ಮೇಲೆ ಕೂತು ಪಕ್ಕವಾದ್ಯ ಮಾಡುತ್ತಿದೆ. ನಾನು ಯಾವುದಾದರೂ ನೃತ್ಯ ಕಾರ್ಯಕ್ರಮಕ್ಕೆ ಬಂದಿದ್ದೇನೆಯೇ? ಈ ಸಮಯದಲ್ಲಿ ಸೀತೆ ನನ್ನ ಜೊತೆ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು. ಆ ಬೆಟ್ಟದ ಮೇಲೆ ನೋಡು, ಗಂಡು ನವಿಲು ನೃತ್ಯ ಮಾಡುತ್ತಿದ್ದರೆ ಅದರ ಸುತ್ತ ಹೆಣ್ಣು ನವಿಲು ಸಂತೋಷವಾಗಿ ತಿರುಗುತ್ತಿದೆ. ಇವಕ್ಕೇನು? ಆಡುತ್ತವೆ! ಆ ಗಂಡು ನವಿಲಿನ ಹೆಂಡತಿಯನ್ನು ಯಾರೂ ಅಪಹರಿಸುವುದಿಲ್ಲವಲ್ಲ! ನನ್ನ ಮನಸ್ಸು ಸೀತೆಯ ಹತ್ತಿರವಿದೆ. ಅವಳ ಮನಸ್ಸು ನನ್ನ ಬಳಿಯಿದೆ. ನಮ್ಮಿಬ್ಬರದೂ ಒಂದೇ ಮನಸ್ಸು. ಆ ಮನಸ್ಸು ಆನಂದ ಪಡಬೇಕೆಂದರೆ ನಾವಿಬ್ಬರೂ ಒಟ್ಟಿಗೆ ಇರಬೇಕು. ಇದು ಚೈತ್ರ ಮಾಸ. ಸೀತೆಯೂ ಇಂತಹ ಪರಿಸರವನ್ನೇ ನೋಡುತ್ತಿರುತ್ತಾಳೆ. ಗಂಡಸಾದ ನನಗೇ ಇಷ್ಟು ನೋವಾಗಬೇಕಾದರೆ, ಇನ್ನು ಅವಳಿಗೆಷ್ಟು ನೋವಾಗುತ್ತಿರಬೇಕು? ಪೂರ್ವದಲ್ಲಿ ಚೈತ್ರಮಾಸದ ಗಾಳಿ ಸಂತೋಷ ಕೊಡುತ್ತಿತ್ತು. ಈಗ ಅದೇ ಗಾಳಿ ದುಃಖ ಕೊಡುತ್ತಿದೆ. ಈ ತಾವರೆಗಳನ್ನು ತಾಗಿದ ಗಾಳಿ ನನ್ನ ಮುಖಕ್ಕೆ ತಾಗಿದರೆ, ಸೀತೆಯ ಮುಖ ನನ್ನ ಮುಖದ ಬಳಿ ಬಂದಾಗ ಅವಳ ನಿಶ್ವಾಸ ವಾಯು ತಾಗಿದಂತಾಗುತ್ತದೆ. ಅಲ್ಲಿ ನೋಡು, ಜೇನುಗಳು ಹೂವಿನ ಮಕರಂದವನ್ನು ಹೀರಿ ಹೋಗುತ್ತಿವೆ. ಇದನ್ನು ನೋಡಿದರೆ ಎಷ್ಟು ಸಂತೋಷವಾಗಬೇಕಾಗಿತ್ತು! ಇಂತಹ ಸಮಯದಲ್ಲಿ ಸೀತೆ ನನ್ನ ಬಳಿಯಿದ್ದು ಹಾಸ್ಯ ಮಾಡುತ್ತಾ, ಹಿತವಾದ ಮಾತಾಡುತ್ತಿದ್ದರೆ… ಆ ಬಾಯಿಯಿಂದ ಬರುತ್ತಿದ್ದ ಮಧುರವಾದ ಮಾತುಗಳನ್ನು ನೆನಪಿಸಿಕೊಂಡರೇ ಆನಂದವಾಗುತ್ತಿದೆ. ಸೀತೆಯನ್ನು ಬಿಟ್ಟು ನಾನು ಇರಲಾರೆ. ನನ್ನ ಪ್ರಾಣ ಹೆಚ್ಚು ಕಾಲ ಇರುವುದಿಲ್ಲ. ನೀನು ಅಯೋಧ್ಯೆಗೆ ಹೋಗಿ ಭರತನಿಗೆ ಪಟ್ಟಾಭಿಷೇಕ ಮಾಡಿಕೊಳ್ಳಲು ಹೇಳು” ಎಂದ.
ಲಕ್ಷ್ಮಣ:
“ಉತ್ಸಾಹೋ ಬಲವಾನ್ ಆರ್ಯ ನಾಸ್ತಿ ಉತ್ಸಹಾತ್ ಪರಂ ಬಲಂ
ಸಃ ಉತ್ಸಾಹಸ್ಯ ಹಿ ಲೋಕೇಷು ನ ಕಿಂಚಿತ್ ಅಪಿ ದುರ್ಲಭಂ
ಅಣ್ಣ! ಸ್ನೇಹ, ಪ್ರೀತಿಯಿರಬೇಕು. ಆದರೆ ಅದು ಇಷ್ಟು ಅತಿರೇಕಕ್ಕೆ ಹೋದರೆ ಸಹಿಸುವುದು ಕಷ್ಟ! ನಿನಗೆ ಇಷ್ಟು ಕಷ್ಟ ಕೊಟ್ಟಿರುವ ರಾವಣ ಸ್ವರ್ಗಕ್ಕೇ ಹೋಗಲಿ, ಪಾತಾಳಕ್ಕೇ ಹೋಗಲಿ ಅಥವಾ ಅವನ ತಾಯಿಯ ಹೊಟ್ಟೆಯ ಒಳಕ್ಕೇ ಹೋಗಲಿ, ಅವನನ್ನು ಕೊಂದೇ ತೀರುತ್ತೇನೆ. ನೀನು ಮಾತ್ರ ನಿನ್ನ ದುಃಖವನ್ನು ಬಿಡು. ದುಃಖ ಉತ್ಸಾಹವನ್ನು ನಾಶಮಾಡುತ್ತದೆ. ಉತ್ಸಾಹವಿದ್ದರೆ ಪ್ರಪಂಚದಲ್ಲಿ ಸಾಧಿಸಲಾಗದ್ದು ಏನೂ ಇಲ್ಲ. ಅದಿಲ್ಲದಿದ್ದರೆ ತನ್ನಲ್ಲಿ ಎಷ್ಟು ಶಕ್ತಿಯಿದ್ದರೂ ಭಯದಿಂದ ಏನೂ ಮಾಡಲಾಗುವುದಿಲ್ಲ. ನೀನು ಮತ್ತೆ ಉತ್ಸುಕನಾಗು."
ಲಕ್ಷ್ಮಣನ ಮಾತು ಕೇಳಿ ರಾಮ ಸ್ವಲ್ಪ ಶಾಂತಿಸಿದ. ನಂತರ ಅವರಿಬ್ಬರೂ ಋಷ್ಯಮೂಕ ಪರ್ವತದ ಕಡೆ ನಡೆದರು. ಪರ್ವತದ ಕಡೆ ಬರುತ್ತಿರುವ ಇವರನ್ನು ನೋಡಿದ ಸುಗ್ರೀವನಿಗೆ ಭಯವಾಯಿತು. ನಾರು ಮಡಿಯುಟ್ಟು, ಜಟಾಧಾರಿಯಾಗಿ, ಬಿಲ್ಲು ಬಾಣಗಳನ್ನು ಹಿಡಿದಿದ್ದ ರಾಮಲಕ್ಷ್ಮಣರನ್ನು ನೋಡಿ, ವಾಲಿಯೇ ಅವರನ್ನು ಕಳಿಸಿರಬೇಕೆಂದುಕೊಂಡು ತನ್ನ ಮಂತ್ರಿಗಳ ಬಳಿ ಬಂದು, "ನೋಡಿ ಅವರಾರೋ ನನ್ನನ್ನೇ ಕೊಳ್ಳಲು ಬರುವಂತಿದೆ. ಓಡಿ ಹೋಗೋಣ" ಎಂದು ಹೇಳಿ ಅವರ ಜೊತೆ ಒಂದು ಶಿಖರದಿಂದ ಇನ್ನೊಂದು ಶಿಖರಕ್ಕೆ ಜಿಗಿದ. ಅವರು ಬರುತ್ತಿದ್ದಾರೆಂಬ ಭಯದಿಂದ ಓಡುತ್ತಿದ್ದ. ಅವರ ಓಟದಿಂದ ಮರಗಳು ಉರುಳಿದವು. ಆನೆ, ಹುಲಿಗಳು ಓಡಿಹೋದವು. ಸ್ವಲ್ಪ ಹೊತ್ತಿನ ನಂತರ ಒಂದು ಕಡೆ ಕುಳಿತುಕೊಂಡರು. ಆಗ ಸುಗ್ರೀವನ ಮಂತ್ರಿಗಳಲ್ಲಿ ವಾಗ್ಮಿಯಾದ ಹನುಮಂತ,
“ಸಂಭ್ರಮಃ ತ್ಯಜತಾಂ ಏಷ ಸರ್ವೈಃ ವಾಲಿ ಕೃತೇ ಮಹಾನ್
ಮಲಯೋಯಂ ಗಿರಿವರಂ ಭಯಂ ಸ ಇಹ ಅಸ್ತಿ ವಾಲಿನಃ
ಸುಗ್ರೀವ ನಾವು ಏಕೆ ಓಡಬೇಕು? ಇಲ್ಲಿಗೆ ವಾಲಿ ಬರಲು ಸಾಧ್ಯವಿಲ್ಲ. ಇಲ್ಲಿಗೆ ಬಂದರೆ ಅವನಿಗೆ ಮರಣ ಎಂಬ ಶಾಪವಿದೆ. ನಿನಗೆ ಕಾಣಿಸಿದವನು ವಾಲಿ ಅಲ್ಲ. ನೀನು ಮಹಾರಾಜನಾಗಿರಬೇಕಾದವನು. ನಿನಗೇಕೆ ಭಯ? ಒಬ್ಬ ಮನುಷ್ಯನ ನಡೆ, ನುಡಿಯಿಂದ ಅವನು ಎಂಥವನು ಎಂಬುದನ್ನು ತಿಳಿದು, ಅದರಂತೆ ತಾನೂ ನಡೆದು ತನ್ನ ಪ್ರಜೆಗಳನ್ನು ಕಾಪಾಡಬೇಕಾದವನು ರಾಜ. ಆದರೆ ನೀನು ನೋಡಿದವರಿಗೆಲ್ಲ ಹೆದರಿಕೊಂಡರೆ ನಾಳೆ ನೀನು ರಾಜ ಪದವಿಯನ್ನು ಹೇಗೆ ನಿರ್ವಹಿಸುತ್ತೀಯ?" ಎಂದು ಕೇಳಿದ.
ಸುಗ್ರೀವ, "ಹನುಮ, ರಾಜರು ರಹಸ್ಯವಾಗಿ ವರ್ತಿಸುತ್ತಾರೆ. ವಾಲಿ ಇಲ್ಲಿಗೆ ಬರಲಾಗದ ಕಾರಣ, ಅವನು ತನ್ನ ಸಮಾನರಾದ ಇಬ್ಬರು ಕ್ಷತ್ರಿಯರನ್ನು ಮುನಿ ಕುಮಾರರ ವೇಷದಲ್ಲಿ ಕಳಿಸಿರಬಹುದು. ಆದ್ದರಿಂದಲೇ ಅವರು ನಿರ್ಭಯವಾಗಿ, ಬಿಲ್ಲು ಹಿಡಿದು ನಮ್ಮ ಕಡೆಗೇ ಬರುತ್ತಿದ್ದಾರೆ. ನೀನು ಒಂದು ಕೆಲಸ ಮಾಡು. ವೇಷಬದಲಿಸಿ ಅವರ ಹತ್ತಿರ ಹೋಗಿ ಮಾತಾಡು. ನನ್ನ ಬಳಿ ವಿಶ್ವಾಸದಿಂದ ಬರುತ್ತಿದ್ದಾರಾ ಅಥವಾ ಶತೃತ್ವದಿಂದ ಬರುತ್ತಿದ್ದಾರಾ ಎಂಬುದನ್ನು ಕಂಡುಹಿಡಿ. ವಿಶ್ವಾಸದಿಂದಾದರೆ ಸರಿ. ಇಲ್ಲದಿದ್ದರೆ ಬೇರೆ ದಾರಿ ನೋಡೋಣ. ನೀನು ಬೇಗ ಹೋಗು" ಎಂದ.
ಕಪಿ ರೂಪಂ ಪರಿತ್ಯಜ್ಯ ಹನುಮಾನ್ ಮಾರುತಾತ್ಮಜಃ
ಭಿಕ್ಷು ರೂಪಂ ತತೋ ಭಜೇ ಶಠಬುದ್ಧಿತಯಾ ಕಪಿಃ
ಹನುಮಂತ ತನ್ನ ಕಪಿ ರೂಪವನ್ನು ಬಿಟ್ಟು, ಸನ್ಯಾಸಿಯ ರೂಪವನ್ನು ಧರಿಸಿ ರಾಮನ ಬಳಿ ಹೋದ. ರಾಮನಿಗೆ ನಮಸ್ಕಾರ ಮಾಡಿ, "ನಿಮ್ಮನ್ನು ನೋಡಿದರೆ ಆಶ್ಚರ್ಯವಾಗುತ್ತಿದೆ. ನೀವು ರಾಜರ್ಷಿಗಳಂತೆ, ತಾಪಸಿಗಳಂತೆ ಕಾಣಿಸುತ್ತಿದ್ದೀರ. ನೀವು ನಡೆದು ಬರುತ್ತಿದ್ದರೆ ಮೃಗಗಳು ಓಡಿಹೋಗುತ್ತಿವೆ. ನಿಮ್ಮ ಕಾಂತಿಯಿಂದ ಇಲ್ಲಿನ ನದಿ ಶೋಭಿಸುತ್ತಿದೆ. ನಿಮ್ಮ ನಡೆ ಸಿಂಹದ ನಡೆಯಂತಿದೆ. ಪದ್ಮದಂತಹ ಕಣ್ಣುಗಳು. ವಿಶಾಲ ವಕ್ಷಸ್ಥಳ. ಜಟೆ ಕಟ್ಟಿಕೊಂಡು, ಬಿಲ್ಲು ಹಿಡಿದು ಎಂತಹ ಶತ್ರುವನ್ನಾದರೂ ಸಂಹರಿಸುವ ಶಕ್ತಿಯಿರುವವರಂತೆ ಕಾಣಿಸುತ್ತೀರ. ಮನುಷ್ಯರ ರೂಪದಲ್ಲಿರುವ ದೇವತೆಗಳಂತಿದ್ದೀರ. ಆದರೆ ಇವುಲ್ಲ ಒಂದಕ್ಕೊಂದು ಹೊಂದುತ್ತಿಲ್ಲ. ಸಮಸ್ತ ಪೃಥ್ವಿಯನ್ನೇ ರಕ್ಷಿಸುವ ಸಾಮರ್ಥ್ಯವಿರುವಂತಿರುವ ನೀವು ಇಲ್ಲೇಕೆ ನಡೆದು ಬರುತ್ತಿದ್ದೀರ? ನಿಮ್ಮ ಹತ್ತಿರವಿರುವ ಆಯುಧಗಳನ್ನು ನೋಡಿದರೆ ನಮಗೆ ಭಯವಾಗುತ್ತಿದೆ. ನಾನು ಸುಗ್ರೀವನ ಸಚಿವ. ಅಣ್ಣ ವಾಲಿಯಿಂದ ಹೊರಹಾಕಲ್ಪಟ್ಟಿರುವ ಸುಗ್ರೀವ, ರಾಜ್ಯವನ್ನು ಬಿಟ್ಟು ಋಷ್ಯಮೂಕ ಪರ್ವತದಲ್ಲಿ ನಾಲ್ಕು ಜನ ಮಂತ್ರಿಗಳ ಜೊತೆ ಇದ್ದಾನೆ. ಅವನೂ ಧರ್ಮಾತ್ಮ. ನಿಮ್ಮ ಜೊತೆ ಸ್ನೇಹ ಬಯಸುತ್ತಾನೆ. ಇಲ್ಲಿಯವರೆಗೂ ನಾನೇ ಮಾತಾಡುತ್ತಿದ್ದೇನೆ. ನೀವು ಮಾತಾಡಿದರೆ ಕೇಳಬೇಕೆಂದಿದೆ" ಎಂದ.
ಹನುಮನಿಗೆ ರಾಮ ವಿಷ್ಣುವಿನ ರೂಪದಲ್ಲಿ ಕಾಣಿಸಿದ್ದರಿಂದ ರಾಮನನ್ನು ನೋಡಿದ ತಕ್ಷಣ ಹನುಮ ಸನ್ಯಾಸಿಯ ವೇಷವನ್ನು ಕಳಚಿ ತನ್ನ ನಿಜ ರೂಪವನ್ನು ತೋರಿಸಿದ. ಹನುಮನ ಮಾತು ಕೇಳಿ ರಾಮ ಲಕ್ಷ್ಮಣನಿಗೆ, "ನೋಡು ಲಕ್ಷ್ಮಣ, ಹನುಮನ ಮಾತುಗಳು! ಇಂತಹವನು ಮಂತ್ರಿಯಾದರೆ ಕೆಲಸಗಳು ಆಗದಿರುವ ಪ್ರಮೇಯವೇ ಇಲ್ಲ. ಇಂತಹವರು ಎದುರು ಬಂದರೆ ಕೆತ್ತಿ ಹಿಡಿದು ಪ್ರಾಣ ತೆಗೆಯಬೇಕೆಂದುಕೊಳ್ಳುತ್ತಿರುವ ವ್ಯಕ್ತಿ ಕೂಡ ಕತ್ತಿಯನ್ನು ಕೆಳಗೆ ಬಿಟ್ಟುಬಿಡುತ್ತಾನೆ. ಇವನನ್ನು ಮಂತ್ರಿಯಾಗಿ ಪಡೆದ ರಾಜನೇ ಧನ್ಯ! ಇವನ ಮಾತು ಕೇಳಿದರೆ ಇವನಿಗೆ ಋಗ್, ಯಜು್, ಸಾಮ ವೇದಗಳು ತಿಳಿದಿರುವಂತಿದೆ. ವ್ಯಾಕರಣ, ಉಪನಿಷತ್ತುಗಳು ಪೂರ್ತಿಯಾಗಿ ಅರ್ಥವಾಗಿದಂತಿದೆ. ಇವನು ಮಾತಾಡುವಾಗ ಹುಬ್ಬು, ಹಣೆಗಳು ಕದಲುತ್ತಿಲ್ಲ. ಮಾತು ಜೋರಾಗಿಯೂ ಇಲ್ಲ, ಮೆದುವಾಗಿಯೂ ಇಲ್ಲ. ಆರಂಭದಿಂದ ಅಂತ್ಯದವರೆಗೆ ಒಂದೇ ಸ್ವರದಲ್ಲಿ ಮಾತಾಡಿ ಮುಗಿಸುತ್ತಿದ್ದಾನೆ. ಕೈ, ಕಾಲುಗಳು ಅಲ್ಲಾಡುತ್ತಿಲ್ಲ. ಯಾವ ಪದವನ್ನು ಹೇಗೆ ಉಚ್ಛರಿಸಬೇಕೋ ಆ ಪದವನ್ನು ಹಾಗೇ ಉಚ್ಛರಿಸುತ್ತಿದ್ದಾನೆ. ಇಂತಹವನು ಸುಗ್ರೀವನ ಮಂತ್ರಿಯಾಗಿ ನಮ್ಮ ಸ್ನೇಹ ಕೇಳುತ್ತಿದ್ದಾನೆಂದರೆ ನಮ್ಮ ಕೆಲಸ ಆದಂತೆಯೇ! ನಾವು ಯಾರೋ, ನಾವು ಅರಣ್ಯಕ್ಕೆ ಏಕೆ ಬಂದೆವೋ ಹೇಳು ಲಕ್ಷ್ಮಣ" ಎಂದ.
ಲಕ್ಷ್ಮಣ: "ಹನುಮ! ಇವನು ದಶರಥನ ಮಗನಾದ ರಾಮ. ದಶರಥ ಧರ್ಮದಿಂದ ರಾಜ್ಯ ಪಾಲನೆ ಮಾಡಿದ. ಅವನಿದ್ದ ಕಾಲ ಅವನನ್ನು ಯಾರೂ ದ್ವೇಷಿಸಲಿಲ್ಲ, ಅವನೂ ಯಾರನ್ನೂ ದ್ವೇಷಸಲಿಲ್ಲ. ಚತುರ್ಮುಖ ಬ್ರಹ್ಮನಂತೆ ದಶರಥನೂ ಎಲ್ಲರಿಂದಲೂ ಗೌರವಿಸಲ್ಪಡುತ್ತಿದ್ದ. ಅಂತಹ ತಂದೆಯ ಮಾತಿನಂತೆ ರಾಮ ರಾಡಿಗೆ ಬಂದಿದ್ದಾನೆ. ಇಲ್ಲಿ ಯಾರೋ ರಾಕ್ಷಸ ರಾಮನ ಪತ್ನಿ ಸೀತೆಯನ್ನು ಅಪಹರಿಸಿಕೊಂಡು ಹೋಗಿದ್ದಾನೆ. ಅವಳನ್ನು ಹುಡುಕುತ್ತಿದ್ದಾಗ ನಮಗೆ ಕಬಂಧ ಎನ್ನುವ ರಾಕ್ಷಸ ಕಾಣಿಸಿದ. ಅವನನ್ನು ಕೊಂದು ದಹಿಸಿದ ಮೇಲೆ ಅವನು ಧನು ಎಂಬ ವೇಷ ಧರಿಸಿ ಬಂದು ನಮ್ಮನ್ನು ಸುಗ್ರೀವನ ಸ್ನೇಹ ಮಾಡು ಎಂದ. ಆದ್ದರಿಂದ ನಾವು ಇಲ್ಲಿಗೆ ಬಂದಿದ್ದೇವೆ. ನಾನು ಲಕ್ಷ್ಮಣ. ರಾಮನ ತಮ್ಮ. ಹಾಗೆಂದು ಲೋಕ ಭಾವಿಸುತ್ತದೆ. ಆದರೆ ನಾನು ಮಾತ್ರ ರಾಮನ ದಾಸ ಎಂದೇ ಭಾವಿಸುತ್ತೇನೆ. ಲೋಕದಲ್ಲಿ ಕಷ್ಟದಲ್ಲಿದ್ದವರೆಲ್ಲರೂ ರಾಮನಿಗೆ ಶರಣರಾದರು. ಇಂದು ರಾಮ ಸುಗ್ರೀವನಿಗೆ ಶರಣಾಗುತ್ತಿದ್ದಾನೆ. ನಾವು ಸುಗ್ರೀವನ ಸ್ನೇಹ ಮಾಡಬೇಕೆಂದಿದ್ದೇವೆ."
ಹನುಮಂತ,
“ಈದೃಶಾ ಬುದ್ಧಿ ಸಂಪನ್ನಾ ಜಿತಕ್ರೋಧಾ ಜಿತೇಂದ್ರಿಯಾಃ
ದ್ರಷ್ಟವ್ಯಾ ವಾನರೇಂದ್ರಣ ದಿಷ್ಟ್ಯಾ ದರ್ಶನಂ ಆಗತಾಃ
ಜಿತೇಂದ್ರಿಯರಾದ, ಧರ್ಮಾತ್ಮರಾದ ರಾಮ ಲಕ್ಷ್ಮಣರನ್ನು ನೋಡಿ ಸುಗ್ರೀವನೂ ಸಂತೋಷಿಸುತ್ತಾನೆ. ನನ್ನ ಜೊತೆ ಬನ್ನಿ" ಎಂದು ಹೇಳಿ ಅವರನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಋಷ್ಯಮೂಕವನ್ನು ಹತ್ತಿದ.
Comments
Post a Comment