೯. ಕುಮಾರ ಸಂಭವ
"ಗಂಗೆಗೆ ತ್ರಿಪಥೆ ಎಂಬ ಹೆಸರು ಹೇಗೆ ಬಂದಿತು?", ರಾಮ ಮಿಥಿಲಾ ನಗರಿಯ ಪ್ರಯಾಣದಲ್ಲಿ ವಿಶ್ವಾಮಿತ್ರರನ್ನು ಕೇಳಿದ.
ವಿಶ್ವಾಮಿತ್ರರು: "ಪೂರ್ವದಲ್ಲಿ ಹಿಮವಂತನೆಂಬ ಪರ್ವತರಾಜನಿದ್ದನು. ಅವನ ಪತ್ನಿ ಮನೋರಮೆ. ಅವರಿಗೆ ಇಬ್ಬರು ಪುತ್ರಿಯರು. ಹಿರಿಯಳು ಗಂಗಾ, ಎರಡನೆಯವಳು ಉಮಾ. ಸ್ವೇಚ್ಛವಾಗಿ ಪ್ರವಹಿಸುವವಳಾಗಿದ್ದರಿಂದ ಗಂಗೆಯನ್ನು ದೇವಲೋಕಕ್ಕೆ ಕಳುಹಿಸಬೇಕೆಂದು ದೇವತೆಗಳು ಹಿಮವಂತನನ್ನು ಕೇಳಿಕೊಂಡರು. ದೇವಕಾರ್ಯವಾದ್ದರಿಂದ ಹಿಮವಂತ ಒಪ್ಪಿಕೊಂಡ. ಗಂಗೆ ದೇವನದಿಯಾಗಿ ಸ್ವರ್ಗದಲ್ಲಿ ಪ್ರವಹಿಸಿದಳು. ಎರಡನೇಯವಳಾದ ಉಮೆ ತನ್ನ ತಪಸ್ಸಿನಿಂದ ಕಾಮಾರಿ ಶಿವನನ್ನು ವರಿಸಿ ಹೇಮಾವತಿಯಾದಳು. ಪರಮ ಪಾವನೆಯಾದ ಗಂಗೆ ಒಂದು ಬಾರಿ ಭೂಲೋಕಕ್ಕೆ ಬಂದು ಅಲ್ಲಿಂದ ಪಾತಾಳ ಲೋಕಕ್ಕೆ ಹೋದಳು. ಹೀಗೆ ಮೂರು ಲೋಕದಲ್ಲಿಯೂ ಪ್ರವಹಿಸುವವಳಾದ್ದರಿಂದ ಗಂಗೆಗೆ ತ್ರಿಪಥೆ ಎಂದು ಹೆಸರು."
"ಗುರುಗಳೇ, ದಯವಿಟ್ಟು ನದಿಗಳಲ್ಲೆಲ್ಲಾ ಪರಮ ಪಾವನಿಯಾದ, ಪಾಪನಾಶಿನಿಯಾದ, ಗಂಗೆಯ ಕುರಿತು ಇನ್ನೂ ವಿಸ್ತಾರವಾಗಿ ವಿವರಿಸಿ."
"ಪಾರ್ವತಿ ಪರಮೇಶ್ವರರು ೧೦೦ ವರ್ಷಗಳ ಕಾಲ ಕೈಲಾಸದಲ್ಲಿ ಸಂಭೋಗಿಸಿದರು. ಈ ವಿಷಯ ಕೇಳಿದ ದೇವತೆಗಳು ಆಶ್ಚರ್ಯಪಟ್ಟು, ಅಸಾಮಾನ್ಯವಾದ ಪಾರ್ವತಿ-ಪರಮೇಶ್ವರರ ತೇಜಸ್ಸಿನಿಂದ ಹುಟ್ಟುವ ಬೀಜವನ್ನು ತಾವು ತಟ್ಟುಕೊಳ್ಳಲಾಗದೆಂದು ಶಂಕರನನ್ನು ಕುರಿತು ಪ್ರಾರ್ಥಿಸಿದರು. ಶಂಕರನು ಹೊರಬಂದಾಗ ಅವರು, 'ಸ್ವಾಮಿ! ತಮ್ಮ ತೇಜಸ್ಸಿನಿಂದ ಹುಟ್ಟುವ ಪ್ರಾಣಿಯನ್ನು ತಟ್ಟುಕೊಳ್ಳುವುದು ನಮ್ಮಿಂದ ಸಾಧ್ಯವಿಲ್ಲ. ಆದ್ದರಿಂದ ನೀವು ತಮ್ಮ ತೇಜಸ್ಸನ್ನು ನಿಮ್ಮಲ್ಲೇ ಹಿಡಿದಿಟ್ಟುಕೊಂಡು ಪಾರ್ವತಿ ದೇವಿಯ ಜೊತೆ ತಪಸ್ಸನ್ನಾಚರಿಸಿ.' ಎಂದು ಪ್ರಾರ್ಥಿಸಿದರು. ಶಿವನು ಒಪ್ಪಿಕೊಂಡ. ಆದರೆ ತನ್ನ ರೇತಸ್ಥಾನದಿಂದ ತೇಜಸ್ಸು ಕದಿಲಿದೆ. ಅದನ್ನು ಯಾರು ಭರಿಸುತ್ತಾರೆ, ಅದನ್ನೆಲ್ಲಿ ಬಿಡಬೇಕು ಎಂದು ದೇವತೆಗಳನ್ನು ಕೇಳಿದ. ಆಗ ದೇವತೆಗಳು, ‘ಯತ್ ತೇಜಃ ಕ್ಷುಬ್ದಿತಂ ಹಿ ಅದ್ಯ ತದ್ ಧರಾ ಧಾರಯಿಷ್ಯತಿ, ನಿಮ್ಮ ತೇಜಸ್ಸನು ಭೂಮಿ ಭರಿಸುತ್ತಾಳೆ.’ ಎಂದರು. ಅಂತೆಯೇ, ಆ ತೇಜಸ್ಸನ್ನು ಭೂಮಿ ಭರಿಸಿದಳು. ಆಗ ಪಾರ್ವತಿ ದೇವಿ, ‘ನೀವು ನನಗೆ ಮಗುವಾಗದಂತೆ ಮಾಡಿದ್ದೀರ. ಆದ್ದರಿಂದ,
ಅವತ್ಯಂ ಸ್ವೇಷು ದಾರೇಷು ನ ಉತ್ಪದಯತುಂ ಅರ್ಹಥ
ಅದ್ಯ ಪ್ರಭೃತಿ ಯುಷ್ಮಾಕಂ ಅಪ್ರಜಾಃ ಸಂತು ಪತ್ನಯಃ
ಏವಂ ಉಕ್ತ್ವಾ ಸುರಾನ್ ಸರ್ವಾನ್ ಶಶಾಪ ಪೃಥಿವೀಂ ಅಪಿ
ಅವೇನ ನ ಏಕ ರೂಪಾ ತ್ವಂ ಬಹು ಭಾರ್ಯ ಭವಿಷ್ಯಸಿ
ನ ಚ ಪುತ್ರ ಕೃತಾಂ ಪ್ರೀತಿಂ ಮತ್ ಕ್ರೋಧ ಕಲುಷೀಕೃತಾ
ಪ್ರಾಪ್ಸ್ಯಸಿ ತ್ವಂ ಸುಧರ್ಮೇಧೇ ಮಮ ಪುತ್ರಂ ಅನಿಚ್ಛತಿ
ನಿಮ್ಮ ಪತ್ನಿಯರಿಂದ ನಿಮಗೆ ಸಂತಾನವಾಗದಿರಲಿ. ಶಿವನ ತೇಜಸ್ಸನ್ನು ಭರಿಸಿದ ಭೂಮಿ ಅನೇಕ ರೂಪಗಳನ್ನು ಹೊಂದುತ್ತಾಳೆ. ಒಂದೇ ಸಮಯದಲ್ಲಿ ಅವಳಿಗೆ ಅನೇಕ ಪತಿಗಳಿರುತ್ತಾರೆ. ಅವಳ ಪುತ್ರರ ಕಾರಣದಿಂದ ಭೂಮಿ ನಾಚಿಕೆಯಿಂದ ತಲೆ ತಗ್ಗಿಸಿಕೊಳ್ಳುವಂತಾಗಲಿ’ ಎಂದು ಶಪಿಸಿದಳು. ವ್ಯಾಪಿಸಿದ ಆ ಶಂಕರನ ತೇಜಸ್ಸನ್ನು ಭೂಮಿಯು ಕೂಡ ತಡೆದುಕೊಳ್ಳಲಾಗಲಿಲ್ಲ. ಆಗ ದೇವತಗಳು ಅಗ್ನಿ-ವಾಯುಗಳನ್ನು ಪ್ರಾರ್ಥಿಸಿದರು. ಅಗ್ನಿ ಆ ತೇಜಸ್ಸನ್ನು ಹಿಡಿದಿಟ್ಟುಕೊಂಡ. ಶಂಕರ ಪಾರ್ವತಿಯರು ತಪಸ್ಸಿಗಾಗಿ ಪಶ್ಚಿಮ ದಿಕ್ಕಿಗೆ ಹೋಗಿಬಿಟ್ಟರು. ಅದೇ ಸಮಯದಲ್ಲಿ ತಾರಕಾಸುರನೆಂಬ ರಾಕ್ಷಸ ಶಿವ-ಪಾರ್ವತಿಯರ ಮಗುವಿನಿಂದ ಮಾತ್ರ ತನಗೆ ಸಾವು ಬರಬೇಕೆಂದು ವರ ಪಡೆದ. ಆತಂಕಗೊಂಡ ದೇವತೆಗಳು ಬ್ರಹ್ಮನ ಮೊರೆ ಹೋದರು. ಬ್ರಹ್ಮ, ‘ಹಿಮವಂತ-ಮನೋರಮೆಯರ ಕುಮಾರಿಯರಾದ ಗಂಗಾ-ಪಾರ್ವತಿಯರ ಮಧ್ಯೆ ಭೇದವಿಲ್ಲ. ಆದ್ದರಿಂದ ತೇಜಸ್ಸನ್ನು ಗಂಗೆಯಲ್ಲಿ ಬಿಡಿ’ ಎಂದು ಸಲಹೆ ನೀಡಿದರು. ದೇವತಾ ಕಾರ್ಯವಾದ್ದರಿಂದ ಗಂಗೆ ಒಪ್ಪಿಕೊಂಡು, ಸ್ತ್ರೀ ರೂಪವನ್ನು ತಾಳಿ ಆ ತೇಜಸ್ಸನ್ನು ಧರಿಸಿದಳು. ಆದರೆ ಶಿವನ ತೇಜಸ್ಸನ್ನು ಧರಿಸಲು ಗಂಗೆಗೆ ಕೂಡ ಸಾಧ್ಯವಾಗಲಿಲ್ಲ. ನಂತರ ಅಗ್ನಿಯ ಸಲಹೆಯಂತೆ ಅದನ್ನು ಕೈಲಾಸ ಶಿಖರದ ಪಕ್ಕದ ಭೂಮಿಯ ಮೇಲೆ ಬಿಟ್ಟಳು. ಭೂಮಿಯ ಮೇಲೆ ಬಿದ್ದ ಆ ತೇಜಸ್ಸಿನಿಂದ ಕಾಂತಿಯುಕ್ತವಾದ ಬೆಳ್ಳಿ, ಬಂಗಾರಗಳು ಹುಟ್ಟಿದವು. ಆ ತೇಜಸ್ಸಿನಿಂದಲೇ ತಗರ, ಸೀಸಗಳು ಹುಟ್ಟಿದವು. ಅದರ ಕ್ಷಾರದಿಂದ ತಾಮ್ರ, ಕಬ್ಬಿಣಗಳು ಹುಟ್ಟಿದವು. ಮಿಕ್ಕ ಪದಾರ್ಥದಿಂದ ಉಳಿದ ಧಾತುಗಳು ಘನಗಳಾಗಿ ಹುಟ್ಟಿದವು. ಬಂಗಾರದ ಪೊದೆಗಳಂತೆ ದಂಟಿನ ಪೊದೆಗಳು ಏರ್ಪಟ್ಟವು. ಅಲ್ಲಿಯೇ ಇದ್ದ ಒಂದು ಸಣ್ಣ ಕೊಳದಿಂದ ಮಗುವಿನ ಅಳು ಕೇಳಿಬಂದಿತು. ಆ ಮಗುವಿಗೆ ಯಾರು ಹಾಲುಣಿಸುತ್ತಾರೆಂದು ದೇವತೆಗಳು ಯೋಚಿಸುತ್ತಿರುವಾಗ ಪಾರ್ವತಿಯ ಅಂಶವಾದ ಕೃತ್ತಿಕೆಯರು ಆ ಮಗುವನ್ನು ಕಾರ್ತಿಕೇಯ ಎಂದು ಕರೆದರೆ ತಾವು ಮಗುವಿಗೆ ಹಾಲುಣಿಸುತ್ತೇವೆ ಎಂದರು. ದೇವತೆಗಳು ಒಪ್ಪಿಕೊಂಡಾಗ ಅವರು ಸಂತೋಷವಾಗಿ ಹಾಲುಣಿಸಿದರು. ಅಂತೆಯೇ ಆ ಮಗು ಕಾರ್ತಿಕೇಯನಾದ.
ತತಃ ತು ದೇವತಾಃ ಸರ್ವಾಃ ಕಾರ್ತಿಕೇಯಂ ಇತಿ ಬ್ರುವನ್
ಪುತ್ರಃ ತ್ರೈಲೋಕ್ಯ ವಿಖ್ಯಾತೋ ಭವಿಷ್ಯತಿ ನ ಸಂಶಯಃ
ಮಗು ೬ ಮುಖಗಳನ್ನು ಹೊಂದಿ, ಏಕ ಕಾಲದಲ್ಲಿ ೬ ಕೃತ್ತಿಕೆಯರ ಸ್ತನ್ಯಪಾನ ಮಾಡಿದ್ದರಿಂದ ಅವನಿಗೆ ಷಡಾನನ, ಷಣ್ಮುಖ ಎಂಬ ಹೆಸರುಗಳು ಬಂದವು. ಹಾಗೆಯೇ ಅಗ್ನಿಯಿಂದ ಹೊರಗೆ ಬಂದ ಶಿವನ ತೇಜಸ್ಸಾದ್ದರಿಂದ ಪಾವಕಿ, ಅಗ್ನಿಸಂಭವ, ಪರಮಶಿವನ ಕುಮಾರನಾದ್ದರಿಂದ ಕುಮಾರಸ್ವಾಮಿ, ಶಿವನ ವೀರ್ಯದ ಸ್ಖಲನದಿಂದ ಹುಟ್ಟಿದವನಾದ್ದರಿಂದ ಸ್ಕಂದ, ತಾಯಿ ಪಾರ್ವತಿದೇವಿಯಂತೆ ರೂಪವಂತನಾದ್ದರಿಂದ ಮುರುಗನ್, ಪರಶಿವನ ಪ್ರಣವಾರ್ಥವನ್ನು ವಿವರಿಸಿದ್ದರಿಂದ ಸ್ವಾಮಿಮಲೈ ಎಂದೂ ಅವನನ್ನು ಕರೆಯುತ್ತಾರೆ.”
Comments
Post a Comment