೨. ಕಾವ್ಯಕರ್ತನ ವಿಚಾರ


ವಾಲ್ಮೀಕಿ ಮಹರ್ಷಿಯ ಬಗ್ಗೆ ಸ್ಕಾಂದ ಪುರಾಣದಲ್ಲಿ ಸನತ್ಕುಮಾರರು ವ್ಯಾಸ ಮಹರ್ಷಿಗೆ ಹೀಗೆ ವಿವರಿಸಿದ್ದಾರೆ.
ಸುಮತಿ-ಕೌಶಿಕಿ ಎಂಬ ಬ್ರಾಹ್ಮಣ ದಂಪತಿಯ ಪುತ್ರ ಅಗ್ನಿಶರ್ಮ. ಅಗ್ನಿಶರ್ಮನಿಗೆ ವಿದ್ಯೆಯಿಲ್ಲ. ವೇದ ಮುಂತಾದುವುಗಳನ್ನು ಕಲಿತವನಲ್ಲ. ರಾಜ್ಯದಲ್ಲಿ ಕ್ಷಾಮ ಬಂದು ದಾನ ಧರ್ಮಗಳನ್ನು ಮಾಡುವವರು ಯಾರೂ ಇಲ್ಲದೆ, ಅಗ್ನಿಶರ್ಮ ತನ್ನ ಪತ್ನಿ, ಮಕ್ಕಳು ಮತ್ತು ತಂದೆ-ತಾಯಿಯರೊಡನೆ ಅರಣ್ಯಕ್ಕೆ ಹೋಗುತ್ತಾನೆ. ಅಲ್ಲಿ ಗೆಡ್ದೆ-ಗೆಣೆಸು, ಜೇನು ಮುಂತಾದ ಕಾಡಿನಲ್ಲಿ ಸಿಗುವ ಪದಾರ್ಥಗಳಿಂದ ಹೊಟ್ಟೆ ತುಂಬಿಸಿಕೊಂಡು ಜೀವನ ಸಾಗಿಸುತ್ತಾನೆ. ವಿದ್ಯೆಯಿಲ್ಲದ ಕಾರಣದಿಂದ ಅರಣ್ಯದಲ್ಲಿ ಕಳ್ಳಕಾಕರ ಸಂಗಮಾಡಿ, ದಾರಿಹೋಕರನ್ನು ದರೋಡೆ ಮಾಡಲಾರಂಭಿಸುತ್ತಾನೆ. ಹೀಗೆ ಒಂದು ಬಾರಿ ಅರಣ್ಯ ಮಾರ್ಗವಾಗಿ ಹೋಗುತ್ತಿದ್ದ ಮಹರ್ಷಿಗಳನ್ನು ದರೋಡೆಮಾಡಲು ಯತ್ನಿಸಿದಾಗ, ಅವರಲ್ಲಿ ಒಬ್ಬರಾದ ಅತ್ರಿ ಮಹಾಮುನಿಗಳು ಅಗ್ನಿಶರ್ಮನನ್ನು " ದರೋಡೆಯನ್ನು ಯಾಕಾಗಿ ಮಾಡುತ್ತಿದ್ದೀಯ?" ಎಂದು ಪ್ರಶ್ನಿಸುತ್ತಾರೆ. ಆಗ ಅಗ್ನಿಶರ್ಮನು ತನ್ನ ಕುಟುಂಬವನ್ನು ಪೋಷಿಸಲು ದರೋಡೆ ಮಾಡುತ್ತಿರುವುದಾಗಿ ಹೇಳುತ್ತಾನೆ. ಅತ್ರಿ ಮಹಾಮುನಿಗಳು "ಹಾಗಾದರೆ, ನೀನು ಈವರೆಗೆ ಮಾಡಿದ ಕಳ್ಳತನದಿಂದ ಪ್ರಾಪ್ತವಾದ ಪಾಪಗಳನ್ನು ನಿನ್ನ ಕುಟುಂಬಸಭ್ಯರಲ್ಲಿ ಯಾರಾದರು ಹಂಚಿಕೊಳ್ಳುತ್ತಾರೆಯೇ ಕೇಳಿ ಬಾ" ಎಂದು ಕಳಿಸುತ್ತಾರೆ.

ಅಗ್ನಿಶರ್ಮನು ಮನೆಗೆ ಬಂದು ಕುಟುಂಬದವರನ್ನು,ನನ್ನ ಸಂಪಾದನೆಯೊಂದಿಗೆ ಪಾಪಗಳನ್ನೂ ಹಂಚಿಕೊಳ್ಳುವಿರಾ?” ಎಂದು ಕೇಳಿದಾಗ ಅವರು,ನಮ್ಮನ್ನು ಪೋಷಿಸುವುದು ನಿನ್ನ ಕರ್ತವ್ಯ. ನೀನು ಸಂಪಾದಿಸಿದೆ. ನಾವು ತಿಂದೆವು. ಅದರಿಂದ ಬಂದ ಪಾಪಗಳನ್ನು ನೀನೇ ಅನುಭವಿಸಬೇಕು” ಎಂದು ಹೇಳುತ್ತಾರೆ. ಇದರಿಂದ ಅತ್ಯಂತ ದುಃಖಿತನಾದ ಅಗ್ನಿಶರ್ಮ ಮುನಿಗಳ ಬಳಿಗೆ ಹಿಂದಿರುಗಿ, ಪಾಪಗಳನ್ನು ನೀಗಿಸಿಕೊಳ್ಳಲು ತಾನೇನು ಮಾಡಬೇಕೆಂದು ಕೇಳುತ್ತಾನೆ. ಆಗ ಅತ್ರಿಮುನಿಗಳು ಭಗವಂತನ ಧ್ಯಾನ ಮಾಡೆಂದು ಹೇಳಿ ನಿರ್ಗಮಿಸುತ್ತಾರೆ.

೧೩ ವರ್ಷಗಳ ನಂತರ ಅತ್ರಿ ಮಹರ್ಷಿಗಳು ಮತ್ತೊಮ್ಮೆ ಅದೇ ಅರಣ್ಯ ಮಾರ್ಗದಲ್ಲಿ ಹಿಂತಿರುಗುವಾಗ ಅಲ್ಲಿ ಒಂದು ದೊಡ್ಡ ಹುತ್ತ ಕಾಣಿಸುತ್ತದೆ. ಧ್ಯಾನ ಮಗ್ನನಾಗಿದ್ದ ಅಗ್ನಿಶರ್ಮನ ಮೇಲೆ ಹುತ್ತ ಬೆಳೆದಿರುತ್ತದೆ. ತನ್ನ ಮೇಲೆ ಹುತ್ತ(ವಲ್ಮೀಕ) ಬೆಳೆದಿರುವುದು ಕೂಡ ತಿಳಿಯದ ಸ್ಥಿತಿಯಲ್ಲಿದ್ದ ಕಾರಣ ಅಗ್ನಿಶರ್ಮನನ್ನು ವಾಲ್ಮೀಕಿ ಎಂದು ಕರೆದು ಅವನನ್ನು ಹೊರಗೆ ಬರಲು ಹೇಳಿ, ಉತ್ತರ ದಿಕ್ಕಿಗೆ ಹೋಗಿ ಧ್ಯಾನ ಮಾಡೆಂದು ಹೇಳುತ್ತಾರೆ. ವಾಲ್ಮೀಕಿ ಮಹರ್ಷಿಯು ಕುಶಸ್ಥಲಿ ಎಂಬ ಪ್ರದೇಶಕ್ಕೆ ಹೋಗಿ ಪರಶಿವನ ಆರಾಧನೆ ಮಾಡುತ್ತಾರೆ. ಆಗ ಬ್ರಹ್ಮದೇವರು ವಿಷ್ಣು ಕಥೆಯನ್ನು ಬರೆಯುವ ಅದೃಷ್ಟವನ್ನು ಅನುಗ್ರಹಿಸುತ್ತಾರೆ. ಹೀಗೆ ವಾಲ್ಮೀಕಿ ಮಹರ್ಷಿಗಳಿಗೆ ತ್ರಿಮೂರ್ತಿಗಳ ಅನುಗ್ರಹವು ಪ್ರಾಪ್ತವಾಗುತ್ತದೆ.

ತಪಸ್ಸ್ವಾಧ್ಯಾಯ ನಿರತಂ ತಪಸ್ವಿವಾಗ್ಮಿದಾಂವರಂ|
ನಾರದಂ ಪರಿಪಪ್ರಚ್ಛ ವಲ್ಮೀಕಿಮುನಿ ಪುಂಗವಂ||
ಇದು ವಾಲ್ಮೀಕಿ ಮಹರ್ಷಿ ರಾಮಯಣದಲ್ಲಿ ರಚಿಸಿದ ಮೊದಲ ಶ್ಲೋಕ. ಶ್ಲೋಕಾರ್ಥವು ಹೀಗಿದೆ. 
"ತಪಸ್ವಿ, ಮುನಿ, ಬಹುವಾಗ್ಮಿಯಾದ ನಾರದ ಮಹರ್ಷಿಯನ್ನು ಪ್ರಶ್ನಿಸಲು ತಪಸ್ವಿ ವಾಲ್ಮೀಕಿ ಮಹರ್ಷಿ ಸಿದ್ದರಾಗುತ್ತಿದ್ದಾರೆ".

ಕೋನ್ವಸ್ಮಿನ್ ಸಾಂಪ್ರತಂ ಲೋಕೇ ಗುಣವಾನ್ ಕಶ್ಚ ವೀರ್ಯವಾನ್|
ಧರ್ಮಜ್ಞಶ್ಚ ಕ್ರುತಜ್ಞಶ್ಚ ಸತ್ಯವಾಕ್ಯೋ ಧ್ರುಢವ್ರತಃ||
ಚಾರಿತ್ರೇಣ ಕೋ ಯುಕ್ತಃ ಸರ್ವಭೂತೇಷು ಕೋ ಹಿತಃ|
ವಿದ್ವಾನ್ ಕಃ ಸಮರ್ಥಶ್ಚ ಕಶ್ಚ ಏಕ ಪ್ರಿಯದರ್ಶನಃ||
ಆತ್ಮವಾನ್ ಕೋ ಜಿತ ಕ್ರೋಧೊ ದ್ಯುತಿಮಾನ್ ಕಃ ಅನಸೂಯಕಃ|
ಕಸ್ಯ ಬಿಭ್ಯತಿ ದೇವಾಃ ಜಾತ ರೋಷಸ್ಯ ಸಂಯುಗೇ||
ಪ್ರಸಕ್ತ ಈ ಲೋಕದಲ್ಲಿ ಗುಣವಂತ, ವಿದ್ಯಾವಂತ, ಧರ್ಮಾತ್ಮ, ಕೃತಜ್ಞಭಾವವಿರುವ, ಸತ್ಯವನ್ನು ಪರಿಪಾದಿಸುವ, ದೃಢಸಂಕಲ್ಪವಿರುವ, ಉತ್ತಮ ಚಾರಿತ್ರ್ಯವಿರುವ, ಪ್ರತಿ ಜೀವಿಗೂ ಸುಖವನ್ನು ಕೋರುವ, ವಿದ್ಯಾವಂತ, ಸಮರ್ಥ ಎಷ್ಟು ಸಾರಿ ನೋಡಿದರೂ ನೋಡಬೇಕೆನಿಸುವ ಸೌಂದರ್ಯವಿರುವಂಥ, ಧೈರ್ಯವಂತ, ಕ್ರೋಧವನ್ನು ಜಯಿಸಿದವ, ತೇಜಸ್ಸುಳ್ಳ, ಬೇರೆಯವರಲ್ಲಿ ಸದಾ ಒಳ್ಳೆತನವನ್ನು ನೋಡುವ, ಬೇಕಾದಾಗ ಮಾತ್ರ ಕೋಪಿಸಿಕೊಳ್ಳುವಂಥವನು ಯಾರದರೂ ಇದ್ದಲ್ಲಿ ನನಗೆ ಹೇಳ ಬೇಕೆಂದು ವಾಲ್ಮೀಕಿ ಮಹರ್ಷಿಗಳು ನಾರದರನ್ನು ಕೇಳುತ್ತಾರೆ.

“ನೀನು ಹೇಳಿದ(ಷೋಡಶ) ೧೬ ಗುಣಗಳು ಒಬ್ಬನಲ್ಲಿಯೇ ಇರುವುದು ವಿರಳ. ಆದರೂ ಒಬ್ಬನಿದ್ದಾನೆ. ಇಕ್ಷ್ವಾಕು ವಂಶದ ರಾಮನೆಂಬುವವನಿಗೆ ನೀ ಹೇಳಿದ ೧೬ ಗುಣಗಳೂ ಇವೆ” ಎಂದು, ೧೦೦ ಶ್ಲೋಕಗಳಿರುವ ಸಂಕ್ಷಿಪ್ತ ರಾಮಾಯಣವನ್ನು ವಾಲ್ಮೀಕಿ ಮಹರ್ಷಿಗಳಿಗೆ ನಾರದರು ಹೇಳಿ ಹೋಗುತ್ತಾರೆ.

ರಾಮಾಯಣವನ್ನು ಕೇಳಿದ ವಾಲ್ಮೀಕಿ ಮಹರ್ಷಿಗಳ ಮನಸ್ಸು ಮಹದಾನಂದದಲ್ಲಿ ತೇಲುತ್ತದೆ. ದಿನ ಮಧ್ಯಾಹ್ನ ಸಂಧ್ಯಾವಂದನೆಗೆ ಭಾರದ್ವಾಜರೆಂಬ ಶಿಷ್ಯರೊಂದಿಗೆ ತಮಸಾ ನದಿ ತೀರಕ್ಕೆ ಹೋಗುತ್ತಾರೆ. ಸಮಯದಲ್ಲಿ ಒಂದು ವೃಕ್ಷದ ಮೇಲೆ ಪ್ರಣಯಿಸುತ್ತಿದ್ದ ಎರಡು ಕ್ರೌಂಚ ಪಕ್ಷಿಗಳನ್ನು ನೋಡುತ್ತಾರೆ. ಅದೇ ವೇಳೆಗೆ ಒಬ್ಬ ಬೇಡ ಗಂಡು ಕ್ರೌಂಚ ಪಕ್ಷಿಯ ಎದೆಗೆ ಗುರಿಯಿಟ್ಟು ಬಾಣ ಹೊಡೆಯುತ್ತಾನೆ. ಕೆಳಗೆ ಬಿದ್ದ ಗಂಡು ಪಕ್ಷಿಯ ಸುತ್ತ ಹೆಣ್ಣು ಪಕ್ಷಿಯು ದುಃಖದಿಂದ ತಿರುಗುತ್ತದೆ. ಆವರೆಗೆ ರಾಮಯಣವನ್ನೇ ಮನದಲ್ಲಿ ನೆನೆಯುತ್ತಿದ್ದ ವಾಲ್ಮೀಕಿ ಮಹರ್ಷಿ ಘಟನೆಯಿಂದ ತುಂಬಾ ಬಾಧೆಯುಂಟಾಗಿ, ಅಕಸ್ಮಿಕವಾಗಿ ಒಂದು ಮಾತು ಹೊರಡುತ್ತದೆ.

ಮಾ ನಿಷಾದ ಪ್ರತಿಷ್ಠಾಂ ತ್ವ ಮಗಮಃ ಶಾಶ್ವತೀಃ ಸಮಾಃ|
ಯತ್ ಕ್ರೌಂಚಮಿಥುನಾದೇಕಮ್ ಅವಧಿಃ ಕಾಮಮೋಹಿತಂ||
" ದುರ್ಮಾರ್ಗನಾದ ಬೇಡ ! ಪ್ರಣಯಿಸುತ್ತಿದ್ದ ಎರಡು ಕ್ರೌಂಚ ಪಕ್ಷಿಗಳಲ್ಲಿ ಒಂದು ಪಕ್ಶಿಗೆ ಬಾಣ ಹೊಡೆದುರಿಳಿಸಿದ ಪಾಪ ಮಾಡಿದ ನಿನಗೆ ಮೃತ್ಯುವು ಶೀಘ್ರವೇ ಬರಲಿ" ಎಂದು ಶಪಿಸುತ್ತಾರೆ.

ಅವರು ಸ್ನಾನ ಮುಗಿಸಿ ಆಶ್ರಮಕ್ಕೆ ಹಿಂತಿರುಗಿದರೂ ಅವರಾಡಿದ ಮಾತುಗಳು ತಮ್ಮಲೇ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿರುತ್ತದೆ.  ಮನಸ್ಸಿಗೆ ಮತ್ತೆ ಮತ್ತೆ ಕ್ರೌಂಚ ಪಕ್ಷಿಗಳೇ ಕಾಣಿಸುತ್ತಿರುತ್ತವೆ. ಅವರ ಶಿಷ್ಯರೂ ಕೂಡ ಈ ಮಾತುಗಳನ್ನೇ ಧಾರಣ ಮಾಡುತ್ತಾರೆ.  ಹೀಗೆ ಆ ಮಾತುಗಳು ಶ್ಲೋಕದ ರೂಪ ತಾಳುತ್ತದೆ. ಅಷ್ಟರಲ್ಲಿ ಬ್ರಹ್ಮದೇವರು ಅಲ್ಲಿ ಪ್ರತ್ಯಕ್ಷವಾಗಿ, “ಓ ಬ್ರಾಹ್ಮಣೋತ್ತಮನೇ! ನಿನ್ನ ಬಾಯಿಯಿಂದ ಬಂದ ಆ ಶ್ಲೋಕವೇ ರಾಮಾಯಣ ಕಥೆ” ಎನ್ನುತ್ತಾರೆ. ಆ ಶ್ಲೋಕದ ಮತ್ತೊಂದು ಅರ್ಥ ಹೀಗಿದೆ.

ನಿಷಾದಎಂದರೆ ಬೇಡನೆಂದು ಒಂದು ಅರ್ಥ. ಹಾಗೆಯೆ ಸಮಸ್ತ ಲೋಕವನ್ನು ತನ್ನದಾಗಿಸಿಕೊಂಡ ನಾರಾಯಣನೆಂದು ಮತ್ತೊಂದು ಅರ್ಥ. ’ಮಾಎಂದರೆ ಲಕ್ಶ್ಮೀದೇವಿ. "ಮಾ ನಿಷಾದ ಪ್ರತಿಷ್ಠಾಂ ತ್ವ ಮಗಮಃ ಶಾಶ್ವತಃ ಸಮಾಃ" ಎಂದರೆ, ಲಕ್ಷ್ಮೀದೇವಿಯನ್ನು ತನ್ನವಳಾಗಿಸಿಕೊಂಡ ಶ್ರೀನಿವಾಸ, ನಿನ್ನ ಕೀರ್ತಿ ಶಾಶ್ವತವಾಗಲಿ. "ಯತ್ ಕ್ರೌಂಚ ಮಿಥುನಾದೇಕಂ ಅವಧಿಃ ಕಾಮ ಮೋಹಿತಂ”, ಎಂದರೆ ಕಾಮಾಧೀನನಾಗಿ, ಬ್ರಹ್ಮ ದೇವರು ಕೊಟ್ಟ ವರದಿಂದ ಅಹಂಕಾರಿಯಾಗಿ, ಕಾಮವನ್ನೇ ಜೀವನವನ್ನಾಗಿಸಿಕೊಂಡ ರಾಕ್ಷಸ ಜೋಡಿಯಾದ "ರಾವಣ-ಮಂಡೋದರಿ"ಯರಲ್ಲಿ ರಾವಣನೆಂಬುವ ಕ್ರೌಂಚ ಪಕ್ಷಿಯನ್ನು ಬಾಣದಿಂದ ಸಂಹರಿಸಿದ ರಾಮ ನಿನಗೆ ಮಂಗಳವಾಗಲಿ. ಹೀಗೆ ಶ್ಲೋಕಾರ್ಥವು ಬದಲಾಯಿತು.

ಬ್ರಹ್ಮ ದೇವರು, “ನನ್ನ ಶಕ್ತಿಯಾದ ಸರಸ್ವತಿಯ ಅನುಗ್ರಹದಿಂದ ನೀನು ದಿನ ರಾಮಯಣವನ್ನು ಸ್ಮರಿಸಿದ್ದೀಯ. ನೀನು ರಾಮಾಯಣ ರಚಿಸಲು ಪ್ರಾರಂಭಿಸಿದಾಗ ರಾಮ, ಲಕ್ಷ್ಮಣ, ಸೀತಮ್ಮ, ರಾಕ್ಷಸರೇ ಮೊದಲಾದವರು ಮಾತನಾಡಿದ್ದಲ್ಲದೆ, ಅವರ ಮನಸ್ಸಿನಲ್ಲಿ ಮೂಡಿದ ವಿಚಾರಗಳು ಕೂಡ ತಿಳಿಯಲಿ. ಭೂಮಂಡಲದ ಮೇಲೆ ನದಿ-ಪರ್ವತಗಳು ಇರುವವರೆಗೂ ರಾಮಯಣವಿರುತ್ತದೆ. ಇದರಲ್ಲಿ ಅಸತ್ಯವಾಗಲಿ, ಕಲ್ಪನೆಯಾಗಲಿ ಇಲ್ಲ. ಈಗ ರಾಮಯಣ ರಚಿಸಲು ಪ್ರಾರಂಭ ಮಾಡು” ಎಂದು ವರವಿತ್ತು ಅಂತರ್ಧಾನರಾಗುತ್ತಾರೆ.

ಆಗ ವಾಲ್ಮೀಕಿ ಮಹರ್ಷಿಯು ಒಟ್ಟು ೨೪,೦೦೦ ಶ್ಲೋಕಗಳ, ಕಾಂಡಗಳ ಜೊತೆಗೆ ಮತ್ತೊಂದು ಕಾಂಡವಿರುವ, ೫೦೦ ಅಧ್ಯಾಯಗಳ ರಾಮಾಯಣವನ್ನು ರಚಿಸಲು ಪ್ರಾರಂಭಿಸುತ್ತಾರೆ.


Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ