೬. ವಿಶ್ವಾಮಿತ್ರರ ಭೇಟಿ


ತತಃ ದ್ವಾದಶೇ ಮಾಸೇ ಚೈತ್ರೇ ನವಮಿಕೇ ತಿಥೌ |
ನಕ್ಷತ್ರೇ ಅದಿತಿ ದೈವತ್ಯೇ ಸ್ವ ಉಚ್ಚ ಸಂಸ್ಥೇಷು ಪಂಚಸು||
ಗ್ರಹೇಷು ಕರ್ಕಟೇ ಲಗ್ನೇ ವಾಕ್ಪತಾ ಇಂದುನಾ ಸಹ |
ಪ್ರೋದ್ಯಮಾನೇ ಜಗನ್ನಾಥಂ ಸರ್ವ ಲೋಕ ನಮಸ್ಕೃತಂ||
ಜಗನ್ನಾಥನೂ, ಸರ್ವ ಲೋಕದವರಿಂದಲೂ ನಮಸ್ಕರಿಸಿಕೊಳ್ಳುವನೂ ಆದ ಶ್ರೀರಾಮ ೧೨ ಮಾಸಗಳು ಕೌಸಲ್ಯೆಯ ಗರ್ಭವಾಸ ಮಾಡಿ, ಪುನರ್ವಸು ನಕ್ಷತ್ರ, ಕರ್ಕಾಟಕ ಲಗ್ನದಲ್ಲಿ ಚೈತ್ರ ಶುಕ್ಲ ನವಮಿಯಂದು ಜನಿಸಿದ. ಅದೇ ಸಮಯದಲ್ಲಿ ಕೈಕೇಯಿಗೆ ಪುಷ್ಯಮಿ ನಕ್ಷತ್ರ, ಮೀನ ಲಗ್ನದಲ್ಲಿ ಭರತನೂ, ಸುಮಿತ್ರೆಗೆ ಲಕ್ಷ್ಮಣ, ಶತೃಘ್ನರೂ ಜನಿಸಿದರು. ತನಗೆ ನಾಲ್ಕು ಪುತ್ರರು ಜನಿಸಿದ್ದಾರೆಂಬ ವಾರ್ತೆಯನ್ನು ಕೇಳಿ ದಶರಥ ಮಹಾರಾಜನು ಬಹಳ ಆನಂದ ಪಟ್ಟ. ಕೋಸಲ ದೇಶದ ಪ್ರಜೆಗಳೆಲ್ಲ ಸಂಭ್ರಮವನ್ನು ಆಚರಿಸಿದರು.

ವೇಳೆಯಲ್ಲಿ ಬ್ರಹ್ಮ ದೇವರು ದೇವತೆಗಳ ಸಭೆ ಕರೆದು, “ಶ್ರೀಮಹಾವಿಷ್ಣುವು ಭೂಲೋಕದಲ್ಲಿ ರಾಮನಾಗಿ ಅವತರಿಸಿದ್ದಾರೆ, ರಾವಣ ಸಂಹಾರದಲ್ಲಿ ರಾಮನಿಗೆ ಸಹಾಯ ಮಾಡಲು ನಿಮ್ಮ ಅಂಶವಿರುವ ಕೆಲವರನ್ನು ಸೃಷ್ಟಿ ಮಾಡಿ. ಪಾರ್ವತಿ ದೇವಿಯ ಶಾಪದಿಂದ ನಿಮಗೆ ನಿಮ್ಮ ಪತ್ನಿಯರೊಡನೆ ಸಂತಾನ ಪ್ರಾಪ್ತಿ ಇಲ್ಲದ ಕಾರಣ ನಿಮಗೆ ಸಮಾನವಾದ ತೇಜಸ್ಸು-ಪರಾಕ್ರಮ ಇರುವ ವಾನರರನ್ನು ಗಂಧರ್ವ, ಅಪ್ಸರ, ಕಿನ್ನರ ಸ್ತ್ರೀಯರಿಂದ ಪಡೆಯಿರಿ. ಒಂದುಬಾರಿ ನಾನು ಆಕಳಿಸಿದಾಗ ನನ್ನ ಬಾಯಿಯಿಂದ ಜಾರಿ ಬಿದ್ದವನೇ ಜಾಂಬವಂತ, ಅವನೂ ವಾನರರ ಜೊತೆ ಇರುತ್ತಾನೆ” ಎಂದು ಹೇಳಿದರು. ದೇವತೆಗಳೆಲ್ಲರೂ ರಾಮ ಕಾರ್ಯಕ್ಕಾಗಿ ಹುಟ್ಟುವುದು ತಮ್ಮ 
ಅತೀತ್ಯ ಏಕಾದಶ ಆಹಂ ತು ನಾಮ ಕರ್ಮ ತಥಾ ಅಕರೋತ್ |
ಜ್ಯೇಷ್ಠಂ ರಾಮಂ ಮಹಾತ್ಮಾನಂ ಭರತಂ ಕೈಕಯಾ ಸುತಂ ||
ಸೌಮಿತ್ರಿ ಲಕ್ಷ್ಮಣಂ ಇತಿ ಶತೃಘ್ನಂ ಅಪರಂ ತಥಾ |
ವಸಿಷ್ಠಃ ಪರಮ ಪ್ರೀತೋ ನಾಮಾನಿ ಕುರುತೇ ತದಾ ||
ಶ್ರೀರಾಮನು ಹುಟ್ಟಿದ ೧೧ ದಿನದ ಜಾತ ಶೌಚವು ಕಳೆದ ನಂತರ ಕುಲಗುರುಗಳಾದ ವಸಿಷ್ಠರು ನಾಮಕರಣ ಮಾಡಿಸಿದರು. ಸರ್ವಜನರೂ ಆತನ ಗುಣಗಳನ್ನು ನೋಡಿ ಉತ್ಸಾಹಗೊಂಡರಾದ ಕಾರಣ ಆತನಿಗೆ ರಾಮ (ರಾ ಅಂದರೆ ಅಗ್ನಿ ಬೀಜ, ಎಂದರೆ ಅಮೃತ ಬೀಜ) ಎಂದೂ, ಸುಮಿತ್ರೆಯ ಪುತ್ರನಾದ ಸೌಮಿತ್ರಿಯು ಅಪಾರವಾದ ಲಕ್ಷ್ಮಿ ಸಂಪನ್ನನಾದ್ದರಿಂದ (ರಾಮನ ಸೇವೆಯೇ ಆತನ ಲಕ್ಶ್ಮಿ) ಲಕ್ಷ್ಮಣನೆಂದೂ, ಕೈಕೇಯಿ ಕುಮಾರ ಸಹನೆಯ ಗುಣದವನಾದ್ದರಿಂದ ಭರತನೆಂದೂ, ಶತೃಗಳನ್ನು ಸಂಹರಿಸುವವನಾದ್ದರಿಂದ ಶತೃಘ್ನನೆಂದೂ ನಾಲ್ವರು ಮಕ್ಕಳಿಗೆ ವಸಿಷ್ಠರು ನಾಮಕರಣ ಮಾಡಿದರು.

ತನ್ನ ಪುತ್ರರು ಬೆಳೆದು ದೊಡ್ಡವರಾಗುತ್ತಿರುವುದನ್ನು ಕಂಡು ದಶರಥ ಮಹಾರಜ ಆನಂದದಲ್ಲಿ ತೇಲುತ್ತಿದ್ದ. ಅವರು ವೇದಗಳೊಂದಿಗೆ ಎಲ್ಲ ವಿದ್ಯೆಗಳನ್ನು ಕಲಿಯುತ್ತಿದ್ದರು. ಯಾವಾಗಲೂ ಗುರುಗಳನ್ನು ಪೂಜಿಸುತ್ತಿದ್ದರು. ಲೋಕದಲ್ಲಿರುವ ಎಲ್ಲರ ಹಿತ ಕೋರುತ್ತಿದ್ದರು. ಅವರು ಸರ್ವ ಕಾಲದಲ್ಲಿಯೂ ತಂದೆಯ ಸೇವೆಯನ್ನು ಮಾಡುತ್ತಿದ್ದರು. ರಾಮನು ತನ್ನ ಕಿವಿಯವರೆಗೆ ಹೆರಳನ್ನು ಹಬ್ಬಿಸಿ ನಗರದ ರಾಜಮಾರ್ಗದಲ್ಲಿ ತಿರುಗಾಡುವುದು ದಶರಥ ಮಹಾರಾಜನಿಗೆ ತನ್ನ ಯೌವ್ವನವನ್ನು ಜ್ಞಾಪಿಸುತ್ತಿತ್ತು. ಹೀಗೆ ಬಹುಕಾಲದ ನಂತರ ಹುಟ್ಟಿದ ಮಕ್ಕಳ ಆಟ-ಪಾಠಗಳನ್ನು ನೋಡುತ್ತಾ ರಾಜದಂಪತಿಯರು ಹಾಯಾಗಿ ಕಾಲ ಕಳೆಯುತ್ತಿದ್ದರು.

ಕೆಲದಿನಗಳ ನಂತರ, ದಶರಥ ಮಹಾರಾಜನು ಸಭೆಯಲ್ಲಿ, "ನನ್ನ ಪುತ್ರರಿಗೆ ೧೨ ವರ್ಷಗಳು ತುಂಬುತ್ತಿವೆ, ಅವರಿಗೆ ವಿವಾಹ ಮಾಡಬೇಕೆಂದು ವಿಚಾರ ಮಾಡಿದ್ದೇನೆ, ನಮ್ಮ ವಂಶಕ್ಕೆ ತಕ್ಕ ಸಂಬಂಧಗಳನ್ನು ಹುಡುಕಿ" ಎಂದು ಹೇಳುತ್ತಿರುವಾಗ ಅನಿರೀಕ್ಷಿತವಾಗಿ ವಿಶ್ವಾಮಿತ್ರರು ಸಭೆಗೆ ಆಗಮಿಸಿದರು. ತಕ್ಷಣವೇ ದಶರಥನು ಎದುರುಗೊಂಡು ಅವರನ್ನು ಸ್ವಾಗತಿಸಿ,ನೀವು ನಮ್ಮ ರಾಜ್ಯಕ್ಕೆ ಆಗಮಿಸಿದ್ದು ನಮ್ಮ ಅದೃಷ್ಠ, ನಿಮ್ಮಂಥ ಮಹಾ ಮುನಿಗಳು ಕಾರಣವಿಲ್ಲದೆ ಇಲ್ಲಿಯವರೆಗೆ ಬರುವುದಿಲ್ಲ, ನಿಮ್ಮ ಕೋರಿಕೆಯನ್ನು ದಯಮಾಡಿ ತಿಳಿಸಿದರೆ ಸಂತೋಷದಿಂದ ನೆರವೇರಿಸುತ್ತೇನೆ” ಎಂದ.
ವಿಶ್ವಾಮಿತ್ರರು: "ದಶರಥ! ನಿನ್ನ ಸಾಮಂತರೆಲ್ಲರೂ ನಿನ್ನ ಕೈಕೆಳಗಿರುವರೇ? ದಾನ ಧರ್ಮಗಳನ್ನು ಸಕ್ರಮವಾಗಿ ಮಾಡುತ್ತಿದ್ದೀಯಾ? ನಿನ್ನ ಮಂತ್ರಿ ವರ್ಗದವರು ಸಚಿವತ್ವವನ್ನು ಸರಿಯಾಗಿ ನಿರ್ವಹಿಸುತ್ತಿದ್ದರೆಯೇ?ಎಂದು ಕುಶಲೋಪರಿಗಳನ್ನು ವಿಚಾರಿಸುತ್ತಾ, ಅವರ ಭೇಟಿಯ ಉದ್ದೇಶವನ್ನು ತಿಳಿಸಿದರು,
“ಸ್ವ ಪುತ್ರಂ ರಾಜ ಶಾರ್ದೂಲ ರಾಮಂ ಸತ್ಯ ಪರಾಕ್ರಮಂ |
ಕಾಕ ಪಕ್ಷ ಧರಂ ಶೂರಂ ಜ್ಯೇಷ್ಠಂ ಮೇ ದಾತುಂ ಅರ್ಹಸಿ ||
ನಾವು ಮಾಡುತ್ತಿರುವ ಯಜ್ಞ-ಯಗಾದಿಗಳಿಗೆ ರಾಕ್ಷಸರ ಉಪಟಳ ಹೆಚ್ಚಾಗಿದೆ, ರಾಕ್ಷಸರನ್ನು ವಧಿಸಿ ಯಾಗ ರಕ್ಷಣೆ ಮಾಡಲು ನಿನ್ನ ಹಿರಿಮಗನಾದ ರಾಮನನ್ನು ನನ್ನೊಡನೆ ಕಳಿಸಿಕೊಡುವೆಯಾ?”

ಮಾತನ್ನು ಕೇಳಿದ ದಶರಥ ಮಹಾರಾಜನು ಆಘಾತಗೊಂಡು ಕೆಳಗೆ ನಿಂತಲ್ಲೇ ಕುಸಿದ. ನಿಧಾನವಗಿ ಚೇತರಿಸಿಕೊಂಡು,
“ಊನ ಷೋಡಷ ವರ್ಷೋ ಮೇ ರಾಮಾ ರಾಜೀವ ಲೋಚನಃ|
ಯುದ್ಧ ಯೋಗ್ಯತಾಂ ಅಸ್ಯ ಪಶ್ಯಾಮಿ ಸಹ ರಾಕ್ಷಸೈಃ ||
ಇನ್ನೂ ೧೬ ವರ್ಷವೂ ತುಂಬದ ನನ್ನ ರಾಮ ರಾಕ್ಷಸರನ್ನು ಹೇಗೆ ಸಂಹರಿಸಬಲ್ಲನು? ಬೇಕೆಂದರೆ ನಾನೇ ನನ್ನ ಚತುರಂಗಬಲದ ಸಹಿತ ನಿಮ್ಮೊಂದಿಗೆ ಬಂದು ರಾಕ್ಷಸ ಸಂಹಾರ ಮಾಡುತ್ತೇನೆ, ರಾಮನೇ ನಿಮ್ಮೊಂದಿಗೆ ಬರಬೇಕೆಂದರೆ ನಾನೂ ರಾಮನ ಜೊತೆಯಲ್ಲಿ ಬರುತ್ತೇನೆ” ಎಂದು ಅಂಗಲಾಚಿದ.
“ರಾಮನಿನ್ನೂ ಚಿಕ್ಕವನು, ಏನೂ ಮಾಡಲಾರನೆಂದು ನೀನು ತಿಳಿದಿದ್ದೀಯ, ಆದರೆ ರಾಮನು ಯಾರೆಂದು ನನಗೆ ಗೊತ್ತು, ವಸಿಷ್ಠರಿಗೆ ಗೊತ್ತು. ರಾಮ ರಾಕ್ಷಸರನ್ನು ವಧಿಸಿ ಖಚಿತವಗಿ ಹಿಂದಿರುಗುತ್ತಾನೆ. ನೀನು ರಾಮನ ತಂದೆಯಾದ್ದರಿಂದ, ರಾಮನ ಮೇಲೆ ಅಪಾರ ಪುತ್ರವಾತ್ಸಲ್ಯದಿಂದ ನಿನಗೆ ಅವನ ಪರಾಕ್ರಮ ತಿಳಿಯುತ್ತಿಲ್ಲ. ರಾಮನನ್ನು ನನ್ನೊಂದಿಗೆ ಕಳಿಸಿ ಕೊಡು” 
ವಿಶ್ವಾಮಿತ್ರರು ಆಷ್ಟು ಕೇಳಿದರೂ ದಶರಥನು ತನ್ನ ಪ್ರೀತಿಪಾತ್ರನಾದ ರಾಮನನ್ನು ಅವರೊಡನೆ ಕಳಿಸಲು ನಿರಾಕರಿಸಿದಾಗ, ವಿಶ್ವಾಮಿತ್ರರು ಕೋಪಿಸಿಕೊಂಡು, "ದಶರಥ! ನೀನು ಕೊಟ್ಟಮಾತನ್ನು ಉಳಿಸಿಕೊಳ್ಳದೆ ಧರ್ಮವನ್ನು ತಪ್ಪಿದ್ದೀಯ, ಪುತ್ರ-ಪೌತ್ರರೊಂದಿಗೆ ಶಾಂತಿಯಿಂದ ಜೀವಿಸು" ಎಂದು ಆಗ್ರಹಿಸಿ ಹೊರಟರು. 

ತಕ್ಷಣವೇ ವಸಿಷ್ಠರು ವಿಶ್ವಾಮಿತ್ರರನ್ನು ತಡೆದು, ದಶರಥನಿಗೆ "ಇಷ್ಟು ಕಾಲ ಧರ್ಮಾತ್ಮನಾಗಿ ರಾಜ್ಯಭಾರ ನಡೆಸಿರುವೆ. ಈಗ ಕೊಟ್ಟ ಮಾತಿಗೆ ತಪ್ಪಿ,ದಶರಥನು ಮಾತಿಗೆ ತಪ್ಪಿದ ಅಧರ್ಮಿ’ ಎನ್ನುವ ಅಪವಾದ ನಿನಗೆ ಬೇಡ. ರಾಮನನ್ನು ಅವರೊಂದಿಗೆ ಕಳಿಸಿ, ಕೊಟ್ಟ ಮಾತನ್ನು ಉಳಿಸಿಕೋ" ಎಂದು ಹೇಳಿ, ವಿಶ್ವಾಮಿತ್ರರ ಬಗ್ಗೆ ವಿವರಿಸಿದರು,
“ಏಷ ವಿಗ್ರಹಾವಾನ್ ಧರ್ಮ ಏಷ ವೀರ್ಯವತಾಂ ವರಃ |
ಏಷ ವಿದ್ಯ ಅಧಿಕೋ ಲೋಕೇ ತಪಸಃ ಪಾರಾಯಣಂ ||
ಲೋಕದಲ್ಲಿರುವ ಧರ್ಮವೆಲ್ಲಾ ವಿಶ್ವಾಮಿತ್ರರೇ, ಲೋಕದಲ್ಲಿರುವ ಎಲ್ಲ ತಪಸ್ಸಿನ ನಿರ್ವಚನ ವಿಶ್ವಾಮಿತ್ರರೇ, ಲೋಕದಲ್ಲಿರುವ ಜ್ಞಾನವೆಲ್ಲಾ ವಿಶ್ವಾಮಿತ್ರರೇ, ಶಿವನ ಅನುಗ್ರಹದಿಂದ ಸಮಸ್ತ ಧನುರ್ವಿದ್ಯೆಯು ಅವರ ವಶವಾಗಿದೆ. ಲೋಕದಲ್ಲಿರುವ ಎಲ್ಲ ಅಸ್ತ್ರ-ಶಸ್ತ್ರಗಳು ಅವರಿಗೆ ತಿಳಿದಿದೆ. ಇಷ್ಟೆಲ್ಲಾ ಜ್ಞಾನಿಯಾದ ವಿಶ್ವಾಮಿತ್ರರಿಗೆ ಯಾಗ ರಕ್ಷಣೆಯು ಅಸಾಧ್ಯವಲ್ಲ, ಆದರೆ ರಾಮನಿಗೇ ಕೀರ್ತಿ ದಕ್ಕಬೇಕೆಂದು ತನ್ನ ಸಮಸ್ತ ವಿದ್ಯೆಗಳನ್ನು ರಾಮನಿಗೆ ಧಾರೆಯೆರೆಯಲು ಆಸೆ ಪಡುತ್ತಿದ್ದಾರೆ.”


ವಸಿಷ್ಠರ ಮಾತನ್ನು ಕೇಳಿ, ದಶರಥನು ಅಂತಃಪುರಕ್ಕೆ ಹೋಗಿ ರಾಮನನ್ನು ಕರೆತರಲು ಕೌಸಲ್ಯೆಗೆ ಹೇಳಿದ. ಸ್ವಲ್ಪ ಸಮಯದ ನಂತರ ರಾಮನೊಂದಿಗೆ ಲಕ್ಷ್ಮಣನೂ ಅಲ್ಲಿಗೆ ಬಂದ. ಸಭೆಗೆ ಆಗಮಿಸಿದ ರಾಮ-ಲಕ್ಷ್ಮಣರನ್ನು ಅಲ್ಲಿ ಉಪಸ್ಥಿತರಿದ್ದ ಋಷಿಗಳು ಆಶೀರ್ವದಿಸಿದರು. ದಶರಥ ರಾಮನ ಹಣೆಗೆ ಮುತ್ತಿಟ್ಟು, ತನ್ನ ಮಕ್ಕಳನ್ನು ಬಹಳ ಸಂತೋಷದಿಂದ ಅವರೊಡನೆ ಕಳಿಸುತ್ತಿರುವನೆಂದೂ, ಅಗತ್ಯವಾಗಿ ಅವರನ್ನು ಬಳಸಿಕೊಳ್ಳಿರೆಂದೂ ವಿಶ್ವಾಮಿತ್ರರಿಗೆ ಹೇಳಿ, ಅವರ ಮಾತನ್ನು ಪಾಲಿಸಲು ರಾಮ-ಲಕ್ಷ್ಮಣರಿಗೆ ಸೂಚಿಸಿದ. ಹೀಗೆ ರಾಮ-ಲಕ್ಷ್ಮಣರು ವಿಶ್ವಾಮಿತ್ರರೊಂದಿಗೆ ಯಾಗ ರಕ್ಷಣೆಗೆ ಹೊರಟರು.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ