೭. ತಾಟಕಾ ವಧೆ
ವಿಶ್ವಾಮಿತ್ರರ ಹಿಂದೆ ರಾಮ-ಲಕ್ಷ್ಮಣರು ಕೋದಂಡಗಳನ್ನು ಹಿಡಿದು ಚತುರ್ಮುಖ ಬ್ರಹ್ಮ ಅಶ್ವಿನಿ ದೇವತೆಗಳ ಜೊತೆ ನಡೆದಂತೆ, ಶಿವನ ಜೊತೆ ವಿಶಾಖ-ಸ್ಕಂದರು ನಡೆದಂತೆ ನಡೆಯುತ್ತಿದ್ದರು. ಅವರು ಸರಯೂ ನದಿ ತೀರದಲ್ಲಿ ಸುಮಾರು ಒಂದೂವರೆ ಯೋಜನಗಳು ನಡೆದು, ರಾತ್ರಿಯಾದ ಕಾರಣ ಒಂದು ಕಡೆ ವಿಶ್ರಮಿಸಿದರು.
ಗೃಹಾಣ ವತ್ಸ ಸಲಿಲಂ ಮಾ ಭೂತ್ ಕಾಲಸ್ಯ ಪರ್ಯಯಃ
ಮಂತ್ರ ಗ್ರಾಮಂ ಗೃಹಾಣ ತ್ವಂ ಬಲಾಂ ಅತಿಬಲಾಂ ತಥಾ
ವಿಶ್ವಾಮಿತ್ರರು, ಹಸಿವು ಬಾಯಾರಿಕೆಗಳಿಂದ ದೂರವಿರಲು, ನಿದ್ರಾಸಮಯದಲ್ಲಿ ರಾಕ್ಷಸರ ಉಪಟಳದಿಂದ ಮುಕ್ತವಾಗಿರಲು, ಸಮಯಸ್ಫೂರ್ತಿ, ಜ್ಞಾಪಕ ಶಕ್ತಿ, ಬುದ್ಧಿಶಕ್ತಿ ಪ್ರಕಾಶಿಸಲು, ಬ್ರಹ್ಮನ ಪುತ್ರಿಯರಾದ ಬಲ-ಅತಿಬಲ ಎಂಬ ಎರೆಡು ಮಂತ್ರಗಳನ್ನು ರಾಮನಿಗೆ ಉಪದೇಶಿಸಿದರು. ರಾಮ ಅದನ್ನು ಲಕ್ಷ್ಮಣನಿಗೆ ಉಪದೇಶಿಸಿದ. ಇಬ್ಬರೂ ದರ್ಭಾಶಯ್ಯೆಯ ಮೇಲೆ ಮಲಗಿಕೊಂಡರು.
ಬೆಳಗಾದ ಮೇಲೆ ವಿಶ್ವಾಮಿತ್ರರು ಸಂಧ್ಯಾವಂದನೆ ಮುಂತಾದ ಪ್ರಾತಃ ಕಾರ್ಯಗಳನ್ನು ಮುಗಿಸಿ ರಾಮ-ಲಕ್ಷ್ಮಣರ ಬಳಿ ಬಂದಾಗ ಅವರಿನ್ನೂ ಮಲಗಿರುವುದನ್ನು ಕಂಡು,
“ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರ ಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ
ಕೌಸಲ್ಯಾಪುತ್ರ ನರೋತ್ತಮನಾದ ರಾಮನೇ, ಪೂರ್ವದಲ್ಲಿ ಸೂರ್ಯ ಉದಯಿಸುತ್ತಿದ್ದಾನೆ. ಸಂಧ್ಯಾವಂದನೆ ಮಾಡಬೇಕು. ದೈವೀ ಸಂಬಂಧಿತವಾದ ಕೆಲಸಗಳನ್ನು ಮಾಡಲು ಶುಭಸಮಯ ಮೀರಬಾರದು. ಆದ್ದರಿಂದ ನಿದ್ದೆಯಿಂದ ಎಚ್ಚರವಾಗು”, ಎಂದು ರಾಮನನ್ನು ನಿದ್ರೆಯಿಂದ ಎಚ್ಚರಿಸಿದರು.
ಎಲ್ಲರೂ ಪ್ರಾತರಾಹ್ನಿಕಗಳನ್ನು ಮುಗಿಸಿ, ತಮ್ಮ ಪ್ರಯಾಣವನ್ನು ಮುಂದುವರಿಸಿ ಗಂಗಾ-ಸರಯೂ ನದಿ ತೀರಕ್ಕೆ ಬಂದು ಸೇರಿದರು. ಅಲ್ಲಿ ಒಂದು ಋಷ್ಯಾಶ್ರಮ ಸಿಕ್ಕಿತು. ಆ ಆಶ್ರಮದ ಬಗ್ಗೆ ರಾಮನು ವಿಶ್ವಾಮಿತ್ರರನ್ನು ಪ್ರಶ್ನಿಸಿದಾಗ, ಅದರ ಕುರಿತು ವಿಶ್ವಾಮಿತ್ರರು ವಿವರಿಸಿದರು: “ಒಂದಾನೊಂದು ಕಾಲದಲ್ಲಿ, ಪರಶಿವನು ತಪಸ್ಸು ಮಾಡುತ್ತಿದ್ದಾಗ, ಮನ್ಮಥನು ಬಾಣ ಪ್ರಯೋಗ ಮಾಡುತ್ತಾನೆ. ಕುಪಿತಗೊಂಡ ರುದ್ರನು ತನ್ನ ಮೂರನೇ ಕಣ್ಣನ್ನು ತೆಗೆದು ಮನ್ಮಥನನ್ನು ಸುಡುತ್ತಾನೆ. ಮನ್ಮಥನ ಅಂಗಗಳು ಸುಟ್ಟು ಬೂದಿಯಾದ ಈ ಪ್ರದೇಶಕ್ಕೆ ಅಂಗದೇಶವೆಂದು ಹೆಸರು. ಅಂದು ಶಿವನು ತಪಸ್ಸು ಮಾಡುವಾಗ ಇದ್ದ ಕೆಲವು ಶಿಷ್ಯರು ಈಗಲೂ ಇಲ್ಲಿ ಇದ್ದಾರೆ. ಶಂಕರನಿಂದ ಪ್ರತ್ಯಕ್ಷ ಶಿಷ್ಯತ್ವವನ್ನು ಸ್ವೀಕರಿಸಿದ ಇವರು ಪಾಪರಹಿತರು. ಆದ್ದರಿಂದ ಇಂದು ಈ ಪ್ರದೇಶದಲ್ಲಿ ತಂಗೋಣ”.
ಮರುದಿನ ಆಶ್ರಮದ ಮಹರ್ಷಿಗಳು ಗಂಗಾನದಿ ದಾಟಲು ವಿಶ್ವಾಮಿತ್ರ, ರಾಮ-ಲಕ್ಷ್ಮಣರಿಗೆ ದೋಣಿಯ ಏರ್ಪಾಡು ಮಾಡಿದರು. ಪ್ರಯಾಣದ ಮಧ್ಯೆ ಯಾವುದೋ ಗಟ್ಟಿಯಾದ ಧ್ವನಿ ಕೇಳಿಬಂದಿತು. ರಾಮನು ಅದೇನೆಂದು ಕೇಳಿದಾಗ ವಿಶ್ವಾಮಿತ್ರರು, “ಬ್ರಹ್ಮ ತನ್ನ ಮನಃಪ್ರಭಾವದಿಂದ ಕೈಲಾಸ ಪರ್ವದ ಮೇಲೆ ಒಂದು ಸರೋವರವನ್ನು ನಿರ್ಮಿಸಿದ. ಅದೇ ಮಾನಸ ಸರೋವರ. ಸರಯೂ ನದಿ ಆ ಸರೋವರದಿಂದಲೇ ಪ್ರವಹಿಸುತ್ತದೆ. ಆ ನದಿಯು ಈ ಸ್ಥಳದಲ್ಲಿ ಗಂಗಾನದಿಯನ್ನು ಸೇರುತ್ತದೆ. ಅದೇ ಈ ಶಬ್ದ. ಈ ಸಂಗಮಕ್ಕೆ ನಮಸ್ಕರಿಸಿ” ಎಂದು ಹೇಳಿದರು. ನದಿ ದಾಟಿದ ನಂತರ ಅರಣ್ಯದಲ್ಲಿ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಿದರು.
ಅರಣ್ಯದಲ್ಲಿ ನಡೆಯುತ್ತಿರುವಾಗ ಅವರಿಗೆ ಪಕ್ಷಿಗಳ ಭಯಂಕರವಾದ ಶಬ್ದಗಳು ಕೇಳಿಬಂದಿತು. ಹುಲಿ, ಸಿಂಹ, ಆನೆಗಳು ಕಾಣಿಸಿದವು. ಅರಣ್ಯ ಇಷ್ಟು ಭಯಂಕರವಾಗಿರಲು ಕಾರಣವೇನೆಂದು ರಾಮನು ಕೇಳಿದಾಗ ವಿಶ್ವಾಮಿತ್ರರು ಹೇಳಿದರು:
“ಪೂರ್ವದಲ್ಲಿ ಮದಲ, ಕರೂಷಗಳೆಂಬ ಎರೆಡು ಜನಪದಗಳು ಇಲ್ಲಿದ್ದವು. ಆದರೆ ಅವು ಇಂದು ಇಲ್ಲ. ಇದಕ್ಕೆಲ್ಲ ಕಾರಣ ತಾಟಕಿ ಎಂಬ ಒಬ್ಬಳು ರಾಕ್ಷಸಿ. ಅವಳು ಮೊದಲು ಯಕ್ಷಿಣಿಯಾಗಿದ್ದವಳು ಈಗ ರಾಕ್ಷಸಿಯಾಗಿ ಇಲ್ಲಿನ ಜನಗಳಿಗೆ ಹಿಂಸೆಕೊಟ್ಟಳು. ಆದ್ದರಿಂದ ಈಗ ಇಲ್ಲಿ ಯಾರೂ ಇಲ್ಲ.”
“ಇಲ್ಲಿ ಮೊದಲಿಗೆ ಜನಪದಗಳು ಹೇಗೆ ಬಂದವು?”
“ಒಂದು ಬಾರಿ ಇಂದ್ರನು ವೃತ್ರಾಸುರನೆಂಬ ರಾಕ್ಷಸನನ್ನು ಸಂಹರಿಸಿದ. ವೃತ್ರನು ಬ್ರಾಹ್ಮಣನಾದ್ದರಿಂದ ಅವನಿಗೆ ಬ್ರಹ್ಮಹತ್ಯಾಪಾತಕ ಉಂಟಾಯಿತು. ಆ ಪಾತಕದಿಂದ ಅವನ ಶರೀರದಲ್ಲಿ ಎರೆಡು ಲಕ್ಷಣಗಳುಂಟಾದವು. ಒಂದು ಮಲ ಹುಟ್ಟುವುದು ಮತ್ತೊಂದು ತಡೆಯಲಾರದ ಹಸಿವು. ಅವನು ಋಷಿಗಳನ್ನು ಆಶ್ರಯಿಸಿದಾಗ ಅವರು ಆ ಲಕ್ಷಣಗಳನ್ನು ತೊಲಗಿಸಿದರು. ಆದರೆ ಆ ಲಕ್ಷಣಗಳು ಭೂಮಿಯಮೇಲೆ ಬಂದು ಬಿದ್ದವು. ಅವು ಬಿದ್ದ ಪ್ರದೇಶಗಳೇ ಮದಲ, ಕರೂಷಗಳೆಂಬ ಜನಪದಗಳು. ಅಲ್ಲಿರುವ ಜನರು ಯಾವಾಗಲೂ ಸುಖ-ಸಂತೋಷದಿಂದ ವರ್ಧಿಸಲಿ ಎಂದು ಇಂದ್ರನು ವರ ಕೊಟ್ಟ. ಹಾಗೆಯೇ ಪೂರ್ವದಲ್ಲಿ ಸುಕೇತು ಎಂಬ ಯಕ್ಷನು ಮಕ್ಕಳಾಗದ ಕಾರಣ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ. ಬ್ರಹ್ಮನು ಪ್ರತ್ಯಕ್ಷವಾಗಿ, ಕಾಮರೂಪಿಯಾಗಿಯೂ, ಸುಂದರಿಯಾಗಿಯೂ ಇರುವ, ೧೦೦೦ ಆನೆಗಳ ಬಲವುಳ್ಳವಳೂ ಆದ ಪುತ್ರಿಯನ್ನು ಅನುಗ್ರಹಿಸಿದ. ಅವಳ ಹೆಸರೇ ತಾಟಕಿ. ತನ್ನ ಬಲದ ಬಗೆಗಿನ ಗರ್ವದಿಂದ ತಾಟಕಿ ಅರಣ್ಯದಲ್ಲಿ ರಾಜಾರೋಷವಾಗಿ ತಿರುಗುತ್ತಿದ್ದಳು. ಯೌವನ ಪ್ರಾಪ್ತವಾದ ಮೇಲೆ ಅವಳನ್ನು ಸುಂದನೆಂಬುವವನಿಗೆ ಕೊಟ್ಟು ವಿವಾಹ ಮಾಡಿದರು. ತಾಟಕಿ-ಸುಂದರ ಪುತ್ರನೇ ಮಾರೀಚ. ಒಂದು ಬಾರಿ ಸುಂದನು ಅಗಸ್ತ್ಯರ ಮೇಲೆ ದಾಳಿ ಮಾಡಿದ. ಅವರು ಅವನನ್ನು ಸಂಹರಿಸಿದರು. ಇದರಿಂದ ಆಕ್ರೋಶಗೊಂಡ ತಾಟಕಿ, ತನ್ನ ಮಗನ ಜೊತೆ ಅಗಸ್ತ್ಯರ ಮೇಲೆ ದಾಳಿಗೆ ಹೋದಳು. ಅವರು ತಾಟಕಿಗೆ, ‘ನಿನಗೆ ವಿಕೃತ ರೂಪ ಬರಲಿ’ ಎಂದೂ, ಮಾರೀಚನಿಗೆ, ‘ಇಂದಿನಿಂದ ನೀನು ರಾಕ್ಷಸನಾಗು’ ಎಂದೂ ಶಪಿಸಿದರು. ಆ ತಾಟಕಿ ಇಂದು ಈ ನಗರಗಳ ಮಧ್ಯೆ ತಿರುಗುತ್ತಿದ್ದಾಳೆ. ಅವಳು ನರಮಾಂಸಭಕ್ಷಕಿ. ಆದುದರಿಂದಲೇ ಇಲ್ಲಿನ ಜನರು ಊರು ಬಿಟ್ಟು ಹೋಗಿದ್ದಾರೆ. ರಾಮ! ನಿನ್ನ ಈಗಿನ ಕರ್ತವ್ಯ ತಾಟಕಿಯ ಸಂಹಾರ. ನೀನು ಮಾಡುವ ಕೆಲಸ(ಸ್ತ್ರೀ ಹತ್ಯೆ) ದೊಷವಾದರೂ, ಪ್ರಜಾಕಂಟರನ್ನು ರಾಜನಾದವನು ಸಂಹರಿಸಲೇಬೇಕು. ಪೂರ್ವದಲ್ಲಿ ಮಂದರ ಎಂಬ ಸ್ತ್ರೀ ಭೂಮಿಯನ್ನು ಸಂಹರಿಸಲು ಪ್ರಯತ್ನಿಸಿದಾಗ ಅವಳನ್ನು ಸಂಹರಿಸಿದರು, ಹಾಗೆಯೇ ಭೃಗು ಮುನಿಗಳ ಪತ್ನಿ ಇಂದ್ರನನ್ನು ಸಂಹರಿಸಲು ತಪಸ್ಸು ಪ್ರಾರಂಭಿಸಿದಾಗ, ಶ್ರೀಮಹಾವಿಷ್ಣುವು ಅವಳನ್ನು ಸಂಹರಿಸಿದ. ಅಂತೆಯೇ ನೀನು ಕೂಡ ತಾಟಕಿಯನ್ನು ಸಂಹರಿಸು.”
“ಪಿತು್ ವಚನ ನಿರ್ದೇಶಾತ್ ಪಿತು್ ವಚನ ಗೌರವಾತ್
ವಚನಂ ಕೌಶಿಕಸ್ಯ ಇತಿ ಕರ್ತವ್ಯಂ ಅವಿಶಂಕಯಾ
ಗೋ ಬ್ರಾಹ್ಮಣ ಹಿತಾರ್ಥಾಯ ದೇಶಸ್ಯ ಚ ಹಿತಾಯ ಚ
ತವ ಚೈವ ಅಪ್ರಮೇಯಸ್ಯ ವಚನಂ ಕುರ್ತುಂ ಉದ್ಯತಃ
ನನ್ನ ತಂದೆ ನೀವು ಏನು ಮಾಡಬೇಕೆಂದರೆ ಅದನ್ನು ಮಾಡಬೇಕೆಂದು ಹೇಳಿದ್ದಾರೆ. ಗುರುಗಳಾದ ನೀವು ಆಜ್ಞಾಪಿಸಿರುವುದರಿಂದ, ಲೋಕರಕ್ಷಣೆಗಾಗಿ, ಗೋಬ್ರಾಹ್ಮಣರನ್ನು, ಇಲ್ಲಿರುವ ಪ್ರಾಣಿಗಳನ್ನು ಕಾಪಾಡುವ ಸಲುವಾಗಿ ತಾಟಕಿಯ ಸಂಹಾರ ಮಾಡುತ್ತೇನೆ”, ಎಂದು ಹೇಳಿ ರಾಮ ತನ್ನ ಧನುಸ್ಸನ್ನು ತೆಗೆದುಕೊಂಡು ಝೇಂಕಾರ ಮಾಡಿದ.
ಆ ಧ್ವನಿಯನ್ನು ಕೇಳಿ, ಅದನ್ನನುಸರಿಸಿ ತಾಟಕಿ ಬಂದಳು. ಅವಳ ರೂಪವನ್ನು ಯಾರಾದರೂ ನೋಡಿದರೆ ಹೃದಯ ನಿಂತು ಸಾಯುತ್ತಿದ್ದರು. ತಾಟಕಿ ಮೊದಲು ವಿಶ್ವಾಮಿತ್ರರ ಮೇಲೆ ದಾಳಿ ಮಾಡಿದಳು. ಅವರು ಕೇವಲ ಹುಂಕಾರ ಮಾಡಿದ ತಕ್ಷಣ ಅವಳು ಸ್ಥಂಭಿತಳಾದಳು. ಮರುಕ್ಷಣದಲ್ಲೇ ಅವರ ಮೇಲೆ ಕಲ್ಲುಗಳ ಮಳೆಯನ್ನೇ ಸುರಿಸಿದಳು. ವಿಶ್ವಾಮಿತ್ರರು, ಇನ್ನು ಅವಳನ್ನು ಉಪೇಕ್ಷಿಸಿದರೆ ತೊಂದರೆಯಾಗುತ್ತದೆಂದು ರಾಮನಿಗೆ ಅವಳನ್ನು ಕೊಲ್ಲಲು ಆದೇಶಿಸಿದರು. ಅವಳು ಎಷ್ಟಾದರೂ ಸ್ತ್ರೀಯಳಾದ್ದರಿಂದ ಅವಳ ಶಕ್ತಿಯನ್ನು ಮಾತ್ರ ಕೊಲ್ಲುವುದಾಗಿ ರಾಮ ಲಕ್ಷ್ಮಣರು ಅವಳ ಕೈ, ಕಾಲು, ಮೂಗು, ಕಿವಿಗಳನ್ನು ಕತ್ತರಿಸಿದರು. ಆದರೆ ಅವಳು ಮಾಯಾರೂಪವನ್ನು ಧರಿಸಿ, ಮಾಯವಾಗಿ, ಭಾರೀ ಶರೀರದಿಂದ ರಾಮನ ಮೇಲೆ ಬಂದಾಗ, ರಾಮನು ಅವಳನ್ನು ತನ್ನ ಬಾಣದಿಂದ ಸಂಹರಿಸಿದ.
ದೇವತೆಗಳು, ತಾಟಕಾಸಂಹಾರದಿಂದ ಹರ್ಷಿತರಾಗಿ ವಿಶ್ವಾಮಿತ್ರರನ್ನು ಅವರಿಗೆ ತಿಳಿದಿರುವ ಅಸ್ತ್ರ ಶಸ್ತ್ರ ವಿದ್ಯೆಗಳನ್ನು ರಾಮ-ಲಕ್ಷ್ಮಣರಿಗೆ ಉಪದೇಶಿಸುವಂತೆ ಕೇಳಿಕೊಂಡರು. ಅಂತೆಯೇ ವಿಶ್ವಾಮಿತ್ರರು ಅವರಿಗೆ ಕಂಕಾಳ, ಘೋರ, ಕಪಾಲ, ಕಂಕಣ, ಹಯಶಿರ, ಕ್ರೌಂಚ, ಇಂದ್ರ, ಬ್ರಹ್ಮಶಿರಸ್ಸು, ಮಾನವ, ವಾರುಣ, ಐಶಿಕ, ಗಾಂಧರ್ವ, ನಾರಾಯಣ, ಸರ್ಪ ಎಂಬ ಅಸ್ತ್ರಗಳನ್ನೂ, ಎರೆಡು ಗದೆಗಳನ್ನೂ, ನಂದನವೆಂಬ ಅದ್ಭುತ ಖಡ್ಗವನ್ನೂ ಉಪದೇಶಿಸಿದರು. ಆ ಅಸ್ತ್ರಗಳು ಪುರುಷ ರೂಪವನ್ನು ಧರಿಸಿ ರಾಮನ ಮುಂದೆ ನಿಂತು ತಾವೇನು ಮಾಡಬೇಕೆಂದು ಅರಿಕೆ ಮಾಡಿಕೊಂಡಾಗ, ರಾಮ, ಅವರೆಲ್ಲರಿಗೂ ತನ್ನ ಮನಸ್ಸಿನಲ್ಲಿರುವಂತೆ ಹೇಳಿ, ತಾನು ಕರೆದಾಗ ಬರುವಂತೆ ಆದೇಶಿಸಿದ. ಮರುದಿನ ರಾಮ ವಿಶ್ವಾಮಿತ್ರರಿಂದ ಆ ಅಸ್ತ್ರಗಳ ಉಪಸಂಹಾರ ವಿದ್ಯೆಗಳನ್ನೂ ಕಲಿತ.
ಅವರು ತಮ್ಮ ಪ್ರಯಾಣವನ್ನು ಮುಂದುವರಿಸಿ, ಒಂದು ಆಶ್ರಮದ ಬಳಿ ಬಂದರು. ಅದರ ಕುರಿತಾದ ರಾಮನ ಪ್ರಶ್ನೆಗೆ ವಿಶ್ವಾಮಿತ್ರರು ವಿವರಿಸಿದರು, “ವೀರೋಚನನ ಕುಮಾರನಾದ ಬಲಿಚಕ್ರವರ್ತಿ ಒಂದು ಬಾರಿ ಇಂದ್ರನ್ನು ನಿಗ್ರಹಿಸಿದ. ಆಗ ಮಹಾವಿಷ್ಣುವು ವಾಮನ ರೂಪವನ್ನು ಧರಿಸಿ ಬಲಿಯನ್ನು ಪಾತಾಳಕ್ಕೆ ತುಳಿದ. ಆ ವಾಮನನು ತಪಸ್ಸು ಮಾಡಿದ ಸ್ಥಳವೇ ಇದು. ಇದನ್ನು ಸಿದ್ಧಾಶ್ರಮವೆನ್ನುತ್ತಾರೆ. ಕಶ್ಯಪ ಪ್ರಜಾಪತಿ ತಪಸ್ಸು ಮಾಡಿದ ಸ್ಥಳವೂ ಇದೆ. ವಿಷ್ಣುವು ಇಂದ್ರನ ತಮ್ಮನಾಗಿ, ಉಪೇಂದ್ರನಾಗಿ, ಹುಟ್ಟಿದ ಸ್ಥಳವೂ ಇದೆ. ನಾನು ಯಾಗ ಮಾಡುತ್ತಿರುವ ಸ್ಥಳವೂ ಇದೆ.”
ಸಿದ್ಧಾಶ್ರಮದಲ್ಲಿ ಯಾಗ ಪ್ರಾರಂಭವಾಯಿತು. ಅದು ೬ ದಿನ, ೬ ರಾತ್ರಿಗಳ ಯಾಗ. ೫ ದಿನಗಳ ಕಾಲ ಯಾಗ ಸುಸೂತ್ರವಾಗಿ ನಡೆಯಿತು. ೬ನೇ ದಿನ ಅಗ್ನಿಹೋತ್ರ ಧಗ್ಗನೆ ಮೇಲೇಳುತ್ತದೆ. ತಕ್ಷಣ ರಾಮ, ಲಕ್ಷ್ಮಣರು ಪ್ರವೃತ್ತರಾದರು. ಮಾರೀಚ ಸುಬಾಹುಗಳೆಂಬ ರಾಕ್ಷಸರು ಕೆಲವು ಸಹಸ್ರ ರಾಕ್ಷಸರ ಜೊತೆ ಅಗ್ನಿಯಲ್ಲಿ ರಕ್ತ ಸುರಿದರು. ಒಡನೆಯೇ, ರಾಮ ಮಾನವಾಸ್ತ್ರವನ್ನು ಮಾರೀಚನ ಮೇಲೆ ಪ್ರಯೋಗಿಸಿದ. ಆ ಏಟಿಗೆ ಮಾರೀಚ ೧೦೦ ಯೋಜನಗಳ ದೂರಕ್ಕೆ ಹೋಗಿ ಬಿದ್ದ. ಆಗ್ನೇಯಾಸ್ತ್ರದಿಂದ ಸುಬಾಹುವನ್ನು ಸಂಹರಿಸಿದ. ಮಿಕ್ಕ ರಾಕ್ಷಸರನ್ನು ವಾಯವ್ಯಾಸ್ತ್ರದಿಂದ ನಿಗ್ರಹಿಸಿದರು. ಯಾಗ ಸುಸೂತ್ರವಾಗಿ ಪೂರ್ತಿಯಾಯಿತು. ವಿಶ್ವಾಮಿತ್ರರು ಆನಂದದಿಂದ ರಾಮನನ್ನು ಆಲಂಗಿಸಿಕೊಂಡರು. ಆ ರಾತ್ರಿ ಅವರೆಲ್ಲಾ ನೆಮ್ಮದಿಯಿಂದ ನಿದ್ರಿಸಿದರು.
Goood
ReplyDelete