೮. ಮಿಥಿಲೆಯ ಕಡೆಗೆ ಪಯಣ - ಕುಶನಾಭನ ಕಥೆ
ತಮ್ಮ ಯಾಗ ಪೂರ್ತಿಯಾದ ಮೇಲೆ ವಿಶ್ವಾಮಿತ್ರರು, “ಮಿಥಿಲಾ ನಗರದಲ್ಲಿ ಜನಕ ಮಹಾರಾಜ ಒಂದು ದೊಡ್ಡ ಯಾಗ ಮಾಡುತ್ತಿದ್ದಾನೆ ನೀವು ಕೂಡ ನನ್ನೊಡನೆ ಬನ್ನಿ”, ಎಂದು ಹೇಳಿ ರಾಮಲಕ್ಷ್ಮಣರ ಜೊತೆ ಮಿಥಿಲಾಪುರದ ಕಡೆಗೆ ತಮ್ಮ ಪ್ರಯಾಣ ಆರಂಭಿಸಿದರು.
ಹಾಗೆ ಅವರು ಪ್ರಯಾಣಿಸುತ್ತಾ ಶೋಣಾ ನದಿ ಪ್ರಾಂತವನ್ನು ಸೇರಿದರು. ಆ ಪ್ರಾಂತವು ಫಲ-ಪುಷ್ಪಗಳಿಂದ ಬಹಳ ಶೋಭಾಯಮಾನವಾಗಿ ಕಂಗಳಿಸುತ್ತಿತ್ತು. ಅದು ಅಷ್ಟು ಆನಂದಮಯವಾಗಿ, ಸುಂದರವಾಗಿರಲು ಕಾರಣವೇನೆಂದು ರಾಮನು ವಿಶ್ವಾಮಿತ್ರರನ್ನು ಕೇಳಲು, ವಿಶ್ವಾಮಿತ್ರರು ಹೀಗೆ ವಿವರಿಸುತ್ತಾರೆ:
“ಪೂರ್ವದಲ್ಲಿ ಬ್ರಹ್ಮ ಪುತ್ರನಾದ ಕುಶನು ರಾಜ್ಯಪಾಲನೆ ಮಾಡುತ್ತಿದ್ದನು. ಆತನಿಗೆ ಕುಶಾಂಬ, ಕುಶನಾಭ, ಅಧೂರ್ತರಜಸ, ವಸುರಾಜ ಎಂಬ ನಾಲ್ಕು ಕುಮಾರರಿದ್ದರು. ಆ ನಾಲ್ಕು ಮಕ್ಕಳಿಗೆ ಯೌವನ ಪ್ರಾಪ್ತವಾದ ಮೇಲೆ ಕುಶನು, ‘ನೀವು ನಾಲ್ವರೂ ನಾಲ್ಕು ನಗರಗಳನ್ನು ನಿರ್ಮಿಸಿ ಅವುಗಳನ್ನು ಧರ್ಮದಿಂದ ಪಾಲನೆ ಮಾಡಿ’ ಎಂದು ಅದೇಶಿಸಿದನು. ಆಗ ಅವರು ಕೌಶಂಬಿ, ಮಹೋದಯ, ಧರ್ಮಾರಣ್ಯ, ಗಿರಿವ್ರಜಪುರ ವೆಂಬ ನಾಕು ನಗರಗಳನ್ನು ನಿರ್ಮಿಸಿ ಪಾಲಿಸುತ್ತಿದ್ದರು. ಪ್ರಸ್ತುತ ನಾವೀಗ ಗಿರಿವ್ರಜಪುರದಲ್ಲಿದ್ದೇವೆ. ಈ ಪಟ್ಟಣವನ್ನು ವಸುರಾಜನು ನಿರ್ಮಿಸಿದನು. ಈ ನಗರವು ೫ ಪರ್ವತಗಳ ಮಧ್ಯದಲ್ಲಿದೆ. ಶೋಣಾನದಿ ಈ ೫ ಪರ್ವತಗಳ ಮಧ್ಯದಲ್ಲಿ ಪ್ರವಹಿಸುತ್ತದೆ. ಹಾಗಾಗಿ ಈ ಪ್ರಾಂತವು ಸಸ್ಯಶ್ಯಾಮಲವಾಗಿದೆ.
ಕುಶನ ಎರಡನೆ ಮಗನಾದ ಕುಶನಾಭನಿಗೆ ಘೃತಾಚಿ ಎಂಬ ಅಪ್ಸರ ಸ್ತ್ರೀಯೊಂದಿಗೆ ನೂರು ಮಂದಿ ಕುಮಾರಿಯರು ಜನಿಸಿದರು. ಎಲ್ಲರೂ ಅಪರೂಪದ ಸೌಂದರ್ಯ ರಾಶಿಯಿಂದ ಮಿಂಚುತ್ತಿದ್ದರು. ಒಮ್ಮೆ ಅವರೆಲ್ಲರೂ ಪರ್ವತದ ಮೇಲೆ ಹಾಡು ಹಾಡುತ್ತಾ, ವೀಣೆಯನ್ನು ನುಡಿಸುತ್ತಾ, ಆನಂದದಿಂದ ಸಮಯ ಕಳೆಯುತ್ತಿದ್ದಾಗ ಅಲ್ಲಿಗೆ ವಾಯುದೇವನು ಬಂದನು. ವಾಯುವು ಅವರನ್ನು ನೋಡಿ ‘ನೀವೆಲ್ಲರೂ ಬಹಳ ಸುಂದರವಾಗಿದ್ದೀರ, ಆದರೆ ನೀವು ಮಾನವರಾದ ಕಾರಣ ನಿಮ್ಮ ಯೌವನದೊಂದಿಗೆ ನಿಮ್ಮ ಅಂದವೂ ಕಾಲಕಳೆದಂತೆ ನಶಿಸುತ್ತದೆ, ಹಾಗಾಗಿ ನನ್ನನ್ನು ನೀವು ವರಿಸಿದರೆ ನೀವೆಲ್ಲರೂ ಚಿರಯೌವನದಿಂದಿರುತ್ತೀರ’ ಎಂದು ಪ್ರಲೋಭಿಸಲು ಯತ್ನಿಸಿದನು. ತಕ್ಷಣವೇ ಆ ನೂರು ಮಂದಿಯೂ ಏಕ ಕಂಠದಿಂದ,
‘ಕುಶನಾಭ ಸುತಾಃ ದೇವಂ ಸಮಸ್ತಾ ಸತ್ತಮ |
ಸ್ಥಾನಾತ್ ಚ್ಯಾಪಯತುಂ ದೇವಂ ರಕ್ಷಾಮಃ ತು ತಪೋ ವಯಂ ||
ಮಾ ಭೂತ್ ಸಕಾಲೋ ದುರ್ಮೇಧಃ ಪಿತರಂ ಸತ್ಯವಾದಿನಂ |
ಅವಮನ್ಯಸ್ವ ಸ್ವ ಧರ್ಮೇಣ ಸ್ವಯಂ ವರಂ ಉಪಾಸ್ಮಹೇ ||
ಪಿತಾಹಿ ಪ್ರಭುರ್ ಅಕಸ್ಮಾಕಂ ದೈವತಂ ಪರಮಂ ಚ ಸಃ |
ಯಸ್ಯ ನೋ ದಾಸ್ಯಾತಿ ಪಿತಾ ಸ ನೋ ಭರ್ತಾ ಭವಿಶ್ಯತಿ ||
ನಮ್ಮಲ್ಲಿ ಅಪಾರವಾದ ತಪಃಶಕ್ತಿ ಉಂಟು, ಹಾಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಲ್ಲೆವು. ನಾವು ಬೇಕೆಂದರೆ ನೀನು ಗರ್ವದಿಂದ ಹೇಳಿಕೊಳ್ಳುತ್ತಿರುವ ದೇವತೆಯ ಸ್ಥಾನದಿಂದ ನಿನ್ನನ್ನು ತೊಲಗಿಸಬಹುದು. ನಾವು ವಿವಾಹವಾಗುವುದಾದರೆ, ಅದು ಧರ್ಮಾತ್ಮನಾದ ನಮ್ಮ ತಂದೆಯವರು ನಿರ್ಧರಿಸಿದ ವರನೊಂದಿಗೆ ನಡೆಯುತ್ತದೆಯೇ ಹೊರತು ನಮ್ಮ ನಿರ್ಣಯದಿಂದಲ್ಲ. ಯಾವ ರಾಜ್ಯದಲ್ಲಿಯೂ ಸ್ತ್ರೀ ತನ್ನ ಪತಿಯನ್ನು ತಾನೇ ಸ್ವಂತವಾಗಿ ನಿರ್ಧರಿಸಬಾರದು’ ಎಂದು ನುಡಿದರು. ಅವರ ಮಾತಿನಿಂದ ಆಗ್ರಹಗೊಂಡ ವಾಯುದೇವನು ಆ ನೂರು ಕನ್ಯೆಯರ ಶರೀರ ಪ್ರವೇಶಿಸಿ ಅವರ ಅವಯವಗಳಿಗೆ ಸಂಕೋಚತ್ವವನ್ನು ಕಲ್ಪಿಸಿದ. ಅದರಿಂದ ಅವರೆಲ್ಲರೂ ಅವಯವಗಳ ಶಕ್ತಿಯನ್ನು ಕಳೆದುಕೊಂಡರು.
ನಂತರ ಆ ಕನ್ಯೆಯರು ಕುಶನಾಭನಿಗೆ ನಡೆದ ವೃತ್ತಾಂತವನ್ನು ಹೇಳಿದರು. ಕುಶನಾಭನು ತನ್ನ ಕುಮಾರಿಯರಿಗೆ ‘ಅಮ್ಮಾ! ನಿಮಗೆ ಈ ಸ್ಥಿತಿಯನ್ನು ತಂದ ವಾಯುದೇವನನ್ನು ಶಪಿಸದೆ ಸಹನೆಯನ್ನು ಮೆರೆದಿದ್ದೀರಿ, ನನಗೆ ಬಹಳ ಸಂತೋಷವಾಯಿತು
ಕ್ಷಮಾ ದಾನ್ಂ ಕ್ಷಮಾ ಸತ್ಯಂ ಕ್ಷಮಾ ಯಜ್ಞಃ ಚ ಪುತ್ರಿಕಾಃ |
ಕ್ಷಮಾ ಯಶಃ ಕ್ಷಮಾ ಧರ್ಮಃ ಕ್ಷಮಾಯಂ ವಿಷ್ಠಿತಂ ಜಗತ್ ||
ಸ್ತ್ರೀಗೆ ಸಹನೆಯೊಂದು ಆಭರಣ, ನೀವು ನೂರು ಮಂದಿಯೂ ಒಂದೇ ಸಾರಿ ಸಹನೆಯನ್ನು ಮೆರೆದಿದ್ದೀರ, ನಿಮ್ಮಲ್ಲಿ ಒಬ್ಬರಿಗೂ ಕೋಪ ಬರಲಿಲ್ಲ, ಇದೇ ನಿಮ್ಮ ಸೌಂದರ್ಯ. ಸಹನೆಯೇ ದಾನ, ಸಹನೆಯೇ ಎಲ್ಲದಕ್ಕಿಂತ ಬಹುದೊಡ್ಡ ಕೀರ್ತಿ, ಸಹನೆಗೆ ಮೀರಿದ ಯಜ್ಞವಿಲ್ಲ, ಸಹನೆಗೆ ಮೀರಿದ ಸತ್ಯವಿಲ್ಲ, ಸಹನೆಗೆ ಮೀರಿದ ಧರ್ಮವಿಲ್ಲ, ಆ ಸಹನೆಯಿಂದಲೇ ಈ ಭೂಮಿ ನಿಂತಿದೆ ‘ ಎಂದು ಹೇಳಿದ.”
ಈ ವೃತ್ತಾಂತವನ್ನು ಕೇಳುತ್ತಾ ವಿಶ್ವಾಮಿತ್ರರೊಂದಿಗೆ ರಾಮ-ಲಕ್ಷ್ಮಣರು ಮುಂದಿನ ಪ್ರಯಾಣ ಮುಂದುವರೆಸಿ, ಗಂಗಾ ನದಿಯನ್ನು ಸಮೀಪಿಸಿದರು. ಅಲ್ಲಿದ್ದ ಋಷಿಗಳು, ಗಂಗೆಯಲ್ಲಿ ತಮ್ಮ ಪಿತೃಗಳಿಗೆ ತರ್ಪಣ ಕೊಟ್ಟು, ಅಗ್ನಿಹೋತ್ರ ಮಾಡಿ, ಮಿಕ್ಕಿದ ಹವಿಸ್ಸನ್ನು ಅಮೃತದಂತೆ ಭಾವಿಸಿ ತಿನ್ನುತ್ತಿದ್ದರು. ವಿಶ್ವಾಮಿತ್ರರು ಕುಶನಾಭನ ಕಥೆ ಮುಂದುವರಿಸಿರು:
"ಕುಶನಾಭನಿಗೆ ೧೦೦ ಮಂದಿ ಪುತ್ರಿಯರಿದ್ದರೂ, ಗಂಡು ಮಕ್ಕಳಿರಲಿಲ್ಲ. ಗಂಡು ಮಗುವಿಗಾಗಿ ಕುಶನಾಭ ಪುತ್ರಕಾಮೇಷ್ಠಿಯನ್ನು ಆರಂಭಿಸಿದ. ಯಾಗ ನಡೆಯಬೇಕಾದರೆ ಅವನ ತಂದೆಯಾದ ಕುಶನು ಬಂದು, ನಿನ್ನ ಆಶಯ ಖಂಡಿತವಾಗಿಯೂ ಈಡೇರುತ್ತದೆ. ಗಾಧಿ ಎಂಬುವವನು ನಿನಗೆ ಪುತ್ರನಾಗಿ ಹುಟ್ಟಿ ನಮ್ಮ ವಂಶದ ಹೆಸರನ್ನು ಉಳಿಸುತ್ತಾನೆ. ಆ ಗಾಧಿಯ ಪುತ್ರನೇ ನಾನು.
ಸ ಪಿತಾ ಮಮ ಕಾಕುತ್ಥ್ಯ ಗಾಧಿ ಪರಮ ಧಾರ್ಮಿಕಃ
ಕುಶ ವಂಶ ಪ್ರಸೂತೋ ಅಸ್ಮಿ ಕೌಶಿಕೋ ರಘುನಂದನ
ನಾನು ಕುಶಾನ ವಂಶದವನಾದ್ದರಿಂದ ನನ್ನನ್ನು ಕೌಶಿಕನೆನ್ನುತ್ತಾರೆ. ನನ್ನ ಅಕ್ಕ ಸತ್ಯವತಿ. ಅವಳ ಗಂಡ ಋಚಕ. ಕೆಲವು ಕಾಲದ ನಂತರ ನನ್ನ ಬಾವ ಇಹಲೋಕ ತ್ಯಜಿಸಿದರು. ಅವರೊಂದಿಗೆ ನನ್ನ ಅಕ್ಕ ಕೂಡ ಸಹಗಮನ ಮಾಡಿದಳು. ಅವಳು ಇಂದಿಗೂ ಹಿಮಾಲಯದಲ್ಲಿ ಕೌಶಿಕಿ ಎಂಬ ನದಿಯಾಗಿ ಪ್ರವಹಿಸುತ್ತಾಳೆ. ಆದ್ದರಿಂದಲೇ ನಾನು ಹೆಚ್ಚಾಗಿ ಹಿಮಾಲಯದಲ್ಲಿರುತ್ತೇನೆ. ಸಿದ್ದಾಶ್ರಮಕ್ಕೆ ಯಾಗ ಮಾಡಲು ಬಂದಿದ್ದೆ. ನಿನ್ನ ತೇಜಸ್ಸಿನಿಂದ ರಕ್ಷಿಸಲ್ಪಟ್ಟೆ".
ಇದನ್ನು ಕೇಳಿ ಅಲ್ಲಿದ್ದ ಋಷಿಗಳೆಲ್ಲರೂ,
"ವಿಶೇಷೇಣ ಭವಾನ್ ಏವ ವಿಶ್ವಾಮಿತ್ರ ಮಹಾಯಶಃ
ಕೌಶಿಕೀ ಸರಿತಾಂ ಶ್ರೇಷ್ಠಃ ಕುಲ ಉದ್ಯೋತಕರಿ ತವ
ನಿನ್ನಂಥವನು ಹುಟ್ಟಿದ್ದರಿಂದ ನಿನ್ನ ವಂಶ ಧನ್ಯವಾಯಿತು. ನಿನ್ನ ಅಕ್ಕನಿಂದ ಅದು ಪರಮ ಪಾವನವಾಯಿತು" ಎಂದರು.
Comments
Post a Comment