೧೦. ಗಂಗಾವತರಣ
“ಗಂಗೆ ಭೂಮಿಗೆ ಬರಲು ಕಾರಣವೇನು?”, ರಾಮ ವಿಶ್ವಾಮಿತ್ರರನ್ನು ಕೇಳಿದ.
ವಿಶ್ವಾಮಿತ್ರರು: “ಬಹಳ ಹಿಂದೆ ಅಯೋಧ್ಯಾನಗರವನ್ನು ನಿನ್ನ ವಂಶದವನೇ ಆದ ಸಗರನು ಆಳುತಿದ್ದನು. ಅವನಿಗೆ ಕೇಶಿನಿ, ಸುಮತಿಯರೆಂಬ ಇವರು ಪತ್ನಿಯರು. ಸುಮತಿ ಗರುಕ್ಮಂತನ ಸೋದರಿ. ಸಗರ ಪುತ್ರ ಸಂತಾನಕ್ಕಾಗಿ ತನ್ನ ಪತ್ನಿಯರ ಜೊತೆ ಹಿಮಾಲಯದ ಭೃಗು ಪರ್ವತದಲ್ಲಿ ೧೦೦ ವರ್ಷಗಳ ಕಾಲ ತಪಸ್ಸನ್ನಾಚರಿಸಿದ. ಭೃಗು ಮಹರ್ಷಿಗಳು ಸಂತೋಷಪಟ್ಟು ‘ನಿನ್ನ ಇಬ್ಬರು ಪತ್ನಿಯರಲ್ಲಿ ಒಬ್ಬಳಿಗೆ ವಂಶೋದ್ಧಾರಕನಾದ ಪುತ್ರ ಜನಿಸುತ್ತಾನೆ, ಮತ್ತೊಬ್ಬಳಿಗೆ ೬೦ ಸಾವಿರ ಮಹಾ ಉತ್ಸಾಹವಂತರಾದ ಪುತ್ರರು ಹುಟ್ಟುತ್ತಾರೆ’ ಎಂದು ವರ ಕೊಟ್ಟರು. ಆದರೆ ಯಾರಿಗೆ ಯಾವ ಮಕ್ಕಳು ಬೇಕೆಂಬುದನ್ನು ಅವರೇ ನಿರ್ಧರಿಸಿಕೊಳ್ಳಲು ಬಿಟ್ಟರು. ಕೌಶಿಕಿ ತನಗೆ ವಂಶೊದ್ಧಾರಕನಾದ ಮಗ ಬೇಕೆಂದು ಕೇಳಿದಳು. ಸುಮತಿ ೬೦ ಸಾವಿರ ಮಕ್ಕಳನ್ನು ಕೇಳಿದಳು. ಅಂತೆಯೇ ಕೌಶಿಕಿಗೆ ಅಸಮಂಜನೆಂಬ ಮಗ ಹುಟ್ಟಿದ. ಸುಮತಿಗೆ ಒಂದು ಸೋರೇಕಾಯಿ ಹುಟ್ಟಿತು. ಅದು ಒಡೆದು ಅದರಿಂದ ೬೦ ಸಾವಿರ ಚಿಕ್ಕ, ಚಿಕ್ಕ ಮಕ್ಕಳು ಬಂದರು. ಅವರನ್ನು ಕುಂಡಲಿಗಳಲ್ಲಿ ಇಟ್ಟು ಬೆಳೆಸಿದರು. ಅವರನ್ನೆಲ್ಲಾ ಸಗರರು ಎಂದು ಕರೆಯುತ್ತಾರೆ. ಅಸಮಂಜನು ನಿತ್ಯ ತನ್ನ ರಾಜ್ಯದಲ್ಲಿನ ಮಕ್ಕಳನ್ನು ಸರಯೂ ನದಿಯಲ್ಲಿ ಬಿಟ್ಟು ಅವರ ಮರಣಕ್ಕೆ ಕಾರಣವಾದ. ಕೆಲ ಸಮಯದಲ್ಲಿ ಆ ವಿಷಯ ರಾಜನಿಗೆ ತಿಳಿಯಿತು.
ಏವಂ ಪಾಪ ಸಮಾಚಾರಃ ಸಜ್ಜನ ಪ್ರತಿಬಾಧಕಃ
ಪಾರಾಣಾಂ ಅಹಿತೇ ಯುಕ್ತಃ ಪಿತ್ರಾ ನಿರ್ವಾಸಿತಃ ಪುರಾತ್
ತಪ್ಪು ಮಾಡಿದವನು ಮಗನಾದರೂ ಸರಿ, ಅವನಿಂದ ಪ್ರಜೆಗಳಿಗೆ ಕೇಡಾದರೆ ಅವನಿಗೆ ಶಿಕ್ಷೆಯಾಗಬೇಕೆಂದು ಅಸಮಂಜನನ್ನು ರಾಜ್ಯದಿಂದ ಬಹಿಷ್ಕರಿಸಿ, ಅವನ ಪುತ್ರನಾದ ಅಂಶುಮಂತನನ್ನು ತನ್ನ ಬಳಿ ಇಟ್ಟುಕೊಂಡ. ಕೆಲ ಕಾಲದ ನಂತರ ಸಗರನು ಅಶ್ವಮೇಧ ಯಾಗ ಮಾಡಿ ಕುದುರೆಯನ್ನು ಬಿಟ್ಟ. ಆ ಕುದುರೆಯನ್ನು ಇಂದ್ರನು ಅಪಹರಿಸಿದ. ಅಶ್ವದ ರಕ್ಷಣೆ ಹೋಗಿದ್ದ ಅಂಶುಮಂತನು ಈ ವಿಷಯವನ್ನು ಸಗರನಿಗೆ ತಿಳಿಸಿದ. ಅಶ್ವ ಅಪಹರಿಸಲ್ಪಟ್ಟರೆ ಕೆಟ್ಟ ಪರಿಣಾಮಗಳಾಗುತ್ತವೆ ಎಂದು ಯಾಗ ಮಾಡುತ್ತಿದ್ದ ಪಂಡಿತರು ಹೇಳಿದರು. ಸಗರನು ತನ್ನ ೬೦ ಸಾವಿರ ಮಕ್ಕಳನ್ನು ಕರೆಸಿ, ’ಈ ಭೂಮಿ ೬೦ ಸಾವಿರ ಯೋಜನಗಳಿವೆ. ಆದ್ದರಿಂದ ನೀವು ಒಬ್ಬೊಬ್ಬರು ಒಂದೊಂದು ಯೋಜನದಂತೆ ಭೂಮಿಯನ್ನು ಪೂರ್ತಿ ಹುಡುಕಿ.’ ಎಂದು ಕಳಿಸಿದ. ಅವರು ಭೂಮಿಯನ್ನು ಅಗಿಯಲು ಪ್ರಾರಂಭಿಸಿದರು. ಅದನ್ನು ಗಮನಿಸಿದ ದೇವತೆಗಳು ಬ್ರಹ್ಮನನ್ನು ಕುರಿತು, ‘ದೇವಾ! ಸಗರರು ಭೂಮಿಯನ್ನು ಅಗಿಯಲು ಪ್ರಾರಂಭಿಸಿದ್ದಾರೆ. ಇದರಿಂದ ಪ್ರಾಣಹಾನಿಯಾಗುತ್ತಿದೆ. ಈಗ ಏನು ಮಾಡಬೇಕು?’ ಎಂದು ಕೇಳುತ್ತಾರೆ. ಆಗ ಬ್ರಹ್ಮದೇವರು,
‘ಕಾಪಿಲಂ ರೂಪಂ ಆಸ್ಥಾಯ ಧಾರಯತ್ಯ ಅನಿಶಂ ಧರಾಂ
ತಸ್ಯ ಕೋಪಾಗ್ನಿನಾ ದಗ್ಧಾ ಭವಿಷ್ಯಂತಿ ನೃಪಾತ್ಮಜಾ
ನೀವು ಭಯಪಡಬೇಡಿ, ಈ ಭೂಮಿ ಮಹಾವಿಷ್ಣುವಿನದು. ವಿಷ್ಣು ತಾನೇ ರಕ್ಷಿಸಿಕೊಳ್ಳುತ್ತಾನೆ. ಈಗ ಅವನು ಪಾತಾಳ ಲೋಕದಲ್ಲಿ ಕಪಿಲ ಮಹರ್ಷಿಯಾಗಿ ತಪಸ್ಸನ್ನಾಚರಿಸುತ್ತಿದ್ದಾನೆ.’ ಎಂದು ಹೇಳಿ ಕಳಿಸಿದರು.
ಆ ಸಗರರು ಎಷ್ಟು ಹುಡುಕಿದರೂ ಅಶ್ವ ಕಾಣಿಸದಾದಾಗ ಸಗರನ ಹತ್ತಿರ ಬಂದು ನಡೆದುದ್ದನ್ನು ನಿವೇದಿಸಿದರು. ಸಗರನು ತನಗೆ ಅಶ್ವ ಖಂಡಿತವಾಗಿ ಬೇಕೆಂದು ಪಾತಾಳವನ್ನು ಹುಡುಕಲು ಹೇಳಿದ. ಅಂತೆಯೇ ಅವರು ಪಾತಾಳವನ್ನು ಅಗೆಯಲು ಪ್ರಾರಂಭಿಸಿದರು. ಹಾಗೆ ಅಗೆಯುತ್ತಿದ್ದ ಅವರಿಗೆ ಭೂಮಿಯ ಪೂರ್ವ ದಿಕ್ಕನ್ನು ಹೊತ್ತಿದ್ದ ದಿಶಾ ಎಂಬ ಒಂದು ಆನೆ ಕಾಣಿಸಿತು. ಆ ಆನೆಗೆ ಪ್ರದಕ್ಷಿಣೆ ಮಾಡಿ ಮುಂದಕ್ಕೆ ಹೋದಾಗ ದಕ್ಷಿಣ ದಿಕ್ಕಿನಲ್ಲಿ ಅವರಿಗೆ ಮಹಾಪದ್ಮವೆಂಬ ಆನೆ, ಪಶ್ಚಿಮದಲ್ಲಿ ಸೋಮನಸವೆಂಬ ಆನೆ ಮತ್ತು ಉತ್ತರದಲ್ಲಿ ಭದ್ರವೆಂಬ ಆನೆಗಳು ಕಾಣಿಸಿದವು. ಅವಕ್ಕೆಲ್ಲಾ ಪ್ರದಕ್ಷಿಣೆ ಹಾಕಿದರು. ಆದರೆ ಅವರಿಗೆ ನಾಲ್ಕು ದಿಕ್ಕುಗಳಲ್ಲಿ ಅಶ್ವ ಎಲ್ಲಿಯೂ ಕಾಣಿಸಲಿಲ್ಲ. ನಂತರ ಅವರು ಈಶಾನ್ಯದ ಕಡೆ ಅಗೆಯಲು ಪ್ರಾರಂಭಿಸುತ್ತಾರೆ. ಅಲ್ಲಿ ಅವರಿಗೆ ಒಂದು ಆಶ್ರಮದಲ್ಲಿ ಸನಾತನನಾದ ವಿಷ್ಣುವು ಕಪಿಲ ಮಹರ್ಷಿಯಾಗಿ ತಪಸ್ಸನ್ನಾಚರಿಸುತ್ತಾ ಕಾಣಿಸಿದ. ಪಕ್ಕದಲ್ಲೇ ಯಾಗಾಶ್ವವೂ ಕಾಣಿಸಿತು. ಅಶ್ವವನ್ನು ಕಳವು ಮಾಡಿದವನು ಮಹರ್ಷಿಯೇ ಎಂದು ಭಾವಿಸಿದ ಸಗರರು ಅವರನ್ನು ಕೊಲ್ಲಲು ಮುಂದಾದರು. ಮಹರ್ಷಿಗಳು ಒಂದು ಹುಂಕಾರ ಮಾಡಿದಾಕ್ಷಣ ೬೦ ಸಾವಿರ ಮಂದಿಯೂ ಸತ್ತು ಬೂದಿಯಾದರು. ಎಷ್ಟು ದಿನವಾದರೂ ಸಗರರು ಹಿಂತಿರುಗದ ಕಾರಣ ಸಗರನು ಅಂಶುಮಂತನನ್ನು ಹುಡುಕಲು ಕಳಿಸಿದ. ಅವನು ತನ್ನ ಚಿಕ್ಕಪ್ಪಂದಿರು ಹೋದ ದಾರಿಯಲ್ಲಿಯೇ ಪ್ರಯಾಣಿಸಿ ಕಪಿಲ ಮಹರ್ಷಿಯ ಆಶ್ರಮಕ್ಕೆ ಬಂದ. ತನ್ನ ಚಿಕ್ಕಪ್ಪಂದಿರ ಭಸ್ಮವನ್ನು ನೋಡಿ ದುಃಖಪಟ್ಟು, ಅವರ ಉತ್ತರಕ್ರಿಯೆಗಳಿಗಾಗಿ ನೀರನ್ನು ತರಲು ಹೊರಟುನಿಂತಾಗ, ಸಗರರ ಸೋದರಮಾವನಾದ ಗರುಕ್ಮಂತನು ಪ್ರತ್ಯಕ್ಷವಾಗಿ, 'ಈ ಭೂಮಿಯ ಮೇಲಿನ ಯಾವ ನೀರಿನಿಂದ ತರ್ಪಣ ಕೊಟ್ಟರೂ ಸಗರರಿಗೆ ಸ್ವರ್ಗ ಪ್ರಾಪ್ತವಾಗುವುದಿಲ್ಲ. ಅವರಿಗೆ ಸ್ವರ್ಗ ಸಿಗಬೇಕೆಂದರೆ ಸ್ವರ್ಗದಲ್ಲಿ ಪ್ರವಹಿಸುವ ಗಂಗೆಯ ನೀರಿನಿಂದಲೇ ತರ್ಪಣ ಕೊಡಬೇಕು' ಎಂದು ಹೇಳಿದ. ಸರಿ ಎಂದು ಯಾಗಾಶ್ವವನ್ನು ತೆಗೆಕೊಂಡು ಬಂದು ಅಶ್ವಮೇಧವನ್ನು ಪೂರ್ಣಗೊಳಿಸಿದರು. ತನ್ನ ಪುತ್ರರ ಮರಣದಿಂದ ಸಗರನು ಬಹಳ ದುಃಖಿಸಿ, ಸುಮಾರು ೩೦ ಸಾವಿರ ವರ್ಷಗಳು ಜೀವಿಸಿ ತನ್ನ ಪ್ರಾಣ ತ್ಯಾಗ ಮಾಡಿದ. ಅವನ ನಂತರ ಅಂಶುಮಂತನು ೩೨ ಸಾವಿರ ವರ್ಷಗಳ ಕಾಲ ತಪಸ್ಸುಮಾಡಿ ಸಾವನ್ನಪ್ಪಿದ. ಅವನ ನಂತರ ದಿಲೀಪನು ೩೦ ಸಾವಿರ ವರ್ಷ ರಾಜ್ಯಭಾರ ಮಾಡಿದರೂ ಗಂಗೆಯನ್ನು ಭೂಮಿಗೆ ತರಲು ಸಾಧ್ಯವಾಗಲಿಲ್ಲ. ಅವನ ನಂತರ ಬಂದ ಭಗೀರಥನು ತನ್ನ ರಾಜ್ಯವನ್ನೆಲ್ಲ ಮಂತ್ರಿಗಳಿಗೆ ಕೊಟ್ಟು ಸಾವಿರ ವರ್ಷಗಳ ಕಾಲ ನಿರಂತರ ತಪಸ್ಸನ್ನಾಚರಿಸಿದಾಗ ಬ್ರಹ್ಮದೇವರು ಪ್ರತ್ಯಕ್ಷವಾದರು. ಅವರನ್ನು ಕುರಿತು ಭಗೀರಥನು, 'ನನಗೆ ಕುಮಾರರಿಲ್ಲ. ಆದ್ದರಿಂದ ನನ್ನ ವಂಶ ಮುಗಿಯದಂತೆ ನನಗೆ ಪುತ್ರ ಸಂತಾನವಾಗುವಂತೆ ಹರಸು ಮತ್ತು ನನ್ನ ಪಿತೃಗಳಿಗೆ ಸ್ವರ್ಗ ಪ್ರಾಪ್ತಿಯಾಗಲು ಗಂಗೆಯನ್ನು ಭೂಮಿಗೆ ಕಳಿಸು', ಎಂದು ವರ ಬೇಡಿದರು. ಬ್ರಹ್ಮದೇವರು, 'ನಿನ್ನ ಮೊದಲ ಕೋರಿಕೆಯನ್ನು ಈಡೇರಿಸುತ್ತೇನೆ. ಆದರೆ ಗಂಗೆಯನ್ನು ಭೂಮಿಗೆ ಬಿಟ್ಟರೆ ಅವಳನ್ನು ಹಿಡಿಟ್ಟುಕೊಳ್ಳುವವರು ಶಿವನ ಹೊರತು ಯಾರೂ ಇಲ್ಲ. ಶಿವನನ್ನು ಕುರಿತು ತಪಸ್ಸು ಮಾಡು. ಅವನು ಒಪ್ಪಿಕೊಂಡರೆ ಗಂಗೆಯನ್ನು ಭೂಮಿಗೆ ಬಿಡುತ್ತೇನೆ' ಎಂದು ಹೇಳಿ ಅಂತರ್ಧಾನನಾದರು.
ಭಗೀರಥನು ತನ್ನ ಹೆಬ್ಬರಿಳಿನ ಮೇಲೆ ನಿಂತು ಶಿವನಿಗಾಗಿ ಒಂದು ವರ್ಷ ತಪಸ್ಸು ಮಾಡಿದ. ಶಿವನು ಪ್ರತ್ಯಕ್ಷನಾಗಿ, ‘ನಿನ್ನ ಕೋರಿಕೆಯಂತೆ ನಾನು ಗಂಗೆಯನ್ನು ನನ್ನ ಶಿರಸ್ಸಿನ ಮೇಲೆ ಧರಿಸುತ್ತೇನೆ’ ಎಂದು ಹೇಳಿ, ಹಿಮಾಲಯದ ಮೇಲೆ ನಿಂತು, ತನ್ನ ಎರಡೂ ಕೈಗಳನ್ನು ನಡುವಿನ ಮೇಲಿರಿಸಿ, ಕಾಲನ್ನಗಲಿಸಿ, ತನ್ನ ಜಟೆಯನ್ನು ಬಿಡಿಸಿ, ಗಂಗೆಗಾಗಿ ಆಕಾಶದೆಡೆಗೆ ನೋಡಿದ. ಗಂಗೆಯು, ‘ಈ ಶಿವನೇನು ನನ್ನನ್ನು ಹಿಡಿಯಬಲ್ಲನೇ? ಪ್ರವಾಹದೊಂದಿಗೆ ಈ ಶಂಕರನನ್ನು ಪಾತಳದವರೆಗೆ ಕೊಂಡೊಯ್ಯಬಲ್ಲೆನು’ ಎಂದು ಭ್ರಮಿಸಿ, ಆಕಾಶದಿಂದ ಶಿವನ ಜಟೆಯೊಳಕ್ಕೆ ರಭಸವಾಗಿ ಜಾರಿದಳು. ಹಾಗೆ ಗಂಗೆಯು ಒಂದು ವರ್ಷ ಕಳೆಯುವವರೆಗೂ ಬೀಳುತ್ತಿದ್ದಳು. ಆದರೆ ಶಂಕರನ ಶಿರಸ್ಸಿನಿಂದ ಒಂದು ಹನಿಯೂ ಭೂಮಿಯ ಮೇಲೆ ಬೀಳಲಿಲ್ಲ. ಗಂಗೆಯು ಶಿವನ ಜಟೆಯಲ್ಲಿಯೇ ಸೇರಿಕೊಂಡಿದ್ದಳು. ನಂತರ ಭಗೀರಥನು ಶಂಕರನನ್ನು ಪ್ರಾರ್ಥಿಸಲು ಗಂಗೆಯನ್ನು ಬಿಂದು ಸರೋವರದಲ್ಲಿ ಬಿಟ್ಟ. ಆಗ ಗಂಗೆಯು ಹ್ಲಾದಿನಿ, ಪಾವನಿ, ನಳಿನಿ ಎನ್ನುವ ಮೂರು ಭಾಗವಾಗಿ ಪೂರ್ವಕ್ಕೂ, ಸುಚಕ್ಷು, ಸಿಂಧು, ಸೀತಾ, ಎನ್ನುವ ಮೂರುಭಾಗವಾಗಿ ಪಶ್ಚಿಮಕ್ಕೂ ಹರಿದಳು. ಏಳನೇ ಭಾಗವಾಗಿ ಭಗೀರಥನ ಹಿಂದೆ ರಭಸವಾಗಿ ಹೋದಳು. ರಥದಲ್ಲಿ ಭಗೀರಥನು ಮುಂದೆ ನಡೆಯುತ್ತಿದ್ದರೆ ಅವನ ಹಿಂದೆ ಗಂಗೆಯು ವೇಗವಾಗಿ ಹೋದಳು. ಗಂಗೆಯ ಜೊತೆಗೆ ಅದರಲ್ಲಿದ್ದ ಮೊಸಳೆ, ಆಮೆ, ಮೀನು ಮುಂತಾದ ಜಲಚರಗಳೂ ಪ್ರವಹಿಸಿದವು. ಈ ಅಪರೂಪವಾದ ದೃಶ್ಯಕ್ಕೆ ಸಾಕ್ಷಿಯಾಗಿ ದೇವತೆಗಳು ಆಕಾಶದಲ್ಲಿ ನಿಂತರು. ಪಾಪವನ್ನು ಮಾಡಿದವರು ಗಂಗೆಯಲ್ಲಿ ಮುಳುಗಿ ಪಾಪವನ್ನು ಕಳೆದುಕೊಂಡರು. ಇನ್ನೂ ಕೆಲವರು ಶಂಕರನ ಪಾದದ ಬಳಿ ಪ್ರವಹಿಸುತ್ತಿದ್ದ ಗಂಗಾ ಜಲವನ್ನು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಂಡರು. ಹೀಗೆ ಗಂಗೆಯು ರಭಸದಿಂದ ಹರಿಯುತ್ತಿದ್ದಾಗ ಯಾಗವನ್ನು ಮಾಡುತ್ತಿದ್ದ ಜುಹ್ನುಮಹರ್ಷಿಯ ಆಶ್ರಮವು ಆ ರಭಸಕ್ಕೆ ಕೊಚ್ಚಿ ಹೋಯಿತು. ಕೋಪಿಸಿದ ಜುಹ್ನು ಮಹರ್ಷಿಯು ಗಂಗೆಯನ್ನು ಒಂದೇ ಬಾರಿಗೆ ನುಂಗಿ ಬಿಟ್ಟರು. ಭಗೀರಥನು ಹಿಂತಿರುಗಿ ನೋಡಲು, ಅವಳು ತನ್ನನ್ನು ಅನುಸರಿಸಿ ಬರದಿರುವುದನ್ನು ಕಂಡು, ಜುಹ್ನು ಮಹರ್ಷಿಯ ಕಾಲಮೇಲೆ ಬಿದ್ದು ಬೇಡಿದಾಗ ಋಷಿಯು ತಮ್ಮ ತೊಡೆಯಿಂದ ಗಂಗೆಯನ್ನು ಬಿಟ್ಟರು. ಜುಹ್ನು ಮಹರ್ಷಿಯ ತೊಡೆಯಿಂದ ಹೊರಬಂದ ಕಾರಣದಿಂದ ಗಂಗೆಗೆ ಜಾಹ್ನವಿ ಎಂದೂ ಕರೆಯುತ್ತಾರೆ. ಹೀಗೆ ಗಂಗೆಯು ಭಗೀರಥನನ್ನು ಪಾತಾಳದ ವರೆಗೂ ಹಿಂಬಾಲಿಸಿ, ಆತನ ಪಿತೃ ದೇವತೆಗಳ ಭಸ್ಮದ ಮೇಲೆ ಹರಿದಳು. ಗಂಗೆಯ ಸ್ಪರ್ಶದಿಂದ ಆ ಸಗರರಿಗೆ ಸ್ವರ್ಗ ಪ್ರಾಪ್ತಿಯಾಯಿತು. ಸ್ವರ್ಗದಲ್ಲಿ ಪ್ರವಹಿಸಿದ್ದಕ್ಕಾಗಿ ಗಂಗೆಗೆ ಮಂದಾಕಿನಿ ಎಂದೂ, ಭೂಮಿಯ ಮೇಲೆ ಪ್ರವಹಿಸಿದ್ದಕ್ಕಾಗಿ ಭಾಗೀರಥಿ ಎಂದೂ, ಪಾತಾಳದಲ್ಲಿ ಪ್ರವಹಿಸಿದ್ದಕ್ಕಾಗಿ ಭಗವತಿಯೆಂದೂ ಕರೆಯುತ್ತಾರೆ.”
Comments
Post a Comment