೧೧. ವಿಶಾಲ ನಗರ

ರಾತ್ರಿ ಅವರು ಅಲ್ಲೇ ಕಳೆದು, ಮರುದಿನ ಗಂಗೆಯನ್ನು ದಾಟಿ ವಿಶಾಲ ನಗರವನ್ನು ಸೇರಿಕೊಂಡರು. ವಿಶ್ವಾಮಿತ್ರರು ವಿಶಾಲ ನಗರದ ಬಗ್ಗೆ ರಾಮಲಕ್ಷ್ಮಣರಿಗೆ ಹೇಳಿದರು: 
“ಕೃತ(ಸತ್ಯ) ಯುಗದಲ್ಲಿ ಕಶ್ಯಪ ಪ್ರಜಾಪತಿ ಮತ್ತು ಅದಿತಿ-ದಿತಿ ಅನ್ನುವ ಇಬ್ಬರು ಪತ್ನಿಯರ ಸಂತಾನವಾದ ದೇವತೆಯರು ಮತ್ತು ದೈತ್ಯರು ಬಹಳ ಸ್ನೇಹದಿಂದಲೂ, ಧಾರ್ಮಿಕವಾಗಿಯೂ ಬಾಳುತ್ತಿದ್ದರು. ಕೆಲ ಕಾಲ ಕಳೆದನಂತರ ಅವರಿಗೆ ಶಾಶ್ವತವಾಗಿ ಜೀವಿಸಬೇಕೆಂಬ ಬಯಕೆಯುಂಟಾಯಿತು. ಕ್ಷೀರ ಸಾಗರವನ್ನು ಮಥಿಸಿ, ಅಲ್ಲಿ ಹುಟ್ಟಿದ ಅಮೃತವನ್ನು ಸೇವಿಸಿದರೆ ಹಸಿವು-ಬಾಯಾರಿಕೆಗಳನ್ನು ಜಯಿಸಿ ವೃದ್ದಾಪ್ಯವಿಲ್ಲದೆ ಇರಬಹುದು ಎಂದು ಮಂದರ ಪರ್ವತವನ್ನು ಕಡೆಗೋಲಾಗಿಸಿಕೊಂಡು ಸಾಗರವನ್ನು ಮಥಿಸಲು ಪ್ರಾರಂಭಿಸಿದರು. ಕ್ಷೀರ ಸಾಗರವನ್ನು ಕಡೆಯುತ್ತಿದ್ದಾಗ ಪ್ರಪ್ರಥಮವಾಗಿ ದೇವತೆಗಳನ್ನು, ರಾಕ್ಷಸರನ್ನೂ, ಮನುಷ್ಯರನ್ನೂ ನಾಶ ಮಾಡುವಂಥಹ ಹಾಲಾಹಲವು ಹುಟ್ಟಿಬಂದಿತು. ಆಗ ಎಲ್ಲರೂ ಕೈಲಾಸದಲ್ಲಿದ್ದ ಪರಶಿವನ ಬಳಿ ಹೋಗಿ ರಕ್ಷಿಸಲು ಬೇಡಿಕೊಂಡರು. ಈಶ್ವರನು ಕೈಲಾಸದಿಂದ ಹೊರಗೆ ಬಂದ ಮೇಲೆ, ಅಗ್ರ ಪೂಜೆಯಾಗಿ ಪ್ರಥಮವಾಗಿ ಪ್ರಾಪ್ತವಾದ ಹಾಲಹಲವನ್ನು ಸ್ವೀಕರಿಸಬೇಕೆಂದು ಮಹಾವಿಷ್ಣು ಕೇಳಿದರು. ಸರ್ವ ಲೋಕಗಳನ್ನು ನಾಶಮಾಡುವಂಥ ಹಾಲಹಲವನ್ನು ಈಶ್ವರನು ಸೇವಿಸಿದಾಗ ಆತನ ಶರೀರದಲ್ಲಿ ಯಾವುದೇ ಲೋಪವಾಗಲಿಲ್ಲ, ಕಣ್ಣು ಕೆಂಪಾಗಲಿಲ್ಲ, ಆತನ ಕೊರಳಲ್ಲಿದ್ದ ಚಿಕ್ಕ-ಚಿಕ್ಕ ಹಾವುಗಳೂ ಸಹ ಕದಲಲಿಲ್ಲ. ಸಂತೋಷಗೊಂಡ ದೇವತೆಯರು ಮಥನವನ್ನು ಮುಂದುವರೆಸಿದರು. ಹಾಗೆ ಕಡೆಯುತ್ತಿದ್ದಂತೆ ಮಂದರ ಪರ್ವತವು ಪಾತಳಕ್ಕೆ ಜಾರಿತು. ಆಗ ದೇವತೆಯರೆಲ್ಲರೂ ಪರ್ವತವನ್ನು ಮೇಲೆತ್ತಲು ಮಹಾವಿಷ್ಣುವಿನ ಮೊರೆ ಹೋದರು. ಮಹಾವಿಷ್ಣುವು ಕೂರ್ಮಾವತಾರಿಯಾಗಿ ಪರ್ವತವನ್ನು ತನ್ನ ಬೆನ್ನ ಮೇಲೆ ಹೊತ್ತು ತಂದರು. ಮತ್ತೆ ಸಮುದ್ರ ಮಥನವು ಮುಂದುವರೆಯಿತು. ನಂತರ ನೊರೆಯು ಉತ್ಪತ್ತಿಯಾಗಿ ಅದರಿಂದ ೬೦ ಕೋಟಿ ಅಪ್ಸರ ಸ್ತ್ರೀಯರು ಬಂದರು. ಅಷ್ಟು ಅಪ್ಸರ ಸ್ತ್ರೀಯರಿಗೆ ಸೇವೆ ಮಾಡಲು ಕೋಟಿ-ಕೋಟಿ ಪರಿಚಾರಕಿಯರು ಕೂಡ ಹುಟ್ಟಿಬಂದರು.
ಅಪ್ಸು ನಿರ್ಮಥನಾತ್ ಏವ ರಸಾತ್ ತಸ್ಮಾತ್ ಪರ ಸ್ತಿಯಃ |
ಉತ್ಪೇತುಃ ಮನುಜ ಶ್ರೇಷ್ಠ ತಸ್ಮಾತ್ ಅಪ್ಸರಸೋ ಅಭವನ್ ||
ಷಷ್ಠಿಃ ಕೋಟ್ಯೋ ಅಭವನ್ ತಾಸಾಂ ಅಪ್ಸರಾಣಾಂ ಸುವರ್ಚಸಾಂ |
ಅಸಂಖ್ಯೇಯಾಃ ತು ಕಾಕುತ್ಸ್ಥ ಯಾಃ ತಾಸಾಂ ಪರಿಚಾರಿಕಾಃ ||
ಹೀಗೆ ಬಂದ ಅಂದವಾದ ಅಪ್ಸರೆಯರನ್ನು ದೇವತೆಗಳಾಗಲೀ, ರಾಕ್ಷಸರಾಗಲೀ ಕೋರಲಿಲ್ಲ. ಅವರೆಲ್ಲರೂ ದೇವ ವೇಶ್ಯೆಯರಾದರು. ನಂತರ ಸಾಗರದಿಂದ ವರುಣನ ಕುಮಾರಿ ವಾರುಣಿ ಎನ್ನುವ ಸುರರಸವು ಬಂದಿತು. ದೇವತೆಯರು ವಾರುಣಿಯನ್ನು ಸೇವಿಸಿದರು. ಹಾಗಾಗಿ ದೇವತೆಯರನ್ನು ಸುರರೆಂದೂ, ರಾಕ್ಷಸರು ಸುರರಸವನ್ನು ತಿರಸ್ಕರಿಸಿದ್ದಕ್ಕಾಗಿ ಅವರನ್ನು ಅಸುರರೆಂದೂ ಕರೆಯುತ್ತಾರೆ. ವಾರುಣಿಯನ್ನು ಸೇವಿಸದ ಕಾರಣ ರಾಕ್ಷಸರ ಮನಸ್ಸು ಸಂತೋಷವಾಗಿರುವುದಿಲ್ಲ. ನಂತರ ಬಂದ ಉಚ್ತೈಃಶ್ರವ ಎನ್ನುವ ಅಶ್ವವನ್ನು ರಾಕ್ಷಸರು ಸ್ವೀಕರಿಸಿದರು. ಕೌಸ್ತುಭವನ್ನು ಶ್ರೀ ಮಹಾವಿಷ್ಣುವು ಸ್ವೀಕರಿಸಿದರು. ಕೊನೆಯಲ್ಲಿ ಹುಟ್ಟಿದ ಅಮೃತಕ್ಕಾಗಿ ದೇವ-ದಾನವರು ಕಿತ್ತಾಡಿದಾಗ, ವಿಷ್ಣುವಿನ ಸಹಕಾರದಿಂದ ದೇವತೆಗಳು ಅಮೃತವನ್ನು ವಶಪಡಿಸಿಕೊಂಡರು.

ಸಮುದ್ರ ಮಥನದ ನಂತರ ರಾಕ್ಷಸರ ತಾಯಿಯಾದ ದಿತಿ ಕಶ್ಯಪನನ್ನು ಕುರಿತು,ನಿನ್ನ ಮಕ್ಕಳಾದ ದೇವತೆಗಳು ನನ್ನ ಮಕ್ಕಳಾದ ರಾಕ್ಷಸರನ್ನು ಕೊಂದರು. ನನ್ನ ಮಕ್ಕಳಿಗೀಗ ರಾಜ್ಯವಿಲ್ಲದೆ ಬಹಳ ಕಷ್ಟ ಪಡುತ್ತಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣ ಇಂದ್ರ, ಹಾಗಾಗಿ ನನಗೆ ಇಂದ್ರನನ್ನು ಕೊಲ್ಲುವಂಥ ಮಗ ಬೇಕು’ ಎಂದು ವರ ಕೇಳಿದಳು. ಕಶ್ಯಪರು,ನೀನು ಶೌಚವಾಗಿ (ಶೌಚ - ಭೌತಿಕವಾಗಿ, ಮಾನಸಿಕವಾಗಿ ಯಾವುದೇ ದೋಷ ವಿಲ್ಲದೆ ಇರುವುದು) ಸಾವಿರ ಸಂವತ್ಸರಗಳು ಇರುವುದಾದರೆ ನಿನಗೆ ಲೋಕವನ್ನು ಶಾಸಿಸುವಂತಹ, ಇಂದ್ರನನ್ನು ಸಂಹರಿಸುವಂತಹ ಪುತ್ರನು ಹುಟ್ಟುತ್ತಾನೆಎಂದರು.

ದಿತಿಯು ಅವರ ಮಾತಿಗೆ ಸಮ್ಮತಿಸಿ ಶುಕ್ಲಪ್ಲವ ಎನ್ನುವ ಪ್ರದೇಶಕ್ಕೆ ತೆರಳಿ ತಪಸ್ಸನ್ನಾರಂಭಿಸಿದಳು. ಇಂದ್ರನು ಸೇವೆ ಮಾಡುವುದಾಗಿ ಹೇಳಿ ದಿತಿಯ ಬಳಿ ಸೇರಿಕೊಂಡ. ಫಲ-ಪುಷ್ಪ ಮುಂತಾದುವುಗಳನ್ನು ತಂದು ಕೊಡುತ್ತಾ, ಕೈ ಕಾಲು ಒತ್ತುತ್ತಾ ಇಂದ್ರನು ದಿತಿಯ ಸೇವೆ ಮಾಡುತ್ತಿದ್ದ. ಹೀಗೆ ೯೯೦ ಸಂವತ್ಸರಗಳು ಕಳೆಯಿತು.

ಒಂದು ಮಧ್ಯಾಹ್ನ ದಿತಿ ತನ್ನ ಕೂದಲನ್ನು ಇಳೆ ಬಿಟ್ಟುಕೊಂಡು ಕುಳಿತುಕೊಂಡಿದ್ದಳು. ಆಲಸ್ಯದಿಂದ ತಲೆ ತಗ್ಗಿಸಿಕೊಂಡಾಗ ಕೂದಲು ಅವಳ ಕಾಲಿಗೆ ತಾಗಿ ಅಶುಚಿಯಾದಳು. ಸಮಯವನ್ನೇ ಕಾಯುತ್ತಿದ್ದ ಇಂದ್ರ ಅವಳ ಗರ್ಭವನ್ನು ಪ್ರವೇಶಿಸಿ ಭ್ರೂಣವನ್ನು ತುಂಡುಗಳನ್ನಾಗಿ ಕತ್ತರಿಸಿದ. ಹಾಗೆ ಮಾಡುತ್ತಿರುವಾಗ ಪಿಂಡ ನೋವಿನಿಂದ, ಕತ್ತರಿಸಬೇಡ ಎಂದು ಕಿರುಚಿಕೊಂಡಿತು. ಅದನ್ನು ಕೂಗನ್ನು ಕೇಳಿ ದಿತಿಯು ಕತ್ತರಿಸಬೇಡವೆಂದು ಕೇಳಿಕೊಂಡಳು. ದಿತಿಯ ಮೇಲಿನ ಗೌರವದಿಂದ ಇಂದ್ರ ಭ್ರೂಣವನ್ನು ಕೊಂದಿರಲಿಲ್ಲ. ತಾನು ಅಶುಚಿಯಾದ ಕಾರಣ ಭ್ರೂಣವನ್ನು ಕತ್ತರಿಸಿದ್ದು ತಪ್ಪಲ್ಲದಿದ್ದರೂ, ಈಗ ಕತ್ತರಿಸಿದ ಪಿಂಡಗಳಿಗೆ ದೇವತಾ ಸ್ವರೂಪವನ್ನು ಕೊಟ್ಟು ವಾಯು ಸ್ಕಂದಗಳಿಗೆ ಅಧಿಪತಿಗಳನ್ನಾಗಿ ಮಾಡಬೇಕೆಂದು ದಿತಿ ವರ ಕೇಳಿಕೊಂಡಳು. ಅಂತೆಯೇ ಇಂದ್ರನು ಅವರನ್ನು ಬ್ರಹ್ಮಲೋಕ, ಇಂದ್ರಲೋಕ, ಅಂತರಿಕ್ಷ ಲೋಕಗಳ ವಾಯುಸ್ಕಂದಗಳ ಜೊತೆ ನಾಲ್ಕು ದಿಕ್ಕುಗಳ ವಾಯು ಸ್ಕಂದಗಳಿಗೂ ಅಧಿಪತಿಗಳನ್ನಾಗಿ ಮಾಡಿದ. ಜನರನ್ನು ಮರುತ್ತರು ಎಂದು ಕರೆಯುತ್ತಾರೆ. ರಾಮ! ದಿತಿ ೯೯೦ ವರ್ಷಗಳ ಕಾಲ ತಪಸ್ಸು ಮಾಡಿದ ಸ್ಥಳವೇ ವಿಶಾಲ ನಗರ”.

ನಗರವನ್ನು ಮೊದಲು ಇಕ್ಷ್ವಾಕು ವಂಶದ ದೊರೆ ಪಾಲಿಸುತ್ತಿದ್ದ. ಅವನ ಪತ್ನಿ ಅಲಂಬುಷಳಿಂದ ಅವರಿಗೆ ವಿಶಾಲ ಜನಿಸಿದ. ವಿಶಾಲನ ಮಗನೇ ಹೇಮಚಂದ್ರ, ಹೇಮಚಂದ್ರನ ಮಗ ಸುಚಂದ್ರ, ಸುಚಂದ್ರನ ಮಗ ಧೂಮ್ರಾಶ್ವ, ಧೂಮ್ರಾಶ್ವನ ಮಗ ಸೃಂಜಯ, ಸೃಂಜಯನ ಮಗ ಸಹದೇವ, ಸಹದೇವನ ಮಗ ಕುಶಾಶ್ವ, ಕುಶಾಶ್ವನ ಮಗ ಸೋಮದತ್ತ, ಸೋಮದತ್ತನ ಮಗ ಕಾಕುತ್ಸ್ಯ, ಕಾಕುತ್ಸ್ಯನ ಮಗನೇ ಸುಮತಿ. ಸುಮತಿ ಈಗ ವಿಶಾಲ ನಗರವನ್ನು ಆಳುತ್ತಿದ್ದಾನೆ."


ತನ್ನ ರಾಜ್ಯಕ್ಕೆ ವಿಶ್ವಾಮಿತ್ರರು ಬಂದದ್ದನ್ನು ತಿಳಿದ ಸುಮತಿ ಅವರನ್ನು ಗೌರವಾದರಗಳಿಂದ ಸತ್ಕರಿಸಿದ. ನಂತರ ಸೂರ್ಯಚಂದ್ರರಂತೆ ಅಂದವಾಗಿ ಕಂಗೊಳಿಸುತ್ತಿದ್ದ ರಾಮ ಲಕ್ಷ್ಮಣರ ಬಗ್ಗೆ ವಿಚಾರಿಸಿದ. 'ಇವರು ರಾಮ ಲಕ್ಷ್ಮಣರು, ದಶರಥನ ಕುಮಾರರು, ನಾನು ಯಾಗ ಮಾಡುತ್ತಿದ್ದ ಯಜ್ಞದ ರಕ್ಷಣೆಗೆ ಬಂದಿದ್ದರು' ಎಂದು ಹೇಳಿ, ನಂತರ ಕುಶಲ ಪ್ರಶ್ನೆಗಳಾದ ಮೇಲೆ ವಿಶ್ವಾಮಿತ್ರರು ಅಲ್ಲಿಂದ ಹೊರಟರು

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ