೧೨. ಅಹಲ್ಯೆ
ರಾಮಲಕ್ಷ್ಮಣ ವಿಶ್ವಾಮಿತ್ರರು ವಿಶಾಲ ನಗರದಲ್ಲಿ ಸುಮತಿಯನ್ನು ಬೀಳ್ಕೊಟ್ಟು ತಮ್ಮ ಪ್ರಯಾಣ ಮುಂದುವರೆಸಿ, ಮಿಥಿಲಾಪುರದ ಹತ್ತಿರ ಒಂದು ಆಶ್ರಮದ ಬಳಿ ಬಂದರು. ರಾಮ ಆಶ್ರಮದ ಬಗ್ಗೆ ವಿಚಾರಿದಾಗ ವಿಶ್ವಾಮಿತ್ರರು:
“ಗೌತಮಸ್ಯ ನರಶ್ರೇಷ್ಠ ಪೂರ್ವಂ ಆಸೀತ್ ಮಹಾತ್ಮನಃ
ಆಶ್ರಮೋ ದಿವ್ಯ ಸಂಕಾಶಃ ಸುರೈಃ ಅಪಿ ಸುಪೂಜಿತಃ
ಈ ಆಶ್ರಮ ಗೌತಮ ಮಹರ್ಷಿಯದು. ಅವರ ದರ್ಶನಕ್ಕೆ ದೇವತೆಗಳು ಬರುತ್ತಿದ್ದರು. ಗೌತಮರು ತನ್ನ ಪತ್ನಿ ಅಹಲ್ಯೆಯ ಜೊತೆ ಇಲ್ಲಿ ಧಾರ್ಮಿಕವಾದ ಜೀವನ ನಡೆಸುತ್ತಿದ್ದರು. ಅಹಲ್ಯಾದೇವಿ ಬ್ರಹ್ಮನ ಮಾನಸ ಪುತ್ರಿ. ರೂಪವಂತೆ. ಅಹಲ್ಯೆಯ ಮೇಲೆ ಆಸೆಪಟ್ಟ ಇಂದ್ರ, ಒಂದು ಬೆಳಿಗ್ಗೆ ಗೌತಮರು ಸ್ನಾನ ಸಂಧ್ಯಾವಂದನಾದಿ ಆಹ್ನಿಕಗಳನ್ನು ಮಾಡಲು ನದಿಗೆ ಹೋದಾಗ, ಗೌತಮರ ವೇಷವನ್ನು ಧರಿಸಿ ಅವರ ಆಶ್ರಮವನ್ನು ಪ್ರವೇಶಿಸಿ, ಅಹಲ್ಯೆಯನ್ನು ಸಂಗಮಕ್ಕಾಗಿ ಕೋರಿದ.
ಮುನಿ ವೇಷಂ ಸಹಸ್ರಾಕ್ಷಂ ವಿಜ್ಞಾಯ ರಘುನಂದನ
ಮತಿಂ ಚಕಾರ ದುರ್ಮೇಧಾ ದೇವ ರಾಜ ಕುತೂಹಲಾತ್
ಬಂದವನು ಇಂದ್ರನೆಂದು ತಿಳಿದರೂ, ತಾನು ಇನ್ನೂ ಕನ್ಯೆಯಾದ್ದರಿಂದ ಇಂದ್ರನ ಮೇಲೆ ಆಸೆಪಟ್ಟು, ಅವನ ಕೋರಿಕೆಯನ್ನು ಅಹಲ್ಯೆ ಮನ್ನಿಸಿದಳು. ಅಹಲ್ಯೆ ಇಂದ್ರನಿಗೆ, 'ನಾನು ನಿನ್ನ ಸಂಗಮದಿಂದ ಬಹಳ ಸಂತೋಷಪಟ್ಟೆ. ಕೃತಾರ್ಥಳಾದೆ. ನೀನು ಇಲ್ಲಿಂದ ಬೇಗ ಹೊರಡು. ಗೌತಮರಿಂದ ರಕ್ಷಿಸಿಕೊ' ಎಂದಳು. ಅವನು ತನ್ನ ಸಂತೋಷವನ್ನು ಒಂದು ಮುಗುಳುನಗೆಯಿಂದ ತೋರಿಸಿ ಹೊರಬಂದಾಗ,
ಗೌತಮಂ ಸ ದದರ್ಮ ಅಥ ಪ್ರವಿಶಂತಂ ಮಹಾಮುನಿಂ
ದೇವ ದಾನವ ದುರ್ಧರ್ಶಂ ತಪೋಬಲ ಸಮನ್ವಿತಂ
ದೇವದಾನವರನ್ನು ತನ್ನ ತಪಃಶಕ್ತಿಯಿಂದ ನಿಗ್ರಹಿಸುವ ಶಕ್ತಿಯುಳ್ಳ ಗೌತಮರು ನೋಡಿದರು. ಇಂದ್ರನ ಮುಖ ಬಾಡಿತು. ಗೌತಮರು, 'ನನ್ನ ರೂಪ ಧರಿಸಿ ನೀನು ಮಾಡಬಾರದ ಪಾಪ ಮಾಡಿದ್ದೀಯ. ಸ್ತ್ರೀಯರ ಮೇಲೆ ಕಾಮವಿರಲು ಕಾರಣ ನೀನು ಪುರುಷನೆಂಬ ಅಹಂಕಾರ. ಪೇತತುಃ ವೃಷಣೌ ಭೂಮೌ ಸಹಸ್ರಾಕ್ಷಸ್ಯ ತತ್ ಕ್ಷಣಾತ್, ಆ ಪುರುಷತ್ವಕ್ಕೆ ಚಿಹ್ನೆಯಾದ ನಿನ್ನ ವೃಷಣಗಳು ತಕ್ಷಣವೇ ಜಾರಿ ಬೀಳಲಿ' ಎಂದು ಶಾಪ ಕೊಟ್ಟರು.
ನಂತರ ಅಹಲ್ಯೆಗೆ, ‘ನೀನು ಇಲ್ಲೇ ಕೆಲವು ವರ್ಷಗಳ ಕಾಲ ನೀರು, ಆಹಾರಗಳಿಲ್ಲದೆ ಕೇವಲ ಗಾಳಿಯನ್ನು ಸೇವಿಸಿ ತಪಸ್ಸು ಮಾಡುತ್ತಿರು. ನಿನ್ನ ಮೇಲೆ ಬೂದಿ ಏರ್ಪಡುತ್ತದೆ. ಆದ್ದರಿಂದ ನೀನು ಯಾರಿಗೂ ಕಾಣುವುದಿಲ್ಲ. ಕೆಲವು ಕಾಲದಲ್ಲಿ ಈ ಆಶ್ರಮಕ್ಕೆ ರಾಮನೆಂಬುವವನು ಬರುತ್ತಾನೆ. ಅವನು ಆಶ್ರಮ ಪ್ರವೇಶ ಮಾಡಿದಾಕ್ಷಣ ನಿನ್ನ ಶಾಪ ವಿಮೋಚನೆಯಾಗಿ ನನ್ನ ಪತ್ನಿಯ ಸ್ಥಾನವನ್ನು ಪಡೆಯುತ್ತೀಯ. ಅಲ್ಲಿಯವರೆಗೂ ನಾನು ಹಿಮವತ್ಪರ್ವತದಲ್ಲಿ ತಪಸ್ಸುಮಾಡುತ್ತಿರುತ್ತೇನೆ’ ಎಂದು ಹೇಳಿ ಹೊರಟುಹೋದರು.
ಇಂದ್ರನು ದೇವಲೋಕಕ್ಕೆ ಹೋಗಿ ದೇವತೆಗಳಿಗೆ ನಡೆದಿದ್ದನ್ನೆಲ್ಲ ತಿಳಿಸಿದ. ತಾನು ಕಾಮದಿಂದ ಆ ಕೆಲಸ ಮಾಡಲಿಲ್ಲವೆಂದೂ, ಗೌತಮರ ತಪಃಶಕ್ತಿ ಹೆಚ್ಚಾಗುತ್ತಿದ್ದರಿಂದ ಅವರನ್ನು ತಾನೇನು ಮಾಡಲಿಕ್ಕಾಗುವುದಿಲ್ಲವೆಂದೂ, ಅದುದರಿಂದ ಅಹಲ್ಯೆಯ ಜೊತೆ ಆ ರೀತಿ ಅಪಚಾರ ಮಾಡಿ, ಗೌತಮರು ತನಗೆ ಶಾಪ ಕೊಟ್ಟದ್ದರಿಂದ ಅವರ ಶಕ್ತಿ ಸ್ವಲ್ಪ ಕುಗ್ಗಿದೆಯೆಂದೂ, ಆದರೆ ಇದೆಲ್ಲದರಿಂದ ತನ್ನ ವೃಷಣಗಳನ್ನು ಕಳೆದುಕೊಂಡನೆಂದೂ, ಈಗ ಅವರೆಲ್ಲರೂ ತನ್ನ ವೃಷಣಗಳನ್ನು ಪುನಾ ತಂದುಕೊಡಬೇಕೆಂದು ಇಂದ್ರ ದೇವತೆಗಳನ್ನು ಕೇಳಿದ. ಆಗ ಅವರು ಒಂದು ಕುದುರೆಯ ವೃಷಣಗಳನ್ನು ತಂದು ಇಂದ್ರನಿಗೆ ಕೊಟ್ಟು ಅವನಿಗೆ ಮತ್ತೆ ಪುರುಷತ್ವವನ್ನು ಕೊಟ್ಟರು. ಆದ್ದರಿಂದಲೇ ಅವನನ್ನು ವೃಷಣನೆಂದು ಕರೆಯುತ್ತಾರೆ.”
ವಿಶ್ವಾಮಿತ್ರರು ರಾಮ ಲಕ್ಷ್ಮಣರ ಜೊತೆ ಗೌತಮರ ಆಶ್ರಮವನ್ನು ಪ್ರವೇಶಿಸಿದರು. ತಕ್ಷಣವೇ ಅಷ್ಟು ವರ್ಷಗಳ ಕಾಲ ಶಾಪಗ್ರಸ್ಥಳಾದ ಅಹಲ್ಯೆ ಪೂರ್ಣ ತೇಜಸ್ಸಿನಿಂದ ಮೇಲೆದ್ದಳು. ರಾಮ ಅವಳಿಗೆ ನಮಸ್ಕಾರ ಮಾಡಿದ. ಅಂದು ಗೌತಮ ಮಹರ್ಷಿಗಳು ಹೇಳಿದ ಮಾತನ್ನು ಜ್ಞಾಪಕಕ್ಕೆ ತಂದುಕೊಂಡು, ಬಂದವನು ರಾಮನೇ ಎಂದು ಅವನಿಗೆ ಅಹಲ್ಯೆ ನಮಸ್ಕಾರ ಮಾಡಿದಳು. ಆಗ ಅಲ್ಲಿಗೆ ಬಂದ ಗೌತಮರು ಅಹಲ್ಯೆಯನ್ನು ಸ್ವೀಕರಿಸಿ ಅವಳ ಜೊತೆ ತಪಸ್ಸಿಗೆ ಹೋದರು.
ರಾಮ ಲಕ್ಷ್ಮಣರು ವಿಶ್ವಾಮಿತ್ರರ ಜೊತೆ ತಮ್ಮ ಪ್ರಯಾಣವನ್ನು ಮುಂದುವರಿಸಿ ಮಿಥಿಲಾ ನಗರವನ್ನು ಸೇರಿದರು. ಮಿಥಿಲಾ ಪುರಿ ವಾಹನಗಳಿಂದ, ಯಜ್ಞ-ಯಾಗಾದಿಗಳಲ್ಲಿ ನಿರತರಾದ ಮಹರ್ಷಿಗಳಿಂದ ತುಂಬಿತ್ತು. ವಿಶ್ವಾಮಿತ್ರರು ತನ್ನ ರಾಜ್ಯವನ್ನು ಪ್ರವೇಶಿಸಿದ ವಾರ್ತೆಯನ್ನು ಕೇಳಿ ಜನಕ ಮಹಾರಾಜ, ತನ್ನ ಪುರೋಹಿತರಾದ ಶತಾನಂದರೊಡನೆ ಓಡಿಬಂದು, ‘ನೀವು ನಮ್ಮ ರಾಜ್ಯಕ್ಕೆ ಬಂದದ್ದು ನನ್ನ ಭಾಗ್ಯ’ ಎಂದು ವಿಶ್ವಾಮಿತ್ರರನ್ನು ಆಹ್ವಾನಿಸಿದ. ಅವರೊಂದಿಗಿದ್ದ ರಾಮ-ಲಕ್ಷ್ಮಣರನ್ನು ನೋಡಿ, ಖಡ್ಗ, ಕೋದಂಡ ಹಿಡಿದು, ಸುರ್ಯ ಚಂದ್ರರಂತೆ ಕಾಣುತ್ತಿರುವ, ಅಪಾರವಾದ ತೇಜಸ್ಸಿರುವ ಅವರಾರೆಂದು ಪ್ರಶ್ನಿಸಿದ.
ವಿಶ್ವಾಮಿತ್ರರು, "ಇವರು ದಶರಥ ಮಹಾರಾಜನ ಮಕ್ಕಳು, ನನ್ನ ಯಾಗ ರಕ್ಷಣೆಗಾಗಿ ಕರೆತಂದಿದ್ದೆ. ರಾಮ-ಲಕ್ಷ್ಮಣರ ರಕ್ಷಣೆಯಿಂದ ನನ್ನ ಯಾಗ ಪೂರ್ತಿಯಾಗಿದೆ”, ಎಂದು ರಾಮ-ಲಕ್ಷ್ಮಣರ ಪರಿಚಯ ಮಾಡಿದರು.
ಶತಾನಂದರು, "ದಾರಿಯಲ್ಲಿ ನನ್ನ ತಾಯಿಯ ದರ್ಶನವಾಯಿತೇ" ಎಂದು ಪ್ರಶ್ನಿಸಿದರು.
ವಿಶ್ವಾಮಿತ್ರರು: "ಪತಿತಪಾವನನಾದ ರಾಮನ ಪಾದ ಸ್ಪರ್ಶ್ವವಾದ ಕ್ಷಣ ನಿಮ್ಮ ತಾಯಿಗೆ ಶಾಪ ವಿಮೋಚನೆಯಾಗಿ, ಗೌತಮರೊಂದಿಗೆ ಹೊರಟರು".
ಶತಾನಂದರು ಈ ವಾರ್ತೆ ಕೇಳಿ ಬಹಳ ಸಂತೋಷಗೊಂಡು ರಾಮನಿಗೆ, “ರಾಮ ನಿನ್ನ ದರ್ಶನವಾಗಿದ್ದು ನನ್ನ ಅದೃಷ್ಟ, ಒಂದು ಸಾರಿ ನನ್ನ ತಾಯಿ ಕಾಮಕ್ಕೆ ವಶವಾಗಿ ಎಷ್ಟೋ ಸಂಕಷ್ಟಗಳನ್ನೆದುರಿಸಿದಳು. ಆಕೆಯ ಸತ್ಕಾರ ಸ್ವೀಕರಿಸಿದೆಯಾ? ಅಕೆ ಈಗ ಸಂತೋಷದಿಂದಿರುವಳೇ?” ಎಂಬ ಮುಂತಾದ ಪ್ರಶ್ನೆಗಳನ್ನು ಕೇಳಿದರು.
ರಾಮ, “ನಿಮ್ಮ ತಾಯಿ ಸಂತೋಷವಾಗಿದ್ದಾರೆ. ಅವರು ಗೌತಮ ಮಹರ್ಷಿಯೊಂದಿಗೆ ತಪಸ್ಸು ಮಾಡಲು ಹೋಗಿದ್ದಾರೆ" ಎಂದ.
ರಾಮನ ಮಾತಿನಿಂದ ಶತಾನಂದರು ಪರಮ ಸಂತೋಷಗೊಂಡು,
“ನ ಅಸ್ತಿ ಧನ್ಯತರೋ ರಾಮ ತ್ವತ್ತೋ ಅನ್ಯ ಭುವಿ ಕಶ್ಚನ |
ಗೋಪ್ತಾ ಕುಶಿಕ ಪುತ್ರಃ ತೇ ಯೇನ ತಪ್ತಂ ಮಹತ್ ತಪಃ ||
ವಿಶ್ವಾಮಿತ್ರರನ್ನು ಗುರುವಾಗಿ ಪಡೆದ ನೀನು ಧನ್ಯ, ಆತನು ಬ್ರಹ್ಮರ್ಷಿಯಾದ ವೃತ್ತಾಂತವನ್ನು ನಿನಗೀಗ ಹೇಳುತ್ತೇನೆ ಕೇಳು” ಎಂದು ರಾಮ-ಲಕ್ಷ್ಮಣರಿಗೆ ವಿಶ್ವಾಮಿತ್ರರ ಜೀವನದ ಬಗ್ಗೆ ವಿವರಿಸಲು ಪ್ರಾರಂಭಿಸಿದರು.
ವಿವರಣೆ ಕಡಿಮೆಯಾಗಿದೆ
ReplyDelete