೧೩. ವಿಶ್ವಾಮಿತ್ರನ(ಕೌಶಿಕ) ದೌರ್ಜನ್ಯ!
ಗಾಧಿ ಕುಮಾರನಾದ ವಿಶ್ವಾಮಿತ್ರ ಬಹಳ ಕಾಲ ರಾಜ್ಯ ಪಾಲನೆ ಮಾಡುತ್ತಿದ್ದ. ಒಮ್ಮೆ ಒಂದು ಅಕ್ಷೋಣಿ (೧ ಅಕ್ಷೋಹಿಣಿ = ೨೧೮೭೦ ರಥಗಳು, ೨೧೮೭೦ ಆನೆಗಳು, ೬೫೬೧೦ ಕುದುರೆಗಳು ಮತ್ತು ೧೦೯೩೫೦ ಪದಾತಿ) ಸೈನ್ಯದೊಂದಿಗೆ ಭೂ ಪರ್ಯಟನೆ ಮಾಡುತ್ತಾ, ತನ್ನ ರಾಜ್ಯದಲ್ಲೇ ಇದ್ದ ವಸಿಷ್ಠರ ಆಶ್ರಮಕ್ಕೆ ಭೇಟಿ ನೀಡಿದ. ವಸಿಷ್ಠ ಮಹರ್ಷಿಗಳ ಆಶ್ರಮದಲ್ಲಿ ಸಕಲ ಪ್ರಾಣಿಗಳೂ ವೈರವನ್ನು ಮರೆತು ಜೀವಿಸುತ್ತಿದ್ದವು. ಹುಲಿ-ಜಿಂಕೆ, ಇಲಿ-ಹಾವು, ನಾಯಿ-ಬೆಕ್ಕುಗಳು ಒಬ್ಬರನ್ನೊಬ್ಬರು ಬೆನ್ನತ್ತುವುದಾಗಲೀ, ಕೊಲ್ಲುವುದಾಗಲೀ ಮಾಡುತ್ತಿರಲಿಲ್ಲ. ಆಶ್ರಮದಲ್ಲಿ ಸಾವಿರಾರು ಮಂದಿ ಶಿಷ್ಯರಿದ್ದರು. ಬಹಳಷ್ಟು ಪರ್ಣಶಾಲೆಗಳಿಂದಲೂ, ಮರ ಗಿಡಗಳಿಂದಲೂ, ಬಹು ವಿಧದ ಪ್ರಾಣಿ-ಪಕ್ಷಿಗಳಿಂದಲೂ ಆಶ್ರಮವು ಶೋಭಾಯಮಾನವಾಗಿತ್ತು. ಆ ಆಶ್ರಮದಲ್ಲಿ ಶಬಳ ಎನ್ನುವ ಕಾಮಧೇನು ಇದ್ದು, ಅಮೃತಕ್ಕೆ ಸಮಾನವಾದ ಕ್ಷೀರವನ್ನು ಕೊಡುತ್ತಿದ್ದಳು.
ಇಂಥಹ ಪವಿತ್ರವಾದ ಆಶ್ರಮವನ್ನು ವಿಶ್ವಾಮಿತ್ರ ಮಹಾರಾಜ, ತನ್ನ ಸೈನ್ಯವನ್ನು ಹೊರಗೆ ಬಿಟ್ಟು ಪ್ರವೇಶಿದ. ವಸಿಷ್ಠರನ್ನು ಕುರಿತು, "ಅಯ್ಯಾ! ನಿಮ್ಮಾ ಆಶ್ರಮದಲ್ಲಿರುವ ಗಿಡಮರಗಳೆಲ್ಲವೂ ಫಲವಂತವಾಗಿವೆಯೇ? ನಿಮ್ಮ ಯಜ್ಞ ಯಾಗಾದಿಗಳು ಸಕ್ರಮವಾಗಿ ನಡೆಯುತ್ತಿವೆಯೇ? ನಿಮ್ಮ ಆಶ್ರಮದ ಋಷಿಗಳ ತಪಸ್ಸು ನಿರ್ವಿಘ್ನವಾಗಿ ಸಾಗುತ್ತಿದೆಯೇ? ನೀವೆಲ್ಲಾ ಸಂತೋಷದಿಂದಿರುವಿರಾ?” ಎಂದು ಕುಶಲೋಪರಿಯನ್ನು ವಿಚಾರಿಸಿದ.
ವಸಿಷ್ಠರು ಬಹಳ ಸಂತೋಷದಿಂದ, "ಮಗು! ನಾನು ಕುಶಲವಾಗಿರುವೆ, ನೀನು ರಾಜಧರ್ಮದಿಂದ ರಾಜ್ಯವನ್ನು ಪಾಲಿಸುತ್ತಿರುವೆಯಾ? (ರಾಜಧರ್ಮವೆಂದರೆ, ರಾಜನು ಪ್ರಜೆಗಳಿಂದ ಅವಶ್ಯಕವಿರುವಷ್ಟು ದ್ರವ್ಯವನ್ನಷ್ಟೇ ಪಡೆಯಬೇಕು, ಹಾಗೆ ಪಡೆದ ದ್ರವ್ಯದಲ್ಲಿ ಒಂದು ಪೈಸೆಯೂ ದುರ್ವಿನಿಯೋಗವಾಗದಂತೆ ವೃದ್ಧಿಸಬೇಕು. ಆ ಧನವನ್ನು ಅವಶ್ಯಕತೆ ಇರುವವರಿಗೆ ಹಂಚಿ ದೇಶದ ಕ್ಷೇಮವನ್ನು ಕೋರಬೇಕು.), ಸಾಮಂತ ರಾಜರೆಲ್ಲಾ ನಿನ್ನನ್ನು ಅನುಸರಿಸುತ್ತಿರುವರೇ? ಶತೃಗಳನು ಜಯಿಸಿದ್ದೀಯಾ? ನಿನ್ನ ಮಂತ್ರಿಗಳು ಸಕಾಲದಲ್ಲಿ ಸಲಹೆಗಳನ್ನು ನೀಡುತ್ತಿದ್ದಾರೆಯೇ ?” ಮುಂತಾದ ಪ್ರಶ್ನೆಗಳನ್ನು ಕೇಳಿ ವಿಶ್ವಾಮಿತ್ರನನ್ನು ಆದರಿಸಿದರು.
ಉಭಯಕುಶಲೋಪರಿಗಳಾದ ನಂತರ ವಿಶ್ವಾಮಿತ್ರನು ಹೊರಡಲು ಸಿದ್ಧನಾದ. ಆಗ ವಸಿಷ್ಠರು,
“ಸತ್ಕ್ರಿಯಾಂ ತು ಭವಾನ್ ಏತಾಂ ಪ್ರತಿಚ್ಛತು ಮಯಾ ಕೃತಾಂ |
ರಾಜನ್ ತ್ವಂ ಅಥಿತಿ ಶ್ರೇಷ್ಠಃ ಪೂಜನೀಯಃ ಪ್ರಯತ್ನತಃ ||
ಈ ಭೂಮಿಯನ್ನು ಪರಿಪಾಲಿಸುವ ನೀನು ನನ್ನ ಅಥಿತಿಗಳಲ್ಲಿ ಶ್ರೇಷ್ಠನು. ಹಾಗಾಗಿ ನನ್ನ ಆತಿಥ್ಯವನ್ನು ಸ್ವೀಕರಿಸಿ ಹೊರಡಬೇಕು’” ಎಂದು ಕೇಳಿದರು.
“ನೀವು ನನಗೆ ಅರ್ಘ್ಯ-ಪಾದ್ಯಗಳನ್ನು ಕೊಟ್ಟು ಕುಡಿಯಲು ನೀರು ಕೊಟ್ಟಿದ್ದೀರಿ. ನೀವು ತಿನ್ನುವಂಥ ಜೇನು, ಹಣ್ಣು ಹಂಪಲುಗಳು, ಕಂದಮೂಲಗಳನ್ನು ಕೊಟ್ಟಿದ್ದೀರಿ, ಎಲ್ಲಕ್ಕೂ ಮಿಗಿಲಾಗಿ ನಿಮ್ಮ ದರ್ಶನವಾಗಿದೆ. ಇದಕ್ಕಿಂತ ಹೆಚ್ಚಿನ ಆಥಿತ್ಯನಗೇನು ಬೇಕು, ನೀವಿನ್ನು ಶ್ರಮ ಪಡಬೇಡಿ, ನಾನಿನ್ನು ಹೊರಡುತ್ತೇನೆ.”
ಆದರೂ ವಸಿಷ್ಠರು ವಿಶ್ವಾಮಿತ್ರನನ್ನು ಆತಿಥ್ಯ ಸ್ವೀಕರಿಸಲು ಬಲವಂತ ಮಾಡಿದಾಗ, ಅವರ ಪ್ರೀತಿಗೆ ಸೋತು ವಿಶ್ವಾಮಿತ್ರ ಒಪ್ಪಿದ.
ಆಗ ವಸಿಷ್ಥರು ಶಬಳಳನ್ನು ಕರೆದು, "ನೋಡಿದೆಯಾ ನಮ್ಮ ಆಶ್ರಮಕ್ಕೆ ವಿಶ್ವಾಮಿತ್ರ ಮಹಾರಾಜರು ಆಗಮಿಸಿದ್ದಾರೆ. ಅವರ ಅಕ್ಷೋಣಿ ಸೈನ್ಯಕ್ಕೆ ಉತ್ತಮವಾದ ಭೋಜನದ ವ್ಯವಸ್ಥೆಮಾಡು. ಅವರಿಗೆ ಇಷ್ಟವಾದ ಊಟಗಳನ್ನು ಸಿದ್ದಮಾಡು” ಎಂದು ಆಜ್ಞೆ ಮಾಡಿದರು. ಅದರಂತೆ ಶಬಳ ಎಲ್ಲರ ಮನಸ್ಸಿನ ಕೋರಿಕೆಯನ್ನು ಗ್ರಹಿಸಿ, ಕಬ್ಬು, ಜೇನು, ಪಾನೀಯಗಳು, ರಾಶಿ ರಾಶಿ ಸಣ್ಣಕ್ಕಿ ಅನ್ನ, ಅದಕ್ಕೆ ಸರಿಯಾದ ಪಲ್ಯ, ಗೊಜ್ಜು, ಹುಳಿ, ಸಾರು, ಮೊಸರು, ಹಾಲು, ತಾಂಬೂಲಾದಿಗಳನ್ನೊಳಗೊಂಡ ರುಚಿಕರವಾದ ಭೋಜನ ತಯಾರು ಮಾಡಿದಳು.
ಶಬಳ ಸೃಷ್ಠಿಸಿದ ಭೋಜನವನ್ನು ಆ ಸೈನಿಕರೆಲ್ಲರೂ ಭಂಜಿಸಿದರು. ಎಲ್ಲರೂ ಇಷ್ಟು ರುಚಿಕರವಾದ ಭೋಜನವನ್ನು ಮತ್ತೊಮ್ಮೆ ಮಾಡುತ್ತೇವೆಯೋ ಇಲ್ಲವೋ ಎಂದು ಹೊಟ್ಟೆ ಬಿರಿಯುವವರೆಗೂ ತಿಂದರು. ಅಷ್ಟು ಜನಕ್ಕೂ ಸರಿಯಾಗುವಂತೆ ನಿಖರವಾಗಿ ಭೋಜನವನ್ನು ಸೃಷ್ಠಿಸಿದ ಗೋವನ್ನು ನೋಡಿ ವಿಶ್ವಾಮಿತ್ರನು ಆಶ್ಚರ್ಯ ಪಟ್ಟ. ಆತನಿಗೆ ಶಬಳನ ಮೇಲೆ ವ್ಯಾಮೋಹ ಉಂಟಾಗಿ, ಅದನ್ನು ತನ್ನದನ್ನಾಗಿಸಿಕೊಳ್ಳಬೇಕೆನ್ನಿಸಿತು. ನಂತರ ವಸಿಷ್ಠ ಮಹರ್ಷಿಯನ್ನು,
“ಗವಾಂ ಶತ ಸಹಸ್ರೇಣ ದಿಯತಾಂ ಶಬಲಾ ಮಮ |
ನಾನು ನಿಮಗೆ ಒಂದು ಲಕ್ಷ ಗೋವುಗಳನ್ನು ಕೊಡುತ್ತೇನೆ, ನೀವು ಶಬಳವನ್ನು ನನಗೆ ಕೊಡಿ” ಎಂದು ಕೇಳಿದ.
ವಿಶ್ವಾಮಿತ್ರನು ತಮಗೆ ಲಂಚವನ್ನು ಕೊಡಲು ಯತ್ನಿಸುತ್ತಿದ್ದಾನೆಂದು ಗ್ರಹಿಸಿ, ನಕ್ಕು, ವಸಿಷ್ಟರು ತಾನು ಶಬಳವನ್ನು ಕೊಡಲಾಗುವುದಿಲ್ಲವೆಂದರು.
ವಿಶ್ವಾಮಿತ್ರನು ಕೋಪಿಸಿಕೊಂಡು, “ರಾಜ್ಯದಲ್ಲಿರುವ ಎಲ್ಲಾ ರತ್ನಗಳೂ ಅವೆಲ್ಲಿದ್ದರೂ ರಾಜನಿಗೇ ಸ್ವಂತ, ರಾಜನ ಬಳಿಯಲ್ಲಿ ಬೆಲೆಬಾಳುವ ವಸ್ತುಗಳಿರಬೇಕು. ಬಹಳ ಬೆಲೆ ಬಾಳುವುದು ರತ್ನವಾದರೆ, ಇಷ್ಟು ಶಕ್ತಿ ಇರುವ ಶಬಳ ಕೂಡ ಒಂದು ರತ್ನವೇ, ಅದು ರಾಜನ ಸ್ವತ್ತು. ನಿನ್ನ ಬಳಿ ಇದೆ. ಈಗ ನಾನು ವಶಪಡಿಸಿಕೊಳ್ಳುತ್ತೇನೆ” ಎಂದ.
ವಸಿಷ್ಠರು, “ಮಗು! ವಿಶ್ವಾಮಿತ್ರ! ಈ ಗೋವು ಒಂದು ರತ್ನವೇ ಸರಿ, ಇದನ್ನು ಪಡೆಯಬೇಕೆಂದಿರುವೆ. ಈ ಗೋವು ನಮ್ಮ ಆಶ್ರಮದಲ್ಲಿ ದೇವತಾರಾಧನೆಗೆ, ಪಿತೃದೇವತೆಗಳ ಆರಾಧನೆಗೆ ಹಾಲು ಕೊಡುತ್ತದೆ. ನನ್ನ ಪ್ರಾಣ ಯಾತ್ರೆ ಇದರಿಂದ ನಡೆಯುತ್ತಿದೆ. ಈ ಆಶ್ರಮದ ಯಜ್ಞ, ವಿದ್ಯಾಭ್ಯಾಸ, ಸಮಸ್ತವೂ ಶಬಳಳ ಮೇಲೆ ಆಧಾರ ಪಟ್ಟಿದೆ. ಈ ಗೋವನ್ನು ನಿನಗೆ ಕೊಡಲಾರೆ” ಎಂದು ಸ್ಪಷ್ಟವಾಗಿ ನಿರಾಕರಿಸಿದರು.
“ನಾನು ನಿಮಗೆ ಕೊರಳಲ್ಲಿ ಬಂಗಾರದ ಸರಪಳಿಯಿರುವ ಹದಿನಾಲ್ಕು ಸಾವಿರ ಆನೆಗಳನ್ನೂ, ಎಂಟು ನೂರು ಬಂಗಾರದ ರಥಗಳನ್ನೂ, ಆ ಪ್ರತಿಯೊಂದು ರಥಕ್ಕೂ ಸ್ವರ್ಣಾಭರಣಗಳಿಂದ ಅಲಂಕರಿಸಿದ ನಾಲ್ಕು ಕುದುರೆಗಳು, ಹಾಗೆಯೇ ಹನ್ನೊಂದು ಸಾವಿರ ವಿವಿಧ ಜಾತಿಗೆ ಸೇರಿದ ಕುದುರೆಗಳನ್ನೂ, ಒಂದು ಕೋಟಿ ಗೋವುಗಳನ್ನೂ, ನೀವು ಕೋರಿದಷ್ಟು ಚಿನ್ನ, ಬೆಳ್ಳಿಯನ್ನೂ ಶಬಳಳ ಬದಲಾಗಿ ಕೊಡುತ್ತೇನೆ.”
ವಿಶ್ವಾಮಿತ್ರ ಅಷ್ಟು ಕೇಳಿದರೂ ವಸಿಷ್ಠರು ಗೋವನ್ನು ಕೊಡಲು ನಿರಾಕರಿಸಿದರು. ಕೋಪಗೊಂಡ ವಿಶ್ವಾಮಿತ್ರ ಶಬಳಳನ್ನು ಬಲವಂತವಾಗಿ ಕಸಿದು ಕೊಳ್ಳಲು ಮುಂದಾದ. ಅವಳ ಕೊರಳಿಗೆ ಈ ರತ್ನವು ತನಗೆ ಸೇರಿದ್ದು ಎಂದು ಫಲಕ ನೇತುಹಾಕಿ, ಸೈನಿಕರಿಗೆ ಅದನ್ನು ಎಳೆದು ಕೊಂಡು ಹೋಗಲು ಆಜ್ಞಾಪಿಸಿದ. ಸೈನಿಕರು ಕಾಮಧೇನುವನ್ನು ಎಳೆದುಕೊಂಡು ಹೋದಾಗ, ಅದು ದುಃಖದಿಂದ ಕಣ್ಣೀರಿಟ್ಟಳು. ಇಷ್ಟೆಲ್ಲಾ ಆದರೂ ವಸಿಷ್ಠರು ನಿಶ್ಯಬ್ದವಾಗಿ ಸಂಯಮದಿಂದಿದ್ದರು.
ಶಬಳಳ ಅಂತರಂಗದಲ್ಲಿ ಅಲ್ಲೋಲ ಕಲ್ಲೋಲವಾಯಿತು. “ಇಷ್ಟಕ್ಕೂ ನನ್ನನ್ನು ವಸಿಷ್ಠರು ತ್ಯಜಿಸಿದರೇ? ಇಲ್ಲವೇ ವಿಶ್ವಾಮಿತ್ರನೇ ನನ್ನನ್ನು ಕರೆದೊಯ್ಯುತ್ತಿದ್ದಾನಾ? ವಸಿಷ್ಠರು ನನ್ನನ್ನು ಕಳಿಸದೆ ವಿಶ್ವಾಮಿತ್ರನು ಕರೆದೊಯ್ಯಬಲ್ಲನೇ? ವಸಿಷ್ಠರು ನನ್ನನ್ನು ತ್ಯಜಿಸಿದ್ದೇ ಆದರೆ ನಾನು ಪಾಪವಾಗಲೀ, ಅಪರಾಧವಾಗಲೀ, ಮಾಡಿರಲೇಬೇಕು. ಒಂದು ವೇಳೆ ಪಾಪವೇ ಮಾಡಿದ್ದರೆ ಅವರಲ್ಲಿ ಕ್ಷಮೆ ಕೇಳಬೇಕು. ಅವರು ಬ್ರಹ್ಮರ್ಷಿಯಾದ ಕಾರಣ ಖಚಿತವಾಗಿ ಕ್ಷಮಿಸುತ್ತಾರೆ” ಹೀಗೆ ಯೋಚಿಸುತ್ತಾ ಶಬಳ ಕಟ್ಟಿದ ಹಗ್ಗವನ್ನು ಬಿಡಿಸಿಕೊಂಡು ವಸಿಷ್ಠರ ಬಳಿಗೆ ಓಡಿಬಂದಳು.
ವಸಿಷ್ಠರು,
“ನ ತ್ವಾಂ ತ್ಯಜಾಮಿ ಶಬಲೆ ನ ಅಪಿ ಮೆ ಅಪಕೃತಂ ತ್ವಯಾ |
ಏಷ ತ್ವಾಂ ನಯತೆ ರಾಜಾ ಬಲಾತ್ ಮತ್ತಃ ಮಹಾಬಲಃ ||
ಶಬಳಾ! ನಾನು ನಿನ್ನನ್ನು ತ್ಯಜಿಸಲಿಲ್ಲ. ವಿಶ್ವಾಮಿತ್ರನೇ ನಿನ್ನನ್ನು ಬಲವಂತವಾಗಿ ಕರೆದೊಯ್ಯುತ್ತಿದ್ದಾನೆ. ಆತನು ಈ ಭೂಮಿಗೆ ಪ್ರಭುವು. ಆದರೆ ತಪ್ಪು ದಾರಿ ಹಿಡಿಯುತ್ತಿದ್ದಾನೆ. ಆತ ದೋಷವನ್ನು ಮಾಡಿದರೆ, ಅದೇ ಅವನನ್ನು ಸುಡುತ್ತದೆ. ನಿನ್ನನ್ನು ಎಳೆದಾಡಿ ಅಪರಾಧ ಮಾಡಿದ್ದಾನೆ. ಆ ಪಾಪವೇ ಆತನಿಗೆ ಶಿಕ್ಷೆ ನೀಡುತ್ತದೆ.” ಎಂದರು.
“ಹಾಗಾದರೆ ನನ್ನನ್ನು ನಾನು ರಕ್ಷಿಸಿಕೊಳ್ಳಲೇ?” - ಶಬಳ ಕೇಳಿದಳು.
“ಖಂಡಿತವಾಗಿ ರಕ್ಷಿಸಿಕೋ.”
“ಖಂಡಿತವಾಗಿ ರಕ್ಷಿಸಿಕೋ.”
Comments
Post a Comment