೧೪. ವಿಶ್ವಾಮಿತ್ರನ ಅಹಂಕಾರ ನಾಶ

ವಸಿಷ್ಠರು ಸಮ್ಮತಿಸಿದ ತಕ್ಷಣ ಶಬಳ ಅಂಬಾ ಎಂದು ಗಟ್ಟಿಯಾಗಿ ಕೂಗುತ್ತಾ, ಶೂಲಾಯುಧ ಸಹಿತರಾದ ಕೆಲವು ಮಂದಿ ಪಹ್ಲವರನ್ನು ಸೃಷ್ಠಿಸಿದಳು. ಅವರು ವಿಶ್ವಾಮಿತ್ರರ ಸೈನ್ಯವನ್ನು ನಾಶಮಾಡಲು ಪ್ರಾರಂಭಿಸಿದರು. ಇದನ್ನು ಗಮನಿಸಿದ ವಿಶ್ವಾಮಿತ್ರ ತಾನೇ ಖಡ್ಗ ಹಿಡಿದು ಯುದ್ಧರಂಗಕ್ಕೆ ಹೋಗಿ, ಬಹಳ ಮಂದಿ ಪಹ್ಲವರನ್ನು ಕೊಂದ. ಅದಕ್ಕೆ ಪ್ರತಿಯಾಗಿ ಶಬಳ ಪಹ್ಲವರ ಜೊತೆಗೆ ಯವನರನ್ನು ಸೃಷ್ಠಿಸಿದಳು. ಯುದ್ದ ಪ್ರಕೋಪಕ್ಕೆ ತಿರುಗಿದಾಗ ವಸಿಷ್ಠರು ಯತೇಚ್ಛವಾಗಿ ಸೈನ್ಯವನ್ನು ಸೃಷ್ಠಿಸಲು ಅನುಮತಿ ನೀಡಿದರು.

ಆಗ ಶಬಳ ಸೂರ್ಯನ ಪ್ರಕಾಶಕ್ಕೆ ಸಮಾನರಾದ ಕಾಂಭೋಜ ವಂಶೀಯರನ್ನೂ, ತನ್ನ ಪಾದದಿಂದ ಸಾವಿರಾರು ಪಹ್ಲವರನ್ನೂ, ಯೋನಿಯಿಂದ  ಯವನರನ್ನೂ, ಗೋಮಯ ಬೀಳುವ ಸ್ಥಾನದಿಂದ ಶಕರನ್ನೂ, ತನ್ನ ರೋಮಗಳಿಂದ ಹರಿತ ಮತ್ತು ಕಿರಾತಕರನ್ನು ಸೃಷ್ಠಿಸಿದಳು. ಇವರೆಲ್ಲರೂ ಜೊತೆಯಾಗಿ ವಿಶ್ವಾಮಿತ್ರನ ಸೈನ್ಯವನ್ನು ಧ್ವಂಸ ಮಾಡಿದರು. 

ರಥದಿಂದ ಕೆಳಗಿಳಿದ ವಿಶ್ವಾಮಿತ್ರನು ತನ್ನ ಸೈನ್ಯವನ್ನು ನೋಡಿ ನಿಸ್ತೇಜನಾದ. ನಂತರ ತನ್ನ ೧೦೦ ಮಂದಿ ಮಕ್ಕಳನ್ನು ಕಡೆಗೆ ನೋಡಿದ. ೧೦೦ ಜನರೂ ವಸಿಷ್ಠರನ್ನು ವಧಿಸಲು ಖಡ್ಗ ಹಿಡಿದು ಅವರ ಬಳಿಗೆ ಮುನ್ನುಗ್ಗಿದರು. ವಸಿಷ್ಠರು ೧೦೦ ಜನರನ್ನು ಒಮ್ಮೆ ನೋಡಿ ಹೂಂಕರಿಸಿದಾಗ ಅವೆರೆಲ್ಲರೂ ಭಸ್ಮವಾಗಿ ಬಿದ್ದರು. 

ಇದನ್ನು ಕಂಡ ವಿಶ್ವಾಮಿತ್ರ, ಇದೇ ಬ್ರಹ್ಮರ್ಷಿಯ ಒಂದು ಶಕ್ತಿ. ‘ಹೂಂ’ ಎಂದ ಮಾತ್ರಕ್ಕೆ ನೂರು ಜನ ಭಸ್ಮವಾಗಿ ಹೋದರು. ಒಂದು ಗೋವು  ಅಮೋಘವಾದ ಭೋಜನವನ್ನೂ, ತನ್ನಷ್ಟಕ್ಕೆ ತಾನೆ ಸೈನ್ಯವನ್ನೂ ಸೃಷ್ಠಿಸಿಕೊಂಡಿತೆಂದರೆ, ರಾಜತನಕ್ಕಿಂತ ತಪಃ ಶಕ್ತಿಯ ಬಲವೇ ದೊಡ್ಡದು. ವಸಿಷ್ಠರನ್ನು ನಾಶ ಮಾಡಬೇಕೆಂದರೆ ನನಗಿರುವ ಶಕ್ತಿ ಸಾಲದು. ಹಾಗಾಗಿ ಧನುರ್ವೇದದಲ್ಲಿನ ಸಮಸ್ತ ಅಸ್ತ್ರ-ಶಸ್ತ್ರಗಳನ್ನು ತನ್ನದಾಗಿಕೊಳ್ಳಬೇಕುಎಂದು ಯೋಚಿಸಿ, ತನ್ನ ಒಬ್ಬ ಮಗನನ್ನು ಸಿಂಹಾಸನದ ಮೇಲೆ ಕೂರಿಸಿ, ತಾನು ತಪಸ್ಸಿಗಾಗಿ ಹಿಮಾಲಯಕ್ಕೆ ಹೋದ.

ವಿಶ್ವಾಮಿತ್ರ ಹಿಮಾಲಯ ಪರ್ವತದಲ್ಲಿ ಶಿವನನ್ನು ಕುರಿತು ಘೋರ ತಪಸ್ಸನ್ನಾಚರಿಸಿದ. ಈಶ್ವರ ಪ್ರತ್ಯಕ್ಷವಾಗಿ, “ವಿಶ್ವಾಮಿತ್ರ! ನಿನ್ನ ಮನಸ್ಸಿನಲ್ಲಿ ಯಾವ ಕೋರಿಕೆಯಿದೆಯೋ ತಿಳಿಸು. ನಾನು ಅದನ್ನು ಈಡೇರಿಸುತ್ತೇನೆಎಂದು ವರ ಕೊಟ್ಟರು. ಆಗ ವಿಶ್ವಾಮಿತ್ರ,
ಯದಿ ತುಷ್ಟೋಮಹಾದೇವ ಧನು್ ವೇದೋ ಮಮ ಅನಘ
ಸಾ ಅಂಗ ಉಪ ಅಂಗ ಉಪನಿಷದಃ ಸ ರಹಸ್ಯಃ ಪ್ರದೀಯತಾಂ
ಮಹಾದೇವ! ನಿನಗೆ ನಿಜವಾಗಿಯೂ ನನ್ನ ತಪಸ್ಸಿನಿಂದ ಸಂತೋಷವಾಗಿದ್ದರೆ, ನಾನು ಯಾರ ಬಳಿಯೂ ಹೋಗಿ ಧನುರ್ವಿದ್ಯೆ ಕಲಿಯದೆ, ಧನುರ್ವೇದದ ಅಸ್ತ್ರಗಳೆಲ್ಲಾ ರಹಸ್ಯಗಳ ಸಹಿತ ನನಗೆ ತಿಳಿಯುವಂತೆ ಅನುಗ್ರಹಿಸುಎಂದು ಬೇಡಿದ. ಶಿವ ಅಸ್ತು ಎಂದರು. 

ಹುಣ್ಣಿಮೆಯ ದಿನದಲ್ಲಿ ಸಮುದ್ರ ಉಕ್ಕುವಂತೆ ಆತ್ಮವಿಶ್ವಾಸದಿಂದ ಉಕ್ಕಿಹೋದ ವಿಶ್ವಾಮಿತ್ರ ತನ್ನ ರಥವನ್ನು ಹತ್ತಿ ವಸಿಷ್ಠರ ಆಶ್ರಮವನ್ನು ಸೇರಿದ. ಅವನು ಬರುವ ಹೊತ್ತಿಗೆ ಆಶ್ರಮ ಜಿಂಕೆ, ಪಕ್ಷಿ, ಗೋವು, ಗುರುವಿನ ಬಳಿ ವೇದಾಭ್ಯಾಸ ಮಾಡುತ್ತಿದ್ದ ಶಿಷ್ಯರಿಂದ ತುಂಬಿತ್ತು. ಇದರಿಂದ ಇನ್ನೂ ಕೋಪಗೊಂಡ ವಿಶ್ವಾಮಿತ್ರ, ಒಂದು ಮಾತೂ ಹೇಳದೆ ತನ್ನ ಬಳಿಯಿರುವ ಅಸ್ತ್ರಗಳನ್ನು ಆಶ್ರಮದ ಮೇಲೆ ಪ್ರಯೋಗಿಸಿದ. ಒಂದೇ ಬಾರಿಗೆ ಭೂಕಂಪನ ಬಂದಂತೆ ಅಸ್ತ್ರಗಳ ಪ್ರಯೋಗವಾಯಿತು. ಆಶ್ರಮ ಸುಟ್ಟು ಭಸ್ಮವಾಯಿತು. ಆಶ್ರಮದಲ್ಲಿದ್ದ ಗುರು, ಶಿಷ್ಯ, ಜಿಂಕೆ, ಗೋವುಗಳು ದಿಕ್ಕಾಪಾಲಾಗಿ ಓಡಿದರು. ವಸಿಷ್ಠರು ತಾವು ಕಾಪಾಡುತ್ತೇನೆಂದರೂ, ಆಕಾಶದಿಂದ ನಿರಂತರವಾಗಿ ಬೀಳುತ್ತಿದ್ದ ಅಸ್ತ್ರಗಳಿಗೆ ಹೆದರಿ ಎಲ್ಲರೂ ಓಡಿದರು. ಆಶ್ರಮದಲ್ಲಿ ವಸಿಷ್ಠರೊಬ್ಬರೇ ನಿಂತರು. ಆಗ ವಿಶ್ವಾಮಿತ್ರನು ಅಗ್ನೇಯಾಸ್ತ್ರವನ್ನು ಪ್ರಯೋಗಿಸಿದ. ಅದು ಅಗ್ನಿ ಜ್ವಾಲೆಗಳನ್ನು ಉಗುಳುತ್ತಾ ಆಶ್ರಮದ ಮೇಲೆ ಬಂತು. “ಇಷ್ಟು ದಿನಗಳ ಕಾಲ ಆಶ್ರಮವನ್ನು ಪೋಷಿಸಿದ್ದೇನೆ. ಇಂದು ನಿನ್ನ ಕೋಪದ ಕಾರಣದಿಂದ ಆಶ್ರಮವನ್ನು ಭಸ್ಮ ಮಾಡಿದ್ದೀಯಎಂದು ವಸಿಷ್ಠರು ಸಮಸ್ತ ಲೋಕಗಳನ್ನು ಶಾಸಿಸುವ ಯಮದಂಡವನ್ನು ಹಿಡಿದುಕೊಂಡ ಯಮನಂತೆ, ತಮ್ಮ ಬ್ರಹ್ಮದಂಡವನ್ನು ಹಿಡಿದುಕೊಂಡು ಕೆಳಗೆ ಕುಳಿತುಬಿಟ್ಟರು. ಉರಿಯುತ್ತಿರುವ ಬೆಂಕಿಗೆ ನೀರನ್ನು ಹಾಕಿದಂತೆ, ಅಗ್ನೇಯಾಸ್ತ್ರ ತಣ್ಣಗಾಗಿ ಬ್ರಹ್ಮದಂಡದೊಳಕ್ಕೆ ಹೋಗಿಬಿಟ್ಟಿತು. ತಾನು ಅಷ್ಟು ದಿನಗಳ ಕಾಲ ತಪಸ್ಸು ಮಾಡಿ ಗಳಿಸಿದ ಅಸ್ತ್ರವನ್ನು, ಯಾವುದೇ ಪ್ರತ್ಯಸ್ತ್ರವನ್ನು ಪ್ರಯೋಗಿಸದೆ, ಕೇವಲ ತನ್ನ ಬ್ರಹ್ಮದಂಡದಿಂದ ವಸಿಷ್ಠರು ನಿಗ್ರಹಿಸಿದಾಗ ವಿಶ್ವಾಮಿತ್ರನ ಕೋಪ ತೀವ್ರವಾಯಿತು. ಅವನು ಒಂದೇ ಸಮಯದಲ್ಲಿ ವಾರುಣ, ಇಂದ್ರ, ಪಾಶುಪತ, ಐಶಿಕ, ಮಾನವ, ಗಾಂಧರ್ವ, ಬ್ರಹ್ಮಪಾಶ, ಕಾಲಪಾಶ, ವಾರುಣಪಾಶ, ಪಿನಾಕ, ಕ್ರೌಂಚ, ಧರ್ಮಚಕ್ರ, ಕಾಲಚಕ್ರ, ವಿಷ್ಣುಚಕ್ರ, ತ್ರಿಶೂಲ, ಕಾಪಾಲ, ಕಂಕಣ, ಕಂಕಾಲ, ದೊಡ್ಡ ದೊಡ್ಡ ಗದೆಗಳೇ ಮೊದಲಾದ ಅಸ್ತ್ರಗಳನ್ನು ವಸಿಷ್ಠರ ಮೇಲೆ ಪ್ರಯೋಗಿಸಿದ. ಆದರೆ ಅವೆಲ್ಲವೂ ವಸಿಷ್ಠರ ಬ್ರಹ್ಮದಂಡದೊಳಕ್ಕೆ ಹೋಗಿಬಿಟ್ಟವು. 

ಕೊನೆಯದಾಗಿ ತನ್ನ ಹತ್ತಿರವಿದ್ದ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮಂತ್ರ ಸ್ಮರಿಸಿದಾಗ, ಸಮುದ್ರಗಳು ಉಕ್ಕಿದವು, ಪರ್ವತಗಳು ಒಡೆದವು, ಪ್ರಪಂಚದಲ್ಲಿನ ಎಲ್ಲ ಪ್ರಾಣಿಗಳು ಒಂದೇ ಸಮಯದಲ್ಲಿ ಕ್ಷೋಭೆಗೊಳಗಾದವು. ಅಷ್ಟು ಶಕ್ತಿವಂತವಾದ ಬ್ರಹ್ಮಾಸ್ತ್ರವನ್ನು ವಿಶ್ವಾಮಿತ್ರ ವಸಿಷ್ಠರ ಮೇಲೆ ಪ್ರಯೋಗಿಸಿಬಿಟ್ಟ. ಅಷ್ಟು ಕಾಲ ಎಷ್ಟೋ ಜನರನ್ನು ಬಲಿತೆಗೆದುಕೊಂಡಿದ್ದ ಬ್ರಹ್ಮಾಸ್ತ್ರ, ನಿಶ್ಯಬ್ಧವಾಗಿ ವಸಿಷ್ಠರ ಬ್ರಹ್ಮದಂಡದೊಳಗೆ ಹೋಗಿಬಿಟ್ಟಿತು. ಆಗ ವಿಶ್ವಾಮಿತ್ರ,
ಧಿಕ್ ಬಲಂ ಕ್ಷತ್ರಿಯ ಬಲಂ ಬ್ರಹ್ಮ ತೇಜೋ ಬಲಂ ಬಲಂ
ಏಕೇನ ಬ್ರಹ್ಮ ದಂಡೇನ ಸರ್ವ ಅಸ್ತ್ರಾಣಿ ಹತಾನಿ ಮೇ
ಛೆ! ಬ್ರಹ್ಮರ್ಷಿಯ ಬಲದ ಮುಂದೆ ನನ್ನ ಕ್ಷತ್ರಿಯ ಬಲ ಏನೂ ಕೆಲಸ ಮಾಡುವುದಿಲ್ಲ. ಎಷ್ಟೋ ಅಸ್ತ್ರಗಳನ್ನು ಕಲಿತೆ, ಪ್ರಯೋಗಿಸಿದೆ. ಆದರೆ ಅವೆಲ್ಲವನ್ನು ಇವರು ಕೇವಲ ಒಂದು ದಂಡದಿಂದ ಹಿಡಿದಿಟ್ಟುಕೊಂಡುಬಿಟ್ಟರುಎಂದು ತನ್ನ ರಥದಿಂದಿಳಿದು, “ವಸಿಷ್ಠರು ಬ್ರಹ್ಮರ್ಷಿಗಳಾದ್ದರಿಂದಲೇ ನಾನು ಅವರನ್ನು ಸೋಲಿಸಲಾಗಲಿಲ್ಲ, ಆದ್ದರಿಂದ ನಾನೂ ಬ್ರಹ್ಮರ್ಷಿಯಾಗುತ್ತೇನೆ” ಎಂದುಕೊಂಡು ದಕ್ಷಿಣ ದಿಕ್ಕಿಗೆ ಹೊರಟುಬಿಟ್ಟ. ಅಲ್ಲಿ ತನ್ನ ಪತ್ನಿಯ ಜೊತೆ ಸಾವಿರ ವರ್ಷಗಳ ಕಾಲ ಘೋರ ತಪಸ್ಸನ್ನು ಆಚರಿಸಿದ. ಅಲ್ಲಿ ಅವನಿಗೆ ಹವಿಷ್ಪಂದ, ಮಧುಷ್ಯಂದ, ದೃಢನೇತ್ರ, ಮಹಾರಥನೆಂಬ ನಾಲ್ಕು ಪುತ್ರರು ಜನಿಸಿದರು. 


ವಿಶ್ವಾಮಿತ್ರನ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವರು, “ಇಷ್ಟು ದಿನ ತಪಸ್ಸು ಮಾಡಿದ ನೀನು ರಾಜರ್ಷಿಯಾಗಿದ್ದೀಯ. ಇಂದಿನಿಂದ ನೀನು ವಿಶ್ವಾಮಿತ್ರ ರಾಜನಾಗಲ್ಲದೇ, ರಾಜರ್ಷಿ ವಿಶ್ವಾಮಿತ್ರನಾಗುತ್ತೀಯಎಂದು ಹೇಳಿ ಅಂತರ್ಧಾನನಾದರು. “ಇಷ್ಟು ವರ್ಷಗಳು ತಪಸ್ಸು ಆಚರಿಸಿದರೆ ನಾನು ರಾಜರ್ಷಿಯಾಗಿದ್ದೇನೆ, ಇನ್ನು ಬ್ರಹ್ಮರ್ಷಿ ಎಂದು ಆಗುತ್ತೇನೋ” ಎಂದು ರಾಜರ್ಷೀ ವಿಶ್ವಾಮಿತ್ರರು ಆತಂಕ ಪಟ್ಟರು.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ