೧೫. ತ್ರಿಶಂಕು ಸ್ವರ್ಗ
ಇಕ್ಷ್ವಾಕು ವಂಶದಲ್ಲಿ ತ್ರಿಶಂಕು ಎಂಬ ರಾಜನಿದ್ದ. ಅವನಿಗೆ ಶರೀರದ ಮೇಲಿನ ವ್ಯಾಮೋಹದಿಂದ ಸಶರೀರವಾಗಿ ಸ್ವರ್ಗ ಪ್ರವೇಶ ಮಾಡಬೇಕೆಂಬ ಕೋರಿಕೆಯಾಯಿತು. ತಕ್ಷಣವೇ ತನ್ನ ಕುಲಗುರುಗಳಾದ ವಸಿಷ್ಠರಿಗೆ ತನ್ನ ಆಸೆಯನ್ನು ತಿಳಿಸಿದ. ಆಗ ವಸಿಷ್ಠರು, “ನೀನು ಎಷ್ಟೇ ಶ್ರೇಷ್ಠ ರಾಜನಾದರೂ, ಎಷ್ಟೇ ಶ್ರೇಷ್ಠ ಯಾಗಗಳನ್ನು ಮಾಡಿದ್ದರೂ, ಸಶರೀರವಾಗಿ ಸ್ವರ್ಗಕ್ಕೆ ಹೋಗುವುದು ಧರ್ಮಶಾಸ್ತ್ರದಲ್ಲಿ ಹೇಳಿಲ್ಲ. ಯಾರಾದರೂ ಸರಿ, ಶರೀರವನ್ನು ತ್ಯಜಿಸುವುದು ಅನಿವಾರ್ಯ, ಅದರ ನಂತರವೇ ಸ್ವರ್ಗ ಲೋಕದ ಪ್ರವೇಶ ಸಿಗುತ್ತದೆ. ಹಾಗಾಗಿ ಸಶರೀರವಾಗಿ ಸ್ವರ್ಗಕ್ಕೆ ಹೋಗುವುದು ಅಸಾಧ್ಯ" ಎಂದು ಅವನ ಕೋರಿಕೆಯನ್ನು ನಿರಾಕರಿಸಿದರು.
ಆಗ ತ್ರಿಶಂಕು ವಸಿಷ್ಠರ ೧೦೦ ಮಂದಿ ಕುಮಾರರ ಬಳಿಗೆ ಹೋಗಿ, ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ. ಅವರು, “ನಮ್ಮ ತಂದೆಯವರು ಸಾಧ್ಯವಿಲ್ಲ ಎಂದ ಮೇಲೆ ಅದು ಸಾಧ್ಯವಿಲ್ಲ, ಯಾರೂ ಸಶರೀರವಾಗಿ ಸ್ವರ್ಗ ಸೇರಲು ಆಗುವುದಿಲ್ಲ. ಅವರು ಅಸಾಧ್ಯವೆಂದ ಕೆಲಸ ನಮ್ಮಿಂದಾಗದು” ಎಂದು ಹೇಳಿದರು. ಅಸಮಾಧಾನಗೊಂಡ ತ್ರಿಶಂಕು ತಾನು ಬೇರೆ ಗುರುಗಳನ್ನು ಹುಡುಕಿ ತನ್ನ ಕೋರಿಕೆಯನ್ನು ಈಡೇರಿಸಿಕೊಳ್ಳುತ್ತೇನೆ ಎಂದು ಹೇಳಿ ಹೋರಟುಹೋದ. ಆಗ ಅವರು, "ನೀನು ಗುರುಗಳ ಮಾತನ್ನೂ ಕೇಳದೆ, ಅವರ ಕುಮಾರರ ಮಾತನ್ನೂ ಕೇಳದೆ, ಈಗ ಮತ್ತೋರ್ವ ಗುರುವನ್ನು ಹುಡುಕಲು ಹೊರಟಿದ್ದೀಯ, ನಿನಗೆ ಈ ರೀತಿಯಾದ ದುರ್ಬುದ್ಧಿ ಹುಟ್ಟಿದ ಕಾರಣದಿಂದ ನೀನು ಚಂಡಾಲನಾಗು" ಎಂದು ಶಾಪ ಕೊಟ್ಟರು.
ಮರುದಿನ ತ್ರಿಶಂಕು ನಿದ್ದೆಯಿಂದ ಏಳುವ ವೇಳೆಗೆ, ಅವನ ಮುಖದಲ್ಲಿನ ಕಾಂತಿಯು ಕುಂದಿ, ಮುಖವೆಲ್ಲಾ ಕಪ್ಪಾಗಿತ್ತು. ಅವನ ಬಂಗಾರದ ಆಭರಣಗಳು ಹಿತ್ತಾಳೆಯಾಗಿದ್ದವು. ಕೂದಲು, ಕಣ್ಣುಗಳು ಕೆಂಪಾಗಿ, ನೋಡಲು ಭಯಂಕರವಾಗಿದ್ದ. ಅವನ ರೂಪವನ್ನು ನೋಡಿ ಅವನ ಮಂದಿರದಲ್ಲಿದ್ದವರೂ, ಇತರ ಮಂತ್ರಿಗಳೂ ಭಯದಿಂದ ಓಡಿಹೋದರು. ತ್ರಿಶಂಕು ಅದೇ ರೂಪದಲ್ಲಿ ತಿರುಗುತ್ತಾ ಕೊನೆಗೆ ರಾಜರ್ಷೀಯಾಗಿದ್ದ ವಿಶ್ವಾಮಿತ್ರರನ್ನು ಆಶ್ರಯಿಸಿದ.
ವಸಿಷ್ಠರನ್ನು ಅಸ್ತ್ರಗಳಿಂದ ಹೇಗೂ ಸೋಲಿಸಲಾರೆನೆಂದು ತಿಳಿದ ವಿಶ್ವಾಮಿತ್ರರು, ವಸಿಷ್ಠರು ಅಸಾಧ್ಯವೆಂದ ಕಾರ್ಯವನ್ನು ತಾನು ಸಾಧಿಸಿ, ವಸಿಷ್ಠರು ಮಾಡದ ಯಾಗವನ್ನು ವಿಶ್ವಾಮಿತ್ರರು ಮಾಡಿದನೆಂಬ ಹೆಗ್ಗಳಿಕೆಗೆ ಪಾತ್ರನಾಗಬೇಕೆಂದು ನಿರ್ಧರಿಸಿದರು. ತ್ರಿಶಂಕುವಿಗೆ ಅವನ ಕೋರಿಕೆಯನ್ನು ನೆರೆವೇರಿಸುವುದಾಗಿ ಭರವಸೆ ಕೊಟ್ಟರು. ತನ್ನ ಶಿಷ್ಯರನ್ನು ಮತ್ತು ಮಕ್ಕಳನ್ನು ಕರೆದು, "ಈ ಬ್ರಹ್ಮಾಂಡವನ್ನೆಲ್ಲಾ ತಿರುಗಿ, ವಸಿಷ್ಠರು ಅಸಾಧ್ಯವೆಂದ ಯಾಗವನ್ನು ವಿಶ್ವಾಮಿತ್ರನು ಮಾಡುತ್ತಿದ್ದಾನೆ, ತ್ರಿಶಂಕುವನ್ನು ವಿಶ್ವಾಮಿತ್ರನು ಸಶರೀರವಾಗಿ ಸ್ವರ್ಗಕ್ಕೆ ಕಳಿಸುತ್ತಿದ್ದಾನೆ" ಎಂದು ಹೇಳಿ ಋಷಿ ಮುನಿಗಳನ್ನೂ, ಬ್ರಾಹ್ಮಣರನ್ನೂ ಕರೆತನ್ನಿ ಎಂದು ಆಜ್ಞೆ ಮಾಡಿದರು. ಕರೆಯನ್ನು ಯಾರು ನಿರಾಕರಿಸುವರೋ ಅವರ ವಿವರಗಳನ್ನು ತರಲು ಆಗ್ರಹಿಸಿದರು. ವಿಶ್ವಾಮಿತ್ರರಿಗೆ ಹೆದರಿ ವಸಿಷ್ಠ ಮಹರ್ಷಿಯ ಪುತ್ರರು ಮತ್ತು ಮಹೋದಯನೆಂಬ ಬ್ರಾಹ್ಮಣನ ಹೊರತು ಎಲ್ಲರೂ ಬಂದರು. ಅವರು ನಿರಾಕರಿಸಿದ್ದನ್ನು ವಿಶ್ವಾಮಿತ್ರರ ಮಕ್ಕಳು ವಿಶ್ವಾಮಿತ್ರರಿಗೆ ತಿಳಿಸಿದರು.
ಮಹೋದಯನು ನಿರಾಕರಿಸುವ ಮುನ್ನ, "ಯಾಗ ಮಾಡುತ್ತಿರುವವನು ಒಬ್ಬ ಕ್ಷತ್ರಿಯ, ಯಾಗ ಮಾಡಿಸುತ್ತಿರುವನು ಒಬ್ಬ ಚಂಡಾಲ, ಹೀಗಿರುವಾಗ ದೇವತೆಗಳು ಹವಿಸ್ಸನ್ನು ಸ್ವೀಕರಿಸಲಾರರು, ಅದಲ್ಲದೆ ಸಶರೀರವಗಿ ಸ್ವರ್ಗ ಸೇರಬಹುದೆಂಬುದು ವೇದಗಳಲ್ಲಿ ಕೂಡ ಇಲ್ಲ ಹಾಗಾಗಿ ನಾನು ನಿಮ್ಮೊಡನೆ ಬರಲೊಲ್ಲೆ ಎಂದು ಹೇಳಿದ್ದ.
ಈ ಮಾತನ್ನು ಕೇಳಿದ ವಿಶ್ವಾಮಿತ್ರರಿಗೆ ಭಯಂಕರವಾದ ಕೋಪ ಬಂದು ವಸಿಷ್ಠರ ಪುತ್ರರನ್ನು, ‘ನೀವು ಭಸ್ಮವಾಗಿ ನರಕಕ್ಕೆ ಹೋಗಿ ೭೦೦ ಜನ್ಮಗಳವರೆಗೆ ಶವ ಮಾಂಸವನ್ನು ತಿಂದು ಬದುಕಿರಿ’ ಎಂದೂ, ಮಹೋದಯನನ್ನು ‘ಸರ್ವ ಲೋಕದಲ್ಲಿಯೂ ದ್ವೇಷಕ್ಕೆ ಒಳಗಾಗಿ, ನಿಷಾದನಾಗಿ ಬದುಕು’ ಎಂದೂ ಶಪಿಸಿದರು.
ಯಾಗ ಪ್ರಾರಂಭವಾಯಿತು. ಆದರೆ ಯಾಗಾಗ್ನಿಯಲ್ಲಿ ಹವಿಸ್ಸನ್ನು ಸ್ವೀಕರಿಸಲು ಯಾವ ದೇವತೆಯೂ ಬರಲಿಲ್ಲ. ಯಾರೂ ಬರದಿರುವುದನ್ನು ಕಂಡು, ವಿಶ್ವಾಮಿತ್ರರು ಕೋಪಗೊಂಡು ತನ್ನ ತಪಃಶಕ್ತಿಯಿಂದ ತ್ರಿಶಂಕುವನ್ನು ಮೇಲಕ್ಕೆ ಕಳಿಸಿದರು. ತ್ರಿಶಂಕುವು ಆಕಾಶ ಮಾರ್ಗವಾಗಿ ಪ್ರಯಾಣಿಸುತ್ತಾ ಸ್ವರ್ಗದಕಡೆಗೆ ವೇಗವಾಗಿ ಹೋದ. ಈ ವಿಷಯ ತಿಳಿದ ದೇವೇಂದ್ರ,
“ತ್ರಿಶಂಕೋ ಗಚ್ಛ ಭೂಯಾಃ ತ್ವಂ ಅಸಿ ಸ್ವರ್ಗ ಕೃತ ಆಲಯಂ
ತ್ರಿಶಂಕು, ಗುರು ಶಾಪಕ್ಕೆ ಗುರಿಯಾದ ನಿನಗೆ ಸ್ವರ್ಗದಲ್ಲಿ ಪ್ರವೇಶವಿಲ್ಲ, ನೀನು ತಲೆ ಕೆಳಗಾಗಿ ಭೂಮಿಯ ಮೇಲೆ ಬೀಳು” ಎಂದ.
ತ್ರಿಶಂಕು ತಲೆಕೆಳಗಾಗಿ ಭೂಮಿಯ ಮೇಲೆ ಬೀಳುವಾಗ ವಿಶ್ವಾಮಿತ್ರರನ್ನು ಪ್ರಾರ್ಥಿಸಿದ. ವಿಶ್ವಾಮಿತ್ರರು ತಮ್ಮ ತಪಃಶಕ್ತಿಯಿಂದ ದಕ್ಷಿಣ ದಿಕ್ಕಿನಲ್ಲಿ ನಕ್ಷತ್ರ ಮಂಡಲವನ್ನೂ, ಸಪ್ತರ್ಷಿ ಮಂಡಲವನ್ನೂ ಸೃಷ್ಠಿಸಿದರು. ಆದರೂ ದೇವತೆಗಳು ಬರದಿದ್ದನ್ನು ನೋಡಿ, ದೇವತೆಗಳನು ಕೂಡ ಸೃಷ್ಠಿಸಲು ಮುಂದಾದರು. ಆಗ ದೇವತೆಗಳು ಬಂದು, “ಮಹಾನುಭಾವ! ಶಾಂತಿ. ನಿನಗೆ ತಪಃ ಶಕ್ತಿ ಇದ್ದ ಮಾತ್ರಕ್ಕೆ ಪ್ರತಿ ಸ್ವರ್ಗದ ಸೃಷ್ಠಿ ಸರಿಯಿಲ್ಲ, ಶಾಸ್ತ್ರದಂತೆ ಸಶರೀರವಾಗಿ ಸ್ವರ್ಗ ಸೇರಲು ಸಾಧ್ಯವಿಲ್ಲ. ಇದೂ ನಿಮಗೆ ತಿಳಿದಿದೆ, ನಿಮ್ಮಂಥವರು ಹೀಗೆ ನಡೆದುಕೊಳ್ಳುವುದು ಸರಿಯಲ್ಲ, ನೀವು ಸೃಷ್ಠಿಸಿದ ನಕ್ಷತ್ರ ಮಂಡಲವು ಜ್ಯೋತಿಷ್ಯ ಚಕ್ರದಿಂದ ಹೊರಗಿದ್ದು, ಅದರಲ್ಲಿ ತ್ರಿಶಂಕುವು ತಿರುಗುತ್ತಿರಲಿ” ಎಂದು ವರಕೊಟ್ಟರು.
ಶಾಂತಿಸಿದ ವಿಶ್ವಾಮಿತ್ರರು ಒಪ್ಪಿಕೊಂಡು ತಮಗಿಲ್ಲಿ ಮನಶ್ಯಾಂತಿಯಿಲ್ಲವೆಂದು ಪಶ್ಚಿಮ ದಿಕ್ಕಿಗೆ ತಪಸ್ಸಿಗಾಗಿ ಹೊರಟರು.
Comments
Post a Comment