೧೬. ಶುನಃಶ್ಶೇಫನ ಕಥೆ

ಪಶ್ಚಿಮ ದಿಕ್ಕಿನಲ್ಲಿ ವಿಶ್ವಾಮಿತ್ರರು ಉಗ್ರ ತಪಸ್ಸನ್ನಾರಂಭಿಸಿದರು. ಅದೇ ಕಾಲದಲ್ಲಿ ಅಯೋಧ್ಯಾ ನಗರವನ್ನು ಅಂಬರೀಷನೆಂಬ ರಾಜ ಆಳುತ್ತಿದ್ದ. ಅವನ ಅಶ್ವಮೇಧದ ಯಾಗಾಶ್ವವನ್ನು ಇಂದ್ರ ಅಪಹರಿಸಿದ. ಅಶ್ವ ಸಿಗದಿದ್ದರೆ ಅಪಶಕುನವೆಂದು ಮಹರ್ಷಿಗಳು ಹೇಳಿದರು. ಆದರೆ ಆ ಅಶ್ವಕ್ಕೆ ಬದಲಾಗಿ ಒಬ್ಬ ಮನುಷ್ಯನನ್ನು ಯಾಗಪಶುವಾಗಿ ನ್ಯಾಯಮಾರ್ಗದಿಂದ ತಂದರೆ ಯಾಗ ಪೂರ್ತಿಯಾಗುತ್ತದೆ ಎಂದರು.

ಮನುಷ್ಯನನ್ನು ಹುಡಿಕಿಕೊಂಡು ಹೊರಟ ಅಂಬರೀಷನಿಗೆ ಭೃಗುತುಂಗವೆಂಬ ಪರ್ವತದ ಮೇಲೆ ಋಚಿಕನೆಂಬ ಋಷಿ ತನ್ನ ಪತ್ನಿ ಪುತ್ರರ ಜೊತೆ ಸಿಕ್ಕ. ಅಂಬರೀಷನು ಅವರ ಬಳಿ ಹೋಗಿ ತನ್ನ ಯಾಗಾಶ್ವ ಅಪಹರಣಕ್ಕೊಳಗಾಗಿದೆ, ಆದ್ದರಿಂದ ತನಗೆ ಒಬ್ಬ ಯಾಗಪಶುಬೇಕಾಗಿದೆ, ಈಗ ಅವರಿಗಿರುವ ಮಕ್ಕಳಲ್ಲಿ ಯಾರಾದರೂ ಒಬ್ಬನನ್ನು ಕೊಟ್ಟು ಅನುಗ್ರಹಿಸಬೇಕೆಂದು ಕೇಳಿಕೊಂಡ. ಆಗ ಋಚಿಕನು, “ದೊಡ್ಡ ಮಗ ಧರ್ಮಸಂತಾನ (ಪೂರ್ವ ಜನ್ಮದ ಪುಣ್ಯ ಫಲಗಳನ್ನು ದೊಡ್ಡ ಮಗನಾಗಿ ಕೊಡುತ್ತಾರೆ), ಆದ್ದರಿಂದ ಅವನನ್ನು ಕೊಡಲಾರೆ. ಶಾಸ್ತ್ರ ಪ್ರಕಾರ ಚಿಕ್ಕವನನ್ನು ಕೊಟ್ಟರೆ ಐಶ್ವರ್ಯ ಹೋಗುತ್ತದೆ” ಎಂದ. ಮಧ್ಯಮಗನಾದ ಶುನಃಶ್ಶೇಫ ಅಂಬರೀಷನ ಜೊತೆ ಹೋಗಲು ಒಪ್ಪಿಕೊಂಡ.

ರಾಜನಿದ್ದರೆ ರಾಜ್ಯ, ರಾಜನಿರಬೇಕೆಂದರೆ ಯಾಗ ಪೂರ್ತಿಯಾಗಬೇಕು. ಆ ಯಾಗ ಪೂರ್ತಿಯಾಗಲು ಋಚಿಕನು ತನ್ನ ಮಧ್ಯಮಗನನ್ನು ಕಳಿಸಿದ. ಆಂಬರೀಷನು ಋಚಿಕನಿಗೆ ಲಕ್ಷ ಗೋವುಗಳನ್ನು ದಾನ ಕೊಟ್ಟ. ಶುನಃಶ್ಶೇಫನನ್ನು ಕರೆದುಕೊಂಡು ಅಂಬರೀಷ ಕೆಲ ದೂರ ಪ್ರಯಾಣಿಸಿದ ನಂತರ ವಿಶ್ರಾಂತಿಗಾಗಿ ಒಂದು ಪ್ರದೇಶದಲ್ಲಿ ತಂಗಿದ. ಶುನಃಶೇಫ ಅಲ್ಲಿಯೇ ಹತ್ತಿರದಲ್ಲಿದ್ದ ವಿಶ್ವಾಮಿತ್ರರ ಆಶ್ರಮವನ್ನು ನೋಡಿದ. ತಕ್ಷಣವೇ ಆಶ್ರಮಕ್ಕೆ ಹೋಗಿ, ವಿಶ್ವಾಮಿತ್ರರನ್ನು, “ನಾನು ನಿಮ್ಮ ಅಕ್ಕನ ಮಗ. ನೀವು ನನಗೆ ಸೋದರಮಾವ. ಅಂಬರೀಷ  ಅಪ್ಪನನ್ನು ತನ್ನ ಮಕ್ಕಳಲ್ಲಿ ಯಾರಾದರೊಬ್ಬರನ್ನು ಯಾಗಪಶುವಾಗಿ ಕಳಿಸಲು ಕೇಳಿಕೊಂಡ. ದೊಡ್ಡವನನ್ನು ಅಪ್ಪ ಕೊಡೆನೆಂದರು. ಚಿಕ್ಕವನನ್ನು ಅಮ್ಮ ಕೊಡೆನೆಂದರು. ಮಧ್ಯದವನಾದ ನನ್ನನ್ನು ಯಾಗಪಶುವಾಗಿ ಕೊಟ್ಟುಬಿಟ್ಟಿದ್ದಾರೆ. ನನಗೆ ದೀರ್ಘಕಾಲ ಜೀವಿಸಿ, ತಪಸ್ಸು ಮಾಡಿ ಸ್ವರ್ಗಕ್ಕೆ ಹೋಗಬೇಕೆಂಬ ಆಸೆಯಿದೆ. ನೀವೇ ನನ್ನನ್ನು ರಕ್ಷಿಸಬೇಕು” ಎಂದು ಕೇಳಿದ. ವಿಶ್ವಾಮಿತ್ರರು ಒಪ್ಪಿಕೊಂಡು ತನ್ನ ಪುತ್ರರನ್ನು ಕರೆದು, “ತಂದೆಯ ಮಾತನ್ನು ಕೇಳುವವರೇ ಅಲ್ಲವೇ ಮಕ್ಕಳೆಂದರೆ? ಆದ್ದರಿಂದ ನಿಮ್ಮಲ್ಲಿ ಯಾರಾದರೂ ಈ ಶುನಃಶ್ಶೇಫನ ಸ್ಥಾನದಲ್ಲಿ ಯಜ್ಞಪಶುವಾಗಿ ಹೋಗಿ” ಎಂದರು. ಆಗ ಅವರು,
“ಕಥಂ ಆತ್ಮ ಸುತಾನ್ ಹಿತ್ವಾ ತ್ರಾಯನ್ ಅಸ್ಯ ಸುತಂ ವಿಭೋ
ಅಕಾರ್ಯಂ ಇವ ಪಶ್ಯಾಮಃ ಶ್ವ ಮಾಂಸಂ ಇವ ಭೋಜನೇ
ಯಾವನ ಮಗನನ್ನೋ ರಕ್ಷಿಸಲು ನಿನ್ನ ಮಗನನ್ನು ಯಾಗಪಶುವನ್ನಾಗಿ ಕಳಿಸುತ್ತಿಯ. ನೀನು ಹೇಳುತ್ತಿರುವ ಧರ್ಮ ನಾಯಿಮಾಂಸ ತಿಂದಂತಿದೆ” ಎಂದರು. ಕೋಪಗೊಂಡ ವಿಶ್ವಾಮಿತ್ರರು,
“ಶ್ವ ಮಾಂಸಂ ಭೋಜಿನಃ ಸರ್ವೇ ವಾಸಿಷ್ಠಾಃ ಇವ ಜಾತಿಷು
ಪೂರ್ಣಂ ವರ್ಷ ಸಹಸ್ರಂ ತು ಪೃಥಿವ್ಯಾಂ ಅನುವತ್ಸ್ಯಥ
ನೀವು ಕೂಡ ವಸಿಷ್ಠರ ಮಕ್ಕಳ ಜಾತಿಯಲ್ಲಿ ಹುಟ್ಟಿ ಸಾವಿರ ವರ್ಷಗಳ ಕಾಲ ಅವರಂತೆಯೇ ನಾಯಿ ಮಾಂಸವನ್ನು ತಿನ್ನುತ್ತಾ ಬದುಕಿರಿ” ಎಂದು ಶಪಿಸಿದರು. ನಂತರ ಶುನಃಶ್ಶೇಫನಿಗೆ, “ನೀನು ಭಯಪಡಬೇಡ. ನಿನಗೆ ನಾನು ಎರೆಡು ಮಂತ್ರಗಳನ್ನು ಹೇಳಿಕೊಡುತ್ತೇನೆ. ನಿನ್ನನ್ನು ಯೂಪ ಸ್ಥಂಬಕ್ಕೆ ಕಟ್ಟಿದಾಗ ಆ ಮಂತ್ರಗಳನ್ನು ಜಪಿಸು. ಆಗ ಇಂದ್ರನು ಸಂತೋಷಗೊಂಡು, ನಿನ್ನನ್ನು ಬಲಿಕೊಡುವ ಮುಂಚೆಯೇ ಬಂದು, ತಾನು ಯಾಗದಿಂದ ಸಂತುಷ್ಟನಾದೆನೆಂದು ಹೇಳಿ ಯಾಗ ಫಲಿವನ್ನು ಕೊಡುತ್ತಾನೆ” ಎಂದು ಹೇಳಿ, ಮಂತ್ರಗಳನ್ನು ಉಪದೇಶಿಸಿ ಕಳಿಸಿದರು. 

ಶುನಃಶ್ಶೇಫನನ್ನು ಯೂಪಸ್ಥಂಭಕ್ಕೆ ಕಟ್ಟಿದರು. ಆಗ ಅವನು ವಿಶ್ವಾಮಿತ್ರರು ಹೇಳಿಕೊಟ್ಟ ಮಂತ್ರವನ್ನು ಜಪಿಸಿದ. ಇಂದ್ರನು ಪ್ರತ್ಯಕ್ಷವಾಗಿ, “ನಾನು ನಿಮ್ಮ ಯಾಗದಿಂದ ಸಂತೋಷಿಸಿದ್ದೇನೆ. ನೀವು ಯಾಗಪಶುವನ್ನು ಬಲಿಕೊಡದೆಯೇ ನಿಮಗೆ ಕೋಟಿ ಪಟ್ಟು ಫಲವನ್ನು ಕೊಡುತ್ತೇನೆ” ಎಂದು ಆಶ್ವಾಸನೆ ಕೊಟ್ಟ. ಶುನಃಶ್ಶೇಫ ಬದುಕಿದ. ಎಲ್ಲರೂ ಸಂತೋಷಪಟ್ಟರು.

ಇತ್ತ ವಿಶ್ವಾಮಿತ್ರರು ಕೋಪದಿಂದ ತನ್ನ ಮಕ್ಕಳಿಗೆ ಕೊಟ್ಟ ಶಾಪದಿಂದ ದುಃಖಿಸಿದರು. ಇನ್ನು ಯಾರ ಜೊತೆಯಲ್ಲಿಯೂ ಮಾತನಾಡದೆ ತಪಸ್ಸು ಮಾಡುತ್ತೇನೆಂದುಕೊಂಡು ಸಾವಿರ ವರ್ಷಗಳ ಕಾಲ ತಮ್ಮ ತಪಸ್ಸನ್ನು ಪ್ರಾರಂಭಿಸಿದರು. ಕೆಲವು ಕಾಲದ ನಂತರ ಅವರು ಸ್ನಾನ ಮಾಡಲು ಪುಷ್ಕರ ಕ್ಷೇತ್ರಕ್ಕೆ ಹೋದಾಗ, ಅಲ್ಲಿ ಸ್ನಾನ ಮಾಡುತ್ತಾ ಮೇನಕೆ ಕಾಣಿಸಿಕೊಂಡಳು. ಮೇಘಗಳ ಮಧ್ಯೆ ಮಿಂಚು ಬಂದಂತಿದ್ದ ಮೇನಕೆಯ ಸೌಂದರ್ಯಕ್ಕೆ ವಿಶ್ವಾಮಿತ್ರರು ಮಾರುಹೋದರು.

ಸರ್ವಂ ಸುರಾಣಾಂ ಕರ್ಮ ಏತತ್ ತಪೋ ಅಪಹರಣಂ ಮಹತ್
ಅಹೋ ರಾತ್ರಾ ಅಪದೇಶೇನ ಗತಾಃ ಸಂವತ್ಸರಾ ದಶ

ಹತ್ತು ವರ್ಷಗಳ ನಂತರ ವಿಶ್ವಾಮಿತ್ರರಿಗೆ ತಾನು ರಾಜ್ಯ ಬಿಟ್ಟು ಬಂದ ಕಾರಣ ನೆನಪಿಗೆ ಬಂತು. “ಈ ಮೇನಕೆಯ ಜೊತೆ ಒಂದೋ, ಎರೆಡೋ ದಿನಗಳು ಕಳೆಯುತ್ತೇನೆಂದುಕೊಂಡಿದ್ದೆ. ಆದರೆ ಹೀಗೆ ಹತ್ತು ವರ್ಷಗಳು ಕಳೆದುಬಿಟ್ಟಿವೆ. ಇದು ನನ್ನ ಮನಸ್ಸನ್ನು ದುರ್ಬಲಗೊಳಿಸಲು  ದೇವತೆಗಳ ಕುತಂತ್ರ” ಎಂದುಕೊಂಡು ಮೇನಕೆಯ ಕಡೆ ಕೆಂಗಣ್ಣಿನಿಂದ ನೋಡಿದರು. ಆದರೆ ತಕ್ಷಣ ಶಾಂತವಾಗಿ ಇದರಲ್ಲಿ ಅವಳ ತಪ್ಪಿಲ್ಲವೆಂದು ಅವಳನ್ನು ಹೊರಟುಹೋಗಲು ಹೇಳಿ, ಈ ಬಾರಿ ಜಾಗ್ರತೆಯಿಂದ ತಪಸ್ಸು ಮಾಡಬೇಕೆಂದುಕೊಂಡು ಉತ್ತರ ದಿಕ್ಕಿನಲ್ಲಿ ತಮ್ಮ ತಪಸ್ಸನ್ನು ಆರಂಭಿಸಿದರು.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ