೧೭. ಬ್ರಹ್ಮರ್ಷಿ ವಿಶ್ವಾಮಿತ್ರ

ವಿಶ್ವಾಮಿತ್ರರು ಉತ್ತರ ದಿಕ್ಕಿನ ಕೌಶಿಕಿ ನದಿಯ ತಟದಲ್ಲಿ ೧೦೦೦ ವರ್ಷ ಘೋರ ತಪಸ್ಸನ್ನು ಮಾಡಿದರು. ೧೦೦೦ ವರ್ಷಗಳ ತಪಸ್ಸಿನ ಬಳಿಕ ದೇವತೆಗಳ ಸಮೇತ ಬ್ರಹ್ಮದೇವರು ಪ್ರತ್ಯಕ್ಷರಾಗಿ, ’ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ, ಇನ್ನು ಮುಂದೆ ನಿನ್ನನ್ನು ಎಲ್ಲರೂ ಮಹರ್ಷಿ ಎಂದು ಕರೆಯಲಿಎಂದು ವರಕೊಟ್ಟರು. ವಿಶ್ವಾಮಿತ್ರರಿಗೆ, ’ನಾನು ಇಷ್ಟು ಸಾವಿರ ವರ್ಷಗಳು ತಪಸ್ಸು ಮಾಡಿದ್ದಕ್ಕೆ ಈಗ ಮಹರ್ಷಿ ಯಾದರೆ, ಬ್ರಹ್ಮರ್ಷಿಯಾಗುವುದೆಂದು ?’ ಎನ್ನಿಸಿತು.
ವಿಶ್ವಾಮಿತ್ರರು, "ನಾನು ಇಂದ್ರಿಯಗಳನ್ನು ಜಯಿಸಿದ್ದೀನೆಯೇ ?" ಎಂದು ಬ್ರಹ್ಮದೇವರನ್ನು ಪ್ರಶ್ನಿಸಿದರು.
ಬ್ರಹ್ಮ ದೇವರು, "ಇಂದ್ರಿಯಗಳನ್ನು ಜಯಿಸುವುದು ಸುಲಭದ ಮಾತಲ್ಲ, ನೀನಿನ್ನೂ ಇಂದ್ರಿಯಗಳನ್ನು ಜಯಿಸಿಲ್ಲ" ಎಂದರು.

ನಿಧಾನವಾಗಿ ವಿಶ್ವಾಮಿತ್ರರ ದ್ವೇಷವು ವಸಿಷ್ಠರಿಂದ ಇಂದ್ರಿಯಗಳ ಕಡೆಗೆ ವಾಲಿತು. ಅವರಿಗೆ, ‘ಅನವಶ್ಯವಾಗಿ ವಸಿಷ್ಠರ ಮೇಲೆ ದ್ವೇಷ ಸಾಧಿಸುತ್ತೀದ್ದೇನೆ, ಮೇನಕೆಯ ಜೊತೆಗಿನ ಕಾಮಕ್ಕೆ ಇಂದ್ರಿಯಗಳೇ ಕಾರಣ’ ಎನ್ನಿಸಿತು. ಮತ್ತೆ ಘೋರವಾದ ತಪಸ್ಸನ್ನು ಆರಂಭಿಸಿದರು. ಬಾರಿ ತನ್ನ ಎಡಗಾಲ ಮೇಲೆ ನಿಂತು, ತನ್ನ ನಾಲ್ಕು ದಿಕ್ಕಿಗೂ ಬೆಂಕಿಯನ್ನು ಹೊತ್ತಿಸಿ, ತಲೆಯನ್ನು ಮೇಲಕ್ಕೆತ್ತಿ ಸೂರ್ಯನ ಕಡೆ ದಿಟ್ಟಿಸುತ್ತಾ, ಕೈಗಳನ್ನು ಮೇಲೆತ್ತಿ ತಪಸ್ಸನ್ನು ಮಾಡಿದರು. ಮಳೆಗಾಲದಲ್ಲಿ ನಡುವಿನವರೆಗೆ ನೀರಲ್ಲಿ ಮುಳುಗಿದರೂ ತಪಸ್ಸು ಬಿಡಲಿಲ್ಲ. ವಿಶ್ವಾಮಿತ್ರರ ಘೋರ ತಪಸ್ಸನ್ನು ನೋಡಿ ಇಂದ್ರ ಪರೀಕ್ಷಿಸಲು ರಂಭೆಯನ್ನು ಕಳಿಸಿದ. ರಂಭೆ ಹೋಗಲು ಭಯದಿಂದ ನಿರಾಕರಿಸಿದಳು.  ಇಂದ್ರನ ಒತ್ತಾಯದಿಂದ ಅವಳು ಹೋಗಬೇಕಾಯಿತು.

ಮರುದಿನ ವಿಶ್ವಾಮಿತ್ರರು ಸ್ನಾನಕ್ಕಾಗಿ ಹೋಗುತ್ತಿದ್ದಾಗ, ಆಗತಾನೆ ಮಿಂದು ಬಂದ ರಂಭೆಯು ಕಾಣಿಸಿದಳು. ಮರಗಿಡಗಳು ಹೂವಿನಿಂದ ತುಂಬಿದ್ದು, ಕೋಗಿಲೆಯ ಕೂಗು ಕೇಳಿಸುತ್ತಿತ್ತು. ವಸಂತ ಋತುವಲ್ಲದಿದ್ದರೂ, ಮರ ಗಿಡಗಳು ಚಿಗುರಿದ್ದು, ಕೋಗಿಲೆಯ ಹಾಡು ಕೇಳುತ್ತಿರುವುದು ವಿಶ್ವಾಮಿತ್ರರಲ್ಲಿ ಅನುಮಾನ ಹುಟ್ಟಿತು. ಇದೆಲ್ಲಾ ತನ್ನ ತಪಸ್ಸು ಭಂಗ ಮಾಡಲು ಇಂದ್ರನು ಮಾಡುತ್ತಿರುವ ಪ್ರಯತ್ನವೆಂದು ಮನವರಿಕೆಯಾಗಿ,
ಯತ್ ಮಾಂ ಲೋ ಭಯಸೆ ರಂಭೆ ಕಮ ಕ್ರೋಧ ಜಯ ಏಷಿಣಂ |
ದಶ ವರ್ಷ ಸಹಸ್ರಾಣಿ ಶೈಲಿ ಸ್ಥಾಸ್ಯಸಿ ದುರ್ಭಗೇ ||
ನನ್ನನ್ನು ಪ್ರಲೋಭಿಸಲು ಯತ್ನಿಸಿದ ರಂಭಾ! ನೀನು ಹತ್ತು ಸಾವಿರ ಸಂವತ್ಸರಗಳು ಶಿಲೆಯಾಗಿ ಬೀಳು" ಎಂದು ಶಪಿಸಿದರು.
ಸ್ವಲ್ಪ ಸಮಯದ ನಂತರ ಶಾಂತಿಸಿ, ‘ಇದರಲ್ಲಿ ರಂಭೆಯ ಅಪರಾಧವೇನಿದೆ, ಇಂದ್ರನು ಕಳಿಸಿದ್ದಕ್ಕೆ ಆಕೆ ಬಂದಳು. ನಾನೇಕೆ ಮತ್ತೆ ಕ್ರೋಧಕ್ಕೆ ಬಲಿಯಾದೆ, ಎಂದು ಯೋಚಿಸಿ’, ಅವಳಿಗೆ ಒಬ್ಬ ಬ್ರಾಹ್ಮಣನಿಂದ ಶಾಪ ವಿಮೋಚನೆಯಾಗುತ್ತದೆ ಎಂದು ಹೇಳಿ ಕಳಿಸುತ್ತಾರೆ.

ನಂತರ ವಿಶ್ವಾಮಿತ್ರರು ತನ್ನ ಆಶ್ರಮಕ್ಕೆ ಹೋಗಿ, "ನನ್ನ ಶತೃಗಳು ಬೇರೆಲ್ಲೂ ಇಲ್ಲ, ನನ್ನಲ್ಲಿರುವ ಕಾಮ-ಕ್ರೋಧಗಳೇ ನನ್ನ ಶತೃಗಳು. ಕೋಪಕ್ಕೂ, ಕಾಮಕ್ಕೂ ನನ್ನ ಮನಸ್ಸೇ ಕಾರಣ. ಮನಸ್ಸು ನನ್ನ ಉಸಿರಿನ ಮೇಲೆ ಆಧಾರವಾಗಿದೆ, ಆದರೆ ಉಸಿರನ್ನು ಶರೀರದಿಂದ ಹೊರಗಿಡಲಾಗುವುದಿಲ್ಲ. ಅದಕ್ಕಾಗಿ ಕುಂಭಕವೆಂಬ ಯೋಗ ಪ್ರಕ್ರಿಯೆ ಮಾಡುತ್ತೇನೆ” ಎಂದು ನಿರ್ಧರಿಸಿದರು.

ವಿಶ್ವಾಮಿತ್ರರು ಕುಂಭಕ ಮಾಡಲು ನಿರ್ಧರಿಸಿ ಪೂರ್ವ ದಿಕ್ಕಿಗೆ ತಪಸ್ಸಿಗೆ ಹೊರಟರು. ಒಂದು ಸಾವಿರ ವರ್ಷಗಳು ಕುಂಭಕದಲ್ಲಿದ್ದು ತಪಸ್ಸನ್ನು ಮಾಡಿದರು. ಅವರ ಶರೀರ ಒಂದು ಕಡ್ಡಿ ಪುಳ್ಳೆಯಷ್ಟು ಸಣ್ಣಗಾಯಿತು. ತನ್ನ ಶರೀರದ ಸಲುವಾಗಿ ಸ್ವಲ್ಪ ಅನ್ನವನ್ನು ಸೇವಿಸಬೇಕೆಂದುಕೊಂಡಾಗ, ಇಂದ್ರನು ಬ್ರಾಹ್ಮಣನ ವೇಷ ಧರಿಸಿ, "ಅಯ್ಯಾ! ನನಗೆ ತುಂಬಾ ಹಸಿವಾಗಿದೆ, ನಿಮ್ಮಲ್ಲಿರುವ ಕಬಳವನ್ನು ದಾನ ಮಾಡಿ" ಎಂದು ಕೇಳಿದ. ಬಂದಿರುವ ಬ್ರಾಹ್ಮಣನು ಇಂದ್ರನೆಂದು ವಿಶ್ವಾಮಿತ್ರನು ಗ್ರಹಿಸಿದರೂ, ಬಾರಿ ಇಂದ್ರಿಯಗಳಿಗೆ ಬಗ್ಗದೆ, ‘ಇಂದ್ರನು ತಿಂದರೇನು, ನಾ ತಿಂದರೇನು ಎಂದುಕೊಂಡು’, ಇಂದ್ರನಿಗೆ ಕಬಳವನ್ನಿತ್ತು ಮತ್ತೆ ಕುಂಭಕಕ್ಕೆ ತೆರಳಿ ತಪಸ್ಸು ಮುಂದುವರೆಸಿದರು. ಅವರ ಬ್ರಹ್ಮಸ್ಥಾನದಿಂದ ತಪಃ ಶಕ್ತಿಯು ಹೊಗೆಯಾಗಿ ಹೊಮ್ಮಿತು. ಅವರ ತಪೋ ಧೂಮ ಸಮಸ್ತ ಲೋಕಗಳನ್ನು ವ್ಯಾಪಿಸಿತು. ಸಮುದ್ರಗಳು ತಟಸ್ಥವಾಯಿತು. ಸಮಸ್ತ ಪ್ರಾಣಿಗಳು ಕ್ಷೋಭಿಸಿದವು. ವಿಶ್ವಾಮಿತ್ರರಿಗೆ ಶತೃ, ಮಿತ್ರ ಯಾರೂ ಇಲ್ಲದೆ ಎಲ್ಲೆಲ್ಲೂ ಪರಬ್ರಹ್ಮವೇ ಕಾಣಿಸಿತು. ಆಗ ದೇವತೆಗಳೊಂದಿಗೆ ಬ್ರಹ್ಮದೇವರು ಪ್ರತ್ಯಕ್ಷವಾಗಿ,
“ಬ್ರಹ್ಮರ್ಷಿ ಸ್ವಾಗತಂ ತೇ ಅಸ್ತು ತಪಸಾ ಸ್ಮಸು ತೋಷಿತಾಃ |
ಬ್ರಾಹ್ಮಣ್ಯಂ ತಪಸಾ ಉಗ್ರೇಣ ಪ್ರಾಪ್ತವಾನ್ ಅಸಿ ಕೌಶಿಕಾ ||
ಕೌಶಿಕ! ನಿನ್ನ ತಪಸ್ಸಿನಿಂದ ನಮಗೆ ಸಂತೋಷವಾಗಿದೆ. ನೀನೀಗ ಬ್ರಹ್ಮರ್ಷಿಯಾದೆ. ದೇವತೆಗಳೆಲ್ಲರೂ ನಿನ್ನನ್ನು ಬ್ರಹ್ಮರ್ಷಿ ಎಂದು ಕರೆಯುತ್ತಾರೆ. ನಿನ್ನ ಸಮಸ್ತ ಕೋರಿಕೆಗಳೂ ತೀರಲಿ. ನೀನು ದೀರ್ಘಾಯುಷ್ಯನಾಗುಎಂದು ವರ ಕೊಟ್ಟರು.
ಆಗ ವಿಶ್ವಾಮಿತ್ರರು, "ನಾನು ಬ್ರಹ್ಮರ್ಷಿಯಾಗಿದ್ದು ನಿಜವಾದಲ್ಲಿ, ನನಗೆ ಓಂಕಾರ, ವಷಟ್ಕಾರವು ಅವಿರ್ಭವಿಸಲಿ (ಓಂಕಾರ ಮತ್ತು ವಷಟ್ಕಾರಗಳು ಅವಿರ್ಭವಿಸಿದರೆ, ವೇದ ಪಾಠ ಇನ್ನುಬ್ಬರಿಗೆ ಭೋಧನೆ ಮಾಡಲು ಅರ್ಹತೆ ಹೊಂದುತ್ತಾನೆ. ವಿಶ್ವಾಮಿತ್ರರು ಕ್ಷತ್ರಿಯನಾದ ಕಾರಣ ಆತನು ಬೇರೊಬ್ಬರಿಗೆ ಪಾಠ ಹೇಳಲು ಅರ್ಹತೆಯನ್ನು ಪಡೆಯಬೇಕು). ಹಾಗೆಯೇ ಯಾರ ಮೇಲಿನ ಕೋಪದಿಂದ ಬ್ರಹ್ಮರ್ಷಿಯಾಗಬೇಕೆಂಬ ಹಟ ಮಾಡಿ ಇಷ್ಟು ವರ್ಷಗಳು ತಪಸ್ಸುಮಡಿದೆನೋ, ಅವರಿಂದಲೇ ಬ್ರಹ್ಮರ್ಷಿಯೆಂದು ಕರೆಯಿಸಿಕೊಳ್ಳಬೇಕೆಂದಿದೆ” ಎಂದು ಕೇಳಿಕೊಂಡರು.
ಆಗ ದೇವತೆಗಳು ವಸಿಷ್ಠರನ್ನು ಕರೆಸುತ್ತಾರೆ. ವಸಿಷ್ಠರು ವಿಶ್ವಾಮಿತ್ರರನ್ನು ಬ್ರಹ್ಮರ್ಷಿ ಎಂದು ಕರೆದರು. ವಿಶ್ವಾಮಿತ್ರರು ವಸಿಷ್ಠರಿಗೆ ಕಾಲು ತೊಳೆದು ಪಾದ ಪೂಜೆ ಮಾಡಿದರು.

“ಯಾವ ವಸಿಷ್ಠರ ಮೇಲಿನ ಕೋಪದಿಂದ ಪ್ರಾರಂಭಿಸಿದರೋ ಅದೇ ವಸಿಷ್ಠರ ಕಾಲು ತೊಳೆದು ವಿಶ್ವಾಮಿತ್ರರು ಬ್ರಹ್ಮರ್ಷಿಯಾದರು.   ಬ್ರಹ್ಮರ್ಷಿಯಾಗಲು, ಕಾಮ ಕ್ರೋಧಗಳನ್ನು ಜಯಿಸಲು, ನಿಮ್ಮ ಗುರುಗಳು ಬಹಳ ವರ್ಷಗಳು ಕಷ್ಟಪಟ್ಟು ತಪಸ್ಸು ಮಾಡಿದರು. ಇಂಥಹ ಗುರುಗಳನ್ನು ಪಡೆದ ನೀವು ಅದೃಷ್ಠವಂತರು" ಎಂದು ಶತಾನಂದರು ವಿಶ್ವಾಮಿತ್ರರ ಕಥೆಯನ್ನು ವಿವರಿಸಿದರು.


ಕಥೆಯನ್ನು ಕೇಳಿದ ರಾಮನು ಪ್ರಭಾವಿತನಾದ. ಅಲ್ಲಿರುವರೆಲ್ಲರೂ ವಿಶ್ವಾಮಿತ್ರರಿಗೆ ನಮಸ್ಕಾರ ಮಾಡಿದರು. ಜನಕ ಮಹಾರಾಜ ಮರುದಿನ ಸೂರ್ಯೋದಯದ ಭೇಟಿಗೆ ವಿಶ್ವಾಮಿತ್ರರ ಅನುಮತಿ ಪಡೆದು ಅಲ್ಲಿಂದ ನಿರ್ಗಮಿಸಿದ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ