ಅರಿಕೆ



ಪ್ರವಚನ ಚಕ್ರವರ್ತಿಯೆಂದೇ ಪ್ರಖ್ಯಾತರಾದ ಚಾಗಂಟಿ ಕೋಟೇಶ್ವರರಾವ್ ಅವರು ಸುಂದರಶಿವರಾವ್ ಮತ್ತು ಸುಶೀಲಮ್ಮನವರ ಪುತ್ರರಾಗಿ ೧೪ನೇ ಜೂನ್ ೧೯೫೯ರಲ್ಲಿ ಜನಿಸಿದರು. ಇವರು ಸರ್ಕಾರೀ ಕೆಲಸದಿಂದ ನಿವೃತ್ತಿ ಪಡೆದು ಪ್ರವಚನಕ್ಕೇ ತಮ್ಮ ಜೀವನವನ್ನು ಮುಡಿಪಾಗಿರಿಸಿದ್ದಾರೆ. ರಾಮಾಯಣ, ಭಾಗವತ, ಶಿವಪುರಾಣ, ಲಲಿತಾಸಹಸ್ರನಾಮ, ಸೌಂದರ್ಯಲಹರಿ ಮುಂತಾದ ಅನೇಕ ವಿಷಯಗಳ ಬಗ್ಗೆ ಪ್ರವಚನ ನೀಡಿದ್ದಾರೆ. ಇವರ ಪ್ರವಚನಗಳು ಆಂಧ್ರಪ್ರದೇಶ, ತೆಲಂಗಾಣಗಳಾದ್ಯಂತ ತುಂಬಾ ಪ್ರಸಿದ್ಧಿ ಪಡೆದಿವೆ. ನಮ್ಮ ಪುರಾಣೇತಿಹಾಸಗಳನ್ನು ಮನೆಮನೆಗೂ ತಲುಪುಸುತ್ತಿರುವ ಕೋಟೇಶ್ವರರಾವ್ ಅವರಿಗೆ ನಮ್ಮ ಅನಂತ ಪ್ರಣಾಮಗಳು. ನಮ್ಮ ಸಂಸ್ಕೃತಿಯನ್ನು, ಕಾವ್ಯಗಳನ್ನು, ತತ್ವಗಳನ್ನು ನಿರ್ಲಕ್ಷಿಸುತ್ತಿರುವ, ಟೀಕಿಸುವ, ಸರಿಯಾಗಿ ಅರ್ಥ ಮಾಡಿಕೊಳ್ಳದಿರುವ ಜನರಿರುವ ಇಂದಿನ ಸಮಾಜಕ್ಕೆ ಕೋಟೇಶ್ವರರಾವ್ ಅವರ ಕೊಡುಗೆ ಅಪಾರ. ಪ್ರಸ್ತುತ ಲೇಖನಗಳು ಕೋಟೇಶ್ವರರಾವ್ ಅವರು ಕಾಕಿನಾಡದಲ್ಲಿ (ಆಂಧ್ರಪ್ರದೇಶ) ೪೨ ದಿನಗಳ ಕಾಲ ಮಾಡಿದ ಸಮಗ್ರ ವಾಲ್ಮೀಕಿ ರಾಮಾಯಣ ಪ್ರವಚನದ ಕನ್ನಡ ಅನುವಾದ. 

ರಾಮ, ರಾಮಾಯಣದ ಬಗೆಗೆ ಕನ್ನಡದ ಮಹಾನ್ ಲೇಖಕರಾದ ಡಿ.ವಿ.ಜಿ.ಯವರು ಹೀಗೆ ಹೇಳಿದ್ದಾರೆ,
“ರಾಮ-ಕೃಷ್ಣ - ಇವು ಭಗವನ್ಮೂರ್ತಿಗಳೆಂದು ಒಂದು ನಂಬಿಕೆ. ಮಾನುಷ ಮೂರ್ತಿಗಳೆಂದು ಇನ್ನೊಂದು ನಂಬಿಕೆ. ಈ ಎರೆಡು ನಂಬಿಕೆಗಳೂ ಪರಸ್ಪರ ವಿರೋಧಿಗಳಲ್ಲ. ಜನದ ಮನಸ್ಸಿನಲ್ಲಿ ಅವು ಪರಸ್ಪರ ಪೂರಕವಾಗಿವೆ. ಭಗವದಂಶವಿಲ್ಲದ ಮೂರ್ತಿಯಿಂದ ಸಾಮಾನ್ಯರಿಗೆ ಬೇಕಾದ ಬೋಧೆ ದೊರೆಯಲಾರದು. ಮನುಷ್ಯಾಂಶವಿಲ್ಲದೆ ಬೋಧೆ ಸಾಮನ್ಯ ಜನರ ಅನುಷ್ಠಾನಕ್ಕೆ ಸಾಧ್ಯವಾಗದು. ಹೀಗೆ ಲೋಕಬೋಧೆಯು ಒಂದು ಅವತಾರ ಮೂರ್ತಿಯ ಮುಖ್ಯೋದ್ದೇಶವೆಂಬುದಾದಲ್ಲಿ, ಅದರಲ್ಲಿ ದೈವಾಂಶ-ಮಾನುಷಾಂಶಗಳೆರೆಡೂ ಸಮ್ಮಿಳಿತವಾಗಬೇಕಾಗುತ್ತದೆ.
— ಡಿ.ವಿ.ಜಿ., ಶ್ರೀಕೃಷ್ಣ ಪರೀಕ್ಷಣಂ
ದೂರದ ಯಾತ್ರೆಗೆ ದೊರೆವುದು
ವಾರಾಣಸಿಯತ್ತಲಮರಗಂಗಾತೀರ್ಥಂ
ಶ್ರೀರಾಮಯಣ ಗಂಗಾ-
ಪೂರಂ ಮನೆಮನೆಗಪ್ಪುದಮೃತಾಸ್ವಾದಂ
ಕಾಷಾಯವನುಡದಿಹ ಯತಿ
ಸಂಸಾರದ ಪಾಶಕೆಟುಕದಾ ಗೃಹಿ ರಾಮಂ
ದೋಷಿಯ ದೋಷವ ಕೊಂದವ-
ಶೇಷಕೆ ಮಂಗಳವನೆಸಗುವಾ ಕಾರುಣಿಕಂ
— ಡಿ.ವಿ.ಜಿ. ಶ್ರೀರಾಮ ಪರೀಕ್ಷಣಂ”


ಇಂದು ಯಾವುದೇ ಜಾಲತಾಣದಲ್ಲಿ ಕನ್ನಡದ ರಾಮಾಯಣವಿಲ್ಲ. ಆದ್ದರಿಂದ ನಾವು ಪ್ರಸ್ತುತ ಬ್ಲಾಗಿನ ಮೂಲಕ ರಾಮಯಣವನ್ನು ಜನತೆಗೆ ತಲುಪಿಸಬೇಕೆಂದಿದ್ದೇವೆ. ಗುರುಪೂರ್ಣಿಮೆಯಿಂದ ದೀಪಾವಳಿಯವರೆಗೆ ದಿನಕ್ಕೊಂದರಂತೆ ಸುಮಾರು ೧೦೧ ಕಂತುಗಳಲ್ಲಿ ರಾಮಾಯಣವನ್ನು ಪ್ರಕಟಿಸಲು ನಿರ್ಧರಿಸಿದ್ದೇವೆ. ರಾಮ ದೀಪಾವಳಿಯಂದೇ ವನವಾಸ ಮುಗಿಸಿ ಅಯೋಧ್ಯಗೆ ಬಂದದ್ದು ವಿಶೇಷ. ವಾಚಕರು ಇದನ್ನು ಸ್ವೀಕರಿಸುತ್ತಾರೆಂದು ನಂಬಿದ್ದೇವೆ.

Comments

Post a Comment

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ