೧. ಪರಿಚಯ
ರಾಮಾಯಣ ೨೪ ಸಾವಿರ ಶ್ಲೋಕಗಳ ಮಹಾಗ್ರಂಥ. ಇದನ್ನು ಬಾಲ, ಅಯೋಧ್ಯ, ಅರಣ್ಯ, ಕಿಷ್ಕಿಂಧ, ಸುಂದರ, ಯುದ್ಧಕಾಂಡಗಳೆಂಬ ಆರು ಭಾಗಗಳಾಗಿ ವಿಂಗಡಿಸಿದೆ. ಅದರ ಜೊತೆಗೆ ಉತ್ತರ ಕಥೆ ಹೇಳುವ, ಉತ್ತರಕಾಂಡವೆಂಬ ಏಳನೆಯ ಕಾಂಡವಿದೆ. ರಾಮಾಯಣವನ್ನು ಆದಿಕಾವ್ಯವೆನ್ನುತ್ತಾರೆ. ಕೇವಲ ರಾಕ್ಷಸ ಸಂಹಾರಕ್ಕಾಗಿಯೇ ರಾಮಾವತಾರವಾದರೆ, ರಾವಣನವಧೆಯ ನಂತರ ಅವನ ಅವತಾರ ಕೊನೆಯಾಗಬೇಕಿತ್ತು. ಆದರೆ ಬಾಲಕಾಂಡದಲ್ಲಿ ರಾಮ ಒಂದು ಪ್ರತಿಜ್ಞೆಮಾಡುತ್ತಾನೆ, “ದಶವರ್ಷ ಸಹಸ್ರಾಣಿ ದಶವರ್ಷ ಶತಾನಿವ - ನಾನು ಹನ್ನೊಂದು ಸಾವಿರ ವರ್ಷಗಳು ಈ ಭೂಮಂಡಲದ ರಾಜ್ಯಭಾರ ಮಾಡುತ್ತೇನೆ”. ರಾಮ ಭಗವಂತನಾದದ್ದರಿಂದಲೇ ೧೪ ವರ್ಷಗಳ ವನವಾಸ, ಭಗವಂತನಾದದ್ದರಿಂದಲೇ ತಂದೆಯ ಬಗೆಗಿನ ಗೌರವಾದರಗಳು, ಭಗವಂತನಾದದ್ದರಿಂದಲೇ ಧಾರ್ಮಿಕತೆ, ಭಗವಂತನಾದದ್ದರಿಂದಲೇ ಏಕಪತ್ನೀವ್ರತ ಇವೆಲ್ಲವೂ ಸಾಧ್ಯವಾಯಿತು ಅಂದುಕೊಂಡರೆ ರಾಮಾಯಣದಿಂದ ನಮಗೆ ಯಾವುದೇ ಪ್ರಯೋಜನವೂ ಆಗಲಾರದು. ರಾಮಾಯಣದಲ್ಲಿ ರಾಮ ದೇವರಾಗಿ ಅಲ್ಲದೇ ಒಬ್ಬ ಮನುಷ್ಯನಾಗಿ ಬದುಕಿ ತೋರಿಸುತ್ತಾನೆ. ನಾವು ಹೇಗೆ ಬದುಕಬೇಕೆಂದು ತೋರಿಸಿಕೊಡುತ್ತಾನೆ. ಆದ್ದರಿಂದ ರಾಮಾಯಣ ಎಷ್ಟುಕಾಲವಿರುತ್ತದೆಯೋ, ಎಷ್ಟುಕಾಲ ಅದನ್ನು ನಾವು ಪಾರಾಯಣ ಮಾಡುತ್ತೇವೆಯೋ, ಎಷ್ಟುಕಾಲ ಅದರ ಮೇಲೆ ನಮಗೆ ವಿಶ್ವಾಸವಿರುತ್ತದೆಯೋ ಅಷ್ಟುಕಾಲವೂ ಮಾನವತ್ವವಿರುತ್ತದೆ. ಮಾನವತ್ವವಿಲ್ಲದಿದ್ದರೆ ಮನುಷ್ಯನಾಗಿ ಹುಟ್ಟಿ ಪ್ರಯೋಜನವಿಲ್ಲ. ತಂದೆತಾಯಿಯರ ಜೊತೆ, ಸೋದರರ ಜೊತೆ, ಗುರುಗಳ ಜೊತೆ, ಪತ್ನಿಯ ಜೊತೆ ಹೇಗೆ ನಡೆದುಕೊಳ್ಳಬೇಕೆಂಬುದನ್ನೂ, ಮಾತಿಗೆ ತಪ್ಪದೆ ಹೇಗೆ ನಡೆಯಬೇಕೆಂಬುದನ್ನೂ ನಾವು ರಾಮನ ಬಳಿ ಕಲಿಯಬೇಕು.
ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಂ
ಬಾಷ್ಪವಾರಿ ಪರಿಪೂರ್ಣಲೋಚನಂ ಮಾರುತಿಂ ನಮತ ರಾಕ್ಷಸಾಂತಕಂ
ರಾಮಾಯಣದ ಪಾರಾಯಣ ನಡೆಯುತ್ತಿದ್ದರೆ, ಎಲ್ಲಿದ್ದರೂ ಹನುಮಂತ ಬಂದು ಕೇಳುತ್ತಾನೆ.
“ರಾಮ” - ಕೇಳಿದಾಕ್ಷಣ ಮೈ ರೋಮಾಂಚನಗೊಳಿಸುವಂತಹಾ ಹೆಸರು. ರಾವಣಾಸುರ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ನರವಾನರರನ್ನು ಹೊರತುಪಡಿಸಿ ಇನ್ನಾವ ಜೀವರಾಶಿಯಿಂದಲೂ ತನಗೆ ಸಾವು ಬರಬಾರದೆಂದು ವರ ಪಡೆಯುತ್ತಾನೆ. ನರವಾರನ್ನೇಕೆ ಬಿಟ್ಟೆಯೆಂದು ಬ್ರಹ್ಮದೇವ ಕೇಳದಿದ್ದರೂ ರಾವಣನೇ ‘ನರವಾನರರು ತನಗೊಂದು ಲೆಕ್ಕವೇ. ಆದ್ದರಿಂದ ಅವರನ್ನು ಬಿಟ್ಟೆ.’ ಎನ್ನುತ್ತಾನೆ. ಅದು ಮನುಷ್ಯರ ಕುರಿತಾದ ರಾವಣನ ಧೋರಣೆ. ಮನುಷ್ಯರನ್ನು ಕೀಳಾಗಿ ನೋಡುವಂತಹ ಕಾಲದಲ್ಲಿ ಮನುಷ್ಯನಾಗಿ ಹುಟ್ಟಿ ಅವನು ಮನಸ್ಸು ಮಾಡಿದರೆ ಏನನ್ನಾದರೂ ನಾಧಿಸಿಯಾನು ಎಂಬುದನ್ನು ತೋರಿಸಿಕೊಟ್ಟವನು ರಾಮ. ಆದ್ದರಿಂದ ಮಾನವರಾಗಿ ಹುಟ್ಟಿದವರೆಲ್ಲರೂ ರಾಮನಾಮವನ್ನು ಪಠಿಸಬೇಕು.
ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ
ರಾಮನ ಕಥೆಯಾದ್ದರಿಂದ ಈ ಕಥೆಗೆ ವಾಲ್ಮೀಕಿ ಮಹರ್ಷಿ “ರಾಮಾಯಣ”ವೆಂದು ಹೆಸರಿಟ್ಟರು. ಅಂತೆಯೇ ಇದನ್ನು “ಸೀತಾಯಾಶ್ಚರಿತಂ ಮಹತ್”, “ಪೌಲಸ್ತ್ಯ ವಧೆ” ಎಂದೂ ವಾಲ್ಮೀಕಿಗಳು ಕರೆದಿದ್ದಾರೆ.
🌼
ReplyDelete🌼
ReplyDeleteಶ್ರೀ ಹರಿ ಅವರೇ ನನ್ನ email ಗೆ ದಯವಿಟ್ಟು ರಿಪ್ಲೈ ಮಾಡಿ,
ReplyDeleteThis very good app
ReplyDelete