೩. ಕಥಾರಂಭ - ಋಷ್ಯಶೃಂಗರ ಕಥೆ



ಪೂರ್ವಕಾಲದಲ್ಲಿ ಕೋಸಲ ದೇಶವೆಂಬ ರಾಜ್ಯವಿತ್ತು. ದೇಶದ ರಾಜಧಾನಿ ಅಯೋಧ್ಯೆ. ಅಯೋಧ್ಯೆಯನ್ನು ಮನುವು ತನ್ನ ಸಂಕಲ್ಪ ಬಲದಿಂದ ನಿರ್ಮಿಸಿದನು. ಅಯೋಧ್ಯೆಯು ೧೨ ಯೋಜನಗಳ ಉದ್ದ, ಯೋಜನಗಳ ಅಗಲವಿರುವ ನಗರ. ನಗರದ ಮಧ್ಯದಲ್ಲಿದ್ದ ಅರಮನೆಯಲ್ಲಿ ದಶರಥ ಮಹಾರಾಜನು ವಾಸಮಾಡುತ್ತಿದ್ದ. ನಗರದಲ್ಲಿ ರಸ್ತೆಗಳು ವಿಶಾಲವಾಗಿಯೂ, ಸರ್ವ ಕಾಲದಲ್ಲಿಯೂ ಸುಗಂಧ ಧೂಪಗಳಿಂದಲೂ ಕೂಡಿರುತ್ತಿತ್ತು. ಧಾನ್ಯ, ಕಬ್ಬು ಇತ್ಯಾದಿ ಬೆಳೆಗಳನ್ನು ಹೇರಳವಾಗಿ ಬೆಳೆಯುತ್ತಿದ್ದರು. ಯಾವುದೇ ಮನೆಯಲ್ಲಿ ಅವಶ್ಯಕತೆಗಿಂತ ಹೆಚ್ಚು ಜಾಗವಿರಲಿಲ್ಲ. ಅಯೋಧ್ಯಾ ನಗರದಲ್ಲಿ ಪ್ರತಿಯೊಬ್ಬರೂ ಪರಮ ಸಂತೋಷದಿಂದ ಇದ್ದರು. ಎಲ್ಲರೂ ಧರ್ಮವನ್ನು ತಿಳಿದಿರುವವರೂ, ದಾನವನ್ನು ಮಾಡುವವರೂ, ಸತ್ಯವನ್ನು ಪಾಲಿಸುವವರೂ, ಐಶ್ವರ್ಯವಂತರೂ ಅಗಿದ್ದರು. ಹಸು, ಕುದುರೆ, ಆನೆಗಳಿಂದ ನಗರವು ಶೋಭಾಯಮಾನವಾಗಿತ್ತು. ಕರ್ಣಕುಂಡಲಗಳಿಲ್ಲದವರೂ, ಕಿರೀಟವಿಲ್ಲದವರೂ, ಕೊರಳಲ್ಲಿ ಹೂ ಮಾಲೆ ಇಲ್ಲದವರೂ, ಹಸ್ತಗಳಿಗೆ ಆಭರಣವಿಲ್ಲದವರೂ, ಕಳ್ಳತನ ಮಾಡುವವರೂ, ನಾಸ್ತಿಕರೂ ಅಯೋಧ್ಯ ನಗರದಲ್ಲಿ ಇರಲಿಲ್ಲ.

ದಶರಥ ಮಹಾರಜನಿಗೆ ದೃಷ್ಟಿ, ಜಯಂತ, ವಿಜಯ, ಸಿದ್ದಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ, ಸುಮಂತ್ರ ಎಂಬ ೮ ಮಂದಿ ಪ್ರಧಾನ ಮಂತ್ರಿಗಳು ಎಲ್ಲ ಸಮಯದಲ್ಲಿ ಸಹಾಯ ಮಾಡುತ್ತಿದ್ದರು. ವಷಿಷ್ಠರು ಮತ್ತು ವಾಮದೇವರು ದಶರಥ ಮಹಾರಾಜನಿಗೆ ಸಲಹೆ ನೀಡುವ ಋತ್ವಿಕರು. ಇವರೊಂದಿಗೆ ಬ್ರಾಹ್ಮಣರೂ, ಮಂತ್ರಿಗಳೂ ಇದ್ದರು. ಮಂತ್ರಿಗಳು ಅಪಾರವಾದ ವಿದ್ಯೆ ಉಳ್ಳವರೂ, ಕರ್ತವ್ಯ ನಿರತರೂ, ಇಂದ್ರಿಯಗಳ ನಿಗ್ರಹ ಉಳ್ಳವರೂ, ಶ್ರೀಮಂತರೂ, ಶಾಸ್ತ್ರಗಳನ್ನು ತಿಳಿದವರೂ, ಸಾವಧಾನ ಚಿತ್ತವುಳ್ಳವರೂ ಆಗಿದ್ದರು. ಕೋಸಲ ರಾಜ್ಯದಲ್ಲಿ ಪರಸ್ತ್ರೀವ್ಯಮೋಹ ಉಳ್ಳ ವ್ಯಕ್ತಿಯು ಒಬ್ಬನೂ ಇರಲಿಲ್ಲ.

ಇಷ್ಟೆಲ್ಲಾ ಇದ್ದರೂ ದಶರಥ ಮಹಾರಾಜನಿಗೆ ವಂಶೋದ್ಧಾರಕನಾದ ಪುತ್ರ ಸಂತಾನವಿಲ್ಲವೆಂಬ ಬಾಧೆ ಕಾಡುತ್ತಿತ್ತು. ಆತನಿಗಾಗಲೇ ೬೦,೦೦೦ ವರ್ಷಗಳು ತುಂಬಿದ್ದವು. ದಶರಥ ಮಹಾರಜನಿಗೆ ಅಶ್ವಮೇಧ ಯಾಗ ಮಾಡಬೇಕೆಂಬ ಆಲೋಚನೆ ಬಂದು, ತಕ್ಷಣವೇ ಸುಮಂತ್ರನನ್ನು ಕರೆಸಿ, ಋತ್ವಿಕರಾದ ವಷಿಷ್ಠರನ್ನೂ, ವಾಮದೇವರನ್ನೂ, ಮತ್ತಿತರ ಪುರೋಹಿತರನ್ನು ಬರಹೇಳಿದ. ಎಲ್ಲರಿಗೂ ತನ್ನ ಮನದ ಇಂಗಿತವನ್ನು ತಿಳಿಸಿದ. ಎಲ್ಲರ ಸಮ್ಮತಿಯಿಂದ ಅಶ್ವಮೇಧ ಯಾಗಕ್ಕೆ ಅವಶ್ಯವಾದ ಪರಿಕರಗಳನ್ನು ತರಿಸಿ, ಸರಯೂ ನದಿಯ ಉತ್ತರ ತೀರದಲ್ಲಿ ಯಾಗ ಮಂಟಪವನ್ನು ನಿರ್ಮಿಸಿದರು.

ದಶರಥ ಮಹಾರಾಜ ದಕ್ಷಿಣದ ನಾಯಕ. ಆತನಿಗೆ ೩೦೦ಕ್ಕೂ ಹೆಚ್ಚು ಪತ್ನಿಯರು. ಆದರೆ ರಾಣಿಯರು ಮಾತ್ರ ಕೌಸಲ್ಯ, ಸುಮಿತ್ರ, ಕೈಕೇಯಿ. ತಾನು ಯಾಗವನ್ನು ಪ್ರಾರಂಭಿಸುತ್ತಿರುವುದರಿಂದ ತನ್ನ ರಾಣಿಯರಿಗೂ ದೀಕ್ಷೆಯನ್ನು ಸ್ವೀಕರಿಸಲು ಹೇಳಿದ.

ಪೂರ್ವಕಾಲದಲ್ಲಿ ಸನತ್ಕುಮಾರರು ಹೇಳಿದ ಮಾತನ್ನು ಸುಮಂತ್ರನು ದಶರಥ ಮಹಾರಜನಿಗೆ ವಿವರಿಸುತ್ತಾನೆ.
ಸನತ್ಕುಮಾರೋ ಭಗವಾನ್ ಪೂರ್ವ ಕಥಿತವಾನ್ ಕಥಾಂ |
ಋಷಿಣಾಂ ಸನ್ನಿಧೌ ರಾಜನ್ ತವ ಪುತ್ರಾಗಮ್ಂ ಪ್ರತಿ ||
ಸನತ್ಕುಮಾರರು ಹೇಳುತ್ತಾರೆ, “ಈಕ್ಷ್ವಾಕು ವಂಶದಲ್ಲಿ ಜನಿಸಿದ ದಶರಥ ಮಹಾರಾಜನು ಪುತ್ರಸಂತಾನವಿಲ್ಲದೆ ಅಶ್ವಮೇಧ ಯಾಗವನ್ನು ಮಾಡುತ್ತಾನೆ. ಯಾಗದ ಫಲವಾಗಿ ನಾಲ್ಕುಮಂದಿ ಪುತ್ರರು ಜನಿಸುತ್ತಾರೆ. ಆದರೆ ಅಶ್ವಮೇಧ ಯಾಗದೊಂದಿಗೆ ಪುತ್ರಕಾಮೆಷ್ಟಿ ಯಾಗವನ್ನೂ ಮಾಡಬೇಕು. ಎರಡೂ ಯಾಗಗಳನ್ನೂ ಮಡಿಸುವಂಥ ಶ್ರೇಷ್ಠನು ಋಷ್ಯಶೃಂಗ ಮುನಿ. ಅವರ ಸಾರಥ್ಯದಲ್ಲಿ ಎರಡೂ ಯಾಗಗಳು ನಡೆದಲ್ಲಿ ಪುತ್ರಸಂತಾನವು ಪ್ರಾಪ್ತವಾಗುತ್ತದೆ.”

ಹೀಗೆ ಸುಮಂತ್ರನು ಸನತ್ಕುಮಾರರ ಮಾತನ್ನು ಸ್ಮರಿಸಿದಾಗ ದಶರಥನು ಅಂಗದೇಶದಲ್ಲಿದ್ದ ಋಷ್ಯಶೃಂಗರನ್ನು ಕರೆತರಲು ಸುಮಂತ್ರನಿಗೆ ತಿಳಿಸಿ, ನಂತರ ಅವರ ಬಗ್ಗೆ ವಿವರಿಸಲು ಸುಮಂತ್ರನಿಗೆ ಹೇಳಿದ. ಆಗ ಸುಮಂತ್ರನು:
“ಪೂರ್ವದಲ್ಲಿ ವಿಭಂಡಕನೆಂಬ ಮಹಾಮುನಿ ಬಹು ಕಾಲ ತಪಸ್ಸು ಮಾಡಿ, ಸ್ನಾನ ಮಾಡಲೆಂದು ಒಂದು ಸರೋವರದ ಬಳಿಗೆ ಹೋಗಲು, ಅಲ್ಲಿ ಒಬ್ಬ ಅನುರೂಪಳಾದ ಊರ್ವಶಿಯನ್ನು ನೋಡಿ ಮೋಹಗೊಂಡಾಗ ವೀರ್ಯವು ಜಾರಿ ಸರೋವರದಲ್ಲಿ ಬಿತ್ತು. ವೀರ್ಯವನ್ನು ಒಂದು ಜಿಂಕೆ ಕುಡಿದು, ಗರ್ಭವನ್ನು ಧರಿಸಿ, ಶಿರಸ್ಸಿನಮೇಲೆ ಕೊಂಬಿರುವ ಗಂಡು ಶಿಶುವಿಗೆ ಜನ್ಮ ನೀಡಿತು. ಕೊಂಬುಗಳೊಂದಿಗೆ ಹುಟ್ಟಿದ ಕಾರಣದಿಂದ ಆತನಿಗೆ ಋಷ್ಯಶೃಂಗ ಎಂದು ಹೆಸರಿಟ್ಟರು. ವಿಭಂಡಕ ಮಹರ್ಷಿ ಋಷ್ಯಶೃಂಗರಿಗೆ ಹೊರ ಪ್ರಪಂಚ ತಿಳಿಯದಂತೆ ಆಶ್ರಮದಲ್ಲೇ ಸಮಸ್ತ ವೇದ, ಶಾಸ್ತ್ರ, ಯಜ್ಞ-ಯಾಗಾದಿಗಳನ್ನು ಕಲಿಸಿದರು. ಋಷ್ಯಶೃಂಗರನ್ನು ವಿಷಯ ಸುಖದಿಂದ ದೂರವಿರಿಸಲು ಸ್ತ್ರೀ-ಪುರುಷರೆಂಬ ಎರಡು ಸೃಷ್ಠಿಯಿರುವುದೆಂಬ ಕಲ್ಪನೆಯೂ ಇಲ್ಲದಂತೆ ಬೆಳೆಸಿದರು. ಋಷ್ಯಶೃಂಗರು ಸದಾ ತಮ್ಮ ತಂದೆಯೊಂದಿಗೇ ಇರುತ್ತಿದ್ದರು.

ಅಂಗರಾಜ್ಯವನ್ನು ಪರಿಪಾಲಿಸುತ್ತಿದ್ದ ದೊರೆ ರೋಮಪಾದನು ಧರ್ಮವನ್ನು ತಪ್ಪಿದ ಕಾರಣದಿಂದ ರಾಜ್ಯದಲ್ಲಿ ಮಳೆ-ಬೆಳೆ ಇಲ್ಲದೆ ಕ್ಷಾಮ ಒದಗಿಬಂದಿತು. ಮಳೆಯಾಗಿ, ಕ್ಷಾಮ ನಿವಾರಣೆಯಾಗಬೇಕೆಂದರೆ ಋಷ್ಯಶೃಂಗರ ಪಾದ ಸ್ಪರ್ಶವಾಗಬೇಕೆಂದು ಕೆಲವು ಋಷಿ-ಮುನಿಗಳು ರೋಮಪಾದ ರಾಜನಿಗೆ ಸಲಹೆ ನೀಡಿದರು. ಅದರಂತೆ ರಾಜನು ಋಷ್ಯಶೃಂಗರನ್ನು ಕರೆತರಲು ಮಂತ್ರಿಗಳಿಗೆ ಆಜ್ಞಾಪಿಸಿದ. ಯಾವುದೇ ಕೋರಿಕೆ ಇಲ್ಲದ ಋಶ್ಯಶೃಂಗರನ್ನು ಅಂಗರಾಜ್ಯಕ್ಕೆ ಕರೆತರಲು ಅಸಾಧ್ಯ. ಆದರೂ, “ಇಂದ್ರಿಯಾರ್ಥಃ ಅಭಿಮತೈಃ ನರಚಿತ್ತ ಪ್ರಮಾಥಿಭಿಃ”, ಎನ್ನುವಂತೆ ಋಷ್ಯಶೃಂಗರಿಗೂ ಎಲ್ಲರಂತೆ ಇಂದ್ರಿಯಗಳು, ಮನಸ್ಸುಗಳಿದ್ದರೂ ಅವುಗಳಿಗೆ ಇದುವರೆಗು ಯಾವುದೇ ಅನುಭವವಿಲ್ಲದೇ ವಿಷಯಸುಖದಿಂದ ದೂರವಿದ್ದಾರೆ. ಆದ್ದರಿಂದ ಅಂದವಾಗಿ ಅಲಂಕರಿಸಿದ ವೇಶ್ಯೆಯರನ್ನು ಆಶ್ರಮಕ್ಕೆ ಕಳಿಸಿ, ವಿಭಂಡಕರು ಇಲ್ಲದ ಸಮಯನೋಡಿ, ಅವರ ಮನಸ್ಸನ್ನು ಆಕರ್ಷಿಸಿ ಅವರನ್ನು ರಾಜ್ಯಕ್ಕೆ ಕರೆತರುವ ಉಪಾಯ ಮಾಡಿದರು.

ಮಂತ್ರಿಗಳ ಸಲಹೆಯಂತೆ ವೇಶ್ಯೆಯರನ್ನು ವಿಭಂಡಕರ ಆಶ್ರಮದ ಬಳಿಗೆ ಕಳಿಸಿದರು. ವಿಭಂಡಕರಿಗೆ ಹೆದರಿ ವೇಶ್ಯೆಯರು ಆಶ್ರಮದಿಂದ ದೂರದಲ್ಲಿದ್ದು ನೃತ್ಯ ಗಾನಗಳನ್ನು ಮಾಡುತ್ತಿದ್ದರು. ಒಂದು ದಿನ ವಿಭಂಡಕರು ಇಲ್ಲದ ವೇಳೆಯಲ್ಲಿ ಋಷ್ಯಶೃಂಗರು ಗಾನವನ್ನು ಆಲಿಸಿ, ಅದೇ ದಿಕ್ಕಿನಲ್ಲಿ ಹೋಗಲು ಅಲ್ಲಿರುವ ವೇಶ್ಯೆಯರನ್ನು ಪುರುಷರೆಂದೇ ತಿಳಿದು ಅವರ ಆಶ್ರಮಕ್ಕೆ ಆಹ್ವಾನಿಸಿದರು. ವೇಶ್ಯೆಯರು ಆಶ್ರಮಕ್ಕೆ ಬಂದು, ಅವರ ಆಥಿಥ್ಯ ಸ್ವೀಕರಿಸಿ ಹಿಂದಿರುಗುವಾಗ ಋಶ್ಯಶೃಂಗರನ್ನು ತಬ್ಬಿ ಸ್ಪರ್ಶಿಸಿ ಹೋದರು. ಮರುದಿನ ಋಶ್ಯಶೃಂಗರಿಗೆ ಮತ್ತೆ ವೇಶ್ಯೆಯರನ್ನು ನೋಡಲು ಆಸೆಯಾಗಿ ಅವರನ್ನು ಅರಸುತ್ತಾ ಅಂಗದೇಶವನ್ನು ಪ್ರವೇಶಿಸಿದರು. ಋಶ್ಯಶೃಂಗರ ಪಾದ ಸ್ಪರ್ಶವಾದ ಕ್ಷಣ,
ತತ್ರ ಆನಿಯಮಾನೇ ತು ವಿಪ್ರ ತಸ್ಮಿನ್ ಮಹಾತ್ಮನಿ |
ವವರ್ಷ ಸಹನಾ ದೇವಾ ಜಗತ್ ಪ್ರಹ್ಲಾದಯನ್ ತದಾ ||
ಆಕಾಶದಿಂದ ವರ್ಷಧಾರೆಯಾಯಿತು. ತಕ್ಷಣವೇ ರೋಮಪಾದನು ಋಷ್ಯಶೃಂಗರಿಗೆ ನಮಸ್ಕರಿಸಿ, ಪ್ರಾರ್ಥಿಸಿ, ಅಂತಃಪುರಕ್ಕೆ ಕರೆದೊಯ್ದು, ತನ್ನ ಕುಮಾರಿಯಾದ ಶಾಂತ ಎನ್ನುವ ಕನ್ಯೆಯನ್ನಿತ್ತು ವಿವಾಹ ಮಾಡಿದ.”


ಸುಮಂತ್ರರಿಂದ ವೃತ್ತಾಂತವನ್ನು ಕೇಳಿದ ದಶರಥ ಮಹಾರಾಜನು, ಋಷ್ಯಶೃಂಗರನ್ನು ಅಯೋಧ್ಯೆಗೆ ಕರೆತರಲು ಅಂಗದೇಶಕ್ಕೆ ಸ್ವಯಂ ಹೋದ. ಅಲ್ಲಿ ದಿನಗಳ ಕಾಲ ಇದ್ದು ಹೊರಡುವಾಗ ತಮ್ಮ ಅರಮನೆಯಲ್ಲಿ ಮುಖ್ಯವಾದ ಕಾರ್ಯವಿರುವುದರಿಂದ ಅವನ ಮಗಳು-ಅಳಿಯರನ್ನು ಅಯೋಧ್ಯೆಗೆ ಕಳಿಸಿಕೊಡಲು ಕೇಳಿದಾಗ, ರೋಮಪಾದನು ಒಪ್ಪಿ ಕಳಿಸಿದ. ದಶರಥನು ಬಹಳ ಸಂತೋಷದಿಂದ ಅವರಿಬ್ಬರನ್ನು ಅಯೋಧ್ಯೆಗೆ ಕರೆತಂದ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ