೪. ಅಶ್ವಮೇಧ
ಋಷ್ಯಶೃಂಗರು ಬಂದ ಕೆಲವು ದಿನಗಳ ನಂತರ, ದಶರಥ ಮಹಾರಾಜ ಋಷ್ಯಶೃಂಗರ ಬಳಿ, "ಅಯ್ಯಾ, ನಾನು ಸಂತಾನಹೀನತೆಯಿಂದ ಕಂಗಾಲಾಗಿದ್ದೇನೆ. ಯಾವ ಪಾಪ ನನಗೆ ಈ ಸಂತಾನಹೀನತೆಯನ್ನು ಕೊಟ್ಟಿರುವುದೋ ಆ ಪಾಪವನ್ನು ಪರಿಹರಿಸಿಕೊಳ್ಳಲು ವೇದಗಳು ನಿಶ್ಚಯಿಸಿರುವ ಅಶ್ವಮೇಧ ಯಾಗವನ್ನು ನೀವು ನನ್ನಿಂದ ಮಾಡಿಸಬೇಕು" ಎಂದು ಕೇಳಿಕೊಂಡ. ಅವರು, "ಯಾವಾಗ ನಿನಗೆ ಯಾಗ ಮಾಡಬೇಕೆಂಬುವ ಸುಬುದ್ಧಿಯುಂಟಾಯಿತೋ ಅಂದೇ ಶುಭಶಕುನಗಳು ಆರಂಭವಾದವು. ಆದ್ದರಿಂದ, ನಿನಗೆ ಧೀರರೂ, ಶೂರರೂ ಆದ ನಾಲ್ಕು ಪುತ್ರರು ಜನಿಸುವರು", ಎಂದು ಆಶೀರ್ವದಿಸಿದರು.
ಅಂತೆಯೇ, ದಶರಥ ಮಹಾರಾಜ ವಶಿಷ್ಠ, ಋಷ್ಯಶೃಂಗರನ್ನು ಯಾಗ ಪ್ರಾರಂಭ ಮಾಡಬೇಕೆಂದು ಅನುಮತಿ ಕೇಳಿದ. ಯಾಗ ಪ್ರಾರಂಭವಾಯಿತು. ಮಹಾರಾಜ ಶುಕ್ಲ ಯಜುರ್ವೇದಿಯಾದ ಕಾರಣ, ಅದಕ್ಕೆ ಅನುಗುಣವಾಗಿ ಯಾಗ ಶಾಲೆ ನಿರ್ಮಿಸಲ್ಪಟ್ಟಿತು. ಬಹಳ ವೈಭವೋಪೇತವಾಗಿ ನಿರ್ಮಿಸಲ್ಪಟ್ಟ ಆ ಯಜ್ಞ ಶಾಲೆಯಲ್ಲಿ ಒಟ್ಟು ೨೧ ಯೂಪಸ್ತಂಭಗಳು. ಅವುಗಳಲ್ಲಿ ೬ ಬಿಲ್ಪತ್ರೆಯ ಕಟ್ಟಿಗೆಗಳಿಂದಲೂ, ೬ ಮುತ್ತುಗದ ಕಟ್ಟಿಗೆಗಳಿಂದಲೂ, ೬ ಖದಿರ(ಇದನ್ನು ಕಗ್ಗಲಿ ಅಥವಾ ಕಾಚಿನಮರ ಎಂದೂ ಕರೆಯುತ್ತಾರೆ. ಇದು ಸುಗಂಧಭರಿತವಾದ ಸಮಿತ್ತು.) ಕಟ್ಟಿಗೆಗಳಿಂದಲೂ, ೨ ದೇವದಾರು ಕಟ್ಟಿಗೆಗಳಿಂದಲೂ ಮತ್ತು ಒಂದು ರಜ್ಜುದಾರ (ಆಂಗ್ಲದ cordia myxa. ಇದಕ್ಕೆ ಔಷಧೀಯ ಲಕ್ಷಣಗಳಿವೆ) ಕಟ್ಟಿಗೆಯಿಂದಲೂ ಮಾಡಲ್ಪಟ್ಟಿದ್ದವು. ಚೈತ್ರ ಮಾಸ ಚಿತ್ತಾ ನಕ್ಷತ್ರ ಹುಣ್ಣಿಮೆಯ ದಿನ ಯಾಗಾಶ್ವವನ್ನು ಒಂದು ಸ್ತಂಭಕ್ಕೆ ಕಟ್ಟಿ, ಅದಕ್ಕೆ ಪ್ರೋಕ್ಷಣೆ, ಸ್ನಾಪನ, ವಿಮೋಚನ ಮುಂತಾದ ಧಾರ್ಮಿಕ ವಿಧಿಗಳನ್ನು ನೆರವೇರಿಸಿ, ಅಶ್ವವನ್ನು ಬಿಟ್ಟರು. ಆ ಅಶ್ವವು ೧೨ ತಿಂಗಳ ಕಾಲ ಪ್ರಪಂಚ ಪರ್ಯಟನೆ ಮಾಡಿತು. ಅದರ ರಕ್ಷಣೆಗೆ ಧೀರರೂ ಶೂರರೂ ಆದ ಸೈನಿಕರು ಹೊರಟರು. ಯಾಗಾಶ್ವ ಹಿಂತಿರುಗುವ ವೇಳೆಗೆ, ಅಂದರೆ, ಫಾಲ್ಗುಣ ಮಾಸದ ಅಮಾವಾಸ್ಯೆಗೆ ರಾಜ ಯಾಗಶಾಲೆಯನ್ನು ಪ್ರವೇಶಿಸಬೇಕು. ಮಹಾರಾಜ ಯಾಗಕ್ಕೆ ವಿವಿಧ ದೇಶಗಳ, ರಾಜರು, ಬ್ರಾಹ್ಮಣರು, ವಿದ್ವಾಂಸರು, ಜನಪದರನ್ನು ಆಹ್ವಾನಿಸಿದ್ದ. ಜನಕ ಮಹಾರಾಜ, ಕಾಶೀ ರಾಜ, ರೋಮಪಾದ, ಕೈಕೆಯ ರಾಜರನ್ನು ಆಹ್ವಾನಿಸಲು ಸ್ವಯಂ ತನ್ನ ಮಂತ್ರಿಗಳನ್ನೇ ಕಳುಹಿಸಿ, ಅವರೆಲ್ಲರಿಗೂ ಪ್ರತ್ಯೇಕ ಏರ್ಪಾಟುಗಳನ್ನು ಮಾಡಿದ.
ಸರ್ವೈ ವರ್ಣಾ ಯಥಾ ಪೂಜಾಂ ಪ್ರಾಪ್ನುವಂತಿ ಸುಸತ್ಕೃತಾಃ
ನ ಚ ಅವಜ್ಞಾ ಪ್ರಯೋಕ್ತವ್ಯಾ ಕಾಮ ಕ್ರೋಧ ವಶಾತ್ ಅಪಿ
ಬಂದವರೆಲ್ಲರಿಗೂ ವರ್ಣ, ಸ್ಥಳ ಮುಂತಾದ ಯಾವುದೇ ಬೇಧವಿಲ್ಲದೆ, ಶ್ರದ್ದೆಯಿಂದ ಅನ್ನ ಸಂತರ್ಪಣೆ ನಡೆಯಬೇಕೆಂದೂ, ಹತ್ತು ಮಂದಿ ಭೋಜನ ಮಾಡುವಾಗ ಯಾರಾದರೂ ಕ್ರೋಧದ ವಶದಿಂದ ಆಡಬಾರದ ಮಾತುಗಳನ್ನು ಆಡಿದರೆ ಅದರ ಕಡೆ ಗಮನ ಕೊಡದೆ ಸುಮ್ಮನೆ ನಕ್ಕು ಬಂದುಬಿಡಬೇಕೆಂದೂ, ಭೋಜನ ಪಂಕ್ತಿಯಲ್ಲಿ ಕುಳಿತಿರುವವರು ಅತಿಥಿ ರೂಪದಲ್ಲಿರುವ ಸಾಕ್ಷಾತ್ ಭಗವಂತನೆಂದೂ, ಆದ್ದರಿಂದ ಅವರಿಗೆ ಮಾಡುವ ಮರ್ಯಾದೆಯಲ್ಲಿ ಯಾವುದೇ ದೋಷವಿರಬಾರದೆಂದು ವಸಿಷ್ಠರು ಆದೇಶಿಸಿದರು. ಹೀಗೆ ಬಂದವರೆಲ್ಲರಿಗೂ ಅನ್ನ ಸಂತರ್ಪಣೆ ನಡೆಯಿತು.
ವೃದ್ಧಾಃ ಚ ವ್ಯಾಧಿತಾಃ ಚ ಏವ ಸ್ತ್ರೀ ಬಾಲಾಃ ತಥಾ ಏವ ಚ
ಅನಿಶಂ ಭುಂಜಮಾನಾನಾಂ ತೃಪ್ತಿಃ ಉಪಲಭ್ಯತೇ
ವೃದ್ಧರು, ರೋಗಿಗಳು, ಸ್ತ್ರೀಯರು, ಮಕ್ಕಳಾದಿಯಾಗಿ ಎಲ್ಲರೂ ಭೋಜನದ ರುಚಿಯನ್ನು ಕೊಂಡಾಡಿ, ತೃಪ್ತಿಯಿಂದ, ಇಂತಹ ಭೋಜನವನ್ನು ಮತ್ತೆ ಇನ್ನೆಂದು ಭಕ್ಷಿಸುತ್ತೇವೆಯೋ ಎಂದುಕೊಳ್ಳುತ್ತಿದ್ದರು. ಬಂದವರೆಲ್ಲರಿಗೂ ರಾಜ ಧನ, ವಸ್ತ್ರಾಭರಣಗಳನ್ನು ದಾನ ಮಾಡಿದ. ಎಲ್ಲರೂ, "ರಾಜನೇ! ರುಚಿಕರ ಭೋಜನವನ್ನೂ, ಉತ್ತಮವಾದ ವಸ್ತ್ರಗಳನ್ನು ಕೊಟ್ಟಿರುವೆ. ನಿನ್ನ ಆಸೆ ಫಲಿಸಿ, ನಿನಗೆ ಒಳ್ಳೆಯ ಮಕ್ಕಳಾಗಿ, ನಿನ್ನ ವಂಶ ಆಚಂದ್ರತಾರಾರ್ಕವಾಗಿ ಪ್ರಕಾಶಿಸಲಿ" ಎಂದು ಆಶೀರ್ವದಿಸಿದರು.
ಅಶ್ವಮೇಧ ಯಾಗ ಶಾಸ್ತ್ರೋತ್ತರವಾಗಿ ನಡೆಯಿತು. ಯಾಗದ ಕೊನೆಯಲ್ಲಿ ಅಶ್ವವನ್ನು ಒಂದು ಸ್ತಂಭಕ್ಕೆ ಕಟ್ಟಿದರು. ದಶರಥನ ಪಟ್ಟದರಾಣಿ ಕೌಸಲ್ಯದೇವಿ ಮೂರು ಕತ್ತಿಗಳಿಂದ ಯಾಗಾಶ್ವವನ್ನು ವಧಿಸಿದಳು. ಅದೇ ರಾತ್ರಿ ಅವಳು ಆ ಅಶ್ವದ ಜೊತೆ ಒಂದು ರಾತ್ರಿಯನ್ನು ಕಳೆದಳು. ಮರುದಿನ ಯಾಗ ಮಾಡಿಸಿದ ಋತ್ವಿಕ್ಕುಗಳಿಗೆ ರಾಜ ನಾಲ್ವರು ಪತ್ನಿಯರನ್ನು ದಾನ ಮಾಡಬೇಕು. ಅಂತೆಯೇ ದಶರಥ ಪಟ್ಟದರಾಣಿಯನ್ನು, ಉಪೇಕ್ಷಿತ ಪತ್ನಿಯನ್ನು, ವೇಶ್ಯೆಯನ್ನು ಮತ್ತು ದಾಸಿಯನ್ನು ನಾಲ್ಕು ಋತ್ವಿಕರಿಗೆ ದಾನ ಮಾಡಿದ. ಆದರೆ ಆ ಋತ್ವಿಕ್ಕರು ಅವರನ್ನು ದಶರಥನಿಗೇ ಕೊಟ್ಟುಬಿಟ್ಟರು. ಅದಕ್ಕೆ ಪ್ರತಿಯಾಗಿ ದಶರಥ ಅವರಿಗೆ ದ್ರವ್ಯಗಳನ್ನು ದಾನ ಮಾಡಿದ. ನಂತರ ಆ ವಧಿಸಿದ ಅಶ್ವದಿಂದ ವಾಪವನ್ನು (ವಾಪ - ಎಂದರೆ ಪ್ರಾಣಿಗಳ ಕಿಬ್ಬೊಟ್ಟೆಯ ಕೆಳಗಿರುವ ಕೊಬ್ಬು) ತೆಗೆದು ಹೋಮಾಗ್ನಿಗೆ ಹಾಕಿದರು. ಅದರಿಂದ ಬಂದ ಹೊಗೆಯನ್ನು ಯಜ್ಞ ದೀಕ್ಷಿತ ರಾಜ ಆಘ್ರಾಣಿಸಬೇಕು. ಇದೇ ಅಶ್ವಮೇಧ ಯಾಗ. ಹೀಗೆ ಮಾಡಿದರೆ ಯಾವ ಪಾಪ ಸಂತಾನಹೀನತೆಯನ್ನು ಕೊಟ್ಟಿರುತ್ತದೆಯೋ ಅದು ಶಮನವಾಗುತ್ತದೆ. ಕೊನೆಯಲ್ಲಿ ಅಶ್ವಶರೀರದ ಉಳಿದ ಭಾಗಗಳನ್ನು ಯಜ್ಞದಲ್ಲಿ ಹವಿಸ್ಸನ್ನಾಗಿ ಸಮರ್ಪಿಸಿದರು.
ದಶರಥ ಮಹಾರಾಜ ಅಶ್ವಮೇಧ ಮಾಡಿಸಿದ ಋತ್ವಿಕ್ಕುಗಳಿಗೆ ತನ್ನ ರಾಜ್ಯವನ್ನೇ ದಾನ ಮಾಡಿದ. ಆದರೆ ಅವರು ಭೂಭಾರವನ್ನು ಹೊರಲು ತಮಗೆ ಆಗುವುದಿಲ್ಲವೆಂದು, ರಾಜ್ಯಭಾರದ ಕರ್ತವ್ಯ ರಾಜನಾದೇ ಆದ್ದರಿಂದ ಆ ರಾಜ್ಯವನ್ನು ದಶರಥನಿಗೇ ಕೊಟ್ಟುಬಿಟ್ಟರು. ದಕ್ಷಿಣೆಯಿಲ್ಲದೆ ಯಾಗ ಮಾಡಬಾರದ ಕಾರಣ, ಅವರಿಗೆ ೧೦ ಲಕ್ಷ ಗೋವುಗಳನ್ನು, ೧೦೦ ಕೋಟಿ ಬಂಗಾರ ನಾಣ್ಯಗಳನ್ನು, ೪೦೦ ಕೋಟಿ ಬೆಳ್ಳಿ ನಾಣ್ಯಗಳನ್ನು ದಾನ ಮಾಡಿದ. ಯಾಗಕ್ಕೆ ಬಂದಿದ್ದ ಇತರ ಬ್ರಾಹ್ಮಣರಿಗೆ ಒಂದು ಕೋಟಿ ಬಂಗಾರ ನಾಣ್ಯಗಳನ್ನು ದಾನ ಮಾಡಿದ. ಯಾಗ ಪೂರ್ತಿಯಾಯಿತು.
👌
ReplyDelete