೨೪. ವಿಷಬೀಜಾಂಕುರ!
ರಾಮನ ಪಟ್ಟಾಭಿಷೇಕದ ಕಾರಣದಿಂದ ಇಡೀ ಅಯೋಧ್ಯೆ ಸಂತೋಷದಿಂದಿರುವ ಸಮಯದಲ್ಲಿ, ಕುಬ್ಜೆ(ಗೂನಿ)ಯಾದ ಮಂಥರೆ (ಹುಟ್ಟಿನ ದಿನದಿಂದ ಕೈಕೇಯಿಯ ದಾಸಿ), ಚಂದ್ರ ಬಿಂಬದಂತಿದ್ದ ರಾಜಪ್ರಾಸಾದದ ಮೇಲೆ ಹತ್ತಿ, ಆನಂದದಲ್ಲಿ ಮುಳುಗಿರುವ ಆ ದೇಶದ ಪ್ರಜೆಗಳನ್ನು ನೋಡಿದಳು. ಅವರ ಸಂತೋಷವನ್ನು ನೋಡಿ ಅವಳಿಗೆ ಸಹಿಸಲಾಗಲಿಲ್ಲ. ತನ್ನ ದಾರಿಗೆ ಅಡ್ಡ ಸಿಕ್ಕ ಕೌಸಲ್ಯೆಯ ದಾಸಿಯನ್ನು ಕರೆದು, ”ಎಂದೂ ದಾನ ಧರ್ಮಗಳನ್ನು ಮಾಡದ ಕೌಸಲ್ಯೆ ಇಂದೇಕೆ ಹೀಗೆ ದೊಡ್ಡ-ದೊಡ್ಡ ದಾನಗಳನ್ನು ಮಾಡುತ್ತಿದ್ದಾಳೆ?" ಎಂದು ವಿಚಾರಿಸಿದಳು.
ಕೌಸಲ್ಯೆಯ ದಾಸಿ, "ರಾಮನಿಗೆ ಯುವರಾಜ್ಯ ಪಟ್ಟಾಭಿಷೇಕ ನಡೆಯುತ್ತಿದೆ, ಅದಕ್ಕೆ ಕೋಸಲ ದೇಶದ ಪ್ರಜೆಗಳೆಲ್ಲರೂ ಸಂಭ್ರಮವಾಚರಿಸುತ್ತಿದ್ದಾರೆ" ಎಂದು ಉತ್ತರಕೊಟ್ಟಳು. ಈ ಸುದ್ದಿ ಕೇಳಿದ ತಕ್ಷಣ ಮಂಥರೆ ಕೈಕೇಯಿಯ ಅಂತಃಪುರಕ್ಕೆ ದೌಡಾಯಿಸಿದಳು.
ಒಂದು ಸುಂದರವಾದ ಹಂಸತೂಲಿಕಾತಲ್ಪದ ಮೇಲೆ ವಿಶ್ರಮಿಸುತ್ತಿದ್ದ ಕೈಕೇಯಿಯನ್ನು ಕುರಿತು,
“ಅಕ್ಷಯ್ಯಂ ಸುಮಹದ್ದೇವಿ ಪ್ರವೃತ್ತಂ ದ್ವದ್ವಿನಾಶನಂ |
ರಾಮಂ ದಶರಥೋ ರಾಜಾ ಯುವರಾಜ್ಯೇ ಭಿಷೇಕ್ಷ್ಯತಿ ||
ನಿನ್ನ ನಾಶನವು ಪ್ರಾರಂಭವಾಗಿದೆ ಕೈಕೆ! ರಾಮನಿಗೆ ಯುವರಾಜ್ಯ ಪಟ್ಟಾಭಿಷೇಕ ನಡೆಯುತ್ತಿದೆ. ಅಯ್ಯೋ ಹುಚ್ಚಿ! ನೋಡಿದೆಯಾ? ಇನ್ನು ಸ್ವಲ್ಪ ಸಮಯದಲ್ಲಿ ಕೌಸಲ್ಯೆ ರಾಜಮಾತೆಯಾಗುತ್ತಿದ್ದಾಳೆ. ನಿನ್ನ ಪತಿ ಚತುರ, ದ್ರೋಹಿ. ವೃದ್ದಾಪ್ಯದಲ್ಲಿ ನಿನ್ನ ಯೌವನವನ್ನು ಬಯಸಿ ನಿನ್ನನ್ನು ವರಿಸಿದ. ತನಗೆ ಬೇಕಾದ ಭೋಗಗಳನ್ನು ನಿನ್ನಿಂದ ಅನುಭವಿಸಿದ ನಂತರ, ಈಗ ಏನೂ ತಿಳಿಯದವನಂತೆ, ಜೇನಿನಲ್ಲಿ ನೆನೆಸಿದ ಕತ್ತಿಯಂತೆ ವರ್ತಿಸುತ್ತಾ, ನಿನಗೆ ಮಹಾಪಕಾರವನ್ನೆಸಗಿದ್ದಾನೆ. ನಿನ್ನ ಮಗ ಭರತನಿರುವಾಗ, ಭರತನಿಗೆ ಪಟ್ಟಾಭಿಷೇಕವನ್ನು ಮಾಡದೆ, ಕೌಸಲ್ಯಾ ಕುಮಾರನಾದ ರಾಮನಿಗೆ ಪಟ್ಟಾಭಿಷೇಕ ಮಾಡಲು ನಿರ್ಣಯಿಸಿದ್ದಾನೆ. ಗಮನಿಸಿದೆಯಾ?” ಎಂದು ಕೇಳಿದಳು.
ಕೈಕೆ, ”ಅಯ್ಯೋ! ಮಂಥರೆ ನೀನು ಹೇಳುತ್ತಿರುವುದೇನು? ನನಗೆ ಸಂಬಂಧಿಸಿದಂತೆ ರಾಮನಿಗೂ ಭರತನಿಗೂ ಯಾವುದೇ ವ್ಯತ್ಯಾಸವಿಲ್ಲ. ನನಗೆ ಇಬ್ಬರೂ ಸಮಾನರು. ನೀನು ಹೇಳಿದ ವಾರ್ತೆ ಕೇಳಿ ನಾನು ಸಂತೋಷದಿಂದ ಹಿಗ್ಗಿದ್ದೇನೆ. ರಾಮನು ಕೌಸಲ್ಯೆಯನ್ನು ಹೇಗೆ ಸೇವಿಸುತ್ತಾನೋ ಹಾಗೆಯೇ ನಮ್ಮನ್ನೂ ಸೇವಿಸುತ್ತಾನೆ. ಅವನು ಕೌಸಲ್ಯೆಯನ್ನು ಮಾತ್ರ ತನ್ನ ತಾಯಿಯಾಗಿ ನೋಡಿ, ನಮ್ಮನ್ನು ಮಲತಾಯಿಯಂತೆ ಎಂದಿಗೂ ಕಾಣುವುದಿಲ್ಲ. ಅಂಥಹ ರಾಮನಿಗೆ ಪಟ್ಟಾಭಿಷೇಕ ನಡೆದರೆ ಅದಕ್ಕಿಂತ ದೊಡ್ಡ ವಿಷಯ ಇನ್ನಾವುದಿದೆ? ಬಹಳ ಸಂತೋಷದ ವಾರ್ತೆ ತಂದ ನಿನಗಿದೋ ಬಹುಮಾನ" ಎಂದು ಮಂಥರೆಗೆ ಬಹುಮಾನವನ್ನು ಕೊಟ್ಟಳು.
ಕೈಕೆ ಕೊಟ್ಟ ಬಹುಮಾನವನ್ನು ಮಂಥರೆ ತೆಗೆದುಕೊಳ್ಳದೆ ಬಿಸಾಕಿ, "ಮೂರ್ಖ ಹೆಣ್ಣೇ! ನಾನು ಹೇಳುತ್ತಿರುವುದು ನಿನಗೆ ಅರ್ಥವಾಗುತ್ತಿಲ್ಲ. ನೀನು ಹಾವನ್ನು ತಬ್ಬಿ ಮಲಗಲು ಸಿದ್ಧಳಾಗುತ್ತಿರುವೆ. ದಶರಥ ನಿನಗೆ ಇಷ್ಟವಾದ ಕೆಲಸಗಳನ್ನು ಮಾಡುತ್ತಿದ್ದಾನೆಂದುಕೊಳ್ಳುತ್ತಿದ್ದೀಯಾ? ನಿನಗೆ ಆಗುತ್ತಿರುವ ಅನ್ಯಾಯ ನಿನಗೆ ತಿಳಿಯುತ್ತಿಲ್ಲ. ರಾಮನಂತೆ ಪಟ್ಟಾಭಿಷೇಕದ ಯೋಗ್ಯತೆಯಿರುವುದು ಭರತನಿಗೆ ಮಾತ್ರ. ಭರತನೆಂದರೆ ರಾಮನಿಗೆ ಭಯ. ಆದ್ದರಿಂದಲೇ ಭರತನಿಲ್ಲದಿರುವ ಸಮಯ ನೋಡಿ ರಾಮ ತನ್ನ ಯೌವ್ವರಾಜ ಪಟ್ಟಾಭಿಷೇಕ ಮಾಡಿಕೊಳ್ಳುತ್ತಿದ್ದಾನೆ", ಎಂದಳು.
"ಮಾಡಿಕೊಳ್ಳಲಿ, ಅದರಲ್ಲಿ ತಪ್ಪೇನಿದೆ? ರಾಮನ ನಂತರ ಭರತ ಪರಿಪಾಲಿಸುತ್ತಾನೆ."
"ಹುಚ್ಚಿ! ನಿನಗೆ ಅರ್ಥವಾಗುತ್ತಿಲ್ಲ. ಒಂದು ಬಾರಿ ದಶರಥ ರಾಮನಿಗೆ ಯುವರಾಜ ಪಟ್ಟಾಭಿಷೇಕ ಮಾಡಿದ ನಂತರ, ಈ ಜನ್ಮದಲ್ಲಿ ಭರತ ಮತ್ತೆ ರಾಜನಾಗುವುದಿಲ್ಲ. ರಾಮ ಕೆಲವು ವರ್ಷಗಳ ಕಾಲ ರಾಜ್ಯಭಾರ ಮಾಡುತ್ತಾನೆ. ನಂತರ ಅವನ ಮಕ್ಕಳು. ನಿನ್ನ ಮಗ ಒಂದು ಬಾರಿಯೂ ರಾಜನಾಗುವುದು ಸಾಧ್ಯವಿಲ್ಲ. ಒಂದು ಮಾತು ನೆನಪಿಡು, ಸುಮಿತ್ರೆಯ ಮಕ್ಕಳಲ್ಲಿ ಒಬ್ಬನಾದ ಲಕ್ಷ್ಮಣ ಯಾವಾಗಲೂ ರಾಮನೊಂದಿಗೇ ಇರುತ್ತಾನೆ. ಆದ್ದರಿಂದಲೇ ರಾಮ ಲಕ್ಷ್ಮಣನನ್ನು ತನ್ನ ಬಳಿ ಇಟ್ಟುಕೊಂಡಿದ್ದಾನೆ. ಆದರೆ ಶತ್ರುಘ್ನ ಭರತನೊಂದಿಗೆ ಇರುತ್ತಾನಾದ ಕಾರಣ ತನ್ನ ಬಳಿ ಇಟ್ಟುಕೊಳ್ಳಲಿಲ್ಲ. ಒಂದು ಮರವನ್ನು ಕಡಿಯಬೇಕೆಂದರೆ ಅದರ ಸುತ್ತಲೂ ಇರುವ ಕಳೆಯನ್ನು ತೆಗೆಯಬೇಕು. ಅಂತೆಯೇ ಭರತನನ್ನು ತೆಗೆಯಬೇಕಾದರೆ ಅವನ ಜೊತೆಯೇ ಇರುವ ಶತ್ರುಘ್ನನನ್ನು ತೆಗೆಯಬೇಕು. ಆದ್ದರಿಂದಲೇ ಕಾರಣವಿದ್ದರೂ, ಇಲ್ಲದಿದ್ದರೂ ಶತ್ರುಘ್ನನನ್ನು ಭರತನ ಜೊತೆ ಕಳಿಸಿ ಇಬ್ಬರನ್ನೂ ಇಲ್ಲದಂತೆ ಮಾಡಿದ್ದಾನೆ. ಅಕಸ್ಮಾತಾಗಿ ಪ್ರಕಟಿಸುವಂತೆ ತನ್ನ ತಂದೆಗೆ ಹೇಳಿ ಪಟ್ಟಾಭಿಷೇಕದ ವಿಷಯವನ್ನು ಪ್ರಕಟಿಸಿದ್ದಾನೆ. ಇಂತಹ ವಿಷಯಗಳಲ್ಲಿ ರಾಮ ತುಂಬಾ ಬುದ್ದಿವಂತ. ಪ್ರಜೆಗಳ ಬೆಂಬಲವನ್ನೂ ಪಡೆದಿದ್ದಾನೆ. ಭರತನು ಇಲ್ಲೇ ಇದ್ದರೆ ದಿನವೂ ತನ್ನ ತಂದೆಯ ಸೇವೆ ಮಾಡುತ್ತಿದ್ದ. ಆಗ ದಶರಥನಿಗೆ ಭರತನ ಮೇಲೆ ಪ್ರೀತಿ ಬೆಳೆಯುತ್ತಿತ್ತು. ಹಾಗಾಗದಿರುವುದಕ್ಕಾಗಿಯೇ ರಾಮ ಭರತನನ್ನು ರಾಜ್ಯದಿಂದ ಕಳಿಸಿಬಿಟ್ಟಿದ್ದಾನೆ. ದಿನವೂ ಪಿತೃಸೇವೆ, ಪಿತೃಸೇವೆ ಎಂದು ದಶರಥನ ಸುತ್ತ ತಿರುಗುತ್ತಾ ಪಟ್ಟಾಭಿಷೇಕವನ್ನು ಪಡೆಯುತ್ತಿದ್ದಾನೆ. ರಾಮನಿಗೆ ಲಕ್ಷ್ಮಣನಿಂದ ಸಮಸ್ಯೆಗಳಿಲ್ಲ. ಭರತನನ್ನು ಅಯೋಧ್ಯೆಗೆ ಬರುವ ಮುಂಚೆಯೇ ಹಿಡಿದುಬಿಡುತ್ತಾನೆ. ಆದ್ದರಿಂದ ಕೈಕೆ! ನನ್ನ ಮಾತು ಕೇಳಿ ನಿನ್ನ ಮಗನನ್ನು ಅಯೋಧ್ಯೆಗೆ ಬರದಂತೆ, ಅಲ್ಲಿಂದಲೇ ಅರಣ್ಯಕ್ಕೆ ಓಡಿಹೋಗುವಂತೆ ಹೇಳು. ರಾಮನಿಗೆ ಪಟ್ಟಾಭಿಷೇಕವಾದರೆ ಪ್ರಜೆಗಳಿಗೆ ಅವನ ಮೇಲೆ ನಂಬಿಕೆ ಹೆಚ್ಚುತ್ತದೆ. ರಾಮ ಇನ್ನು ರಾಜ್ಯದಲ್ಲಿ ಅವನಿಗೆ ಶತ್ರುಗಳು ಇಲ್ಲವಾಗುವಂತೆ ಮಾಡಿಕೊಳ್ಳುತ್ತಾನೆ.
ಪ್ರಾಪ್ತಾಂ ಸುಮಹತೀಂ ಪ್ರೀತಿಂ ಪ್ರತೀತಾಂ ತಾಂ ಹತದ್ವಿಷಂ
ಉಪಸ್ಥಾಸ್ಯಸಿ ಕೌಸಲ್ಯಾಂ ದಾಸೀವತ್ವಂ ಕೃತಾಂಜಲಿಂ
ಇಷ್ಟು ದಿನ ಸುಂದರಿ ಎಂಬ ಅಹಂಕಾರದಿಂದ, ದಶರಥನನ್ನು ಬುಟ್ಟಿಗೆ ಹಾಕಿಕೊಂಡು ಕೌಸಲ್ಯಯ ಜೊತೆ ಅತಿಶಯದಿಂದ ವರ್ತಿಸಿದ್ದೀಯ. ಈಗ ಕೌಸಲ್ಯೆ ನಿನಗೆ ಪಾಠ ಹೇಳಲು ಶುರು ಮಾಡುತ್ತಾಳೆ. ಅವಳು ರಾಜಮಾತೆಯಾಗುತ್ತಾಳೆ. ನೀನು ಅಡವಿಗೆ ಹೋದವನ ತಾಯಿ. ಆಗ ನೀನು ದಶರಥನ ಪತ್ನಿಯಾಗಲ್ಲದೆ ಕೌಸಲ್ಯೆಯ ದಾಸಿಯಾಗಿ ಬದುಕಬೇಕು. ಅನ್ನಕ್ಕಾಗಿ ದಿನವೂ ಕೌಸಲ್ಯೆಯ ಬಳಿ ಹೋಗಿ ನಮಸ್ಕಾರ ಮಾಡಬೇಕು."
ಮಂಥರೆಯ ಮಾತು ಕೇಳಿದ ಕೈಕೆಯ ಮನಸ್ಸಿನಲ್ಲಿ ದುರಾಲೋಚನೆ ಹುಟ್ಟಿತು. "ನಾನು ಮತ್ತು ನನ್ನ ಮಗ ಈ ಉಪದ್ರವದಿಂದ ಹೊರಬರಬೇಕಾದರೆ ಏನು ಮಾಡಬೇಕು?" - ಕೈಕೆ ಕೇಳಿದಳು.
Comments
Post a Comment