೩೩. ಪುರದಪುಣ್ಯಂ ಪುರುಷರೂಪಿಂದೆ ಪೋಯಿತು!

ರಾಮ ಸೀತೆ ಲಕ್ಷಣರ ಜೊತೆ ಅರಣ್ಯಕ್ಕೆ ಹೋಗಲು ತನಗಾಗಿ ಸಿದ್ದ ಪಡಿಸಿದ ರಥ ಹತ್ತಿದ. ಆ ಸಮಯದಲ್ಲಿ ಅಯೋಧ್ಯೆಗೆ ಅಯೋಧ್ಯೆಯೇ ಶೋಕದಿಂದ ಕೂಡಿತ್ತು. ರಾಮ ಕಾಡಿಗೆ ಹೋಗುತ್ತಾನೆಂದು ಇಡೀ ಅಯೋಧ್ಯೆಯ ಪ್ರಜೆಗಳೆಲ್ಲಾ ಅಳುತ್ತಿದ್ದಾರೆ. ಯಜ್ಞ ಮಾಡುತ್ತಿದ್ದವರು ಮಧ್ಯದಲ್ಲೇ ನಿಲ್ಲಿಸಿ ಬಂದಿದ್ದಾರೆ. ಹೆಂಗಸರು, ಮಕ್ಕಳು, ವೃದ್ಧರು ‘ರಾಮಾ! ರಾಮಾ!’, ಎಂದು ಕಿರುಚುತ್ತಿದ್ದಾರೆ. ಅಳುತ್ತಿರುವ ತಮ್ಮ ಮರಿಗಳಿಗೆ ಪಕ್ಷಿಗಳು ಆಹಾರ ತರುವುದನ್ನು ಮರೆತು ತಮ್ಮ ಗೂಡುಗಳಲ್ಲಿ ಕಣ್ಣೀರು ಸುರಿಸುತ್ತಿವೆ. ಅಶ್ವಶಾಲೆಯ ಕುದುರೆಗಳು, ಗಜಶಾಲೆಯ ಆನೆಗಳು ಅಳುತ್ತಾ, ಘೀಳಿಡುತ್ತಾ ಉನ್ಮಾದದಿಂದ ಅತ್ತಿತ್ತ ಓಡಾಡುತ್ತಿವೆ. ಸಮಸ್ತ ಜೀವರಾಶಿಗಳು ಒಂದು ರೀತಿಯ ಸಂಕ್ಷೋಭೆಗೆ ಒಳಗಾಗಿವೆ. ರಥ ಹೋಗುತ್ತಿರುವಾಗ, ಹಿಂದಿನಿಂದ ಕೌಸಲ್ಯಾದೇವಿ ಗಾಳಿಯಲ್ಲಿ ಕೈ ಬೀಸುತ್ತಾ, ಜೋರಾಗಿ ಕೂಗುತ್ತಾ, ಜಾರುತ್ತಿರುವ ಸೆರಗನ್ನೂ ಲೆಕ್ಕಿಸದೆ, ತನ್ನನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವವರನ್ನು ತಳ್ಳುತ್ತಾ ಓಡಿಬಂದಳು. ಮತ್ತೊಂದು ಕಡೆ ದಶರಥ ‘ನಿಲ್ಲಿಸಿ’ ಕೂಗುತ್ತಾ ಬಂದ. ತನ್ನ ತಂದೆ-ತಾಯಿಯರನ್ನು ನೋಡಲಾಗದೆ ರಾಮ ರಥ ನಡೆಸುತ್ತಿರುವ ಸುಮಂತ್ರನನ್ನು ಬೇಗ ಓಡಿಸಲು ಹೇಳಿದ. ಅತ್ತ ದಶರಥ ರಥ ನಿಲ್ಲದಿರುವುದನ್ನು ನೋಡಿ ಸುಮಂತ್ರನಿಗೆ, “ನಾನು ಚಕ್ರವರ್ತಿ ಆಜ್ಞೆ ಮಾಡುತ್ತಿದ್ದೇನೆ ನಿಲ್ಲಿಸು” ಎಂದ. ಎರೆಡು ಚಕ್ರಗಳ ಮಧ್ಯೆ ನಿಂತ ಪ್ರಾಣಿಯಂತಾಯಿತು ಸುಮಂತ್ರನ ಪರಿಸ್ಥಿತಿ.

ರಾಮ, “ಸುಮಂತ್ರಾ! ನಾಳೆ ನೀನು ಹಿಂತಿರುಗಿದಾಗ, ರಥವನ್ನು ಏಕೆ ನಿಲ್ಲಿಸಲಿಲ್ಲ ಎಂದು ದಶರಥರು ಕೇಳಿದರೆ, ನನಗೆ ಚಕ್ರಗಳ ಸದ್ದಿನ ನಡುವೆ ನಿಮ್ಮ ಕೂಗು ಕೇಳಲಿಲ್ಲ ಎಂದು ಹೇಳು. ಈಗ ನಿಲ್ಲಿಸಬೇಡ” ಎಂದ. ರಥ ಮುಂದಕ್ಕೆ ಹೊರಟು ಹೋಯಿತು.

‘ನಾವೆಲ್ಲಾ ರಾಮನ ಹಿಂದೆ ಹೋಗೋಣ. ಅವನ ಜೊತೆಯೇ ಇರೋಣ. ನಮ್ಮ ಜೊತೆ ಮಕ್ಕಳನ್ನು, ವೃದ್ಧರನ್ನು, ಗೋವುಗಳನ್ನೂ ಕರೆದುಕೊಂಡು ಹೋಗೋಣ. ನಾವೆಲ್ಲಾ ಹೋದರೆ ದಶರಥನೂ ಬರುತ್ತಾನೆ, ಅವನ ಹಿಂದೆ ಅವನ ಪತ್ನಿಯರು, ಚದುರಂಗ ಬಲಗಳೂ ಬಂದುಬಿಡುತ್ತವೆ. ನಾವು ಅಡವಿಗೆ ಹೋದರೆ, ಅಯೋಧ್ಯೆ ಅಡವಿಯಾಗುತ್ತದೆ. ನಮ್ಮನ್ನೆಲ್ಲಾ ನೋಡಿದ ಪ್ರಾಣಿಗಳು ಬೆದರಿ ಅಯೋಧ್ಯೆಗೆ ಬರುತ್ತದೆ. ಆಗ ಕೈಕೆ ತನ್ನ ಮಗನ ಜೊತೆ ಆ ಕ್ರೂರ ಮೃಗಗಳನ್ನು ಪಾಲಿಸಲಿ’ ಎಂದು ಎಲ್ಲರೂ ರಾಮನ ಹಿಂದೆಯೇ ಹೊರಟರು. ಆದರೆ ರಾಮನ ರಥದ ವೇಗಕ್ಕೆ ಹೊಂದಲಾರದೆ ಅನೇಕರು ಹಿಂತಿರುಗಿದರು. ತನ್ನ ಹಿಂದೆ ವೃದ್ಧ ಬ್ರಾಹ್ಮಣರು ಓಡಿ ಬರುತ್ತಿರುವುದನ್ನು ತಿಳಿದ ರಾಮ ರಥದಿಂದ ಇಳಿದು ಅವರ ಜೊತೆ ನಡೆಯಲು ಪ್ರಾರಂಭಿಸಿದ. ಹಾಗೆ ನಡೆಯುತ್ತಾ ಎಲ್ಲರೂ ತಮಸಾ ನದಿ ತೀರವನ್ನು ಸೇರಿ, ಆ ರಾತ್ರಿ ಪ್ರಯಾಣ ಆಯಾಸದಿಂದ ಅಲ್ಲೇ ತಂಗಿದರು. 

ರಾಮ ಹೋದ ನಂತರ ಜ್ಞಾನ ತಪ್ಪಿದ್ದ ದಶರಥ ನಿಧಾನವಾಗಿ ಪ್ರಜ್ಞೆಗೆ ಮರಳಿದ. ಸೇವಕರನ್ನು ಕರೆದು ತನ್ನನ್ನು ಕೌಸಲ್ಯೆಯ ಮಂದಿರಕ್ಕೆ ಕರೆದೊಯ್ಯಲು ಹೇಳಿದ. ಗುಣವಂತಳಾದ ಕೌಸಲ್ಯೆಯಿದ್ದರೂ ಕಾಮದಿಂದ ಕೈಕೆಯನ್ನು ತಂದುಕೊಂಡೆ, ಈಗ ಅದರ ಫಲವನ್ನು ಅನುಭವಿಸುತ್ತಿದ್ದೇನೆ ಎಂದು ಅತ್ತು ಅತ್ತು ಅವನ ಕಣ್ಣುಗಳು ತಮ್ಮ ದೃಷ್ಟಿ ಕಳೆದುಕೊಂಡವು. ಕೌಸಲ್ಯೆಯನ್ನು ಕುರಿತು, “ಇನ್ನು ನಾನು ಹೆಚ್ಚು ಕಾಲ ಬದುಕುವುದಿಲ್ಲ. ನಾನು ಸಾಯುವ ಮುನ್ನ ಹೇಗೂ ರಾಮ ನನ್ನನ್ನು ಸ್ಪರ್ಶಿಸಲಾರ. ರಾಮನ ಜೊತೆ ನನ್ನ ದೃಷ್ಟಿಯೂ ಹೊರಟುಹೋಗಿದೆ. ರಾಮನ ತಾಯಿಯಾದ ನೀನು ನನ್ನನ್ನು ಸ್ಪರ್ಶಿಸಿದರೆ ರಾಮನನ್ನು ಸ್ಪರ್ಶಿಸಿಂತೆಯೇ ಆಗುತ್ತದೆ”, ಎಂದ.
ಕೌಸಲ್ಯೆ: “ಹೆತ್ತ ಮಗನನ್ನು ಅರಣ್ಯಕ್ಕೆ ಕಳಿಸಿದೆ. ನನ್ನನ್ನು ಇಂತಹ ದೌರ್ಭಾಗ್ಯ ಸ್ಥಿತಿಗೆ ತಂದೆ. ನಿನ್ನಿಂದ ಇಡೀ ದೇಶವೇ ದುಃಖಿಸುತ್ತಿದೆ. ರಾಜಾ! ಈಗಲಾದರೂ ನಿನಗೆ ಸಂತೋಷವಾಯಿತೇ?”
“ಬಿದ್ದು ಹೋದ ಕುದುರೆಯನ್ನು ಮತ್ತೆ ಬೀಳಿಸಬೇಡ ಕೌಸಲ್ಯ! ಮನಶ್ಶಾಂತಿಂಗಾಗಿ ನಿನ್ನ ಬಳಿ ಬಂದರೆ ನೀನೂ ನನ್ನನ್ನು ಹಂಗಿಸುತ್ತೀಯಾ?” ಎಂದು ದಶರಥ ಮತ್ತೆ ಮೂರ್ಛೆ ಹೋದ.

ಇತ್ತ ಬೆಳಗಾಗುತ್ತಲೇ ರಾಮ ಸುಮಂತ್ರನನ್ನು ಕರೆದು, “ಇವರೆಲ್ಲಾ ವೃದ್ಧರಾದ ಬ್ರಾಹ್ಮಣರು. ನನ್ನ ಮೇಲಿನ ಪ್ರೇಮದಿಂದ ನನ್ನ ಹಿಂದೆ ಬಂದಿದ್ದಾರೆ. ಇವರು ನನ್ನ ಜೊತೆ ಬಂದರೆ ೧೪ ವರ್ಷಗಳ ಕಾಲ ಕಷ್ಟಪಡುತ್ತಾರೆ. ನಾನು ಕಾಣಿಸದಿದ್ದರೆ ಅವರು ಹಿಂದೆ ಹೋಗುತ್ತಾರೆ. ಆದ್ದರಿಂದ ಸೂರ್ಯೋದಯಕ್ಕೆ ಮುಂಚೆ ಎಲ್ಲರೂ ಗಾಢ ನಿದ್ದೆಯಲ್ಲಿದ್ದಾಗಲೇ ನಾವು ಹೋಗಿಬಿಡಬೇಕು. ಆದರೂ ಇವರು ರಾಮ ಎಲ್ಲಿ ಹೋದ ಎಂದು ರಥ ಚಕ್ರ ಸಾಗಿದ ದಾರಿಯಲ್ಲೇ ಬರಬಹುದು. ಆದ್ದರಿಂದ ರಥವನ್ನು ಮೊದಲು ಉತ್ತರ ದಿಕ್ಕಿಗೆ ನಡೆಸು. ಅಲ್ಲಿ ಅಯೋಧ್ಯೆಯಿದೆ. ಹಾಗೆ ಸ್ವಲ್ಪ ದೂರ ಸಾಗಿದ ಮೇಲೆ ರಥವನ್ನು ಹಿಂದಕ್ಕೆ ತಿರುಗಿಸಿ, ಪೊದೆ, ಗುಡ್ಡಗಳ ಮೇಲೆ ನಡೆಸಿ ತಮಸಾ ನದಿಯನ್ನು ದಾಟಿಸು. ಆಗ ಅವರಿಗೆ ರಥಚಕ್ರದ ಗುರುತು ಸಿಗದೆ ಅಯೋಧ್ಯೆಗೆ ಹಿಂತಿರುಗುತ್ತಾರೆ”, ಎಂದು ಹೇಳಿದ. 

ಅಂತೆಯೇ ಅವರು ಬೆಳಗಾಗುತ್ತಲೇ ಉತ್ತರ ದಿಕ್ಕಿಗೆ ರಥವನ್ನು ನಡೆಸಿ, ಮತ್ತೆ ಅದೇ ಗಾಡಿಯಲ್ಲಿ ಹಿಂದೆ ಬಂದು ತಮಸಾ ನದಿಯನ್ನು ದಾಟಿ ಆ ಕಡೆಯ ತೀರಕ್ಕೆ ಸೇರಿಕೊಂಡರು. ಬ್ರಾಹ್ಮಣರು ನಿದ್ದೆಯಿಂದೆದ್ದು ರಾಮನನ್ನು ಹುಡುಕುತ್ತಾ ರಥ ಚಕ್ರದ ದಾರಿಹಿಡಿದು ಹೋದರು. ಸ್ವಲ್ಪ ದೂರ ಕ್ರಮಿಸಿದ ಮೇಲೆ ರಥ ಚಕ್ರದ ದಾರಿ ನಿಂತು ಹೋಯಿತು. ಇನ್ನು ತಾವೇನೂ ಮಾಡಲಾಗುವುದಿಲ್ಲ ಎಂದು ಅವರು ಅಯೋಧ್ಯೆಗೆ ಹಿಂತಿರುಗಿದರು. ರಾಮನಿಲ್ಲದ ಅಯೋಧ್ಯೆಯಲ್ಲಿ ಅಡುಗೆ ಮಾಡುವವರು ಯಾರೂ ಇರಲಿಲ್ಲ. ಯಾವ ಮನೆಯ ಮುಂದೆಯೂ ಸಾರಿಸಿಲ್ಲ. ರಂಗೋಲಿ ಇಟ್ಟಿಲ್ಲ. ರಾಜ್ಯದಲ್ಲಿ ಯಾವ ಪ್ರಾಣಿಯೂ ಆನಂದವಾಗಿಲ್ಲ. ಇಡೀ ರಾಜ್ಯದಲ್ಲಿ ಸಂತೋಷವಾಗಿದ್ದ ಏಕೈಕ ಪ್ರಾಣಿ ಕೈಕೆ.

ರಾಮ ತಮಸಾ ನದಿಯನ್ನು ದಾಟಿ, ದಿನಕ್ಕೊಂದು ನಗರದಂತೆ, ವೇದಶೃತಿ, ಗೋಮತಿ ಮೊದಲಾದ ನಗರಗಳನ್ನು ದಾಟಿ ಕೋಸಲದ ಗಡಿಗೆ ಬಂದ. ಅಯೋಧ್ಯೆ ನಗರದ ಕಡೆ ತಿರುಗಿ ಒಂದು ಬಾರಿ ನಮಸ್ಕಾರ ಮಾಡಿ, 
“ಆ ಪೃಚ್ಛೇ ತ್ವಾಂ ಪುರಿಶ್ರೇಷ್ಠೇ ಕಾಕುತ್ಥ್ಸ ಪರಿಪಾಲತೇ
ದೈವತಾನಿ ಚ ಯಾನಿ ತ್ವಾಂ ಪಾಲಯಂತ್ಯಾವಸಂತಿ ಚ

ಓ ಅಯೋಧ್ಯೆ! ಪೂರ್ವದಲ್ಲಿ ನಮ್ಮ ಕಾಕುತ್ಥ್ಸ ವಂಶದಲ್ಲಿ ಎಷ್ಟೋ ರಾಜರು ನಿನ್ನನ್ನು ಪರಿಪಾಲಿಸಿದ್ದಾರೆ. ಇಂತಹ ಅಯೋಧ್ಯಾ ನಗರವನ್ನು ಬಿಟ್ಟು ಧರ್ಮಕ್ಕೆ ಕಟ್ಟುಬಿದ್ದು ೧೪ ವರ್ಷಗಳ ಕಾಲ ಅರಣ್ಯಕ್ಕೆ ಹೋಗುತ್ತಿದ್ದೇನೆ. ಮತ್ತೆ ಹಿಂತಿರುಗಿ ಬಂದು ತಂದೆ ತಾಯಿಯರನ್ನು ನಮಸ್ಕರಿಸುವ ಅದೃಷ್ಟವನ್ನು ನನಗೆ ಪ್ರಸಾದಿಸು” ಎಂದ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ