೩೪. ಗುಹನ ಭೇಟಿ
ಅಯೋಧ್ಯೆ ಬಿಟ್ಟು ಬಂದು ಕೋಸಲದ ಗಡಿ ದಾಟಿ ಗಂಗಾ ನದಿ ತೀರವನ್ನು ಸೇರಿ, ಒಂದು ಇಂಗುದಿ ಮರದ ಕೆಳಗೆ ಕುಳಿತರು.
ತತ್ರ ರಾಜಾ ಗುಹೋ ನಾಮ ರಾಮಸ್ಯ ಆತ್ಮ ಸಮಃ ಸಖಾ
ನಿಷಾದ ಜಾತ್ಯೋ ಬಲವಾನ್ ಸ್ಥಪತಿಃ ಚ ಇತಿ ವಿಶ್ರುತಃ
ರಾಮ ಅಲ್ಲಿ ಬಂದದ್ದನ್ನು ತಿಳಿದು ಆ ಪ್ರಾಂತದಲ್ಲಿದ್ದ (ಆ ಪ್ರಾಂತವನ್ನು ಶೃಂಗಿಬೇರಪುರ ಎಂದು ಕರೆಯುತ್ತಾರೆ. ಅಲ್ಲಿ ಗುಹನೆಂಬುವವನು ರಾಜ), ರಾಮನಿಗೆ ಆತ್ಮಸ್ನೇಹಿತನಾದ (ತನ್ನ ಧರ್ಮವನ್ನು ಪಾಲಿಸುವ ಎಲ್ಲರೂ ರಾಮನಿಗೆ ಪ್ರಾಣಮಿತ್ರರೇ) ಗುಹ ಓಡಿಬಂದು, ರಾಮನನ್ನು ಗಟ್ಟಿಯಾಗಿ ತಬ್ಬಿಕೊಂಡು, “ರಾಮಾ! ಇದು ಕೂಡ ನಿನ್ನ ರಾಜ್ಯವೇ. ಇದನ್ನು ಅಯೋಧ್ಯೆಯೆಂದೇ ತಿಳಿ. ನಿನಗಾಗಿ ವಿವಿಧ ಪದಾರ್ಥಗಳು, ಅನ್ನರಸಗಳನ್ನು ತಂದಿದ್ದೇನೆ” ಎಂದ.
ಆಗ ರಾಮ,
“ಗುಹಂ ಏವ ಬ್ರುವಾಣಾಂ ತಂ ರಾಘವಃ ಪ್ರತ್ಯುವಾಚ ಹ
ಅರ್ಚಿತಾಃ ಚೈವ ಹೃಷ್ಟಾಃ ಚ ಭವತಾ ಸರ್ವಥಾ ವಯಂ
ಪದ್ಭ್ಯಾಂ ಅಭಿಗಮಾಚೈವ ಸ್ನೇಹ ಸಂದರ್ಶನೇನ ಚ
ಗುಹಾ! ನನ್ನ ತಾಯಿಗೆ ಕೊಟ್ಟ ಮಾತಿನ ಪ್ರಕಾರ ನಾನು ಇವೆಲ್ಲವನ್ನು ತಿನ್ನಬಾರದು. ನೀನು ನನಗಾಗಿ ಓಡಿಬಂದು ಪ್ರೀತಿಯಿಂದ ಈ ರಾಜ್ಯವೇ ಅಯೋಧ್ಯೆಯೆಂದಿದ್ದೀಯ! ಇದರಿಂದಲೇ ನನ್ನ ಹೊಟ್ಟೆ ತುಂಬಿದೆ. ನನ್ನ ತಂದೆಗೆ ಈ ಕುದುರೆಗಳೆಂದರೆ ತುಂಬಾ ಪ್ರೀತಿ. ಅವು ನಮ್ಮನ್ನು ಇಷ್ಟು ದೂರ ಕರೆದುಕೊಂಡು ಬಂದು ದಣಿದಿವೆ. ಅವಕ್ಕೆ ಏನಾದರೂ ಕೊಡು” ಎಂದ.
ಅಂದು ಕುದುರೆಗಳು ದಣಿವಾರಿಸಿಕೊಳ್ಳುವಾಗ, ರಾಮ ಸೀತೆಯರು ಇಂಗುದಿ ಮರದ ಕೆಳಗೆ ಮಲಗಿಕೊಂಡರು. ಗುಹ ಲಕ್ಷ್ಮಣನನ್ನೂ ಮಲಗಲು ಹೇಳಿದಾಗ ಲಕ್ಷ್ಮಣ,
“ಕಥಂ ದಾಶರಥೌ ಭೂಮೌ ಶಯಾನೇ ಸಹ ಸೀತಯಾ
ಶಕ್ಯಾ ನಿದ್ರಾ ಮಯಾ ಲಬ್ಧಂ ಜೀವಿತಂ ವಾ ಸುಖಾನಿ ವಾ
ಯೋ ನ ದೇವ ಅಸುರೈಃ ಸರ್ವೈಃ ಶಕ್ಯಃ ಪ್ರಸಹಿತುಂ ಯುಧಿ
ತಂ ಪಶ್ಯ ಸುಖ ಸಂವಿಷ್ಟಂ ತೃಣೇಷು ಸಹಾ ಸೀತಯಾ
ನನಗೆ ನಿದ್ದೆ ಬರುತ್ತದೆಂದು ಹೇಗೆ ಊಹಿಸಿದೆ ಗುಹ? ರಾಮ ನೆಲದ ಮೇಲೆ ಮಲಗಿದ ಮೇಲೆ ನನ್ನ ಜೀವನಕ್ಕೆ ಇನ್ನು ಸುಖವಿಲ್ಲ. ದೇವತೆಗಳು, ರಾಕ್ಷಸರು ಕಲೆತು ಯುದ್ಧಕ್ಕೆ ಬಂದರೆ ಅವರನ್ನು ನಿಗ್ರಹಿಸುವ ಶಕ್ತಿಯಿರುವವನು ನನ್ನ ಅಣ್ಣ. ಅಂತಹವನು ಸೀತೆಯ ಜೊತೆ ಹೀಗೆ ಮಲಗಿದ್ದಾಗ ನಾನು ಹೇಗೆ ಮಲಗಲಿ” ಎಂದು ಹೇಳಿ ಮಲಗಲು ನಿರಾಕರಿಸಿದ.
ಮರುದಿನ ಗುಹ ಸಿದ್ಧಪಡಿಸಿದ ದೋಣಿಯನ್ನು ಹತ್ತಿ ಸೀತಾರಾಮಲಕ್ಷ್ಮಣರು ಗಂಗೆಯನ್ನು ದಾಟಲು ಸಿದ್ಧವಾದರು. ಆಗ ಸುಮಂತ್ರನು ರಾಮನನ್ನು ತಾನು ಏನು ಮಾಡಬೇಕೆಂದು ಕೇಳಿದಾಗ ರಾಮ, “ನೀನು ಅಯೋಧ್ಯೆಗೆ ಹಿಂತಿರುಗಿ ಮೂವರು ತಾಯಿಯರಿಗೂ ನನ್ನ ನಮಸ್ಕಾರವನ್ನು ತಿಳಿಸು. ಕೌಸಲ್ಯೆಯನ್ನು ಸದಾಕಾಲ ದಶರಥನ ಸೇವೆ ಮಾಡಲು ಹೇಳು. ಭರತನ ಕುಶಲವನ್ನು ಕೇಳಿದೆನೆಂದು ತಿಳಿಸು. ವೃದ್ಧನಾದ ಚಕ್ರವರ್ತಿಯನ್ನು ಯಾವ ಕಾರಣಕ್ಕೂ ದುಃಖ ಪಡಬೇಡವೆಂದು ಹೇಳು. ಅವರ ಮನಸ್ಸಿಗೆ ಅನುಗುಣವಾಗಿ ನಡೆದುಕೊ” ಎಂದ.
“ರಾಮಾ! ನಾನೂ ನಿಮ್ಮ ಜೊತೆಯೇ ಬಂದು ನಿಮ್ಮ ಸೇವೆ ಮಾಡುತ್ತಾ ಇದ್ದುಬಿಡುತ್ತೇನೆ. ಯಾವ ರಥದ ಮೇಲೆ ನಿಮ್ಮನ್ನು ಅರಣ್ಯಕ್ಕೆ ಕರೆದುಕೊಂಡು ಬಂದೆನೋ ಅದರ ಮೇಲೇ ಮತ್ತೆ ನಿಮ್ಮನ್ನು ೧೪ ವರ್ಷಗಳ ನಂತರ ಅಯೋಧ್ಯೆ ಕರೆದುಕೊಂಡು ಹೋಗುತ್ತೇನೆ.”
“ನೀನು ನನ್ನ ಜೊತೆ ಬಂದರೆ ಕೈಕೆಗೆ ಅನುಮಾನ ಬರುತ್ತದೆ. ರಾಮ ಅರಣ್ಯವಾಸ ಮಾಡದೆ ರಥದ ಮೇಲೆ ತಿರುಗುತ್ತಿದ್ದಾನೆಂದುಕೊಳ್ಳುತ್ತಾಳೆ. ನೀನು ಬರಿದಾದ ರಥದಲ್ಲಿ ಹಿಂದಕ್ಕೆ ಹೋಗಿ ನಾವು ಗಂಗೆಯನ್ನು ದಾಟಿ ಅರಣ್ಯಕ್ಕೆ ಹೋದೆವೆಂದು ಹೇಳಬೇಕು. ಆಗ ಅವಳು ಸಂತೋಷಿಸುತ್ತಾಳೆ” ಎಂದು ರಾಮ ಹೇಳಿದಾಗ ಸುಮಂತ್ರ ಅಯೋಧ್ಯೆಗೆ ಹೋದ.
ನಂತರ ರಾಮ ಗುಹನನ್ನು ಕರೆದು,
“ತತ್ ಕ್ಷೀರಂ ರಾಜ ಪುತ್ರಾಯ ಗುಹಾಃ ಕ್ಷಿಪ್ರಂ ಉಪಾಹರಾತ್
ಲಕ್ಷ್ಮಣಸ್ಯ ಆತ್ಮನಃ ಚೈವ ರಾಮಃ ತೇನ ಅಕರೋಜ್ ಜಟಾ
ಗುಹಾ! ಇನ್ನು ನಾನು ಒಬ್ಬ ತಪಸ್ವಿಯಂತೆ ಬದುಕಬೇಕು. ನನಗಾಗಿ ಆಲದ ಹಾಲನ್ನು ತರಿಸು” ಎಂದ. ಆ ಹಾಲನ್ನು ತನ್ನ ತಲೆಯ ಮೇಲೆ, ಲಕ್ಷ್ಮಣನ ತಲೆಯ ಮೇಲೆ ಹಾಕಿಸಿಕೊಂಡ. ಅದರ ಜಿಡ್ಡಿನಿಂದ ತನ್ನ ಕೂದಲನ್ನು ಜಟೆಯಾಗಿ ಕಟ್ಟಿಕೊಂಡ. ಅಲ್ಲಿದ್ದವರೆಲ್ಲರೂ ರಾಮನ ಧರ್ಮನಿಷ್ಠೆಗೆ ಆಶ್ಚರ್ಯಗೊಂಡರು. ರಾಮ, “ನಾನು ಈ ೧೪ ವರ್ಷಗಳ ಕಾಲ ನನ್ನ ಕ್ಷಾತ್ರ ಧರ್ಮವನ್ನು ಪಾಲಿಸುತ್ತಾ, ಬ್ರಹ್ಮಚರ್ಯದಿಂದ ಕೂಡಿದ ಅರಣ್ಯವಾಸ ಮಾಡುತ್ತೇನೆ”, ಎಂದು ಹೇಳಿ ಲಕ್ಷ್ಮಣನನ್ನು ಕರೆದು, “ಮೊದಲು ನಿನ್ನ ಅತ್ತಿಗೆಯನ್ನು ಹತ್ತಿಸಿ ನಂತರ ನೀನು ದೋಣಿಯನ್ನು ಹತ್ತು” ಎಂದು ಹೇಳಿ, ತಾನೂ ದೋಣಿ ಹತ್ತಿದ. ಸೀತಾರಾಮಲಕ್ಷ್ಮಣರು ಗಂಗೆಯನ್ನು ದಾಟಿ ಮತ್ತೊಂದು ತೀರಕ್ಕೆ ಸೇರಿದರು. ಅಲ್ಲಿಂದ ಸ್ವಲ್ಪ ದೂರ ಕ್ರಮಿಸಿ, ರಾತ್ರಿಯಾದ್ದರಿಂದ ಮರದ ಕೆಳಗೆ ವಿಶ್ರಮಿಸಿದರು. ರಾಮ ಲಕ್ಷ್ಮಣರು ಹೋಗಿ ಮೂರು ಮೃಗಗಳನ್ನು ಸಂಹರಿಸಿ ಅವನ್ನು ಅಗ್ನಿಯಲ್ಲಿ ಸುಟ್ಟು, ಆ ಮಾಂಸವನ್ನು ಮೂವರೂ ತಿಂದರು. ನಂತರ ಅಲ್ಲೇ ಇದ್ದ ಒಣ ಎಲೆಗಳ ಮೇಲೆ ನಿದ್ರಿಸಿದರು.
ಕೆಲ ಹೊತ್ತಿನ ನಂತರ ರಾಮ ಲಕ್ಷ್ಮಣನನ್ನು ಕರೆದು, "ಲಕ್ಷ್ಮಣಾ! ನನಗೆ ಒಂದು ಆಲೋಚನೆ ಬಂತು. ಭರತ ಯುವರಾಜನಾದ ಮೇಲೆ ಕೌಸಲ್ಯೆ, ಸುಮಿತ್ರೆಯರನ್ನು ಬಂಧಿಸುತ್ತಾನೆ. ಆದ್ದರಿಂದ ನೀನು ಈಗಲೇ ಅಯೋಧ್ಯೆಗೆ ಹೋಗು" ಎಂದ.
ಆ ಮಾತನ್ನು ಕೇಳಿದ ಲಕ್ಷ್ಮಣ ಹೇಳಿದ: "ಅಣ್ಣಾ! ಖಂಡಿತವಾಗಿ ಹೋಗುತ್ತೇನೆ! ಆದರೆ ಈ ಮಾತನ್ನು ನನಗೆ ಹೇಳಿದಂತೆ ನಿದ್ರಿಸುತ್ತಿರುವ ಸೀತೆಗೆ ಹೇಳುವೆಯಾ? ಸೀತೆ ನಿನ್ನನ್ನು ಬಿಟ್ಟಿರಳೆಂಬ ವಿಷಯ ನಿನಗೆ ತಿಳಿದ ಕಾರಣ ಅವಳನ್ನು ಹಿಂದಕ್ಕೆ ಹೋಗಿ ಕೌಸಲ್ಯೆ, ಸುಮಿತ್ರೆ, ದಶರಥರ ಸೇವೆ ಮಾಡು ಎಂದು ನೀನು ಹೇಳುವುದಿಲ್ಲ. ನಿನ್ನನ್ನು ಬಿಟ್ಟು ನಾನು ಇರುತ್ತೇನೆ ಎಂದು ತಿಳಿದು ನನ್ನನ್ನು ಹೋಗು ಎನ್ನುತ್ತಿದ್ದೀಯ.
ನ ಚ ಸೀತಾ ತ್ವಯಾ ಹೀನಾ ನ ಚ ಅಹಂ ಅಪಿ ರಾಘವ
ಮುಹೂರ್ತಂ ಅಪಿ ಜೀವಾವೋ ಜಲಾನ್ ಮತ್ಸ್ಯಾವ್ ಇವ ಉಧೃತೌ
ನೀರಿನಲ್ಲಿರುವ ಮೀನು ತನ್ನ ಮಗುವನ್ನು ನೀರಿನಿಂದ ಹೊರ ಹಾಕಿದರೆ ಆ ಮರಿ ಮೀನು ತನ್ನ ಮೈ ಮೇಲೆ ಒದ್ದೆಯಿರುವವರೆಗೂ ಮಾತ್ರ ಬದುಕಿರುವಂತೆ ನಾನೂ ಹಿಂದಕ್ಕೆ ಹೋಗುತ್ತಾ ನೀನು ಎಷ್ಟು ದೂರದವರೆಗೂ ಕಾಣಿಸುತ್ತೀಯೋ ಅಲ್ಲಿಯವರೆಗೂ ಇದ್ದು ನೀನು ಕಾಣಿಸದೆ ಹೋದ ತಕ್ಷಣ ನನ್ನ ಪ್ರಾಣವನ್ನು ಬಿಟ್ಟುಬಿಡುತ್ತೇನೆ."
ಆ ಮಾತನ್ನು ಕೇಳಿದ ರಾಮನಿಗೆ ತನ್ನ ತಪ್ಪಿನ ಅರಿವಾಗಿ, "ಲಕ್ಷ್ಮಣಾ! ೧೪ ವರ್ಷಗಳ ವನವಾಸದಲ್ಲಿ ನಾನು ಮತ್ತೆ ನಿನ್ನನ್ನು ಈ ಮಾತುಗಳನ್ನು ಹೇಳುವುದಿಲ್ಲ. ನೀನು ನನ್ನ ಜೊತೆಯೇ ಇರು" ಎಂದ.
ಮರುದಿನ ಸ್ವಲ್ಪ ದೂರ ಪ್ರಯಾಣಿಸಿದ ಮೇಲೆ ಅವರಿಗೆ ಒಂದು ಆಶ್ರಮ ಕಾಣಿಸಿತು. ಅದು ಭರದ್ವಾಜರ ಆಶ್ರಮ. ಆ ಆಶ್ರಮದಲ್ಲಿ ಭರದ್ವಾಜರು ತಮ್ಮ ಶಿಷ್ಯರಿಗೆ ವೇದ ಪಾಠ ಮಾಡುತ್ತಾ ಕಾಲ ಕಳೆಯುತ್ತಿದ್ದರು. ರಾಮ ಆಶ್ರಮವನ್ನು ಪ್ರವೇಶಿಸಿ ತನ್ನ ಪರಿಚಯ ಮಾಡಿಕೊಂಡು, ನಂತರ ತನ್ನ ಪತ್ನಿಯನ್ನೂ, ಸೋದರನನ್ನು ಪರಿಚಯಿಸಿ, ಭಾರದ್ವಾಜರಿಗೆ ನಮಸ್ಕರಿಸಿ, ಅವರ ಕುಶಲ ಪ್ರಶ್ನೆಗಳನ್ನು ಕೇಳಿದ. ಆ ರಾತ್ರಿ ಆಶ್ರಮದಲ್ಲಿ ಕಳೆದ ಮೇಲೆ ಮರುದಿನ ಬೆಳಿಗ್ಗೆ ಭರದ್ವಾಜರು ರಾಮನನ್ನು ೧೪ ವರ್ಷಗಳ ವನವಾಸವನ್ನು ಅವರ ಆಶ್ರಮದಲ್ಲೇ ಕಳೆಯಲು ಹೇಳಿದರು.
ಆಗ ರಾಮ, "ನಿಮ್ಮ ಆಶ್ರಮ ನಮ್ಮ ರಾಜ್ಯಕ್ಕೆ ಹತ್ತಿರದಲ್ಲಿದೆ. ನಾನು ಇಲ್ಲೇ ಇದ್ದರೆ ಅಯೋಧ್ಯೆಯ ಜನ ನನ್ನನು ನೋಡಲು ಬರುತ್ತಿರುತ್ತಾರೆ. ರಾಜ್ಯಕ್ಕೆ ಹತ್ತಿರವಿರುವೆನೆಂದು ಕೈಕೇಯಿಗೂ ಅಸಮಾಧಾನವಾಗುತ್ತದೆ. ಆದ್ದರಿಂದ ನಿರ್ಜನವಾದ ಪ್ರದೇಶಕ್ಕೆ ಹೋಗುತ್ತೇನೆ. ಯಾವುದೇ ಕ್ರೂರ ಮೃಗಗಳಿಂದ, ರಾಕ್ಷಸರಿಂದ ನಮಗೆ ತೊಂದರೆಯಾಗದಂತಹ ಪ್ರದೇಶವನ್ನು ನೀವು ನಿರ್ಣಯಿಸಿದರೆ ನಾವು ಅಲ್ಲಿ ಪರ್ಣಶಾಲೆ ನಿರ್ಮಿಸಿಕೊಂಡು ಇರುತ್ತೇವೆ" ಎನ್ನುತ್ತಾನೆ.
ಭರದ್ವಾಜರು ಹೇಳಿದರು: "ಇಲ್ಲಿಂದ ಹೊರಟು ಯಮುನಾ ನದಿ ದಾಟಿ ಮುಂದೆ ಹೋದರೆ ನಿಮಗೆ ಒಂದು ದೊಡ್ಡ ಆಲದ ಮರ ಕಾಣಿಸುತ್ತದೆ. ಅದಕ್ಕೆ ನಮಸ್ಕರಿಸಿ ಮುಂದೆ ಹೋದರೆ ನಿಮಗೆ ನೀಲವೆಂಬ ವನ ಸಿಗುತ್ತದೆ. ಅಲ್ಲಿ ಮುತ್ತುಗದ ಗಿಡಗಳು ಸಾಕಷ್ಟಿವೆ. ಅಲ್ಲಿಂದ ಇನ್ನೂ ಮುಂದೆ ಹೋದರೆ ಎಲ್ಲಿ ನೋಡಿದರೂ ನೀರು, ಮರಗಳು ಕಾಣಿಸುತ್ತದೆ. ಅಲ್ಲಿಂದ ನೋಡಿದರೆ, ಚಿತ್ರಕೂಟ ಪರ್ವತ ಶಿಖರಗಳು ಕಾಣಿಸುತ್ತವೆ. ನೀವೆಲ್ಲರೂ ಚಿತ್ರಕೂಟ ಪರ್ವತಕ್ಕೆ ಹೋಗಿ. ಅಲ್ಲಿ ವಾಲ್ಮೀಕಿಗಳ ಆಶ್ರಮವಿದೆ. ಆ ಆಶ್ರಮದ ಪಕ್ಕ ನಿಮಗೆ ಅನುಕೂಲವಾದ ಜಾಗದಲ್ಲಿ ಪರ್ಣಶಾಲೆ ನಿರ್ಮಿಸಿಕೊಳ್ಳಿ. ಅಲ್ಲಿ ಆನೆ ಕೋತಿ, ಬಂಗಾರದ ಚುಕ್ಕೆಗಳಿರುವ ಜಿಂಕೆಗಳು ತಿರುಗುತ್ತಿರುತ್ತವೆ. ನಿಮಗೆ ಬೇಕಾದ ಆಹಾರ ಸಿಗುತ್ತದೆ. ಸ್ವಚ್ಛವಾದ ನೀರು ಸಿಗುತ್ತದೆ. ಆ ಅರಣ್ಯಕ್ಕೆ ನಾನು ಹಲವು ಬಾರಿ ಹೋಗಿದ್ದೇನೆ. ಅಲ್ಲಿ ಕಾಡ್ಗಿಚ್ಚು ಹುಟ್ಟುವುದಿಲ್ಲ. ನೀವು ಅಲ್ಲಿ ಪರ್ಣಶಾಲೆ ನಿರ್ಮಿಸಿಕೊಳ್ಳಿ."
ಭರದ್ವಾಜರ ಸಲಹೆಯಂತೆ ಸೀತಾರಾಮಲಕ್ಷ್ಮಣರು ಅವರಿಗೆ ನಮಸ್ಕಾರ ಮಾಡಿ ಚಿತ್ರಕೂಟಕ್ಕೆ ಹೋದರು. ಲಕ್ಷ್ಮಣ ಒಂದು ಅನುಕೂಲಕರವಾದ ಪರ್ಣಶಾಲೆಯನ್ನು ನಿರ್ಮಿಸಿದ. ವಾಸ್ತು ಹೋಮ ಮಾಡಿ ಗೃಹಪ್ರವೇಶ ಮಾಡಿದರು. ನಂತರ ವಾಲ್ಮೀಕಿಗಳ ಆಶ್ರಮವನ್ನು ಸಂದರ್ಶಿಸಿದರು. ಅವರನ್ನು ನೋಡಿ ವಾಲ್ಮೀಕಿ ಮಹರ್ಷಿಗಳು ತುಂಬಾ ಸಂತೋಷಪಟ್ಟರು.
ಹಾಗೆ ಕೆಲವು ಕಾಲ ಸೀತಾರಾಮಲಕ್ಷ್ಮಣರು ನೆಮ್ಮದಿಯಿಂದ ಕಳೆದರು.
Comments
Post a Comment