೩೫. ದಶರಥನ ಮರಣ!
ಇತ್ತ ಸುಮಂತ್ರ ಅಯೋಧ್ಯೆಗೆ ಮರಳಿ ಬಂದು ರಾಮ ಸೀತಾ-ಲಕ್ಷ್ಮಣ ಸಹಿತನಾಗಿ ಗಂಗೆಯನ್ನು ದಾಟಿ ಅರಣ್ಯಕ್ಕೆ ಹೊರಟು ಹೋದನೆಂಬ ಸುದ್ದಿ ಮುಟ್ಟಿಸಿದ. ದಶರಥ ರಾಮ ಹೇಗಿದ್ದಾನೆಂದು ಕೇಳಿದಾಗ ಸುಮಂತ್ರ, "ರಾಮ ನಿಮಗೆ ನಮಸ್ಕಾರಗಳನ್ನು ಹೇಳಲು ತಿಳಿಸಿದ್ದಾನೆ. ಕೌಸಲ್ಯೆಯನ್ನು ಹುಷಾರಾಗಿ ನೋಡಿಕೊಳ್ಳಲು ಹೇಳಿದ್ದಾನೆ. ಕೌಸಲ್ಯೆ, ಸುಮಿತ್ರೆ, ಕೈಕೆ ಈ ಮೂವರಲ್ಲಿಯೂ ನನಗೆ ಬೇಧ ಭಾವವಿಲ್ಲ ಎಂದು ಹೇಳಿದ್ದಾನೆ. ಭರತನ ಕುಶಲವನ್ನು ಕೇಳಿದೆನೆಂದು ಹೇಳು ಎಂದಿದ್ದಾನೆ" ಎಂದ. ನಂತರ ಲಕ್ಷ್ಮಣ ಏನೆಂದನೆಂದು ಸುಮಂತ್ರನನ್ನು ದಶರಥ ಕೇಳಿದಾಗ,
"ಲಕ್ಷ್ಮಣ ದೋಣಿಯನ್ನು ಹತ್ತುತ್ತಾ, ನಮ್ಮ ತಂದೆಯವರು ಕಾಮಕ್ಕೆ ದಾಸನಾಗಿ, ಸುಗುಣಾಭಿರಾಮನನ್ನು ರಾಜ್ಯದಿಂದ ಹೊರಗೆ ಕಳಿಸಿದ್ದಾರೆ. ಆದ್ದರಿಂದ ದಶರಥನನ್ನು ನಾನು ನನ್ನ ತಂದೆಯೆಂದು ಅಂಗೀಕರಿಸುವುದಿಲ್ಲ. ಇಂದಿನಿಂದ ನನಗೆ ತಂದೆಯೇ ಇಲ್ಲ. ನನಗೆ ತಂದೆಯಾಗಲೀ, ತಾಯಿಯಾಗಲೀ, ಗುರುವಾಗಲೀ, ದೈವವಾಗಲೀ, ಅಣ್ಣನಾಗಲೀ, ತಮ್ಮನಾಗಲೀ ಯಾರಾದರೂ ರಾಮನೇ. ಈ ಮಾತನ್ನು ನಾನು ಹೇಳಿದೆನೆಂದು ದಶರಥನಿಗೆ ಹೇಳು" ಎಂದು ಲಕ್ಷ್ಮಣ ಹೇಳಿದನೆಂದು ದಶರಥನಿಗೆ ತಿಳಿಸಿದ. ಸೀತೆಯ ಮಾತನ್ನು ದಶರಥನು ಕೇಳಲು ಬಯಸಿದಾಗ ಸುಮಂತ್ರ, "ಸೀತೆ ದೋಣಿ ಹತ್ತುವಾಗ ನನ್ನ ಕಡೆಗೆ ನೋಡಿ ನಮಸ್ಕಾರ ಮಾಡಿ ಹೊರಟು ಹೋದಳು" ಎಂದ.
ಅಷ್ಟು ಕೇಳುವಷ್ಟರಲ್ಲಿ ದಶರಥ ಬಹಳ ವೇದನೆ ಅನುಭವಿಸುತ್ತಿದ್ದಾನೆಂದು ಸುಮಂತ್ರನು ಗ್ರಹಿಸಿ ರಾಜನನ್ನು ಸಮಾಧಾನ ಪಡಿಸಲು ಸುಮಂತ್ರ ಮಾತು ಬದಲಿಸಿದ. "ಅವರೆಲ್ಲಾ ಬಹಳ ಸಂತೋಷದಿಂದಿದ್ದಾರೆ. ರಾಮನೊಂದಿಗೆ ಸೀತೆ ನಡೆಯುತ್ತಾ, ಅ ವನಗಳನ್ನು, ಉಪವನಗಳನ್ನು ನೋಡಿ ಆನಂದ ಪಡುತ್ತಿದ್ದಳು. ಸೀತೆ ಅರಣ್ಯದಲ್ಲಿ ನಡೆದು ಹೋಗುತ್ತಿದ್ದರೆ, ಹಂಸಗಳು ಕೂಡ ಆಕೆಯಂತೆ ನಡೆಯಲು ಪ್ರಯತ್ನಿಸಿದವು. (ಅಲ್ಲಿಯವರೆಗೂ ತಮ್ಮ ನಡಿಗೆಯನ್ನು ನೋಡಿ ಎಲ್ಲರೂ ಹಂಸ ನಡಿಗೆ ಅನುತ್ತಿದ್ದಾಗ ಅವು ಆನಂದ ಪಡುತ್ತಿದ್ದವು. ಆದರೆ ಸೀತಮ್ಮ ಅರಣ್ಯಕ್ಕೆ ಬಂದ ಮೇಲೆ ಆ ಹಂಸಗಳೆಲ್ಲ ನಡಿಯುದನ್ನು ಬಿಟ್ಟು ಒಂದು ಮೂಲೆಯಲ್ಲಿ ಕುಳಿತಿದ್ದವಂತೆ. ಯಾರಾದರು ಕೇಳಿದರೆ ನಮಗಿಂತಲೂ ಅಂದವಾಗಿ ನಡೆಯುವ ಒಬ್ಬಾಕೆ ಹೊಸದಾಗಿ ಅರಣ್ಯಕ್ಕೆ ಬಂದಿದ್ದಾಳೆ, ಆಕೆಯ ನಡಿಗೆಯ ಮುಂದೆ ನಮ್ಮ ನಡಿಗೆ ಸಾಟಿಯೇ? ಎನ್ನುತ್ತಿದ್ದವಂತೆ)"
ಸುಮಂತ್ರನ ಮಾತು ಕೇಳಿ ಕೌಸಲ್ಯೆ ದಶರಥನಿಗೆ, ”ಒಬ್ಬ ಸ್ತ್ರೀ ಪತಿಯಿಂದ, ಮಗನಿಂದ, ಜ್ಞಾತಿಗಳಿಂದ ರಕ್ಷಿಸಲ್ಪಡ ಬೇಕು. ಪತಿಯಾದ ನೀನು ನನಗೆ ರಕ್ಷಣೆ ನೀಡಲಿಲ್ಲ. ನನಗಿದ್ದ ಒಬ್ಬನೇ ಮಗನನ್ನು ನನ್ನಿಂದ ದೂರ ಮಾಡಿದೆ. ನನಗೆ ಬಂಧುಗಳು ಯಾರೂ ಹತ್ತಿರವಿಲ್ಲ. ನೀನು ಮಾಡಿದ ಈ ಕೆಲಸದಿಂದ ನಾನು ಮಗನಿಂದ ದೂರವಾಗಿದ್ದೇನೆ. ನಾನು ದಿಕ್ಕಿಲದ ಸಾವನ್ನು ಪಡೆಯುತ್ತೇನೆ ಅಥವಾ ರಾಮನ ಬಳಿಗೆ ಹೊರಟು ಹೋಗುತ್ತೇನೆ. ಇನ್ನು ಮುಂದೆ ನಿನ್ನ ಮುಖವನ್ನು ನಾನು ನೋಡುವುದಿಲ್ಲ, ನಿನ್ನೊಂದಿಗೂ ಇರುವುದಿಲ್ಲ" ಎಂದಳು.
ಕೌಸಲ್ಯೆಯ ಮಾತಿಗೆ ದಶರಥನು ಬಹಳ ಕುಗ್ಗಿ ಹೇಳಿದ: "ನಾನು ದೌರ್ಭಾಗ್ಯ ಕೌಸಲ್ಯಾ! ಯಾವ ಕೆಲಸಕ್ಕೂ ಬಾರದವನು. ದೀನನು. ನಾನು ಧರ್ಮಾತ್ಮನೆಂದಾಗಲೀ, ನಿಮ್ಮನ್ನು ಒಂದು ದಿನವಾದರೂ ಸರಿಯಾಗಿ ನೋಡಿದ್ದೇನೆಂದಾಗಲೀ ಹೇಳುವುದಿಲ್ಲ. ನನ್ನ ಕಣ್ಣಿಗೆ ನಿದ್ದೆ ಬರುತ್ತಿಲ್ಲ. ಸರಿಯಾಗಿ ಊಟ ಸೇರುತ್ತಿಲ್ಲ. ನನ್ನನ್ನು ಸಮಾಧಾನ ಮಾಡುವವರು ಯಾರೂ ಇಲ್ಲ. ನನಗೆ ದಿಕ್ಕು ತೋಚದಂತಾಗಿದೆ. ನೀನು ನನಗೆ ಸಮಾಧಾನ ಮಾಡುತ್ತೀಯೆಂದು ನಿನ್ನ ಬಳಿ ಬಂದಿದ್ದೇನೆ. ಸಾತ್ವಿಕವಾದ ಪ್ರವರ್ತನೆಯುಳ್ಳ ನೀನೂ ಹೀಗೆ ಹೇಳಿದರೆ ನಾನು ಈ ಕ್ಷಣವೇ ಪ್ರಾಣ ಬಿಡುತ್ತೇನೆ. ನೀನಾದರೂ ಹೀಗೆ ಮಾತನಾಡುವುದನ್ನು ಬಿಡು. ನಿನ್ನ ಕಾಲಿಗೆ ಮುಗಿಯುತ್ತೇನೆ.”
ನ ಏಷಾ ಹಿ ನಾ ಸ್ತ್ರೀ ಭವತಿ ಶ್ಲಾಘನೀಯೇನ ಧೀಮತಾ |
ಉಭಯೇಃ ಲೋಕಯೇಃ ವೀರ ಪತ್ಯಾ ಯಾ ಸಂಪ್ರಸಾದ್ಯತೇ ||
ಕೌಸಲ್ಯೆ ಓಡುತ್ತಾ ಬಂದು ದಶರಥನ ಪಾದದ ಬಳಿ ಕುಳಿತು ಅವನ ಎರಡು ಕೈಗಳನ್ನೂ ತನ್ನ ತಲೆಯ ಮೇಲೆ ಇಟ್ಟುಕೊಂಡು, "ಧರ್ಮಾತ್ಮನಾದ ಪತಿಯೇ ಪತ್ನಿಯ ಬಳಿ ಹೀಗೆ ಎರಡು ಕೈಯೆತ್ತಿ ಬೇಡುತ್ತಿದ್ದಾನೆಂದರೆ, ಆ ಸ್ತ್ರೀ ಜೀವನದಲ್ಲಿ ಅದಕ್ಕಿಂತ ದುರ್ದಿನ ಮತ್ತೊಂದಿಲ್ಲ. ಮಗ ಹೊರಟು ಹೋದನೆಂಬ ಆಕ್ರೋಶದಿಂದ ಹಾಗೆ ಮಾತನಾಡಿದೆ. ನನ್ನನ್ನು ಕ್ಷಮಿಸು" ಎಂದು ಹೇಳಿ ದಶರಥನನ್ನು ಕರೆದು ಕೊಂಡು ಹೋಗಿ ಮಂಚದ ಮೇಲೆ ಮಲಗಿಸಿದಳು. ದಶರಥ ಕೌಸಲ್ಯಾ, ಕೌಸಲ್ಯಾ ಎಂದು ಕನವರಿಸುತ್ತಿದ್ದ. ಕೌಸಲ್ಯೆ ಮತ್ತು ಸುಮಿತ್ರೆ ಇಬ್ಬರೂ ಬಂದು ಮಂಚದ ಬದಿಯಲ್ಲಿ ಕುಳಿತುಕೊಂಡರು.
ದಶರಥನು ಪೂರ್ವದಲ್ಲಿ ತಾನು ಮಾಡಿದ ಒಂದು ಪಾಪವನ್ನು ನೆನಸಿಕೊಂಡು ಕೌಸಲ್ಯೆ, ಸುಮಿತ್ರೆಯರಿಗೆ ಆ ವೃತ್ತಾಂತವನ್ನು ಹೇಳಿದ: "ನಾನೇಕೆ ಇಷ್ಟು ನೋವು ಅನುಭವಿಸುತ್ತಿದ್ದೀನೆಂದು ನನಗೆ ಈಗ ಅರ್ಥವಾಗುತ್ತಿದೆ. ನಿಮಗೊಂದು ವಿಷಯವನ್ನು ಹೇಳುತ್ತೇನೆ ಕೇಳಿ. ನಾನು ಯೌವನದಲ್ಲಿರುವಾಗ ಒಂದು ಬಾರಿ ಬೇಟೆಯಾಡಬೇಕೆನಿಸಿತು. ಆಗ ಚೆನ್ನಾಗಿ ಮಳೆ ಬಿದ್ದು ಭೂಮಿಯೆಲ್ಲ ಒದ್ದೆಯಾಗಿತ್ತು. ಕಾಡಿಗೆ ಹೋದೆ. ಕ್ರೂರ ಮೃಗಗಳು ಖಚಿತವಾಗಿ ನೀರು ಕುಡಿಯಲು ಹೊರಗೆ ಬರುತ್ತಾವೆಂದುಕೊಂಡು ಆ ರಾತ್ರಿಯೆಲ್ಲಾ ಧನಸ್ಸಿಗೆ ಬಾಣವನ್ನು ಸಂಧಿಸಿ ಕಾದೆ. ಬೆಳಗಾಗುವವರೆಗೆ ಯಾವ ಪ್ರಾಣಿಯೂ ನನ್ನ ಕಣ್ಣಿಗೆ ಬೀಳಲಿಲ್ಲ. ಬೆಳಗಿನ ಜಾವಕ್ಕೆ ನನಗೆ ಗುಳು-ಗುಳು ಶಬ್ದ ಕೇಳಿಸಿತು. ಆಗಿನ್ನೂ ಕತ್ತಲೇ ಇತ್ತು. ಒಂದು ಆನೆ ತನ್ನ ಸೊಂಡಲಿನಿಂದ ನೀರು ಕುಡಿಯುತ್ತಿದೆ ಎಂದು ಗ್ರಹಿಸಿದೆ. ನನಗೆ ಶಬ್ದವೇಧಿ ವಿದ್ಯೆ ಗೊತ್ತು. ಶಬ್ದವನ್ನು ಹಿಡಿದು ಆನೆಯ ಕುಂಭ ಸ್ಥಳಕ್ಕೆ ಬಾಣ ಪ್ರಯೋಗ ಮಾಡಬೇಕೆಂದು, ಕತ್ತಲಲ್ಲಿಯೇ ಬಾಣವನ್ನು ಪ್ರಯೊಗ ಮಾಡಿದೆ. ಆನೆಯು ಘೀಳಿಡುವುದು ಕೇಳಿಸುತ್ತದೆಯೆಂದುಕೊಂಡೆ ಆದರೆ ನನಗೆ ಒಬ್ಬ ಮನುಷ್ಯನ ಆರ್ತನದ ಕೇಳಿಬಂತು. ನಾನು ಭಯದಿಂದ ಅಲ್ಲಿ ಹೋಗಿ ನೋಡಿದರೆ, ನಾನು ಬಿಟ್ಟ ಬಾಣ ಒಬ್ಬ ಮುನಿ ಕುಮಾರನ ಎದೆಗೆ ಚುಚ್ಚಿ ಆತನು ನದಿ ದಡದಲ್ಲಿ ಬಿದ್ದು ಒದ್ದಾಡುತ್ತಿದ್ದ! ’ನಾನು ಋಷಿ ಕುಮಾರ. ನಾನು ತಪಸ್ಸು ಮಾಡಿಕೊಂಡು ತಂದೆತಾಯಿಯರನ್ನು ಪೋಷಿಸಿಕೊಂಡಿದ್ದೆ. ನನ್ನ ಮೇಲೆ ನಿಷ್ಕಾರಣವಾಗಿ ಬಾಣ ಏಕೆ ಬಿಟ್ಟೆ?’ ಎಂದು ಕೇಳಿದ. ನಾನು ’ನಿನ್ನನ್ನು ಉದ್ದೇಶ ಪೂರ್ವಕವಾಗಿ ಬಾಣದಿಂದ ಹೊಡೆಯಲಿಲ್ಲ, ನೀರು ಕುಡಿಯುವ ಶಬ್ದ ಕೇಳಿ ಆನೆಯೆಂದು ಕೊಂಡು ಬಾಣ ಪ್ರಯೋಗ ಮಾಡಿದೆ. ನನ್ನ ದುರಾದೃಷ್ಟಕ್ಕೆ ಆ ಬಾಣ ನಿನಗೆ ತಗಲಿದೆ’ ಎಂದೆ.
ಮುನಿ ಕುಮಾರ ನನ್ನನ್ನು ನೋಡಿ, ’ನೀನು ಭಯ ಪಡಬೇಡ. ನಿನಗೆ ಬ್ರಹ್ಮ ಹತ್ಯಾ ದೋಷವಿಲ್ಲ. ನನ್ನ ತಂದೆ ವೈಶ್ಯ. ನನ್ನ ತಾಯಿ ಶೂದ್ರ ಸ್ತ್ರೀ. ಆದ್ದರಿಂದ ಶಪಿಸುವ ಅಧಿಕಾರ ನನಗಿಲ್ಲ. ಆದರೆ ನನ್ನ ತಂದೆ ತಾಯಿ ಇಬ್ಬರೂ ಅಂಧರು, ಅರಣ್ಯದಲ್ಲಿ ಬಾಯಾರಿಕೆಯಿಂದ ಕೂತಿದ್ದಾರೆ. ನಾನು ಗ್ರಂಥ ಪಠಣವನ್ನು ಮಾಡಿದರೆ ಪ್ರತಿದಿನಾ ಕೇಳುತ್ತಾರೆ. ನಾನೇ ಅವರಿಗೆ ಆಹಾರ, ನೀರು ತಂದು ಕೊಡುವವನು. ಅವರಿಗಾಗಿ ನೀರು ತರಲು ಇಲ್ಲಿಗೆ ಬಂದೆ. ನೀನು ನೀರನ್ನು ತೆಗೆದುಕೊಂಡು ಹೋಗಿ ಅವರಿಗೆ ಕೊಡು. ಈ ಬಾಣ ಬಹಳ ಚೂಪಾಗಿರುವುದರಿಂದ ನಾನು ನೋವನ್ನು ತಡೆಯಲಾರೆ. ನೀನು ಈ ಬಾಣವನ್ನು ತೆಗೆದು ಬಿಡು’ ಎಂದ. ಅವನ ನೋವು ನೋಡಲಾರದೆ ಆ ಬಾಣವನ್ನು ತೆಗೆದು ಹಾಕಿದೆ. ಆ ಹುಡುಗ ತಕ್ಷಣ ಸತ್ತುಹೋದ. ನಾನು ಆ ನೀರಿನ ಬಿಂದಿಗೆಯನ್ನು ತೆಗೆದುಕೊಂಡು ಅವನ ತಂದೆ ತಾಯಿಯ ಬಳಿ ಹೋದೆ. ನನ್ನ ಹೆಜ್ಜೆ ಸಪ್ಪಳ ಕೇಳಿ ಅಂಧರಾದ ಅವರು, ’ಮಗು ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೆ? ನಿನಗಾಗಿ ನಿನ್ನ ತಾಯಿ ಗಾಬರಿಯಾಗಿದ್ದಳು’ ಎಂದು ಮುನಿ ಕುಮಾರನ ತಂದೆ ಕೇಳಿದಾಗ ನಾನು ನಡೆದದ್ದನ್ನೆಲ್ಲಾ ಹೇಳಿದೆ. ಆ ಮುನಿಯು ತನ್ನ ಕುಮಾರನ ಕಳೇಬರವನ್ನು ತೋರಿಸು ಎಂದು ಕೇಳಿದ. ನಾನು ಅವರನ್ನು ಅಲ್ಲಿಗೆ ಕರೆದುಕೊಂಡು ಹೋದಾಗ ತಮ್ಮ ಕುಮಾರನ ಶವದ ಮೇಲೆ ಬಿದ್ದು ಇಬ್ಬರೂ ರೋದಿಸಿದರು. ಆ ತಂದೆಯು ನನ್ನೆಡೆ ತಿರುಗಿ, ‘ನಾನು ಹೇಗೆ ಈಗ ನನ್ನ ಕುಮಾರನ ಮೇಲೆ ಬಿದ್ದು ಹಾ! ಕುಮಾರ ಹಾ ಕುಮಾರ! ಎಂದು ಪುತ್ರ ಶೋಕದಿಂದ ಪ್ರಾಣ ಬಿಡುತ್ತಿದ್ದೇನೋ ನೀನೂ ಹಾಗೆಯೇ ಪುತ್ರಶೋಕದಿಂದ ಅಳುತ್ತಾ ಪ್ರಾಣ ಬಿಡುತ್ತೀಯಾ’ ಎಂದು ಶಪಿಸಿದ. ಅಷ್ಟರಲ್ಲಿ ಸ್ವರ್ಗದಿಂದ ಇಂದ್ರನು ಬಂದು, ‘ನೀನು ತಂದೆ ತಾಯಿಗೆ ಮಾಡಿದ ಸೇವೆಗೆ ನಿನ್ನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತೇನೆಂದು’ ಆ ಮುನಿ ಕುಮಾರನನ್ನು ತನ್ನ ರಥದಲ್ಲಿ ಕರೆದು ಕೊಂಡು ಹೋದ. ಮಗನನ್ನು ಅಗಲಿ ಇರಲಾರದೆ ಆ ವೃದ್ಧ ದಂಪತಿಯೂ ಪ್ರಾಣ ಬಿಟ್ಟರು.
ಕೌಸಲ್ಯೆ! ’ಹಾ ಕುಮಾರ ಎನ್ನುತ್ತಾ ಮರಣಿಸುವುದು ಎಷ್ಟು ಕಷ್ಟವೆಂದು ನನಗೆ ಆಗ ತಿಳಿಯಲಿಲ್ಲ. ನಾನು ಮಾಡಿದ ಪಾಪವೇ ನನ್ನ ಬೆನ್ನುಹತ್ತಿದೆ. ನನಗೇಕೋ ಕಣ್ಣು ಕೂಡ ಕಾಣಿಸುತ್ತಿಲ್ಲ. ನನ್ನ ಜ್ಞಾಪಕ ಶಕ್ತಿ ಕೂಡ ಕಡಿಮೆಯಾಗುತ್ತಿದೆ. ಎಲ್ಲಾ ಒಂದು ಭ್ರಾಂತಿಯಂತಿದೆ. ಯಾರೋ ದೂತರು ಬಂದು ನನ್ನ ಪ್ರಾಣವನ್ನು ಎಳೆಯುತ್ತಿದ್ದಾರೆ. ರಾಮನನ್ನು ನೋಡುವ ಅದೃಷ್ಟ ನನಗಿಲ್ಲ. ನಾನು ಯಾವ ತಪ್ಪೂ ಮಾಡಿಲ್ಲ. ನನ್ನನ್ನು ಕ್ಷಮಿಸು. ಕೌಸಲ್ಯಾ….. ಸುಮಿತ್ರಾ….. ರಾಮ.....ರಾಮಾ …..”. ಮಾತಿನ ನಡವೆಯೇ ದಶರಥ ಮಹಾರಾಜನ ಪ್ರಾಣಪಕ್ಷಿ ಹಾರಿಹೋಗಿತ್ತು!
ಆದರೆ ಕೌಸಲ್ಯಾ ಮತ್ತು ಸುಮಿತ್ರಯರು ದಶರಥ ಮೂರ್ಛೆ ಹೋಗಿದ್ದಾನೆಂದುಕೊಂಡು ಅಲ್ಲಿಯೇ ಮಲಗಿ ನಿದ್ರಿಸಿದರು. ಮರುದಿನ ಬೆಳಿಗ್ಗೆ ವಂದಿ ಮಾಗಧರು ಬಂದು ಸ್ತ್ರೋತ್ರ ಮಾಡಿದರು. ಮಹಾರಾಜ ಎಷ್ಟು ಹೊತ್ತಾದರೂ ಏಳದಿರುವುದನ್ನು ನೋಡಿ ಅಲ್ಲಿಯೇ ಇದ್ದ ಕೌಸಲ್ಯೆಯನ್ನು ಕೇಳಿದರು. ಕೌಸಲ್ಯೆಯು ಪರದೆಯನ್ನು ಸರಿಸಿ ಒಳಗೆ ಬಂದು ನೋಡಿದಾಗ ದಶರಥ ತನ್ನ ಪ್ರಾಣ ತ್ಯಜಿಸಿದ್ದ!
Comments
Post a Comment