೩೬. ಅಯೋಧ್ಯೆಗೆ ಭರತ

ದಶರಥನ ಮರಣದ ಸುದ್ದಿ ಕೇಳಿ ಅವನ ಪತ್ನಿಯರೆಲ್ಲರೂ ಅಂತಃಪುರದಲ್ಲಿ ಕ್ರೌಂಚ ಪಕ್ಷಿಗಳಂತೆ ಬಿದ್ದು ಬಿದ್ದು ಅತ್ತರು. ಕೌಸಲ್ಯೆಯ ದುಃಖಕ್ಕೆ ಅಂತ್ಯವೇ ಇರಲಿಲ್ಲ. ದಶರಥನಿಗೆ ನಾಲ್ಕು ಮಕ್ಕಳಿದ್ದರೂ ಈಗ ಸಂಸ್ಕಾರ ಮಾಡಲು ಒಬ್ಬನೂ ಇಲ್ಲ!

ವಸಿಷ್ಠರ ಸಲಹೆಯಂತೆ ದಶರಥನ ಪಾರ್ಥಿವ ಶರೀರವನ್ನು ತೈಲ ದ್ರೋಣಿಯಲ್ಲಿ (ಇದು ಒಂದು ಶರೀರವನ್ನು ಕೆಡದಂತೆ ಕಾಪಾಡುವ ವಿಧಾನ) ಇಟ್ಟರು. ರಾತ್ರಿ ಕಳೆದ ನಂತರ ಮರುದಿನ ಬೆಳಿಗ್ಗೆ ಮಹರ್ಷಿಗಳೆಲ್ಲಾ ಸಭೆ ಸೇರಿದರು.
ಮಾರ್ಕಾಂಡೇಯಾ ಅಥ ಮೌದ್ಗಲ್ಯೋ ವಾಮದೇವಃ ಕಾಶ್ಯಪಃ |
ಕಾತ್ಯಯನೋ ಗೌತಮಃ ಜಾಬಾಲಿಃ ಮಹಾ ಯಶಾಃ ||
ಏತೇ ದ್ವಿಜಾಃ ಸಹ ಅಮಾತ್ತ್ಯೇಃ ಪೃಥಗ್ ವಾಚಂ ಉದಿರಯನ್ |
ವಸಿಷ್ಠಂ ಏವ ಅಭಿಮುಖಾಃ ಶ್ರೇಷ್ಠಃ ರಾಜ ಪುರೋಹಿತಂ ||
ಸಭೆಯಲ್ಲಿ ಮಾರ್ಕಾಂಡೇಯ, ಮೌದ್ಗಲ್ಯ, ವಾಮದೇವ, ಕಾಶ್ಯಪ, ಕಾತ್ಯಾಯನ, ಗೌತಮ, ಜಾಬಾಲಿ ಮೊದಲಾದ ಮಹರ್ಷಿಗಳು ಉಪಸ್ಥಿತರಿದ್ದರು. ಮಹರ್ಷಿಗಳೆಲ್ಲರೂ ಸೇರಿ ವಸಿಷ್ಠರಿಗೆ ಹೇಳಿದರು: "ಮಹಾನುಭಾವ! ಒಂದು ರಾತ್ರಿ ರಾಜನಿಲ್ಲದಿದ್ದರೆ ಒಂದು ನೂರು ಸಂವತ್ಸರಗಳು ಕಳೆದಂತಿದೆ. ರಾಜನಿಲ್ಲದೆ ರಾಜ್ಯವಿರಕೂಡದು. ರಾಜನಿಲ್ಲದ ರಾಜ್ಯದ ಮೇಲೆ ಶತೃಗಳ ದೃಷ್ಟಿ ಬೀಳುತ್ತದೆ. ಮಳೆ ಬೆಳೆ ಆಗುವುದಿಲ್ಲ. ರಾಜ್ಯದಲ್ಲಿನ ಯಾವ ಕುಟುಂಬದಲ್ಲಿಯೂ ಪತಿಯ ಮಾತನ್ನು ಪತ್ನಿ ಕೇಳುವುದಿಲ್ಲ. ಯಜ್ಞ-ಯಾಗಾದಿಗಳು ನಡೆಯುವುದಿಲ್ಲ. ಒಂದು ವೇಳೆ ನಡೆದರೂ ಯಾರೂ ದಕ್ಷಿಣೆ ನೀಡುವುದಿಲ್ಲ. ಪುರಾಣ, ಕಾವ್ಯ ಮೊದಲಾದುವುಗಳಲ್ಲಿನ ವಿಚಾರಗಳನ್ನು ಜನಗಳಿಗೆ ವಿವರಿಸಲು ಪಂಡಿತರಾರೂ ಮುಂದೆ ಬರುವುದಿಲ್ಲ. ಯುಕ್ತ ವಯಸ್ಸಿನಲ್ಲಿರುವಂಥ ಕನ್ಯೆಯರು ಆಭರಣಗಳನ್ನು ಧರಿಸಿ ಸಾಯಂಕಾಲದಲ್ಲಿ ಉದ್ಯಾನವನಕ್ಕೆ ಹೋಗಿ ಹೂ ಬಿಡಿಸತ್ತಾ ಆನಂದವಾಗಿ ಕೂತು ಮಾತನಾಡುವಂಥ ಪರಿಸ್ಥಿತಿ ಇರುವುದಿಲ್ಲ. ಹೆಣ್ಣು ಮಕ್ಕಳನ್ನು ಕಂಡೊಡನೆ ಅವರನ್ನು ವಧಿಸಿ ಕಿತ್ತು ತಿನ್ನುವಂತಹ, ಮನುಷ್ಯ ರೂಪದ ಯೌವನದಲ್ಲಿರುವ ಮೃಗಗಳು ಎಲ್ಲೆಲ್ಲೂ ಕಾಣುತ್ತವೆ. ತಪಸ್ಸು ಮಾಡಿಕೊಂಡಿರುವ ಋಷಿಗಳು ಹೊಟ್ಟೆ ತುಂಬಿಸಿಕೊಳ್ಳಲು ಗ್ರಾಮಗಳಿಗೆ ಬರುವುದಿಲ್ಲ. ವರ್ತಕರು ತಮ್ಮ ಸಂಪಾದನೆಯನ್ನು ಅಡಗಿಸಿಟ್ಟಿದ್ದರೂ ಬೇಡುತ್ತಾ ಬದುಕುವಂಥ ದಿನಗಳು ಬರುತ್ತವೆ. ಇದು ನನ್ನ ಭೂಮಿ, ಇದು ನನ್ನ ಪರಿಧಿ ಎಂದು ಹೇಳುವವರು ಇರುವುದಿಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಪ್ರಜೆಗಳಲ್ಲಿ ನಿಸ್ಪೃಹ, ನಿರಾಶೆಗಳು ಮನೆ ಮಾಡುತ್ತವೆ.
ರಾಜಾ ಸತ್ಯಂ ಧರ್ಮಶ್ಚ ರಾಜಾ ಕುಲವತಾಂ ಕುಲಂ |
ರಾಜಾ ಮಾತಾ ಪಿತಾ ಚೈವ ರಾಜಾ ಹಿತಕರೋ ನೃಣಾಂ ||
ರಾಜನೇ ಸತ್ಯ. ರಾಜನೇ ಧರ್ಮ. ರಾಜನೇ ತಾಯಿ. ರಾಜನೇ ತಂದೆ. ರಾಜನೇ ದೈವ. ರಾಜನೇ ಸಮಸ್ತ. ಸಿಂಹಾಸನವು ಖಾಲಿ ಇರಲು ಸಾಧ್ಯವಿಲ್ಲ. ಯಮ ಪ್ರಾಣ ತೆಗೆಯುತ್ತಾನೆ, ವಾಯು ಗಾಳಿ ಬೀಸುವಂತೆ ಮಾಡುತ್ತಾನೆ, ವರುಣ ಮಳೆಗರೆಯುತ್ತಾನೆ. ಆದರೆ ಅಷ್ಟ ದಿಕ್ಪಾಲಕರ ಸಮಸ್ತ ವಿಧಿಗಳನ್ನು ರಾಜನೇ ನಿರ್ವಹಿಸುತ್ತಾನೆ. ಪ್ರಜೆಗಳು ಸಂತೋಷವಾಗಿ ಅನ್ನವನ್ನು ತಿಂದು ಬದುಕಿ ಬಾಳುತ್ತಾ ಅವರವರ ಕರ್ತವ್ಯವನ್ನು ನಿರ್ವಹಿಸುವಂತೆ ರಾಜ ಮಾಡಬಲ್ಲ. ನಾವು ಶೀಘ್ರವಾಗಿ ಇಕ್ಷ್ವಾಕುವಂಶದಲ್ಲಿ ಹುಟ್ಟಿದವನಿಗೆ ಪಟ್ಟಾಭಿಷೇಕ ಮಾಡಬೇಕಾಗಿದೆ".

ವಸಿಷ್ಠರು,ಇದರ ಬಗ್ಗೆ ನಾನಾಗಲಿ ನೀವಾಗಲೀ ಅಲೋಚಿಸುವಂತಹ ಅಗತ್ಯವಿಲ್ಲ. ದಶರಥ ದೇಹ ತ್ಯಜಿಸುವ ಮೊದಲು ಭರತನಿಗೆ ರಾಜ್ಯ ದಕ್ಕಬೇಕೆಂದು ಒಂದು ನಿರ್ಣಯವನ್ನು ಮಾಡಿ ಹೋಗಿದ್ದಾನೆ. ಭರತನನ್ನು ಕರೆಸಿ, ಸಿಂಹಾಸನದ ಮೇಲೆ ಕೂರಿಸಿ ಪಟ್ಟಾಭಿಷೇಕ ಮಾಡಬೇಕು. ಆದರೆ ಭರತನು ತನ್ನ ತಾತನವರಾದ ಕೈಕೆಯ ರಾಜನ ಹತ್ತಿರ ಇದ್ದಾನೆ. ರಾಜ್ಯ ಇಲ್ಲಿಂದ ಬಹಳ ದೂರವಿರುವುದರಿಂದ, ಬಹಳ ವೇಗವಾಗಿ ಅಶ್ವಗಳ ಮೇಲೆ ಹೋಗುವಂಥ ದೂತರನ್ನು ಕಳಿಸೋಣ" ಎಂದರು.

ವಸಿಷ್ಠರು ಸಿದ್ಧಾರ್ಥ, ಜಯಂತ, ವಿಜಯ, ಅಶೋಕ ಎನ್ನುವ ನಾಲ್ಕು ದೂತರನ್ನು ಕೈಕೆಯ ರಾಜ್ಯಕ್ಕೆ ಹೊರಡಲು ಸಿದ್ಧಮಾಡಿದರು. ಕೈಕೆಯ ರಾಜನಿಗೆ ವಿಶೇಷವಾದ ಬಹುಮಾನವನ್ನು ಕಳಿಸಿದರು. ಆದರೆ ಅಲ್ಲಿ ರಾಮನು ಅರಣ್ಯಕ್ಕೆ ಹೋದ ವಿಷಯವಾಗಲೀ, ದಶರಥ ಮಹಾರಾಜ ಮರಣಿಸಿದ ವಿಷಯವಾಗಲೀ ಯಾರಿಗೂ ತಿಳಿಸಬಾರದೆಂದೂ, ಭರತನಿಗೆ ಕುಶಲವನ್ನು ವಿಚಾರಿಸಿದಂತೆ ಹೇಳಿ, ತಕ್ಷಣವೇ ಅಯೋಧ್ಯೆ ಸೇರಬೇಕೆಂದು ಆಜ್ಞೆಯಿರುವುದೆಂದೂ ಹೇಳಿ ಅವನನ್ನು ಕರೆದುಕೊಂಡು ಬರಬೇಕೆಂದು ದೂತರಿಗೆ ಆಜ್ಞೆಯಾಯಿತು. 

ದೂತರು ಮಾರ್ಗ ಮಧ್ಯದಲ್ಲಿ ತಿನ್ನಲು ಆಹಾರವನ್ನು ಸಿದ್ದಮಾಡಿಕೊಂಡು ಹೊರಟರು. ಅವರಿಗೆ ರಾಜಭಕ್ತಿ ಇದ್ದುದರಿಂದ ದಾರಿಯಲ್ಲಿ ಕಣ್ಣಿಗೆ ಆನಂದ ಕೊಡುವ ವಿಷಯಗಳು ಕಾಣಿಸಿದರೂ ಎಲ್ಲೂ ನಿಲ್ಲದಂತೆ ಮುಂದೆ ಹೋದರು. ಹಾಗೆ ಅವರು ಅಯೋಧ್ಯೆಯಿಂದ ಪಶ್ಚಿಮಕ್ಕೆ ಹೊರಟು ಅಪ್ರಾತಲ ಎನ್ನುವ ಪರ್ವತವನ್ನು ದಾಟಿ, ಮಾಲಿನಿ ನದಿ ತೀರದಲ್ಲಿ ಪ್ರಯಾಣಿಸುತ್ತಾ, ಪ್ರಲಂಬ ಪರ್ವತದ ಉತ್ತರದಿಕ್ಕಿಗೆ ತಿರುಗಿ, ಅಲ್ಲಿಂದ ಪಶ್ಚಿಮಾಭಿ ಮುಖವಾಗಿ ಪಯಣಿಸಿ, ಹಸ್ತಿನಾನಗರವನ್ನು ಸಮೀಪಿಸಿದರು. ಅಲ್ಲಿ ಪ್ರವಹಿಸುತ್ತಿದ್ದ ಗಂಗೆಯನ್ನು ದಾಟಿ, ಮತ್ತೆ ಪಶ್ಚಿಮಾಭಿ ಮುಖವಾಗಿ ತಿರುಗಿ, ಅಲ್ಲಿಂದ ಕುರು ದೇಶದ ಜಾಜ್ಗಲ ಎನ್ನುವ ಗ್ರಾಮವನ್ನು ಪ್ರವೇಶಿಸಿದರು. ಅಲ್ಲಿಂದ ಪಾಂಚಾಲ ರಾಜ್ಯವನ್ನು ಸೇರಿ, ಶರದಂಡವೆನ್ನುವ ನದಿಯನ್ನು ದಾಟಿ, ಪಶ್ಚಿಮಾಭಿಮುಖವಾಗಿ ಪ್ರಯಾಣ ಮಾಡಿ ನಿಕೂಲವೃಕ್ಷವೆಂಬ ಕಡೆ ಬಂದರು. ಅಲ್ಲಿಂದ ಕುಲಿಂಗ ಪಟ್ಟಣವನ್ನು, ಅಭಿಕಾಲಂ ಎನ್ನುವ ಗ್ರಾಮವನ್ನು ಸೇರಿ, ನಂತರ ಇಕ್ಷುಮತಿ ನದಿಯನ್ನು ದಾಟಿ, ಬಾಹ್ಲಿಕ ದೇಶಕ್ಕೆ ಬಂದರು. ಮಧ್ಯದಲ್ಲಿ ಸುಧಾಮ ಎನ್ನುವ ವಿಷ್ಣುಪದವನ್ನು, ಅಲ್ಲಿಂದ ವಿಪಾಶ ನದಿಯನ್ನು ದಾಟಿ, ಶಾಲ್ಮಲೀ ವೃಕ್ಷವೆನ್ನುವ ದೊಡ್ದ ಪ್ರಾಂತವನ್ನು ಸೇರುತ್ತಾರೆ. ಮತ್ತೆ ಅಲ್ಲಿಂದ ಹೊರಟು ರಾತ್ರಿಗೆ ಗಿರಿವ್ರಜವನ್ನು (ಗಿರಿವ್ರಜ ಕೈಕೆಯ ರಾಜಧಾನಿ) ಪ್ರವೇಶಿಸಿದರು.

ಅದೇ ದಿನ ಬೆಳಗಿನ ಜಾವ ಭರತನಿಗೆ ಒಂದು ಕೆಟ್ಟ ಕನಸು ಬಿದ್ದಿತ್ತು. ಬೆಳಗಿನಿಂದ ಅವನ ಮನಸ್ಸಿನಲ್ಲಿ ಸ್ವಸ್ಥತೆಯಿಲ್ಲದೆ, ಮುಖದಲ್ಲಿ ಕಾಂತಿ ತಗ್ಗಿ ತೇಜೋವಿಹೀನವಾಗಿದ್ದ. ಅದನ್ನು ಗಮನಿಸಿದ ಅವನ ಮಿತ್ರರು ಕೇಳಿದಾಗ ಹೇಳಿದ: “ನನಗೆ ಬೆಳಗಿನ ಜಾವ ಒಂದು ಕನಸು ಬಿತ್ತು. ಅದರಲ್ಲಿ ದಶರಥ ಮಹಾರಾಜ ಒಂದು ಪರ್ವತದ ಮೇಲೆ ನಿಂತಿದ್ದರು. ಅವರು ಅಲ್ಲಿಂದ ಕೆಳಗೆ ಜಾರಿ ಸಗಣಿಯಿಂದ ಕೂಡಿದ ಬಿಲದಲ್ಲಿ ಬಿದ್ದರು. ಅದರಲ್ಲಿ ತೇಲುತ್ತಾ ಎಣ್ಣೆಯನ್ನು ಕುಡಿದರು. ಆ ಎಣ್ಣೆಯನ್ನು ತನ್ನ ಶರೀರದ ತುಂಬಾ ಹಚ್ಚಿಕೊಂಡರು. ಅವರು ತಮ್ಮ ತಲೆಯನ್ನು ಕೆಳಗೆ ಬಗ್ಗಿಸಿದಾಗ ನಾನು ಒಂದು ಆಶ್ಚರ್ಯ ನೋಡಿದೆ. ಸಮುದ್ರವೆಲ್ಲಾ ಬತ್ತಿಹೋಗಿ ಭೂಮಿಯಾಗಿತ್ತು. ಆಕಾಶದಲ್ಲಿದ್ದ ಚಂದ್ರ ಭೂಮಿಯ ಮೇಲೆ ಬಿದ್ದಿದ್ದ. ಇಡೀ ಭೂಮಂಡಲವೆಲ್ಲಾ ಒಡೆದುಹೋಗಿತ್ತು. ಊಹಿಸಲಾಗದ ಕತ್ತಲಾಗಿತ್ತು. ರಾಜನ ಭದ್ರಗಜದ ದಂತ ಮುರಿದಿತ್ತು. ಹೋಮದ ಅಗ್ನಿ ಆರಿ ಹೋಗಿತ್ತು. ನನ್ನ ತಂದೆ ಒಂದು ಕಬ್ಬಿಣದ ಪೀಠದ ಮೇಲೆ ಕುಳಿತು, ಕೆಂಪು ವಸ್ತ್ರ ಧರಿಸಿ, ಕೆಂಪು ಚಂದನವನ್ನು ಬಳಿದುಕೊಂಡು, ಕೆಂಪು ಮಾಲೆಯನ್ನು ಹಾಕಿಕೊಂಡು ಪೂಜೆ ಮಾಡುತ್ತಿದ್ದರು. ಅದೇ ಸಮಯದಲ್ಲಿ ಅಲ್ಲಿಗೆ ಬಂದ ಕೆಂಪು ಕಪ್ಪು ವಸ್ತ್ರಗಳನ್ನುಟ್ಟಿದ್ದ ಸ್ತ್ರೀಯರು ವಿಕೃತವಾಗಿ ನಗುತ್ತಿದ್ದರು. ನನ್ನ ತಂದೆ ಕತ್ತೆಗಳನ್ನು ಕಟ್ಟಿದ್ದ ರಥವನ್ನು ಹತ್ತಿದರು. ಅಲ್ಲಿಗೆ ಬಂದಿದ್ದ ಸ್ತ್ರೀಯರು ಅವರ ಕುತ್ತಿಗೆಗೆ ಪಾಶಗಳನ್ನು ಹಾಕಿ, ಆ ರಥವನ್ನು ದಕ್ಷಿಣ ದಿಕ್ಕಿಗೆ ನಡೆಸಿದರು. ಹೀಗೆ ಬೆಳಗಿನ ಜಾವದಲ್ಲಿ ಕತ್ತೆಗಳ ರಥದ ಮೇಲೆ ಕೂತಂತೆ ಯಾರು ಕಾಣಿಸುವರೋ ಅವರು ಚಿತೆಯ ಮೇಲೆ ಮಲಗಿ ಅವರ ಶರೀರ ಸುಟ್ಟುಹೋಗುವ ಧೂಮವನ್ನು ನೋಡಬೇಕಾದ ಪರಿಸ್ಥಿತಿ ಬರುತ್ತದೆ. ನನಗೆ ನಮ್ಮ ತಂದೆಯವರಿಗೆ ಏನಾಗಿದೆಯೋ ಎಂದು ಆತಂಕವಾಗುತ್ತಿದೆ. ನನಗೆ ನನ್ನ ಮೇಲೆಯೇ ಅಸಹ್ಯವಾಗುತ್ತಿದೆ. ಇದೆಲ್ಲ ನೋಡುತ್ತಿದ್ದರೆ ಏನೋ ಪ್ರಮಾದವಾದಂತೆ ಅನಿಸುತ್ತಿದೆ.”

ಅಷ್ಟರಲ್ಲೇ ಅಯೋಧ್ಯೆಯಿಂದ ಬಂದ ದೂತರು ಒಳಗೆ ಬಂದರು. ಅವರನ್ನು ನೋಡಿ ಭರತ,
“ಆರ್ಯಾ ಚ ಧರ್ಮ ನಿರತಾ ಧರ್ಮಜ್ಞಾ ಧರ್ಮ ದರ್ಶನಿ
ಅರೋಗಾ ಚ ಅಪಿ ಕೌಸಲ್ಯಾ ಮಾತಾ ರಾಮಸ್ಯ ಧೀಮತಃ
ಸರ್ವಕಾಲದಲ್ಲಿಯೂ ಧರ್ಮವನ್ನು ಮಾತ್ರ ಆಚರಿಸುತ್ತಾ, ಧರ್ಮದ ಕಡೆಯೇ ನೋಡುತ್ತಾ ಧರ್ಮವನ್ನು ತಿಳಿದ ರಾಮನ ತಾಯಿ ಕೌಸಲ್ಯೆ ಯಾವುದೇ ತೊಂದರೆ ಇಲ್ಲದೆ ಆರೋಗ್ಯವಾಗಿದ್ದಾಳಾ? ಶತೃಘ್ನ, ಲಕ್ಷ್ಮಣರ ತಾಯಿಯಾದ ಸುಮಿತ್ರೆ ಆರೋಗ್ಯವಾಗಿದ್ದಾಳಾ? 
ಆತ್ಮ ಕಾಮಾ ಸದಾ ಚಂಡೀ ಕ್ರೋಧನಾ ಪ್ರಾಜ್ಞಾ ಮಾನಿನೀ
ಅರೋಗಾ ಚ ಅಪಿ ಕೈಕೇಯಾ ಮಾತಾ ಮೇ ಕಿಂ ಉವಾಚ ಹ
ನನ್ನ ಅಮ್ಮ ಕೈಕೆ ಯಾವಾಗಲೂ ಆಸೆಗಳನ್ನಿಟ್ಟುಕೊಂಡು ತಿರುಗುತ್ತಿರುತ್ತಾಳೆ. ಯಾವಾಗಲೂ ಕೋಪದಿಂದಿರುತ್ತಾಳೆ. ಅವಳಿಗೆ ಯಾವುದೇ ಅನಾರೋಗ್ಯವಿಲ್ಲವಲ್ಲ? ರಾಮ ಲಕ್ಷ್ಮಣರು ಕುಶಲವಾಗಿದ್ದಾರಾ?” ಎಂದು ಕೇಳಿದ.

ದೂತರು, “ನೀನು ಯಾರುಯಾರನ್ನು ಕುಶಲವಾಗಿರಬೇಕೆಂದು ಆಶಿಸುತ್ತಿದ್ದೀಯೋ ಅವರೆಲ್ಲರೂ ಚೆನ್ನಾಗಿದ್ದಾರೆ. ಕೆಲವು ಕಾಲದಲ್ಲಿ ನಿನ್ನನ್ನು ಲಕ್ಷ್ಮಿ ವರಿಸುತ್ತಾಳೆ, ನೀನು ತಕ್ಷಣ ಹೊರಟುಬರಬೇಕೆಂದು ವಸಿಷ್ಠರು ಆದೇಶಿಸಿದ್ದಾರೆ” ಎಂದರು. 

ಭರತ ತನ್ನ ಪ್ರಯಾಣಕ್ಕೆ ತಾತ ಕೈಕೆಯ ರಾಜನ (ಅಶ್ವಪತಿ - ಅವನ ಹೆಸರು) ಅನುಮತಿ ಪಡೆದ. ಕೈಕೆಯ ರಾಜ ಭರತನಿಗೆ ಆನೆ, ಮೃಗ ಚರ್ಮ, ೨೦೦೦ ಬಂಗಾರದ ಹಾರಗಳು, ೧೬೦೦ ಕುದುರೆಗಳನ್ನು ಬಹುಮಾನವನ್ನಾಗಿ ಕೊಟ್ಟ. ಸೋದರಮಾವನಾದ ಯಥಾಜಿತ ಐರಾವತ ವಂಶದಲ್ಲಿ ಜನಿಸಿದ ಆನೆ, ಕತ್ತೆ, ಬೇಟೆ ನಾಯಿಗಳನ್ನು ಬಹುಮಾನವಾಗಿ ಕೊಟ್ಟ. ಭರತ ತನ್ನ ಬಹುಮಾನಗಳನ್ನು ಹಿಂದೆ ಬರುವ ಪರಿವಾರಕ್ಕೆ ಕೊಟ್ಟು ತಾನು ಮಾತ್ರ ಬೇಗವಾಗಿ ತಲುಪಬೇಕೆಂದು ಕೆಲಮಂದಿಯನ್ನು ಕರೆದುಕೊಂಡು ಅಯೋಧ್ಯೆಗೆ ಹೊರಟ. ದೂತರು ನಡೆದ ವಿಷಯವನ್ನು ಹೇಳದಿದ್ದರಿಂದ ಅವನು ದೂತರು ಬಂದ ಮಾರ್ಗವನ್ನು ಹಿಡಿಯಲಿಲ್ಲ.


ಅವರು ಹೊರಟು ಸುದಾಮ, ಹ್ಲಾದಿನಿ, ಶತದ್ರು, ಶಿಲಾವಾಹ ಎನ್ನುವ ನಾಲ್ಕು ನದಿಗಳನ್ನು ದಾಟಿದರು. ಅಲ್ಲಿಂದ ಶಲ್ಯ ಕರ್ತನ ನಗರ, ಚೈತ್ರರಥ ನಗರಗಳನ್ನು ದಾಟಿದರು. ಸರಸ್ವತಿ, ಗಂಗಾ ನದಿಗಳನ್ನು ದಾಟಿ ವೀರಮತ್ಸಾ ನಗರಕ್ಕೆ ಬಂದರು. ಕುಲಿಂಗ ನದಿಯನ್ನು ದಾಟಿ ಮಹಾರಣ್ಯವನ್ನು ಪ್ರವೇಶಿಸಿದರು. ಅಲ್ಲಿಂದ ಭಗೀರಥಿ ನದಿಯನ್ನು ದಾಟಿ ಪ್ರಾಗ್ವಟವಂಬ ಪಟ್ಟಣಕ್ಕೆ ಬಂದು ಕುಟಿಕೋಷ್ಠಿಕವೆಂಬ ನದಿಯನ್ನು ದಾಟಿದರು. ಧರ್ಮವರ್ಧನ, ತೋರಣ, ವರೂಥಿ ಗ್ರಾಮಗಳನ್ನು ದಾಟಿ ಉಜ್ಜಹಾಸ ನಗರಕ್ಕೆ ಬಂದು ಸರಸ್ವತಿ ತೀರ್ಥವೆಂಬ ಗ್ರಾಮವನ್ನು, ಉತ್ತಾನಿಕಾ ಎಂಬ ನದಿಯನ್ನು ದಾಟಿದರು. ಹಸ್ತಿಪೃಷ್ಠಿಕ ಎಂಬ ಗ್ರಾಮ, ಕುಟಿಕಾ ನದಿ, ಕಪಿವತೀ ಪಟ್ಟಣ, ಏಕಶಾಲ ಗ್ರಾಮ, ಸ್ಥಾಣುಮತೀ ಊರು, ಗೋಮತೀ ನದಿಗಳನ್ನು ದಾಟಿ ಒಂದು ರಾತ್ರಿ ಪ್ರಯಾಣ ಮಾಡಿ ಅಯೋಧ್ಯಾ ಪಟ್ಟಣವನ್ನು ಸೇರಿಕೊಂಡರು. ತನ್ನ ತಾತನ ಮನೆಯಿಂದ ಹೊರಟು ಅಯೋಧ್ಯಾನಗರವನ್ನು ಸೇರುವ ಹೊತ್ತಿಗೆ ಭರತನಿಗೆ ೮ ರಾತ್ರಿಗಳು ಹಿಡಿಯಿತು. ಅಯೋಧ್ಯೆಗೆ ಬಂದಮೇಲೆ ಅಲ್ಲಿದ್ದ ಪ್ರಜೆಗಳ ಪರಿಸ್ಥಿತಿಯನ್ನು ನೋಡಿ ಅವನ ಮನಸ್ಸು ಇನ್ನೂ ಭಾರವಾಯಿತು. ಭರತನನ್ನು ನೋಡುತ್ತಲೇ ಎಲ್ಲರೂ ಬಾಗಿಲು ಹಾಕಿಕೊಂಡು ಒಳಗೆ ಹೋಗುತ್ತಿದ್ದರು. ಯಾರೂ ಸಂತೋಷವಾಗಿದ್ದಂತೆ ಕಾಣಿಸಲಿಲ್ಲ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ