೩೭. ನಿರಾಕರಣ!

ಭರತ ನೇರವಾಗಿ ದಶರಥನ ಮಂದಿರಕ್ಕೆ ಹೋದ. ದಶರಥನಿಗಾಗಿ ಎಲ್ಲ ಕೋಣೆಗಳನ್ನು ಹುಡುಕಿದ. ಅಲ್ಲಿದ್ದವರಾರೂ ಸಂತೋಷವಾಗಿ ಕಾಣಿಸಲಿಲ್ಲ. ಅಲ್ಲಿ ರಾಜ ಕಾಣಿಸದಿದ್ದರಿಂದ ತನ್ನ ತಾಯಿ ಕೈಕೆಯ ಮಂದಿರದಲ್ಲಿರಬಹುದೆಂದು ಆತುರದಿಂದ ಅಲ್ಲಿಗೆ ಹೋಗಿ, ಅಲ್ಲಿದ್ದ ಕೈಕೆಗೆ ನಮಸ್ಕಾರ ಮಾಡಿದ. ಭರತನನ್ನು ನೋಡಿದ ತಕ್ಷಣ ಕೈಕೆ ಸಂತೋಷದಿಂದ ತನ್ನ ಪಕ್ಕದಲ್ಲಿ ಕೂರಿಸಿಕೊಂಡು, “ಚೆನ್ನಾಗಿದ್ದೀಯಾ? ಎಲ್ಲರೂ ಆನಂದವಾಗಿದ್ದಾರಾ? ಅಲ್ಲಿ ವಿಶೇಷಗಳೇನು?” ಎಂದು ಕೇಳಿದಳು.
ಭರತ, “ಅಮ್ಮ! ನನಗೆ ಇಲ್ಲಿಗೆ ಬರಲು ೮ ರಾತ್ರಿಗಳು ಹಿಡಿಯಿತು. ಅಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನನಗೆ ದಶರಥ ಮಹಾರಾಜರನ್ನು ನೋಡಿ ಅವರಿಗೆ ನಮಸ್ಕಾರ ಮಾಡಬೇಕೆನಿಸುತ್ತಿದೆ. ನಿನ್ನ ಮಂದಿರದಲ್ಲಿ ಈ ತಲ್ಪದ ಮೇಲೇ ಮಲಗಿಕೊಳ್ಳುತ್ತಿದ್ದರು. ಆದರೆ ಇಲ್ಲಿ ಕೂಡ ಇಲ್ಲ. ಕೌಸಲ್ಯೆಯ ಮಂದಿರದಲ್ಲೇನಾದರೂ ಇದ್ದಾರಾ?” ಎಂದ.
ಆ ಮಾತು ಕೇಳಿದ ಕೈಕೆ ತುಂಬಾ ಲಘುವಾಗಿ,
“ಯಾ ಗತಿಃ ಸರ್ವ ಭೂತಾನಾಂ ತಾಂ ಗತಿಂ ತೇ ಪಿತಾ ಗತಃ
ರಾಜಾ ಮಹಾತ್ಮಾ ತೇಜಸ್ವೀ ಯಾಯಜಾಕಃ ಸತಾಂ ಗತಿಃ
ಕೊನೆಗೆ ಎಲ್ಲಾ ಭೂತಗಳು ಎಲ್ಲಿಗೆ ಹೋಗುತ್ತವೆಯೋ ಅಲ್ಲಿಗೆ ನಿಮ್ಮ ತಂದೆಯೂ ಕೂಡ ಹೋದರು” ಎಂದಳು.

ಅಲ್ಲಿಯವರೆಗೂ ತಾಯಿಯ ಮಡಿಲಲ್ಲಿ ಕುಳಿತಿದ್ದ ಭರತ ಆ ಮಾತು ಕೇಳುತ್ತಲೇ ಮದಿಸಿದ ಆನೆ ನೆಲದ ಮೇಲೆ ಬಿದ್ದಂತೆ ಕೆಳಗೆ ಬಿದ್ದು ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದ!

ಕೈಕೆ: “ರಾಜಾ! ನೀನು ಹೀಗೆ ನೆಲದ ಮೇಲೆ ಬಿದ್ದು ಅಳಬಹುದೇ? ದೊಡ್ಡ ದೊಡ್ಡ ಸಭೆಗಳಲ್ಲಿ ಕುಳಿತುಕೊಳ್ಳಬೇಕಾದ ನೀನು ಹೀಗೆ ಅಳುವುದೆಂದರೇನು? ಎದ್ದು ಮೇಲೆ ಕುಳಿತುಕೊ”.
“ಅಮ್ಮಾ! ಅಪ್ಪ ಕೊನೆಗೆ ಯಾವ ವ್ಯಾಧಿಯಿಂದ ಹೋದರು? ರಾಮನಿಗೆ ಪಟ್ಟಾಭಿಷೇಕವೊ ಅಥವಾ ಅಪ್ಪ ಯಾವುದಾದರೂ ಯಜ್ಞ ಮಾಡುತ್ತಿದ್ದಾರೇನೊ ಎಂದು ನನ್ನನ್ನು ಬೇಗ ಬರಲು ಹೇಳಿಕಳಿಸಿದರು ಎಂದುಕೊಂಡೆ. ಅಪ್ಪ ಹೋಗುವುದಕ್ಕೆ ಮುಂಚೆ ರಾಮ ಅವರ ಪಕ್ಕದಲ್ಲೇ ಇರುತ್ತಾನೆ. ಅಪ್ಪ ಇಲ್ಲದಿದ್ದರೆ ಅಣ್ಣನೇ ತಮ್ಮಂದಿರಿಗೆ ತಂದೆಯಂತೆ ಎಂದು ಆರ್ಯರು ಹೇಳುತ್ತಾರೆ. ನಾನು ಈಗ ರಾಮನ ಪಾದಗಳನ್ನು ಮುಟ್ಟಿದರೆ ದಶರಥನ ಪಾದಗಳನ್ನು ಮುಟ್ಟಿದಂತೆಯೇ ಸಂತೋಷವಾಗುತ್ತದೆ. ದಶರಥ ಮಹಾರಾಜರು ಹೇಗೆ ಮರಣಿಸಿದರು? ಅವರು ಹೋಗುವ ಮುಂಚೆ ಏನು ಹೇಳಿದರು?”
“ನಿಮ್ಮ ತಂದೆ ಸಾಯುವ ಮುನ್ನ ಹೇ ರಾಮ! ಹೇ ಲಕ್ಷ್ಮಣ! ಹೇ ಸೀತಾ! ಎನ್ನುತ್ತಾ ಹೋದರು. ಸಾಯುತ್ತಾ ಈ ಸೀತಾರಾಮಲಕ್ಷ್ಮಣರು ರಾಜ್ಯಕ್ಕೆ ಹಿಂತಿರುಗಿ ಬಂದಾಗ ಯಾರು ಅವರನ್ನು ನೋಡುತ್ತಾರೊ ಅವರೇ ಧನ್ಯರು. ನಾನು ಅವರನ್ನು ನೋಡಲಿಕ್ಕಾಗಲಿಲ್ಲ ಎಂದು ಅತ್ತು ಅತ್ತು ಸತ್ತುಹೋದರು.”
“ಆ ಸಮಯದಲ್ಲಿ ಸೀತಾರಾಮಲಕ್ಷ್ಮಣರು ಎಲ್ಲಿ ಹೋದರು?”
“ಅವರು ಅರಣ್ಯಕ್ಕೆ ಹೋದರು, ಅವರನ್ನು ನಿಮ್ಮ ತಂದೆಯೇ ಕಳಿಸಿದರು”
“ಅಮ್ಮ! ಅಪ್ಪ ರಾಮನನ್ನು ಏಕೆ ಕಳಿಸಿದರು? ರಾಮ ಧರ್ಮಾತ್ಮ! ಅರಣ್ಯಕ್ಕೆ ಕಳಿಸಬೇಕೆಂದರೆ ಕೆಲವು ಕಾರಣಗಳಿರುತ್ತವೆ. ಬ್ರಾಹ್ಮಣರ ದ್ರವ್ಯಗಳನ್ನು ಅಪಹರಿಸಿದನೇ? ಪರಸ್ತ್ರೀಯರನ್ನು ದೋಷ ಬುದ್ಧಿಯಿಂದ ನೋಡಿದನೇ? ಪರಕಾಂತೆಯರನ್ನು ಅನುಭವಿಸಿದನೇ? ಯಜ್ಞಯಾಗಾದಿ ಕರ್ಮಗಳನ್ನು ಧ್ವಂಸ ಮಾಡಿದನೇ? ಆಗತಾನೇ ಹುಟ್ಟಿದ ಭ್ರೂಣವನ್ನು ಕೊಂದನೇ? ರಾಮ ಇಂತಹ ಪಾಪಗಳನ್ನು ಮಾಡುವವನಲ್ಲ. ರಾಮನನ್ನು ಅಡವಿಗೆ ಏಕೆ ಕಳಿಸಿದರು. ಏನು ನಡೆಯಿತೋ ನನಗೆ ಯಥಾವತ್ತಾಗಿ ಹೇಳು.”
“ನಿನಗಾಗಿಯೇ ಇವೆಲ್ಲ ಮಾಡಿದೆ. ದಶರಥ ರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದುಕೊಂಡ. ನೀನು ಹೇಳಿದ ದೋಷಗಳು ರಾಮನಲ್ಲೆಲ್ಲಿದೆ? ಪರಕಾಂತೆಯರನ್ನು ಅನುಭವಿಸುವುದಿರಲಿ ಅವರನ್ನು ಕಣ್ಣೆತ್ತಿಯೂ ಅವನು ನೋಡುವುದಿಲ್ಲ. ಅಂತಹ ಧರ್ಮಾತ್ಮ. ಆದರೆ ನಿನಗೆ ರಾಜ್ಯ ಸಿಗಬೇಕೆಂದು ದಶರಥನನ್ನು ನಾನೇ ಎರೆಡು ವರಗಳನ್ನು ಕೇಳಿದೆ: ೧೪ ವರ್ಷಗಳ ಕಾಲ ರಾಮನನ್ನು ಅರಣ್ಯಕ್ಕೆ ಕಳಿಸಿ ನಿನಗೆ ಪಟ್ಟಾಭಿಷೇಕ ಮಾಡಬೇಕು. ಸತ್ಯಪಾಶಕ್ಕೆ ಕಟ್ಟುಬಿದ್ದು ನಿಮ್ಮ ತಂದೆ ಒಪ್ಪಿಕೊಂಡರು. ರಾಮ ದಂಡಕಾರಣ್ಯಕ್ಕೆ ಹೋದನೆಂಬ ಚಿಂತೆಯಿಂದ ನಿಮ್ಮ ತಂದೆ ಎರೆಡು ಮೂರು ದಿನ ಕೊರಗಿ ಕೊರಗಿ ಸತ್ತುಹೋದರು. ಈಗ ಈ ರಾಜ್ಯದಲ್ಲಿ ನಿನ್ನನ್ನು ಎದುರಿಸುವವರು ಯಾರೂ ಇಲ್ಲ. ನಿನ್ನ ತಂದೆಯ ಶರೀರ ಮನೆಯಲ್ಲಿಯೇ ಇದೆ. ನೀನು ಬೇಗ ಹೋಗಿ ಅದಕ್ಕೆ ಸಂಸ್ಕಾರ ಮಾಡಿ, ವಸಿಷ್ಠರ ಜೊತೆ ಮಾತಾಡಿ ಪಟ್ಟಾಭಿಷೇಕ ಮಾಡಿಸಿಕೊ. ನನಗೆ ನೋಡಬೇಕೆನಿಸುತ್ತಿದೆ.”
ಆ ಮಾತು ಕೇಳಿದ ಭರತ ಕೈಕೆಯ ಕಡೆ ವಿಚಿತ್ರವಾಗಿ ನೋಡಿ, “ಅಮ್ಮಾ! ನೀನು ಇಂತಹ ದಾರುಣವಾದ ಕೆಲಸ ಮಾಡುತ್ತೀಯ ಎಂದು ಅಂದುಕೊಂಡಿರಲಿಲ್ಲ. ನಾನು ನಿನ್ನ ಹತ್ತಿರ ಮಾತಾಡುವಾಗ ಯಾವಾಗಲಾದರೂ ರಾಜ್ಯದ ಮೇಲೆ ಆಸೆಯಿದೆಯೆಂದೋ, ರಾಮ ನನಗೆ ಕಂಟಕವಾಗುತ್ತಾನೆಂದೋ ಹೇಳಿದ್ದೆನೇ? ನಿನ್ನನ್ನು ರಾಜ್ಯ ಕೇಳು ಎಂದು ಯಾರು ಹೇಳಿದರು? ನೀನು ಹೊರಲಾರದ ಭಾರವನ್ನು ತಲೆಯ ಮೇಲೆ ಹಾಕಿಕೊಂಡಿದ್ದೀಯ. ಇಕ್ಷ್ವಾಕು ವಂಶಕ್ಕೆ ಕಾಳರಾತ್ರಿಯಂತೆ ಬಂದಿದ್ದೀಯ! ನೀನು ನನಗೆ ತಾಯಿಯಲ್ಲ. ನಾನು ನಿನಗೆ ಮಗನಲ್ಲ. ನಾನು ನಿನ್ನನ್ನು ತಾಯಿಯಾಗಿ ಬಿಟ್ಟು ಬಿಡುತ್ತೇನೆ. ಈಗಲೇ ನನ್ನ ಕತ್ತಿಯಿಂದ ನಿನ್ನ ಕತ್ತನ್ನು ಕತ್ತರಿಸಬೇಕು. ಆದರೆ ನಿನ್ನನ್ನು ನಾನು ಕೊಂದರೆ ತಾಯಿಯನ್ನು ಕೊಂದವನು ಭರತ ಎಂದು ರಾಮ ನನ್ನ ಜೊತೆ ಮಾತಾಡನು. ರಾಮ ಮಾತಾಡನೆಂಬ ಭಯದಿಂದ ನಿನ್ನನ್ನು ಬಿಟ್ಟುಬಿಡುತ್ತಿದ್ದೇನೆ. ರಾಮ ಕೌಸಲ್ಯೆಯನ್ನು ನೋಡಿದಂತೆಯೇ ನಿನ್ನನ್ನೂ ನೋಡಿದ್ದಾನೆ. ಇಕ್ಷ್ವಾಕು ವಂಶದಲ್ಲಿ ರಾಜ್ಯವನ್ನು ಹಿರಿಯನು ಮಾತ್ರ ಆಳಬೇಕು. ನಾನು ರಾಜ್ಯವನ್ನು ಒಪ್ಪಿಕೊಳ್ಳುತ್ತೇನೆಂದು ಹೇಗೆ ಊಹಿಸಿದೆ? ದಶರಥ ಮಹಾರಾಜನೂ ರಾಮನ ಸಹಕಾರದಿಂದಲೇ ರಾಜ್ಯಭಾರ ಮಾಡಿದ. ನೀನು ಮಾಡಿರುವ ಪಾಪದಿಂದ ಈಗ ಮೂರು ದುಷ್ಕೃತ್ಯಗಳು ನಡೆದಿವೆ. ನನ್ನ ತಂದೆ ಶರೀರ ತ್ಯಾಗ ಮಾಡಿದ್ದಾರೆ, ಧರ್ಮಾತ್ಮನಾದ ರಾಮ ೧೪ ವರ್ಷ ಕಾಡಿಗೆ ಹೋಗಿದ್ದಾನೆ, ಯಾವುದೇ ಅಪರಾಧ ಮಾಡದ ನನ್ನ ಮೇಲೆ ರಾಜ್ಯವ್ಯಾಮೋಹದ ಅಪವಾದ ಬಂದಿದೆ! ನಾನು ಎಷ್ಟು ಜನರಿಗೆ ಹೇಳಿದರೆ ನನ್ನ ಮೇಲೆ ಬಂದಿರುವ ಅಪರಾಧ ಹೋಗುತ್ತದೆ? ನೀನು ತಾಯಿಯಲ್ಲ ನನಗೆ ಅಪವಾದ ತಂದ ದೌರ್ಭಾಗ್ಯೆ. 
ಅಮ್ಮಾ! ನಿನಗೆ ಒಂದು ವಿಷಯ ಹೇಳುತ್ತೇನೆ ಕೇಳು. ಒಂದು ಬಾರಿ ಆಕಾಶದಲ್ಲಿ ಕಾಮಧೇನುವಾದ ಸುರಭಿ ಹೋಗುತ್ತಿದ್ದಾಗ, ಭೂಮಿಯ ಮೇಲೆ ಒಬ್ಬ ರೈತ ವಿಪರೀತವಾದ ಬಿಸಿಲಿನಲ್ಲಿ ಎರೆಡು ಎತ್ತುಗಳನ್ನು ನೇಗಿಲಿಗೆ ಕಟ್ಟಿ ಉಳುಮೆ ಮಾಡುತ್ತಿದ್ದದ್ದನ್ನು ನೋಡಿ ಕಣ್ಣೀರು ಸುರಿಸಿದಳು (ಭೂಮಿಯ ಎಲ್ಲ ಹಸು ಎತ್ತುಗಳು ಸುರಭಿಯ ಸಂತಾನವೇ). ದೇವೇಂದ್ರ ಐರಾವತದ ಮೇಲೆ ಹೋಗುತ್ತಿದ್ದಾಗ ಅವನ ಕೈ ಮೇಲೆ ಸುರಭಿಯ ಕಣ್ಣೀರು ಬಿತ್ತು. ದಿವ್ಯಪರಿಮಳವಾದ ಆ ಕಣ್ಣೀರು ಯಾರದೆಂದು ದೇವೇಂದ್ರ ನೋಡಿದಾಗ ಸುರಭಿ ಆಳುತ್ತಾ ಕಾಣಿಸಿದಳು. ಇಂದ್ರ ಐರಾವತದಿಂದ ಇಳಿದು ಸುರಭಿಯನ್ನು ಏಕೆ ಅಳುತ್ತಿದ್ದೀಯ ಎಂದು ಕೇಳಿದಾಗ ಸುರಭಿ, ‘ನನಗೆ ಕೋಟ್ಯಾಂತರ ಮಕ್ಕಳು ಇದ್ದಾರೆ. ಭೂಮಿಯ ಮೇಲಿನ ಎಲ್ಲ ಎತ್ತು, ಹಸುಗಳು ನನ್ನ ಶರೀರದಿಂದ ಬಂದಂತವು. ಇಷ್ಟು ಮಂದಿ ಮಕ್ಕಳಿದ್ದರೂ ಈ ಎರೆಡು ಎತ್ತುಗಳನ್ನು ರೈತ ಹೊಡೆಯುತ್ತಾ ಬಿಸಿಲಿನಲ್ಲಿ ಉಳುಮೆ ಮಾಡುತ್ತಿದ್ದರೆ ನನಗೆ ದುಃಖವಾಗಿ ಅಳುತ್ತಿದ್ದೇನೆ’ ಎಂದಳು. ಕೋಟ್ಯಂತರ ಮಕ್ಕಳಿರುವ ಸುರಭಿಯೇ ಹಾಗೆ ದುಃಖಿಸಿದರೆ, ಒಬ್ಬನೇ ಒಬ್ಬ ಮಗ, ಎಷ್ಟೋ ವರ್ಷಗಳ ಮೇಲೆ ಹುಟ್ಟಿದವನು, ಧರ್ಮಾತ್ಮ, ಅಂತಹ  ಮಗನನ್ನು ೧೪ ವರ್ಷಗಳ ಕಾಲ ಕಾಡಿಗೆ ಕಳಿಸಿದರೆ ಕೌಸಲ್ಯೆಗೆ ಎಷ್ಟು ದುಃಖವಾಗಬಹುದೆಂದು ಯೋಚಿಸಿದ್ದೀಯ? ನೀನು ಹೇಳಿದ ತಕ್ಷಣ ರಾಜ್ಯವನ್ನು ಪಡೆಯುತ್ತೇನೆಂದುಕೊಂಡೆಯಾ? ಅದು ನಡೆಯದ ಮಾತು. ನೀನು ಬದುಕಿರುವುದೇ ಅನವಶ್ಯಕ. ಬೇಗ ಅಂತಃಪುರಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊ. ಅದೇ ನಿನಗೆ ಪ್ರಾಯಶ್ಚಿತ್ತ” ಎಂದ.

ಈ ಮಾತುಗಳನ್ನು ಕೇಳಿದ ಕೈಕೆ ಗರಬಡಿದವಳಂತೆ ನಿಂತುಬಿಟ್ಟಳು. ಭರತನ ಕೂಗಾಟವನ್ನು ಕೇಳಿ ಮಂತ್ರಿಗಳು ಅಲ್ಲಿ ಬಂದು ಸೇರಿದರು. ಕೌಸಲ್ಯೆ ಭರತನ ಆಗಮನವನ್ನು ಗ್ರಹಿಸಿ ಅವನನ್ನು ನೋಡಲು ಸುಮಿತ್ರೆಯ ಜೊತೆ ಹೊರಟಳು. ಇತ್ತ ಭರತನೂ ಕೌಸಲ್ಯೆಯ ಮಂದಿರದ ಕಡೆ ಹೋದ. ಭರತನ ಹಿಂದೆ ಶತೃಘ್ನನೂ ಹೊರಟ. ಮತ್ತೊಂದು ಕಡೆಯಿಂದ ಬಂದ ಕೌಸಲ್ಯೆ ಅವನನ್ನು ಎದುರುಗೊಂಡಳು. ಭರತ ಕೌಸಲ್ಯೆಯ ಪಾದದ ಮೇಲೆ ಬಿದ್ದು ಗಟ್ಟಿಯಾಗಿ ಅತ್ತಾಗ ಕೌಸಲ್ಯೆ ಅವನನ್ನು ಮೇಲಕ್ಕೆಬ್ಬಿಸಿ, “ ರಾಜ್ಯ ಬೇಕೆಂಬ ನಿನ್ನ ಅಮ್ಮನ ಕೋರಿಕೆ ತೀರಿದೆ. ನೀನು ಇಲ್ಲದಾಗ ಎರೆಡು ವರಗಳು ಕೇಳಿದಳು. ನನ್ನ ಮಗ ಅರಣ್ಯಕ್ಕೆ ಹೋಗಿದ್ದಾನೆ. ಇನ್ನು ನಿನಗೆ ಯಾವುದೇ ತೊಂದರೆಯಿಲ್ಲ. ಹಾಯಾಗಿ ರಾಜ್ಯವನ್ನು ಅನುಭವಿಸು. ನನಗೆ ಒಂದು ಉಪಕಾರ ಮಾಡು. ನನ್ನ ಪತಿ ಸತ್ತುಹೋಗಿದ್ದಾನೆ. ಈ ರಾಜ್ಯದಲ್ಲಿ ನನ್ನವರೆಂಬುವವರು ಯಾರೂ ಇಲ್ಲ. ಆದ್ದರಿಂದ ನನ್ನನ್ನೂ ನನ್ನ ಮಗನ ಹತ್ತಿರ ಬಿಟ್ಟು ಬಾ” ಎಂದಳು.

ಭರತ ಗಟ್ಟಿಯಾಗಿ ಕೌಸಲ್ಯೆಯ ಪಾದಗಳನ್ನು ಹಿಡಿದುಕೊಂಡು ಹೇಳಿದ: “ಅಮ್ಮಾ! ನೀನೂ ನನ್ನ ಬಗ್ಗೆ ತಪ್ಪು ತಿಳಿದೆಯಾ? ನನಗೆ ರಾಮ ಅರಣ್ಯಕ್ಕೆ ಹೋಗುವ ವಿಷಯ ತಿಳಿದಿದ್ದರೆ, ನನಗೆ ರಾಜ್ಯವ್ಯಾಮೋಹವಿದ್ದಿದ್ದೇ ಆದರೆ, ನನಗೆ ಗುರುವಿನಿಂದ ಸಮಸ್ತ ವಿದ್ಯೆಗಳನ್ನು ಪಡೆದು ಅದನ್ನು ಅನುಸರಿಸದ ಕೃತಘ್ನನ ಪಾಪ, ನಿದ್ದೆ ಮಾಡುತ್ತಿರುವ ಹಸು, ಎತ್ತುಗಳನ್ನು ಒದ್ದ ಪಾಪ, ಸೇವಕರಿಂದ ಕಷ್ಟಕೆಲಸಗಳನ್ನು ಮಾಡಿಸಿಕೊಂಡು ಅವನಿಗೆ ಸರಿಯಾದ ಸಂಭಾವನೆ ಕೊಡದ ಪಾಪ, ಮನೆಯಲ್ಲಿ ಸೌಂದರ್ಯವತಿಯಾದ, ತನ್ನನ್ನು ಅನುಸರಿಸುವ ಪತ್ನಿಯಿದ್ದೂ ಪರಪತ್ನಿಯರ ಮೇಲೆ ದೃಷ್ಟಿಯಿಟ್ಟ ಪಾಪ, ಋತುಸ್ನಾತಳಾದ ಪತ್ನಿಯನ್ನು ಸಂಗಮಿಸದ ಪಾಪ, ಮನೆಯಲ್ಲಿನ ಕುಟುಂಬ ಸಭ್ಯರಿಗೆ ಕೊಡದೆ ಮಧುರ ಪದಾರ್ಥಗಳನ್ನು ತಾನೊಬ್ಬನೇ ಭಕ್ಷಿಸಿದ ಪಾಪ, ಎಲ್ಲರೂ ಕುಡಿಯುವ ನೀರಿನಲ್ಲಿ ವಿಷಹಾಕಿದ ಪಾಪ, ವಯಸ್ಸಿಗೆ ಬಂದ ಮೇಲೂ ವಿವಾಹ ಮಾಡಿಕೊಳ್ಳದ ಪಾಪ, ಋಷಿ, ಪಿತೃ, ದೇವತೆಗಳ ಋಣ ತೀರಿಸಲು ಮಾದುವೆ ಮಾಡಿಕೊಂಡೂ ಸಂತಾನ ಪಡೆಯದ ಪಾಪ, ಪ್ರಜೆಗಳಿಂದ ತೆರಿಗೆ ಪಡೆದೂ ಅವರಿಗೆ ಅನುಕೂಲಗಳನ್ನು ಮಾಡಿಕೊಡದ ಪಾಪ, ಹೊಸದಾಗಿ ಜನ್ಮಕೊಟ್ಟ ಪಶುವಿನ ಬಳಿ ಹಾಲು ಕುಡಿಯಲು ಕರುವಿಗೆ ಬಿಡದೆ, ಅದನ್ನು ತಾನೇ ಹಿಂಡಿ ಕುಡಿದ ಪಾಪ, ಸೂರ್ಯ, ಚಂದ್ರರ ಕಡೆ ಮುಖಮಾಡಿ ಮೂತ್ರ ವಿಸರ್ಜನೆ ಮಾಡಿದ ಪಾಪ, ಮನೆಯನ್ನು ಸುಟ್ಟ ಪಾಪ, ಇನ್ನು ಮುಂತಾದ ಪಾಪಗಳು ಬರಲಿ.”
ಭರತನ ಮಾತು ಕೇಳಿ ಕೌಸಲ್ಯೆ ಶಾಂತಿಸಿ, “ನೀನೆಂಥವನೆಂದು ನನಗೆ ಗೊತ್ತು. ಆದರೂ ಮಗನು ದೂರವಾದನೆಂಬ ದುಃಖದಿಂದ ಹಾಗೆ ಮಾತಾಡಿದೆ” ಎಂದು ಭರತನನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡಳು. ಭರತ ಆ ರಾತ್ರಿಯೆಲ್ಲಾ ಅಳುತ್ತಲೇ ಕಳೆದ.

ಮರುದಿನ ಬೆಳಿಗ್ಗೆ ವಸಿಷ್ಠರೇ ಮೊದಲಾದ ಋಷಿಗಳು ಬಂದು ಭರತನಿಗೆ, “ನಿನ್ನ ತಂದೆಯ ಪಾರ್ಥಿವ ಶರೀರ ತೈಲ ದ್ರೋಣಿಯಲ್ಲೇ ಇದೆ. ಅವರಿಗೆ ಅಂತ್ಯ ಸಂಸ್ಕಾರ ಮಾಡದಿದ್ದರೆ ಕೆಟ್ಟದಾಗುತ್ತದೆ. ಆದ್ದರಿಂದ ಅದರ ಮೇಲೆ ದೃಷ್ಟಿಯಿಡು” ಎಂದರು.

ದಶರಥ ಮಹಾರಾಜನ ಪಾರ್ಥಿವ ಶರೀರವನ್ನು ತೈಲ ದ್ರೋಣಿಯಿಂದ ಹೊರತೆಗೆದು, ಅದನ್ನು ಚಿತೆಯ ಮೇಲೆ ಮಲಗಿಸಿದರು. ಭರತ, ಶತೃಘ್ನರು ಅಗ್ನಿಹೋತ್ರವನ್ನು ತಂದು ಅಗ್ನಿಸ್ಪರ್ಶಮಾಡಿದರು. ಎಲ್ಲರೂ ಸರಯೂ ನದಿಗೆ ಹೋಗಿ ಸ್ನಾನ ಮಾಡಿದರು (ಆ ಕಾಲದಲ್ಲಿ ಇಕ್ಷ್ವಾಕು ವಂಶದಲ್ಲಿ ಹೆಂಗಸರೂ ಚಿತೆಯ ಬಳಿ ಹೋಗುತ್ತಿದ್ದರು). ಎರೆಡು ಮೂರು ದಿನದ ನಂತರ ಲಕ್ಷ ಗೋವುಗಳನ್ನೂ, ಬಂಗಾರವನ್ನೂ ದಾನಮಾಡಿದರು. ೧೩ನೇ ದಿನದ ಶೌಚ ತೀರಿದ ಮೇಲೆ ಮಂತ್ರಿಗಳೆಲ್ಲರೂ ಸೇರಿ ಭರತನ ಬಳಿಬಂದು ‘ಸಿಂಹಾಸನ ಖಾಲಿಯಾಗಿರಬಾರದು. ನಿಮ್ಮ ತಂದೆಯ ಕೋರಿಕೆಯಂತೆ ನೀನು ರಾಜ್ಯಭಾರ ಮಾಡು’ ಎಂದರು.

ಭರತ ಪಟ್ಟಾಭಿಷೇಕ್ಕಾಗಿ ತಂದಿದ್ದ ಸಂಭಾರಗಳಿಗೆ ಒಂದು ಪ್ರದಕ್ಷಿಣೆ ಮಾಡಿ ಹೇಳಿದ:
“ರಾಮಃ ಪೂರ್ವೋ ಹಿ ನೋ ಭ್ರಾತಾ ಭವಿಷ್ಯತಿ ಮಹೀ ಪತಿಃ
ಅಹಂ ತು ಅರಣ್ಯೇ ವತ್ಸ್ಯಾಮಿ ವರ್ಷಾಣಿ ನವ ಪಂಚ ಚ
ನನಗಿಂತ ಮುಂಚೆ ಹುಟ್ಟಿದ ರಾಮ ಈ ಅಭಿಷೇಕ ಸಂಭಾರಗಳಿಂದ ಪಟ್ಟಾಭಿಷೇಕ ಮಾಡಿಕೊಳ್ಳಬೇಕು. ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ಮಾಡಬೇಕು. ಆದರೆ ರಾಮ ನಮ್ಮ ತಂದೆಯ ಆಜ್ಞೆಯಂತೆ ೧೪ ವರ್ಷಗಳ ಕಾಲ ದಂಡಕಾರಣ್ಯದಲ್ಲಿದ್ದಾನೆ. ರಾಮನಿಗೂ ನನಗೂ ವ್ಯತ್ಯಾಸವಿಲ್ಲ. ರಾಮನ ಬದಲು ನಾನು ೧೪ ವರ್ಷಗಳ ಕಾಲ ಅರಣ್ಯವಾಸ ಮಾಡುತ್ತೇನೆ. ರಾಮ ಹಿಂತಿರುಗಿ ಬಂದು ಪಟ್ಟಾಭಿಷೇಕ ಮಾಡಿಕೊಳ್ಳುತ್ತಾನೆ. ನೀವೆಲ್ಲರು ಹೋಗಿ ಶಿಲ್ಪಿಗಳನ್ನು, ಕೆಲಸಗಾರರನ್ನು ಕರೆದುಕೊಂಡು ಬಂದು ರಾಜ್ಯದಿಂದ ದಂಡಕಾರಣ್ಯದಲ್ಲಿ ರಾಮ ಎಲ್ಲಿದ್ದಾನೋ ಅಲ್ಲಿಯವರೆಗೂ ದಾರಿ ಮಾಡಿ. ನನ್ನ ಜೊತೆ ಅಯೋಧ್ಯೆಯೆಲ್ಲಾ ಹೊರಡಬೇಕು. ಇಷ್ಟು ಜನ ಕೇಳಿದರೆ ರಾಮ ಇಲ್ಲವೆನ್ನುವುದಿಲ್ಲ. ಆದ್ದರಿಂದ ಇಷ್ಟು ಜನ ಹೊರಡಲು ಸಿದ್ದಮಾಡಿ.” 


ವಾರ್ತೆ ಅಯೋಧ್ಯೆಗೆಲ್ಲಾ ಮುಟ್ಟಿ, ಅದನ್ನು ಕೇಳಿ ಎಲ್ಲರೂ ಸಂತೋಷಪಟ್ಟರು.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ