೩೮. ನಿಷಾದ ರಾಜ್ಯದಲ್ಲಿ ಭರತ

ಅರಮನೆಯಲ್ಲಿ ಭರತ ಶತ್ರುಘ್ನರು, ಇಷ್ಟೆಲ್ಲಾ ನಡೆಯುತ್ತಿದ್ದಾಗ ಲಕ್ಷ್ಮಣ ಏಕೆ ಸುಮ್ಮನಿದ್ದ? ನಮ್ಮಮ್ಮ ಮೂರ್ಖಳಂತೆ ವರಗಳನ್ನು ಕೇಳಿರಬಹುದು, ಸತ್ಯಪಾಶಕ್ಕೆ ಕಟ್ಟುಬಿದ್ದು ದಶರಥ ವರಗಳನ್ನು ಕೊಟ್ಟಿರಬಹುದು. ಆದರೆ ರಾಮ ಲಕ್ಷ್ಮಣರು ದಶರಥನನ್ನು ಎದುರಿಸಿ ರಾಜ್ಯವನ್ನು ಏಕೆ ಪಡೆಯಲಿಲ್ಲ? ಅಮ್ಮನಿಗೆ ಏಕೆ ಬುದ್ದಿ ಹೇಳಲಿಲ್ಲ?" ಎಂದು ಮಾತಾಡಿಕೊಳ್ಳುತ್ತಿದ್ದಾಗ ಕೈಕೆ ಕೊಟ್ಟಿದ್ದ ಆಭರಣಗಳನ್ನು ತೆಗೆದುಕೊಂಡು ಮಂಥರೆ ಹೋಗುತ್ತಿದ್ದಳು. ಅದನ್ನು ನೋಡಿದ ಭಟರು, ರಾಮ ಲಕ್ಷ್ಮಣರು ಅರಣ್ಯಕ್ಕೆ ಹೋಗಲು ಮಂಥರೆಯೇ ಕಾರಣವೆಂದು ಹೇಳಿದರು. ಶತ್ರುಘ್ನ ಕೋಪದಿಂದ ತನ್ನ ಕತ್ತಿಯನ್ನು ಹೊರತೆಗೆದು, ಅವಳನ್ನು ಭರತನ ಬಳಿಗೆ ಎಳೆದು ತಂದ. ಶತ್ರುಘ್ನನ ಭೀಕರ ರೂಪವನ್ನು ಕಂಡ ಕೈಕೆ ಸುಮಿತ್ರೆಯ ಅಂತಃಪುರಗಳ ಜನಗಳು ಕೌಸಲ್ಯೆ ಮಾತ್ರ ಶತ್ರುಘ್ನನನ್ನು ತಡೆಯಬಲ್ಲಳು ಎಂದು ಅವಳ ಮಂದಿರಕ್ಕೆ ಓಡಿದರು. ಮಂಥರೆಯನ್ನು ಕೊಲ್ಲಲು ಶತ್ರುಘ್ನ ಮುಂದಾಗುತ್ತಿದ್ದಾಗ ಕೈಕೆ ಅಲ್ಲಿ ಬಂದು ನಿಂತಳು.

ಆದರೆ ಭರತ ಹೇಳಿದ
ಹನ್ಯಾಂ ಅಹಂ ಇಮಾಂ ಪಾಪಾಂ ಕೈಕೇಯಾಂ ದುಷ್ಟ ವಾರಿಣೀಂ
ಯದಿ ಮಾಂ ಧಾರ್ಮಿಕೋ ರಾಮಃ ನ ಅಸೂಯೇನ್ ಮಾತೃ ಘಾತಕಂ
ಶತ್ರುಘ್ನ ಮಂಥರೆಯನ್ನೇಕೆ ಕೊಲ್ಲುತ್ತೀಯ? ಮಂಥರೆಯ ಮಾತು ಕೇಳಿ ಇಷ್ಟೆಲ್ಲಾ ಉಪದ್ರವ ಕೊಟ್ಟದ್ದು ಕೈಕೆ. ನನಗೆ ಅವಳನ್ನು ಕೊಲ್ಲಬೇಕೆನಿಸುತ್ತಿದೆ. ಆದರೂ ಮಾತೃಘಾತಕನೆಂದು ರಾಮ ನನ್ನ ಬಳಿ ಮಾತಾಡುವುದನ್ನು ಬಿಡುತ್ತಾನೆಂಬ ಭಯದಿಂದ ಸುಮ್ಮನಿದ್ದೇನೆ. ಅವಳನ್ನೇ ಬಿಟ್ಟಮೇಲೆ ಇವಳೊಂದು ಲೆಕ್ಕವೇ! ಇವಳನ್ನು ಕೊಂದರೂ ಸ್ತ್ರೀಯನ್ನು ಕೊಂದೆವೆಂದು ರಾಮ ನಮ್ಮನ್ನು ನೋಡದೆ ಇರಬಹುದು. ರಾಮ ನೋಡದಿದ್ದರೆ ನಾವು ಇರಲಾಗುವದಿಲ್ಲ. ಇವಳನ್ನು ಬಿಟ್ಟುಬಿಡು."

ಭರತಸ್ಯ ವಚಃ ಶ್ರುತ್ವಾ ಶತೃಘ್ನಃ ಲಕ್ಷ್ಮಣ ಅನುಜಃ
ನ್ಯವರ್ತತ ತತಃ ರೋಷಾತ್ ತಾಂ ಮುಮೋಚ ಚ ಮಂಥರಾಂ
ಮಾತುಗಳನ್ನು ಕೇಳಿ ಲಕ್ಷ್ಮಣನ ತಮ್ಮನಾದ ಶತ್ರುಘ್ನ ಅವಳನ್ನು ಬಿಟ್ಟುಬಿಟ್ಟ.

ಮರುದಿನ ವಸಿಷ್ಠರು ಸಾಮಂತ ರಾಜರು, ಪುರೋಹಿತರು ಕೂಡಿದ ದೊಡ್ಡ ಸಭೆ ಸೇರಿಸಿದರು. ಅಲ್ಲಿಗೆ ಭರತನೂ ಬಂದ. ವಸಿಷ್ಠರು ಅವನನ್ನು ಕುರಿತು, "ನಿನ್ನ ತಂದೆ ದಶರಥ ಮಹಾರಾಜ ನೀನು ರಾಜ್ಯಭಾರ ಮಾಡಬೇಕೆಂದು ನಿರ್ಣಯಿಸಿ ಹೋಗಿದ್ದಾರೆ. ಅವರಿದ್ದ ಕಾಲವೂ ಧರ್ಮದಿಂದ ಪರಿಪಾಲನೆ ಮಾಡಿದ್ದಾರೆ. ಚಂದ್ರನನ್ನು ಬೆಳದಿಂಗಳು ಬಿಡದಂತೆ ರಾಮ ಪುತ್ರಧರ್ಮವನ್ನು ಬಿಡದೆ ಕಾಡಿಗೆ ಹೋಗಿದ್ದಾನೆ. ನೀನು ನಿನ್ನ ಧರ್ಮವನ್ನು ಪಾಲಿಸಿ ಪಟ್ಟಾಭಿಷೇಕ ಮಾಡಿಕೊ. ಜಲಕಲಶಗಳನ್ನು ತರಿಸಿದ್ದೇನೆ. ಭದ್ರಪೀಠ ಸಿದ್ಧವಾಗಿದೆ. ಉತ್ತಮಾಶ್ವ, ಗಜಗಳು ಸಿದ್ಧವಾಗಿವೆ" ಎಂದು ಹೇಳಿದರು.

ಆದರೆ ಭರತ, "ವಸಿಷ್ಠರೇ! ನೀವು ಹೇಳುತ್ತಿರುವುದೇನು? ನಾನೂ ವೇದಗಳನ್ನು ಅಭ್ಯಸಿದ್ದೇನೆ. ನನಗೂ ಧರ್ಮ ತಿಳಿದಿದೆ. ಬೇರೆಯವರ ರಾಜ್ಯವನ್ನು ಅಪಹರಿಸುವ ಕಳ್ಳನಂತೆ ನೀವು ನನ್ನನ್ನು ನೋಡುತ್ತಿದ್ದೀರಾ? ರಾಜ್ಯ ರಾಮನದು. ನೀವು ಯಾರು  ನನಗೆ ಅದನ್ನು ಕೊಡುವುದಕ್ಕೆ? ನಾನು ಯಾರು ತೆಗೆದುಕೊಳ್ಳುವುದಕ್ಕೆ? ರಾಜ್ಯಕ್ಕೆ, ನನಗೆ, ಎಲ್ಲರಿಗೂ ರಾಮನೇ ರಾಜ" ಎಂದಾಗ ವಸಿಷ್ಠರಿಗೆ ಮನಸ್ಸಿನಲ್ಲೇ ತುಂಬಾ ಸಂತೋಷವಾಯಿತು.

ಮಾತು ಕೇಳಿದ ಉಳಿದವರೆಲ್ಲರೂ ಸಂತೋಷಿಸಿ, "ಭರತ ತುಂಬಾ ಸಂತೋಷ. ಇಕ್ಷ್ವಾಕು ವಂಶದಲ್ಲಿ ಎಂತಹ ಮಕ್ಕಳು ಹುಟ್ಟಬೇಕೋ ಅಂತಹ ಮಕ್ಕಳೇ ಹುಟ್ಟಿದ್ದಾರೆ. ಒಬ್ಬನನ್ನು ಮೀರಿಸಿದ ಶೀಲ ಮತ್ತೊಬ್ಬನದು. ನಿಮ್ಮನ್ನು ನೋಡಿದ ನಾವೇ ಅದೃಷ್ಟವಂತರು" ಎಂದು ಹೊಗಳಿದರು.

ಭರತ: "ನಾನು ನೆನ್ನೆಯೇ ಆದೇಶಿಸಿದ್ದೇನೆ. ಸ್ವಲ್ಪ ಪರಿವಾರ ಈಗಾಗಲೇ ಹೊರಟು ರಾಮನಿರುವ ಅರಣ್ಯಕ್ಕೆ ದಾರಿ ಮಾಡುತ್ತಿದ್ದಾರೆ. ನಾವೂ ಹೊರಟು ರಾಮನನ್ನು ದರ್ಶಿಸಿ ಅವನನ್ನು ಮರಳಿ ಕರೆತರೋಣ."

ಎಲ್ಲರೂ ರಾಮನನ್ನು ತಲುಪಲು ಅಯೋಧ್ಯೆಯಿಂದ ಹೊರಟರು. ಆದರೆ, ಎಲ್ಲರಿಗಿಂತ ಮೊದಲು ಕೈಕೇಯಿ ಹೊರಟಳು. ತಾನು ಯಾರಿಗಾಗಿ ಕೆಲಸವನ್ನು ಮಾಡಿದಳೋ, ಭರತನೇ ತಿರಸ್ಕರಿಸಿದ ಮೇಲೆ ಅವಳನ್ನು ಆವರಿಸಿದ್ದ ಮೋಹ ಹೊರಟು ಹೋಗಿತ್ತು. ತನ್ನ ತಪ್ಪನ್ನು ಅರಿತುಕೊಂಡಿದ್ದಳು.

ಕೆಲವು ಲಕ್ಷ ಮಂದಿ ಸೈನ್ಯದೊಂದಿಗೆ ಹೊರಟ ಅವರು ಗಂಗಾ ನದಿ ತಟವನ್ನು ಸೇರಿದರು. ಅಲ್ಲಿ ನಿಷಾದ ರಾಜ ಗುಹ ಅವರನ್ನು ನೋಡಿದಾಗ ಒಂದು ಸಮುದ್ರವೇ ಬಂದಂತೆ ಕೋವಿದಾರ ವೃಕ್ಷ ಚಿನ್ಹೆಯಿರುವ ಸೈನ್ಯವು ಬಂದು ನಿಂತಿತ್ತು!

ಗುಹ ತನ್ನ ಬಂಧುಗಳನ್ನೂ, ಸೈನ್ಯವನ್ನೂ, ಯುವಕರನ್ನೂ ಕರೆದು, "ಭರತ ಇಷ್ಟು ಸೈನ್ಯದೊಂದಿಗೆ ಬಂದಿದ್ದಾನೆಂದರೆ, ಖಚಿತವಾಗಿಯೂ ನಮ್ಮನ್ನೆಲ್ಲಾ ಕೊಲ್ಲಲು ಬಂದಿರಬಹುದು, ಇಲ್ಲವೇ ೧೪ ಸಂವತ್ಸರಗಳ ನಂತರ ರಾಮನು ಮರಳಿ ಅಯೋಧ್ಯೆಗೆ ಬಂದಾಗ ಆತನ ಪ್ರರಾಕ್ರಮದ ಮುಂದೆ ಭರತ ನಿಲ್ಲನಾರನಾದ್ದರಿಂದ ಅವರು ಅಡವಿಯಲ್ಲಿ ಇರುವಾಗಲೇ ರಾಮ ಲಕ್ಷ್ಮಣರನ್ನು ಸಂಹರಿಸಲು ಬಂದಿರಬಹುದು. ರಾಮ ನನಗೆ ಪ್ರಾಣಮಿತ್ರ. ಇಂಥಹ ದೊಡ್ಡ ಸೈನ್ಯವನ್ನು ನಾವು ಎದುರಿಸಲಾರೆವು. ಆದರೆ ನಮ್ಮ ಸಾಹಾಯವಿಲ್ಲದೆ ಇಷ್ಟು ದೊಡ್ಡ ಸೈನ್ಯ ಗಂಗೆಯನ್ನು ದಾಟರಾಲದು. ಅದಕ್ಕಾಗಿ ೫೦೦ ದೋಣಿಗಳನ್ನು ಸಿದ್ದ ಮಾಡಿ. ಪ್ರತಿ ದೋಣಿಯಲ್ಲಿಯೂ ೧೦೦ ಮಂದಿ ಸೈನಿಕರು ಕವಚವನ್ನು ತೊಟ್ಟು ಆಯುಧಗಳೊಂದಿಗೆ ನಿಲ್ಲಲಿ. ನಾನು ಭರತನ ಬಳಿ ಹೋಗಿ ರಾಮನನ್ನು ಭೇಟಿ ಮಾಡಲು ಬಂದಿದ್ದಾನೆಯೇ ಅಥವಾ ಯುದ್ಧ ಮಾಡಲು ಬಂದಿದ್ದಾನೆಯೇ ತಿಳಿದುಕೊಂಡು ಬರುತ್ತೇನೆ. ಒಂದು ವೇಳೆ ರಾಮನನ್ನು ಸಂಹರಿಸಲು ಬಂದಿದ್ದಾದರೆ, ದೋಣಿಗಳಲ್ಲಿ ನದಿ ದಾಟಿಸುತ್ತೇವೆಂದು ಹೇಳಿ ಗಂಗೆಯ ಮಧ್ಯದಲ್ಲೇ ಮುಳುಗಿಸೋಣ. ಒಂದುವೇಳೆ ರಾಮನನ್ನು ಭೇಟಿ ಮಾಡಲು ಭರತ ಬಂದಿದ್ದಾದರೆ, ರಾಮನಿರುವ ಜಾಗವನ್ನು ತಿಳಿಸಿ ನಾನೂ ಅವರೊಂದಿಗೆ ಹೋಗುತ್ತೇನೆ. ನೀವು ಸಿದ್ದವಾಗಿರಿಎಂದು ಆದೇಶಿಸಿ ಭರತನ ಕಡೆ ಹೊರಟ.

ಗುಹ ಸ್ವಲ್ಪ ಮಾಂಸ, ಹೂಗಳು, ಧಾನ್ಯಗಳು, ಕಂದ ಮೂಲಗಳು, ಜೇನು ಮುಂತಾದವನ್ನು ತೆಗೆದುಕೊಂಡು ಭರತ ಬಿಡದಿ ಮಾಡಿದ್ದ ಗೃಹದ ಬಳಿ ಹೋದ. ಅವನು ಬರುವುದನ್ನು ಕಂಡ ಸುಮಂತ್ರ ಒಳಗೆ ಹೋಗಿ ಭರತನಿಗೆ, "ಭರತಾ! ಗುಹ ಬರುತ್ತಿದ್ದಾನೆ.  ಅವನಿಗೆ ರಾಮನೆಲ್ಲಿರುವನೆಂದು ತಿಳಿದಿದೆ. ರಾಮನಿಗೆ ಗುಹನ ಮೇಲೆ ಅಪಾರವಾದ ಪ್ರೀತಿ. ಗುಹನಿಗೂ ರಾಮನ ಮೇಲೆ ಅಪಾರವಾದ ಭಕ್ತಿ " ಎಂದು ಹೇಳಿದಾಗ ಭರತ ಗುಹನನ್ನು ಬಿಡದಿಯೊಳಗೆ ಪ್ರವೇಶ ಮಾಡಲು ಬಿಟ್ಟ.

ಯದಾ ತುಷ್ಟಃ ತು ಭರತಃ ರಾಮಸ್ಯ ಇಹಾ ಭವಿಷ್ಯತಿ |
ಸಾ ಇಯಂ ಸ್ವಸ್ತಿಮಯಾ ಸೇನಾ ಗಂಗಾ ಅದ್ಯ ತರಿಷ್ಯತಿ ||
ಒಳಗೆ ಬಂದ ಗುಹ ತಾನು ತಂದ ಪದಾರ್ಥಗಳನ್ನು ಕೊಟ್ಟು, "ನೀನು ದಶರಥ ಮಹಾರಾಜನಿಂದ ರಾಜ್ಯವನ್ನು ಪಡೆದಿರುವೆ. ಇನ್ನೂ ನಿನಗೆ ತೃಪ್ತಿಯಾಗದೆ ರಾಮನನ್ನು ಕೊಲ್ಲಲು ಬಂದೆಯಾ? ಅಥವಾ ರಾಮನನ್ನು ಭೇಟಿ ಮಾಡಲು ಬಂದೆಯಾ? ನನ್ನ ಮನಸ್ಸಿನಲ್ಲಿ ಅನುಮಾನವಿದೆ. ನಿಜ ಹೇಳು ಭರತ, ಇಲ್ಲಿಗೆ ಬಂದದ್ದೇಕೆ? " ಎಂದ.
ಭರತ, "ನೀನು ಆಡಿದ ಮಾತು ನನಗೆ ಬಹಳ ನೋವು ಉಂಟು ಮಾಡಿದರೂ, ನಿನ್ನ ಅಮಾಯಕತ್ವ ನನಗೆ ತಿಳಿದಿದೆ. ನಾನು ಗಂಗೆಯನ್ನು ದಾಟಿ ಭರದ್ವಾಜಶ್ರಮಕ್ಕೆ ಹೋಗಿ, ಆಶ್ರಮದ ಬಳಿ ಇರುವ ರಾಮನನ್ನು ಭೇಟಿಯಾಗಬೇಕೆಂದಿರುವೆ" ಎಂದ.
"ರಾಮನನ್ನು ಭೇಟಿಯಾಗಲು ಬಂದ ನಿನ್ನ ಹಿಂದೆ ಇಷ್ಟು ದೊಡ್ಡ ಸೈನ್ಯವೇಕೆ?"
"ಒಂದು ರಾಜ್ಯಕ್ಕಾಗಿ ತಮ್ಮ ಅಣ್ಣನನ್ನು ಕೊಲ್ಲುವಂತಹ ದುರಾಲೋಚನೆ ಯಾರಿಗೂ ಬರದಿರಲಿ. ತಮ್ಮ ಅಣ್ಣನ ಬಗ್ಗೆ ಏನಾದರೂ ಯೋಚಿಸಿದರೆ ಅದು ಅಣ್ಣನ ಕಾಲಿಗೆ ನಮಸ್ಕರಿಸಲು ಮಾತ್ರ ಎಂಬ ಸೌಜನ್ಯ ಎಲ್ಲರಲ್ಲಿ ಬರಲಿ.
"ಇಕ್ಷ್ವಾಕು ವಂಶದಲ್ಲಿ ಜನಿಸಿದ ನಿನಗೆ ಮಾತ್ರವೇ ಇಂಥ ಮಾತಾಡಲು ಸಾಧ್ಯ. ನನಗೆ ಬಹಳ ಸಂತೋಷವಾಗುತ್ತಿದೆ. ನೀವಿಬ್ಬರೂ ಸೇರಿದಾಗ ಕಣ್ತುಂಬಿಕೊಳ್ಳಲು ಆತುರನಾಗಿದ್ದೇನೆ. ನಿಮ್ಮನ್ನು ಗಂಗೆಯನ್ನು ದಾಟಿಸಿ, ನಾನೂ ನಿಮ್ಮೊಂದಿಗೆ ಬರುತ್ತೇನೆ. ರಾಮ ಇಲ್ಲೇ ತಂಗಿದ್ದ. ನನ್ನನ್ನು ಅವನ ತಲೆಯ ಮೇಲೆ ಆಲದ ಹಾಲನ್ನು ಹಾಕಲು ಹೇಳಿದ. ಜಟೆಯನ್ನು ಧರಿಸಿ, ನಾರು ಸೀರೆಯನ್ನು ಉಟ್ಟು ಹೊರಟು ಹೋದ.

ರಾತ್ರಿ ಭರತ ರಾಮನ ಬಗ್ಗೆ ಅಲೋಚಿಸುತ್ತಾ, ತನ್ನಿಂದಲೇ ರಾಮ ಇಷ್ಟು ಕಷ್ಟ ಪಡುತ್ತಿದ್ದಾನೆಂದು ಬಹಳ ನೊಂದು, ನಿದ್ದೆ ಬರದೆ ಗುಹನನ್ನು ಕರೆದು ರಾಮ ಅಲ್ಲಿ ತಂಗಿದ್ದ ಬಗ್ಗೆ ವಿಚಾರಿಸಿದ. ಗುಹ,ರಾಮ ಇಲ್ಲಿಗೆ ಬಂದು ಇಂಗುದಿ ವೃಕ್ಷದ ಕೆಳಗೆ ಕೂತಿದ್ದ. ನಾನು ಅವನಿಗೆ ಅನ್ನ, ಕಂದಮೂಲಗಳು, ಜೇನು ಮುಂತಾದವುಗಳನ್ನು ತೆಗೆದುಕೊಂಡು ಹೋಗಿ ಕೊಟ್ಟೆ. ರಾಮ,ನಾನು ಕ್ಷತ್ರಿಯ. ಒಬ್ಬರಿಗೆ ಕೊಡಬೇಕೇ ಹೊರತು ಬೇರೊಬ್ಬರಿಂದ ಪಡೆಯಬಾರದು. ನಮ್ಮ ತಂದೆಯವರಿಗೆ ಇಷ್ಟವಾದ ಕುದುರೆಗಳಿಗೆ ಸ್ವಲ್ಪ ಆಹಾರ, ನೀರು ಕೊಡು. ಅವು ಕುಡಿದು ಮಲಗಿ ಕೊಳ್ಳಲಿಎಂದ. ನಾನು ಗಂಗೆಯ ನೀರು ತಂದು ಕೊಟ್ಟೆ. ಸೀತಾರಾಮರು ಕುಡಿದು ಮಿಕ್ಕ ನೀರನ್ನು ಲಕ್ಷ್ಮಣ ಕಣ್ಣಿಗೆ ಒತ್ತಿಕೊಂಡು ಕುಡಿದ. ನಾನು ರಾಮನನ್ನು ಒಳಗೆ ಬಂದು ಹಂಸತೂಲಿಕಾತಲ್ಪದ ಮೇಲೆ ಮಲಗಲು ಹೇಳಿದೆ. ಆದರೆ ರಾಮ,ನಾನೀಗ ತಪಸ್ವಿಯ ಹಾಗೆ ಬದುಕ ಬೇಕುಎಂದು ಹೇಳಿ ಲಕ್ಷ್ಮಣ ತಂದ ದರ್ಭೆ ಹುಲ್ಲಿನ ಮೇಲೆ ಮಲಗಿದ. ರಾಮ ಮಲಗುವ ಮೊದಲು ಲಕ್ಷ್ಮಣ ಸೀತಾರಾಮರ ಪಾದಗಳನ್ನು ತೊಳೆದು ಒದ್ದೆ ಬಟ್ಟೆಯಿಂದ ಒರೆಸಿದ. ಸೀತೆ ರಾಮನ ಭುಜದ ಮೇಲೆ ತಲೆಯಿಟ್ಟು ಮಲಗಿದಳು. ‘ನಾನು ಕಾವಲು ಕಾಯುತ್ತೇನೆ, ನೀನು ಮಲಗು’ ಎಂದು ಲಕ್ಷ್ಮಣನಿಗೆ ಹೇಳಿದೆ. ಆದರೆ ಲಕ್ಷ್ಮಣ,ಇಂಥ ದಾರುಣವಾದ ದೃಶ್ಯ ನೋಡಿದ ಮೇಲೆ ಹೇಗೆ ನಿದ್ದೆ ಬರುತ್ತದೆ’ ಎಂದು ಕಣ್ಣೀರಿಟ್ಟ. ಇಲ್ಲಿ ನೋಡು! ಹುಲ್ಲಿನ ಮೇಲೆಯೇ ಸೀತಾರಾಮರು ಮಲಗಿದ್ದರು" ಎಂದು ರಾಮ ಲಕ್ಷ್ಮಣರು ಅಲ್ಲಿಗೆ ಬಂದದ್ದನ್ನು, ಅವರು ಅಲ್ಲಿ ಮಾಡಿದ ಕೆಲಸಗಳನ್ನು, ತಂಗಿದ, ಮಲಗಿದ ಜಾಗ ಎಲ್ಲವನ್ನೂ ವಿವರವಾಗಿ ತಿಳಿಸಿದ.

ಭರತ ಹುಲ್ಲಿನ ಬಳಿ ಹೋಗಿ ನೋಡಿದ. ಒಂದೆಡೆ ಹುಲ್ಲು ಗಟ್ಟಿಯಾಗಿ ಒತ್ತಿಕೊಂಡು ಭೂಮಿಗೆ ಅಂಟಿ ಕೊಂಡಿರುವುದನ್ನು ಗಮನಿಸಿದ. ಅದೇ ರಾಮ ಮಲಗಿದ ಜಾಗವೆಂದು ದುಃಖಪಟ್ಟ.
ಮನ್ಯೇ ಸಾಭರಣ ಸುಪ್ತಾ ಸೀತಾ ಅಸ್ಮಿನ್ ಶಯನೇ ತದಾ
ತತ್ರ ತತ್ತ ಹಿ ದೃಶ್ಯಂತೇ ಸಕ್ತಾಃ ಕನಕ ಬಿಂದವಃ
ಮನ್ಯೇ ಸಾಧಾರಣಾ ಸುಪ್ತಾ ಸೀತಾ ಅಸ್ಮಿನ್ ಶಯನೇ ತದಾ
ತತ್ರ ತತ್ರ ಹಿ ದೃಶ್ಯಂತೇ ಸಕ್ತಾಃ ಕನಕ ಬಿಂದವಃ

ಸೀತೆಯ ಸೀರೆಯ ಬಂಗಾರದ ಎಳೆ ಹುಲ್ಲಿಗೆ ಅಂಟುಕೊಂಡಿತ್ತು. ರಾಜಭವನದಲ್ಲಿ ಸುಖವಾಗಿರಬೇಕಾದವರು ಹಾಗೆ ಹುಲ್ಲಿನ ಮೇಲೆ ಮಲಗಿದ್ದನ್ನು ತಿಳಿದು ಭಾರತನಿಗೆ ತುಂಬಾ ದುಃಖವಾಯಿತು. ತಕ್ಷಣವೇ, ಕ್ಷಣದಿಂದ ೧೪ ವರ್ಷಗಳ ಕಾಲ ನಾನೂ ರೇಷ್ಮೆಯನ್ನು ಉಡುವುದಿಲ್ಲ. ನಾರು ಮಾಡಿ, ಜಟಾಧಾರಿಯಾಗಿ ಬದುಕುತ್ತೇನೆ. ನಾನೂ ಗೆಡ್ಡೆ ಗೆಣಸುಗಳನ್ನೇ ತಿಂದು ಬದುಕುತ್ತೇನೆ" ಎಂದು ಪ್ರತಿಜ್ಞೆ ಮಾಡಿದ. ಆ ರಾತ್ರಿ ನಾರುಮಡಿಯುಟ್ಟು ಹುಲ್ಲಿನ ಹಾಸಿಗೆಯ ಮೇಲೆಯೇ ಮಲಗಿದ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ