೩೯. ಭರತನಿಗೆ ಭರದ್ವಾಜರ ಅತಿಥ್ಯ
ಮರುದಿನ ಎಲ್ಲರೂ ಗಂಗೆಯನ್ನು ದಾಟಿ ಮುಂದಕ್ಕೆ ಹೊರಟರು. ಸ್ವಲ್ಪ ದೂರ ನಡೆದ ಮೇಲೆ ಅವರಿಗೆ ಭರದ್ವಾಜರ ಆಶ್ರಮ ಸಿಕ್ಕಿತು. ಸೈನ್ಯವನ್ನು ದೂರದಲ್ಲಿರಿಸಿ ಭರತ ಶತ್ರುಘ್ನರು ವಸಿಷ್ಠರ ಜೊತೆ ಆಶ್ರಮದೊಳಗೆ ಹೋದರು.
(ಒಮ್ಮೆ ಭರದ್ವಾಜರು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದರು. ಅವರ ತಪಸ್ಸಿಗೆ ಮೆಚ್ಚಿ ಬ್ರಹ್ಮ ಏನು ವರಬೇಕೆಂದು ಕೇಳಿದಾಗ ಅವರು ವೇದಗಳನ್ನು ಅಧ್ಯಯನ ಮಾಡಲು ೧೦೦ ವರ್ಷಗಳ ಆಯಸ್ಸು ಕೇಳಿದರು. ಬ್ರಹ್ಮದೇವರು ಸರಿ ಎಂದು ವರಕೊಟ್ಟರು. ಇದೇ ರೀತಿ ಭರದ್ವಾಜರು ಮೂರು ಬಾರಿ ಆಯಸ್ಸನ್ನು ಪಡೆದರು. ನಾಲ್ಕನೇ ಬಾರಿಯೂ ತಪಸ್ಸು ಮಾಡಿದಾಗ ಬ್ರಹ್ಮದೇವರು, ‘ವೇದಗಳು ಪರ್ವತದಷ್ಟು ಎತ್ತರ. ನೀನು ೩೦೦ ವರ್ಷ ಮಾಡಿದ ಅಧ್ಯಯನ ಅದರ ಮುಂದೆ ಸ್ವಲ್ಪವೇ! ವೇದ ಅನಂತ. ಅದನ್ನು ಎಷ್ಟು ಓದಿದರೂ ಇನ್ನೂ ಇರುತ್ತದೆ. ಆದ್ದರಿಂದ ನೀನು ಸಿಕ್ಕಿದರಲ್ಲಿ ತೃಪ್ತಿ ಪಡು’ ಎಂದರು. ಈ ರೀತಿ ಬ್ರಹ್ಮನಿಂದ ಆಯಸ್ಸನ್ನು ಪಡೆದ ಮಹಾನುಭಾವರು ಭರದ್ವಾಜರು.)
ಭರದ್ವಾಜರು ವಸಿಷ್ಠರಿಗೆ ಅರ್ಘಪಾದ್ಯಗಳನ್ನು ಕೊಟ್ಟು ಸತ್ಕರಿಸಿ ಕುಶಲ ಪ್ರಶ್ನೆಗಳನ್ನು ಕೇಳಿದರು. ನಂತರ ಭರತನನ್ನು ಅಲ್ಲಿಗೆ ಬಂದ ಕಾರಣವನ್ನು ಕೇಳಿದಾಗ, ಭರತ ರಾಮನ ದರ್ಶನಕ್ಕಾಗಿ ಬಂದನೆಂದು ಉತ್ತರಿಸಿದ. ಭರದ್ವಾಜರು, “ನಿಮ್ಮ ತಂದೆಯವರು ೧೪ ವರ್ಷಗಳ ಕಾಲ ರಾಮನನ್ನು ಕಾಡಿಗೆ ಕಳಿಸಿ ನಿನಗೆ ರಾಜ್ಯ ಕೊಟ್ಟಿದ್ದಾರೆ. ಆದರೂ ನೀನು ಇಷ್ಟು ಸೈನ್ಯ ತೆಗೆದುಕೊಂಡು ಬಂದಿರುವುದು ನನಗೆ ಸಂದೇಹ ತರಿಸುತ್ತಿದೆ. ನೀನು ರಾಮನ್ನು ಕೊಲ್ಲಲು ಬಂದಿರುವೆಯಾ?” ಎಂದು ಕೇಳಿದರು.
ಭರದ್ವಾಜರು ಕೇಳಿದ ಈ ಪ್ರಶ್ನೆಗೆ ಭರತನ ಕಣ್ಣಲ್ಲಿ ನೀರು ಬಂತು. ಅವನು,
“ಹತೋ ಅಸ್ಮಿ ಯದಿ ಮಾಂ ಏವಂ ಭಗವಾನ್ ಅಪಿ ಮನ್ಯತೇ
ಮತ್ತೋ ದೋಷಂ ಆಷಂಕರೇ ನ ಏವಂ ಮಾಂ ಅನುಷಾಧಿ ಹಿ
ಮಹಾನುಭಾವ! ಇದು ನನ್ನ ದೌರ್ಭಾಗ್ಯ! ನಾನು ಎಲ್ಲಿ ಹೋದರೂ ರಾಮನನ್ನು ಕೊಲ್ಲಲು ಹೋಗುತ್ತಿರುವೆನೆಂದೇ ಭಾವಿಸುತ್ತಾರೆ. ನಾನು ರಾಮನನ್ನು ಕೊಲ್ಲಲು ಬರಲಿಲ್ಲ. ನಿಮ್ಮ ಮಾತು ನನ್ನನ್ನು ಕೊಂದಿತು! ಗುಹ ಈ ಮಾತಾಡಿದಾಗ ಸಹಿಸಿಕೊಂಡೆ. ಆದರೆ ನಿಮ್ಮಂತಹ ಮಹರ್ಷಿಗಳೇ ಈ ಮಾತು ಆಡಿದರೆ ನಾನು ಬದುಕಿದ್ದೂ ಏನು ಪ್ರಯೋಜನ? ನಾನು ಎಂದಿಗೂ ರಾಜ್ಯವನ್ನಾಗಲಿ, ರಾಮನ ಅರಣ್ಯವಾಸವನ್ನಾಗಲೀ ಬಯಸಲಿಲ್ಲ. ನನ್ನ ಮೇಲಿನ ವಿಪರೀತವಾದ ಪ್ರೀತಿಯಿಂದ ಅಮ್ಮ ಆ ಎರೆಡು ವರ ಕೇಳಿದಳು. ನಾನು ರಾಮನನ್ನು ಕೊಲ್ಲುವಷ್ಟು ಕ್ರೂರಿಯಲ್ಲ ಮಹರ್ಷಿ” ಎಂದು ಹೇಳಿ ಭರದ್ವಾಜರ ಕಾಲಿಗೆ ಬಿದ್ದು ಅತ್ತ.
ಭರದ್ವಾಜರು, ”ಭರತ ನೀನೇನೆಂಬುದು ನನಗೆ ಗೊತ್ತು. ಆದರೂ ನಿನ್ನ ಶೀಲವನ್ನು ಲೋಕಕ್ಕೆ ತಿಳಿಯಪಡಿಸಲು ಹಾಗೆ ಕೇಳಿದೆ. ನೀನು ನಿನ್ನ ಮಾತಿನ ಮೇಲೆ ನಿಲ್ಲು" ಎಂದು ಆಶೀರ್ವದಿಸಿ, “ಈ ರಾತ್ರಿ ನನ್ನ ಆತಿಥ್ಯ ಸ್ವೀಕರಿಸು" ಎಂದರು.
"ನೀವು ನನಗೆ ಅರ್ಘ್ಯ ಪಾದ್ಯ ಕೊಟ್ಟಿದ್ದೀರಿ. ನನಗಿನ್ನೇನು ಬೇಡ.” ಭರತ ನಿರಾಕರಿಸಿದ.
"ನಿನ್ನ ಸೈನ್ಯವೆಲ್ಲಿ?"
"ಸೈನ್ಯವನ್ನು ಇಲ್ಲಿಗೆ ತಂದರೆ ನಿಮ್ಮ ಆಶ್ರಮ ಹಾಳಾಗುತ್ತದೆಂದು ಇಲ್ಲಿಗೆ ತರಲಿಲ್ಲ."
"ಸೈನ್ಯವನ್ನು ಅಷ್ಟು ದೂರ ಏಕಿಟ್ಟೆ ಭರತ? ಇಂದು ನೀನು ನನ್ನ ಆತಿಥ್ಯವನ್ನು ಸ್ವೀಕರಿಸಲೇಬೇಕು. ನಿನ್ನ ಆನೆ, ಕುದುರೆ, ಒಂಟೆ, ಸೈನ್ಯ, ಪುರೋಹಿತರು, ಮಂತ್ರಿಗಳು, ನಿನ್ನ ಅಮ್ಮಂದಿರಿಗೆ ಕೊಡಬೇಕಾದ ಆತಿಥ್ಯವನ್ನು ಕೊಡುತ್ತೇನೆ" ಎಂದು ಹೇಳಿ ಭರದ್ವಾಜರು ಆಚಮನ ಮಾಡಿ ವಿಶ್ವಕರ್ಮ, ತ್ವಷ್ಟರನ್ನು ಪ್ರಾರ್ಥಿಸಿ,
“ಆಹ್ವಾಯ ವಿಶ್ವಕರ್ಮಾಣಂ ಅಹಂ ತ್ವಷ್ಟಾರಂ ಏವ ಚ
ಆತಿಥ್ಯಂ ಕುರ್ತುಂ ಇಚ್ಛಾಮಿ ತತ್ರ ಮೇ ಸಂವಿಧೀಯತಾಂ
ಆಹ್ವಾಯ ದೇವ ಗಂಧರ್ವಾನ್ ವಿಷ್ವಾವಸು ಹಹಾ ಹುಹೂನ್
ತಥೈವ ಅಪ್ಸರಸೋ ದೇವಿ್ ಗಂಧರ್ವಿಹೇ ಚ ಅಪಿ ಸರ್ವಷಹೇ
ಇಹ ಮೇ ಭಗವಾನ್ ಸೋಮೇ ವಿಧತಾಂ ಅನ್ನಂ ಉತ್ತಮಂ
ಭಕ್ಷ್ಯಂ ಭೋಜ್ಯಂ ಚ ಚೋಪ್ಯಂ ಚ ಲೇಹ್ಯಂ ಚ ವಿವಿಧಂ ಬಹು
ತತ್ರ ರಾಜ ಆಸನಂ ದಿವ್ಯಂ ವ್ಯಜನಂ ಛತ್ರಂ ಏವ ಚ
ಭರತೋ ಮಂತ್ರಿಭಿಹೇ ಸಾರ್ದಂ ಅಭ್ಯವರ್ತತ ರಾಜವತ್
ವಿಶ್ವಕರ್ಮ, ಇಲ್ಲಿಗೆ ರಾಜಕುಮಾರರಾದ ಭರತ ಶತ್ರುಘ್ನರು ಬಂದಿದ್ದಾರೆ. ಅವರ ಹಿಂದೆ ಮಹರ್ಷಿಗಳು, ಪುರೋಹಿತರು, ದೊಡ್ಡ ಸೇನಾಬಲವೇ ಬಂದಿದೆ. ಅವರೆಲ್ಲರಿಗೂ ತಕ್ಕುದಾದ ಭವನಗಳನ್ನು ನಿರ್ಮಿಸು!" ಎಂದರು. ಉತ್ತರಕ್ಷಣದಲ್ಲಿ ವಿಶ್ವಕರ್ಮ ಯಾರು ಯಾರಿಗೆ ಎಂತೆಂತಹ ಮನೆಗಳು ಬೇಕೋ ಅಂತಹ ಮನೆಗಳನ್ನು ನಿರ್ಮಿಸಿದ.
ನಂತರ ಭರದ್ವಾಜರು ಕುಬೇರ, ಬ್ರಹ್ಮ ದೇವರನ್ನು ಪ್ರಾರ್ಥಿಸಿ, "ನೀವಿಬ್ಬರೂ ನಿಮ್ಮ ಬಳಿಯಿರುವ ಅಪ್ಸರೆಯರನ್ನು ಕಳಿಸಿ. ಅವರ ಜೊತೆ ನಾರದ, ತುಂಬುರ, ಹುಹು ಎಂಬ ದೇವಗಾಯಕರೂ ಬರಬೇಕು. ಪಾಯಸ ಪ್ರವಹಿಸಬೇಕು. ಹುಳಿಯಾದ ಹಣ್ಣುಗಳಿಂದ, ಹಿಟ್ಟಿನಿಂದ, ಬೆಲ್ಲದಿಂದ ಮಾಡಿದ ಸುರೆ ನದಿಯಾಗಿ ಹರಿಯಬೇಕು. ಆನೆ, ಕುದುರೆ, ಒಂಟೆಗಳ ಆಹಾರ ರಾಶಿ ರಾಶಿಯಾಗಿ ಬೀಳಬೇಕು. ಪರ್ವತದಷ್ಟು ಅನ್ನ, ಅದರ ಜೊತೆ ಪಲ್ಯ, ಹುಳಿಗಳು ಬೇಕು. ಹಸಿವಾಗಲು ಹುಳಿಮೊಸರು, ತಿಂದ ಮೇಲೆ ಜೀರ್ಣವಾಗಲು ಶುಂಠಿ, ಲವಂಗ, ಇಂಗು, ಮೊಸರುಗಳು, ಔಷಧಿಗಳು ಬರಲಿ. ಎಲ್ಲರಿಗೂ ಮುಖ ತೊಳೆಯಲು ಚೂರ್ಣಗಳು, ಮೈಗೆ, ಕೂದಲಿಗೆ ಹಚ್ಚಿಕೊಳ್ಳಲು ಎಣ್ಣೆಗಳು ಬಂಗಾರದ ಪಾತ್ರೆಗಲ್ಲಿ ಬರಬೇಕು. ಅಪ್ಸರೆಯರು ಒಬ್ಬೊಬ್ಬ ಸೈನಿಕನನ್ನು ಪೀಠದ ಮೇಲೇ ಕುಳ್ಳರಿಸಿ ಮೈಯೆಲ್ಲಾ ಎಣ್ಣೆ ಹಚ್ಚಿ ನೀರು ಹಾಕಬೇಕು. ಇಲ್ಲಿರುವ ಋಷಿಗಳಿಗೆ, ಬ್ರಾಹ್ಮಣರಿಗೆ ದೊಡ್ಡದಾದ ಗಡ್ಡಗಳಿವೆ. ಅವನ್ನು ಸರಿಯಾಗಿ ಬಾಚಿಕೊಳ್ಳಲು ಬಾಚಣಿಗೆ ಬೇಕು. ಇಂದ್ರ ಸೋಮರೇ! ಇದನ್ನು ಸಿದ್ದ ಮಾಡಿ. ಈಗಿಂದೀಗಲೇ ಅಪ್ಸರೆಯರು ನಾಟ್ಯ ಮಾಡಬೇಕು. ದೊಡ್ಡ ಹಣ್ಣುಗಳಿಂದ, ಗಿಳಿಗಳಿಂದ ಕೂಡಿದ ಮರಗಳು ಬೇಕು. ಕುಬೇರನ ಚೈತ್ರರಥ ಇಲ್ಲಿಗೆ ಬರಬೇಕು. ಯಾರು ಯಾರಿಗೆ ಎಷ್ಟು ಬೇಕೋ ಅಷ್ಟು ಬಿಸಿ ನೀರು, ಉಟ್ಟುಕೊಳ್ಳಲು ಬಟ್ಟೆ, ಹಾಕಿಕೊಳ್ಳಲು ಚಪ್ಪಲಿಗಳು ಬೇಕು. ಭಾರತನಿಗಾಗಿ ಒಂದು ಭವ್ಯವಾದ ಅರಮನೆ ಸಿದ್ಧವಾಗಬೇಕು" ಎಂದು ಕೇಳಿದರು.
ಕೇಳಿದ ತಕ್ಷಣ ಎಲ್ಲವೂ ಬಂದವು. ಆನೆ, ಕುದುರೆ, ಒಂಟೆಗಳು ತಮ್ಮ ಜೀವನದಲ್ಲಿ ಎಂದಿಗೂ ತಿಂದಿರದ ಭೋಜನ ಮಾಡಿದವು. ಒಬ್ಬೊಬ್ಬ ಸೈನಿಕನಿಗೂ ನಾಲ್ಕು ನಾಲ್ಕು ಅಪ್ಸರೆಯರು ಸ್ನಾನ ಮಾಡಿಸಿದರು. ಭರತ ತನ್ನ ಮಂತ್ರಿಗಳ ಜೊತೆ ಅರಮನೆ ಪ್ರವೇಶ ಮಾಡಿದ. ಅಲ್ಲಿ ಒಂದು ದೊಡ್ಡ ವೇದಿಕೆ, ಬಂಗಾರದ ಸಿಂಹಾಸನ, ಒಂದು ದೊಡ್ಡ ಛತ್ರಿ ಸಿದ್ದವಾಗಿತ್ತು. ಭರತ ಒಳಗೆ ಹೋಗಿ ಸಿಂಹಾಸನದ ಮೇಲೆ ರಾಮನನ್ನು ಭಾವಿಸಿ ಅದರ ಪಾದಪೀಠಕ್ಕೆ ತಲೆ ತಾಗಿಸಿ ನಮಸ್ಕಾರ ಮಾಡಿದ. ಚಾಮರಗಳನ್ನು ಬಿಸಾಕಿ ಮಂತ್ರಿಯ ಜಾಗದಲ್ಲಿ ಕುಳಿತುಕೊಂಡ.
ಸಭೆಗೆ ರಂಭೆ ಮೊದಲ್ಲದ ಅಪ್ಸರೆಯರು ಬಂದು ನಾಟ್ಯ ಮಾಡಿದರು. ನಾರದ, ತುಂಬುರರು ಗಾನ ಮಾಡಿದರು. ಭರತ ಏನಾದರೂ ಕುಡಿಯಲು ಚೆನ್ನಾಗಿರುತ್ತಿತ್ತು ಎಂದುಕೊಂಡ ತಕ್ಷಣ ಪಾಯಸ ನದಿಯಾಗಿ ಹರಿಯಿತು. ಎಲ್ಲರೂ ಬಂಗಾರದ ಪಾತ್ರೆಗಳಿಂದ ಪಾಯಸ ಕುಡಿದರು. ಸೈಕರೆಲ್ಲ ತಿಂದು, ಕುಡಿದು ಮಲಗಿದರು. ಅಲ್ಲಿನ ವೈಭವವನ್ನು ಕಂಡು ಅವರಿಗೆ ಅಯೋಧ್ಯೆಯೂ ಬೇಡ, ಚಿತ್ರಕೂಟವೂ ಬೇಡ ಎನಿಸಿಬಿಟ್ಟಿತು. ಸೈನ್ಯದ ಪ್ರಾಣಿಗಳೂ ಸಂತೋಷಪಟ್ಟವು.
ಮರುದಿನ ಬೆಳಗಾಗುವಷ್ಟರಲ್ಲಿ ಎಲ್ಲವೂ ಅದೃಶ್ಯವಾಗಿದ್ದವು. ಭರತ ತನ್ನ ತಾಯಿಯರ ಜೊತೆ ಭಾರದ್ವಾಜರಿಗೆ ನಮಸ್ಕಾರ ಮಾಡಿದ. ಭರದ್ವಾಜರು ಅವರನ್ನು ಪರಿಚಯ ಮಾಡಲು ಹೇಳಿದಾಗ ಭರತ, "ಇವರು ಸುಮಿತ್ರೆ. ಸಿಂಹದ ನಡೆಯುಳ್ಳವರು. ಶತ್ರುಘ್ನ ಲಕ್ಷ್ಮಣರ ತಾಯಿ. ಇವರು ಕೌಸಲ್ಯೆ. ಅದಿತಿ ಧಾತನನ್ನು ಪಡೆದಂತೆ ಇವರು ರಾಮನನ್ನು ಪಡೆದಿದ್ದಾರೆ. ರಾಮ ಅರಣ್ಯಕ್ಕೆ ಹೋಗಲು ಕಾರಣಳಾದ, ದಶರಥನ ಮರಣಕ್ಕೆ ಕಾರಣಳಾದ, ಯಾವಾಗಲೂ ಕೋರಿಕೆಗಳನ್ನೇ ಬಯಸುವ, ಕ್ರೋಧದಿಂದ ಕೂಡಿದವಳಾದ ಈ ಕೈಕೆ ನನ್ನ ತಾಯಿ" ಎಂದ.
ಭರದ್ವಾಜರು,
“ನ ದೋಷ ಅವಗಂತವ್ಯಾ ಕೈಕೆಯಾ ತ್ವಯಾ
ರಾಮ ಪ್ರವ್ರಜನಂ ಹ್ಯೇತತ್ ಸುಖ ಉದರ್ಕಂ ಭವಿಷ್ಯತಿ
ದೇವಾನಾಂ ದಾನವಾನಾಂ ಚ ಋಷೀಣಾಂ ಭಾವಿತಾತ್ಮನಾಂ
ಹಿತಮೇವ ಭವಿಷ್ಯದ್ಧಿ ರಾಮಪ್ರವ್ರಾಜನಾದಿಹ
ಇವಳಿಂದ ರಾಮ ಅಯೋಧ್ಯೆ ಹೋಗಿದ್ದು ವಾಸ್ತವ. ಆದರೆ ಹಾಗಾಗದಿದ್ದರೆ ಅರಣ್ಯದಲ್ಲಿರುವ ತಾಪಸಿಗಳಿಗೆ ರಕ್ಷಣೆಯಿರುತ್ತಿರಲಿಲ್ಲ. ದೇವತೆಗಳು ತಮ್ಮ ಸಂಕಲ್ಪದಿಂದ ಇವಳ ಕೈಯಲ್ಲಿ ಹೀಗೆ ಮಾಡಿಸಿದ್ದಾರೆ. ನೀನು ಕೈಕೆಯಲ್ಲಿ ದೋಷ ಕಾಣಬೇಡ" ಎಂದು ಭರತನಿಗೆ ಬುದ್ಧಿ ಹೇಳಿದರು.
"ನೀವು ಹೇಳಿದಂತೆ ಮಾಡುತ್ತೇನೆ. ರಾಮ ಎಲ್ಲಿರುವನೆಂದು ನನಗೆ ದಯಮಾಡಿ ತಿಳಿಸಿ."
"ನೀನು ಹೀಗೆಯೇ ದಕ್ಷಿಣಕ್ಕೆ ಹೋದರೆ ನಿನಗೆ ಕಿರಿದಾದ ದಾರಿ ಸಿಗುತ್ತದೆ. ಅಲ್ಲಿ ನೀನು ನಿನ್ನ ಸೈನ್ಯದ ಜೊತೆ ಹುಷಾರಾಗಿ ಹೋದರೆ ಚಿತ್ರಕೂಟ ಪರ್ವತ ಕಾಣಿಸುತ್ತದೆ. ಅಲ್ಲಿ ಮಂದಾಕಿನಿ ನದಿಯ ಪಕ್ಕ ರಾಮ ಆಶ್ರಮ ಕಟ್ಟಿಕೊಂಡಿದ್ದಾನೆ."
ಎಲ್ಲರೂ ಭರದ್ವಾಜರ ಸಲಹೆಯಂತೆ ಚಿತ್ರಕೂಟದ ಕಡೆ ನಡೆದರು. ಅಲ್ಲಿ, ಪರ್ವತದ ಮೇಲೆ, ಮಂದಾಕಿನಿ ನದಿಯ ಪ್ರವಾಹವನ್ನು ರಾಮ ಸೀತೆಗೆ ತೋರಿಸುತ್ತಾ, "ಸೀತಾ, ನೀನು ಲಕ್ಷ್ಮಣನೂ ನನ್ನ ಜೊತೆ ಹೀಗೆ ಈ ನದಿಯಲ್ಲಿ ಸ್ನಾನ ಮಾಡುತ್ತಾ, ಈ ಕಾಡು, ಇದರ ಸೌಂದರ್ಯವನ್ನು, ಈ ಬೆಟ್ಟವನ್ನೂ ನೋಡುತ್ತಾ ಇದ್ದರೆ ನನಗೆ ಅಯೋಧ್ಯೆ ನೆನಪಿಗೇ ಬರುತ್ತಿಲ್ಲ. ಈ ೧೪ ವರ್ಷಗಳು ಒಂದು ರಾತ್ರಿಯಂತೆ ಕಳೆದುಬಿಡುತ್ತದೆ" ಎನ್ನುತ್ತಿದ್ದ. ಲಕ್ಷ್ಮಣ ತಾನು ಬೇಟೆಯಾಡಿ ತಂದ ಮಾಂಸವನ್ನು ರಾಮನಿಗೆ ಕೊಟ್ಟಾಗ ಸೀತಾರಾಮರು ಅದನ್ನು ತಿಂದರು. ಅಣ್ಣಅತ್ತಿಗೆಯರು ತಾನು ತಂದ ಆಹಾರವನ್ನು ತಿಂದದ್ದನ್ನು ನೋಡಿ ಲಕ್ಷ್ಮಣ ಆನಂದ ಪಡುತ್ತಿದ್ದ.
ರಾಮನ ದರ್ಶನಕ್ಕೆ ಭರತ ಆತುರ ಆತುರವಾಗಿ ಬಂದ. ಅವನಿಗೆ ಸ್ವಲ್ಪ ದೂರದಲ್ಲಿ ಹೊಗೆ ಕಾಣಿಸಿತು. ಮರಗಳಿಗೆ ಬಟ್ಟೆ ಕಟ್ಟಿತ್ತು. ರಾತ್ರಿ ಹೊತ್ತು ನೀರು ತರುವಾಗ ದಾರಿ ಮರೆತುಹೋಗಬಾರದೆಂದು ಲಕ್ಷ್ಮಣ ಹಾಗೆ ಮಾಡಿರಬಹುದೆಂದು ಭಾವಿಸಿ, ಇನ್ನು ಅವರು ದೂರವಿಲ್ಲ ಎಂದು ಭರತ ಆಶ್ರಮದ ಕಡೆ ಜೋರಾಗಿ ಓಡಿದ.
Comments
Post a Comment