೪೦. ರಾಮ-ಭರತರ ಭೇಟಿ

ಭರತನ ಸೈನ್ಯದ ಆನೆ, ಕುದುರೆಗಳ ಸಪ್ಪಳವನ್ನು ಕೇಳಿದ ರಾಮ, "ಇದಕ್ಕೆ ಮುಂಚೆ ಎಂದೂ ಇದನ್ನು ಕೇಳಿರಲಿಲ್ಲ. ಎಲ್ಲಿ ನೋಡಿದರೂ ಪ್ರಾಣಿಗಳು ಭಯದಿಂದ ಓಡುತ್ತಿವೆ. ಯಾರೋ ರಾಜ ಅಥವಾ ರಾಜಪ್ರತಿನಿಧಿ ಬೇಟೆಗೆ ಬಂದಿರಬೇಕು" ಎಂದು ಲಕ್ಷ್ಮಣನನ್ನು ಕರೆದು ಪರಿಶೀಲಿಸಲು ಹೇಳಿದ.

ಲಕ್ಷ್ಮಣ ಅಲ್ಲಿಯೇ ಇದ್ದ ಒಂದು ದೊಡ್ಡ ವೃಕ್ಷವನ್ನು ಹತ್ತಿ ಪೂರ್ವ ದಿಕ್ಕಿಗೆ ನೋಡಿದ. ಅಲ್ಲಿ ಯಾರೂ ಕಾಣಿಸದಿದ್ದಾಗ ಉತ್ತರ ದಿಕ್ಕಿಗೆ ನೋಡಿದ. ಅಲ್ಲಿ ಕೋವಿದಾರ ವೃಕ್ಷಧ್ವಜದ ಒಂದು ದೊಡ್ಡ ಸೈನ್ಯ ಕಾಣಿಸಿತು. ಅದನ್ನು ನೋಡಿ ಲಕ್ಷ್ಮಣ ರಾಮನನ್ನು ಕುರಿತು,
ಅಗ್ನಿಂ ಸಮ್ಷಮಯತು ಆರ್ಯಹೇ ಸೀತಾ ಚ ಭಜತಾಂ ಗುಹಾಂ
ಸಜ್ಯಂ ಕುರುಷ್ವ ಚಾಪಂ ಚ ಷರಾಮ್ ಚ ಕವಚಂ ತಥಾ
ಅಣ್ಣಾ! ಬೇಗ ನಮ್ಮ ಅಗ್ನಿಹೋತ್ರಗಳನ್ನು ಒಳಗಿಡು. ಬಿಲ್ಲು, ಬಾಣ, ಕತ್ತಿಗಳನ್ನು ತೆಗೆದುಕೊಂಡು ಸಿದ್ಧನಾಗು. ನಾವು ಯುದ್ಧ ಮಾಡಬೇಕು. ನಿನಗೆ ರಾಜ್ಯ ಸಿಗದಂತೆ ಮಾಡಿ, ಅರಣ್ಯಕ್ಕೆ ಕಳಿಸಿದ್ದೇ ಅಲ್ಲದೆ, ಶತ್ರುಶೇಷ ಇಲ್ಲದಂತೆ ಮಾಡಲು ನಿನ್ನನ್ನು ಕೊಲ್ಲಲು ಭರತ ಅಯೋಧ್ಯೆಯಿಂದ ಬಂದಿದ್ದಾನೆ. ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೆ ಸಿಗುವುದಿಲ್ಲ. ಇಷ್ಟುಕಾಲ ಒಳಗಿಟ್ಟುಕೊಂಡಿದ್ದ ಕೋಪವನ್ನು ಹೊರಹಾಕುತ್ತೇನೆ. ಭರತ, ಕೈಕೆಯ ತಲೆ ಕತ್ತರಿಸಿ, ನಿನ್ನನ್ನು ನಾಶಮಾಡಲು ಬರುತ್ತಿರುವ ಸೇನೆಯನ್ನು ನಾಶಮಾಡುತ್ತೇನೆ. ಎಲ್ಲರನ್ನೂ ಕೊಂದಮೇಲೆ ಅವರ ಕಳೇಬರಗಳನ್ನು ಕ್ರೂರ ಮೃಗಗಳು ತಿನ್ನುತ್ತಿದ್ದರೆ ನಾನು ನೋಡಿ ಸಂತೋಷಿಸಬೇಕು" ಎಂದ.

ಆದರೆ ರಾಮ, "ಲಕ್ಷ್ಮಣ! ಧನಸ್ಸೇಕೆ? ಅದರಿಂದ ಭರತನನ್ನು ಕೊಲ್ಲಬೇಕೆ? ತಂದೆಯ ಆಸೆಯಂತೆ ನಾನು ಅರಣ್ಯಕ್ಕೆ ಬಂದಿದ್ದೇನೆ.  ಭರತ ನನ್ನನ್ನು ನೋಡಲು ಬರುತ್ತಿದ್ದಾನೆ. ಅವನ ಜೊತೆ ನಾನು ಯುದ್ಧ ಮಾಡಬೇಕೆ?
ಧರ್ಮಾಮರ್ಥಂ ಕಾಮಂ ಪೃಥ್ವಿವೀಂ ಚಾಪಿ ಲಕ್ಷ್ಮಣ
ಇಚ್ಛಾಮಿ ಭವತಾಮರ್ಥೇ ಏತತ್ ಪ್ರತಿಪೃಣೋಮಿ ತೇ
ಧರ್ಮವಾಗಲೀ, ಅರ್ಥವಾಗಲೀ, ಕಾಮವಾಗಲೀ (ಕಾಮ - ಆಸೆ) ನಾನು ಯಾವುದನ್ನು ಪಡೆಯಬೇಕಿದ್ದರೂ, ನನ್ನ ತಮ್ಮಂದಿರು ಪಡೆಯದೆ ನಾನು ಪಡೆಯುವುದಿಲ್ಲ. ಅವರು ಸಂತೋಷವಾಗಿದ್ದರೆ ನಾನೂ ಸಂತೋಷವಾಗಿರುತ್ತೇನೆ. ಯಾವಾಗಲಾದರೂ ಭರತ ನಿನ್ನ ಬಳಿ ಅಪಚಾರವಾಗುವಂತಹ ಮಾತುಗಳನ್ನು ಆಡಿದ್ದಾನಾ? ಮತ್ತೆ ನಿನಗೆ ಅವನ ಮೇಲೇಕೆ ಅನುಮಾನ?" ಎಂದು ಹೇಳಿದರೂ ಲಕ್ಷ್ಮಣ ಮರದ ಮೇಲೆ ಕೂತು ಕೋಪದಿಂದ ಬುಸುಗುಟ್ಟಿದ. ಅದನ್ನು ನೋಡಿ ರಾಮ, "ನಿನಗೆ ರಾಜ್ಯಭಾರ ಮಾಡಬೇಕಾಗಿದೆಯೇನೋ? ನಾನು ನಿನಗೆ ರಾಜ್ಯವನ್ನು ಕೊಡಲು ಭರತನಿಗೆ ಹೇಳುತ್ತೇನೆ. ಭರತ ಎಂತಹವನೋ ನೋಡುವಿಯಂತೆ" ಎಂದ.

ಮಾತುಗಳನ್ನು ಕೇಳಿ ನಾಚಿ ಲಕ್ಷ್ಮಣ, "ಅಣ್ಣಾ! ನಿನ್ನನ್ನು ನೋಡಲು ದಶರಥ ಮಹಾರಾಜರು ಬಂದಿರಬೇಕು. ಅತ್ತಿಗೆ ಇಲ್ಲಿದ್ದು ಕಷ್ಟಪಡುತ್ತಾಳೆಂದು ಅವಳನ್ನು ಕರೆದುಕೊಂಡು ಹೋಗಲು ಬಂದಿರಬಹುದು" ಎಂದ.

ಅಲ್ಲಿಯವರೆಗೂ ಕುಳಿತೇ ಇದ್ದ ರಾಮ, ಎದ್ದು ಸೈನ್ಯದ ಕಡೆ ನೋಡಿ, "ತಂದೆಯವರು ಬಂದಿದ್ದರೆ ಶತ್ರುಮಜಯವೆಂಬ ಭದ್ರಗಜ ಕಾಣಿಸುತ್ತದೆ. ಅದರ ಮೇಲೆ ಶ್ವೇತಚ್ಛತ್ರದ ಅಡಿಯಲ್ಲಿ ತಂದೆಯವರು ಕುಳಿತಿರುತ್ತಾರೆ. ಆದರೆ ಈಗ ತಂದೆಯವರು ಕಾಣಿಸುತ್ತಿಲ್ಲ. ನನಗೇಕೋ ಕೆಟ್ಟ ಶಕುನ ಅನಿಸುತ್ತಿದೆ" ಎಂದು ಸಂದೇಹ ವ್ಯಕ್ತಪಡಿಸಿದ.

ಅಷ್ಟರಲ್ಲೇ ಭರತ, "ನನಗೆ  ಸೀತಾಲಕ್ಷ್ಮಣ ಸಹಿತನಾದ ರಾಮನನ್ನು ನೋಡುವವರೆಗೂ ಶಾಂತಿಯಿಲ್ಲ. ಯಾವಾಗ ನಾನು ಸೀತಾರಾಮರ ಪಾದಗಳನ್ನು ತಲೆಯಮೇಲಿಟ್ಟುಕೊಳ್ಳುತ್ತೇನೋ ಆಗ ನನ್ನ ತಲೆಯ ಮೇಲೆ ಬೀಳುವ ಅವರ ಪಾದದ ರಜಸ್ಸಿನಿಂದ ನನಗೆ ಶಾಂತಿ ಸಿಗುತ್ತದೆ. ಸೀತಾರಾಮರು ಬಂಗಾರದ ಪೀಠದ ಮೇಲೆ ಕುಳಿತು, ಪಟ್ಟಾಭಿಷೇಕ ಮಾಡಿಕೊಳ್ಳುವವರೆಗೂ ನನಗೆ ಶಾಂತಿಯಿಲ್ಲ" ಎಂದು ಓಡುತ್ತಾ ಬಂದ.

ತಂ ತು ಕೃಷ್ಣಾಜಿನ ಧರಂ ಚೀರ ಚಲ್ಕಲ ವಾಸಸಂ
ದದರ್ಷ ರಾಮಂ ಆಸೀನಂ ಅಭಿತಹೇ ಪಾವಕ ಉಪಮಂ
ಸಿಂಹ ಸ್ಕಂಧಂ ಮಹಾ ಬಾಹುಂ ಪುಂಡರೀಕ ನಿಭೇಕ್ಷಣಂ
ಪೃಥ್ವ್ಯಾಹೇ ಸಗರ ಅಂತಾಯಾ ಭರ್ತಾರಂ ಧರ್ಮ ಚಾರಿಣಂ
ಮಹಾನ್ ಧಾರ್ಮಿಕ, ಸಿಂಹದ ಗಾಂಭೀರ್ಯವುಳ್ಳವನು, ಗಟ್ಟಿಯಾದ ಬಾಹುವುಳ್ಳವನು, ಸಾಗರದ ಮೇಲಿರುವ ಸಮಸ್ತ ಭೂಮಂಡಲವನ್ನು ಪಾಲಿಸುವ ಸಮರ್ಥತೆಯಿರುವವನಾದ ರಾಮ ಇಂದು ನಾರು ಮಡಿಯುಟ್ಟು ಒಬ್ಬ ಮುನಿ ಕೂತಂತೆ ಕೃಷ್ಣಾಜಿನವನ್ನು ಉತ್ತರೀಯವಾಗಿ ಹಾಕಿಕೊಂಡು ವೀರಾಸನದ ಮೇಲೆ ಕುಳಿತಿರುವುದನ್ನು ಕಂಡ ಭರತನ ಮನಸ್ಸು ತಡೆಯಲಿಲ್ಲ. ತನ್ನಿಂದಲೇ ಅಣ್ಣನಿಗೆ ಇಷ್ಟು ಕಷ್ಟ ಬಂದಿದೆ ಎಂದು, 'ರಾಮಾ' ಎನ್ನುತ್ತಾ ಶೋಕಭಾರದಲ್ಲಿ ನೆಲದ ಮೇಲೆ ಕುಸಿದ. ರಾಜಭವನದಲ್ಲಿ ಪೀತಾಂಬರವನ್ನುಟ್ಟು, ಗಂಧವೇ ಮೊದಲಾದ ಪರಿಮಳಗಳನ್ನು ಧರಿಸಿ ತಿರುಗಬೇಕಾಗಿದ್ದ ರಾಮನ ಶರೀರ ಇಂದು ಮಣ್ಣಿನಿಂದ ಕಪ್ಪಾಗಿದ್ದನ್ನು ನೋಡಿ ಕಣ್ಣೀರಿಟ್ಟ

ಅರಣ್ಯದಲ್ಲಿ ಇಷ್ಟು ದೊಡ್ಡ ಸೈನ್ಯವನ್ನು ನೋಡಿದ ಅಲ್ಲಿದ್ದ ಗಿರಿಜನರು, " ಮಧ್ಯೆ ಅರಣ್ಯದಲ್ಲಿ ಪರ್ಣಶಾಲೆ ಕಟ್ಟಿಕೊಂಡು ವಾಸಿಸುತ್ತಿರುವವನ ತಮ್ಮನಂತೆ ಇವನು. ಮೊದಲು ರಾಜನಾಗಿದ್ದವನಂತೆ. ತಂದೆಯ ಮಾತಿನಂತೆ ರಾಜ್ಯ ಬೇಡವೆಂದು ಕಾಡಿಗೆ ಬಂದಿದ್ದಾನಂತೆ. ಅವನನ್ನು ಕರೆದುಕೊಂಡು ಹೋಗಲು ಈಗ ತಮ್ಮ ಬಂದ್ದಿದ್ದಾನಂತೆ. ಇಂತಹ ಆಶ್ಚರ್ಯವನ್ನು ಎಲ್ಲಾದರೂ ನೋಡಿದ್ದೀವಾ? ರಾಜ್ಯ ನನಗೆ ಬೇಡ, ನನಗೆ ಬೇಡ ಎನ್ನುತ್ತಿದ್ದಾರೆ. ಆಹಾ! ಎಂತಹ ಅಣ್ಣ ತಮ್ಮಂದಿರು!" ಎಂದು ಮಾತಾಡಿಕೊಳ್ಳುತ್ತಿದ್ದರು.

ಇತ್ತ ಕೆಳಗೆ ಬಿದ್ದ ಭರತನನ್ನು ರಾಮ ಓಡಿಬಂದು ಮೇಲಕ್ಕೆಬ್ಬಿಸಿ, ಅವನಿಗೆ ಜ್ಞಾನ ಬಂದಮೇಲೆ ತನ್ನ ಬಳಿ ಕೂರಿಸಿಕೊಂಡು, "ಭರತ! ಇದೇನು ನಿನ್ನ ವೇಷ? ನಾರು ಮಾಡಿ? ಜಟೆ? ಮುಖ ಕಾಂತಿಹೀನವಾಗಿ ಕಪ್ಪಾಗಿದೆ. ದೂರದಲ್ಲಿದ್ದ ನಿಮ್ಮ ಸೋದರಮಾವ ಯಥಾಜಿತನ ದೇಶದಿಂದ ಯಾವಾಗ ಬಂದೆ? ನೀನು ರಾಜ್ಯ ಬಿಟ್ಟು ಅರಣ್ಯಕ್ಕೆ ಬರುವಾಗ ದಶರಥ ಮಹಾರಾಜ ಏಕೆ ಸುಮ್ಮನಿದ್ದ? ನನಗೇಕೋ ಭಯವಾಗುತ್ತಿದೆ. ದಶರಥ ಮಹಾರಾಜನಿಗೆ ಯಾವುದೇ ತೊಂದರೆಯಾಗಿಲ್ಲವಲ್ಲ? ಅದರ ಕಾರಣದಿಂದ ನೀನು ಬರಲಿಲ್ಲವಲ್ಲ? ನಿನ್ನನ್ನು ಚಿಕ್ಕವನನ್ನಾಗಿ ಮಾಡಿ ಯಾರಾದರೂ ತಿರಸ್ಕರಿಸಿದರೇ? ನಿನಗೆ ಯಾವುದಾದರೂ ಅಪವಾದ ಬಂದಿತೇ? ಸರಿಯಾದ ಪುರೋಹಿತರನ್ನು ಇಟ್ಟುಕೊಂಡಿದ್ದೀಯಾ? ಯಜ್ಞ ಯಾಗಾದಿಗಳನ್ನು ಮಾಡುವುದರಿಂದಲೇ ಈಶ್ವರನ ಕೃಪೆಯಿಂದ ಮಳೆಬೆಳೆಗಳಾಗುತ್ತವೆ. ಧನುರ್ವೇದಕ್ಕೆ ಸಂಬಂಧಿಸಿದಂತೆ ಸರಿಯಾದ ಪುರೋಹಿತರಿದ್ದಾರಾ? ಹೆಚ್ಚು ಮಂದಿ ಮಂತ್ರಿಯರ ಜೊತೆ ಮಾತಾಡಿ ನಿರ್ಣಯ ತೆಗೆದುಕೊಂಡರೆ ಅಭಿಪ್ರಾಯ ಭೇದ ಬರಬಹುದು. ಆದರೆ ಕಡಿಮೆ ಮಂತ್ರಿಗಳ ಜೊತೆ ಮಾತಾಡಿ ನಿರ್ಣಯ ತೆಗೆದುಕೊಂಡರೆ ಸರಿಯಾದ ಅಭಿಪ್ರಾಯ ಸಿಗದೇ ಇರಬಹುದು. ಅವರನ್ನು ನೀನು ಗದರಿಸಿದರೆ ಅವರು ನಿನ್ನನ್ನು ನೋಡಿ ಭಯಪಡಬಹುದು. ಹಾಗೆಂದು ಎಲ್ಲರನ್ನೂ ನೀನು ಹತ್ತಿರ ಸೇರಿಸಿದರೆ ನಿನ್ನ ಮೇಲಿನ ಭಯ ಹೋಗಬಹುದು. ಆದ್ದರಿಂದ ಅವರನ್ನು ಯಾವಾಗ ಹತ್ತಿರ ಸೇರಿಸಬೇಕು ಯಾವಾಗ ದೂರವಿಡಬೇಕು ಎಂಬ ಸೂತ್ರವನ್ನು ಪಾಲಿಸುತ್ತಿದ್ದೀಯ?

ಮಂತ್ರಿಗಳಿಗೆ ವಿವಿಧ ಪರೀಕ್ಷೆಗಳು ಒಡ್ಡುತ್ತಿದ್ದೀಯಾ? (ಇವು ರಹಸ್ಯ ಪರೀಕ್ಷೆಗಳು. ಪೂರ್ವ ಕಾಲದಲ್ಲಿ ರಾಜ ಯಾರನ್ನಾದರೂ ಮಂತ್ರಿ ಮಾಡಬೇಕಾದರೆ ರಹಸ್ಯವಾಗಿ ತನ್ನ ಅಂತಃಪುರದ ದಾಸಿಯರಿಗೆ ಕಾಣಿಕೆಗಳನ್ನು ಕೊಟ್ಟು, ಅವನ್ನು ಯಾರಿಗೂ ತಿಳಿಯದಂತೆ, ಅವರಿಂದ ಅದನ್ನು ಮಂತ್ರಿ ಪದವಿಗೆ ಆಯ್ಕೆ ಮಾಡಿದ ವ್ಯಕ್ತಿಗೆ ಕಾಣಿಕೆಯಾಗಿ ಕೊಡಿಸುತ್ತಿದ್ದರು. ಆ ಕಾಣಿಕೆ, ದಾಸಿಯರನ್ನು ನೋಡಿ ಮೋಹಪಡುತ್ತಾನೇನೋ ಎಂದು ತಿಳಿಯಲು ಈ ಪರೀಕ್ಷೆ. ಹಾಗೆಯೇ, ವಿದೇಶೀ ರಾಜರ ಗೂಢಾಚಾರರ ವೇಷದಲ್ಲಿ ಹೋಗುವಂತೆ ಕೆಲವು ಜನರನ್ನು ಕಳಿಸಿ, ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಹೇಳಿದರೆ ಅವನಿಗೆ ಹಣ ಕೊಡುತ್ತೇವೆಂದು ನಂಬಿಸಿ, ಅವನು ಆ ಹಣಕ್ಕೆ ಆಸೆಪಡುವವನೋ ಎಂದು ತಿಳಿಯುತ್ತಿದ್ದರು. ಹೀಗೆ ಅನೇಕ ಪರೀಕ್ಷೆಗಳಲ್ಲಿ ಗೆದ್ದವನಿಗೆ ಮಾತ್ರ ಮಂತ್ರಿ ಪದವಿ ಕೊಡುತ್ತಿದ್ದರು). ರಾಜ್ಯದಲ್ಲಿ ಪ್ರತಿ ೧೮ ಜನಕ್ಕೆ ಒಬ್ಬರು ಗೂಢಾಚಾರರನ್ನಿಡಬೇಕು (ಅದರಲ್ಲಿ ಕೋಟೆ ಕಾಪಾಡುವ ಸೈನಿಕನಿಂದ ಕೋಶಾಧಿಕಾರಿಯವರೆಗೂ ಎಲ್ಲರೂ ಸೇರುತ್ತಾರೆ). ಅವರು ಗೂಢಾಚಾರರೆಂಬ ವಿಷಯ ಅವರಲ್ಲೇ ಯಾರಿಗೂ ತಿಳಿಯಬಾರದು. ಯುವರಾಜ, ಪ್ರಧಾನ ಮಂತ್ರಿ, ಸೇನಾಪತಿಗಳ ಮೇಲೆ ಗೂಢಾಚಾರರನ್ನು ಇಡಬಾರದು. ವಿದೇಶ ರಾಜ್ಯಗಳಲ್ಲಿ ಮುಖ್ಯವಾದ ಹುದ್ದೆಗಳಲ್ಲಿರುವವರ ಹತ್ತಿರ ಗೂಢಾಚಾರರನ್ನು ಇಡಬೇಕು. ಆಗಾಗ ಶತ್ರುರಾಜರ ಚಲನವಲನಗಳನ್ನು ಗಮನಿಸುತ್ತಿರಬೇಕು. ಇವೆಲ್ಲ ಮಾಡುತ್ತಿದ್ದೀಯಾ?ಎಂದು ರಾಜ್ಯ ಪರಿಪಾಲನೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ.

ರಾಮಸ್ಯ ಪಚನಂ ಶೃತ್ವಾ ಭರತಹೇ ಪ್ರತ್ಯುವಾಚ ಹ
ಕಿಂ ಮೇ ಧರ್ಮಾದ್ವಿಹೀನಸ್ಯ ರಾಜಧರ್ಮಹೇ ಕರಿಶ್ಯತಿ
ರಾಮನ ಮಾತುಗಳನ್ನು ಕೇಳಿದ ಭರತ ಹೇಳಿದ: "ಅಣ್ಣಾ! ನೀನು ಇವೆಲ್ಲಾ ನನಗೆ ಹೇಳಿದ್ದಕ್ಕೆ ಸಂತೋಷವಾಗಿದೆ. ಆದರೆ ಧರ್ಮಗಳೆಲ್ಲಾ ನನಗೆ ಬೇಡ. ಇವು ರಾಜರಿಗೆ. ನಾನು ಎಂದಿಗೂ ರಾಜನಾಗಲಾರೆ. ನಮ್ಮ ವಂಶದ ಸಂಪ್ರದಾಯದ ಪ್ರಕಾರ ಹಿರಿಯಮಗ ಮಾತ್ರ ಪಟ್ಟಾಭಿಷೇಕ ಮಾಡಿಕೊಳ್ಳಬೇಕು. ಧರ್ಮ ನನಗೆ ಗೊತ್ತು. ನನಗಿಂತಲೂ ದೊಡ್ಡವನಾದ ನೀನಿರುವಾಗ ನನಗೆ ಧರ್ಮ ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ. ನಿನ್ನ ಹತ್ತಿರ ಯಾರಾದರೂ ಬಂದು ಏನನ್ನಾದರೂ ಕೇಳಿದರೇ ಇಲ್ಲವೆನ್ನುವುದಿಲ್ಲ. ಅಂತಹುದರಲ್ಲಿ ಇಡೀ ರಾಜ್ಯವೇ ನಿನ್ನನ್ನು ಪಟ್ಟಾಭಿಷೇಕ ಮಾಡಿಕೊಳ್ಳಬೇಕೆಂದು ಕೇಳುತ್ತಿದೆ. ಆಸೆಯನ್ನು ನೀನು ಈಡೇರಿಸುವುದಿಲ್ಲವೇ? ನಾನಿಲ್ಲದಿದ್ದಾಗ ನನ್ನ ಅಮ್ಮ ವರಗಳನ್ನು ಕೇಳಿದಳು. ಧರ್ಮಕ್ಕೆ ಕಟ್ಟುಬಿದ್ದು ದಶರಥ ಮಹಾರಾಜ ವರ ಕೊಟ್ಟ. ನೀನು ಅರಣ್ಯಕ್ಕೆ ಬಂದೆ. ಆದರೆ ನಾನು ರಾಜ್ಯವನ್ನು ತೆಗೆದುಕೊಳ್ಳಲಿಲ್ಲ. ಈಗ ನಮ್ಮ ಅಮ್ಮ ವಿಧವೆಯಾಗಿದ್ದಾಳೆ. ಅಣ್ಣಾ! ಇಂದು ನಮ್ಮ ತಂದೆಯವರು ಇಲ್ಲ. ನೀನು ಹೋಗಿದ್ದರಿಂದಲೇ ಇಷ್ಟು ಉಪದ್ರವವಾಗಿದೆ."

ಮಾತುಗಳನ್ನು ಕೇಳಿದ ರಾಮ ಕುಳಿತಿದ್ದಲ್ಲಿಯೇ ಕುಸಿದು ಮಣ್ಣಿನ ನೆಲವೆಂಬುದನ್ನೂ ಗಮನಿಸದೆ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ. ರಾಜ್ಯ ಸಿಗದಿದ್ದಾಗ, ಕಾಡಿಗೆ ಹೋಗಬೇಕಾಗಿ ಬಂದಾಗ ಅಳದ ರಾಮ ತನ್ನ ತಂದೆ ಸಾವನ್ನಪ್ಪಿದಾಗ ಅಳುತ್ತಿರುವುದನ್ನು ಕಂಡು ಸೀತಾ ಲಕ್ಷ್ಮಣರು ಓಡಿ ಅವನ ಬಳಿ ಬಂದರು.

ಸೀತೇ ಮೃತಸ್ತೆ ಶ್ವಷುರಹೇ ಪಿತ್ರಾ ಹೀನೋಸಿ ಲಕ್ಷ್ಮಣ
ಭರತೋ ಕುಹ್ಖಾಮಾಚಶ್ಚ ಸ್ವರ್ಗತಂ ಪೃಥ್ವೀಪತಿಂ
ಸೀತಾ ಪುರಸ್ತಾದ್ರ್ವಜತು ತ್ವಮೇನಾಮಭಿತೋ ವ್ರಜ
ಅಹಂ ಪಶ್ಚಾದ್ಗಮಿಶ್ಯಾಮಿ ಗತಿರ್ವೇಶಾ ಸುದಾರುಣಾ
ಅವರನ್ನು ನೋಡಿ ರಾಮ, "ಭರತ ಬಂದು ಹೇಳಿದ. ಸೀತಾ! ನಿನ್ನ ಮಾವನವರು ಮರಣಿಸಿದರು. ಲಕ್ಷ್ಮಣಾ ನಿನ್ನ ತಂದೆ ಮರಣಿಸಿದರು. ಜೀವನದಲ್ಲಿ ಎಂದೂ ನಡೆಯಬಾರದ ಹೆಜ್ಜೆಗಳನ್ನಿಡೋಣ ಸೀತಾ! ಹೊರಡು" ಎಂದ.

(ರಾಮನಿಗೆ ತಂದೆಯಂತೆ ಎಲ್ಲ ಕಾಲದಲ್ಲಿಯೂ ಕಾಪಾಡಲು ಲಕ್ಷ್ಮಣನಿದ್ದಾನೆ. ಆದ್ದರಿಂದ ಲಕ್ಷ್ಮಣನಿಗೆ ರಾಮ 'ನಿನ್ನ ತಂದೆ' ಎನ್ನುತ್ತಾನೆ. ಹಾಗೆಯೇ ಸರ್ವ ಸಮಯದಲ್ಲಿಯೂ ಮನೆಯ ಯಜಮಾನ ಮುಂದೆ ನಡೆಯಬೇಕು. ಅವನ ಹಿಂದೆ ಸ್ತ್ರೀ ನಡೆಯಬೇಕು. ಮನೆಯ ಯಜಮಾನ ಮರಣಿಸಿದಾಗ ಅವನಿಗೆ ಧರ್ಮೋದಕಗಳನ್ನು ಕೊಡಲು ಸ್ತ್ರೀ ಮುಂದೆ ನಡೆಯುತ್ತಾಳೆ. ಇಂತಹ ನಡೆಯನ್ನು 'ದಾರುಣ ನಡೆ' ಎನ್ನುತ್ತಾರೆ.)


ರಾಮ ಮಂದಾಕಿನಿ ನದಿಯಲ್ಲಿ ಸ್ನಾನ ಮಾಡಿ, ದಕ್ಷಿಣ ದಿಕ್ಕಿಗೆ ತಿರುಗಿ, ದಶರಥನಿಗೆ ಜಲತರ್ಪಣ ಕೊಟ್ಟ. ನಂತರ ಲಕ್ಷ್ಮಣನನ್ನು ಕರೆದು, ಪರ್ಣಶಾಲೆಯಲ್ಲಿರುವ ಕಾಯಿ ಮತ್ತು ಹಿಟ್ಟಿನಿಂದ ಉಂಡೆ ಮಾಡಿ ತರಲು ಹೇಳಿದ. ಅವನ್ನು ದರ್ಭೆಯ ಮೇಲೆ ದಕ್ಷಿಣ ದಕ್ಕಿಗೆ ಮುಖಮಾಡುವಂತೆ ಇಟ್ಟು ಪಿಂಡ ಪ್ರದಾನ ಮಾಡಿದ. (ತಾನು ಏನು ತ್ತಿನ್ನುತ್ತಾನೋ ಅದರಿಂದಲೇ ಪಿತೃಗಳಿಗೆ ಪಿಂಡಪ್ರದಾನ ಮಾಡಬೇಕು.) 

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ