೪೧. ರಾಮ ಹಿಂತಿರುಗಿ ಅಯೋಧ್ಯೆಗೆ ಹೋಗಬೇಕೆ?
ತಂದೆಗೆ ಪಿಂಡ ಪ್ರದಾನ ಮಾಡಿ ಬಂದು ರಾಮ, ಲಕ್ಷ್ಮಣ, ಭರತ, ಶತೃಘ್ನ ನಾಲ್ವರೂ ಕುಳಿತುಕೊಂಡರು. ಭರತನೇ ಮಾತು ಆರಂಭಿಸಿದ.
ಭರತ: "ಅಣ್ಣಾ! ನಾನು ಎಂದಿಗೂ ರಾಜ್ಯವನ್ನು ಬಯಸಿರಲಿಲ್ಲ. ಅಮ್ಮ ರಾಜ್ಯ ಕೇಳಿದ ವಿಷಯ ನನಗೆ ತಿಳಿದಿಲ್ಲ. ರಾಜ್ಯವನ್ನು ಹೊರುವ ಶಕ್ತಿ ನಿನಗೆ ಮಾತ್ರ ಇದೆ. ಆದ್ದರಿಂದಲೇ ಇಷ್ಟು ಜನ ಪೌರರು, ಜನಪದರು ಬಂದಿದ್ದಾರೆ. ದಯಮಾಡಿ ರಾಜ್ಯವನ್ನು ಸ್ವೀಕರಿಸು."
ಅದಕ್ಕುತ್ತರವಾಗಿ ರಾಮ ಹೇಳಿದ: "ನಾವು ಎಲ್ಲಿ ಇರಬೇಕೆಂದು ನಿರ್ಣಯಿಸಿರುವವರು ನಮ್ಮ ತಂದೆ. ಅವರು ನನಗೆ ೧೪ ವರ್ಷಗಳ ಕಾಲ ಅರಣ್ಯ ವಾಸ ಮಾಡಲು ಹೇಳಿದ್ದಾರೆ. ನಿನಗೆ ರಾಜ್ಯ ಕೊಟ್ಟಿದ್ದಾರೆ. ನಿನಗೆ ಕೊಟ್ಟಿದ್ದನ್ನು ನೀನು ತೆಗೆದುಕೋ. ನನಗೆ ಕೊಟ್ಟಿದ್ದನ್ನು ನಾನು ತೆಗೆದುಕೊಳ್ಳುತ್ತೇನೆ. ತಂದೆಯವರು ಕೊಟ್ಟದ್ದನ್ನು ಬದಲಿಸುವ ಅಧಿಕಾರ ನಮಗಿಲ್ಲ."
ಆ ರಾತ್ರಿ ಎಲ್ಲರೂ ಮಲಗಿ ಬೆಳಗ್ಗೆದ್ದು ನಿಶ್ಯಬ್ದವಾಗಿದ್ದಾಗ ವಸಿಷ್ಠರು ಕೈಕೆ, ಸುಮಿತ್ರೆ, ಕೌಸಲ್ಯೆಯರ ಜೊತೆ ಬಂದರು. (ರಾಮನನ್ನು ಬೇಗ ಕಾಣಬೇಕೆಂಬ ಹಂಬಲದಿಂದ ಭರತ ಬೇಗ ಓಡಿ ಬಂದಿದ್ದ). ಕೌಸಲ್ಯೆ ಮಂದಾಕಿನಿ ನದಿ ಬಳಿ ಇದ್ದ ಹಿಟ್ಟಿನ ಉಂಡೆಗಳನ್ನು ನೋಡಿ, ರಾಮ ಪಿಂಡ ಪ್ರದಾನ ಮಾಡಿದ್ದಾನೆಂದು ತಿಳಿದು, ಅವನು ಈಗ ಆ ಹಿಟ್ಟಿನ ಆಹಾರವನ್ನೇ ತಿನ್ನುತ್ತಿದ್ದಾನೆಂದು ಸಂಕಟಪಟ್ಟಳು.
ಎಲ್ಲರೂ ಅಲ್ಲಿಗೆ ಬಂದಮೇಲೆ ಭರತ ಮತ್ತೆ ಹೇಳಿದ: "ಅಣ್ಣಾ! ಯಾವ ರಾಜ್ಯವನ್ನು ನನ್ನ ಅಮ್ಮ ನನಗೆ ಕೊಡಬೇಕೆಂದುಕೊಂಡಿದ್ದಳೋ ಆ ರಾಜ್ಯವನ್ನು ನಾನು ನಿನಗೆ ಕೊಟ್ಟುಬಿಡುತ್ತೇನೆ. ಕತ್ತೆ, ಕುದುರೆ ಮತ್ತು ಇತರ ನಾಲ್ಕು ಕಾಲಿನ ಪ್ರಾಣಿಗಳು ಅರಣ್ಯದಲ್ಲಿ ಇರುತ್ತವೆ. ಅದರಿಂದ ಕತ್ತೆ ಕುದುರೆಯಾಗುವುದಿಲ್ಲ. ನಾವಿಬ್ಬರೂ ದಶರಥ ಕುಮಾರರೇ ಆದರೂ ರಾಜ್ಯಭಾರ ಮಾಡುವ ಶಕ್ತಿ ನನಗಿಲ್ಲ. ರಾಜ್ಯವನ್ನು ನೀನೇ ಸ್ವೀಕರಿಸು."
ರಾಮ: "ಒಂದು ಮಹಾಸಮುದ್ರದಲ್ಲಿ ಎರೆಡು ಕಟ್ಟಿಗೆಗಳು ಕೊಚ್ಚಿಕೊಂಡು ಹೋಗುತ್ತಿರುತ್ತವೆ. ಅವು ಕೆಲವು ಕಾಲ ನೀರಿನಲ್ಲಿ ಜೊತೆಗೆ ಹೋಗುತ್ತವೆ. ಆದರೆ ಅವು ಯಾವುದೋ ಒಂದು ದಿನ ಪ್ರವಾಹದಲ್ಲಿ ಬೇರೆಯಾಗಲೇಬೇಕು. ನಾವು ಹೇಗೆ ಬರುವಾಗ ಒಬ್ಬರೇ ಬಂದೆವೋ ಹಾಗೆ ಹೋಗುವಾಗಲೂ ಒಬ್ಬರೇ ಹೋಗಬೇಕು. ಜೊತೆಗೆ ಬರುವವರು ಯಾರೂ ಇರುವುದಿಲ್ಲ. ಇದು ಗೊತ್ತಿದ್ದ ಕಾರಣ ದಶರಥ ಮಹಾರಾಜ ಯಜ್ಞ-ಯಾಗಾದಿಗಳನ್ನು ಮಾಡಿ ಪುಣ್ಯವನ್ನು ಮೂಟೆಕಟ್ಟಿಕೊಂಡು ಹೋದರು. ಹೋಗುವಾಗ ಒಂದು ಮಾತು ಹೇಳಿ ಹೋದರು. ಅದರ ಪ್ರಕಾರ ರಾಜ್ಯವನ್ನು ನೀನು ಪಡೆಯಬೇಕು."
"ಅಣ್ಣಾ! ನಾನು ಅಮ್ಮನನ್ನು ಕೊಲ್ಲಬೇಕೆಂದಿದ್ದೆ. ಆದರೆ ಹಾಗೆ ಮಾಡಿದರೆ ನೀನು ನನ್ನ ಬಳಿ ಮಾತಾಡುವುದಿಲ್ಲವೆಂದು ಬಿಟ್ಟುಬಿಟ್ಟೆ. ಸಭೆಯಲ್ಲಿ ನಾನು ಅಪ್ಪನನ್ನು ಎಂದೂ ನಿಂದಿಸಿಲ್ಲ. ಮರಣ ಕಾಲದಲ್ಲಿ ಬುದ್ದಿಭ್ರಮಣೆಯಾಗುತ್ತದೆ. ಬಹುಶಃ ಅಪ್ಪನಿಗೂ ಸಹ ಬುದ್ದಿಭ್ರಮಣೆಯಾಗಿ ತಪ್ಪು ಮಾಡಿರಬೇಕು. ಇಕ್ಷ್ವಾಕು ವಂಶದಲ್ಲಿ ಸಂಪ್ರದಾಯ ಬದ್ದವಾಗಿ ದೊಡ್ಡ ಮಗ ಪಾಲನೆ ಮಾಡಬೇಕಾಗಿದ್ದ ರಾಜ್ಯವನ್ನು ಧರ್ಮಕ್ಕೆ ವಿರುದ್ಧವಾಗಿ ನನಗೆ ಕೊಟ್ಟಿದ್ದಾರೆ. ಒಂದುವೇಳೆ ತಂದೆ ತಪ್ಪು ಮಾಡಿದರೆ ಮಗ ಅದನ್ನು ತಿದ್ದಬೇಕು. ಈಗ ಈ ತಪ್ಪನ್ನು ನೀನು ತಿದ್ದಬೇಕು. ಆದರೆ ನೀನು ಕ್ಷತ್ರಿಯ ಧರ್ಮದ ಪ್ರಕಾರ ರಾಜ್ಯ ಪಾಲನೆ ಮಾಡದೆ ತಾಪಸ ವೃತ್ತಿಯನ್ನು ಅವಲಂಬಿಸಿದ್ದೀಯ."
ರಾಮ ಭರತರ ಧರ್ಮ ಸಂಭಾಷಣೆ ಕೇಳಲು ದೇವತೆಗಳು ಮಹರ್ಷಿಗಳು ಬಂದು ನಿಂತಿದ್ದರು.
ರಾಮ: "ದಶರಥ ಮಹಾರಾಜ ಕೈಕೆಯನ್ನು ಮದುವೆ ಮಾಡಿಕೊಳ್ಳುವ ಮುಂಚೆ ನಿನ್ನ ತಾತನಾದ ಕೈಕೆಯ ರಾಜನಿಗೆ, ಕೈಕೆಯ ಹೊಟ್ಟೆಯಲ್ಲಿ ಹುಟ್ಟುವ ಮಗುವಿಗೆ ರಾಜ್ಯ ಕೊಡುತ್ತೇನೆಂದು ಮಾತು ಕೊಟ್ಟಿದ್ದರು. ಈ ವಿಷಯ ವಸಿಷ್ಠ, ಸುಮಂತ್ರರಿಗೆ ಗೊತ್ತು. ಆದ್ದರಿಂದಲೇ ಅವರು ಸುಮ್ಮನಿದ್ದಾರೆ. ನಿನ್ನ ಅಮ್ಮ ಎರೆಡು ವರ ಕೇಳಿದಳು. ಮಾತಿಗೆ ಬದ್ಧನಾಗಿ ರಾಜ ವರ ಕೊಟ್ಟ. ಆದ್ದರಿಂದ ಯಾವ ರೀತಿಯಿಂದ ನೋಡಿದರೂ ರಾಜ್ಯ ನಿನಗೇ ಸಲ್ಲಬೇಕು. ತಂದೆ ಮಾಡಿದ ತಪ್ಪನ್ನು ತಿದ್ದಬೇಕೆನ್ನುವುದು ಸರಿ. ಆದರೆ ಇಲ್ಲಿ ಯಾವುದೇ ತಪ್ಪಿಲ್ಲ. ನಾವು ಹುಟ್ಟುವ ಮೊದಲೇ ಅಪ್ಪ ರಾಜ್ಯವನ್ನು ನಿನಗೆ ಕೊಟ್ಟಿದ್ದಾರೆ.
ತ್ವಂ ರಾಜಾ ಭವ ಭರತ ಸ್ವಯಂ ನರಾಣಾಂ
ವನ್ಯಾನಾಂ ಅಹಂ ಅಪಿ ರಾಜ ರಾಣ್ ಮೃಗಾಣಾಂ
ನೀನು ಅರಣ್ಯಕ್ಕೆ ಹೋಗಿ ಎಲ್ಲರಿಗೂ ರಾಜನಾಗಿ ಶ್ವೇತಚ್ಛತ್ರದ ಅಡಿಯಲ್ಲಿ ಕುಳಿತು ರಾಜ್ಯಭಾರ ಮಾಡು. ನಾನು ಅರಣ್ಯದಲ್ಲಿ ಮೃಗಗಳನ್ನು ಪರಿಪಾಲಿಸುತ್ತೇನೆ. ಈಗ ನೀನು ಹೋಗು.”
ದಶರಥ ಮಾಹಾರಾಜನ ಮಂತ್ರಿಯಾದ ಜಾಬಾಲಿ ಹೇಳಿದ: “ರಾಮ! ನಾನು ಇಷ್ಟು ಹೊತ್ತಿನಿಂದ ನಿನ್ನ ಮಾತನ್ನು ಕೇಳುತ್ತಿದ್ದೇನೆ. ನೀನು ವಿಚಿತ್ರವಾಗಿ ಮಾತಾಡುತ್ತಿದ್ದೀಯ. ನೀನು ಹುಟ್ಟುವುದಕ್ಕೆ ಮುಂಚೆ ದಶರಥ ಮಹಾರಾಜನಿಗೆ ನೀನು ಹೀಗೆ ಹುಟ್ಟುತ್ತೀಯ ಎಂದು ತಿಳಿದಿತ್ತೆ? ದಶರಥ ಕಾಮದಿಂದ ತನ್ನ ವೀರ್ಯವನ್ನು ಪತ್ನಿ ಕೌಸಲ್ಯೆಯಲ್ಲಿ ಇಟ್ಟ. ಕೌಸಲ್ಯೆ ಕೂಡ ಕಾಮದಿಂದ ದಶರಥ ಮಹಾರಾಜನ ವೀರ್ಯವನ್ನು ಪಡೆದು, ಆ ಶುಕ್ಲವನ್ನು ತನ್ನ ರಕ್ತದಲ್ಲಿ ಕಲಿಸಿದಳು (ಶುಕ್ಲ, ರಕ್ತ, ಮಾಂಸ, ಮೇಧ, ಅಸ್ತಿ, ಮಜ್ಜ, ರಸ - ಇವು ಸಪ್ತ ಧಾತುಗಳು). ಆಗ ಪ್ರಕೃತಿ ಸಹಜವಾಗಿ ಗರ್ಭವಾಯಿತು. ಅದರಲ್ಲಿ ನೀನು ಜನಿಸಿದೆ. ತಂದೆಯೇನು? ತಾಯಿಯೇನು? ನೀನು ಮಾತ್ರ ಈ ಹುಚ್ಚು ಭಕ್ತಿಯನ್ನಿಟ್ಟುಕೊಂಡಿದ್ದೀಯ. ಹುಟ್ಟಿದ ಪ್ರತಿಯೊಂದು ಪ್ರಾಣಿಯೂ ತನ್ನಷ್ಟಕ್ಕೆ ತಾನು ಹೊರಟುಹೋಗುತ್ತದೆ. ಆಗ ತಂದೆ, ತಾಯಿ ಯಾರೂ ಇರುವುದಿಲ್ಲ. ಸತ್ತುಹೋದವರನ್ನು ಹಿಡಿದು ಮಾತಾಡಿಸಿದರೆ ಅವರು ಮತ್ತೆ ಮಾತಾಡುತ್ತಾರೆಯೇ? ಹೋದವರ ಮಾತಿಗೆ ಗೌರವವೇ? ಅವರ ಜೊತೆಯೇ ಅವರ ಮಾತೂ ಹೊರಟುಹೋಗುತ್ತದೆ. ಇನ್ನು ಸತ್ಯ, ಧರ್ಮದ ವಿಷಯ. ಇವೆಲ್ಲಾ ಏಕೆ ಬಂದವೆಂದು ನಾನು ಹೇಳುತ್ತೇನೆ. ಯಾವುದೋ ರೀತಿಯಲ್ಲಿ ಈ ಪುಸ್ತಕಗಳನ್ನು ಬರೆದರೆ ಹಣವಿರುವವರ ಬಳಿ ದಾನ, ಧರ್ಮಗಳನ್ನು ಪಡೆಯಬಹುದೆಂದು ಕೆಲವರು ಈ ಧರ್ಮಗಳನ್ನು ಬರೆದಿದ್ದಾರೆ. ವಾಸ್ತವದಲ್ಲಿ ಪಿತೃ ಕಾರ್ಯ, ಶ್ರಾದ್ಧಗಳಿಲ್ಲ. ಎಲ್ಲಾ ಸುಳ್ಳು. ಪಕ್ಕದ ಊರಿನಲ್ಲಿರುವವನಿಗೇ ಇಲ್ಲಿ ಅನ್ನವಿಟ್ಟರೆ ಅವನ ಹಸಿವು ತೀರುವುದಿಲ್ಲ, ಆದರೆ ಸತ್ತುಹೋಗಿ ಎಲ್ಲೋ ಇರುವ ನಿನ್ನ ತಂದೆಗೆ ಇಲ್ಲಿ ಶ್ರಾದ್ಧ ಮಾಡಿದರೆ ಅವನ ಹಸಿವು ತೀರುತ್ತದೆಯೇ? ಯಾರು ಹೇಳಿದರು ಇವೆಲ್ಲ? ಹಾಯಾಗಿ ಇರುವುದನ್ನು ಅನುಭವಿಸುತ್ತಾ ಸಂತೋಷವಾಗಿರು.”
ಈ ಮಾತುಗಳನ್ನು ಕೇಳಿದ ರಾಮ ಹುಬ್ಬೇರಿಸಿ ಹೇಳಿದ: “ಜಾಬಾಲಿ! ನೀನು ಹೇಳಿದ್ದೇ ನಿಜವಾದರೆ ಸಮಸ್ತ ಜೀವಕೋಟಿಯ ವರ್ತನೆಗೆ ಅರ್ಥವೇ ಇರುವುದಿಲ್ಲ. ಪ್ರತಿಯೊಬ್ಬರೂ ತನಗೆ ಇಷ್ಟ ಬಂದಂತೆ ವರ್ತಿಸುತ್ತಾರೆ. ಒಬ್ಬನ ವರ್ತನೆಯನ್ನು ನೋಡಿ ಹಿರಿಯರು ಅವನ ವ್ಯಕ್ಕಿತ್ವವನ್ನು ನಿರ್ಣಯಿಸುತ್ತಾರೆ. ಆ ವರ್ತನೆ ವೇದಕ್ಕೆ ಅನುಗುಣವಾಗಿ ಇರಬೇಕು. ವೇದ ಅಪೌರುಷೇಯ. ವೇದ ಹೇಳಿದ್ದನ್ನು ಮಾಡಬೇಕು. ಕಣ್ಣು ನೋಡಿದ್ದೆಲ್ಲಾ, ಬುದ್ಧಿಗೆ ತೋಚಿದ್ದೆಲ್ಲಾ ಸತ್ಯವಲ್ಲ. ನಮ್ಮ ಸಂಪ್ರದಾಯದಲ್ಲಿ ವೇದವೇ ಸತ್ಯ. ಇಹದಲ್ಲಿ ಯಜ್ಞ ಯಾಗಾದಿ ಕರ್ಮಗಳನ್ನು ಮಾಡಿದ ಮಹಾಪುರುಷರು, ೧೦೦ ಕರ್ಮಗಳನ್ನು ಮಾಡಿ ಇಂದ್ರ ಪದವಿ ಪಡೆದರು. ಇಲ್ಲಿ ಪುಣ್ಯ ಮಾಡಿದವರು ಊರ್ಧ್ವ ಲೋಕಗಳನ್ನು ಪಡೆದರು. ಪಾಪ ಮಾಡಿದವರು ಹೀನರಾಗಿ ಹೋದರು. ಇಲ್ಲಿ ಶ್ರಾದ್ಧ ಮಾಡಿದರೆ, ಸೂಕ್ಷ್ಮ ಶರೀರದಿಂದ ಮೂರು ತಲೆಗಳ ವರೆಗೆ ಪಿತೃಲೋಕದಲ್ಲಿರುವವರಿಗೆ ಹೊಟ್ಟೆ ತುಂಬುತ್ತದೆ ಎಂದು ವೇದ ಹೇಳುತ್ತದೆ.
ಸತ್ಯಂ ಏವ ಈಶ್ವರೋ ಲೋಕೇ ಸತ್ಯಂ ಪದ್ಮಾ ಸಮಾಪ್ರಿತಾ
ಸತ್ಯ ಮೂಲಾನಿ ಸರ್ವಾಣಿ ಸತ್ಯಾನ್ ನ ಅಸ್ತಿ ಪರಮಂ ಪದಂ
ಯಾವ ಸತ್ಯವನ್ನು ವೇದ ಹೇಳುತ್ತದೆಯೋ, ಯಾವ ಸತ್ಯವನ್ನು ಆಶ್ರಯಿಸಿ ಲಕ್ಷ್ಮಿ ಇದ್ದಾಳೋ, ಯಾವ ಸತ್ಯವನ್ನು ಆಶ್ರಯಿಸಿ ಈ ಸಮಸ್ತ ಬ್ರಹ್ಮಾಂಡಗಳು ನಿಂತಿವೆಯೋ, ಅಂತಹ ಸತ್ಯಕ್ಕೆ ಆಧಾರವಾದ ವೇದವನ್ನೇ ತೃಣೀಕರಿಸಿ ಮಾತಾಡುತ್ತಿರುವ ನಿನ್ನಂತಹ ನಾಸ್ತಿಕನನ್ನು ದಶರಥ ಮಹಾರಾಜ ಹೇಗೆ ಸೇರಿಸಿಕೊಂಡ? (ದೇವರಿಲ್ಲ ಎನ್ನುವವನು ನಾಸ್ತಿಕನಲ್ಲ. ವೇದ ಪ್ರಮಾಣವನ್ನು ಒಪ್ಪದವನು ನಾಸ್ತಿಕ) ಇಂದು ನನಗೆ ದಶರಥ ಮಹಾರಾಜನನ್ನು ನೋಡಿ ಕನಿಕರವಾಗುತ್ತಿದೆ.”
ಜಾಬಾಲಿ ಪಶ್ಚಾತ್ತಾಪದಿಂದ, “ರಾಮ! ನಾನು ವೇದವನ್ನು ತಿರಸ್ಕಿರಿಸಿದವನು, ಅದನ್ನು ನಂಬದವನು ಅಲ್ಲ. ಭರತನ ಪ್ರಲಾಪವನ್ನು ನೋಡಿ ಏನೋ ಒಂದು ವಾದ ಮಾಡಿದರೆ ನೀನು ಹಿಂತಿರುಗಿ ಬರಬಹುದೇನೋ ಎಂದು ಈ ರೀತಿ ಮಾತಾಡಿದೆ” ಎಂದ.
ವಸಿಷ್ಠರು ಮಧ್ಯಪ್ರವೇಶಿಸಿ, ಬ್ರಹ್ಮನಿಂದ ಇಕ್ಷ್ವಾಕು ವಂಶ ಹೇಗೆ ಬೆಳೆಯಿತು ಎಂದು ಹೇಳಿ, “ಈ ವಂಶದಲ್ಲಿ ಯಾವಾಗಲೂ ಹಿರಿಯನೇ ರಾಜನಾಗುತ್ತಾನೆ. ತಂದೆ ಮಾತನ್ನು ಕೇಳಿ ನೀನು ಅರಣ್ಯಕ್ಕೆ ಬಂದೆನೆನ್ನುತ್ತಿದ್ದೀಯ. ತಂದೆ ಸರ್ವಕಾಲದಲ್ಲಿಯೂ ಪೂಜ್ಯನೀಯನು. ತಂದೆ ಹೇಗೆ ದೊಡ್ಡವನೋ ಹಾಗೆಯೇ ತಾಯಿಯೂ ದೊಡ್ದವಳು. ಈಗ ನಿನ್ನ ಮೂವರು ತಾಯಿಯರೂ ನಿನ್ನನ್ನು ಹಿಂದೆ ಬರಲು ಹೇಳುತ್ತಿದ್ದಾರೆ. ತಂದೆ ವೀರ್ಯಪ್ರದಾತ, ತಾಯಿ ಕ್ಷೇತ್ರದಾತೆ. ಮಗು ಹುಟ್ಟಿದ ಮೇಲೆ ತಂದೆ ತಾಯಿಯರಿಬ್ಬರೂ ಅದನ್ನು ಬೆಳೆಸುತ್ತಾರೆ. ಆದರೆ ಈ ಶರೀರಕ್ಕೆ ಜ್ಞಾನ ಕೊಡುವವನು ಗುರು. ನಾನು ನಿನಗೆ, ನಿನ್ನ ತಂದೆಗೆ ಇಬ್ಬರಿಗೂ ಗುರು. ನಾನು ಹೇಳುತ್ತಿದ್ದೇನೆ. ನೀನು ಅರಣ್ಯದಿಂದ ಬಂದು ರಾಜ್ಯ ಪಡೆದರೆ ಧರ್ಮ ತಪ್ಪಿದವನಾಗುವುದಿಲ್ಲ. ಆದ್ದರಿಂದ ವಾಪಸ್ಸು ಬಂದು ರಾಜ್ಯ ಪಡೆದುಕೊ” ಎಂದರು.
ರಾಮ: “ನನ್ನ ತಂದೆ ನನ್ನ ಬಳಿ, ‘ರಾಮ! ನಿನ್ನ ಮೇಲೆ ನನಗೆ ನಂಬಿಕೆಯಿದೆ. ನಾನು ಕೈಕೆಗೆ ಕೊಟ್ಟ ವರ ನಿಜ ಮಾಡುವುದು ನಿನ್ನ ಕೈಲಿದೆ’ ಎಂದು ಹೇಳಿದರು. ಆದ್ದರಿಂದ ನಾನು ಕಾಡಿಗೆ ಬಂದೆ. ನೀವು ಹೇಳಿದಂತೆ ರಾಜ್ಯಕ್ಕೆ ಬರುವುದು ಧರ್ಮದಲ್ಲಿ ಒಂದು ಭಾಗವಾಗಿರಬಹುದು. ಆದರೆ ತಾನು ಕೊಟ್ಟ ವರ ಕೆಲಸಕ್ಕೆ ಬರದಂತಾಯಿತು ಎಂದು ನನ್ನ ತಂದೆ ದುಃಖ ಪಡುವುದು ನನಗೆ ಇಷ್ಟವಿಲ್ಲ. ತಾಯಿಯ ಶರೀರದಲ್ಲಿ ತಂದೆಯಿಟ್ಟ ತೆಜಸ್ಸಿನಿಂದಲೇ ಶಿಶು ಹೊರಗೆ ಬರುವುದು. ಆ ಶಿಶು ದೊಡ್ಡವನಾದ ಮೇಲೆ ಅವನಿಗೆ ಗುರು ಜ್ಞಾನ ಕೊಡುತ್ತಾನೆ. ಆ ಶಿಶು ಬರುವುದಕ್ಕೆ ಮೂಲ ಕಾರಣ ತಂದೆ. ಆ ತಂದೆಯ ಮಾತು ಬಿದ್ದುಹೋಗಬಾರದು. ನಾನು ನನ್ನ ತಂದೆಯ ಮಾತನ್ನು ಅತಿಕ್ರಮಿಸುವುದಿಲ್ಲ.”
ಭರತ ಸುಮಂತ್ರನ್ನು ಕರೆದು, “ದರ್ಭೆಯನ್ನು ತಂದು ಇಲ್ಲಿ ಹರಡಿ. ನಾನು ಮುಖದ ಮೇಲೆ ಬಟ್ಟೆ ಹಾಕಿಕೊಂಡು ರಾಮನ ಎದುರು ಕುಳಿತುಕೊಳ್ಳುತ್ತೆನೆ” ಎಂದ (ಪೂರ್ವದಲ್ಲಿ ರಾಜ ತಪ್ಪು ಮಾಡಿದರೆ, ಧರ್ಮ ತಪ್ಪಿದರೆ, ಬ್ರಾಹ್ಮಣರು ರಾಜನಿಗೆ ಅವನ ತಪ್ಪನ್ನು ತಿಳಿಸಲು ಹೀಗೆ ಮುಖದ ಮೇಲೆ ಬಟ್ಟೆ ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದರು). ಆಂತೆಯೇ ಸುಮಂತ್ರ ದರ್ಭೆಯನ್ನು ಹರಡಿದ ಮೇಲೆ ಭರತ ಮುಖದ ಮೇಲೆ ಬಟ್ಟೆ ಹಾಕಿಕೊಂಡು ಕುಳಿತುಬಿಟ್ಟ.
ಇದನ್ನು ನೊಡಿ ರಾಮ, “ಭರತ! ನೀನು ನನ್ನನ್ನು ಹೀಗೆ ನಿರ್ಭಂಧಿಸಬಹುದೇ? ನಾನು ಮಾಡಿದ ತಪ್ಪಾದರೂ ಏನು? ಹೀಗೆ ಬ್ರಾಹ್ಮಣರು ಕುಳಿತುಕೊಳ್ಳುತ್ತಾರೆ. ನೀನು ಬ್ರಾಹ್ಮಣನಲ್ಲ, ಕ್ಷತ್ರಿಯ. ಕ್ಷತ್ರಿಯನಾದ ನೀನು ಈ ರೀತಿ ಕುಳಿತುಕೊಳ್ಳುವುದು ಮೊದಲ ತಪ್ಪು. ನನ್ನಿಂದ ಯಾವುದೇ ತಪ್ಪು ನಡೆಯದಿದ್ದರೂ ನೀನು ಹೀಗೆ ಮಾಡಿರುವುದು ಎರಡನೆಯ ತಪ್ಪು. ನಿನ್ನ ದೋಷ ಪರಿಹಾರ ಮಾಡಿಕೊಳ್ಳಲು ಆಚಮನ ಮಾಡಿ, ಒಬ್ಬ ಧಾರ್ಮಿಕನನ್ನು ಮುಟ್ಟಿಕೊ” ಎಂದ.
ತನ್ನ ತಪ್ಪನ್ನು ತಿಳಿದ ಭರತ ಆಚಮನ ಮಾಡಿ ರಾಮನನ್ನು ಮುಟ್ಟಿ, ನಂತರ ಅಲ್ಲಿದ್ದ ಎಲ್ಲರನ್ನೂ ಕುರಿತು ಹೇಳಿದ: “ರಾಮ ಎಷ್ಟು ಹೇಳಿದರೂ ಬರುತ್ತಿಲ್ಲ. ಆದ್ದರಿಂದ ನಾನೂ ಕೂಡ ರಾಮನ ಜೊತೆ ಇಲ್ಲಿಯೇ ಇದ್ದುಬಿಡುತ್ತೇನೆ. ಇಲ್ಲದಿದ್ದರೆ ರಾಮ ಹೋಗಿ ರಾಜ್ಯ ಪರಿಪಾಲನೆ ಮಾಡಲಿ. ನಾನು ಅರಣ್ಯದಲ್ಲಿ ಇರುತ್ತೇನೆ.”
ಭರತನ ಮಾತು ಕೇಳಿ ರಾಮ ನಗುತ್ತಾ, “ಭರತ! ಹಾಗೆ ಬದಲಾಯಿಸಿಕೊಳ್ಳುವುದು ಸಾಧ್ಯಾವಿಲ್ಲ. ನಮ್ಮ ತಂದೆ ನಿನ್ನನ್ನು ಅರಣ್ಯಕ್ಕೆ ಹೋಗಲು ಹೇಳಲಿಲ್ಲ. ೧೪ ವರ್ಷಗಳು ಪೂರ್ಣವಾದ ಮೇಲೆ ನಾನು ಹಿಂತಿರುಗಿ ಬಂದು ರಾಜ್ಯ ಪಾಲನೆ ಮಾಡುತ್ತೇನೆ. ಅಲ್ಲಿಯವರೆಗೆ ನೀನು ರಾಜನಾಗಿರು” ಎಂದು ಅವನ ಮಾತನ್ನು ತಿರಸ್ಕರಿಸಿದ. ಅಲ್ಲಿದ್ದ ಋಷಿಗಳು ಭರತನನ್ನು ರಾಮನ ಮಾತಿನಂತೆ ರಾಜ್ಯಭಾರ ಮಾಡಲು ಹೇಳಿದರು. ಆದರೂ ಭರತ ತನಗೆ ರಾಜ್ಯ ಬೇಡ, ರಾಮನೇ ರಾಜ್ಯಭಾರ ಮಾಡಬೇಕೆಂದಾಗ ರಾಮ ದೃಢನಿರ್ಧಾರದಿಂದ, “ಚಂದ್ರನಿಗೆ ಬೆಳದಿಂಗಳಿಲ್ಲದಿರಬಹುದು, ಹಿಮಾಲಯದಿಂದ ನೀರು ಹರಿಯದೆ ನಿಂತಿಹೋಗಬಹುದು, ಸಮುದ್ರ ಉಕ್ಕಬಹುದು, ಆದರೆ ನಾನು ಮಾತ್ರ ನನ್ನ ಪ್ರತಿಜ್ಞೆಯನ್ನು ಮೀರುವುದಿಲ್ಲ” ಎಂದು ಹೇಳಿಬಿಟ್ಟ.
ಆಗ ವಸಿಷ್ಠರು ಎದ್ದು ನಿಂತು, “ರಾಮ! ನಿನ್ನ ರಾಜ್ಯವನ್ನು ಭರತ ಈ ೧೪ ವರ್ಷಗಳ ಕಾಲ ಪಾಲನೆ ಮಾಡುತ್ತಾನೆ. ನೀನು ಬಂದ ಮೇಲೆ ಮತ್ತೆ ನಿನಗೆ ಕೊಡುತ್ತಾನೆ” ಎಂದು ಹೇಳಿ ತಾವು ತಂದಿದ್ದ ಬಂಗಾರದ ಪಾದುಕೆಗಳನ್ನು ಭರತನಿಗೆ ಕೊಟ್ಟು, “ಭರತ! ಈ ಪಾದುಕೆಗಳ ಮೇಲೆ ರಾಮನನ್ನು ಒಂದು ಬಾರಿ ಹತ್ತಿ ಇಳಿಯಲು ಹೇಳು. ಇಂದಿನಿಂದ ಅಯೋಧ್ಯೆಯನ್ನು ಈ ಪಾದುಕೆಗಳು ಪಾಲಿಸುತ್ತವೆ” ಎಂದರು. (ವಸಿಷ್ಠರು ತ್ರಿಕಾಲವೇದಿಗಳು, ಅವರಿಗೆ ರಾಮ ಹಿಂತಿರುಗಿ ಬರನೆಂಬುದು ಗೊತ್ತು. ಆದ್ದರಿಂದಲೇ ಅವರು ತಮ್ಮ ಜೊತೆ ಬಂಗಾರದ ಪಾದುಕೆಗಳನ್ನು ತಂದಿದ್ದರು.)
ಭರತ ಆ ಬಂಗಾರದ ಪಾದುಕೆಗಳಿಗೆ ನಮಸ್ಕರಿಸಿ, ಅವನ್ನು ರಾಮನ ಪಾದದ ಹತ್ತಿರ ಇಟ್ಟ. ರಾಮ ಒಂದು ಬಾರಿ ಅದರ ಮೇಲೆ ಹತ್ತಿ ಇಳಿದ.
ತತ್ ಹಿ ಶಿರಸಿ ಕೃತ್ವಾ ತು ಪಾದುಕೇ ಭರತಹೇ ತದಾ
ಆರುರೋಹ ರಥಂ ಹೃಷ್ಟಂ ಶತೃಘ್ನೇನ ಸಮನ್ವಿತೇ
ಭರತ ಸಂತೋಷವಾಗಿ ಆ ಪಾದುಕೆಗಳನ್ನು ತನ್ನ ಶಿರಸ್ಸಿನ ಮೇಲಿಟ್ಟುಕೊಂಡು ಶತೃಘ್ನನ ಜೊತೆ ಅಯೋಧ್ಯೆಗೆ ಹಿಂತಿರುಗಿದ. ಅಯೋಧ್ಯೆಗೆ ಹೋದ ಮೇಲೆ ಆ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು, ತಾನು ಯಾವ ಕೆಲಸ ಮಾಡಿದರೂ ಪಾದುಕೆಗಳಿಗೆ ಹೇಳಿಯೇ ಮಾಡುತ್ತಿದ್ದ. ಆ ಪಾದುಕೆಗಳಲ್ಲಿಯೇ ರಾಮನನ್ನು ನೋಡಿಕೊಂಡು ಕಾಲ ಕಳೆದ.
Comments
Post a Comment