೨೫. ಆ ಎರೆಡು ವರಗಳು!
ತನ್ನ ದಾರಿಗೆ ಬಂದ ಕೈಕೆಗೆ ಮಂಥರೆ ಹೇಳಿದಳು:
”ಅದ್ಯ ರಾಮಮಿತಃ ಕ್ಷಿಪ್ರಂ ವನಂ ಪ್ರಸ್ಥಾಪಯಾಮ್ಯಹಂ
ಯೌವರಾಜ್ಯೇ ಚ ಭರತಂ ಕ್ಷಿಪ್ರಮೇವಾಭಿಷೇಚಯೇ
ಯಾವ ರಾಮ ತನ್ನ ಗುಣಗಳಿಂದ, ಪಿತೃವಾಕ್ಯ ಪರಿಪಾಲನೆಯಿಂದ, ತಂದೆಯನ್ನು ಸೇವಿಸುವುದರಿಂದ ರಾಜ್ಯವನ್ನು ಪಡೆಯುತ್ತಿದ್ದಾನೋ, ಆ ರಾಮನನ್ನು ಹದಿನಾಲ್ಕು ವರ್ಷಗಳು ಜಟೆ ಕಟ್ಟಿಕೊಂಡು, ನಾರು ಮಡಿಯುಟ್ಟು ದಂಡಾಕಾರಣ್ಯಕ್ಕೆ ಕಳಿಸಬೇಕು. ನಿನ್ನ ಮಗನಿಗೆ ಅದೇ ಮಹೂರ್ತದಲ್ಲಿ ಪಟ್ಟ ಕಟ್ಟಬೇಕು. ರಾಮ ಹದಿನಾಲ್ಕು ವರ್ಷ ಅರಣ್ಯಕ್ಕೆ ಹೋಗುವುದರಿಂದ ನಿನ್ನ ಮಗ ಸಿಂಹಾಸನದ ಮೇಲೆ ಕೂತು ಪ್ರಜೆಗಳ ಪ್ರೀತಿ ಸಂಪಾದಿಸುತ್ತಾನೆ. ಪ್ರಜೆಗಳ ಹೃದಯದಲ್ಲಿ ಸೇರಿಕೊಳ್ಳುತ್ತಾನೆ. ನಂತರ ರಾಮ ವಾಪಸ್ಸು ಬಂದರೂ ಪ್ರಜೆಗಳು ಭರತನ ಮೇಲೆ ತಿರುಗಿಬೀಳರು. ಆದ್ದರಿಂದ ರಾಮನಿಗೆ ಹದಿನಾಲ್ಕು ವರ್ಷ ವನವಾಸ, ನಿನ್ನ ಮಗನಿಗೆ ಪಟ್ಟಾಭಿಷೇಕ - ಇವೆರಡನ್ನೂ ವರವಾಗಿ ಕೇಳು"
"ಮಂಥರೆ! ನನ್ನ ಮಗನಿಗೆ ಪಟ್ಟಾಭಿಷೇಕ, ರಾಮನಿಗೆ ಅರಣ್ಯ ವಾಸ ಹೇಗೆ ಸಾಧ್ಯ?"
"ನಿನಗೆ ತಿಳಿಯದ ವಿಷಯವೇನಲ್ಲ. ನನ್ನ ಬಾಯಿಂದ ಹೇಳಿಸಬೇಕೆಂದಿದ್ದೀಯ. ಒಂದು ಬಾರಿ ಇಂದ್ರ ವೈಜಯಂತ ನಗರದಲ್ಲಿ ತಿಮಿರಧ್ವಜನೆಂಬ (ಶಂಬರಾಸುರ) ರಾಕ್ಷಸನ ವಿರುದ್ಧ ಯುದ್ಧ ಮಾಡುವ ಪರಿಸ್ಥಿತಿ ಬಂತು. ಆ ಯುದ್ಧದಲ್ಲಿ ಇಂದ್ರ ತನಗೊಬ್ಬನಿಗೇ ಗೆಲ್ಲಲು ಸಾಧ್ಯವಾಗದೆ ದಶರಥನ ಸಹಾಯ ಕೇಳಿದ. ದಶರಥ, ತನಗೆ ಎಲ್ಲ ವಿದ್ಯೆಗಳು ತಿಳಿದಿದ್ದರೂ ನಿನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋದ. ತಿಮಿರಧ್ವಜ ದಶರಥನಿಗೆ ಘಾಸಿಗೊಳಿಸಿದಾಗ, ಗಂಡನನ್ನು ಕಾಪಾಡಿಕೊಳ್ಳಲು ಸಾರಥ್ಯ ವಹಿಸುತ್ತಿದ್ದ ನೀನು ರಾಕ್ಷಸರಿಂದ ತಪ್ಪಿಸಿ ದೂರ ಕರೆದುಕೊಂಡು ಹೋದೆ. ಅಲ್ಲಿ ರಾಕ್ಷಸರು ಮತ್ತೆ ದಾಳಿ ಮಾಡಿದಾಗ, ನೀನು ಮತ್ತೆ ತಪ್ಪಿಸಿ ಬೇರೆ ಕಡೆ ಕರೆದುಕೊಂಡು ಹೋದೆ. ಹಾಗೆ ಎರೆಡು ಬಾರಿ ರಕ್ಷಿಸಿದ್ದರಿಂದ ನಿನಗೆ ದಶರಥ ಎರೆಡು ವರಗಳನ್ನು ಕೊಟ್ಟಿದ್ದ. ಆಗ ನೀನು ಯಾವ ವರವನ್ನೂ ಕೇಳದೆ ಅವಶ್ಯೆಕತೆಯಿದ್ದಾಗ ಕೇಳುತ್ತೇನೆಂದಿದ್ದೆ. ನೀನು ಮರೆತಿರಬಹುದು. ಈ ವಿಷಯವನ್ನು ನೀನೇ ಒಂದು ಬಾರಿ ನನಗೆ ಹೇಳಿದ್ದೆ. ಈಗ ಸಮಯ ಬಂದಿದೆ. ಆ ಎರಡು ವರಗಳನ್ನು ಕೇಳು. ಧರ್ಮಕ್ಕೆ ಕಟ್ಟುಬಿದ್ದು ದಶರಥ ಮಾತಿಗೆ ತಪ್ಪುವುದಿಲ್ಲ."
ಆ ಮಾತನ್ನು ಕೇಳಿ ಪರಮಸಂತೋಷಗೊಂಡು ಕೈಕೆ ಹೇಳಿದಳು: “ಮಂಥರೆ! ನೀನು ಗೂನು ಬೆನ್ನಿನಿಂದ ಬಾಗಿ, ತಲೆ ಅಲ್ಲಾಡಿಸುತ್ತಾ ಮಾತಾಡಿದರೆ, ಗಾಳಿಗೆ ಅಲ್ಲಾಡುವ ಹೂವಿನಂತೆ ಅನಿಸುತ್ತದೆ. ಭರತನ ಪಟ್ಟಾಭಿಷಕವಾದ ನಂತರ ನಿನ್ನ ಬೆನ್ನಿಗೆ ಬಂಗಾರದ ಹೊದಿಕೆ ಹಾಕಿಸುತ್ತೇನೆ. ರಾಜರ ತಲೆಯಲ್ಲಿ ಎಷ್ಟು ಆಲೋಚನೆ, ತಂತ್ರಗಳಿರುತ್ತವೆಯೋ ಅಷ್ಟೂ ನಿನ್ನ ಬೆನ್ನಲ್ಲೇ ಇವೆ. ”
“ನನ್ನ ಜೊತೆ ಮಾತಾಡುವುದಲ್ಲ. ನೀನು ಧರಿಸಿರುವ ಆಭರಣ, ಉಟ್ಟಿರುವ ರೆಷ್ಮೆ ಸೀರೆ ಬಿಸಾಕಿ, ಹಳೆಯ ಬಟ್ಟೆ ತೊಟ್ಟು ಕೋಪಗೃಹದಲ್ಲಿ ನೆಲದ ಮೇಲೆ ಮಲಗು. ಆಗ ದಶರಥ ಬಂದು ನಿನಗೆ ವಜ್ರ, ಮುತ್ತು, ರತ್ನಗಳನ್ನು ಕೊಡುತ್ತೇನೆನ್ನುತ್ತಾನೆ. ಅವನ ಮಾತಿಗೆ ಮರುಳಾಗದೆ ಪಟ್ಟು ಹಿಡಿದು ವರ ಕೊಡುತ್ತೀಯೊ ಇಲ್ಲವೊ ಎಂದು ಕೇಳು.”
“ನೀನು ಕೊಪಗೃಹದಿಂದ ಆನಂದವಾಗಿ ಬರುವ ಕೈಕೆಯನ್ನು ನೊಡುತ್ತೀಯ, ಇಲ್ಲ ನನ್ನ ಶವವನ್ನು ನೊಡುತ್ತೀಯ”, ಎಂದು ಹೇಳಿ ಕೈಕೆ ತನ್ನ ಅಲಂಕಾರವನ್ನು ತೆಗೆದು ಕೊಪಗೃಹದೊಳಗೆ ಹೋದಳು.
ಒಂದೆಡೆ ಪಟ್ಟಾಭಿಷೇಕಕ್ಕಾಗಿ ಅಣಿಯಾಗುತ್ತಿದ್ದಂತೆ, ದಶರಥ ತನಗೆ ಅತ್ಯಂತ ಪ್ರಿಯಾತಿಪ್ರಿಯವಾದ ಕೈಕೇಯಿಗೆ ತಾನೇ ಸ್ವಯಂ ಈ ಶುಭವಾರ್ತೆ ತಿಳಿಸಲು ಅವಳ ಮಂದಿರಕ್ಕೆ ಬಂದ. ಸರ್ವಕಾಲದಲ್ಲಿಯೂ ನವಿಲು, ಹಂಸಗಳಿಂದ, ಸಂಗೀತದಿಂದ ಮನೋಹರವಾಗಿ, ಹಂಸತೂಲಿಕಾತಲ್ಪಗಳು, ಮುತ್ತಿನಿಂದ ಅಲಂಕೃತವಾದ ಪರದೆಗಳಿಂದ ರಮಣೀಯವಾಗಿರುವ ಮಂದಿರದಲ್ಲಿ ಕೈಕೇಯಿ ಎಲ್ಲೂ ಕಾಣಲಿಲ್ಲ. ಅಲ್ಲಿರುವ ದಾಸಿಯರನ್ನು ವಿಚಾರಿಸಿದಾಗ, ಕೈಕೆ ಏಕೋ ಕೋಪಗೃಹದಲ್ಲಿ ನೆಲದಮೇಲೆ ಬಿದ್ದಿದ್ದಾಳೆ ಎಂಬ ವಿಷಯ ತಿಳಿಯಿತು. ದಶರಥ ಗಾಬರಿಗೊಂಡು ಆ ಕೋಪಗೃಹದೋಳಗೆ ಹೋದ. ಅಲ್ಲಿ ನೆಲದಮೇಲೆ ಬಿದ್ದ ಕೈಕೇಯಿಯನ್ನು ನೋಡಿ ದಶರಥನಿಗೆ ತಡೆದುಕೊಳ್ಳಲಾಗಲಿಲ್ಲ. ಕೈಕೆಯನ್ನು ಕುರಿತು,
"ಕೈಕೆ, ನಿನಗೆ ಏನಾದರೂ ವ್ಯಾಧಿಯೇ? ಅನಾರೋಗ್ಯವೇ? ನಮ್ಮ ರಾಜ್ಯದಲ್ಲಿ ದೊಡ್ದ ದೊಡ್ದ ವೈದ್ಯರಿದ್ದಾರೆ, ಅವರೆಲ್ಲರನ್ನೂ ಕರೆಸುತ್ತೇನೆ, ನೀನು ಹೀಗೆ ಮಲಗಿರುವುದನ್ನು ನನ್ನಿಂದ ಸಹಿಸಲಾಗಿತ್ತಿಲ್ಲ, ನಿನ್ನ ಮನಸ್ಸಿನಲ್ಲಿ ಏನಾದರೂ ಕೋರಿಕೆ ಇದ್ದರೆ ತಿಳಿಸು, ತಪ್ಪದೇ ತೀರಿಸುತ್ತೇನೆ.
ಅವಧ್ಯೋ ವಧ್ಯತಾಂ ಕೋ ವಾ ವಧ್ಯೋ ವಿಮುಚ್ಯತಾಂ |
ದರಿದ್ರಃ ಕೋ ಭವೇದಾಡ್ಯೋ ದ್ರವ್ಯವಾನ್ವಾಪ್ಯಕಿಚ್ಛನಃ ||
ಒಂದು ವೇಳೆ ಕೊಲ್ಲಬೇಕೆಂದಿರುವವನ ಮೇಲೆ ನೀನು ಪ್ರಸನ್ನಳಾದರೆ, ಅವನನ್ನು ಬಿಡುಗಡೆ ಮಾಡುತ್ತೇನೆ. ಕೊಲ್ಲಲು ಅವಶ್ಯವಿಲ್ಲದ ವ್ಯಕ್ತಿಯ ಮೇಲೆ ನಿನಗೆ ಕೋಪವಿದ್ದರೆ ಹೇಳು ಅವನನ್ನು ಕೊಲ್ಲುತ್ತೇನೆ. ನೀನು ಒಬ್ಬ ದರಿದ್ರನ ಮೇಲೆ ಪ್ರಸನ್ನಳಾದರೆ, ಹೇಳು ಅವನನ್ನು ಐಶ್ವರ್ಯವಂತನನ್ನಾಗಿ ಮಾಡುತ್ತೇನೆ. ಧನವಂತನ ಮೇಲೆ ನಿನಗೆ ಕೋಪವಿದ್ದರೆ ಹೇಳು ಅವನನ್ನು ಕ್ಷಣ ಮಾತ್ರದಲ್ಲಿ ದರಿದ್ರನನ್ನಾಗಿ ಮಾಡುತ್ತೇನೆ. ನಾನು, ನನ್ನ ರಾಣಿಯರು, ನನ್ನ ರಾಜ್ಯ ನನ್ನ ಪರಿವಾರ ಎಲ್ಲರೂ ನಿನ್ನ ಅಧೀನ. ನಿನ್ನ ಕೋರಿಕೆಯೇನೆಂದು ತಿಳಿಸು ಅದನ್ನು ತಪ್ಪದೇ ನೆರವೇರಿಸುತ್ತೇನೆ" ಎಂದ
ಕೈಕೆ, “ನನ್ನ ಕೋರಿಕೆಯನ್ನು ನಿನಗೆ ಹೇಳಿದರೆ ನೀನು ಇಲ್ಲ ಎನ್ನಬಹುದು. ಅದಕ್ಕಾಗಿ ಮೊದಲು ನನ್ನ ಕೋರಿಕೆಯನ್ನು ಈಡೇರಿಸುತ್ತೇನೆಂದು ಭಾಷೆ ಕೊಡು. ಆಮೇಲೆ ಹೇಳುತ್ತೇನೆ" ಎಂದಳು.
"ಯಾರನ್ನು ಒಂದು ಕ್ಷಣ ನೋಡದಿದ್ದರೆ ನನ್ನ ಪ್ರಾಣ ಗಾಳಿಯಲ್ಲಿ ಸೇರುವುದೋ, ಯಾರನ್ನು ಬಿಟ್ಟು ನಾನು ಒಂದು ಕ್ಷಣವೂ ಇರಲಾರೆನೋ, ಯಾರ ಮಾತು ನನ್ನ ಕಿವಿಗೆ ಬೀಳದಿದ್ದರೆ ನನ್ನ ಪ್ರಾಣ ಹಾರುವುದೋ, ಅಂಥಹ ರಾಮನ ಮೇಲೆ ಆಣೆ ಮಾಡಿ ಹೇಳುತ್ತೇನೆ! ನಿನ್ನ ಕೊರಿಕೆಯನ್ನು ತಪ್ಪದೇ ಈಡೇರಿಸುತ್ತೇನೆ".
ಕೈಕೆ ವರವನ್ನು ಕೇಳಿದಳು: “ಓ ರಾತ್ರಿ ದೇವತೆಗಳಿರಾ! ಹಗಲು ದೇವತೆಗಳಿರಾ! ಗೃಹ ದೇವತೆಗಳಿರಾ! ಸೂರ್ಯ! ಚಂದ್ರ! ಸಮಸ್ತ ದೇವತೆಗಳಿರಾ! ಭೂಮಿ, ಅಷ್ಟದಿಕ್ಪಾಲಕರೇ, ನೀವೆಲ್ಲರೂ ರಾಜ ಹೇಳಿದ ಮಾತನ್ನು ಕೇಳಿ! ನೀವೆಲ್ಲರೂ ನನ್ನ ಪರ ಸಾಕ್ಷಿ. ನನ್ನ ಕೋರಿಕೆಯನ್ನು ಕೇಳಿದ ನಂತರ ಅವುಗಳನ್ನು ನೆರೆವೇರಿಸುತ್ತೇನೆಂದು ರಾಜ ಮಾತುಕೊಟ್ಟಿದ್ದಾನೆ. ರಾಜಾ ನೆನಪಿಸಿಕೋ, ಒಂದಾನೊಂದು ದಿನ ಶಂಬಾಸುರನ ಮೇಲೆ ಯುದ್ಧಕ್ಕೆ ಹೋದಾಗ, ನಾನು ನಿನ್ನನ್ನು ನನಗೆ ಎರಡು ಬಾರಿ ರಕ್ಷಿಸಿದ್ದೆ. ಆಗ ನೀನು ನನಗೆ ನೀನು ಎರಡು ವರಗಳನ್ನು ನೀಡಿದ್ದೆ. ಆ ಎರಡು ವರಗಳನ್ನು ನಾನೀಗ ಕೇಳುತಿದ್ದೇನೆ.
ಅಭಿಷೇಕ ಸಮಾರಂಭೋ ರಾಗುವಸ್ಯಾಪಕಲ್ಪಿತಃ |
ಅನೇನೈವಾಭಿಷೇಕೇಣ ಭರತೋ ಮೇಭಿಷಿಚ್ಯತಾಂ ||
ನವಪಂಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ |
ಚೀರಾಜಿನಜಟಧಾರಿ ರಾಮೇ ಭವತು ತಾಪಸಃ |
ಭರತೋ ಭಜತಾಮದ್ಯ ಯೌವರಾಜ್ಯಮಕಣ್ಬ ಕಂ ||
ಯಾವ ರಾಮನಿಗೆ ಯುವರಾಜ ಪಟ್ಟಾಭಿಷೇಕವನ್ನು ಮಾಡಬೇಕೇಂದು ನೀನು ಸಂಭ್ರಮದಿಂದ ಏರ್ಪಟುಗಳನ್ನು ಮಾಡಿದ್ದೀಯೋ, ಅದೇ ಮುಹೂರ್ತಕ್ಕೆ ಭರತನಿಗೆ ಪಟ್ಟಾಭಿಷೇಕ ಮಾಡಬೇಕು. ಪಟ್ಟಾಭಿಷೇಕವನ್ನು ಮಾಡಿಸಿಕೊಳ್ಳಬೇಕಾದ ರಾಮ ಒಂಭತ್ತು ಮತ್ತು ಐದು ಸಂವತ್ಸರಗಳು(ನವಪಂಚ ಚ ವರ್ಷಾಣಿ) ದಂಡಕಾರಣ್ಯಕ್ಕೆ ಹೋಗಿ, ನಾರು ಮಡಿಯುಟ್ಟು, ಜಟೆಯನ್ನು ಕಟ್ಟಿ, ಮಾಂಸಾಹಾರ ತಿನ್ನದೇ, ತಪಸ್ವಿಯಾಗಿ ಬದುಕಬೇಕು".
(ತ್ರೇತಾಯುಗದ ಧರ್ಮದ ಪ್ರಕಾರ ೧೪ ಸಂವತ್ಸರಗಳು ರಾಜ್ಯಕ್ಕೆ ದೂರ ವಾಗಿದ್ದರೆ ಆ ವ್ಯಕ್ತಿ ಮತ್ತೆ ರಾಜನಾಗಲು ಅರ್ಹನಲ್ಲ. ಹಾಗಾಗಿ ಕೈಕೆ ರಾಮನಿಗೆ ೧೪ ವರ್ಷ ಅರಣ್ಯ ವಾಸ ಮಾಡಲು ಕೇಳಿದಳು. ಆದರೆ ಯಾರಲ್ಲಿ ಕಾಮ-ಕ್ರೋಧಗಳು ಅತಿಯಾಗಿ ಪ್ರಕಾಶಿಸುತ್ತವೆಯೋ, ಅವರನ್ನು ದೇವತೆಗಳು ಆವರಿಸಿ ದೈವಕಾರ್ಯದ ನಿಮಿತ್ತ ಬಳಸಿಕೊಳ್ಳುತ್ತಾರೆ. ಅದಕ್ಕಾಗಿ ದೇವತೆಗಳು ಕೈಕೇಯಿಯನ್ನು ಆವರಿಸಿ ಆಕೆಯಿಂದ ೧೪ ಅನ್ನಿಸದೇ, ೯ + ೫ (ನವ ಪಂಚ ವರ್ಷಾಣಿ) ಎಂದು ಹೇಳಿಸುತ್ತಾರೆ. ಕೈಕೇಯಿ ಹಾಗೆ ಹೇಳಿದ್ದರಿಂದ ರಾಮನು ರಾವಣ ಸಂಹಾರದ ಆನಂತರವೂ ರಾಜನಾಗಿ ಪಟ್ಟಭಿಷೇಕವನ್ನು ಹೊಂದಿದದನೆಂಬ ಅಭಿಪ್ರಾಯವಿದೆ.)
Comments
Post a Comment