೪೩. ವಿರಾಧ ವಧೆ - ಶರಭಂಗರ ಭೇಟಿ

ತಾಪಸಿಗರನ್ನು ಬಿಟ್ಟು ಸ್ವಲ್ಪ ದೂರ ಹೋದ ಮೇಲೆ ರಾಮಲಕ್ಷ್ಮಣರಿಗೆ ಒಂದು ರೀತಿಯ ನೊಣಗಳು ಕಂಡವು (ಇವು ಕೆಳಗೆ ಬಿದ್ದ ರಕ್ತವನ್ನು ತಿನ್ನಲು ಬರುತ್ತವೆ). ಅಲ್ಲಿಯೇ ಯಾರೋ ರಾಕ್ಷಸರು ಇರಬಹುದೆಂದು ಅವರು ಊಹಿಸಿದರು. ಅಷ್ಟರಲ್ಲೇ ಇಂಗಿದ ಕಣ್ಣುಗಳು, ಭಯಂಕರವಾದ ಹೊಟ್ಟೆ, ಪರ್ವತದಂತಹ ಆಕಾರ, ದೊಡ್ಡ ಕೈಗಳು, ಆಗತಾನೆ ಸಾಯಿಸಲ್ಪಟ್ಟ ಹುಲಿಯ ಚರ್ಮವನ್ನು ರಕ್ತವಿರುವಂತೆಯೇ ತನ್ನ ಸೊಂಟಕ್ಕೆ ಸುತ್ತಿಕೊಂಡು, ತನ್ನ ಭುಜದಲ್ಲಿದ್ದ ಶೂಲಕ್ಕೆ ಸಿಂಹ, ಹುಲಿ, ತೋಳ, ೧೦ ಜಿಂಕೆ ಮತ್ತು ಒಂದು ಆನೆಯ ತಲೆಯನ್ನು ಸಿಕ್ಕಿಸಿಕೊಂಡು, ಶರೀರದ ತುಂಬಾ ಮಾಂಸವನ್ನು ಅಂಟಿಸಿಕೊಂಡಿದ್ದ ಒಬ್ಬ ರಾಕ್ಷಸ ಅವರ ಬಳಿ ಓಡಿ ಬಂದು ಸೀತೆಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ರಾಮ ಲಕ್ಷ್ಮಣರಿಗೆ ಹೇಳಿದ:
ಅಧರ್ಮ ಚಾರಿಣೌ ಪಾಪಾ ಕೌ ಯುವಾಂ ಮುನಿ ದೂಷಕೌ
ಅಹಂ ವನಂ ಇದಂ ದುರ್ಗಂ ವಿರಾಘಾ ನಾಮ ರಾಕ್ಷಸಃ
ಚರಾಮಿ ಸಾಯುಧೌ ನಿತ್ಯಂ ಋಷಿ ಮಾಂಸಾನಿ ಭಕ್ಷಯನ್
ಇಯಂ ನಾರೀ ವರಾರೋಹಾ ಮಮ ಭಾರ್ಯಾ ಭವಿಷ್ಯತಿ
ನೀವು ಅಧರ್ಮಿಗಳು. ಪಾಪದಿಂದ ಜೀವನ ಮಾಡುತ್ತಿರುವವರು. ಮುನಿ ವೇಷ ಧರಿಸಿ ಹೆಂಡತಿಯೊಡನೆ ತಿರುಗುತ್ತಿರುವುದೇಕೆ? ಆದ್ದರಿಂದ ನಿಮ್ಮ ಪತ್ನಿಯನ್ನು ನಾನು ತೆಗೆದುಕೊಂಡಿದ್ದೇನೆ. ಇಂದಿನಿಂದ ಇವಳು ನನ್ನ ಪತ್ನಿ. ನೀವು ಇಲ್ಲಿಂದ ಹೊರಡಿ. ನನ್ನನ್ನು ವಿರಾಧ ಎನ್ನುತ್ತಾರೆ (ರಾಧಾ ಎಂದರೆ ಆನಂದ, ವಿರಾಧ ಆನಂದದ ವಿರುದ್ಧ). ನಾನು ಅರಣ್ಯದಲ್ಲೇ ಇರುತ್ತೇನೆ. ನನಗೆ ಋಷಿಗಳ ಮಾಂಸ ತಿನ್ನುವುದು ಇಷ್ಟವಾದ ಕೆಲಸ."
ಅವನ ಮಾತನ್ನು ಕೇಳಿ ರಾಮ ಲಕ್ಷ್ಮಣನನ್ನು ಕುರಿತು, "ನೋಡು ಲಕ್ಷ್ಮಣ, ಎಷ್ಟು ಬೇಗ ಕೈಕೆಯ ಆಸೆ ನಿಜವಾಯಿತು. ನನಗೆ ಬಂದಿರುವ ಕಷ್ಟ ನೋಡು. ನನ್ನ ಕಣ್ಣ ಮುಂದೆಯೇ ನನ್ನ ಪತ್ನಿಯನ್ನು ರಾಕ್ಷಸ ತನ್ನ ತೊಡೆಯ ಮೇಲೆ ಕೂರಿಸಿಕೊಂಡಿದ್ದಾನೆ" ಎಂದು ವಿಷಾದ ವ್ಯಕ್ತಪಡಿಸಿ, ವಿರಾಧನ ಕಡೆ ನೋಡುತ್ತಾ, "ನಮ್ಮನ್ನು ಯಾರು ಎಂದು ಕೇಳಿದೆಯಲ್ಲವೇ? ನಾವು ದಶರಥ ಮಹಾರಾಜನ ಮಕ್ಕಳು, ರಾಮಲಕ್ಷ್ಮಣರು, ನಮ್ಮ ತಂದೆಯ ಮಾತಿನಂತೆ ಕಾಡಿನಲ್ಲಿದ್ದೇವೆ. ನೀನು ಯಾರು?" ಎಂದು ಕೇಳಿದ.

"ನಾನು ಜವನೆಂಬುವವನ ಮಗ. ನನ್ನ ಅಮ್ಮ ಶತಪ್ರದ. ನಾನು ಅರಣ್ಯದಲ್ಲಿರುತ್ತಾ ಎಲ್ಲವನ್ನೂ ತಿಂದು ಬದುಕುತ್ತೇನೆ" ಎಂದು ಹೇಳಿ ವಿರಾಧ ಸೀತೆಯನ್ನು ಹೊತ್ತುಕೊಂಡು ಹೋಗಲು ಪ್ರಯತ್ನಿಸಿದಾಗ ರಾಮಲಕ್ಷ್ಮಣರು ಅಗ್ನಿಶಿಖೆಯಂತಹ ಬಾಣಗಳನ್ನು ಅವನ ಮೇಲೆ ಪ್ರಯೋಗಿಸಿದರು. ವಿರಾಧನ ಒಂದು ಆಕಳಿಕೆ ಬಾಣಗಳನ್ನು ಕೆಳಗುರುಳಿಸಿತು. ರಾಮಲಕ್ಷ್ಮಣರು ಅನೇಕ ಬಾಣಗಳನ್ನು ವಿರಾಧನ ಮೇಲೆ ಪ್ರಯೋಗಿಸಿದಾಗ ಅವನು ರಾಮನ ಮೇಲೆ ತನ್ನ ಶೂಲವನ್ನು ಬಿಟ್ಟ. ರಾಮ ತೀವ್ರ ವೇಗದ ಬಾಣಗಳಿಂದ ಶೂಲವನ್ನು ನಿಗ್ರಹಿಸಿದ. ವಿರಾಧ ಸೀತೆಯನ್ನು ಬಿಟ್ಟು ರಾಮಲಕ್ಷ್ಮಣರನ್ನು ಹಿಡಿದು ತನ್ನ ಭುಜದ ಮೇಲಿಟ್ಟುಕೊಂಡು ಅರಣ್ಯದೊಳಕ್ಕೆ ಹೋದ. ಅದನ್ನು ನೋಡಿದ ಸೀತೆ ಗಟ್ಟಿಯಾಗಿ ಕಿರುಚಿಕೊಂಡಳು. ರಾಮಲಕ್ಷ್ಮಣರು ತಮ್ಮ ಬಲದಿಂದ ವಿರಾಧನ ಕೈಗಳನ್ನು ಮುರಿದು ಅವನನ್ನು ಕೆಳಗುರುಳಿಸಿದರು. ಆದರೂ ಅವನು ಸಾಯದಿದ್ದಾಗ, ರಾಮ ಲಕ್ಷ್ಮಣನಿಗೆ ಆನೆಗಳನ್ನು ಬೀಳಿಸುವ ಖೆಡ್ಡದಂತೆ ಒಂದು ದೊಡ್ಡ ಗುಣಿಯನ್ನು ತೋಡಲು ಹೇಳಿ ವಿರಾಧನ ಕಂಠದ ಮೇಲೆ ತನ್ನ ಕಾಲನ್ನಿಟ್ಟು ನಿಂತುಕೊಂಡ. ಆಗ ವಿರಾಧ ಮಾಡಿದ ಆಕ್ರಂದನ ಇಡೀ ಅರಣ್ಯವನ್ನೇ ನಡುಗಿಸಿತು. ಸ್ವಲ್ಪ ಸಮಯದಲ್ಲಿ ಲಕ್ಷ್ಮಣ ಗುಂಡಿಯನ್ನು ತೋಡಿ ಮುಗಿಸಿದ. ಆಗ ವಿರಾಧ ರಾಮಲಕ್ಷ್ಮಣರಿಗೆ ತನ್ನ ಪೂರ್ವ ವೃತ್ತಾಂತವನ್ನು ವಿವರಿಸಿದ: "ನಾನು ಬ್ರಹ್ಮನಿಂದ ವರ ಪಡೆದಿದ್ದೇನೆ. ನನ್ನನ್ನು ಅಸ್ತ್ರ ಶಸ್ತ್ರಗಳು ಏನೂ ಮಾಡವು. ನನಗೆ ಈಗ ಅರ್ಥವಾಯಿತು. ನೀನು ಕೌಸಲ್ಯಾಕುಮಾರ ರಾಮ, ನಿನ್ನ ಪತ್ನಿ ವೈದೇಹಿ, ನಿನ್ನ ತಮ್ಮ ಲಕ್ಷ್ಮಣ. ನಾನು ಪೂರ್ವದಲ್ಲಿ ತುಂಬುರು ಎಂಬ ಗಂಧರ್ವ. ಒಂದು ಬಾರಿ ನಾನು ರಂಭೆಯೆಂಬ ಅಪ್ಸರೆಯ ಮೇಲಿನ ಕಾಮದಿಂದ ಕುಬೇರನ ಸಭೆಗೆ ಹೋಗಲಿಲ್ಲ. ಕೋಪಗೊಂಡ ಕುಬೇರ ನನ್ನನ್ನು ಭಯಂಕರವಾರವಾದ ರಾಕ್ಷಸನ ಜನ್ಮ ತಾಳುವಂತೆ ಶಪಿಸಿದ. ನಾನು ಶಾಪವಿಮೋಚನೆ ಹೇಗೆ ಎಂದು ಕೇಳಿದಾಗ, 'ನೀನು ದಶರಥ ಕುಮಾರನಾದ ರಾಮನಿಂದ ಎಂದು ನಿಗ್ರಹಿಸಲ್ಪಡುತ್ತೀಯೋ ಅಂದು ನಿನಗೆ ಶಾಪ ವಿಮೋಚನೆಯಾಗಿ ಸ್ವರ್ಗಲೋಕ ಪಡೆಯುತ್ತೀಯ' ಎಂದ. ಆದ್ದರಿಂದ ನನ್ನನ್ನು ಗುಂಡಿಯಲ್ಲಿ ಹೂತು ಸಂಹರಿಸಿರಿ. ಇಲ್ಲಿಂದ ಒಂದೂವರೆ ಯೋಜನದ ದೂರದಲ್ಲಿ ಶರಭಂಗ ಋಷಿಯ ಆಶ್ರಮವಿದೆ. ಅವರ ದರ್ಶನ ಮಾಡಿ. ನಿಮಗೆ ಒಳ್ಳೆಯದಾಗುತ್ತದೆ. "

ವಿರಾಧನನ್ನು ಗುಂಡಿಯಲ್ಲಿ ಹೂತು ಹಾಕಿ, ರಾಮಲಕ್ಷ್ಮಣರು ಶರಭಂಗರ ಆಶ್ರಮಕ್ಕೆ ಹೋದರು.

ಆಶ್ರಮಕ್ಕೆ ಹೋದಾಗ ಅವರಿಗೆ ಆಕಾಶದಲ್ಲಿ ಒಂದು ರಥ ಬಂದು ನಿಂತಂತೆ ಕಾಣಿಸಿತು. ಆ ರಥಕ್ಕೆ ಹಸಿರು ಕುದುರೆಗಳನ್ನು ಕಟ್ಟಿದ್ದರು. ಅದರ ಮೇಲೆ ಸೂರ್ಯಚಂದ್ರರೋ ಎಂಬಂತಹ ಒಂದು ಛತ್ರಿ ಇತ್ತು. ರಥದ ಸುತ್ತಲೂ ೨೫ ವರ್ಷ ತುಂಬಿದ, ದೊಡ್ಡ ಖಡ್ಗ ಹಿಡಿದ, ದಿವ್ಯ ತೇಜಸ್ಸುಳ್ಳ ಕೆಲವು ಸಾವಿರ ಮಂದಿಯಿಂದ ಕೂಡಿದ ಸೈನ್ಯವಿತ್ತು. ರಥದಲ್ಲಿದ್ದ ಆಸನದ ಪಕ್ಕ ಚಾಮರ ಹಿಡಿದಿದ್ದ ದೇವತಾ ಸ್ತ್ರೀಯರು ನಿಂತಿದ್ದರು. ಆದರೆ ಆ ಆಸನ ಖಾಲಿಯಾಗಿತ್ತು. ಅಲ್ಲಿ ಕುಳಿತುಕೊಳ್ಳಬೇಕಾದ ವ್ಯಕ್ತಿ ನೆಲದಿಂದ ಸ್ವಲ್ಪ ಮೇಲೆ ಗಾಳಿಯಲ್ಲಿ ನಿಂತು ಶರಭಂಗ ಋಷಿಗಳ ಜೊತೆ ಮಾತಾಡುತ್ತಿದ್ದ.

ಇದನ್ನು ಗಮನಿಸಿದ ರಾಮ ಲಕ್ಷ್ಮಣನಿಗೆ, “ಲಕ್ಷ್ಮಣಾ! ಹಸಿರು ಕುದುರೆಗಳ ರಥದ ಮೇಲೆ ಇಂದ್ರ ಬರುತ್ತಾನೆ ಎಂದು ವೇದದಲ್ಲಿ ಓದಿಕೊಂಡಿದ್ದು ನೆನಪಿದೆಯೇ? ಅಲ್ಲಿ ನೋಡು ಆ ಇಂದ್ರ ಶರಭಂಗ ಋಷಿಗಳ ಜೊತೆ ಮಾತಾಡುತ್ತಿದ್ದಾನೆ. ನಾವು ಎಲ್ಲರೂ ಒಂದೇ ಬಾರಿ ಒಳಕ್ಕೆ ಹೋಗಬಾರದು. ನಾನು ಮುಂಚೆ ಹೋಗಿ ಇಂದ್ರನನ್ನು ಒಂದು ಬಾರಿ ನೋಡುತ್ತೇನೆ” ಎಂದ.

ಒಳಗೆ ಬರುತ್ತಿದ್ದ ರಾಮನನ್ನು ನೋಡಿದ ಇಂದ್ರ ಶರಭಂಗರಿಗೆ,
“ಇಹಾ ಉಪಯಾತಿ ಅಸೌ ರಾಮೋ ಯಾವನ್ ಮಾಂ ನ ಅಭಿಭಾಷತೇ
ನಿಷ್ಠಾಂ ನಯತ ತಾವತ್ ತು ತತೋ ಮಾ ದ್ರಷ್ಟುಂ ಅರ್ಹತಿ
ರಾಮ ಬರುತ್ತಿದ್ದಾನೆ. ಅವನನ್ನು ನಾನು ನೋಡುವುದಿಲ್ಲ, ಮಾತಾಡಿಸುವುದಿಲ್ಲ. ಮುಂದೆ ಅವನು ಸಾಧಿಸಬೇಕಾದ ಒಂದು ದೊಡ್ಡ ಕಾರ್ಯವಿದೆ. ಆಗ ನಾನು ಬಂದು ಅಭಿನಂದಿಸುತ್ತೇನೆ“ ಎಂದು ಹೇಳಿ ಹೊರಟುಹೋದ. 

ರಾಮ ಸೀತಾಲಕ್ಷ್ಮಣ ಸಹಿತ ಶರಭಂಗರ ಆಶ್ರಮಕ್ಕೆ ಬಂದು ಅವರಿಗೆ ತನ್ನ ಪ್ರವರವನ್ನು ಹೇಳಿ ತಾನು, ರಾಮ, ಬಂದೆನೆಂದು ಹೇಳಿಕೊಂಡ.
“ರಾಮ ನೀನು ಬರುತ್ತೀಯೆಂದು ನನಗೆ ಗೊತ್ತಿತ್ತು. ನಾನು ನನ್ನ ತಪಃಶ್ಶಕ್ತಿಯಿಂದ ಇಂದ್ರಲೋಕ, ಬ್ರಹ್ಮಲೋಕಗಳನ್ನು ಪಡೆದಿದ್ದೇನೆ. ನನ್ನನ್ನು ಕರೆದುಕೊಂಡು ಹೋಗಲು ಸ್ವಯಂ ಇಂದ್ರನೇ ಬಂದಿದ್ದ. ಆದರೆ ನಾನು, ನನ್ನ ಪ್ರಿಯ ಅತಿಥಿ ಬಂದಿದ್ದಾನೆ, ಅವನಗೆ ಆತಿಥ್ಯ ಕೊಟ್ಟು ಬರುತ್ತೇನೆ ಎಂದೆ. ರಾಮ! ನಾನು ನನ್ನ ತಪಃಶ್ಶಕ್ತಿಯಿಂದ ಪಡೆದ ಲೋಕಗಳನ್ನು ನಿನಗೆ ಧಾರೆಯೆರೆಯುತ್ತೇನೆ. ಯಥೇಚ್ಛವಾಗಿ ಸೀತಾಲಕ್ಷ್ಮರ ಜೊತೆ ವಿಹರಿಸು” ಎಂದು ಶರಭಂಗರು ರಾಮನನ್ನು ಸತ್ಕರಿಸಿದರು.
ರಾಮ: “ಮಹಾನುಭಾವ! ನೀವು ತಪಸ್ಸು ಮಾಡಿ ನನಗೆ ಧಾರೆಯೆರೆಯುವುದೆಂದರೇನು? ನನಗೆ ಎಲ್ಲಿ ಆಶ್ರಮ ಕಟ್ಟಿಕೊಳ್ಳಬೇಕೆಂದು ಹೇಳಿ. ಅಲ್ಲಿ ನಾನು ತಪಸ್ಸು ಮಾಡಿಕೊಳ್ಳುತ್ತೇನೆ.”
“ಇಲ್ಲಿಯೇ ಹತ್ತಿರದಲ್ಲಿ ಸುತೀಕ್ಷ್ಣರೆಂಬ ಮಹರ್ಷಿಯಿದ್ದಾರೆ. ನೀನು ಅವರನ್ನು ಭೇಟಿಯಾಗು. ರಾಮ! ನಿನಗೆ ಒಂದು ವಿಚಿತ್ರವನ್ನು ತೋರಿಸುತ್ತೇನೆ. ಅಲ್ಲಿಯೇ ನಿಲ್ಲು. ನನ್ನ ಶರೀರ ಕೃಶವಾಗಿದೆ. ಈ ಶರೀರವನ್ನು ಅಗ್ನಿಯಲ್ಲಿ ಬಿಟ್ಟುಬಿಡುತ್ತೇನೆ” ಎಂದು ಶರಭಂಗರು ಅಗ್ನಿಹೋತ್ರದಲ್ಲಿ ತುಪ್ಪ ಹಾಕಿ, ತಮ್ಮ ಶರೀರವನ್ನು ಆ ಅಗ್ನಿಗೆ ಆಹುತಿ ಕೊಟ್ಟರು.

ತಸ್ಯ ರೋಮಾಣಿ ಕೇಶಾಂ ಚ ತದಾ ವಹ್ನಿಃ ಮಹಾತ್ಮನಃ
ಜೀರ್ಣಂ ತ್ವಚಂ ತದ್ ಅಸ್ಥೀನಿ ಯತ್ ಚ ಮಾಂಸಂ ಶೋಣಿತಂ

ಈ ಸನ್ನಿವೇಶವನ್ನು ನೋಡಿದ ಸೀತಾರಾಮಲಕ್ಷ್ಮಣರು ಆಶ್ಚರ್ಯದಿಂದ ನಿಂತುಬಿಟ್ಟರು. ಅಗ್ನಿಯಲ್ಲಿ ಶರಭಂಗರ ಕೇಶ, ಶರೀರ, ರಕ್ತ, ಮೂಳೆಗಳು ಸುಟ್ಟುಹೋದವು. ನಂತರ ಶರಭಂಗರು ಆ ಅಗ್ನಿಯಿಂದ ಯುವಶರೀರಿಯಾಗಿ ಹೊರಗೆ ಬಂದು ನಿತ್ಯಾಗ್ನಿಹೋತ್ರರು, ಋಷಿಗಳು ಪಡೆಯುವ ಲೋಕಗಳನ್ನು ದಾಟಿ ಬ್ರಹ್ಮಲೋಕಕ್ಕೆ ಹೋದರು. ಅಲ್ಲಿ ಸಿಂಹಾಸನದ ಮೇಲೆ ಕೂತಿದ್ದ ಬ್ರಹ್ಮದೇವರು, “ಮಹಾನುಭಾವ ಶರಭಂಗ! ನಿನಗೆ ಸ್ವಾಗತ” ಎಂದು ಬರಮಾಡಿಕೊಂಡರು. ಶರಭಂಗರು ಉತ್ಕೃಷ್ಟವಾದ ಲೋಕವನ್ನು ಪಡೆದರು.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ