೪೫. ಅಗಸ್ತ್ಯರ ಭೇಟಿ
ಮುಂದೆ ರಾಮ, ಮಧ್ಯೆ ಸೀತೆ, ಕೊನೆಯಲ್ಲಿ ಲಕ್ಷ್ಮಣ ತಮ್ಮ ಪ್ರಯಾಣ ಮುಂದುವರೆಸಿ ಮಧ್ಯದಲ್ಲಿ ಒಬ್ಬೊಬ್ಬ ತಾಪಸಿಗಳ ಆಶ್ರಮವನ್ನು ನೋಡುತ್ತಾ ಹೋಗುತ್ತಿದ್ದರು. ನಡುವೆ ಕೆಲವು ಋಷಿಗಳೂ ಅವರನ್ನು ಸೇರಿಕೊಂಡರು. ಹಾಗೆ ನಡೆಯುತ್ತಿರಬೇಕಾದರೆ ಅವರಿಗೆ ಒಂದು ವಿಚಿತ್ರವಾದ ಸರೋವರ ಕಾಣಿಸಿತು. ಅದರಿಂದ ಸಂಗೀತ, ನೃತ್ಯ, ಹಾಡುಗಳ ಧ್ವನಿಗಳು ಕೇಳಿಬರುತ್ತಿತ್ತು. ಆಶ್ಚರ್ಯಗೊಂಡ ರಾಮ ತನ್ನ ಪಕ್ಕದಲ್ಲಿದ್ದ ಧರ್ಮಭ್ರತ್ ಎಂಬ ಮಹರ್ಷಿಗಳನ್ನು ಆ ಸರಸ್ಸಿನ ವಿಷಯವಾಗಿ ವಿಚಾರಿಸಿದ. ಆ ಮಹರ್ಷಿಗಳು ವಿವರಿಸಿದರು:
“ಇದಂ ಪಂಚ ಅಪ್ಸರೋ ನಾಮ ತಟಾಕಂ ಸಾರ್ವಕಾಲಿಕಂ
ನಿರಮಿತಂ ತಪಸಾ ರಾಮ ಮುನಿನಾ ಮಾಂಡಕರ್ಣಿನಾ
ಈ ಸರೋವರವನ್ನು ಮಾಂಡಕರ್ಣಿ ಎಂಬ ಋಷಿ ನಿರ್ಮಿಸಿದರು. ಅವರು ೧೦೦೦೦ ವರ್ಷಗಳ ಕಾಲ ಕೇವಲ ವಾಯುವನ್ನು ಮಾತ್ರ ಸೇವಿಸಿ ತಪಸ್ಸು ಮಾಡಿದರು. ಆ ತಪಸ್ಸಿನಿಂದ ತಮ್ಮ ಸ್ಥಾನವನ್ನು ಆ ಋಷಿ ಆಕ್ರಮಿಸಿಕೊಳ್ಳುತ್ತಾರೆಂದು ಹೆದರಿದ ಅಷ್ಟದಿಕ್ಪಾಲಕರು, ಅವರ ತಪಸ್ಸನ್ನು ಭಂಗಪಡಿಸಲು ಐವರು ಅಪ್ಸರೆಯರನ್ನು ಕಳಿಸಿದರು. ಆ ಮಾಂಡಕರ್ಣಿ ಋಷಿ ಆ ಅಪ್ಸರೆಯರನ್ನು ನೋಡಿ ಮೋಹಗೊಂಡು, ಒಂದು ದೊಡ್ಡ ಸರೋವರವನ್ನು ನಿರ್ಮಿಸಿ, ಅದರಲ್ಲಿ ಒಂದು ಅಂತಃಪುರವನ್ನು ಕಟ್ಟಿದರು. ಈಗ ಅವರು ಆ ಅಂತಃಪುರದಲ್ಲಿ ಅಪ್ಸರೆಯರೊಂದಿಗೆ ಕ್ರೀಡಿಸುತ್ತಿದ್ದಾರೆ. ಅಪ್ಸರೆಯರು ಹಾಡುತ್ತಿರುವ ಹಾಡು, ನೃತ್ಯ, ಸಂಗೀತವೇ ಈ ಶಬ್ದಗಳು."
ಇದನ್ನು ಕೇಳಿ ರಾಮ ಆಶ್ಚರ್ಯಗೊಂಡು ಮುಂದೆ ನಡೆದ. (ಮಾಂಡಕರ್ಣಿ ಮಹರ್ಷಿಯ ಕಥೆಯನ್ನು ತಾತ್ವಿಕ ದೃಷ್ಟಿಯಿಂದ ನೋಡಿದರೆ, ಅವರ ಬಳಿ ಬಂದ ಐದು ಅಪ್ಸರೆಯರು, ಕಿವಿ, ಕಣ್ಣು, ಮೂಗು, ನಾಲಿಗೆ, ಚರ್ಮ ಎಂಬ ಜ್ಞಾನೇಂದ್ರಿಯಗಳು. ತನ್ನ ಇಂದ್ರಿಯಗಳಿಗೆ ದಾಸನಾಗಿ ತಾನು ಅಷ್ಟು ವರ್ಷಗಳ ಕಾಲ ಸಂಪಾದಿಸಿದ ತಪಃಶಕ್ತಿಯನ್ನು ಆ ಮಹರ್ಷಿ ವ್ಯರ್ಥಪಡಿಸಿಕೊಂಡರು.)
ತಾನು ನೋಡುತ್ತಿದ್ದ ಆಶ್ರಮಗಳಲ್ಲಿ ರಾಮ ಒಂದರಲ್ಲಿ ೬ ತಿಂಗಳು, ಒಂದರಲ್ಲಿ ೯ ತಿಂಗಳು, ಇನ್ನೊಂದರಲ್ಲಿ ೧ ವರ್ಷ, ಹೀಗೆ ಒಂದೊಂದು ಆಶ್ರಮದಲ್ಲಿ ಸ್ವಲ್ಪ ಕಾಲದಂತೆ ಒಟ್ಟು ೧೦ ವರ್ಷಗಳನ್ನು ಕಳೆದ. ಕೊನೆಗೆ ತನ್ನ ಆಶ್ರಮಗಳ ಭೇಟಿಯನ್ನು ಮುಗಿಸಿ ಸುತೀಕ್ಷ್ಣರ ಆಶ್ರಮಕ್ಕೆ ಮರಳಿದ.
ಸುತೀಕ್ಷ್ಣರನ್ನು ಕಂಡು, "ಸ್ವಾಮಿ, ನಾನು ೧೦ ವರ್ಷಗಳು ತಾಪಸಿಗಳ ಆಶ್ರಮದಲ್ಲಿ ಕಳೆದು ಮರಳಿ ನಿಮ್ಮ ಆಜ್ಞೆಯಂತೆ ನಿಮ್ಮ ಆಶ್ರಮಕ್ಕೆ ಬಂದಿದ್ದೇನೆ. ಅಗಸ್ತ್ಯರ ಆಶ್ರಮ ಇಲ್ಲೇ ಹತ್ತಿರದಲ್ಲಿದೆ ಎಂದು ಕೇಳಿದ್ದೇನೆ. ಈ ಅರಣ್ಯ ವಿಶಾಲವಾದ ಕಾರಣ ಅವರ ಆಶ್ರಮ ನನಗೆ ಸಿಗಲಿಲ್ಲ. ಅಲ್ಲಿಗೆ ಹೋಗುವ ದಾರಿಯನ್ನು ನೀವು ತೋರಿಸಿಕೊಟ್ಟರೆ ಅವರನ್ನು ದರ್ಶಿಸಿಕೊಂಡು ಬರುತ್ತೇನೆ" ಎಂದು ಕೇಳಿದ.
ಅವರು, “ರಾಮ! ನಾನೂ ನಿನಗೆ ಅದನ್ನೇ ಹೇಳಬೇಕೆಂದಿದ್ದೆ. ಇಲ್ಲಿಂದ ೪ ಯೋಜನಗಳ ದೂರದಲ್ಲಿ ದಕ್ಷಿಣಕ್ಕೆ ಹೋದರೆ ಅಗಸ್ತ್ಯ ಭ್ರಾತರ ಆಶ್ರಮ ಸಿಗುತ್ತದೆ (ಅಗಸ್ತ್ಯ ಭ್ರಾತಾ ಎಂದರೆ ಅಗಸ್ತ್ಯರ ತಮ್ಮ ಎಂದರ್ಥ. ಇವರ ಹೆಸರನ್ನು ವಾಲ್ಮೀಕಿ ಮಹರ್ಷಿಗಳು ರಾಮಾಯಣದಲ್ಲಿ ಎಲ್ಲಿಯೂ ಪ್ರಸ್ತಾವಿಸಿಲ್ಲ. ರಘುವಂಶದಲ್ಲಿ ಹುಟ್ಟಿದ ರಾಮನನ್ನು ರಾಘವ ಎಂದಂತೆ, ಅಗಸ್ತ್ಯರ ತಮ್ಮನನ್ನು ಅಗಸ್ತ್ಯ ಭ್ರಾತಾ ಎಂದು ಕರೆಯುತ್ತಾರೆ). ನೀನು ಅಲ್ಲಿ ಒಂದು ದಿನವಿದ್ದು, ಮರುದಿನ ಬೆಳಗೆದ್ದು ಹೊರಟರೆ ನಿನಗೆ ಒಂದು ದೊಡ್ಡ ಪೊದೆ ಕಾಣುತ್ತದೆ. ಅಲ್ಲಿಂದ ಮುಂದೆ ಹೋದರೆ ನಿಮಗೆ ಮರಗಳ ಗುಂಪು ಕಾಣುತ್ತದೆ. ಅದರ ಹತ್ತಿರವೇ ಅಗಸ್ತ್ಯರ ಆಶ್ರಮವಿದೆ. ನೀವು ಹೋಗಿ ಅವರನ್ನು ದರ್ಶಿಸಿ" ಎಂದರು.
ಸೀತಾರಾಮಲಕ್ಷ್ಮಣರು ಸುತೀಕ್ಷ್ಣರ ಆಶೀರ್ವಾದ ಪಡೆದು ಅಗಸ್ತ್ಯರ ಆಶ್ರಮಕ್ಕೆ ಹೊರಟರು. ಅಗಸ್ತ್ಯ ಭ್ರಾತ್ರರ ಆಶ್ರಮದ ಹತ್ತಿರ ಬಂದಾಗ ರಾಮ ಲಕ್ಷ್ಮಣನಿಗೆ ಆ ಸ್ಥಳದ ವಿಶೇಷತೆಯನ್ನು ಕುರಿತು ವಿವರಿಸಿದ:
"ಪೂರ್ವದಲ್ಲಿ ಇಲ್ಲಿ ಇಲ್ವಲ, ವಾತಾಪಿ ಎಂಬ ಇಬ್ಬರು ರಾಕ್ಷಸರಿದ್ದರು. ಇಲ್ವಲ ಬ್ರಾಹ್ಮಣ ರೂಪವನ್ನು ಧರಿಸುತ್ತಿದ್ದ. ವಾತಾಪಿ ಒಂದು ಕುದುರೆಯ ರೂಪವನ್ನು ಧರಿಸುತ್ತಿದ್ದ. ಇಲ್ವಲ ಕಣ್ಣಿಗೆ ಸಿಕ್ಕ ಬ್ರಾಹ್ಮಣರ ಬಳಿ ಹೋಗಿ, 'ಸ್ವಾಮಿ! ನಾಳೆ ನಮ್ಮ ತಂದೆಯ ಶ್ರಾದ್ಧ. ನೀವು ಬ್ರಾಹ್ಮಣಾರ್ಥಕ್ಕೆ ಬರಬೇಕು' ಎಂದು ಕೇಳಿತ್ತಿದ್ದ. ಇಲ್ವಲ ಕುದುರೆಯ ರೂಪದಲ್ಲಿದ್ದ ವಾತಾಪಿಯನ್ನು ಕೊಂದು ಆ ಮಾಂಸವನ್ನು ಬ್ರಾಹ್ಮಣಾರ್ಥಕ್ಕೆ ಬಂದ ಬ್ರಾಹ್ಮಣನಿಗೆ ಬಡಿಸುತ್ತಿದ್ದ (ತ್ರೇತಾಯುಗ ಧರ್ಮದ ಪ್ರಕಾರ ತಂದೆಯ ಶ್ರಾದ್ಧದಲ್ಲಿ ಮಾಂಸವನ್ನು ಬಡಿಸುತ್ತಿದ್ದರು). ಬ್ರಾಹ್ಮಣನ ಊಟವಾದ ಮೇಲೆ ಇಲ್ವಲ ಹಸ್ತೋದಕ ಕೊಟ್ಟು, 'ವಾತಾಪಿ ಹೊರಗೆ ಬಾ' ಎನ್ನುತ್ತಿದ್ದ. ಆಗ ವಾತಾಪಿ ಬ್ರಾಹ್ಮಣನ ಶರೀರವನ್ನು ಸೀಳಿ ಹೊರಗೆ ಬರುತ್ತಿದ್ದ. ನಂತರ ಅವರಿಬ್ಬರು ಅವನ ಶರೀರವನ್ನು ಭಕ್ಷಿಸುತ್ತಿದ್ದರು. ಹೀಗೆ ಅವರು ಅನೇಕ ಮಂದಿ ಬ್ರಾಹ್ಮಣರನ್ನು ಕೊಂದಿದ್ದರು. ಒಂದು ಬಾರಿ ಆ ಕಡೆ ಹೋಗುತ್ತಿದ್ದ ಅಗಸ್ತ್ಯರನ್ನು ಮಿಕ್ಕ ಬ್ರಾಹ್ಮಣರಂತೆಯೇ ಎಂದುಕೊಂಡು ಊಟಕ್ಕೆ ಕರೆದರು. ತ್ರಿಕಾಲವೇದಿಯಾದ ಅಗಸ್ತ್ಯರು ಅವರ ಸಂಚನ್ನು ತಿಳಿದು, ಇಲ್ವಲನ ಆಹ್ವಾನವನ್ನು ಮನ್ನಿಸಿ ಅವನು ಬಡಿಸಿದ ಭೋಜನವನ್ನು ಭುಜಿಸಿದರು. ಊಟದ ನಂತರ ತನ್ನ ಹೊಟ್ಟೆಯ ಮೇಲೆ ಕೈಯಿಟ್ಟು, 'ಜೀರ್ಣಮ್ ಜೀರ್ಣಮ್ ವಾತಾಪಿ ಜೀರ್ಣಮ್' ಎಂದರು. ಇಲ್ವಲ ಹಸ್ತೋದಕ ಕೊಟ್ಟು ವಾತಾಪಿಯನ್ನು ಕರೆದ. ಆಗ ಅಗಸ್ತ್ಯರು,
ಕುತೋ ನಿಷ್ಕೃಮಿತುಂ ಶಕ್ತಿ್ ಮಯಾ ಜೀರ್ಣಸ್ಯ ರಕ್ಷಸಃ
ಭ್ರಾತುಃ ತೇ ಮೇಷ ರೂಪಸ್ಯ ಗತಸ್ಯ ಯಮ ಸಾಧನಂ
'ನಿನ್ನ ತಮ್ಮನನ್ನು ಜೀರ್ಣಿಸಿಕೊಂಡು ಯಮಲೋಕಕ್ಕೆ ಕಳಿಸಿದ್ದೇನೆ. ಅವನು ಇನ್ನು ಬರುವುದಿಲ್ಲ’ ಎಂದರು. ಇಲ್ವಲ ಕೋಪದಿಂದ ಘೋರ ರೂಪವನ್ನು ತಾಳಿ ಅಗಸ್ತ್ಯರ ಮೇಲೆ ಬಿದ್ದ. ಅವರು ಕೇವಲ ಒಂದು ಹೊಂಕಾರ ಮಾಡಿದಾಗ ಅವನು ಬೂದಿಯಾಗಿ ಸತ್ತುಬಿದ್ದ. ಆ ವಾತಾಪಿ ಇಲ್ವಲರನ್ನು ಅಗಸ್ತ್ಯರು ಕೊಂದ ಪ್ರದೇಶವೇ ಈ ಅಗಸ್ತ್ಯ ಭ್ರಾತ."
ಈ ವೃತ್ತಾನಂತವನ್ನು ಕೇಳಿ ಆ ಆಶ್ರಮದ ಒಳಕ್ಕೆ ಹೋದರು. ಅಲ್ಲಿದ್ದ ಅಗಸ್ತ್ಯ ಭ್ರಾತ್ರರು ಅವರನ್ನು ಆಹ್ವಾನಿಸಿ ಅವರಿಗೆ ಅರ್ಘ್ಯ, ಪಾದ್ಯಗಳನ್ನು ಕೊಟ್ಟು ತಿನ್ನಲು ಗೆಣಸು, ಜೇನನ್ನು ಕೊಟ್ಟರು. ಆ ರಾತ್ರಿ ಸೀತಾರಾಮಲಕ್ಷ್ಮಣರು ಅಲ್ಲೇ ಮಲಗಿ, ಮರುದಿನ ಅಗಸ್ತ್ಯರ ಆಶ್ರಮಕ್ಕೆ ದಾರಿಯನ್ನು ಕೇಳಿದಾಗ ಅಗಸ್ತ್ಯ ಭ್ರಾತ್ರರು, "ಅಲ್ಲಿ ಕಾಣುತ್ತಿರುವ ವೃಕ್ಷಗಳಿಗೆ ಪ್ರದಕ್ಷಿಣೆ ಹಾಕಿ ಅಲ್ಲಿಂದ ದಕ್ಷಿಣಕ್ಕೆ ಹೋದರೆ ನಿಮಗೆ ಅಗಸ್ತ್ಯರ ಆಶ್ರಮ ಕಾಣುತ್ತದೆ" ಎಂದು ಅವರಿಗೆ ದಾರಿ ತೋರಿಸಿದರು.
ಅಗಸ್ತ್ಯರ ಆಶ್ರಮದ ವಿಶೇಷತೆಯೆಂದರೆ ಅಲ್ಲಿ ಎಲ್ಲ ದೇವತೆಗಳಿಗೂ ಸ್ಥಾನವಿತ್ತು (ಅಂದರೆ ಅವರ ಆಶ್ರಮಕ್ಕೆ ದೇವತೆಗಳು ಬಂದು ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತು ಅಗಸ್ತ್ಯರನ್ನು ಪೂಜಿಸಿ ಹೋಗುತ್ತಿದ್ದರು. ಅಲ್ಲಿ ಶಿವ ಸ್ಥಾನವನ್ನು ಬಿಟ್ಟು ಇನ್ನೆಲ್ಲ ದೇವತೆಗಳಿಗೆ ಸ್ಥಾನವಿತ್ತು. ಅಗಸ್ತ್ಯರು ಶಿವನನ್ನು ಪೂಜಿಸುತ್ತಿದ್ದರು). ಅವರ ಆಶ್ರಮದಲ್ಲಿ ತಪಸ್ಸು ಮಾಡುತ್ತಿದ್ದ ಋಷಿಗಳು ದಿವ್ಯ ವಿಮಾನಗಳಲ್ಲಿ ಊರ್ಧ್ವ ಲೋಕಗಳಿಗೆ ಹೋಗುತ್ತಿದ್ದರು. ಆ ಆಶ್ರಮಕ್ಕೆ ಅಸತ್ಯ ನುಡಿಯುವವರಾಗಲೀ, ಕ್ರೂರಿಗಳಾಗಲೀ, ವಂಚಕರಾಗಲೀ, ಮತ್ತೊಬ್ಬರನ್ನು ತೊಂದರೆಗೊಳಪಡಿಸುವ ಸ್ವಭಾವದವರಾಗಲೀ ಯಾರೂ ಹೋಗುವಂತಿರಲಿಲ್ಲ.
ಸೀತಾರಾಮಲಕ್ಷ್ಮಣರು ಅಗಸ್ತ್ಯರ ಆಶ್ರಮ ಸೇರುವ ಹೊತ್ತಿಗೆ ಅದು ಎಲ್ಲಿ ನೋಡಿದರೂ ಮಡಿ ಬಟ್ಟೆಗಳು, ನಾರು ಸೀರೆಗಳು, ಯಜ್ಞ ಯಾಗಾದಿಗಳನ್ನು ಮಾಡಲು ಅಗ್ನಿವೇದಿಗಳು, ಪವಿತ್ರ ಪದಾರ್ಥಗಳು, ಹೂವಿನ ಹಾರಗಳು ಮೊದಲಾದ ಪದಾರ್ಥಗಳಿಂದ ಕಂಗೊಳಿಸುತ್ತಿತ್ತು. ರಾಮ ಲಕ್ಷ್ಮಣನನ್ನು ಕರೆದು, “ಲಕ್ಷ್ಮಣಾ! ನಾನು ಸೀತೆಯ ಜೊತೆ ಹೊರಗೆ ನಿಂತಿರುತ್ತೇನೆ. ನೀನು ಒಳಕ್ಕೆ ಹೋಗಿ, ‘ಸೀತೆ, ಲಕ್ಷ್ಮಣರ ಜೊತೆ ರಾಮ ಆಶ್ರಮಕ್ಕೆ ಬಂದಿದ್ದಾನೆ. ಅಗಸ್ತ್ಯರ ದರ್ಶನ ಬಯಸುತ್ತಿದ್ದಾನೆ. ಅನುಗ್ರಹವಿದೆಯೇ’ ಎಂದು ಕೇಳಿಕೊಂಡು ಬಾ” ಎಂದ. ಲಕ್ಷ್ಮಣ ಆಶ್ರಮದೊಳಕ್ಕೆ ಹೋಗಿ ಒಬ್ಬ ಮುನಿಕುಮಾರನ ಬಳಿ ತನ್ನ ಪ್ರಾರ್ಥನೆಯನ್ನು ನಿವೇದಿಸಿದ. ಆ ಮುನಿಕುಮಾರ ಅಗಸ್ತ್ಯರಿಗೆ ಆ ವಿಷಯವನ್ನು ಹೇಳಿದಾಗ ಅವರು, “ನಾನು ಸೀತಾರಾಮಲಕ್ಷ್ಮಣರನ್ನು ನೋಡಬೇಕೆಂದಿದ್ದೇನೆ. ನೀನು ಅವರು ಬಂದ ತಕ್ಷಣ ಅವರನ್ನು ನನ್ನ ಬಳಿ ಕರೆತರುವುದು ಬಿಟ್ಟು, ಇಲ್ಲಿಗೆ ಬಂದು ಏಕೆ ವೃಥಾ ಕಾಲಹರಣ ಮಾಡುತ್ತಿದ್ದೀಯ? ತಕ್ಷಣ ಹೋಗಿ ಅವರನ್ನು ಬರಹೇಳು” ಎಂದರು.
ರಾಮ ಸೀತೆ ಲಕ್ಷ್ಮರ ಜೊತೆ ಅಗಸ್ತ್ಯರ ಕೋಣೆಗೆ ಹೋಗುತ್ತಿದ್ದಾಗ ಅಲ್ಲಿ ಕಾರ್ತಿಕೇಯ, ವರುಣ, ಕುಬೇರ, ಸೋಮ, ಬ್ರಹ್ಮ, ವಿಷ್ಣು, ಮಹೇಂದ್ರ, ವಾಯು ಮುಂತಾದವರು ತಮ್ಮ ತಮ್ಮ ಸ್ಥಾನದಲ್ಲಿ ಕೂತು ಅಗಸ್ತ್ಯರಿಗೆ ಪೂಜೆ ಮಾಡಿ ಹೋಗುತ್ತಿದ್ದರು. ಅದೇ ಸಮಯದಲ್ಲಿ ಅಗಸ್ತ್ಯರು ಕೋಟಿಸೂರ್ಯರ ತೇಜಸ್ಸಿನಿಂದ ಹೊರಗೆ ಬಂದರು.
ಏವಂ ಉಕ್ತ್ವಾ ಮಹಾಬಾಹುಃ ಅಗಸ್ತ್ಯಂ ಸೂರ್ಯ ವರ್ಚಸಂ
ಜಾಗ್ರಹ ಆಪತತ್ ತಸ್ಯ ಪಾದೌ ಚ ರಘುನಂದನ
ಅಭಿವಾದ್ಯ ತು ಧರ್ಮಾತ್ಮಾ ತಸ್ಥಾ ರಾಮಃ ಕೃತಾಂಜಲಿಃ
ಸೀತಯಾ ಸಹ ವೈದೇಹ್ಯೇ ತದಾ ರಾಮಃ ಸ ಲಕ್ಷ್ಮಣಃ
ಅವರನ್ನು ನೋಡುತ್ತಿದ್ದಂತೆಯೇ ರಾಮ ಓಡಿ ಹೋಗಿ ತನ್ನ ಎರೆಡು ಕೈಗಳಿಂದ ಅಗಸ್ತ್ಯರ ಪಾದಗಳನ್ನು ಹಿಡಿದು ನಮಸ್ಕರಿಸಿದ. ಸೀತೆ, ಲಕ್ಷ್ಮಣರು ಅವರ ತೇಜಸ್ಸನ್ನು ನೋಡಿ ಸ್ಥಂಭಿತರಾಗಿ ನಿಂತುಬಿಟ್ಟರು.
ಅಗಸ್ತ್ಯರು ರಾಮ, ಲಕ್ಷ್ಮಣರಿಗೆ ಅರ್ಘ್ಯ ಪಾದ್ಯಗಳನ್ನು ಕೊಟ್ಟು, ತಾವು ಅಗ್ನಿಕಾರ್ಯ ಮುಗಿಸಿ ಬರುತ್ತೇನೆಂದು ಹೇಳಿ ರಾಮನನ್ನು ಆಸೀನನಾಗಲು ಹೇಳಿದರು. ಸ್ವಲ್ಪ ಸಮಯದ ನಂತರ ಹೊರಬಂದು ರಾಮನ ಕುಶಲ ವಿಚಾರಿಸಿದರು: “ರಾಮ ಅಗ್ನಿಕಾರ್ಯ ಮಾಡುವಾಗ ಅತಿಥಿ ಬಂದರೆ ಮೊದಲು ಅಗ್ನಿಕಾರ್ಯ ಮುಗಿಸಿ ನಂತರ ಅತಿಥಿಯನ್ನು ಪೂಜಿಸಬೇಕು. ಈ ಧರ್ಮವನ್ನು ಪಾಲಿಸದವರು ಮೇಲಿನ ಲೋಕದಲ್ಲಿ ಮಾಂಸ ತಿನ್ನುವವನಾಗುತ್ತಾನೆ. ಆದ್ದರಿಂದ ನೀನು ಬಂದಿದ್ದರೂ ನಾನು ಅಗ್ನಿಶಾಲೆಗೆ ಹೋಗಬೇಕಾಯಿತು. ರಾಮ! ನೀನು ಲೋಕವನ್ನು ಪಾಲಿಸುವ ರಾಜ. ಇಂದು ನಮ್ಮ ಪ್ರಿಯ ಅತಿಥಿಯಾಗಿ ಬಂದಿದ್ದೀಯ. ಆದ್ದರಿಂದ ನಿನ್ನನ್ನು ಪೂಜಿಸಬೇಕು” ಎಂದು ಅವರಿಗೆ ವಾನಪ್ರಸ್ಥರಿಗೆ ಬಡಿಸುವ ಊಟವನ್ನು ಬಡಿಸಿದರು. ನಂತರ ರಾಮನಿಗೆ ವಿಷ್ಣುಧನಸ್ಸು, ಬ್ರಹ್ಮನ ಸೂರ್ಯ ತೇಜಸ್ಸಿನಿಂದ ಕೂಡಿದ ಬಾಣ, ಇಂದ್ರ ಕೊಟ್ಟ ಎರೆಡು ಅಕ್ಷಯ ಬಾಣ ತೂಣಿರಗಳನ್ನು ಮತ್ತು ಒಂದು ಬ್ರಹ್ಮಾಂಡವಾದ ಹಿಡಿಯಿರುವ ಖಡ್ಗವನ್ನು ಕೊಟ್ಟು, ಅದರಿಂದ ಅವನಿಗೆ ಜಯವಾಗುವಂತೆ ಆಶೀರ್ವದಿಸಿದರು.
“ಸ್ವಾಮಿ, ನಾವು ಎಲ್ಲಿ ಆಶ್ರಮ ಕಟ್ಟಿಕೊಳ್ಳಬೇಕು?” ಎಂದು ರಾಮ ಕೇಳಿದಾಗ ಅವರು, “ನಿನ್ನನ್ನು ನನ್ನ ಜೊತೆಯಲ್ಲಿಯೇ ಈ ಆಶ್ರಮದಲ್ಲೇ ಇರಲು ಹೇಳಬೇಕೆಂದು ನನ್ನ ಆಸೆ. ಆದರೆ ನನ್ನ ತಪಃಶ್ಶಕ್ತಿಯಿಂದ ನಾನು ನಿನ್ನ ಮನಸ್ಸಿನಲ್ಲಿರುವ ಆಸೆಯನ್ನು ಗ್ರಹಿಸಿದ್ದೇನೆ. ಇಲ್ಲಿಗೆ ಹತ್ತಿರದಲ್ಲಿ ಪಂಚವಟಿ ಎಂಬ ಒಂದು ವನವಿದೆ. ಅಲ್ಲಿ ಗೋದಾವರಿ ನದಿ ಹರಿಯುತ್ತದೆ. ಅಲ್ಲಿ ಆಶ್ರಮವನ್ನು ನಿರ್ಮಿಸಿಕೊ. ನಿನ್ನ ಆಸೆ ಈಡೇರುತ್ತದೆ. ಸೀತೆ ಯಾರೂ ಮಾಡದ ತ್ಯಾಗ ಮಾಡಿದ್ದಾಳೆ. ಅವಳನ್ನು ಚೆನ್ನಾಗಿ ನೋಡಿಕೊ” ಎಂದರು. ಸೀತಾರಾಮಲಕ್ಷ್ಮಣರು ಅಗಸ್ತ್ಯರನ್ನು ಬೀಳ್ಕೊಂಡು ಅವರು ಹೇಳಿದಂತೆ ಪಂಚವಟಿಯ ಕಡೆ ಹೊರಟರು.
Comments
Post a Comment