೪೬. ಪಂಚವಟಿ
ಪಂಚವಟಿಗೆ ಹೋಗುವ ದಾರಿಯಲ್ಲಿ ಸೀತಾರಾಮಲಕ್ಷ್ಮಣರಿಗೆ ಒಂದು ಮರದ ಮೇಲೆ ದೊಡ್ಡ ಪಕ್ಷಿ ಕಾಣಿಸಿತು. ಅದು ರಾಮನನ್ನು ನೋಡಿ, ತಾನೂ ಅವರ ಜೊತೆ ಬರತ್ತೇನೆಂದಿತು. ರಾಮ ಅದನ್ನು ಯಾರು ಎಂದು ಕೇಳಿದಾಗ ಆ ಪಕ್ಷಿ ಹೇಳಿತು:
“ನಾನು ನಿನ್ನ ತಂದೆಯಾದ ದಶರಥ ಮಹಾರಾಜನ ಸ್ನೇಹಿತ. ಪ್ರಜಾಪತಿಗಳಲ್ಲಿ ಕೊನೆಯವನು ಕಶ್ಯಪ ಪ್ರಜಾಪತಿ. ಅವನು ದಕ್ಷ ಪ್ರಜಾಪತಿಯ ೬೦ ಕುಮಾರಿಯರಲ್ಲಿ ಅದಿತಿ, ದಿತಿ, ಧನು, ಕಾಳಿ, ತಾಮ್ರ, ಕ್ರೋಧವಶ, ಮನು, ಅನಲಾ ಎಂಬ ೮ ಮಂದಿಯನ್ನು ಮದುವೆ ಮಾಡಿಕೊಂಡ. ನಂತರ ಅವರನ್ನು ಕರೆದು, ‘ನೀವು ಕ್ಷೇತ್ರಗಳು. ನನ್ನ ತೇಜಸ್ಸಿನಿಂದ ನನ್ನ ಸಮಾನರಾದ ಮಕ್ಕಳಿಗೆ ಜನ್ಮನೀಡಿ’ ಎಂದ. ಅವನ ಮಾತುಗಳನ್ನು ಕೆಲವರು ಕೇಳಿದರು. ಕೆಲವರು ಕೇಳಲಿಲ್ಲ.
ಅದಿತಿಗೆ ೧೨ ಮಂದಿ ಆದಿತ್ಯರು, ೮ ವಸುಗಳು, ೧೧ ರುದ್ರರು, ಇಬ್ಬರು ಆಶ್ವಿನಿಯರು ಹುಟ್ಟಿದರು. ಹೀಗೆ ಒಟ್ಟು ೩೩ ದೇವತೆಗಳು ಅದಿತಿಗೆ ಹುಟ್ಟಿದರು. ದಿತಿಗೆ ದೈತ್ಯರು ಜನಿಸಿದರು. ಧನುವಿಗೆ ಹಯಗ್ರೀವ ಜನಿಸಿದ. ಈ ಮೂವರೂ ಕಶ್ಯಪನ ಮಾತು ಕೇಳಿದವರು.
ಕಶ್ಯಪನ ಮಾತು ಕೇಳದ ಕಾಳಿಗೆ ನರಕ, ಕಾಲಕ ಎಂಬುವವರೂ, ತಾಮ್ರೆಗೆ ಕ್ರೌಂಚಿ, ಭಾಸಿ, ಶ್ಯೆನಿ, ಧೃತರಾಷ್ಟ್ರೀ, ಶುಕಿ ಎಂಬ ೫ ಕನ್ಯೆಯರೂ ಜನಿಸಿದರು. ಕ್ರೌಂಚಿಗೆ ಗೂಬೆಗಳು ಹುಟ್ಟಿದವು. ಭಾಸಿಗೆ ಭಾಸ ಪಕ್ಷಿ, ಶ್ಯೆನಿಗೆ ಗಿಡುಗ, ಕೋಗಿಲೆಗಳು, ಧೃತರಾಷ್ಟ್ರಿಗೆ ಹಂಸ, ಚಕ್ರವಾಕಗಳು ಹುಟ್ಟಿದವು. ಶುಕಿಗೆ ನತ ಎನ್ನುವ ಹೆಣ್ಣು ಮಗು ಹುಟ್ಟಿತು. ನತೆಗೆ ವಿನೀತ, ವಿನಿತೆಗೆ ಗರುಡ, ಅರುಣರೆಂಬ ಇಬ್ಬರು ಜನಿಸಿದರು. ನಾನು ಅರುಣನ ಮಗ, ಜಟಾಯು. ನನ್ನ ಅಣ್ಣ ಸಂಪಾತಿ. ಹಾಗೆಯೇ, ಕ್ರೋಧವಶೆಗೆ ಮೃಗಿ, ಮೃಗಮಂದ, ಹರಿ, ಭದ್ರಮದ, ಮಾತಂಗಿ, ಶಾರ್ದೂಲಿ, ಶ್ವೇತ, ಸುರಭಿ, ಸುರಸ, ಕದ್ರುವ ಎಂಬ ಹತ್ತು ಹೆಣ್ಣುಮಕ್ಕಳಾದರು. ಮೃಗಿಗೆ ಸಾರಂಗ, ಮೃಗಮಂದೆಗೆ ಕರಡಿ, ಹರಿಗೆ ಸಿಂಹ, ಬಲವಾದ ವಾನರಗಳು, ಭದ್ರಮತಿಗೆ ಇರಾವತಿ ಎಂಬ ಆನೆ, ಇರಾವತಿಗೆ ಐರಾವತ, ಮಾತಂಗಿ ಎಂಬ ಆನೆಗಳು, ಶಾರ್ದೂಲಿಗೆ ಕಾಡು ಕೋತಿ, ಹುಲಿಗಳು, ಶ್ವೇತೆ ದಿಗ್ಗಜಗಳು, ಸುರಭಿಗೆ ರೋಹಿಣಿ, ಗೋವು, ಗಂಧರ್ವ ಮೊದಲಾದುವು ಹುಟ್ಟಿದವು. ಸುರಸೆಗೆ ಅನೇಕ ತಲೆಗಳುಳ್ಳ ಹಾವುಗಳು, ಕದ್ರುವಿಗೆ ಸಾಧಾರಣ ಸರ್ಪಗಳು ಹುಟ್ಟಿದವು. ರಾಮ! ನಾನು ನಿನಗೆ ಕಾಣಿಸುತ್ತಿರುವ ಎಲ್ಲ ಪ್ರಾಣಿ ಪಕ್ಷಿಗಳು ಕಶ್ಯಪ ಪ್ರಜಾಪತಿಯ ಸಂತಾನವೇ ಎಂದು ತಿಳಿಸಲು ಇದೆಲ್ಲ ಹೇಳಿದೆ."
ಇದೆಲ್ಲ ಕೇಳಿದ ರಾಮ ಜಟಾಯುವನ್ನು ತನ್ನ ಜೊತೆಯಲ್ಲಿಯೇ ಇರಲು ಹೇಳಿದ. ಅವರೆಲ್ಲರೂ ಪಂಚವಟಿಗೆ ಹೋದರು.
ಪಂಚವಟಿಗೆ ಸೇರಿದ ಮೇಲೆ ರಾಮ ಲಕ್ಷ್ಮಣನನ್ನು ಕುರಿತು, "ಲಕ್ಷ್ಮಣ! ಅಗಸ್ತ್ಯರು ಹೇಳಿದ ಸ್ಥಳ ಸೇರಿದ್ದೇವೆ. ಇಲ್ಲಿ ಸಮತಲವಾಗಿರುವ, ಬೇಕಾದಷ್ಟು ನೀರಿರುವ, ದರ್ಭೆ, ಹಣ್ಣು, ಗೆಡ್ಡೆ-ಗೆಣೆಸು ಮೊದಲಾದವುಗಳು, ದೇವತಾರಾಧನೆಗೆ ಸಮರ್ಪಕವಾಗಿ ಹೂಗಳು ಸಿಗುವ ಪ್ರದೇಶವನ್ನು ಆರಿಸಿ ಒಂದು ಪರ್ಣಶಾಲೆ ನಿರ್ಮಿಸು" ಎಂದ.
ಪರವಾನ್ ಅಸ್ಮಿ ಕಾಕುತ್ಥ್ಸ ತ್ವಯ ವರ್ಷ ಶತಂ ಸ್ಥಿತೇ
ಸ್ವಯಂ ತು ರುಚಿರ ದೇಶೇ ಕ್ರಿಯತಾಂ ಇತಿ ಮಾಂ ವದ
ಲಕ್ಷ್ಮಣ: “ಅಣ್ಣ! ನನ್ನನ್ನು ನಿರ್ಮಿಸು ಎಂದು ಕೇಳುತ್ತೀಯಲ್ಲ? ನೂರು ವರ್ಷಗಳೂ ನೀನು ನನಗೆ ಆಜ್ಞೆ ಮಾಡಬೇಕು. ನಾನು ಅದನ್ನು ಪಾಲಿಸಬೇಕು. ಲಕ್ಷ್ಮಣಾ ನೀನು ಪರ್ಣಶಾಲೆ ನಿರ್ಮಿಸು ಎಂದು ಆಜ್ಞಾಪಿಸಿದರೆ, ರಾಮನ ಆಜ್ಞೆ ಎಂಬ ಭಾವನೆಯಲ್ಲಿನ ಸಂತೋಷ, ನಾನೇ ಆರಿಸಿ ರಾಮ ಕೇಳಿದಂತೆ ನಿರ್ಮಿಸಿದ್ದೇನೆ ಎಂಬುದರಲ್ಲಿಲ್ಲ."
ಆನಂದಗೊಂಡ ರಾಮ ಲಕ್ಷ್ಮಣ ಕೈ ಹಿಡಿದು, "ಲಕ್ಷ್ಮಣಾ! ಇಲ್ಲೇ ಆಶ್ರಮ ನಿರ್ಮಿಸಿದರೆ ಚೆನ್ನಾಗಿರುತ್ತದೆ. ನಾವು ಎಲ್ಲಿ ಆಶ್ರಮ ಕಟ್ಟಿಕೊಳ್ಳಬೇಕೆಂದು ಅಗಸ್ತ್ಯ ಮಹರ್ಷಿಗಳು ಕೋರಿದ್ದರೋ ಅಂತಹ ರಮ್ಯವಾದ ಜಾಗ ಇದು. ಇಲ್ಲಿ ಸ್ವಚ್ಛನಂದವಾಗಿ ಹರಿಯುವ ಗೋದಾವರಿಯಿದ್ದಾಳೆ. ದೂರದಲ್ಲಿ ದೊಡ್ಡ ಪರ್ವತಗಳು, ಅದರ ಮೇಲೆ ವಿಹರಿಸುವ ಪ್ರಾಣಿಗಳ ಗುಂಪು ಕಾಣಿಸುತ್ತದೆ. ಹಂಸವೇ ಮೊದಲಾದ ಜಲ ಪಕ್ಷಿಗಳು, ಪುನ್ನಾಗ, ನೇರಳೆ, ಮಾವು ಮೊದಲಾದ ದೇವತಾ ವೃಕ್ಷಗಳಿಂದ ಕೂಡಿ ಕಂಗೊಳಿಸುತ್ತಿದೆ. ಅಗಸ್ತ್ಯರು ನಮ್ಮನ್ನು ತಂಗಲು ಹೇಳಿದ ಪ್ರದೇಶ ಇದೇ ಎಂದು ನನಗನಿಸುತ್ತಿದೆ. ಇಲ್ಲೇ ಪರ್ಣಶಾಲೆ ಕಟ್ಟು" ಎಂದ.
ಉತ್ಸಾಹದಿಂದ ಲಕ್ಷ್ಮಣ ಭೂಮಿಯನ್ನು ಅಗೆದು, ಮಣ್ಣು ತೆಗೆದು, ನೀರು ಹಾಕಿ, ನೆಲವನ್ನು ಹದ ಮಾಡಿದ. ದೊಡ್ಡ ದೊಡ್ಡ ಕಟ್ಟಿಗೆಗಳನ್ನಿಟ್ಟು, ಅದರ ಮಧ್ಯೆ ಅಂದವಾದ ಗೋಡೆಗಳನ್ನು ಕಟ್ಟಿದ. ಗೋಡೆಗಳ ಮೇಲೆ ಅಡ್ಡವಾಗಿ ಕಟ್ಟಿಗೆಗಳನ್ನಿಟ್ಟು ಅದರ ಮೇಲೆ ದರ್ಭೆಗಳಿಂದ ಚಪ್ಪರ ಹಾಕಿ ಸುಂದರವಾದ ಪರ್ಣಶಾಲೆಯನ್ನು ನಿರ್ಮಿಸಿದ. ನಂತರ ಗೋದಾವರಿ ತೀರಕ್ಕೆ ಹೋಗಿ ಸ್ನಾನ ಮಾಡಿ, ನೀರು, ಹೂ ಹಣ್ಣುಗಳನ್ನು ತಂದು ಹೊಸ ಮನೆಗೆ ಹೋಗುವ ಮುನ್ನ ಮಾಡಬೇಕಾದ ಶಾಂತಿ ಕರ್ಮಗಳನ್ನು ಮಾಡಿ ಸೀತಾರಾಮರ ಬಳಿ ಬಂದು ಕೈ ಕಟ್ಟುಕೊಂಡು ನಿಂತು, "ಅಣ್ಣಾ! ನೀನು ಹೇಳಿದಂತೆ ಪರ್ಣಶಾಲೆ ಸಿದ್ಧವಾಗಿದೆ. ಅತ್ತಿಗೆಯ ಜೊತೆ ಒಳಗೆ ಬಂದು ಮನೆ ಚೆನ್ನಾಗಿದೆಯೆಂದು ಹೇಳಿದರೆ ನನಗೆ ತುಂಬಾ ಸಂತೋಷವಾಗುತ್ತದೆ" ಎಂದ. (ಆ ಪರ್ಣಶಾಲೆ ತಾನೊಬ್ಬನೇ ನಿರ್ಮಿಸಿದನೆಂದು ಲಕ್ಷ್ಮಣನಿಗೆ ಆನಂದ. ಭಗವಂತನ ಸೇವೆ ಮಾಡುವುದರಲ್ಲಿ ತನ್ನ ಕಷ್ಟವನ್ನು ಮರೆತು ಮಾಡುತ್ತಾನೆ. ಅದೇ ಅವನ ಲಕ್ಷ್ಮಿ, ಅದಕ್ಕೆಂದೇ ವಸಿಷ್ಠರು ಅವನಿಗೆ 'ಲಕ್ಷ್ಮಣಾ' ಎಂದು ಹೆಸರಿಟ್ಟರು.)
ಪ್ರೀತೋ ಅಸ್ಮಿ ತೇ ಮಹತ್ ಕರ್ಮ ತ್ವಯಾ ಕೃತಂ ಇದಂ ಪ್ರಭೋ
ಪ್ರದಯಾ ಯನ್ ನಿಮಿತ್ತಂ ತೇ ಪರಿಷ್ವಂಗೋ ಮಯಾ ಕೃತಃ
ಆ ಪರ್ಣಶಾಲೆಯನ್ನು ನೋಡಿ ಸಂತೋಷದಿಂದ ರಾಮ, “ಲಕ್ಷ್ಮಣಾ! ತುಂಬಾ ಚೆನ್ನಾಗಿದೆ. ನೀನು ಮಾಡಿದ್ದಕ್ಕೆ ನಾನೇನು ಕೊಡಲಿ?” ಎಂದು ಲಕ್ಷ್ಮಣನನ್ನು ಗಟ್ಟಿಯಾಗಿ ತಬ್ಬಿಕೊಂಡು, “ನೀನು ಭಾವದಿಂದ, ಕೃತಜ್ಞತೆಯಿಂದ, ಧರ್ಮದಿಂದ ನನಗೆ ತಮ್ಮನಲ್ಲ! ನನ್ನ ತಂದೆ! ದಶರಥ ಮಹಾರಾಜರು ಮರಣಿಸಲಿಲ್ಲ. ನಿನ್ನ ರೂಪದಲ್ಲಿ ನನ್ನ ಹತ್ತಿರವೇ ಇದ್ದಾರೆ” ಎಂದ.
ಹಾಗೆ ಅವರು ಆ ಪಂಚವಟಿಯಲ್ಲಿ ದಿನವೂ ಮಾಡುವ ಕರ್ತವ್ಯಗಳನ್ನು ಮಾಡುತ್ತಾ, ಬರುವ ಋಷಿಗಳ ಜೊತೆ ಭಗವತ್ಸಂಭಿತ ವಿಷಯಗಳನ್ನು ಮಾತನಾಡುತ್ತಾ, ಗೆಡ್ಡೆ-ಗೆಣೆಸುಗಳನ್ನು ತಂದು ಸಂತೋಷವಾಗಿ ಜೀವನ ಮಾಡುತ್ತಿದ್ದರು.
ಕೆಲವು ಸಮಯದ ನಂತರ ಹೇಮಂತ ಋತುವಿನಲ್ಲಿ ರಾಮ ಮುಂಜಾನೆ ನದಿಯಲ್ಲಿ ಸ್ನಾನ ಮಾಡಲು ಹೊರಟ. ರಾಮ ಹಿಂದೆ ಸೀತೆ, ಲಕ್ಷ್ಮಣರೂ ಹೊರಟರು. ನದಿಯಲ್ಲಿ ಸ್ನಾನ ಮಾಡುತ್ತಿದ್ದ ರಾಮನನ್ನು ಕುರಿತು ಲಕ್ಷ್ಮಣ, “ಅಣ್ಣಾ! ನಿನಗೆ ತುಂಬಾ ಇಷ್ಟವಾದ ಋತು ಬಂದಿದೆ. ಈ ಋತುವಿನಲ್ಲಿ ತುಂಬಾ ಚೆನ್ನಾಗಿ ಮಂಜು ಬೀಳುತ್ತದೆ. ಜನರಿಗೆ ನೀರನ್ನು ನೋಡಿದರೆ, ಸ್ನಾನ ಮಾಡಲು ಹೆದರುತ್ತಾರೆ, ಸೂರ್ಯನನ್ನು ನೋಡಿದರೆ ಸಂತೋಷಿಸುತ್ತಾರೆ. ನೀರನ್ನು ನೋಡಿದರೆಯೇ ಮೈ ನಡುಗುತ್ತದೆ.
ನವ ಆಗ್ರಯಣ ಪೂಜಾಭಿ್ ಅಭ್ಯರ್ಚ್ಯ ಪಿತೃ ದೇವತಾಃ
ಈ ಕಾಲದಲ್ಲಿ ಬೆಳೆ ಮನೆ ಸೇರುತ್ತದೆ, ಆದ್ದರಿಂದ ಎಲ್ಲರೂ ತಮ್ಮ ಪಿತೃದೇವತೆಗಳಿಗೆ ನವಾಗ್ರಯಣ ಪೂಜೆ ಮಾಡುತ್ತಾರೆ. ಪಶುಗಳು ಹೆಚ್ಚು ಹಾಲನ್ನು ಕೊಡುತ್ತವೆ. ಬೆಳೆದ ಬೆಳೆ ಕೈ ಸೇರುವುದರಿಂದ ಹಳ್ಳಿಯಲ್ಲಿರುವ ಜನರೆಲ್ಲರೂ ಆನಂದವಾಗಿರುತ್ತಾರೆ. ಇಲ್ಲಿರುವ ಜಲಪಕ್ಷಿಗಳು ನೀರಿಗಿಳಿಯದೆ, ದಡದಲ್ಲಿ ತಮ್ಮ ಮುಖವನ್ನು ರೆಕ್ಕೆಗಳಲ್ಲಿ ಹಿಡಿದು ಕೂತಿವೆ. ನನಗೆ ಈ ಪಕ್ಷಿಗಳನ್ನು ನೋಡಿದರೆ ಉತ್ತಮ ಕ್ಷತ್ರಿಯ ವಂಶದಲ್ಲಿ ಹುಟ್ಟಿ ಯುದ್ಧರಂಗವನ್ನು ನೋಡಿ, ಯುದ್ಧಮಾಡದೆ ಓಡಿಹೋಗುವ ಪುಕ್ಕಲರಂತೆ ಅನಿಸುತ್ತಿದೆ. ಅಣ್ಣಾ ನನಗೆ ಒಂದು ಆಶ್ಚರ್ಯ. ಸಾಮಾನ್ಯವಾಗಿ ಮನುಷ್ಯರಿಗೆ ತಾಯಿಯ ಹೋಲಿಕೆಗಳು ಹೆಚ್ಚಾಗಿ ಬರುತ್ತವೆ. ಮೃಗಗಳಿಗೆ ತಂದೆಯ ಹೋಲಿಕೆಗಳು ಬರುತ್ತವೆ. ದಶರಥ ಧರ್ಮಾತ್ಮ. ಭರತ ತುಂಬಾ ಒಳ್ಳೆಯವನು. ಈಗ ಭರತನೂ ಹೀಗೆಯೇ ನದಿಯಲ್ಲಿ ಸ್ನಾನ ಮಾಡುತ್ತಿರುತ್ತಾನೆ. ಆದರೆ ಕೈಕೆ ದುಷ್ಟಬುದ್ಧಿಯವಳು. ಅವಳ ಹೋಲಿಕೆ ಭರತನಿಗೆ ಬರಲಿಲ್ಲವಲ್ಲ!” ಎಂದ.
“ಲಕ್ಷ್ಮಣಾ! ನಿನು ಭರತನ ಕುರಿತು ಮಾತಾಡಿದ್ದು ಸರಿಯಾಯಿತು. ನನ್ನ ಮನಸ್ಸಿಗೆ ತುಂಬಾ ಸಂತೋಷವೂ ಆಯಿತು. ಆದರೆ ಮಧ್ಯದಲ್ಲಿ ಕೈಕೆಯನ್ನು ಏಕೆ ನಿಂದಿಸುತ್ತಿದ್ದೀಯ? ಅಮ್ಮನನ್ನು ನಿಂದಿಸುವುದು ತಪ್ಪು. ಇನ್ನು ಮುಂದೆ ಆ ತಪ್ಪನ್ನು ಮಾಡಬೇಡ. ಭರತನನ್ನು ಬಿಟ್ಟು ಇರುವುದು ನನಗೂ ತುಂಬಾ ಕಷ್ಟವಾಗುತ್ತಿದೆ. ಚಿತ್ರಕೂಟದಲ್ಲಿ ಭರತನ ಜೊತೆ ಮಾತಾಡಿದ್ದು ಜ್ಞಾಪಕ ಬರುತ್ತಿದೆ. ಎಂದು ಅಯೋಧ್ಯೆ ಹೋಗಿ ಅವನನ್ನು ಮತನಾಡಿಸುತ್ತೇನೋ ಎಂದೆನಿಸುತ್ತಿದೆ.”
ಕೃತಾಭಿಷೇಕಃ ಸ ರರಾಜ ರಾಮಃ ಸೀತಾ ದ್ವಿತೀಯಃ ಸಹ ಲಕ್ಷ್ಮಣೇನ
ಕೃತ ಅಭಿಷೇಕೋ ತು ಗಿರಿ ರಾಜ ಪುತ್ರ್ಯಾ ರುದ್ರಃ ಸ ನಂದಿಃ ಭಗವಾನ್ ಇವ ಈಶಃ
ಸೀತಾರಾಮಲಕ್ಷ್ಮಣರು ಸ್ನಾನ ಮಾಡಿ, ಒದ್ದೆ ಬಟ್ಟೆಯಲ್ಲಿ ನಿಂತರೆ, ದಾರಿಯಲ್ಲಿ ಹೋಗುವವರಿಗೆ ಆಗತಾನೇ ಸ್ನಾನಮಾಡಿ ಹೊರಗೆ ಬಂದ ನಂದಿಕೇಶ್ವರ ಸಹಿತ ಪಾರ್ವತಿ ಪರಮೇಶ್ವರರಂತೆ ಕಾಣುತ್ತಿದ್ದರು ಎಂದು ವಾಲ್ಮೀಕಿ ಮಹರ್ಷಿಗಳು ಹೇಳುತ್ತಾರೆ.
Comments
Post a Comment