೫೦. ರಾವಣ - ಮಾರೀಚ ಭೇಟಿ
ರಾವಣಂ ಸರ್ವ ಭೂತಾನಾಂ ಸರ್ವ ಲೋಕ ಭಯಾವಹಂ
ರಾಕ್ಷಸೀ ಭ್ರಾತರಂ ಕ್ರೂರಂ ಸಾ ದದರ್ಮ ಮಹಾಬಲಂ
ಸರ್ವ ಲೋಕದಲ್ಲಿಯೂ, ಸರ್ವ ಪ್ರಾಣಿಗಳಿಗೂ ಭಯಂಕರನಾದ ರಾವಣ ಮಂತ್ರಿಸಭೆಯಲ್ಲಿದ್ದಾಗ ಶೂರ್ಪಣಖಿ ಭಯದಿಂದ ಅವನ ಬಳಿ ಬಂದು, "ನೀನು ಯಾವಾಗಲೂ ಭೋಗವನ್ನು ಅನುಭವಿಸುತ್ತಿರುತ್ತೀಯ. ಕಾಮ, ಕ್ರೋಧಗಳಿಗೆ ವಶನಾಗಿದ್ದೀಯ. ನಿನಗೆ ರಾಜ್ಯದ ಮೇಲೆ ಗಮನವಿಲ್ಲ. ಸರಿಯಾದ ಗೂಢಾಚಾರಿಗಳನ್ನು ನೇಮಿಸಿಲ್ಲ. ನಿನ್ನ ರಾಜ್ಯದಲ್ಲಿ ಏನು ನಡೆಯುತ್ತಿದೆಯೆಂದು ನಿನಗೆ ತಿಳಿಯುತ್ತಿಲ್ಲ. ಸ್ಮಶಾನದ ಅಗ್ನಿಯನ್ನು ಯಾರೂ ಮುಟ್ಟದಿರುವಂತೆ, ಸಿಂಹಾಸನದ ಮೇಲಿರುವ ನಿನ್ನನ್ನು ಯಾರೂ ಪ್ರಶ್ನಿಸುವುದಿಲ್ಲ. ನಿನ್ನ ಗೂಢಾಚಾರಿಗಳು ಎಲ್ಲಿ ಏನು ನಡೆಯುತ್ತಿದೆಯೆಂದು ತಿಳಿದುಕೊಳ್ಳುತ್ತಿರುವರೇ? ತಿಳಿದಿದ್ದರೂ ನಿನಗೆ ಹೇಳುತ್ತಿದ್ದಾರಾ? ಹೇಳಿದ್ದರೂ ನೀನು ನಡೆದ್ದಕ್ಕೆ ಸಂಕಟಪಡುತ್ತಿದ್ದೀಯಾ? ದಿನದಿನವೂ ನಿನ್ನ ಶತ್ರುಗಳು ಹೆಚ್ಚುತ್ತಿದ್ದಾರೆ. ನೀನು ಮಾತ್ರ ಕಾಮದಿಂದ ಕಣ್ಣು ಮುಚ್ಚಿಕೊಂಡಿದ್ದೀಯ. ಒಂದು ಬಾರಿ ನೀನು ರಾಜ್ಯಭ್ರಷ್ಟನಾದರೆ, ಅವಕಾಶ ಸಿಕ್ಕಿತೆಂದು ಪ್ರಜೆಗಳು ನಿನ್ನನ್ನು ಹೊಡೆದು ಸಾಯಿಸುತ್ತಾರೆ. ನಿನ್ನ ಕೀರ್ತಿ ಸಮುದ್ರದಲ್ಲಿರುವ ಪರ್ವತದಂತೆ ಕಾಂತಿಹೀನವಾಗುತ್ತದೆ. ನೀನು ದಂಡಕಾರಣ್ಯದಲ್ಲಿ ಮುನಿಗಳನ್ನು ಹಿಂಸಿಸಲು ೧೪ ಸಾವಿರ ರಾಕ್ಷಸರನ್ನು ನೇಮಿಸಿದ್ದೆ. ಆದರೆ ಅವರನ್ನು ರಾಮನೊಬ್ಬನು ಭೂಮಿಯ ಮೆಲೆ ನಿಂತು ಸಂಹರಿಸಿದ. ಇದನ್ನು ತಿಳಿಯದೆ ನೀನು ನಿನಗೆ ಇಷ್ಟಬಂದಂತೆ ಪ್ರವರ್ತಿಸುತ್ತಿದ್ದೀಯ. ಇನ್ನು ಕೆಲವು ಕಾಲದಲ್ಲಿ ನಿನ್ನ ಪತನ ಆರಂಭವಾಗುತ್ತದೆ“ ಎಂದಳು.
ಶೂರ್ಪಣಖಿಯ ಮಾತುಗಳನ್ನು ಕೇಳಿ ರಾವಣ, "ಆ ರಾಮ ಯಾರು? ಅರಣ್ಯಕ್ಕೆ ಬಂದದ್ದೇಕೆ? ಅವನ ಬಳಿಯಿರುವ ಆಯುಧಗಳೇನು? ರಾಕ್ಷಸರನ್ನು ಏಕೆ ಕೊಂದ? ನಿನ್ನ ಮೂಗು, ಕಿವಿಗಳನ್ನು ಕೊಯ್ದವರು ಯಾರು? ವಿವರವಾಗಿ ಹೇಳು" ಎಂದ.
“ದೀರ್ಘಬಾಹುಃ ವಿಶಾಲಾಕ್ಷಃ ಚೀರ ಕೃಷ್ಣಾಜಿನಾಂಬರಃ
ಕಂದರ್ಪ ಸಮ ರೂಪಃ ಚ ರಾಮೋ ದಶರಥಾತ್ಮಜಃ
ರಾಮ ದೊಡ್ಡ ದೊಡ್ಡ ಕೈ, ವಿಶಾಲವಾದ ಕಣ್ಣುಗಳಿಂದ, ಋಷಿಗಳಂತೆ ನಾರು ಮಡಿಯುಟ್ಟು, ಕೃಷ್ಣಾಜಿನವನ್ನು ಹೊದ್ದು ಮನ್ಮಥನಂತೆ ಅಂದವಾಗಿರುತ್ತಾನೆ. ಅವನು ದಶರಥರಾಜನ ಹಿರಿಮಗ. ಅವನು ದೇವೇಂದ್ರನಂತೆ ಬಿಲ್ಲು ಹಿಡಿದು ಬಿಡುವ ಬಾಣಗಳು ಬಾಯಿ ತೆಗೆದು ವಿಷ ಕಾರುತ್ತಾ ಬರುವ ಸರ್ಪಗಳಂತಿರುತ್ತವೆ. ೧೪೦೦೦ ಮಂದಿಯನ್ನು ಅವನು ಕೊಲ್ಲುವಾಗ ನಾನು ಅಲ್ಲೇ ಇದ್ದೆ. ಕೊಂದವನು ರಾಮನೆಂದು ಗೊತ್ತು. ಆದರೆ ಅವನು ಯಾವಾಗ ಬಿಲ್ಲು ತೆಗೆದನೋ, ಬಾಣ ಹೂಡಿದನೋ, ಗುರಿ ನೋಡಿ ಹೊಡೆದನೋ ಒಂದೂ ತಿಳಿಯಲಿಲ್ಲ. ಆದರೆ ತಲೆಗಳು ಮಾತ್ರ ಬಿದ್ದವು. ರಾಮನಿಗೆ ಗುಣ, ತೇಜಸ್ಸಿನಲ್ಲಿ ಸಮಾನನಾದವನು ಅವನ ತಮ್ಮ ಲಕ್ಷ್ಮಣ.
ರಾಮಸ್ಯ ದಕ್ಷಿಣೇ ಬಾಹುಃ ನಿತ್ಯಂ ಪ್ರಾಣೋ ಬಹಿಃ ಚರಃ
ಅವನು ರಾಮನ ಬಲ ಭುಜದಂತೆ. ರಾಮನ ಪತ್ನಿ ಸೀತೆ. ಅಪಾರವಾದ ಪ್ರೀತಿಯಿಂದ ರಾಮನನ್ನು ಸೇವಿಸುತ್ತಿರುತ್ತಾಳೆ. ಅವಳು ವಿಶಾಲವಾದ ಕಣ್ಣು, ಕಪ್ಪು ಕೂದಲು, ಸುಂದರವಾದ ಮೂಗು, ಮುಖದಲ್ಲಿ ಕಾಂತಿಯಿಂದ ಕೂಡಿ ಪೂರ್ಣಚಂದ್ರಬಿಂಬದಂತಿದ್ದಾಳೆ. ಅವಳ ಮೈ ಬಂಗಾರವನ್ನು ಕಾಯಿಸಿ ಮಾಡಿದಂತಿದೆ. ಕೆಂಪು ರಕ್ತ ಹೊರಗೆ ಕಾಣುವಂತಹ ಶ್ವೇತ ಚರ್ಮ. ಅವಳನ್ನು ನೋಡಿದರೆ ಸಾಕ್ಷಾತ್ ಲಕ್ಷ್ಮಿಯನ್ನು ನೋಡಿದಂತಿರುತ್ತದೆ. ನಾನು ಇದುವರೆಗೆ ಈ ಭೂಮಿಯಲ್ಲಿ ಅಂತಹ ಸೌಂದರ್ಯವತಿಯನ್ನು ನೋಡಿಲ್ಲ. ಸೀತೆ ಯಾರನ್ನು ಆಲಂಗಿಸಿಕೊಳ್ಳುತ್ತಾಳೋ, ಯಾರಿಂದ ಪತ್ನಿ ಎನಿಸಿಕೊಳ್ಳುತ್ತಾಳೋ, ಅವನು ಮೂರು ಲೋಕಗಳ ಐಶ್ವರ್ಯ ಪಡೆದವನು, ಇಂದ್ರನ ಸಮಾನವಾದ ಕೀರ್ತಿಯನ್ನು ಹೊಂದಿದವನು. ನನಗೆ ಆ ಸೀತೆಯನ್ನು ನೋಡಿದ ತಕ್ಷಣ ನನ್ನ ಅಣ್ಣನಿಗೆ ಪತ್ನಿಯಾದರೆ ಚೆನ್ನಾಗಿರುತ್ತದೆ ಅನ್ನಿಸಿತು. ಆದ್ದರಿಂದ ಅವಳನ್ನು ಹೊತ್ತು ತರಲು ಪ್ರಯತ್ನಿಸಿದಾಗ ಆ ಲಕ್ಷ್ಮಣ ನನ್ನ ಮೂಗು, ಕಿವಿಗಳನ್ನು ಕೊಯ್ದ. ಅಣ್ಣಾ! ನೀನೇದಾರೂ ಸೀತೆಯನ್ನು ನೋಡಿದರೆ ಮನ್ಮಥ ಬಾಣಕ್ಕೆ ಸಿಕ್ಕಿಬೀಳುತ್ತೀಯ. ನಿಜವಾಗಿ ಸೀತೆಯನ್ನು ಹೆಂಡತಿಯಾಗಿ ಪಡೆಯಬೇಕೆಂದಿದ್ದರೆ ಇನ್ನು ಆಲೋಚಿಸದೆ ತಕ್ಷಣ ಹೊರಡು. ಅವಳನ್ನು ನಿಧಿಯಂತೆ ಅನುಭವಿಸು. ಅಡ್ಡ ಬರುವ ರಾಮನನ್ನು ಕೊಲ್ಲು"
ಶೂರ್ಪಣಖಿಯ ಮಾತನ್ನು ಕೇಳಿ ರಾವಣ ತನ್ನ ಮಂತ್ರಿಗಳ ಕಡೆಗೆ ನೋಡಿ, "ನೀವು ಹೊರಡಿ" ಎಂದ.
ಮಂತ್ರಿಗಳೆಲ್ಲ ಹೋದಮೇಲೆ ರಾವಣ ನಿಶ್ಶಬ್ಧವಾಗಿ ವಾಹನಶಾಲೆಗೆ ಹೋಗಿ ಸಾರಥಿಯನ್ನು ಕರೆದು ಉತ್ತಮವಾದ ರಥವನ್ನು ನಿರ್ಮಿಸಲು ಹೇಳಿದ. ಬಂಗಾರದಿಂದ ಮಾಡಲ್ಪಟ್ಟಿದ್ದ, ಪಿಶಾಚ ಮುಖಗಳುಳ್ಳ, ಕತ್ತೆಗಳನ್ನು ಕಟ್ಟಿದ್ದ ರಥವನ್ನು ಹತ್ತಿ ಸಮುದ್ರ ಮಾರ್ಗವಾಗಿ ಪ್ರಯಾಣ ಆರಂಭಿಸಿದ. ದಾರಿಯಲ್ಲಿ ಒಂದು ದೊಡ್ಡ ವಟ(ಆಲ)ವೃಕ್ಷ ಕಾಣಿಸಿತು.
(ತನ್ನ ತಾಯಿ ವಿನೀತೆಗೆ ದಾಸ್ಯ ವಿಮುಕ್ತಿ ಕಾಣಿಸಲು, ಗರುಕ್ಮಂತನು ಅಮೃತವನ್ನು ತರಲು ಹೊರಡುವ ಮುಂಚೆ ತನ್ನ ತಂದೆ ಕಶ್ಯಪನನ್ನು, ‘ಪ್ರಯಾಣದಲ್ಲಿ ನನಗೆ ಹಸಿವಾದಾಗ ಆಹಾರ ಎಲ್ಲಿ ಸಿಗುತ್ತದೆ’ ಎಂದು ಕೇಳಿದ. ಕಶ್ಯಪ, ‘ನೀನು ಹಿಮಾಲಯ ಪರ್ವತದ ಬಳಿ ಹೋದಾಗ ಒಂದು ಸರೋವರ ಕಾಣಿಸುತ್ತದೆ. ಅದರ ಬಳಿ ಎರೆಡು ಮದಗಜಗಳು, ಒಂದು ಆಮೆ ಒಂದು ಆನೆ, ಜಗಳವಾಡುತ್ತಿರುತ್ತವೆ. ಪೂರ್ವದಲ್ಲಿ ಒಬ್ಬ ಬ್ರಾಹ್ಮಣನಿಗೆ ವಿಭಾಸ, ಸುಪ್ರತೀಕರೆಂಬ ಇಬ್ಬರು ಮಕ್ಕಳಿದ್ದರು. ಆ ಬ್ರಾಹ್ಮಣ ಮರಣಿಸಿದ ನಂತರ ಅಣ್ಣ ತಮ್ಮಂದಿರ ಮಧ್ಯೆ ಆಸ್ತಿ ಹಂಚಿಕೆಯ ವಿಷಯದಲ್ಲಿ ಜಗಳವುಂಟಾಗಿ ಒಬ್ಬರನ್ನೊಬ್ಬರು ಆನೆ, ಆಮೆಗಳಾಗುವಂತೆ ಶಪಿಸಿಕೊಂಡರು. ಆಮೆಯ ಸುತ್ತಳತೆ ೧೦ ಯೋಜನಗಳು, ದಪ್ಪ ೩ ಯೋಜನಗಳು. ಆನೆ ೬ ಯೋಜನ ಎತ್ತರ, ೧೨ ಯೋಜನ ಉದ್ದವಿತ್ತು. ಆನೆ ಆಮೆಯನ್ನು ಭೂಮಿಗೆ ಎಳೆಯಲು ಪ್ರಯತ್ನಿಸಿದರೆ, ಆಮೆ ಆನೆಯನ್ನು ನೀರಿಗೆಳೆಯಲು ಪ್ರಯತ್ನಿಸುತ್ತಿತ್ತು. ಹಾಗೆ ಅವು ಕೆಲವು ವರ್ಷಗಳಿಂದ ಜಗಳವಾಡುತ್ತಿವೆ. ಆದ್ದರಿಂದ ಅಲ್ಲಿಗೆ ಯಾರೂ ಹೋಗುವುದಿಲ್ಲ. ನಿನಗೆ ಹಸಿವಾದರೆ ಅವನ್ನು ತಿಂದುಬಿಡು’ ಎಂದ. ಗರುಕ್ಮಂತನು ಪ್ರಯಾಣ ಶುರುಮಾಡಿದ ಕೆಲಹೊತ್ತಿಗೆ ಆನೆ ಆಮೆಗಳನ್ನು ನೋಡಿದ. ಅವೆರಡನ್ನು ತನ್ನ ಹೆಬ್ಬರಳಿನ ಉಗುರಿನಿಂದ ಎತ್ತಿ, ನ್ಯಗ್ರೋಧವೆಂಬ ಮಹಾವೃಕ್ಷದ ಕೊಂಬೆಯಲ್ಲಿಟ್ಟ. ಆದರೆ ಅವುಗಳ ಭಾರ ತಡೆಯದೆ ಕೊಂಬೆ ಮುರಿಯುತ್ತಿದ್ದಾಗ ಗರುಕ್ಮಂತ ತನ್ನ ಮೂಗಿನ ತುದಿಯಿಂದ ಅದನ್ನು ಎತ್ತಿ ಭದ್ರಸ್ಥಾನದಲ್ಲಿಟ್ಟ. ಸ್ವಲ್ಪ ಕಾಲದ ಮೇಲೆ ಅವನ್ನು ಒಂದು ಪರ್ವತದ ಮೇಲಿಟ್ಟುಕೊಂಡು ತಿಂದುಬಿಟ್ಟ. ನಂತರ ಇಂದ್ರನ ಬಳಿ ಹೋಗಿ ಅಮೃತವನ್ನು ತಂದು ವಿನೀತೆಗೆ ಕೊಟ್ಟು ಅವಳನ್ನು ದಾಸ್ಯದಿಂದ ವಿಮುಕ್ತಿಗೊಳಿಸಿದ. ಗರುಕ್ಮಂತ ಆ ಮದಗಜಗಳನ್ನು ಇಟ್ಟ ವೃಕ್ಷವೇ ಈ ವಟವೃಕ್ಷ.)
ರಾವಣ ಆ ವೃಕ್ಷವನ್ನು ನೋಡಿ ರಥದಿಂದಿಳಿದು ಸುತ್ತ ನೋಡಿದಾಗ ಒಂದು ಆಶ್ರಮ ಕಾಣಿಸಿತು. ಆಶ್ರಮದೊಳಗೆ ಒಬ್ಬ ನಾರುಮಡಿಯುಟ್ಟು, ಜಟೆಕಟ್ಟಿಕೊಂಡು, ನಿಯಮಿತ ಆಹಾರ ತಿನ್ನುತ್ತಾ, ಒಂದು ಕಾಲದಲ್ಲಿ ರಾಕ್ಷಸನಾಗಿದ್ದ ಮಾರೀಚ ಕಾಣಿಸಿದ. ರಾವಣ ಅವನನ್ನು ಕುರಿತು, “ಮಾರೀಚಾ! ನೀನು ನನಗೊಂದು ಉಪಕಾರ ಮಾಡಬೇಕು. ನಿನಗೆ ತಿಳಿದಂತೆ ನಾನು ಜನಸ್ಥಾನದಲ್ಲಿ ೧೪೦೦೦ ರಾಕ್ಷಸರನ್ನು ನಿಯಮಿಸಿ ಮುನಿಗಳ ಧರ್ಮಗಳನ್ನು, ಯಜ್ಞಗಳನ್ನು ನಾಶಮಾಡಲು ಆಜ್ಞಾಪಿಸಿದ್ದೆ. ನನ್ನ ಆಜ್ಞೆಯನ್ನು ಅವರು ಎಷ್ಟೋ ಶ್ರದ್ಧಾಭಕ್ತಿಗಳಿಂದ ಪಾಲಿಸುತ್ತಿದ್ದರು. ಎಲ್ಲಿಂದಲೋ ಬಂದ ರಾಮನೆನ್ನುವನು ಖರ, ದೂಷಣ, ತ್ರಿಶಿರಸ್ಕ, ಮಹಾಕಪಾಲ ಸೇರಿದಂತೆ ೧೪೦೦೦ ರಾಕ್ಷಸರನ್ನು ಒಬ್ಬನೇ ಕೊಂದಿದ್ದಾನೆ. ನನ್ನ ಮನಸ್ಸಿಗೆ ತುಂಬಾ ಖೇದವಾಗಿದೆ. ರಾಮ ಕರ್ಕಶ, ತೀಕ್ಷ್ಣ ಸ್ವಭಾವದವನು, ಮೂರ್ಖ. ಲಂಪಟ. ಇಂದ್ರಿಯಗಳನ್ನು ಗೆಲ್ಲದವನು. ಧರ್ಮ ಬಿಟ್ಟವನು. ಪ್ರಾಣಿಗಳನ್ನು ಭಯಗೊಳಿಸುವವನು. ದಶರಥನಿಗೆ ಅಸಹ್ಯ ಬಂದು ಅವನನ್ನು ಕಾಡಿಗೆ ಅಟ್ಟಿದ. ಆದ್ದರಿಂದ ನಾನು ಅವನನ್ನು ನೋಯಿಸಬೇಕೆಂದಿದ್ದೇನೆ. ಯಾವುದೇ ಪಾಪ ತಿಳಿಯದ ನನ್ನ ತಂಗಿ ಶೂರ್ಪಣಖಿಯ ಮೂಗು, ಕಿವಿಗಳನ್ನು ಕೊಯ್ದುಬಿಟ್ಟಿದ್ದಾರೆ. ಇಷ್ಟು ಮಾಡಿದ ಅವನನ್ನು ಪೀಡಿಸಲು ಅವನ ಹೆಂಡತಿ ಸೀತೆಯನ್ನು ಅಪಹರಿಸಬೇಕೆಂದಿದ್ದೇನೆ. ರಾಮನ ಮೇಲೆ ಯುದ್ಧಮಾಡಿ ಸೀತೆಯನ್ನು ತರಲು ಕಷ್ಟ. ಆದ್ದರಿಂದ ಯಾವುದೇ ಯುದ್ಧವಿಲ್ಲದೆ ಕೆಲಸವಾಗುವ ಉಪಾಯ ಮಾಡಿದ್ದೇನೆ. ನಿನಗೆ ಎಲ್ಲ ಮಾಯೆಗಳು ತಿಳಿದಿವೆ. ನೀನು ಬಂಗಾರದ ಜಿಂಕೆಯಾಗಿ ಬದಲಾಗು. ನಿನ್ನ ಮೇಲೆ ಬೆಳ್ಳಿಯ ಚುಕ್ಕೆಗಳಿರಬೇಕು. ಇಲ್ಲಿಯವರೆಗೆ ಯಾರೂ ನೋಡಿರದ ಕೊಂಬುಗಳಿರಬೇಕು. ನೀನು ಸೀತೆಗೆ ಕಾಣಿಸುವಂತೆ ಆಶ್ರಮದ ಬಳಿ ಅತ್ತಿತ್ತ ತಿರುಗಾಡು. ಆಗ ಸೀತೆ ನಿನ್ನನ್ನು ನೋಡಿ ಜಿಂಕೆ ಬೇಕೆಂದು ಕೇಳುತ್ತಾಳೆ. ಸೀತೆಯ ಆಸೆಯನ್ನು ತೀರಿಸಲು ರಾಮ ನಿನ್ನ ಹಿಂದೆ ಬರುತ್ತಾನೆ. ನೀನು ಅದೃಶ್ಯವಾಗುತ್ತಾ ಅವನನ್ನು ತುಂಬಾ ದೂರಕ್ಕೆ ಕರೆದುಕೊಂಡು ಹೋಗು. ಸಾಕಷ್ಟು ದೂರ ಓಡಿದ ಮೇಲೆ ಹಾ ಸೀತಾ! ಹಾ ಲಕ್ಷ್ಮಣಾ! ಎಂದು ಕೂಗು. ರಾಮನಿಗೆ ಕಷ್ಟಬಂದಿದೆಯೆಂದು ಸೀತೆ ಲಕ್ಷ್ಮಣನನ್ನು ಕಳಿಸುತ್ತಾಳೆ. ಆ ವೇಳೆಯಲ್ಲಿ ನಾನು ಹೋಗಿ ಸೀತೆಯನ್ನು, ರಾಹು ಚಂದ್ರನನ್ನು ಎತ್ತುಕೊಂಡು ಬಂದಂತೆ, ಎತ್ತುಕೊಂಡು ಬಂದುಬಿಡುತ್ತೇನೆ” ಎಂದ.
Comments
Post a Comment