೫೧. ಮಾರೀಚನ ಬೋಧೆ
ರಾವಣನ ಮಾತನ್ನು ಕೇಳಿದ ಮಹಾತ್ಮನಾದ ಮಾರೀಚ ದೇವತೆಗಳಂತೆ, ಕಣ್ಣುರೆಪ್ಪೆಯಾಡಿಸದಂತೆ ಸ್ಥಂಬಿತನಾಗಿ ನಿಂತುಬಿಟ್ಟ. ನಂತರ ಚೇತರಿಸಿಕೊಂಡು,
“ಸುಲಭಾಃ ಪುರುಷಾ ರಾಜನ್ ಸತತಂ ಪ್ರಿಯ ವಾದಿನಃ
ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ
ರಾವಣಾ! ನಮ್ಮ ಮನಸ್ಸಿಗೆ ಇಷ್ಟಬಂದಂತೆ ಮಾತಾಡುವವರು ಅನೇಕ ಮಂದಿ ಸಿಗುತ್ತಾರೆ. ಆದರೆ ಅವರು ನಮ್ಮ ಉನ್ನತಿಯನ್ನು ಬಯಸಿ ಮಾತಾಡುವವರಲ್ಲ. ಕೆಲವರು ಅಪ್ರಿಯವಾದ ಮಾತಾಡುತ್ತಾರೆ. ಆದರೆ ಆ ಮಾತುಗಳಲ್ಲಿ ನಮ್ಮ ಅಭ್ಯುದಯವಿರುತ್ತದೆ. ನಮಗೆ ಒಳ್ಳೆಯದನ್ನು ಬಯಸಿ ಮಾತಾಡುವವರು ಹೆಚ್ಚು ಜನ ಸಿಗುವುದಿಲ್ಲ. ನೀನು ಯಾರೋ ಗೂಢಾಚಾರರಿಂದ ರಾಮನ ಬಗ್ಗೆ ತಿಳಿದಿದ್ದೀಯ. ಅವನಾರೋ ದುರಾತ್ಮನಾಗಿರಬೇಕು. ನಿನ್ನ ಮೇಲೆ ದ್ವೇಷ ಸಾಧಿಸಿ ನಿನ್ನನ್ನು ಕೊಲ್ಲಬೇಕೆಂದಿದ್ದಾನೆ. ಆದ್ದರಿಂದ ನಿನಗೆ ಅವನು ಸುಳ್ಳು ಹೇಳಿದ್ದಾನೆ. ಇಲ್ಲಿಯವರೆಗೆ ನೀನು ರಾಮನ ಬಗ್ಗೆ ಕೇಳಿರುವುದೆಲ್ಲ ಸುಳ್ಳು. ರಾಮ ಧರ್ಮಾತ್ಮ, ಪರಾಕ್ರಮದಲ್ಲಿ ಮಾಹೇಂದ್ರ, ವರುಣರಿಗೆ ಸಮನಾದವನು. ಎಲ್ಲರೂ ಬಂದು ರಾಜ್ಯ ಸ್ವೀಕರಿಸಲು ಹೇಳಿದರೂ, ತನ್ನ ತಂದೆಗೆ ಕೊಟ್ಟ ಮಾತನ್ನು ಉಳಿಸಲು ಕಾಡಿಗೆ ಬಂದಿದ್ದಾನೆ. ನಿನ್ನ ಮಾತು ಕೇಳಿದರೆ ನನಗೆ ಅನುಮಾನ ಬರುತ್ತಿದೆ. ಸೀತೆ ಮಾನವ ಸ್ತ್ರೀಯಲ್ಲ. ನಿನ್ನನ್ನು ಕೊಲ್ಲಲು, ರಾಕ್ಷಸ ಕುಲವನ್ನು ನಾಶಮಾಡಲು, ಭೂಮಿಗೆ ಬಂದ ದೇವತಾ ಸ್ತ್ರೀ. ನಿನಗೆ ಹುಟ್ಟಿರುವ ಆಸೆಯಿಂದಲೇ ನೀನು ನಶಿಸುತ್ತೀಯ. ನಿನ್ನ ಜೊತೆ ಲಂಕಾ ಪಟ್ಟಣವೂ ನಶಿಸುತ್ತದೆ. ರಾಕ್ಷಸರೂ ನಶಿಸುತ್ತಾರೆ. ಯಾರೋ ಹೇಳಿದ ಸುಳ್ಳಿನ ಆಧಾರದ ಮೇಲೆ ನಿನಗೆ ಎಲ್ಲ ತಿಳಿದಿದೆ ಎಂದುಕೊಂಡು ಮಾತಾಡುತ್ತಿದ್ದೀಯ. ರಾಜನಿಗೆ ಚಪಲ ಬುದ್ಧಿಯಿರಬಾರದು.
ರಾಮೋ ವಿಗ್ರಹವಾನ್ ಧರ್ಮಃ ಸಾಧುಃ ಸತ್ಯ ಪರಾಕ್ರಮಃ
ರಾಜಾ ಸರ್ವಸ್ಯ ಲೋಕಸ್ಯ ದೇವಾನಾಂ ಇವ ವಾಸವಃ
ಸತ್ಯವನ್ನೇ ಪರಾಕ್ರಮವಾಗಿಸಿಕೊಂಡಿರುವ ಧರ್ಮದ ಮೂರ್ತರೂಪವೇ ರಾಮ. ಅವನು ಮೂರುಲೋಕಗಳಿಗೂ ರಾಜ. ಅಂತಹವನ ತಂಟೆಗೆ ಹೋದರೆ ನೀನು ಉಳಿಯುವುದಿಲ್ಲ. ಸೀತೆ ಬೂದಿ ಮುಚ್ಚಿದ ಕೆಂಡ. ತನ್ನ ತೇಜಸ್ಸಿನಿಂದಲೇ ತನ್ನನ್ನು ರಕ್ಷಿಸಿಕೊಳ್ಳುತ್ತಾಳೆ. ರಾಮನ ನೆರಳಿನಲ್ಲಿ ಸುರಕ್ಷಿತಳಾಗಿರುವ ಸೀತೆಯನ್ನು ಅಪಹರಿಸಿ ತರಲು ನಿನಗಿರುವ ಶಕ್ತಿ ಸಾಲದು.
ಜೀವಿತಂ ಚ ಸುಖಂ ಚೈವ ರಾಜ್ಯಂ ಚೈವ ಸುದುರ್ಲಭಂ
ಯತ್ ಇಚ್ಛಸಿ ಚಿರಂ ಭೋಕ್ತುಂ ಮಾ ಕೃಥಾ ರಾಮ ವಿಪ್ರಿಯಂ
ನಿನಗೆ ರಾಜ್ಯವಿದೆ. ನಿನಗೆ ಸಾವಿರಾರು ಪತ್ನಿಯರಿದ್ದಾರೆ. ಅವರ ಜೊತೆ ಜೀವಿಸಬೇಕೆಂದಿದ್ದರೆ ರಾಮನಿಗೆ ಕೇಡು ಮಾಡಬೇಡ. ನಾನು ಕೂಡ ನಿನ್ನಂತೆ ವೀರ. ಆ ದಿನಗಳಲ್ಲಿ ಕಪ್ಪು ಶರೀರ, ಬಂಗಾರದ ಕುಂಡಲಗಳನ್ನಿಟ್ಟುಕೊಂಡು ಗರ್ವದಿಂದ ತಿರುಗುತ್ತಿದ್ದೆ. ಒಂದು ಬಾರಿ ವಿಶ್ವಾಮಿತ್ರನು ಯಾಗ ಮಾಡುತ್ತಿರುವಾಗ ನಾನು ಆ ಯಾಗವನ್ನು ಧ್ವಂಸ ಮಾಡಿದೆ. ಆಗ ವಿಶ್ವಾಮಿತ್ರನು ಅಯೋಧ್ಯೆಯಿಂದ ರಾಮಲಕ್ಷ್ಮಣರನ್ನು ಕರೆತಂದ. ಯಾಗ ಪೂರ್ತಿಯಾಗುವಾಗ ಅದನ್ನು ಧ್ವಂಸ ಮಾಡಲು ಆಕಾಶ ಮಾರ್ಗವಾಗಿ ಹೋದೆ. ಆಗಲೇ ನನ್ನ ಗರ್ವ ಮುರಿದದ್ದು.
ಅಜಾತ ವ್ಯಂಜನಃ ಶ್ರೀಮಾನ್ ಬಾಲಃ ಶ್ಯಾಮಃ ಶುಭೇಕ್ಷಣಃ
ಏಕ ವಸ್ತ್ರ ಧರೋ ಧನ್ವೀ ಶಿಖೀ ಕನಕ ಮಾಲಯ
ನಾನು ಕೆಳಗೆ ನೋಡಿದಾಗ, ಕುತ್ತಿಗೆಯಲ್ಲಿ ಬಂಗಾರದ ಹಾರ ಹಾಕಿಕೊಂಡು, ಸರಿಯಾಗಿ ಮೀಸೆ ಚಿಗುರದ, ಪದ್ಮದಂತಹ ಕಣ್ಣುಗಳುಳ್ಳ, ಕೈಯಲ್ಲಿ ದಂಡವಿಟ್ಟುಕೊಂಡಿದ್ದ ಒಬ್ಬನನ್ನು ನೋಡಿದೆ. ಆ ಚಿಕ್ಕ ಹುಡುಗ ನನ್ನನ್ನೇನು ಮಾಡುತ್ತಾನೆಂದುಕೊಂಡು ಯಾಗ ಕುಂಡದಲ್ಲಿ ರಕ್ತ ಸುರಿದೆ. ಆಗ ಅವನು ಬಿಟ್ಟ ಬಾಣದ ಏಟಿಗೆ ನಾನು ೧೦೦ ಯೋಜನಗಳ ದೂರಕ್ಕೆ ಬಿದ್ದೆ. ಎಷ್ಟೋ ಕಾಲದ ಮೇಲೆ ನನಗೆ ಪ್ರಜ್ಞೆ ಬಂತು. ಆದರೆ ಕೆಲವು ದಿನಗಳ ನಂತರ ನನಗೆ ಮತ್ತೆ ಗರ್ವಬಂತು. ರಾಮನಿಗೆ ಕಾಣಿಸಬಾರದೆಂದು ಮೃಗದ ರೂಪ ಪಡೆದೆ. ನನಗಿದ್ದ ಕೆಲವು ಸ್ನೇಹಿತರ ಜೊತೆ ಸೇರಿ ತಾಪಸಿಗಳನ್ನು ಕೊಂದು ತಿನ್ನಲು ಹೊರಟೆವು. ಅಂತೆಯೇ ಕೆಲವರನ್ನು ಕೊಂದು ಭಕ್ಷಿಸಿದೆವು. ಹಾಗೆ ತಿರುಗುತ್ತಿದ್ದಾಗ ನಾರುಮಡಿಯುಟ್ಟು, ಸೀತಾಲಕ್ಷ್ಮಣರ ಜೊತೆ ಕೋದಂಡ ಹಿಡಿದು ರಾಮ ಕಾಣಿಸಿದ. ರಾಮ ಬದಲಾಗಿದ್ದಾನೆ, ತಾಪಸಿಯಂತಿರುವ ಅವನನ್ನು ತಿನ್ನಬಹುದೆಂದು ನನ್ನ ಸ್ನೇಹಿತರನ್ನು ಪ್ರೋತ್ಸಾಹಿಸಿ ಅವರನ್ನು ರಾಮನ ಮೇಲೆ ದಾಳಿಗೆ ಬಿಟ್ಟೆ. ರಾಮ ಅವರನ್ನು ಎರೆಡೇ ಬಾಣಗಳಿಂದ ಕೊಂದುಬಿಟ್ಟ. ನಾನು ಓಡಿಹೋದೆ. ಅಂದಿನಿಂದ ನನಗೆ ಕನಸಿಲ್ಲಿಯೂ ರಾಮ ಕಾಣಿಸುತ್ತಿದ್ದ. ಆದ್ದರಿಂದಲೇ ನಾನು ಈಗ ತಾಪಸಿಯಂತೆ ಬದುಕುತ್ತಿದ್ದೇನೆ. ಗೆಡ್ಡೆ ಗೆಣಸು ತರಲು ಕಾಡಿಗೆ ಹೋದರೆ ಕೊಂಬೆ, ಕಾಯಿ, ಗರಿಕೆ, ಭೂಮಿ, ಸೀರು ಎಲ್ಲೆಲ್ಲಿಯೂ ರಾಮನೇ ಕಾಣಿಸುತ್ತಿದ್ದಾನೆ. ಈಗ ನಾನು ಹೊರಗೆ ಕೂಡಾ ಹೋಗುತ್ತಿಲ್ಲ. ಎಲ್ಲವೂ ರಾಮಮಯವಾದರೆ ನಾನು ಯಾರ ತಂಟೆಗೆ ಹೋಗಲಿ? ಯಾರಿಗೆ ತೊಂದರೆ ಕೊಡಲಿ? ರಾವಣ! ನನ್ನ ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ ಯಾರಾದರೂ ‘ರ’ ಅಂದರೆ ಮತ್ತೆ ‘ಮ’ ಎನ್ನುತ್ತಾರೇನೋ ಎಂದು ಭಯವಾಗುತ್ತದೆ. ನಿನಗೆ ಯುದ್ಧ ಮಾಡಬೇಕೆಂದಿದ್ದರೆ ಮಾಡು. ಅಥವಾ ನನ್ನ ಮಾತು ಕೇಳಿ ಬಂದ ದಾರಿಯಲ್ಲಿ ಹೊರಟುಹೋಗು. ಆದರೆ ಇದರಲ್ಲಿ ನನ್ನನ್ನು ಎಳೆಯಬೇಡ. ನಿನ್ನ ತಂಗಿಯ ಮೂಗು, ಕಿವಿ ಕೊಯ್ದಿರಬಹುದು. ಆದರೆ ಅವಳೇನು ಮಾಡಿದಳೆಂದು ಕೇಳಿದಿಯಾ? ಹಾಗೆ ಕೇಳದೆ ಹೋಗಿ ಖರ ಸತ್ತ. ನೀನು ಅದೇ ದಾರಿಯಲ್ಲಿ ಹೋಗುತ್ತಿದ್ದೀಯ. ಧಾರ್ಮಿಕನಾಗಿದ್ದರೂ ಅಧಾರ್ಮಿಕನನ್ನು ಸ್ನೇಹಿತನನ್ನಾಗಿ ಮಾಡಿಕೊಂಡವನು ನಶಿಸುತ್ತಾನೆ. ನಿನ್ನ ಜೊತೆ ಸ್ನೇಹ ಬೆಳಸಲು ನನಗೆ ಭಯವಾಗುತ್ತಿದೆ. ನಿನಗೆ ಪತ್ನಿಯರನ್ನು ಪಡೆಯಬೇಕೆಂಬ ಆಸೆಯೇಕೆ? ಈಗ ನಿನಗಿರುವ ಪತ್ನಿಯರ ಜೊತೆ ನೀನು ಸುಖವಾಗಿಲ್ಲವೇ? ಇಷ್ಟುದಿನ ಚೆನ್ನಾಗಿದ್ದ ನಿನಗೆ ಈಗ ಕೆಟ್ಟಬುದ್ದಿಯೇಕೆ?” ಎಂದ.
ಮಾರೀಚನ ಮಾತಿಗೆ ರಾವಣ ಕೋಪದಿಂದ, “ನೀನು ರಾಮನ ಬಗ್ಗೆ ಅಷ್ಟು ಹೇಳಬೇಕಿಲ್ಲ. ಅವನೂ ಒಬ್ಬ ಮನುಷ್ಯ. ನನ್ನ ಮುಂದೆ ನೀನು ರಾಮನನ್ನು ಹೊಗಳುವ ಅಗತ್ಯವಿಲ್ಲ. ನನ್ನ ನಿರ್ಣಯ ಬದಲಾಗುವುದಿಲ್ಲ. ಖರ ಹೋದ ದಾರಿಯಲ್ಲಿ ರಾಮನನ್ನೂ ಕಳಿಸುತ್ತೇನೆ. ನಿನ್ನ ಸಹಾಯದಿಂದಲೇ ಸೀತೆಯನ್ನು ಅಪಹರಿಸುತ್ತೇನೆ. ನೀನು ನಿನ್ನ ಚೌಕಟ್ಟನ್ನು ಮೀರಿ ಮಾತಾಡುತ್ತಿದ್ದೀಯ. ರಾಜ ಇಂದ್ರ, ಸೋಮ, ಅಗ್ನಿ, ವರುಣ, ಯಮ ಎನ್ನುವ ೫ ರೂಪಗಳಲ್ಲಿರುತ್ತಾನೆ. ಅವನು ನಿನ್ನ ಹತ್ತಿರ ಬಂದಾಗ, ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವುದಷ್ಟೇ ನಿನ್ನ ಕರ್ತವ್ಯ. ಅದಕ್ಕಿಂತ ಹೆಚ್ಚು ಮಾತಾಡುವ ಅಗತ್ಯವಿಲ್ಲ. ನೀನು ನನ್ನ ಮಾತು ಕೇಳಿದರೆ ನಾನು ಸೌಮ್ಯವಾಗಿರುತ್ತೇನೆ. ಇಲ್ಲವಾದರೆ ನಿನಗೆ ನಾನು ಯಮನಾಗುತ್ತೇನೆ. ನಾನು ಹೇಳಿದಂತೆ ಬಂಗಾರದ ಜಿಂಕೆಯಾಗಿ ಹೋದರೆ ರಾಮನಿಂದ ಸಾಯುತ್ತೀಯೋ ಇಲ್ಲವೋ ಗೊತ್ತಿಲ್ಲ, ಆದರೆ ನೀನು ಹೋಗದಿದ್ದರೆ ಮಾತ್ರ ನಾನು ನಿನ್ನನ್ನು ಕೊಂದುಬಿಡುತ್ತೇನೆ” ಎಂದ.
“ರಾಜ ತಪ್ಪು ದಾರಿಯಲ್ಲಿ ನಡೆಯುತ್ತಿದ್ದರೆ ಅದನ್ನು ಸರಿಪಡಿಸುವುದು ಮಂತ್ರಿಯ ಕರ್ತವ್ಯ. ಹಾಗೆ ಮಾಡದ ಮಂತ್ರಿಗಳು ಇದ್ದರೂ, ಇಲ್ಲದಿದ್ದರೂ ಒಂದೇ. ರಾಜ್ಯಪಾಲನೆ ಮಾಡುವನನ್ನು ನಿಗ್ರಹದಲ್ಲಿಡದ ಮಂತ್ರಿಗಳಿಗೆ ಮರಣ ಶಿಕ್ಷೆ ಕೊಡಬೇಕು. ರಾಜನೇ ಧರ್ಮ, ರಾಜನೇ ಜಯ, ರಾಜನಿಂದಲೇ ಲೋಕಕ್ಕೆ ರಕ್ಷೆ. ಆ ರಾಜನೇ ಧರ್ಮ ತಪ್ಪಿದರೆ ಲೋಕಕ್ಕೆ ರಕ್ಷೆಯಿಲ್ಲ. ಅವನನ್ನು ಆಶ್ರಯಿಸಿದವರು ಯಾರೂ ಬದುಕುವುದಿಲ್ಲ.
ಸ್ವಾಮಿನಾ ಪ್ರತಿಕೂಲೇನ ಪ್ರಜಾಃ ತೀಕ್ಷ್ಣೇನ ರಾವಣ
ರಕ್ಷ್ಯಮಾಣಾ ನ ವರ್ಧಂತೇ ಮೇಷಾ ಗೋಮಾಯನಾ ಯಥಾ
ಮಕ್ಕಳ ಹಿಂದೆ ತಂದೆಯಿದ್ದಂತೆ ರಾಜ ಪ್ರಜೆಗಳ ಹಿಂದೆಯಿರಬೇಕು. ಹಾಗೆ ಇರದವನು ಹಸುಗಳ ಹಿಂದೆ ಬರುವ ನರಿಯಂತಹವನು. ಅವನಿಂದ ರಾಜ್ಯಕ್ಕೆ ಭದ್ರತೆಯಿರದು. ನಿನ್ನಂತಹ ದುರಾತ್ಮ ರಾಜನಾಗಿರುವ ರಾಜ್ಯದ ಜೊತೆ ಅಲ್ಲಿರುವ ರಾಕ್ಷಸರೂ ನಶಿಸುತ್ತಾರೆ. ನಿನಗೆ ಹುಟ್ಟಿರುವ ಈ ನೀಚವಾದ ಆಸೆಯಿಂದ ನಿನ್ನ ಸೈನ್ಯವೂ ಬದುಕುವುದಿಲ್ಲ. ರಾಮ ನೋಡುತ್ತಿದ್ದಂತೆ ಸೀತೆಯನ್ನು ಹೊತ್ತು ತರಲು ಸಾಧ್ಯವಿಲ್ಲವೆಂದು ಅವನಿಲ್ಲದ ಹೊತ್ತಿನಲ್ಲಿ ಅಪಹರಿಸಲು ಪ್ರಯತ್ನಿಸುತ್ತಿದ್ದೀಯ. ನೀನು ಪುಕ್ಕಲ ಎಂದು ನಿನಗೇ ತಿಳಿದಿದೆ. ನೀನು ನನ್ನ ರಾಜನಾದ ಕಾರಣ ನೀನು ಹೇಳಿದ ಕೆಲಸವನ್ನು ನನ್ನ ಪ್ರಾಣವಿರುವವರೆಗೂ ಮಾಡುತ್ತೇನೆ. ಆದರೆ ಸೀತೆ ನೋಡುವ ಮುಂಚೆ ರಾಮನೇನಾದರೂ ನನ್ನನ್ನು ನೋಡಿದರೆ ನಾನು ಬದುಕುವುದಿಲ್ಲ. ರಾಮನನ್ನು ನೋಡಿ ನಾನೊಬ್ಬನೇ ಸಾಯುತ್ತೇನೆ, ಅನಂತರ ಸೀತೆಯನ್ನು ತಂದು ನೀನೂ ನಿನ್ನ ಪರಿವಾರವೂ ಸಾಯುತ್ತದೆ. ಯಾವಾಗ ನಾನು ಈ ಕೆಲಸ ಮಾಡಲು ಒಪ್ಪಿಕೊಂಡೆನೋ ಆಗಲೇ ನಾನು ಸತ್ತೆ. ಈಗ ನಿನ್ನ ಮುಂದೆಯಿರುವುದು ಮಾರೀಚನ ಪ್ರತಿಮೆ. ಇದನ್ನು ನಿನಗಿಷ್ಟಬಂದಂತೆ ಉಪಯೋಗಿಸಿಕೊ. ನಿನಗೆಷ್ಟು ಹೇಳಿದರೂ ನೀನು ಕೇಳುತ್ತಿಲ್ಲ. ನಿನ್ನ ಆಸೆ ತೀರಿಸುತ್ತೇನೆ. ನಡಿ”
Comments
Post a Comment