೨೬. ದಶರಥನ ಪ್ರಲಾಪ

ಕೈಕೆಯ ಮಾತನ್ನು ಕೇಳಿ ದಶರಥನಿಗೆ ಎದೆ ಒಡೆದಂತಾಯಿತು. ಎಂಥ ಮಾತು ಆಡಿದೆ ಕೈಕೆ! ಇಂಥಹ ಮಾತು ನಾನು ಕೇಳಬೇಕಾಗುತ್ತದೆಯೆಂದು ನಾನು ಎಂದೂ ಊಹಿಸಿರಲಿಲ್ಲ. ರಾಮ ನಿನಗೆ ಮಾಡಿದ ಅಪಕಾರವಾದರೂ ಏನು? ರಾಮನು ಕೌಸಲ್ಯೆಯನ್ನು ಮಾತ್ರ ತಾಯಿಯೆಂದು ಆದರಿಸಲಿಲ್ಲ, ಕೌಸಲ್ಯೆಯನ್ನು ಕಾಣುವಂತೆಯೇ ನಿನ್ನನ್ನೂ, ಸುಮಿತ್ರೆಯನ್ನೂ ಕಾಣುತ್ತಾನೆ. ಎಂದೂ ತಪ್ಪು ಮಾತನಾಡಿದವನಲ್ಲ. ರಾಮನ ಕುರಿತು ವ್ಯತಿರೇಕವಾಗಿ ಮಾತನಾಡುವವರು ಕೋಸಲ ದೇಶದಲ್ಲಿ ಒಬ್ಬರೂ ಇಲ್ಲ. ಹಿಂದೊಮ್ಮೆ ನಿನ್ನ ಬಳಿ ರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದಾಗ, ನೀನು ರಾಮನಿಗೂ ಭರತನಿಗೂ ಬೇಧವಿಲ್ಲವೆಂದಿದ್ದೆ. ಮತ್ತೆ ಈಗ ಯಾರ ಹೇಳಿಕೆ ಮಾತು ಕೇಳಿ ಹೀಗೆ ಮಾತನಾಡುತ್ತಿರುವೆ? ಗುರುಗಳ ಸೇವೆಯನ್ನು ಸದಾ ಮಾಡುವ ನನ್ನ ರಾಮ, ಹಾಯಾಗಿ ಹಂಸತೂಲಿಕಾತಲ್ಪದ ಮೇಲೆ ನಿದ್ರಿಸಬೇಕಾದವನನ್ನು ಏಕೆ ತಪಸ್ವಿಯಂತೆ ಜಟೆ ಕಟ್ಟಿ, ಅಡವಿಯಲ್ಲಿ ಸಿಕ್ಕಿದ್ದು ತಿಂದು, ಗೆಡ್ಡೆ-ಗೆಣಸುಗಳನ್ನು ತಿಂದು, ಮರದ ಕೆಳಗೆ ಮಲಗಬೇಕೆಂದು ಕೋರುತ್ತಿದ್ದೀಯ? ಇದನ್ನೆಲ್ಲಾ ಊಹಿಸಿ ನಾನು ಜೀವಂತವಾಗಿರಲು ಸಾಧ್ಯವೇ? ನಾನು ನನ್ನ ಜೀವನದ ಕಡೆಯ ಘಟ್ಟಕ್ಕೆ ಬಂದಿರುವೆ ಕೈಕೆ! ರಾಮನನ್ನು ಬಿಟ್ಟು ನಾನು ಇರಲಾರೆ. ನೀನು ಬಸಿದರೆ, ಕೌಸಲ್ಯೆಯನ್ನು ಬಿಟ್ಟು ಬಿಡುತ್ತೇನೆ, ಸುಮಿತ್ರೆಯನ್ನು ಬಿಟ್ಟುಬಿಡುತ್ತೇನೆ, ನನ್ನ ಪ್ರಾಣವನ್ನು ಬೇಕಾದರೂ ಬಿಡುತ್ತೇನೆ. ರಾಮನನ್ನು ಕಾಡಿಗೆ ಕಳಿಸೆಂದು ಮಾತ್ರ ಕೇಳಬೇಡ. ರಾಮನನ್ನು ಕಾಡಿಗೆ ಕಳಿಸಿದರೆ, ಸೀತೆ ನನ್ನ ಬಳಿ ಬಂದು, ’ಮಾವನವರೇ, ನನ್ನ ಪತಿಯ ಯಾವ ತಪ್ಪಿಗಾಗಿ ಅವರನ್ನು ಅರಣ್ಯಕ್ಕೆ ಕಳಿಸುತ್ತಿದ್ದೀರಿ?’ ಎಂದು ಪ್ರಶ್ನಿಸಿದರೆ ನಾನೇನೆಂದು ಉತ್ತರ ನೀಡಲಿ? ರಾಮ ಅರಣ್ಯಕ್ಕೆ ಹೋದರೆ ನಾನು ಬದುಕಿರಲಾರೆ. ನೀನು ವಿಧವೆಯಾಗುತ್ತೀಯ. ನನ್ನನ್ನೂ, ನಿನ್ನ ಮಾಂಗಲ್ಯವನ್ನೂ ಕಾಪಾಡಿಕೋ. ರಾಮ ಭರತನಿಗೆ ಯಾವುದೇ ಅನ್ಯಾಯ ಮಾಡುವುದಿಲ್ಲ. ನಿನ್ನನ್ನು ಹೆತ್ತ ತಾಯಿಯಂತೆ ಕಾಣುತ್ತಾನೆ. ಯಾರೋ ನಿನಗೆ ಬೇಡದಿರುವ ವಿಷಯವನ್ನು ನಿನ್ನ ತಲೆಗೆ ತುಂಬಿದ್ದಾರೆ. ನಾನೇನಾದರು ರಾಮನನ್ನು ಕಾಡಿಗೆ ಕಳಿಸಿದರೆ, ಯಾವ ತಪ್ಪೂ ಮಾಡದ ರಾಮನನ್ನು ಅಡವಿಗೆ ಕಳಿಸಿದ ನಿನ್ನನ್ನು ಹೇಗೆ ನಂಬಲಿ ಎಂದು ಸುಮಿತ್ರೆ ಕೇಳುತ್ತಾಳೆ. ಆಗ ನಾನೇನು ಸಮಾಧಾನ ನೀಡಲಿ? ಅರವತ್ತು ಸಾವಿರ ವರ್ಷ ರಾಜ್ಯ ಪಾಲನೆ ಮಾಡಿದ ನಾನು ಹೊರಗೆ ತಿರುಗಾಡಲು ಹೋದಾಗ, ಹಾಡು ಹಗಲೇ ಸುರಪಾನ ಮಾಡಿದ ಬ್ರಾಹ್ಮಣ ನನ್ನ ಪಕ್ಕ ನಡೆಯುತ್ತಾ, ಯೌವನದಲ್ಲಿರುವ ಪತ್ನಿಯ ಮಾತಿಗೋಸ್ಕರ ಧರ್ಮಾತ್ಮನಾದ ಮಗನನ್ನು ಅಡವಿಗೆ ಕಳಿಸಿ ಇನ್ನೂ ಬದುಕುತ್ತಿರುವವನು ದಶರಥ ಎನ್ನುತ್ತಾನೆ. ಆ ದಿನ ನಾನು ಬದುಕಿದ್ದರೂ ಸತ್ತಂತೆ. ನನಗೆ ಅಂಥ ಅಪಕೀರ್ತಿ ತರಬೇಡ. ಕೌಸಲ್ಯೆ ನನ್ನನು ಒಂದು ತಾಯಿ ಮಗುವನ್ನು ಕಾಣುವಂತೆ, ಒಬ್ಬ ಅಕ್ಕ-ತಂಗಿಯರು ಅಣ್ಣ-ತಮ್ಮಂದಿರನ್ನು ಕಾಣುವಂತೆ, ಒಬ್ಬ ದಾಸಿಯು ಯಜಮಾನನನ್ನು ಕಾಣುವಂತೆ ನನ್ನನ್ನೂ ನಡೆಸಿಕೊಂಡಿದ್ದಾಳೆ. ಅವಳು ಸುಗುಣಾಭಿರಾಮನಿಗೆ ಜನ್ಮ ಕೊಟ್ಟ ತಾಯಿ. ಅದರೂ ನೀನು ಕೋಪಿಸಿಕೊಳ್ಳುವೆಯೆಂದು ಕೌಸಲ್ಯೆಯನ್ನು ಎಂದೂ ಸತ್ಕರಿಸಲಿಲ್ಲ. ಅವರ ಮನೆಗಳಿಗೂ ಹೋಗಲಿಲ್ಲ. ನಿನ್ನ ಮೇಲೇ ಪ್ರೀತಿ ಇಟ್ಟು ಬದುಕುತ್ತೀದ್ದೇನೆ. ನಾನು ವೃದ್ಧಾಪ್ಯದಲ್ಲಿರುವುದರಿಂದ ಹೆಚ್ಚು ಕಾಲ ಬದುಕುವುದಿಲ್ಲವಾದ ಕಾರಣ ರಾಮನಿಗೆ ಪಟ್ಟಾಭಿಷೇಕ ಮಡಲು ನಿರ್ಧರಿಸಿದೆ.

ನನ್ನ ರಾಮನೇನಾದರು ಅರಣ್ಯಕ್ಕೆ ಹೋದರೆ, ನಾನು ಸಾಯುತ್ತೇನೆ. ನನ್ನ ಮರಣದ ವಾರ್ತೆ ಕೇಳಿದ ಕೌಸಲ್ಯ ಕೂಡಾ ಸಾಯುತ್ತಾಳೆ. ನಾನು, ಕೌಸಲ್ಯೆ ಮರಣಿಸಿದ ಮೇಲೆ ರಾಜ್ಯ ಸಂತೋಷದಿಂದ ಇರುವುದಿಲ್ಲ. ನೀನು ರಾಜ್ಯವನ್ನು ಭರತನಿಗೆ ಕೊಡಬೇಕೆನ್ನುತ್ತಿದ್ದೀಯ, ಆದರೆ ಭರತನು ರಾಜ್ಯವನ್ನು ತೆಗೆದು ಕೊಳ್ಳುವನೆಂದು ನನಗೆ ಅನ್ನಿಸುತ್ತಿಲ್ಲ. ಕಟ್ಟ ಕಡೆಯಲ್ಲಿ ಎಲ್ಲರ ಅಪವಾದಕ್ಕೆ ಗುರಿಯಾಗಿ, ದಿಕ್ಕಿಲ್ಲದವಳಾಗಿ, ನಿನ್ನ ನೋವು ಹಂಚಿಕೊಳ್ಳಲು ಪತಿಯೂ ಇಲ್ಲದೆ, ವಿಧವೆಯಾಗುತ್ತೀಯ. ರಾಮನನ್ನು ಅಡವಿಗೆ ಕಳಿಸಿದರೆ ಖಂಡಿತ ನಾನು ಜೀವ ಸಹಿತ ಇರುವುದಿಲ್ಲ. ನಾನು ಸತ್ತನಂತರ ಸ್ವರ್ಗಕ್ಕೆ ಹೋದರೆ, ಅಲ್ಲಿನ ಋಷಿಗಳು, ಮಹರ್ಷಿಗಳು ನನ್ನನ್ನು ಕರೆದು, ರಾಮನು ಹೇಗಿದ್ದಾನೆಂದು ಕೇಳಿದರೆ, ನಾನೇನೆಂದು ಉತ್ತರಿಸಲಿ?

ನನ್ನನ್ನು ಅಡವಿಗೆ ಕಳಿಸಲು ನೀನಾರೆಂದು ರಾಮನು ನನ್ನ ಮೇಲೆ ಆರೋಪ ಮಾಡಿದರೆ ನಾನು ಸಂತೋಷಿಸುತ್ತೇನೆ. ಆದರೆ ನನ್ನ ರಾಮ ಹಾಗೆ ಮಾಡುವವನಲ್ಲ. ಅಪ್ಪಾ! ನೀನು ಹೇಳಿದ್ದರಿಂದ ಅರಣ್ಯಕ್ಕೆ ಹೋಗುತ್ತೇನೆ ಎನ್ನುತ್ತಾನೆ, ಅದನ್ನು ನಾನು ಭರಿಸಲಾರೆ. ರಾಮ ಅಡವಿಯಲ್ಲಿ ಕಷ್ಟ ಪಡುತ್ತಿದ್ದರೆ ನಾನಿಲ್ಲಿ ಹೇಗೆ ಸಂತೋಷದಿಂದ ಇರಬಲ್ಲೆ? ನಿಜವಾಗಿಯೂ ರಾಮನನ್ನು ಅರಣ್ಯಕ್ಕೆ ಕಳಿಸುವುದು ಭರತನ ಕೋರಿಕೆಯೇ ಆದಲ್ಲಿ, ನನ್ನ ಶರೀರ ಬಿದ್ದ ನಂತರ ನನಗವನು ತರ್ಪಣ ನೀಡಕೂಡದು. ನೀನು ನನ್ನ ಶರೀರವನ್ನು ಮುಟ್ಟಕೂಡದು. ಈಗಲೂ ಮಿಂಚಿಹೋಗಿದ್ದೇನಿಲ್ಲ. ನಿನ್ನ ಎರಡು ಕೋರಿಕೆಗಳನ್ನು ಹಿಂತೆಗೆದುಕೊ. ನಾನು ಅಂಗಲಾಚುತ್ತಿದ್ದೇನೆಂದಲ್ಲ, ಒಬ್ಬ ವಯಸ್ಸಾದ ವೃದ್ದನು, ಒಬ್ಬ ಅಪ್ರಯೋಜಕನು ಕೇಳುತ್ತಿದ್ದಾನೆಂದು ಒಬ್ಬ ಭಿಕ್ಷುಕನಿಗೆ ಭಿಕ್ಷೆ ಹಾಕುವಂತೆ, ರಾಮನನ್ನು ನೋಡುತ್ತಾ ಸಾಯುವ ಭಾಗ್ಯವನ್ನು ನನಗೆ ಕೊಡು."

ದಶರಥ ಹೀಗೆ ಹೇಳುತ್ತಾ ಕೈಕೇಯಿಯ ಪಾದದ ಮೇಲೆ ಬಿದ್ದ. ತನ್ನ ಪಾದದ ಮೇಲೆ ಬೀಳುತ್ತಿದ್ದಾನೆಂದು ತಿಳಿದ ಕೈಕೆಯು ಪಕ್ಕಕೆ ಸರಿದಾಗ, ದಶರಥನ ಶಿರಸ್ಸು ನೆಲಕ್ಕೆ ತಾಗಿ, ಸ್ಪೃಹ ತಪ್ಪಿ ಪಕ್ಕಕ್ಕೆ ಜಾರಿದ.

ಸ್ವಲ್ಪ ಹೊತ್ತಿನ ನಂತರ ದಶರಥನಿಗೆ ಜ್ಞಾನ ಬಂದಮೇಲೆ ಕೈಕೆ ಮೂದಲಿಸಿದಳು: “ಇಕ್ಷ್ವಾಕು ವಂಶದವನು. ಸತ್ಯ-ಧರ್ಮಗಳನ್ನು ಪಾಲಿಸುವವನು. ಎರೆಡು ವರಗಳನ್ನು ಕೊಟ್ಟಿರುವವನು. ಆ ವರಗಳನ್ನು ನಾನು ಕೇಳಿದಾಗ ನಿನಗೆ ಕಷ್ಟ ಬಂದಿತಾ? ಯಾರಾದರೂ ಬಂದು ರಾಮನೆಲ್ಲಿ ಎಂದು ಕೇಳಿದರೆ ದಂಡಕಾರಣ್ಯಕ್ಕೆ ಕಳಿಸಿದ್ದೆ ಎನ್ನಲು ಆಗುವುದಿಲ್ಲ ಎನ್ನುವ ನೀನು, ಅಂದು ನಾನು ನಿನಗೆ ಎರೆಡು ಬಾರಿ ಪ್ರಾಣ ಭಿಕ್ಷೆ ಕೊಟ್ಟದ್ದರಿಂದ ಬದುಕಿ, ಜೀವ ಕೊಟ್ಟ ಕೈಕೆಗೆ ಎರೆಡು ವರಗಳು ಕೊಡದೆ ವಂಚಿಸಿದವನು ಎನ್ನದಾ ಲೊಕ? ವರ ಕೊಡಲು ಏಕೆ ಹಿಂಜರಿಯುತ್ತಿದ್ದೀಯ? ನಿನ್ನ ವಂಶದವರು ಎಷ್ಟೋ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಒಂದು ಬಾರಿ ಗಿಡುಗದ ರೂಪದಲ್ಲಿದ್ದ ಇಂದ್ರ ಪಾರಿವಾಳದ ರೂಪದಲ್ಲಿದ್ದ ಅಗ್ನಿಯನ್ನು ಓಡಿಸಿಕೊಂಡು ರಾಜನ ಬಳಿ ಬಂದಿತು. ಪಾರಿವಾಳ ರಾಜನ ಆಶ್ರಯ ಕೋರಿದಾಗ ರಾಜ ಅದಕ್ಕೆ ರಕ್ಷಣೆಯ ಭರವಸೆ ಕೊಟ್ಟ. ‘ಪಾರಿವಾಳಕ್ಕೆ ಆಶ್ರಯ ಕೊಟ್ಟಿದ್ದೇನೋ ಸರಿ, ಆದರೆ ನನ್ನ ಆಹಾರಕ್ಕೇನು ಮಾಡಬೇಕು’ ಎಂದು ಗಿಡುಗನ ರೂಪದಲ್ಲಿದ್ದ ಇಂದ್ರ ರಾಜನನ್ನು ಪರೀಕ್ಷಿಸಲು ಕೇಳಿದ. ‘ನಿನಗೆ ಪಾರಿವಾಳದ ಮಾಂಸ ಬೇಕು. ಅದನ್ನು ನಾನು ಕೊಡುತ್ತೇನೆ’ ಎಂದು ಪಾರಿವಾಳವನ್ನು ತಕ್ಕಡಿಯಲ್ಲಿಟ್ಟು, ಅಷ್ಟೇ ಪ್ರಮಾಣದ ಮಾಂಸವನ್ನು ತನ್ನ ಶರೀರದಿಂದ ತೆಗೆದು ಕೊಟ್ಟವನು ನಿನ್ನ ವಂಶದವನೇ ಆದ ಶಿಬಿ ಚಕ್ರವರ್ತಿ. ಮತ್ತೊಂದು ಬಾರಿ ಅಲರ್ಕನ ಬಳಿ ಇಂದ್ರನು ಬ್ರಾಹ್ಮಣನ ರೂಪದಲ್ಲಿ ಬಂದಾಗ, ರಾಜ ಅವನಿಗೇನು ಬೇಕೊ ಕೇಳು ಎಂದಾಗ, ಅವನ ಕಣ್ಣನ್ನೇ ಕೇಳಿದ ಬ್ರಾಹ್ಮಣನಿಗೆ, ಮಾತಿಗೆ ತಪ್ಪದೆ ತನ್ನ ಕಣ್ಣನ್ನೇ ದಾನ ಮಾಡಿದ ಅಲರ್ಕ. ಇಂತಹ ವಂಶದಲ್ಲಿ ಹುಟ್ಟಿ ಎರೆಡು ವರಗಳನ್ನು ಪತ್ನಿಗೆ ಕೊಡುತ್ತೇನೆಂದು ಹೆಳಿ, ಕೊಡದೆ ಮಾತಿಗೆ ತಪ್ಪಿ ತಿರುಗಲು ನಿನಗೆ ನಾಚಿಕೆಯಾಗಬೇಕು. ದುರಾತ್ಮ! ಧರ್ಮ ಬಿಟ್ಟು ರಾಮನಿಗೆ ಪಟ್ಟ ಕಟ್ಟಿ ನೀನು ಕೌಸಲ್ಯೆಯ ಜೊತೆ ಚಕ್ಕಂದವಾಡಬೇಕೆಂದುಕೊಳ್ಳುತ್ತಿದ್ದೀಯಾ? ನಿನ್ನ ಯೊಗ್ಯತೆ ನನಗೆ ಗೊತ್ತು. ನನ್ನ ಎರೆಡು ವರಗಳನ್ನು ಈಡೇರಿಸಲೇಬೇಕು! ನೀನು ರಾಮನಿಗೆ ಪಟ್ಟಾಭಿಷೇಕ ಮಾಡಿದರೆ, ಕೌಸಲ್ಯ ರಾಜಮಾತೆಯಾದರೆ, ನಾನು ಕೌಸಲ್ಯೆಗೆ ನಮಸ್ಕಾರ ಮಾಡುತ್ತೇನೆಂದುಕೊಳ್ಳುತ್ತಿರುವೆಯೇನೊ. ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ನಾನು ಪ್ರಾಣವನ್ನಾದರೂ ಬಿಡುತ್ತೇನೆಯಾಗಲಿ ಕೌಸಲ್ಯೆಗೆ ನಮಸ್ಕಾರ ಮಾಡುವುದಿಲ್ಲ. ನೀನು ನನ್ನ ಎರೆಡು ವರಗಳನ್ನು ಕೊಡಲೇಬೇಕು!”

“ಒಂದು ವೇಳೆ ಇದೇ ನಿನ್ನ ಹಠವಾದರೆ, ನೀನು ನೆಲದ ಮೇಲೆ ಬಿದ್ದು ಚೂರಾದರೂ, ನಿಂತಲ್ಲೇ ಕುಸಿದರೂ, ಸರ್ವನಾಶವಾದರೂ ನಿನ್ನ ಆಸೆಯನ್ನು ಮಾತ್ರ ಈಡೇರಿಸುವುದಿಲ್ಲ. ನಿನ್ನ ಆಸೆ ಧರ್ಮಬದ್ದವಲ್ಲ. ಲೋಕವೆಲ್ಲಾ ಯಾರನ್ನು ರಾಜನನ್ನಾಗಿ ಆಸೆಪಡುತ್ತಿದೆಯೋ, ಯಾರ ಮೇಲೆ ಲೊಕ ಒಂದೂ ಅಪವಾದ ಹೊರಿಸಿಲ್ಲವೋ ಆ ಮಹಾತ್ಮನನ್ನು ಕಾಡಿಗೆ ಕಳಿಸಬೇಕೆಂದಿರುವ ನೀನು ನಾಶವಾದರೂ ಸರಿ ಆ ಕೋರಿಕೆಯನ್ನು ಮಾತ್ರ ನಾನು ಈಡೇರಿಸುವುದಿಲ್ಲ.” - ಅಷ್ಟರಲ್ಲೇ ಅತ್ತು, ಅತ್ತು ಮಾತಾಡುತ್ತಾ ೧೫ ಬಾರಿ ಜ್ಞಾನ ತಪ್ಪಿದ್ದ ದಶರಥ ಅಳುತ್ತಲೇ ಕೈಕೆಗೆ ಹೇಳಿದ - “ರಾಮ ಕಾಡಿಗೆ ಹೋದರೆ ಎಷ್ಟು ಕಷ್ಟವಾಗುತ್ತದೆ, ಪ್ರಜೆಗಳು ಎಷ್ಟು ತಲ್ಲಣಿಸುತ್ತಾರೆ ಎಂಬುದನ್ನು ನೀನು ಊಹಿಸುತ್ತಿಲ್ಲ. ನಾನು ಅದೃಷ್ಟವಂತನಾಗಿದ್ದರೆ ರಾಮನಿಗೆ ಅರಣ್ಯಕ್ಕೆ ಹೋಗು ಅನ್ನುವ ಮೊದಲೇ ನನಗೆ  ಮರಣ ಬರಲಿ ಎಂದು ಕೇಳಿಕೊಳ್ಳುತ್ತೇನೆ. ಮತ್ತೆ ನಿನ್ನ ಪಾದ ಹಿಡಿದುಕೊಳ್ಳುತ್ತೇನೆ. ದಯವಿಟ್ಟು ನಿನ್ನ ವರಗಳನ್ನು ಹಿಂತೆಗೆದುಕೊ” - ಎಂದು ಕೈಕೆಯ ಪಾದ ಹಿಡಿದುಕೊಂಡ. 

ಆದರೆ ಕೈಕೆ:
“ತ್ವಂ ಕತ್ಥಸೇ ಮಹಾರಾಜ ಸತ್ಯವಾದಿ ದೃಢವ್ರತಃ
ಮಮ ಚ ಇಮಂ ವರಂ ಕಸ್ಮಾತ್ ವಿಧಾರಯತುಂ ಇಚ್ಛಸಿ
ಸತ್ಯ, ಧರ್ಮ ಎನ್ನುತ್ತೀಯ, ಸತ್ಯಕ್ಕೆ ಧರ್ಮಕ್ಕೆ ಬದ್ಧನಾಗಿರುವೆನೆನ್ನುತ್ತೀಯ. ದಿನಾ ಅಷ್ಟು ಉಪದೇಶ ಮಾಡುತ್ತೀಯ. ಎರೆಡು ವರ ಕೇಳಿದರೆ ಇಷ್ಟು ದುಃಖಿಸುತ್ತೀಯ. ಮಾತು ತಪ್ಪುತ್ತಿರುವುದು ನೀನು”, ಎಂದಳು.


ಆ ರಾತ್ರಿ ದಶರಥ ಎಷ್ಟು ಕೇಳಿಕೊಂಡರೂ ಕೈಕೆ ಒಪ್ಪಲಿಲ್ಲ. ಅತ್ತು ಅತ್ತು ಕಣ್ಣು ಉಬ್ಬಿಹೊಗಿ, ತಲೆ ಕೆದರಿ, ನೀರಸನಾಗಿ, “ಓ ರಾತ್ರಿ! ನನಗೆ ನೀನಾದರೂ ಒಂದು ವರ ಕೊಡು. ಈ ರಾತ್ರಿ ಹೀಗೇ ಇರಲಿ, ಬೆಳಗಾಗಲು ಬಿಡಬೇಡ. ಬೆಳಗಾದರೆ ರಾಮನೊಂದಿಗೆ ನಾನು ಏನು ಮಾತಾಡಲಿ! ಇಲ್ಲ ನೀನು ಬೇಗ ಹೊರಟುಹೋಗು. ರಾತ್ರಿಯಾಗೇ ಇದ್ದರೆ ನಾನು ಇಲ್ಲೇ ಇರಬೇಕಾಗುತ್ತದೆ. ಈ ಕೈಕೆಯನ್ನು ನೋಡುತ್ತಾ ಅಷ್ಟು ಹೊತ್ತು ಇರಲಾರೆ. ನೀನು ಬೇಗ ಹೋಗು”, ಎನ್ನುತ್ತಾ ತಾನು ಏನು ಮಾತಾಡುತ್ತಿದ್ದಾನೋ ತನಗೇ ತಿಳಿಯದ ಸ್ಥಿತಿಗೆ ಹೋಗಿಬಿಟ್ಟ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ