೨೭. ರಾಮನ ಒಪ್ಪಿಗೆ
ನಿಧಾನವಾಗಿ ಬೆಳಗಾಯಿತು. ಕೈಕೆ, “ಬೆಳಗಾಗುತ್ತಿದೆ. ರಾಮ ನಿನ್ನ ಆಶೀರ್ವಾದಕ್ಕಾಗಿ ಬರುತ್ತಾನೆ. ಅವನನ್ನು ನೊಡಿದ ಮೇಲೆ ಪುತ್ರವಾತ್ಸಲ್ಯದಿಂದ ಮಾತು ಬದಲಿಸಿ, ಭರತನಿಗೆ ರಾಜ್ಯ ಕೊಟ್ಟು ರಾಮನನ್ನು ಅರಣ್ಯಕ್ಕೆ ಕಳಿಸದಿದ್ದರೆ ನಾನು ಇಲ್ಲೇ ವಿಷ ಕುಡಿದು ಸತ್ತು ಹೋಗುತ್ತೇನೆ”, ಎಂದಳು.
ದಶರಥ:
“ಯಃ ತೇ ಮಂತ್ರ ಕೃತಃ ಪಾಣಿ್ ಅಗ್ನೌ ಪಾಪೇ ಮಯಾ ಧೃತಃ
ತಂ ತ್ಯಜಾಮಿ ಸ್ವಜಂ ಚೈವ ತವ ಪುತ್ರಂ ಸಹಾ ತ್ವಯಾ
ನೀನು ನನ್ನನ್ನು ಇಷ್ಟು ಘಾಸಿಗೊಳಿಸಿರುವೆ. ರಾಮನನ್ನು ನೋಡುತ್ತಲೇ ಪ್ರಾಣ ಬಿಡಬೇಕೆಂಬ ಆಸೆಗೂ ಅಡ್ಡವಾಗಿರುವೆ. ಮಂತ್ರಪೂರ್ವಕವಾಗಿ ಅಗ್ನಿ ಸಮ್ಮುಖವಾಗಿ ಪಾಣಿಗ್ರಹಣ ಮಾಡಿದ ನಿನ್ನನ್ನು ಈಗಲೇ ಬಿಟ್ಟುಬಿಡುತ್ತಿದ್ದೇನೆ. ಇನ್ನು ನೀನು ನನ್ನ ಹೆಂಡತಿಯಲ್ಲ. ನೀನು ನಿನ್ನ ಮಗ ಜೊತೆಯಾಗಿ ರಾಜ್ಯಭಾರ ಮಾಡಿ. ಯಾರಿಗಾಗಿ ಈ ದಾರುಣಕ್ಕೆ ಕೈ ಹಾಕಿದೆಯೋ ಆ ಮಗನನ್ನೂ ಬಿಟ್ಟುಬಿಡುತ್ತಿದ್ದೇನೆ. ಭರತ ನನ್ನ ಶರೀರ ಮುಟ್ಟಬಾರದು.”
ಇತ್ತ ಪಟ್ಟಾಭಿಷೇಕಕ್ಕೆ ಮಾಡಬೇಕಾದ ಸಿದ್ದತೆಗಳನ್ನು ಮಾಡುತ್ತಿದ್ದಾರೆ. ಬ್ರಾಹ್ಮಣರು, ಜಾನಪದರು, ಸಾಮಂತರು ಮೊದಲಾಗಿ ಎಲ್ಲರೂ ರಾಜನಿಗಾಗಿ ಎದುರುನೋಡುತ್ತಿದ್ದಾರೆ. ಸುಮಂತ್ರನು ದಶರಥ ಮಹಾರಾಜನನ್ನು ಭೇಟಿಯಾಗಲು ಬಂದು, ಮಾತಲಿ ಇಂದ್ರನನ್ನು ಎಬ್ಬಿಸುವಂತೆ, ಸೂರ್ಯನು ಸಮಸ್ತ ಲೋಕಗಳನ್ನು ತನ್ನ ಕಿರಣಗಳಿಂದ ಎಬ್ಬಿಸುವಂತೆ, ಮಹಾರಾಜನನ್ನು ಎಬ್ಬಿಸಿ ಕರೆದ. ‘ಯುವರಾಜನ ಪಟ್ಟಾಭಿಷೇಕಕ್ಕೆ ಎಲ್ಲರೂ ಹೊರಗೆ ಕಾದಿದ್ದಾರೆ. ಈಗೇನು ಮಾಡಬೇಕು’ ಎಂದು ಸುಮಂತ್ರನು ಕೇಳಿದಾಗ, ದಶರಥನಿಗೆ ಮಾತಾಡಲಿಕ್ಕಾಗದೆ, ಕಣ್ಣೀರು ಹರಿಸುತ್ತಾ ಮತ್ತೆ ಜ್ಞಾನ ತಪ್ಪಿ ಬಿದ್ದ. ಅದಕ್ಕೆ ಕಾರಣವೇನೆಂದು ಸುಮಂತ್ರ ಕೈಕೆಯನ್ನು ಕೇಳಿದಾಗ ಕೈಕೆ
“ಏನು ಇಲ್ಲ ಸುಮಂತ್ರ! ರಾಮನಿಗೆ ಪಟ್ಟಾಭಿಷೇಕವಾಗುತ್ತಿರುವ ಸಂತೋಷದಲ್ಲಿ ಅವರಿಗೆ ರಾತ್ರಿ ನಿದ್ದೆ ಬರಲಿಲ್ಲ. ಈಗ ನಿದ್ದೆ ಬಂದಿದೆ. ಅದಕ್ಕೆ ಹಾಗೆ ಬಿದ್ದು ಹೋದರು. ನೀನು ಬೇಗ ಹೋಗಿ ರಾಜರು ಕರೆದರೆಂದು ಹೇಳಿ ರಾಮನನ್ನು ಕರೆದುಕೊಂಡು ಬಾ” ಎಂದಳು. ಸುಮಂತ್ರ ರಾಮನನ್ನು ಕರೆತರಲು ಹೋದ.
ರಾಮನ ಅಂತಃಪುರ ಪ್ರಜೆಗಳಿಂದ ತುಂಬಿಹೋಗಿ ಶೋಭಾಯಮಾನವಾಗಿತ್ತು. ರಾಮನ ಸ್ನೇಹಿತರು, ಬ್ರಾಹ್ಮಣರು, ಜನಪರಿಂದ ಆ ಪ್ರದೇಶ ಕಳಕಳಿಸುತ್ತಿತ್ತು. ಸೀತೆಯಿಂದ ಅಲಂಕರಿಸಲ್ಪಟ್ಟ ರಾಮ ಸುಂದರವಾಗಿ ಕಾಣಿಸುತ್ತಿದ್ದ. ಅಷ್ಟರಲ್ಲೇ ಬಂದ ಸುಮಂತ್ರ ದಶರಥ ಮಹಾರಾಜ ಕರೆಯುತ್ತಿದ್ದಾನೆಂದು ಹೇಳಿದಾಗ ರಾಮ ಸುಮಂತ್ರನ ಜೊತೆ ಹೋದ. ರಾಮನ ಜೊತೆ ಲಕ್ಷ್ಮಣ, ಅಲ್ಲಿದ್ದ ಜನಪದರೂ ಹೊರಟರು. ದಶರಥನ ಅಂತಃಪುರ ತಲುಪಿದ ನಂತರ ರಾಮ ಲಕ್ಷ್ಮಣರು ಒಳಗೆ ಹೋಗಿ ಮಿಕ್ಕವರೆಲ್ಲರೂ ಹೊರಗೆ ನಿಂತರು. ಜೀವಂತ ಶವದಂತಿದ್ದ ತನ್ನ ತಂದೆಯನ್ನು ನೋಡಿ ರಾಮ ಆಶ್ಚರ್ಯಗೊಳ್ಳುತ್ತಾನೆ. ರಾಮನನ್ನು ನೋಡಿದ ತಕ್ಷಣ ದಶರಥ ಮೂರ್ಛೆ ಹೋದ. ಆಗ ರಾಮ ಕೈಕೆಯನ್ನು,
"ಅಮ್ಮಾ! ನಾನು ತಂದೆಯನ್ನು ಈ ಪರಿಸ್ಥಿತಿಯಲ್ಲಿ ಎಂದೂ ನೋಡಿಲ್ಲ. ಯಾಕಮ್ಮಾ ಅಪ್ಪ ಹೀಗಿದ್ದಾರೆ? ನನ್ನಿಂದ ಏನಾದರೂ ತಪ್ಪಾಗಿದ್ದರೆ ಹೇಳು, ತಿದ್ದುಕೊಳ್ಳುತ್ತೇನೆ. ನನ್ನಿಂದ ಒಂದು ಕ್ಷಣ ತಂದೆಯವರು ದುಃಖ ಪಟ್ಟರೂ ಈ ಜೀವನವೇ ನನಗೆ ಬೇಡ. ನನಗೆ ನಿಜ ಹೇಳುವೆಯಾ? ಕೌಸಲ್ಯೆಯಿಂದ, ಸುಮಿತ್ರೆಯಿಂದ ಏನಾದರೂ ತೊಂದರೆಯಾಯಿತೇ? ನನಗೆ ಹೇಳಮ್ಮಾ" ಎಂದು ಕೇಳಿದ.
ಆಗ ಕೈಕೆ, "ಏನು ಮಾಡಿದರೆ ನಿಮ್ಮ ತಂದೆಗೆ ಈ ಶೋಕ ದೂರವಾಗುತ್ತದೋ ಅದನ್ನು ನಾನು ಹೇಳುತ್ತೇನೆ. ಹೇಳಿದಮೇಲೆ ಅದು ನನಗೆ ಕಷ್ಟ ಎಂದು ಹೇಳಬಾರದು. ಎಷ್ಟು ಕಷ್ಟವಾದರೂ ಆ ಕೆಲಸ ಮಾಡಿದರೆ ಮಾತ್ರ ಮತ್ತೆ ನಿಮ್ಮ ತಂದೆ ಸಂತೋಷದಿಂದ ಇರುತ್ತಾರೆ. ಹಾಗೆಂದು ನನಗೆ ಮಾತು ಕೊಡು. ಆಗ ಹೇಳುತ್ತೇನೆ." ಎಂದಳು. ಅದನ್ನು ಕೇಳಿದ ದಶರಥ 'ಛಿ' ಎಂದುಕೊಳ್ಳುತ್ತಾ ತಲೆ ತಗ್ಗಿಸಿದ.
ರಾಮ:
“ತತ್ ಬ್ರೂಹಿ ವಚನಂ ದೇವಿ ರಾಜ್ಞೋ ಯದ್ ಅಭಿಕಾಂಕ್ಷಿತಂ
ಕರಿಷ್ಯೇ ಪ್ರತಿಜ್ಞಾನೇ ರಾಮಃ ದ್ವಿ್ ನ ಅಭಿಭಾಷತೇ
ಅಮ್ಮಾ! ರಾಮನ ಬಳಿ ಎರಡು ಮಾತಿಲ್ಲ. ರಾಮ ಯಾವಾಗಲೂ ಒಂದೇ ಮಾತು ಹೇಳುತ್ತಾನೆ. ನೀನು ಹೇಳುವುದು ಕಷ್ಟವೋ ಸುಖವೊ ಮಾಡುತ್ತೇನೆ."
"ಏನಿಲ್ಲ ರಾಮ! ನಿಮ್ಮ ತಂದೆ ಸತ್ಯವಂತರೆಂದುಕೊಂಡು, ಪೂರ್ವದಲ್ಲಿ ಕೊಟ್ಟ ಎರೆಡು ವರಗಳನ್ನು ಕೇಳಿದೆ. ಅವು: ನೀನು ಹದಿನಾಲ್ಕು ವರ್ಷ ನಾರುಮಡಿಯುಟ್ಟು, ಜಟೆ ಕಟ್ಟಿ ಒಬ್ಬ ತಪಸ್ವಿಯಂತೆ ಅರಣ್ಯವಾಸ ಮಾಡಬೇಕು, ಅದೇ ಮುಹೂರ್ತದಲ್ಲಿ ಭರನಿಗೆ ಪಟ್ಟಾಭಿಷೇಕ ಮಾಡಬೇಕು. ಆಗಿನಿಂದ ನಿಮ್ಮ ತಂದೆ ಹೀಗೆ ಬಿದ್ದಿದ್ದಾರೆ. ಈ ಎರೆಡು ಆಸೆಗಳನ್ನು ನೀನು ತೀರಿಸಿದರೆ ಅವರು ಸಂತೋಷಿಸುತ್ತಾರೆ. ಆದರೆ ನೀನು ಅವನ್ನು ಈಡೇರಿಸುತ್ತೀಯೋ ಇಲ್ಲವೋ ಎಂಬ ಚಿಂತೆಯಿಂದ ಅವರು ಹೀಗಿದ್ದಾರೆ."
"ತಂದೆಯವರು ಕೇಳಿದರೆ ನಾನು ಇಲ್ಲವೆನ್ನುತ್ತೀನಾ! ಖಂಡಿತ ಮಾಡುತ್ತೇನೆ. ನಾನು ಹದಿನಾಲ್ಕು ವರ್ಷ ವನವಾಸ ಮಾಡಲು, ಭರತನಿಗೆ ಪಟ್ಟಾಭಿಷೇಕ ಮಾಡಲು ತಂದೆಯವರು ಇಷ್ಟು ಚಿಂತಿಸುವ ಅಗತ್ಯವಿಲ್ಲ.
ಅಹಂ ಹಿ ಸೀತಾಂ ರಾಜ್ಯಂ ಚ ಪ್ರಾಣಾನ್ ಇಷ್ಟಾನ್ ಧನಾನಿ ಚ
ಹೃಷ್ಟಃ ಭ್ರಾತ್ರೇ ಸ್ವಯಂ ದದ್ಯಾಂ ಭರತಾಯ ಅಪ್ರಚೊದಿತಃ
ಭರತನಿಗೆ ಬೇಕೆಂದರೆ ರಾಜ್ಯವೇನು, ಸೀತೆಯನ್ನೇ ಕೊಡುತ್ತೇನೆ. ನನ್ನ ಪ್ರಾಣ ಕೊಡುತೇನೆ, ಧನವನ್ನೂ ಕೊಡುತ್ತೇನೆ. ಭರತನಿಗೆ ಯುವರಾಜನಾಗಬೇಕೆಂಬುವ ಆಸೆಯಿರುವುದೆಂದು ತಿಳಿಯದೆ ನಾನು ಪಟ್ಟಾಭಿಷೇಕಕ್ಕೆ ಸಿದ್ದನಾದೆ. ತಮ್ಮನಿಗೆ ಪಟ್ಟಾಭಿಷೇಕ ಆಗುತ್ತದೆ ಎಂದು ತಿಳಿದು ನನಗೆ ಬಹಳ ಸಂತೋಷವಾಗಿದೆಯಮ್ಮ! ಈ ವಿಷಯ ಹೇಳಲು ತಂದೆಯವರು ಇಷ್ಟು ದುಃಖಿಸಿದರು ಎಂದು ತಿಳಿದು ನನಗೆ ದುಃಖವಾಗುತ್ತಿದೆ. ಅವರು ಅಗ್ನಿಯಲ್ಲಿ ಬೀಳು ಎಂದರೂ ನಾನು ಬೀಳುತ್ತೇನೆ."
“ರಾಮಾ! ನೀನು ಈ ಅಯೋಧ್ಯಾ ನಗರ ಬಿಟ್ಟು ಹೋಗುವವರೆಗೂ ಸ್ನಾನ, ಭೋಜನಗಳನ್ನು ಮಾಡೆನು ಎಂದು ನಿಮ್ಮ ತಂದೆ ಶಪಥ ಮಾಡಿದ್ದಾರೆ. ಆದ್ದರಿಂದ ಅವರು ಸಂತೋಷವಾಗಿರಬೇಕೆಂದರೆ ನೀನು ತಕ್ಷಣವೇ ಹೊರಡಬೇಕು.”
“ನ ಅಹಾಂ ಅರ್ಥ ಪರಃ ದೇವಿ ಲೋಕಂ ಆವಸ್ತುಂ ಉತ್ಸಹೇ
ವಿದ್ಧಿ ಮಾಂ ಋಷಿಭಿಸ್ ತುಲ್ಯಂ ಕೇವಲಂ ಧರ್ಮಂ ಆಸ್ಥಿತಂ
ಅಮ್ಮಾ! ರಾಮ ಧನ, ರಾಜ್ಯಕ್ಕಾಗಿ ಪ್ರಲಾಪಿಸುವವನಲ್ಲ. ನಾನು ಋಷಿಯಂತೆ. ನನಗೆ ಪಿತೃ ಪರಿಪಾಲನೆಯೊಂದು ಬಿಟ್ಟು ಇನ್ನೇನು ಬೇಡ. ಅಷ್ಟಕ್ಕೂ ನೀವು ಕರೆದು ಹೋಗು ಎಂದರೆ ಹೋಗುತ್ತಿದ್ದೆ. ಇಷ್ಟು ಚಿಕ್ಕ ವಿಷಯಕ್ಕೇಕೆ ಎರೆಡು ವರ ಕೇಳಿದಿರಿ? ನೀವು ಚಿಂತಿಸಬೇಡಿ. ನಾನು ಈಗಲೇ ಹೊರಡುತ್ತೇನೆ. ಆದರೆ ಅದಕ್ಕೆ ಮುಂಚೆ ನಿಮ್ಮ ಮತ್ತು ತಂದೆಯವರ ಪಾದಗಳಿಗೆ ನಮಸ್ಕಾರ ಮಾಡಿ ಹೋಗುತ್ತೇನೆ“.
ತಂದೆಯ ಮಾತು ದಾಟದ ಮಗನಿಂದ ಈಗ ತನಗೆ ತುಂಬಾ ದುಃಖವಾಗುತ್ತಿದೆ ಎಂದು ದಶರಥ ಮತ್ತೆ ಜ್ಞಾನ ತಪ್ಪಿಬಿದ್ದ. ರಾಮ ತಾನು ಹೋಗದಿದ್ದರೆ ತಂದೆ ಊಟ ಮಾಡುವುದಿಲ್ಲ ಎಂದು ಅವರಿಗೆ ನಮಸ್ಕಾರ ಮಾಡಿ ಅಲ್ಲಿಂದ ಬೇಗ ಹೊರಟುಬಿಟ್ಟ. ರಾಮನ ಹಿಂದೆ ಬಾಲ ತುಳಿದ ಹಾವಿನಂತೆ ಲಕ್ಷ್ಮಣನೂ ಕೋಪದಿಂದ ಹೊರಟ.
ಇಷ್ಟೆಲ್ಲಾ ನಡೆದರೂ ರಾಮನ ಮುಖಕಾಂತಿ ಸ್ವಲ್ಪವೂ ತಗ್ಗಿಲ್ಲ. ಮನಸ್ಸಿನಲ್ಲಿ ಯಾವುದೇ ರೀತಿಯ ವಿಕಾರವಿಲ್ಲ. ರಾಜ್ಯ ತಪ್ಪಿದ ದುಃಖವಿಲ್ಲ. ತಂದೆ ಅನ್ನ ತಿಂದು ಆರೋಗ್ಯ ಹೊಂದಬೇಕೆಂದು ವೇಗವಾಗಿ ಆಶೀರ್ವಾದ ಪಡೆಯಲು ಕೌಸಲ್ಯೆಯ ಮಂದಿರಕ್ಕೆ ಹೋದ. ಕೌಸಲ್ಯಾದೇವಿ ರಾತ್ರಿಯೆಲ್ಲಾ ಶ್ರೀಮಹಾವಿಷ್ಣುವಿನ ಪೂಜೆ, ಧ್ಯಾನ ಮಾಡುತ್ತಿದ್ದನ್ನು ನೋಡಿದ ರಾಮ ಆತುರಾತುರವಾದ ಹೆಜ್ಜಿಯಿಟ್ಟುಕೊಂಡು ಕೌಸಲ್ಯಾ ಮಂದಿರಕ್ಕೆ ಪ್ರವೇಶಿಸಿದ.
Comments
Post a Comment