೨೯. ರಾಮನ ಧರ್ಮ
ರಾಮ ಕೌಸಲ್ಯೆ, ಲಕ್ಷ್ಮಣರಿಗೆ ಹೇಳಿದ:
“ತವ ಲಕ್ಷ್ಮಣ ಜಾನಾಮಿ ಮಯ ಸ್ನೇಹಮನುತ್ತಮಂ |
ವಿಕ್ರಮಂ ಚೈವ ಸತ್ಯಂ ಚ ತೇಜಶ್ಚ ಸುದುರಾಸದಂ |
ಮಮ ಮಾತುರ್ಮಾಹದ್ದುಃಖಮತುಲಂ ಶುಭಲಕ್ಷಮ್ಣ |
ಅಭಿಪ್ರಾಯಂ ಅವಿಜ್ಞಾಯ ಸತ್ಯಸ್ಯ ಚ ಶಮಸ್ಯ ಚ ||
ಲಕ್ಷ್ಮಣ, ನೀನೆಷ್ಟು ಪರಾಕ್ರಮಶಾಲಿಯೋ ನನಗೆ ತಿಳಿದಿದೆ. ಆದರೆ ನೀನಾಡಿದ ಮಾತುಗಳು, ಅಮ್ಮನ ಅನುಮತಿ ಪಡೆದು ಅರಣ್ಯವಾಸಕ್ಕೆ ತೆರಳಲು ಬಂದ ನನಗೆಷ್ಟು ದ್ವಂದ್ವ ಉಂಟು ಮಾಡಿತೋ ನೋಡು. ಸತ್ಯ ಮತ್ತು ಶಾಂತಿ ಸ್ಥಾನವನ್ನು ತಿಳಿದುಕೊಳ್ಳಲು ಅಮ್ಮ ತಲ್ಲಣಿಸುತ್ತಿದ್ದಾಳೆ.
ಧರ್ಮಃ ಹಿ ಪರಮಃ ಲೋಕೇ ಧರ್ಮೇ ಸತ್ಯಂ ಪ್ರತಿಷ್ಠಿತಂ |
ಧರ್ಮ ಸಂಶ್ರಿತಂ ಏತನ್ ಚ ಪಿತುರ್ ವಚನಂ ಉತ್ತಮಂ ||
ಧರ್ಮದಿಂದ ಸತ್ಯವು ಪ್ರತಿಷ್ಠಿತವಾಗುತ್ತದೆ. ಧರ್ಮವನ್ನು ಬಿಟ್ಟರೆ, ಸತ್ಯ ಧರ್ಮವೆರಡನ್ನೂ ಬಿಟ್ಟಂತಾಗುತ್ತದೆ. ಧರ್ಮ ಸತ್ಯಗಳಲ್ಲಿ ಒಂದನ್ನು ಮಾತ್ರ ಪಾಲಿಸುವುದಲ್ಲ. ಸತ್ಯದಿಂದ ಕೂಡಿದ ಧರ್ಮವನ್ನು ಪಾಲಿಸಬೇಕು.
ತ್ವಯಾ ಮಯಾ ಚ ವೈದೇಹ್ಯಾ ಲಕ್ಷ್ಮಣೇನ ಸುಮಿತ್ರಯಾ |
ಪಿತುರ್ನಿಯೋಗೇ ಸ್ಥಾತವ್ಯ ಮೇಷ ಧರ್ಮಃ ಸನಾನ್ಃ ||
ಅಮ್ಮಾ ನಿನಗೊಂದು ಧರ್ಮವನು ಹೇಳುತ್ತೇನೆ. ತಂದೆಯವರು ನಿನ್ನನ್ನು, ಸುಮಿತ್ರೆಯನ್ನು, ನನ್ನನ್ನು, ಲಕ್ಷ್ಮಣನನ್ನೂ, ಸೀತೆಯನ್ನೂ ಶಾಸಿಸಬಹುದು, ನಾವೆಲ್ಲರೂ ದಶರಥನು ಹೇಳಿದಂತೆ ಕೇಳಬೇಕು (ತಂದೆಯೇ ಕುಟುಂಬದ ಯಜಮಾನ). ಇದೇ ಸನಾತನ ಧರ್ಮ.
ಧರ್ಮಾರ್ಥಕಾಮಾಃ ಖಲು ತಾತ ಲೋಕೇ ಸಮೀಕ್ಷಿತಾ ಧರ್ಮ ಫಲೋ ದಯೇಷು |
ತೇ ತತ್ರ ಸರ್ವೇ ಸ್ಯುರಸಂಶಯಂ ಮೇ ಭಾರ್ಯೇವ ವಶ್ಯಾಭಿಮತಾ ಸುಪುತ್ರ ||
ಲಕ್ಷ್ಮಣ! ಧರ್ಮ, ಅರ್ಥ, ಕಾಮ ಎನ್ನುವ ಮೂರು ಪುರುಷಾರ್ಥಗಳಿವೆ, ಇದರಲ್ಲಿ ನಾವು ಧರ್ಮ ಒಂದನ್ನೇ ಹಿಡಿದರೆ, ಅದು ಅರ್ಥ ಕಾಮಗಳನ್ನು ಜೊತೆ ತರುತ್ತದೆ. ಧರ್ಮವನ್ನು ಬಿಟ್ಟ ಅರ್ಥವು ದ್ವೇಷವನ್ನು ತರುತ್ತದೆ. ಧರ್ಮವನ್ನು ಬಿಟ್ಟ ಕಾಮವು ನಿನ್ನ ಪತನವನ್ನು ತರುತ್ತದೆ. ಧರ್ಮವು ಪತ್ನಿಯಂತೆ (ಅದಕ್ಕೇ ನಾವು ಹೆಂಡತಿಯನ್ನು ಕಾಮ ಪತ್ನಿಯಾಗಿ ನೋಡುವುದಿಲ್ಲ, ಧರ್ಮಪತ್ನಿ ಎನ್ನುತೇವೆ. ಧರ್ಮ ಬದ್ಧವಾದ ಪತ್ನಿಯಿಂದ ಒದಗಿದ ಕಾಮದಿಂದ ಅರ್ಥವು[ಶಾಸ್ತ್ರದ ಪ್ರಕಾರ ಅರ್ಥವೆಂದರೆ ಧನವಲ್ಲ, ಧನವನ್ನು ಕರ್ಮ ಫಲವೆನ್ನುತ್ತಾರೆ, ಅರ್ಥವೆಂದರೆ ಪುತ್ರ ಸಂತಾನ] ಲಭಿಸುತ್ತದೆ).
ನೀನು ದಶರಥನನ್ನು ಖೈದಿ ಮಾಡಿ ರಾಜ್ಯವನ್ನು ಕೈಗೆ ತೆಗೆದು ಕೊಳ್ಳಬೇಕೆನ್ನುತ್ತೀದ್ದೀಯ, ಅದು ಧರ್ಮ ಬದ್ಧವಲ್ಲ. ಅಂಥಹ ರಾಜ್ಯ ನನಗೆ ಬೇಕಿಲ್ಲ. ತಂದೆಯು ಹೇಳಿದ ಮಾತನ್ನು ಪಾಲಿಸುವುದು ಮಗನ ಧರ್ಮ. ನಾನು ಅರಣ್ಯಕ್ಕೆ ಹೋಗಲು ನಿಶ್ಚಯಿಸಿದ್ದೇನೆ. ನೀನು ನನಗೆ ಪಟ್ಟಾಭಿಷೇಕದ ಸಂಭ್ರಮಕ್ಕಾಗಿ ತಂದ ಈ ಸಾಮಾನುಗಳನ್ನು ತೆಗೆದು ಹಾಕು. ನಾನು ಅರಣ್ಯಕ್ಕೆ ತಕ್ಷಣವೇ ಹೊರಡಬೇಕು. ಇಲ್ಲದಿದ್ದರೆ ಅಮ್ಮ(ಕೈಕೇಯಿ) ಬಾಧೆ ಪಡುತ್ತಾಳೆ. ಅಮ್ಮನ ಮನಸ್ಸಿನಲ್ಲಿ ಅನುಮಾನವೆನ್ನುವ ದುಃಖ ಎಂದಿಗೂ ಬರಕೂಡದು. ಹಾಗಾಗಿ ಈ ಪಟ್ಟಾಭಿಷೇಕಕ್ಕೆ ಅಣಿ ಮಾಡಿರುವುದನ್ನೆಲ್ಲಾ ತೆಗೆಸಿಬಿಡು. ಅಮ್ಮ ನನ್ನನ್ನೂ, ಭರತನನ್ನೂ ಎಂದೂ ಬೇರೆಯಾಗಿ ಕಂಡಿದ್ದಿಲ್ಲ. ನನ್ನ ಮೇಲೆ ಇಷ್ಟೊಂದು ಪ್ರೀತಿ ಇಟ್ಟಿದ್ದ ಅಮ್ಮ, ನೆನ್ನೆ ರಾತ್ರಿ ಪಟ್ಟಾಭಿಷೇಕ ಮಾಡುತ್ತೇನೆಂದು ಹೇಳಿದ ಅಪ್ಪ, ಇಂದು ಬೆಳೆಗ್ಗೆ ೧೪ ವರ್ಷ ಅರಣ್ಯವಾಸ ಮಾಡು ಎಂದರೆ ಮಾಡಲೇಬೇಕು. ಲಕ್ಷ್ಮಣಾ, ನೀನು ಒಂದನ್ನು ತಪ್ಪದೇ ನೆನಪಿಟ್ಟುಕೋ
ಸುಖ ದುಹ್ಖೇ ಭಯ ಕ್ರೋಧಾ ಲಾಭ ಅಲಾಭೌ ಭವ ಅಭವೌ |
ಯಸ್ಯ ಕಿಂಚಿತ್ ತಥಾ ಭೂತಂ ನನು ದೈವಸ್ಯ ಕರ್ಮ ತತ್ ||
ಧರ್ಮವಾಗಲೀ, ಸುಖವಾಗಲೀ, ಶುಭವಾಗಲೀ, ಅಶುಭವಾಗಲೀ, ಅವುಗಳನ್ನು ಶಾಸಿಸುವವನು ಆ ದೈವ. ಆ ದೈವವನ್ನು ತಿರಸ್ಕರಿಸಿ ನಾವೇನೂ ಸಾಧಿಸಲಾರೆವು. ಒಂದು ಒಳ್ಳೆ ಕೆಲಸ ಮಾಡಲು ಸಂದರ್ಭ ಒದಗಿದರೆ ಅದೂ ಕೂಡ ದೈವ ನಿರ್ಣಯವೇ" ಎಂದ.
ರಾಮನು ಹೇಳುತ್ತಿದ್ದ ಮಾತುಗಳನು ಕೇಳಿಸಿಕೊಳ್ಳುತ್ತಿದ್ದ ಲಕ್ಷ್ಮಣ ಧನಸ್ಸನ್ನು ಗಟ್ಟಿಯಾಗಿ ಹಿಡಿದು ನಲುಚುತ್ತಿದ್ದ. ಹಲ್ಲುಗಳನು ಸಿಟ್ಟಿನಿಂದ ಕಡಿಯುತ್ತಾ, ಪಾದಗಳನ್ನು ಅಸಹನೆಯಿಂದ ಕದಲಿಸುತ್ತಾ, "ಈ ಕೈಲಾಗದ ಮಾತುಗಳು ನಿನಗೇ ಸರಿ ಅಣ್ಣ! ಇಷ್ಟು ವೃದ್ಧನಾದ ದಶರಥನಿಗೆ ಯೌವನದಲ್ಲಿನ ಕೈಕೆಯಿಯ ಹಿತ ಬೇಕಾಗಿದೆ. ಕೈಕೆಗೆ ವರಗಳು ಇಲ್ಲಿಯವರೆಗೂ ಜ್ಞಾಪಕ ಬರಲಿಲ್ಲವೇ? ನಿನ್ನೆ ರಾತ್ರಿ ತಾನೆ ನಿನಗೆ ಪಟ್ಟಾಭಿಷೇಕವೆಂದು ಹೇಳಿ, ರಾತ್ರಿಗೆ ರಾತ್ರಿಯೇ ಕೈಕೆಗೆ ಎರಡು ವರಗಳನ್ನು ಕೊಟ್ಟು, ಸತ್ಯ ಧರ್ಮ ಪಾಲನೆಯ ಹೆಸರಿನಲ್ಲಿ ನಿನ್ನನ್ನು ಅರಣ್ಯಕ್ಕೆ ಅಟ್ಟಿ, ಭರತನಿಗೆ ರಾಜ್ಯವನ್ನು ಕೊಡುತ್ತಾನಾ? ತಂದೆಯ ಮಾತನ್ನು ಉಳಿಸುವುದು ಧರ್ಮವೆಂದು ನೀನು ಅರಣ್ಯಕ್ಕೆ ಹೋಗಬೇಕೇ? ಅಪಾರವಾದ ಧನುರ್ವಿದ್ಯೆಯನ್ನು ಕಲಿತ ನೀನು ಕಂದಮೂಲಗಳನ್ನು ತಿಂದು, ಜೇನು ಕುಡಿದು, ಅಡವಿಯಲ್ಲಿ ತಿರುಗಬೇಕೇ? ಕೊನೆಗೆ ಇದೆಲ್ಲಾ ದೈವ ನಿರ್ಣಯ ವೆನ್ನುತ್ತೀಯಲ್ಲಾ? ಆ ದೈವವನ್ನು ಒಮ್ಮೆ ನನ್ನ ಕಣ್ಣಿಗೆ ಕಾಣಿಸೆಂದು ಹೇಳು. ನನ್ನ ಬಿಲ್ಲಿಗೆ ಬಾಣವನ್ನು ಸಂಧಿಸಿ ಮೊದಲು ಆ ದಶರಥನ ತಲೆ, ನಂತರ ಕೈಕೆಯ ತಲೆ ಉರುಳಿಸುತ್ತೇನೆ. ನಿನ್ನನ್ನು ಸಿಂಹಾಸನದ ಮೇಲೆ ಕೂರಿಸುತ್ತೇನೆ. ಆಗ ಆ ದೈವವು ನನ್ನನ್ನೂ ನಿಗ್ರಹಿಸಿದರೆ, ದೈವವಿದೆ ಎಂದು ಒಪ್ಪುತ್ತೇನೆ. ಇಂದು ದೈವವೋ, ಈ ಲಕ್ಷ್ಮಣನೋ ನಿರ್ಧಾರವಾಗಲಿ. ನೀನು ಹೇಳಿದ ಮಾತುಗಳು ನನಗೆ ಸ್ವಲ್ಪವೂ ಹಿಡಿಸಲಿಲ್ಲ, ನೀನು ಅನುಮತಿಸಿದರೆ ದಶರಥನ ಮೇಲೆ ಯುದ್ಧವನ್ನು ಮಾಡುತ್ತೆನೆ” ಎಂದ.
"ಲಕ್ಷ್ಮಣ! ನೀನು ಮತ್ತೆ ತಪ್ಪು ಮಾಡುತ್ತೀದ್ದೀಯ. ಇದೆಲ್ಲಾ ನಡೆಸುತ್ತಿರುವುದು ಆ ದೈವವೇ. ನಾನು ಅನುಮತಿಸಿದರೆ ತಾನೆ ನೀನು ಬಾಣ ಪ್ರಯೋಗ ಮಾಡುವುದು? ದಶರಥ ಮಹಾರಾಜನಿಗೆ ಕೊಟ್ಟಮಾತನ್ನು ಉಳಿಸಿಕೊಳ್ಳಲು ಅರಣ್ಯಕ್ಕೆ ಹೋಗುವುನ್ನು ಬಿಟ್ಟು ನನಗೆ ಬೇರೆ ಮಾರ್ಗವಿಲ್ಲ"
ರಾಮ ಅಡವಿಗೆ ಹೊರಡುತ್ತಿದ್ದ ತನ್ನನ್ನು ಆಶೀರ್ವಾದ ಮಾಡು ಎಂದು ಕೌಸಲ್ಯೆಗೆ ನಮಸ್ಕಾರ ಮಾಡಿದಾಗ ಕೌಸಲ್ಯೆ, "ಸರಿ, ನೀನು ಹಾಗೆಯೇ ಮಾಡು. ಆದರೆ ನನ್ನ ಕಣ್ಣೀರನ್ನು ದಶರಥನು ಒರೆಸುತ್ತಾನೆಂಬ ನಂಬಿಕೆ ನನಗಿಲ್ಲ. ನನ್ನನ್ನೂ ನಿನ್ನ ಜೊತೆ ಕರೆದುಕೊಂಡು ಹೋಗು. ಇಲ್ಲವೆಂದರೆ ನಾನಿಲ್ಲೇ ವಿಷ ಸೇವಿಸಿ ಮರಣಿಸುತ್ತೇನೆ. ಈ ಎರಡರಲ್ಲಿ ನಾನು ಏನು ಮಾಡಬೇಕೋ ನಿರ್ಧರಿಸು" ಎಂದು ರಾಮನಿಗೆ ಹೇಳಿದಳು.
“ಭರ್ತುಃ ಕಿಲ ಪರಿತ್ಯಾಗೋ ನೃಶಂಸಃ ಕೇವಲಂ ಸ್ತ್ರೀಯಾಃ |
ಸ ಭವತ್ಯಾ ನ ಕರ್ತವ್ಯೋ ಮನಸಾ ಅಪಿ ವಿಗರ್ವಿತಃ ||
ಯಾವ ಸ್ತ್ರೀ ತನ್ನ ಪತಿಯನು ಬಿಟ್ಟು ತಾನೊಬ್ಬಳೇ ಆತನಿಂದ ದೂರವಾಗಿ ಇರುತ್ತೇನೆಂದು ಮಾನಸಿಕವಾಗಿ ಊಹೆ ಮಾಡುತ್ತಾಳೋ, ಅಂಥಹ ಸ್ತ್ರೀ ನೃಶಂಸ ( ಆಕೆಯನ್ನು ನೋಡಿದವರು ’ಛೀ’ ಎನ್ನುವರು). ಪತಿಯನ್ನು ಬಿಟ್ಟು ಮಗನೊಂದಿಗೆ ಬರುತ್ತೇನೆಂದು, ದಶರಥ ಮಹಾರಾಜನ ಹಿರಿಯ ಪತ್ನಿಯಾದ ನೀನು ಎಂದಿಗೂ ಹೇಳಬಾರದು. ದಶರಥ ಮಹಾರಾಜನು ಎಷ್ಟು ಕಾಲ ಇರುವನೋ, ನೀನು ಅಲ್ಲಿಯವರೆಗೂ ಆತನ ಶುಶ್ರೂಷೆ ಮಾಡಬೇಕಾಗುತ್ತದೆ.
ಭರ್ತಾರಂ ನ ಅನುವರ್ತೇತ ಸಾ ಚ ಪಾಪ ಗತಿರ್ ಭವೇತ್ |
ಭರ್ತುಃ ಸುಶ್ರೂಷಯಾ ನಾರಿ ಲಭತೇ ಸ್ವರ್ಗಮು ತ್ತಮಂ |
ಅಪಿ ಯಾ ನಿರ್ನಮಸ್ಕಾರಾ ನಿವೃತ್ತಾ ದೇವಪೂಜನಾತ್ ||
ಎಷ್ಟೇ ಪೂಜೆಗಳು, ವ್ರತಗಳು ಮಾಡಿದರೂ ತನ್ನ ಪತಿಯ ಮನಸ್ಸನ್ನು ಅರಿತು, ಪತಿಗೆ ಆನಂದವನ್ನು ಉಂಟುಮಾಡುವಂತೆ ಮಾಡದಿದ್ದರೆ ಅಂತಹ ಸ್ತ್ರೀ ಕೊನೆಗೆ ಸೇರುವುದು ನರಕವನ್ನು. ಅಂತೆಯೇ, ಜೀವನದಲ್ಲಿ ಯಾವ ಪೂಜೆ ಪುನಸ್ಕಾರಗಳು ಮಾಡದಿದ್ದರೂ, ಪತಿಯನ್ನು ಅನುಸರಿಸಿ, ಆತನೊಂದಿಗೆ ಪ್ರೇಮದಿಂದ ಪ್ರವರ್ತಿಸಿದಂಥ ಸ್ತ್ರೀ ಕೊನೆಗೆ ಸ್ವರ್ಗವನ್ನು ಸೇರುತ್ತಾಳೆ. ಅದಕ್ಕಾಗಿ ಅಮ್ಮಾ, ನೀನು ಹೀಗೆ ಮಾತನಾಡಬಾರದು, ನಾನು ಅಂತಹ ಮಾತನ್ನು ಕೇಳಬಾರದು. ನಾನು ಅರಣ್ಯವಾಸಕ್ಕೆ ಹೋದರೆ ಅಲ್ಲಿ ನನ್ನನ್ನು ರಕ್ಷಿಸುವುದು ನಿನ್ನ ಆಶೀರ್ವಾದವೇ" ಎಂದು ಹೇಳಿ ಕೌಸಲ್ಯೆಯ ಪಾದಕ್ಕೆ ನಮಸ್ಕಾರ ಮಾಡಿದ.
ಕೌಸಲ್ಯೆ ಬಿಳಿಯ ಸಾಸಿವೆ, ಮೊಸರು, ಬಿಳಿಯ ಹೂವಿನ ಮಾಲೆ ತರಿಸಿ, ಚೆನ್ನಾಗಿ ವೇದ ತಿಳಿದ ಆಚಾರ್ಯರನ್ನು ಕರೆಸಿ, ಹೋಮವನ್ನು ಮಾಡಿಸಿ, ಆ ಅಕ್ಷತೆಯನ್ನು ರಾಮನ ತಲೆಯ ಮೇಲೆ ಹಾಕಿ, "ಮಗು, ನಿನ್ನನ್ನು ಸೂರ್ಯ, ಚಂದ್ರ, ಅಶ್ವಿನಿ ದೆವತೆಗಳು, ಭೂಮಿ, ಆಕಾಶ, ನೀರು, ಅಗ್ನಿ, ವಾಯುವು, ದಿಕ್ಕುಗಳು, ಗೃಹ ದೇವತೆಗಳು, ರಾಕ್ಷಸರು, ವಿಷಕ್ರಿಮಿಗಳು, ಮರಗಳು, ನದಿಗಳು, ಋತುಗಳು, ನಕ್ಷತ್ರಗಳು ಎಲ್ಲವೂ ರಕ್ಷಿಸಲಿ. ವೃತ್ತಾಸುರನನ್ನು ಕೊಂದಾಗ ದೇವೇಂದ್ರನಿಗೆ ಹೇಗೆ ಮಂಗಳವಾಯಿತೋ ಅಂಥಹ ಮಂಗಳವು ನಿನಗೂ ಸಿಗಲಿ. ಕ್ಷೀರಸಾಗರ ಮಥನ ಮಾಡುವಾಗ ಅದಿತಿಯಿಂದ ಇಂದ್ರನಿಗೆ ದೊರಕಿದಂಥ ಮಂಗಳವು ನಿನಗೆ ದೊರೆಯಲಿ. ಆ ತ್ರಿವಿಕ್ರಮ ಅವತಾರದಿಂದ ಇಡೀ ಲೋಕಕ್ಕೆಲ್ಲಾ ದೊರೆತ ಮಂಗಳವು ನಿನಗೆ ಲಭಿಸಲಿ" ಎಂದು ಆಶೀರ್ವದಿಸಿ ಕಳಿಸಿದಳು.
Comments
Post a Comment