೩೦. ರಾಮನ ಜೊತೆ ಹೊರಟು ನಿಂತ ಸೀತಾಲಕ್ಷ್ಮಣರು!

ಕೌಸಲ್ಯೆಯ ಆಶೀರ್ವಾದ ಪಡೆದ ರಾಮ ನಂತರ ಸೀತೆಯ ಕಡೆ ಹೊರಟ. ತನ್ನ ತಾಯಿಯ ಬಳಿ ಗಂಭೀರನಾದರೂ ಸೀತೆಯ ಬಳಿ ಬರುವ ವೇಳೆಗೆ ವಿಷಣ್ಣನಾಗಿದ್ದ. ರಾಮನಿಗೆ ಎದುರುಬಂದ ಸೀತೆ, “ಯಾವಾಗಲೂ ಕಾಂತಿಯುಕ್ತವಾಗಿರುವ ನಿಮ್ಮ ಮುಖದ ಮೇಲೆ ಯಾವುದೋ ಕಪ್ಪು ಛಾಯೆ ಆವರಿಸಿದೆ. ಏನೋ ತಪ್ಪು ಮಾಡಿದಂತೆ ನಿಮ್ಮ ಕಣ್ಣ ರೆಪ್ಪೆ ಕುಂದಿದೆ. ನಿಮಗೆ ಶ್ವೇತಛತ್ರ ಹಿಡಿಯಬೇಕಿತ್ತು, ನಿಮ್ಮ ಮುಂದೆ ಭದ್ರಗಜ ನಡೆಯಬೇಕಿತ್ತು. ಹಿಂದೆ ಚದುರಂಗಬಲ ನಡೆದು ಬರಬೇಕಿತ್ತು. ಇವೆಲ್ಲ ಏಕಿಲ್ಲ?”, ಎಂದು ಕೇಳಿದಳು.

ರಾಮ ತಲೆತಗ್ಗಿಸಿ ಹೇಳಿದ - “ಸೀತಾ! ನಮ್ಮ ತಂದೆಯನ್ನು ಕೈಕೆ ರಾತ್ರಿ ಎರೆಡು ವರಗಳನ್ನು ಕೇಳಿದಳು. ಹದಿನಾಲ್ಕು ವರ್ಷಗಳ ಕಾಲ ನನಗೆ ಅರಣ್ಯವಾಸವಾಗಬೇಕು ಮತ್ತು ಭರತನಿಗೆ ಪಟ್ಟಾಭಿಷೇಕವಾಗಬೇಕು ಎಂದು. ಸತ್ಯ ಧರ್ಮಗಳಿಗೆ ಬದ್ಧರಾದ ನಮ್ಮ ತಂದೆ ನನ್ನನ್ನು ಅರಣ್ಯವಾಸ ಮಾಡಲು ಆಜ್ಞಾಪಿಸಿದರು. ನಾನು ಅರಣ್ಯಕ್ಕೆ ಹೋಗುತ್ತಿದ್ದೇನೆ. ಪಟ್ಟಾಭಿಷೇಕದ ನಂತರ ಭರತ ರಾಜನಾಗುತ್ತಾನೆ. ಈಗ ನೀನು ಭರತನಿಂದ ರಕ್ಷಿಸಲ್ಪಡುತ್ತಿರುವ ಸ್ತ್ರೀ, ಆದ್ದರಿಂದ ಅತ್ತಿಗೆ ಎಂಬ ಸಲಿಗೆಯಿಂದ ಮಾತಾಡಬೇಡ. ಅವನನ್ನು ಪ್ರಭುವಿನಂತೆ ಗೌರವಿಸುವುದನ್ನು ಕಲಿ. ನನ್ನ ತಾಯಿ ಕೌಸಲ್ಯೆಯ ಸೇವೆ ಮಾಡು. ಕೌಸಲ್ಯೆ, ಸುಮಿತ್ರ, ಕೈಕೆ ಮತ್ತು ದಶರಥನ ಇತರ ಪತ್ನಿಯರನ್ನು ಸೇವಿಸು. ನಾನು ಹೋದ ಮೇಲೆ ಅಮ್ಮ ಅನ್ನ ತಿನ್ನದೆ ಅಳುತ್ತಾ ಇರುತ್ತಾಳೆ. ನೀನು ಅಮ್ಮನ ಕಣ್ಣೀರು ಒರೆಸಿ, ಒಳ್ಳೆಯ ಮಾತು ಹೇಳಿ ಸಮಾಧಾನ ಮಾಡು”

“ನೀವು ಹೇಳಿದ್ದು ನನಗೆ ಸರಿಯಾಗಿ ಕೇಳಿಸಿತು, ಆದರೆ ಒಂದು ಮಾತು ಮಾತ್ರ ಅರ್ಥವಾಗಲಿಲ್ಲ. ನೀನು ಇರು ನಾನು ಹೋಗುತ್ತೇನೆನ್ನುತ್ತಿದ್ದೀರ, ಆದರೆ ನಾವು ಹೋಗಬೇಂದು ಹೇಳಬೇಕಾಗಿತ್ತಲ್ಲ! ನೀವು ನಿಮ್ಮ ತಂದೆಯ ಧರ್ಮ ಕಾಪಾಡಲು ಹೋಗುತ್ತಿದ್ದೀರ, ನನಗೂ ಒಂದು ಧರ್ಮವಿದೆ. ಅದೇನೆಂದು ಕೇಳಿ. ಒಂದೇ ಮನೆಯಲ್ಲಿ ಅಪ್ಪ, ಅಮ್ಮ, ಮಕ್ಕಳು, ಸೊಸೆಯರು, ಅಳಿಯಂದಿರು ಇರುತ್ತಾರೆ. ಮನೆಯ ಯಜಮಾನಿಯ ಭಾಗ್ಯವನ್ನು ಮಿಕ್ಕವರೆಲ್ಲ ಹಂಚಿಕೊಳ್ಳುತ್ತಾರೆ. ಆದರೆ, ಗಂಡನೊಂದಿಗೆ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಎಲ್ಲ ಸಮಯದಲ್ಲೂ ಅವನಿಗಿಂತ ಬೇರೆಯಾಗಿ ನೋಡದ ರೀತಿಯಲ್ಲಿ ಇರುವುದು ಹೆಂಡತಿ ಮಾತ್ರ. ಆದ್ದರಿಂದ ನಾನೂ ಕೂಡ ನಿಮ್ಮ ಜೊತೆಯಲ್ಲಿ ಬರುತ್ತೇನೆ. 
ನ ಪಿತಾ ನ ಆತ್ಮಜೋ ನ ಆತ್ಮಾ ನ ಮಾತಾ ನ ಸಖೀ ಜನಃ
ಇಹ ಪ್ರೇತ್ಯ ಚ ನಾರೀಣಾಂ ಪತಿ್ ಏಕೋ ಗತಿಃ ಸದಾ
ತಂದೆ, ತಾಯಿ, ಸೋದರರು, ಸೋದರಿಯರು, ಮಕ್ಕಳು, ರಾಜ್ಯ, ಸಂಪತ್ತು - ಇವು ಯಾವುವೂ ಸ್ತ್ರೀಗೆ ಗತಿಯಲ್ಲ. ಸುಖವಾಗಲಿ, ದುಃಖವಾಗಲಿ ಸ್ತ್ರೀ ಪಡೆಯಬೇಕಾದ ಗಮ್ಯ ಪತಿ. ನಿನ್ನ ಜೊತೆ ಬಂದ ನಂತರ, ಅಲ್ಲಿ ಹಂಸ ಮೊದಲಾದ ಪಕ್ಷಿಗಳು ಸ್ನಾನ ಮಾಡುತ್ತಾ ಆಡುವ ಸರೋವರಗಳಲ್ಲಿ ನಾನೂ ನಿಮ್ಮ ಜೊತೆ ಆಡುತ್ತೇನೆ. ನಿಮ್ಮ ಜೊತೆ ನಡೆಯುತ್ತಾ, ನಿಮ್ಮ ಪಕ್ಕ ಕೂತು ಪಡೆಯುವ ಸುಖ ಮೂರು ಲೋಕಗಳನ್ನು ಧಾರೆಯೆರೆದರೂ ಸಿಗುವುದಿಲ್ಲ.”

“ಸೀತಾ! ನಿನಗೆ ತಿಳಿಯದು. ನನ್ನ ಜೊತೆ ಬರಬೇಕೆನ್ನುತ್ತೀಯ. ನಾನು ಹೋಗುತ್ತಿರುವುದು ಅರಣ್ಯಕ್ಕೆ. ಅಲ್ಲಿ ನದಿ ಸ್ನಾನ ಮಾಡಲು ಹೋದರೆ ಮೊಸಳೆಗಳು ಹಿಡಿಯುತ್ತವೆ. ರಾತ್ರಿ ಸೊಳ್ಳೆಗಳು ಕಚ್ಚುತ್ತವೆ. ಇರುವೆ, ಹಾವುಗಳಿರುತ್ತವೆ. ಒಣ ಎಲೆಗಳ ಮೇಲೆ ಮಲಗಬೇಕು. ಕ್ರೂರ ಮೃಗಗಳು ಸಂಚರಿಸುತ್ತಿರುತ್ತವೆ. ಕೆಲವು ಬಾರಿ ಮಹಾನುಭಾವರ ಬರುತ್ತಿರುತ್ತಾರೆ. ಅವರಿಗೆ ಸೌಕರ್ಯಗಳನ್ನು ಮಾಡಬೇಕಾಗುತ್ತದೆ. ಕೆಲವು ಬಾರಿ ಆಹಾರ ಸಿಗುವುದಿಲ್ಲ. ಹಸಿವಿನಿಂದಲೇ ಇರಬೇಕಾಗುತ್ತದೆ. ನೀರು ಸಿಗದಿದ್ದರೆ ಬಾಯಾರಿಕೆಯಿಂದಲೇ ಇರಬೇಕಾಗುತ್ತದೆ. ಅಡವಿಗಳಲ್ಲಿ ಮುಳ್ಳುಗಳು ಚುಚ್ಚಬಹುದು. ಇಷ್ಟೆಲ್ಲಾ ಕಷ್ಟಗಳನ್ನು ಪಡುತ್ತಾ ಅರಣ್ಯದಲ್ಲಿರಬೇಕು. ಇದಕ್ಕೆ ಹೊಂದುವ ಜೀವ ನಿನ್ನದಲ್ಲ. ನೀನು ಇಲ್ಲೇ ಇರು. ಹದಿನಾಲ್ಕು ವರ್ಷಗಳ ನಂತರ ಹಿಂತಿರುಗಿ ಬರುತ್ತೇನೆ.
ಯೇ ತ್ವಯಾ ಕೀರ್ತಿತಾ ದೋಷಾ ವನೇ ವಸ್ತವ್ಯತಾಂ ಪ್ರತಿ
ಗುಣಾನ್ ಇತಿ ಏವ ತಾನ್ ವಿದ್ಧಿ ತವ ಸ್ನೇಹ ಪುತಃ ಕೃಯಾನ್“

“ನೀವು ಹೇಳುವುದು ನಿಜವಾಗಿರಬಹುದು. ನೀವು ಪಕ್ಕದಲ್ಲಿ ಕೂತು ‘ಸೀತಾ’ ಎಂದು ಪ್ರೀತಿಯಿಂದ ಕರೆದರೆ ಇವೆಲ್ಲಾ ನನಗೆ ಸುಖವಾಗಿ ಬದಲಾಗುತ್ತದೆ. ಆದರೆ ನೀವು ಸಪ್ಪೆಮೋರೆಯಲ್ಲಿದ್ದರೆ ನಾನು ಎಷ್ಟು ಭಾಗ್ಯಗಳ ಮಧ್ಯದಲ್ಲಿದ್ದರೂ ಅವು ನನಗೆ ವಿಷವಾಗುತ್ತವೆ. ನನಗೂ ನನ್ನ ತಂದೆ ವಿವಾಹದ ಸಮಯದಲ್ಲಿ ಒಂದು ಧರ್ಮವನ್ನು ಬೋಧಿಸಿದ್ದರು - ನಾನು ನಿಮ್ಮ ಹಿಂದೆ ನೆರಳಿನಂತೆ ಬರುತ್ತೆನೆಂದು. ನೀವು ದೊಡ್ದವರ ಮಾತಿಗೆ ಕಟ್ಟುಬಿದ್ದು ಅರಣ್ಯಕ್ಕೆ ಹೋಗುತ್ತಿದ್ದೀಯ, ಹಾಗೆಯೇ ನಾನೂ ದೊಡ್ಡವರ ಮಾತಿಗೆ ಕಟ್ಟುಬಿದ್ದು ಅರಣ್ಯಕ್ಕೆ ಬರಬೇಕು. ಚಿಕ್ಕವಳಿದ್ದಾಗ ನನ್ನ ಜಾತಕ ನೋಡಿದ ಜೋತಿಷಿಗಳು ನಾನು ಕೆಲಕಾಲ ಅರಣ್ಯವಾಸ ಮಾಡುತ್ತೇನೆಂದಿದ್ದರು. ಅಂತಃಪುರದಲ್ಲಿರು, ಇಲ್ಲಿ ನನ್ನನ್ನು ಎಲ್ಲರೂ ರಕ್ಷಿಸುತ್ತಾರೆ, ಅಡವಿಯಲ್ಲಿ ಹುಲಿ, ಸಿಂಹಗಳಿರುತ್ತವೆ ಎನ್ನುವ ನೀವು ಅಡವಿಗೆ ಬಂದರೆ ನನ್ನನ್ನು ರಕ್ಷಿಸಲಾರೆಯಾ? ಅವು ನಿನ್ನನ್ನು ನೋಡಿದ ತಕ್ಷಣ ಓಡಿಹೋಗುತ್ತವೆ. ಇಂದು ನೀವೇಕೆ ಹೀಗೆ ಕೈಲಾಗದವನಂತೆ ಮಾತಾಡುತ್ತಿದ್ದೀರ? ನಿಮ್ಮನ್ನು ನೋಡಿದರೆ ನನಗೆ, ನೀವು ಪುರುಷ ರೂಪದಲ್ಲಿರುವ ಸ್ತ್ರೀ ಎಂದು ತಿಳಿಯದೆ ನನ್ನ ತಂದೆ ನಿನಗೆ ಕನ್ಯಾದನ ಮಾಡಿದರು ಎಂದನಿಸುತ್ತದೆ. ನೀಮ್ಮ ಜೊತೆ ಸ್ವಲ್ಪ ಜೇನು ಕುಡಿದರೂ, ಒಂದು ಹಣ್ಣು ತಿಂದರೂ ನನ್ನ ಹೊಟ್ಟೆ ತುಂಬುತ್ತದೆ. ಒಂದುವೇಳೆ ಏನೂ ಸಿಗದಿದ್ದರೂ ನಿಮ್ಮ ಜೊತೆ ಮಾತಾಡುತ್ತಿದ್ದರೆ ನಾನು ಎಲ್ಲ ಕಷ್ಟಗಳನ್ನೂ ಮರೆಯುತ್ತೇನೆ. ನಾನು ಮುಂದೆ ದರ್ಭೆಗಳನ್ನು ತುಳಿಯುತ್ತಾ ನಡೆಯುತ್ತೇನೆ. ಆಗ ಅವು ಮೆತ್ತಗಾಗುತ್ತವೆ. ನೀವು ನನ್ನ ಹಿಂದೆ ಹಾಯಾಗಿ ಬನ್ನಿ. ನಾನು ನಿಮಗೆ ಯಾವ ರೀತಿಯಲ್ಲಿಯೂ ಕಷ್ಟಕೊಡುವುದಿಲ್ಲ. ನನ್ನನ್ನು ನಂಬಿದರೆ ನಿಮ್ಮ ಜೊತೆ ಕರೆದುಕೊಂಡು ಹೋಗಿ. ಇಲ್ಲದಿದ್ದರೆ ನಾನು ಇಲ್ಲಿಯೇ ಪ್ರಾಣ ಬಿಡಲು ಅನುಮತಿ ಕೊಡಿ”, ಎಂದು ಸೀತಾದೇವಿ ರಾಮನನ್ನು ಗಟ್ಟಿಯಾಗಿ ತಬ್ಬಿ, ಅವನ ಎದೆಯ ಮೇಲೆ ಗಟ್ಟಿಯಾಗಿ ಅತ್ತಳು.

ಆಗ ರಾಮ, “ಸೀತಾ! ಹದಿನಾಲ್ಕು ವರ್ಷಗಳು ನಿನ್ನನ್ನು ಬಿಟ್ಟು ನನಗೂ ಇರಲಾಗುವುದಿಲ್ಲ. ಆದರೆ ಎಂದಿಗೂ ಪತಿ ಕಷ್ಟವೆಂದು ತಿಳಿದು ಪತ್ನಿಯನ್ನು ತನ್ನ ಜೊತೆ ಬಾ ಎಂದು ಕರೆಯಬಾರದು. ಪ್ರಯತ್ನಪೂರ್ವಕವಾಗಿ ಪತಿ ಪತ್ನಿಗೆ ಕಷ್ಟಕೊಡಬಾರದು. ಪತ್ನಿಯೇ ತಾನು ಒಬ್ಬಳೇ ಇರಲಾರದೆ ಅನುಸರಿಸಿದರೆ ಮಾತ್ರ ಕರೆಯಬೇಕು. ಆ ಅಭಿಪ್ರಾಯ ನಿನಗ ಬಂದಮೇಲೆ ನಿನ್ನನ್ನು ಕರೆದುಕೊಂಡು ಹೋಗುವುದು ಧರ್ಮ. ಆದ್ದರಿಂದಲೇ ನಾನು ಬೇಡ ಎಂದೆ. ನಿನ್ನಂಥ ಹೆಂಡತಿಯನ್ನು ಪಡೆದ ನಾನೇ ಧನ್ಯ. ಈಗ ನೀನು ಇಲ್ಲಿರುವುದನ್ನೆಲ್ಲಾ ದಾನ ಮಾಡು”, ಎಂದು ಕೋಶಾಧಿಕಾರಿಯನ್ನು ಕರೆದು ತನ್ನಲ್ಲಿದ್ದ ದ್ರವ್ಯಗಳನ್ನು ದಾನ ಮಾಡಿದ. ತನ್ನ ವಸ್ತ್ರ, ಆಭರಣಗಳನ್ನು ವಸಿಷ್ಠರ ಕುಮಾರನಾದ ಸುಯಜ್ಞನಿಗೆ, ಗೋವುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದ. 

ಅಲ್ಲಿಯವರೆಗೂ ಹೊರಗೇ ಇದ್ದ ಲಕ್ಷ್ಮಣ ಓಡಿಬಂದು ರಾಮನ ಕಾಲನ್ನು ಗಟ್ಟಿಯಾಗಿ ಹಿಡಿದು, “ಅಣ್ಣಾ! ನಿನ್ನನ್ನು ಬಿಟ್ಟು ನಾನು ಒಂದು ಕ್ಷಣವೂ ಬದುಕಲಾರೆ. ಇಷ್ಟು ಹೊತ್ತು ಸೀತಾದೇವಿಯನ್ನೇ ಬರಬೇಡವೆಂದೆ. ನನ್ನನ್ನು ಬಾ ಎನ್ನುತ್ತೀಯೋ, ಬೇಡವೆನ್ನುತ್ತೀಯೋ ಎಂದು ಭಯವಾಗುತ್ತಿದೆ. ನೀನು ನನ್ನನ್ನು ಕರೆದುಕೊಂಡು ಹೋದರೆ, ನೀವಿಬ್ಬರೂ ಆರಾಮವಾಗಿ ಸರೋವರ, ಪರ್ವತಗಳ ಮೇಲೆ ತಿರುಗುತಿದ್ದರೆ ನಾನು ನಿಮಗಾಗಿ ಪರ್ಣಶಾಲೆ ನಿರ್ಮಿಸುತ್ತೇನೆ, ಆಹಾರ ತರುತ್ತೇನೆ. ನೀವಿಬ್ಬರೂ ಅದನ್ನು ತಿನ್ನುತ್ತಿದ್ದರೆ ನನಗೆ ತುಂಬಾ ಸಂತೋಷವಾಗುತ್ತದೆ” ಎಂದ.

ಆದರೆ ರಾಮ, “ನಿನ್ನನ್ನು ಕೂಡ ಕರೆದುಕೊಂಡು ಹೋದರೆ ಕೌಸಲ್ಯ, ಸುಮಿತ್ರೆ, ಕೈಕೆಯನ್ನು ಯಾರು ನೋಡಿಕೊಳ್ಳುತ್ತಾರೆ? ಆದ್ದರಿಂದ ನೀನು ಇಲ್ಲೇ ಇರು” ಎಂದ.
“ನಾನು ಕೌಸಲ್ಯ, ಸುಮಿತ್ರೆಯರನ್ನು ನೋಡಿಕೊಳ್ಳುವುದೆಂದರೇನು ಅಣ್ಣಾ! ಕೌಸಲ್ಯೆಗೆ ಸಾವಿರ ಗ್ರಾಮಗಳಿವೆ. ನನ್ನಂಥ ಲಕ್ಷ ಜನರನ್ನು ಪೋಷಿಸುವ ಶಕ್ತಿಯಿದೆ. ಇನ್ನು ಇಂಥ ಕಾರಣಗಳನ್ನು ಹೇಳಬೇಡ. ನನಗೆ ಉತ್ತರ ಕೊಡಲು ಆಗುವುದಿಲ್ಲ. ‘ಬಾ ಲಕ್ಷ್ಮಣ’ ಅನ್ನು, ಮರುಕ್ಷಣವೇ ಓಡಿಬರುತ್ತೇನೆ.”


‘ನಿನ್ನಂಥವನು ತಮ್ಮನಾಗಿ ಹುಟ್ಟಿರುವುದು ನನ್ನ ಅದೃಷ್ಟ’ ಎಂದು ರಾಮ ಲಕ್ಷ್ಮಣ ತನ್ನ ಜೊತೆ ಬರಲು ಒಪ್ಪಿಕೊಂಡ. ಲಕ್ಷ್ಮಣ ತನ್ನ ಮಿತ್ರರಿಗೆ ಸಂತೋಷವಾಗಿ ವಿಷಯ ತಿಳಿಸಿ ತನ್ನ ವಸ್ತುಗಳನ್ನು ದಾನ ಮಾಡಿದ. ಸೀತಾರಾಮಲಕ್ಷ್ಮಣರು ದಶರಥನ ಆಶೀರ್ವಾದಕ್ಕಾಗಿ ಅವನ ಅಂತಃಪುರಕ್ಕೆ ಹೊರಟರು.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ