೩೧. ಅರಣ್ಯವಾಸಕ್ಕೆ ಸಿದ್ಧತೆ

ರಾಮ, ಸೀತೆ, ಲಕ್ಶ್ಮಣ ರಾಜಮಾರ್ಗದಲ್ಲಿ ನಡೆದು ದಶರಥ ಮಹಾರಾಜನಿದ್ದ ಕೈಕೇಯಿ ಮಂದಿರಕ್ಕೆ ಹೋರಟರು. ಅವರೆಲ್ಲರೂ ನಡೆದು ಹೋಗುವುದನ್ನು ನೋಡಿದ ಪ್ರಜೆಗಳು ಕಣ್ಣೀರಿಟ್ಟರು. ಎಲ್ಲೋ ಹಂಸತೂಲಿಕಾತಲ್ಪದ ಮೇಲೆ ಇರಬೇಕಾದ ಜನಕನ ಮಗಳು, ದಶರಥನ ಹಿರಿಯ ಸೊಸೆ, ರಾಮನ ಪತ್ನಿ, ಇಂದು ಹೀಗೆ ರಾಜ ಬೀದಿಗಳಲ್ಲಿ ಪಾದಾಚಾರಿಯಾಗಿ, ನಾಲ್ಕುಮಂದಿ ನೋಡಿತ್ತಿರುವಂತೆಯೇ ರಾಮನನ್ನು ಹಿಂಬಾಲಿಸಿ ಹೋಗುತ್ತಿದ್ದಾಳೆ. ಕಾಲವೆಂದರೆ ಇದೇ ಅಲ್ಲವೇ! ನೆನ್ನೆ ರಾತ್ರಿ ಪಟ್ಟಾಭಿಷೇಕ ಮಾಡಬೇಕೆಂದಿದ್ದ ರಾಮನಿಗೆ ಇಂದು ಅರಣ್ಯವಾಸ ಮಾಡಬೇಕಾಗಿದೆ. ಪ್ರಜೆಗಳೆಲ್ಲರೂ ವಿಶೇಷವಾದ ಗೌರವ ಭಾವದಿಂದ ಅವರನ್ನು ನೋಡಲು ಬಂದಿದ್ದರು. ಮೂವರೂ ದಶರಥ ಮಹಾರಾಜನಿದ್ದ ರಾಜ ಪ್ರಾಸಾದಕ್ಕೆ ಬಂದರು.

"ರಾಮ, ಸೀತಾ ಲಕ್ಷ್ಮಣ ಸಹಿತನಾಗಿ ಬಂದಿರುವನೆಂದು ನಮ್ಮ ತಂದೆಯವರಿಗೆ ನಿವೇದಿಸಿ, ನಾನು ನನ್ನ ಪ್ರಾಸಾದದಲ್ಲಿದ್ದ ಸಮಸ್ತ ವಸ್ತುಗಳನ್ನೂ ದಾನ ಮಾಡಿ ಬಂದಿದ್ದೇನೆ. ಒಮ್ಮೆ ಅವರ ದರ್ಶನ ಮಾಡಿ ಹೊರಡಬೇಕೆಂದಿರುವೆ" ಎಂದು ರಾಮ ಅಲ್ಲಿಯೇ ಇದ್ದ ಸುಮಂತ್ರನಿಗೆ ಹೇಳಿದ. ರಾಮ ಹೇಳಿದ ಮಾತುಗಳನ್ನು ಸುಮಂತ್ರನು ದಶರಥನಿಗೆ ತಿಳಿಸಿದ.

ದಶರಥ, "ಸುಮಂತ್ರಾ, ರಾಮನನ್ನು ದರ್ಶನಕ್ಕಾಗಿ ಒಳಗೆ ಕಳಿಸಬೇಡ, ರಾಮನಿಗಿಂತ ಮುಂಚಿತವಾಗಿ ನನ್ನ ಪತ್ನಿಯರೆಲ್ಲರನ್ನೂ ಕರೆದುಕೊಂಡು ಬರಲು ಕೌಸಲ್ಯೆಗೆ ತಿಳಿಸು" ಎಂದು ಸುಮಂತ್ರನಿಗೆ ಆಜ್ಞಾಪಿಸಿದ. ಕೌಸಲ್ಯೆ, ಸುಮಿತ್ರಾ ಮತ್ತಿತರ ದಶರಥನ ಪತ್ನಿಯರು ಪ್ರಾಸಾದದೊಳಕ್ಕೆ ಬಂದ ನಂತರ ಸುಮಂತ್ರನಿಗೆ ರಾಮನನ್ನು ಒಳಗೆ ಕರೆತರಲು ಹೇಳಿದ. ಒಳಗೆ ಬರುತ್ತಿದ್ದ ರಾಮ ಲಕ್ಷ್ಮಣರನ್ನು ನೋಡಿ ದಶರಥ ಓಡಿ ಬಂದು ಅವರ ಬಳಿ ಹೋಗಲು ಪ್ರಯತ್ನಿಸಿದ. ಆದರೆ ಅದು ಸಾಧ್ಯವಾಗದೆ ಮಧ್ಯದಲ್ಲೇ ನೆಲದ ಮೇಲೆ  ಕಣ್ಣು ತಿರುಗಿ ಬಿದ್ದ. 

ದಶರಥ ಸ್ವಲ್ಪ ಸುಧಾರಿಸಿದ ಮೇಲೆ ರಾಮ,ಅಪ್ಪ! ನೀವು ಬಯಸಿದಂತೆ ೧೪ ವರ್ಷಗಳು ಅರಣ್ಯವಾಸ ಮಾಡಲು ದಂಡಕಾರಣ್ಯಕ್ಕೆ ಹೋಗುತ್ತಿದ್ದೇನೆ. ನನ್ನೊಂದಿಗೆ ನನ್ನನ್ನಗಲಿ ಇರಲಾರದೆ ಸೀತೆ, ಲಕ್ಷ್ಮಣರೂ ನನ್ನ ಜೊತೆ ಬರುತ್ತಿದ್ದಾರೆ. ನೀವು ಭೂಮಿಗೆ ಪ್ರಭುಗಳು. ನೀವು ಅನುಮತಿಸಿದರೆ ನಾವಿನ್ನು ಹೊರಡುತ್ತೇವೆ. ನಮಗೆ ಅನುಮತಿಯನ್ನು ಕೊಟ್ಟು ಹೊರಡಲು ಅನುಗ್ರಹಿಸಿ" ಎಂದು ಹೇಳಿ ದಶರಥನ ಪಾದಗಳಿಗೆ ನಮಸ್ಕಾರ ಮಾಡಿದ.
ದಶರಥ ರಾಮನನ್ನು ಮೇಲೆತ್ತಿ, "ನನ್ನನ್ನು ಕೈಕೆ ವಂಚನೆಯಿಂದ ನಿಗ್ರಹಿಸಿ, ಎರಡು ವರಗಳನ್ನು ಕೊಟ್ಟೇ ತೀರಬೇಕೆಂದು ಸತ್ಯ ಪಾಶದಿಂದ ಬಂಧಿಸಿದ್ದಾಳೆ. ನಾನೀಗ ಏನೂ ಮಾಡದ ಪರಿಸ್ಥಿತಿಯಲ್ಲಿದ್ದೇನೆ. ಅದಕ್ಕಾಗಿ ನೀನು ನನ್ನನು ಖೈದಿಯಾಗಿಸಿ ರಾಜ್ಯವನ್ನು ತೆಗೆದುಕೋ, ಹಾಗೆ ಮಾಡಿದರೆ ನಾನು ನಿನ್ನನ್ನು ಪ್ರತಿ ದಿನ ನೋಡಬಹುದು. ನಿನ್ನ ನೋಡದೆ ನಾನು ಇರಲಾರೆ ರಾಮ" ಎಂದ.
"ನೀವಿಂಥ ಮಾತನ್ನು ಆಡಬಾರದು, ನಾನು ಕೇಳಬಾರದು. ನನ್ನನು ಆಶೀರ್ವದಿಸಿ, ನಾನು ಅರಣ್ಯಕ್ಕೆ ಹೋಗುತ್ತೇನೆ”.
“ಸರಿ ರಾಮ ನೀನು ಹಾಗೆಯೇ ಹೊರಟು ಹೋಗು! ಆದರೆ ರಾತ್ರಿ ಮಾತ್ರ ಇಲ್ಲೇ ಇದ್ದು ನಿನಗೆ ಬೇಕಾದ, ಬಯಸಿದ ಭೋಗಗಳನ್ನು ಅನುಭವಿಸು. ನಾನು ರಾತ್ರಿ ಕೌಸಲ್ಯೆಯೊಂದಿಗೆ ನಿನ್ನನ್ನು ನೋಡುತ್ತಾ ಕಳೆಯುತ್ತೇನೆ".
" ರಾತ್ರಿ ನನ್ನುನ್ನು ಭೋಗಗಳನ್ನು ಅನುಭವಿಸು ಎಂದು ಹೇಳುತ್ತಿರುವಿರಿ. ಆದರೆ ನಾನು ೧೪ ವರ್ಷಗಳು ಅರಣ್ಯವಾಸ ಮಾಡಬೇಕಾದವನು, ನನಗಲ್ಲಿ ಇವನ್ನೆಲ್ಲ ಯಾರು ಕೊಡುತ್ತಾರೆ? ಅರಣ್ಯವಾಸ ಮುಂದಿರುವಾಗ ಒಂದು ರಾತ್ರಿ ಭೋಗಗಳೇಕೆ ಬೇಕು? ನೀವು ಕೈಕಮ್ಮನಿಗೆ ಕೊಟ್ಟ ಮಾತಿನಂತೆ ತಕ್ಷಣವೇ ಭರತನಿಗೆ ಪಟ್ಟಾಭಿಷೇಕ ಮಾಡಿ. ನಾನು ಸಂಪಾದಿಸಿದ ಪುಣ್ಯವೇನದರೂ ಇದ್ದರೆ ಅದರ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ, ನಾನು ಆಕ್ರೋಶದಿಂದ ಹೋಗುತ್ತಿಲ್ಲ. ನೀವು ಕೊಟ್ಟ ಮಾತನ್ನು ಉಳಿಸಲು ಸಮಯ ಬಂದರೆ ರಾಜ್ಯವನ್ನಷ್ಟೇ ಅಲ್ಲ, ಸೀತೆಯನ್ನೂ, ಸುಖವನ್ನೂ, ಸ್ವರ್ಗವನ್ನೂ ಬಿಟ್ಟು ಬಿಡುತ್ತೇನೆ. ನಾನು ಯಾರಿಂದ ಜನ್ಮ ಪಡೆದೆನೂ ತಂದೆಯ ಸತ್ಯ ಶಾಶ್ವತವಾಗಬೇಕು. ಅದಕ್ಕೆ ನನ್ನ ಪ್ರವರ್ತನೆ ಅಡ್ಡಿಯಾಗ ಬಾರದು.


ರಾಮನ ಮಾತನ್ನು ಕೇಳಿ ದಶರಥ ಕೈಕೆಯ ಕಡೆ ಬಹಳ ಅಸಹ್ಯದಿಂದ, ‘ನೋಡು ನಿನ್ನಿಂದ ನನಗೆ ಈದಿನ ಎಂಥಹ ಪರಿಸ್ಥಿತಿ ಒದಗಿದೆ’ ಎನ್ನುವಂತೆ ನೋಡಿದ. ಆದರೆ ಕೈಕೇಯಿ ಮಾತ್ರನೀನು ಅವರನ್ನು ಇಲ್ಲಿಂದ ಆದಷ್ಟು ಬೇಗ ಕಳಿಸು’ ಎಂದು ಕಣ್ಸನ್ನೆ ಮಾಡಿದಳು. ಇದನ್ನು ಗಮನಿಸಿದ ಸುಮಂತ್ರ ಕೋಪದಿಂದ, "ಛೀ, ದುಷ್ಟೆ! ಮಹಾಪಾಪಿ! ಪರ್ವತವನ್ನು ಹೇಗೆ ಕದಲಿಸಲಾಗುವುದಿಲ್ಲವೋ ಅಂಥಹ ಧೀರ ದಶರಥ ಮಹಾರಾಜ. ಸಮುದ್ರವು ಹೇಗೆ ಯಾವ ವಿಧದಲ್ಲಿಯೂ ಕ್ಷೋಭಿಸುವುದಿಲ್ಲವೋ ಅಂಥಹ ಗಾಂಭೀರ್ಯ ಉಳ್ಳವನು ಮಹಾರಾಜ. ಅಂಥಹ ರಾಜ ನೆನ್ನೆ ರಾತ್ರಿಯಿಂದ ಅಳುತ್ತಿದ್ದಾನೆ, ನಿನ್ನನು ಅಂಗಲಾಚುತ್ತಿದ್ದಾನೆ, ಇಷ್ಟೆಲ್ಲಾ ಮಾಡಿದರೂ ನಿನ್ನ ಮನಸ್ಸು ಕರಗಲಿಲ್ಲ. ನಿನ್ನನ್ನು ನೋಡಿದರೆ ನನಗೊಂದು ನೆನಪಿಗೆ ಬರುತ್ತಿದೆ, ನೂರರಲ್ಲಿ ೯೦ ಭಾಗ ಹೆಣ್ಣುಮಕ್ಕಳು ತಾಯಿಯನ್ನೇ ಹೋಲುತ್ತಾರೆ. ನಿನಗೆ ಕೂಡ ನಿನ್ನ ತಾಯಿಯ ಹೋಲಿಕೆಯಲ್ಲದೆ ಇನ್ಯಾರ ಹೋಲಿಕೆ ಬರಲು ಸಾಧ್ಯ? ನಿನ್ನ ತಾಯಿಯ ಬಗ್ಗೆ ನನಗೆ ತಿಳಿದಿದೆ. ನಿನ್ನ ತಂದೆಯವರಿಗೆ ಸರ್ವ ಪ್ರಾಣಿಗಳ ಮನಸ್ಸಿನಲ್ಲಿರುವ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ವಿದ್ಯೆ ತಿಳಿದಿತ್ತು. ಕೈಕೆಯ ಮಹಾರಾಜ ಒಮ್ಮೆ ನಿಮ್ಮ ತಾಯಿಯೊಂದಿಗೆ ಮಲಗಿದ್ದಾಗ , ಮಂಚದ ಪಕ್ಕದದಿಂದ ಒಂದು ಇರುವೆಯು ಹೋಗುತ್ತಿತ್ತು. ಅದರ ಹೆಸರು ಜ್ರಂಭ. ಇರುವೆ ತನ್ನ ಪಕ್ಕದಲ್ಲಿರುವ ಮತ್ತೊಂದು ಇರುವೆಗೆ ಎನೋ ಹೇಳಿತಂತೆ. ಕೈಕೆಯ ಮಹಾರಾಜನಿಗೆ ಎಲ್ಲ ಪ್ರಾಣಿಗಳ ಭಾಷೆ ಅರ್ಥವಾಗುತ್ತಿದ್ದರಿಂದ ಇರುವೆಗಳ ಮಾತಿಗೆ ಮಹಾರಾಜನು ಫಕ್ಕನೆ ನಕ್ಕ. ಆಗ ನಿನ್ನ ತಾಯಿ ನಕ್ಕಿದ್ದೇಕೆಂದು ರಾಜನನ್ನು ಕೇಳಿದಳು. ಇರುವೆಗಳು ನನ್ನ ಬಗ್ಗೆ ಪರಿಹಾಸ್ಯ ಮಾಡಿದರು ಅದಕ್ಕೆ ನಕ್ಕೆನೆಂದು ರಾಜ ಹೇಳಿದ. ನಿನ್ನ ತಾಯಿ ಇರುವೆಗಳು ಆಡಿದ ಮಾತನ್ನು ಹೇಳಲು ಒತ್ತಾಯಿಸಿದಳು. ಆದರೆ ರಾಜ,ನನಗೆ ವಿದ್ಯೆ ಹೇಳಿಕೊಟ್ಟ ಮಹಾನುಭಾವನು ಒಂದು ನಿಯಮವನ್ನು ಹೇಳಿದ್ದಾನೆ, ಅದರಂತೆ ನಾನು ನನಗೆ ಅರ್ಥವಾದ ವಿಷಯಗಳನ್ನು ಬೇರೆಯವರಿಗೆ ಹೇಳಿದರೆ, ನನ್ನ ತಲೆ ಸಾವಿರ ಹೋಳಾಗುತ್ತದೆ. ಅದಕ್ಕಾಗಿ ನಾನು ನಿನಗೆ ಹೇಳುವುದಿಲ್ಲ’ ಎನ್ನುತ್ತಾನೆ. ಆಗ ನಿನ್ನ ತಾಯಿನಿನ್ನ ತಲೆ ಸಾವಿರ ಹೋಳಾದರೆ ನನಗಾಗುವ ನಷ್ಟವೇನಿಲ್ಲ, ನೀನು ಹೇಳಲೇ ಬೇಕು’ ಎಂದು ಬಲವಂತ ಪಡಿಸಿದಳು. ಕೈಕೇಯ ರಾಜ ತನಗೆ ವಿದ್ಯೆ ಕಲಿಸಿದವನಲ್ಲಿಗೆ ಹೋಗಿ ನಡೆದ ಸಂಗತಿಯನ್ನು ತಿಳಿಸಿ,ನಿಜವನ್ನು ಹೇಳಿ ನನ್ನ ತಲೆಯನ್ನು ಕಳೆದುಕೊಳ್ಳಲಾ, ಹೇಳದೆ ನನ್ನ ತಲೆಯನ್ನು ಕಾಪಾಡಿಕೊಳ್ಳಲಾ?ಎಂದು ಕೇಳಿದ. ಆಗ ಮಹಾನುಭಾವ, ’ನಿನ್ನ ತಲೆ ಹೋಳಾದರೂ ಚಿಂತೆಯಿಲ್ಲದೆ, ವಿಷಯವನ್ನು ಹೇಳಲು ಬಲವಂತ ಪಡಿಸಿದಳೆಂದರೆ, ಆಕೆಯ ಯೋಗ್ಯತೆಯೇನೆಂದು ತಿಳಿಯಿತು, ಆಕೆ ಮತ್ತೆ ಹಟ ಮಾಡಿದರೆ ಆಕೆಯನ್ನು ಬಿಟ್ಟು ಬಿಡುಎಂದರು. ಅಂಥಹ ಮಂಕುಪಟ್ಟು ಹಿಡಿದ ಸ್ತ್ರೀ ನಿನ್ನ ತಾಯಿ. ನಿನಗೆ ಅವಳ ಹೋಲಿಕೆಯೇ ಬಂದಿದೆ" ಎಂದ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ