೩೨. ಅರಣ್ಯವಾಸಕ್ಕೆ ನಾಂದಿ

ದಶರಥ ಕೈಕೆಯನ್ನು ಉಪೇಕ್ಷಿಸಿ ಸುಮಂತ್ರನಿಗೆ,ಅವಳಿಗೆ ನೀನು ಎಷ್ಟು ಹೇಳಿದರೂ ಪ್ರಯೋಜನವಿಲ್ಲ ಸುಮಂತ್ರ. ನೀವು ನೂರಾರು ರಥಗಳನ್ನೂ, ಚತುರಂಗ ಬಲವನ್ನು, ಆನೆಗಳನ್ನೂ, ಗಾಯಕರನ್ನೂ, ನಾಟ್ಯ ವೃಂದಗಳನ್ನೂ ಸಿದ್ಧ ಮಾಡಿ. ರಾಮ ಎಲ್ಲಿ ಉಳಿದರೆ ಅಲ್ಲಿ ಮಧುರಾನ್ನವನ್ನು ಮಾಡಿ ಬಡಿಸುವ ಅಡಿಗೆಯವರನ್ನು ಸಿದ್ಧಗೊಳಿಸಿ. ೧೪ ವರ್ಷಗಳು ರಾಮನು ಕಾಡಿನಲ್ಲಿ ಹಾಯಾಗಿ ಕಳೆದು ಬರಲು ಧನ ರಾಶಿಯನ್ನು ಕಳಿಸಿ ಕೊಡಿ. ರೇಶಿಮೆಯ ವಸ್ತ್ರಗಳನ್ನು ಕಳಿಸಿ ಕೊಡಿ. ಆತನಿಗೆ ರಕ್ಷಣೆಯಾಗಿ ಸೈನ್ಯವನ್ನು ಕಳಿಸಿ. ರಾತ್ರಿ ಮಲಗಲು ಡೇರೆಗಳನ್ನು ಕಳಿಸಿ. ಇವೆಲ್ಲಾ ರಾಮ ೧೪ ವರ್ಷ ಎಲ್ಲಿಗೆ ಹೋದರೆ ಅಲ್ಲಿಗೆ ಹೋಗಬೇಕುಎಂದು ಆಜ್ಞೆ ಮಾಡಿದ.

ಅದನ್ನು ಕೇಳಿ ಕೈಕೆ, "ಪೂರ್ವದಲ್ಲಿ ನಿನ್ನ ವಂಶದ ಸಗರ ಚಕ್ರವರ್ತಿ ಅಸಮಂಜಸನನ್ನು ಉಟ್ಟ ಬಟ್ಟೆಯಲ್ಲಿ ಅಡವಿಗೆ ಕಳಿಸಿದ, ನೀನೇನೋ ಈದಿನ ರಾಮನ ಹಿಂದೆ ಚತುರಂಗ ಬಲವನ್ನೇ ಕಳಿಸುತ್ತಿದ್ದೀಯ.
ರಾಜ್ಯಂ ಗತ ಜನಂ ಸಾಧೋ ಪಿತ ಮಣ್ಡಾಂಸುರಾಂ ಇವ |
ನಿರಾಸ್ವಾದ್ಯತಮಂ ಶೂನ್ಯಮ್ ಭರತಃ ಅಭಿಪತ್ಸ್ಯತೆ ||
ನೀನು ಸಾರವನ್ನೆಲ್ಲಾ ರಾಮನ ಹಿಂದೆ ಕಳಿಸಿ, ಮಿಕ್ಕ ಸಿಪ್ಪೆಯನ್ನು ಭರತನಿಗೆ ಕೊಡುತ್ತಿದ್ದೀಯಾ? ಹಾಗೇನಾದರು ಆದರೆ ನಮಗೆ ರಾಜ್ಯವೇ ಬೇಡ" ಎಂದು ಖಂಡಿತವಾಗಿ ಹೇಳಿಬಿಟ್ಟಳು.

ಅಲ್ಲೇ ಇದ್ದ ಸಿದ್ದಾರ್ಥನೆಂಬ ಮಂತ್ರಿ, "ಅಸಮಂಜಸನು ಮಕ್ಕಳನ್ನು ಸರಯೂ ನದಿಯಲ್ಲಿ ತಳ್ಳಿ, ಅವರು ಮರಣಿಸಿದರೆ ತಾನು ಸಂಭ್ರಮ ಪಡುತ್ತಿದ್ದ. ಆಗ ಪ್ರಜೆಗಳೆಲ್ಲರೂ ವಿಷಯವನ್ನು ಸಗರನಿಗೆ ತಿಳಿಸಿದಾಗ, ತನ್ನ ಮಗ ಮಾಡುತ್ತಿರುವುದು ತಪ್ಪು ಎಂದು ಅವನನ್ನು ಅರಣ್ಯಕ್ಕೆ ಕಳಿಸಿದ. ರಾಮನಿಗೂ ಅಸಮಂಜಸನಿಗೂ ಹೋಲಿಕೆಯೇ? ರಾಮನ ವರ್ತನೆಯಲ್ಲಿ ಒಂದು ದೋಷವನ್ನು ನೀನು ನನಗೆ ತೋರಿಸು. ಹಾಗೇನಾದರು ನೀನು ತೋರಿಸಿದರೆ ನೀನು ಕಳೀಸುವುದೇನು, ನಾವೇ ರಾಮನನ್ನು ಅರಣ್ಯಕ್ಕೆ ಕಳಿಸುತ್ತೇವೆ" ಎಂದರು.

ಕೈಕೆ ಏನೂ ಮಾತನಾಡದೇ ಸುಮ್ಮನಾದಳು. ದಶರಥನು, " ಕೈಕೆ ರಾಮನಲ್ಲಿ ದೋಷವನ್ನು ತೋರಿಸ ಬಲ್ಲಳೇ? ಕೈಕೆ ನೀನು ನನ್ನನ್ನು ವರ ಕೇಳಿದಾಗ ರಾಮನು ಕಾಡಿಗೆ ಹೋಗಬೇಕೆಂದೇ ಹೊರತು ಅವನ ಹಿಂದೆ ಯಾರೂ ಹೋಗಬಾರದೆಂದು ನೀನು ಕೇಳಲಿಲ್ಲ, ನಾನು ನಿನಗೆ ಹಾಗೆ ವರ ಕೊಡಲಿಲ್ಲ. ಹಾಗಾಗಿ ನೀನು ನನಗೆ ಈಗ ಎದುರಾಡುವಂತಿಲ್ಲ. ನಾನು ಶಾಸಿಸಿದಂತೆ ಚತುರಂಗ ಬಲಗಳು ರಾಮನ ಹಿಂದೆ ಹೋಗುತ್ತವೆ" ಎಂದ.

ಮಾತುಗಳನ್ನು ಕೇಳುತ್ತಿದ್ದ ರಾಮ ಮಧ್ಯಪ್ರವೇಶಿಸಿ, ನಾನು ತಪಸ್ವಿಯಾಗಿ ಜೀವಿಸಲು ಅರಣ್ಯಕ್ಕೆ ಹೋಗುತ್ತಿದ್ದರೆ, ನನ್ನ ಹಿಂದೆ ಚತುರಂಗಬಲವಾಗಲೀ, ರಥಗಳಾಗಲೀ, ಆನೆಗಳಾಗಲೀ ಏಕೆ ಬೇಕು? ನನಗೆ ಇವೇನೂ ಬೇಡ. ನನಗೆ ನಾರು ಮಡಿಯನ್ನು ತಂದು ಕೊಡಿ. ಅವುಗಳನ್ನು ಧರಿಸಿ ನಾನು ಹೊರಟು ಹೋಗುತ್ತೇನೆ" ಎಂದ.

ತಕ್ಷಣವೇ ಕೈಕೆ ಸಂತೋಷದಿಂದ ಒಳಗೆ ಓಡಿ ಹೋಗಿ ಮೂರು ಜೊತೆ ನಾರು ಸೀರೆಗಳನ್ನು ತಂದು ರಾಮನಿಗೆ ಕೊಟ್ಟಳು. ರಾಮ ಲಕ್ಷ್ಮಣರು ಒಳಗೆ ಹೋಗಿ ಮುನಿಗಳಂತೆ ನಾರು ಸೀರೆಗಳನ್ನು ಉಟ್ಟು ಬಂದರು. ಕೈಕೆ ಪಕ್ಕದಲ್ಲೇ ರೇಷ್ಮೆ ಸೀರೆ ಉಟ್ಟಿದ್ದ ಸೀತೆಯ ಕೈಗೆ ನಾರು ಸೀರೆಯನ್ನು ಕೊಟ್ಟಳು.

ಇದನ್ನು ನೋಡಿ ವಷಿಷ್ಠರು, "ಪಾಪಿಯಾದ ಕೈಕೆ! ನೀನು ಶೃತಿಯನ್ನು ತಪ್ಪುತ್ತಿದ್ದೀಯಾ,  ಸ್ವಲ್ಪ ಸಮಯದಿಂದ ನಿನ್ನ ವರ್ತನೆ ಮಿತಿ ಮೀರುತ್ತಿದೆ.
ಆತ್ಮಾ ಹಿ ದಾರಾಃ ಸರ್ವೇಷಾಂ ದರಸಂಗ್ರಹವರ್ತಿನಾಂ |
ಆತ್ಮೇಯಮಿತಿ ರಾಮಸ್ಯ ಪಾಲಯಪ್ಯತಿ ಮೇದಿನೀಂ ||
ಇದೇ ಮುಹೂರ್ತಕ್ಕೆ ರಾಮನ ಆತ್ಮವಾದ ಸೀತೆಯನ್ನು ನಾನು ಪಟ್ಟಾಭಿಷೇಕ ಮಾಡುತ್ತೇನೆ. ರಾಮ ಮರಳಿ ಬರುವ ವರೆಗೂ ಸೀತೆ ರಾಜ್ಯವನ್ನಾಳಲಿ. ಯಾರು ಅಡ್ದ ಬರುತ್ತಾರೋ ನಾನು ನೋಡುತ್ತೇನೆ. ಯಾರು ನನ್ನೊಂದಿಗೆ ಧರ್ಮವನ್ನು ಪಾಲಿಸುತ್ತೀರೋ ಅದು ನಿಮ್ಮಿಷ್ಟ. ಸೀತೆಗೆ ನಾರು ಸಿರೆಯನ್ನು ಕೊಡಲು ನಿನಗೇನು ಅಧಿಕಾರವಿದೆ? ನೀನು ರಾಮನನ್ನು ೧೪ ವರ್ಷ ಅರಣ್ಯಕ್ಕೆ ಕಳಿಸಬೇಕೆಂದು ಕೆಳಿದ್ದೀಯ. ದಶರಥ ಕೋರಿಕೆಯನ್ನು ಅಂಗೀಕರಿಸಿದ್ದಾನೆ. ಆದರೆ ಅವನ ಜೊತೆಯಲ್ಲಿ ಸೀತೆ ಧರ್ಮ ಪತ್ನಿಯಾಗಿ ಹೊರಟಿದ್ದಾಳೆ. ಅಂತಹವಳಿಗೆ ನಾರು ಸೀರೆ ಕೊಟ್ಟು ಘೋರವಾದ ಪಾಪ ಮಾಡಿದ್ದೀಯ.
ಯುದ್ಯಾಪಿ ತ್ವಂ ಕ್ಷಿತಿತಲಾದ್ಗಗನಂ ಚೋತ್ಪತಿಷ್ಯಸಿ |
ಪಿತುರ್ವಂ ಶಚರಿತ್ರಜ್ಞಃ ಸೋನ್ಯಥಾ ಕರಿಷ್ಯತಿ ||
ನೀನು ಆಕಾಶಕ್ಕೆ ಹಾರಿ ನೆಲಕ್ಕೆ ಬಿದ್ದರೂ, ಭುಮಿಯಮೇಲೆ ಅಡ್ದವಾಗಿ ಬಿದ್ದರೂ, ಎಷ್ಟೇ ಕೂಗಾಡಿದರೂ, ತನ್ನ ವಂಶ, ಅದರಲ್ಲಿ ಹುಟ್ಟಿದ ರಾಜರ ಚರಿತ್ರೆಯೇನೆಂಬುದು ಭರತನಿಗೆ ಸ್ಪಷ್ಟವಾಗಿ ತಿಳಿದಿದೆ. ಭರತನು ರಾಜ್ಯವನ್ನು ಸ್ವೀಕರಿಸುವುದಿಲ್ಲ. ಆಗ ಅಪ್ರತಿಷ್ಟೆಗೆಲ್ಲ ನೀನೇ ಕಾರಣವೆಂದು ಎಲ್ಲರಿಗೂ ತಿಳಿಯುತ್ತದೆ" ಎಂದರು.

ವಸಿಷ್ಠರು ಹೇಳಿದರೂ ಕೇಳದೆ ಸೀತೆ ನಾರು ಸೀರೆಯನ್ನು ಉಡಲು ಹೋದಳು. ಅದನ್ನು ಉಡಲು ಬರದೇ ಕಣ್ಣಲ್ಲಿ ನೀರು ಹಾಕಿದಳು. ರಾಮ ಉಟ್ಟಿದ್ದ ಸೀರೆಯ ಮೇಲೆಯೇ ನಾರು ಸೀರೆ ಹೇಗೆ ಉಡಬೇಕೆಂದು ಉಡಿಸಿ ತೋರಿಸಿದ. ಈ ದೃಶ್ಯವನ್ನು ನೋಡಿ,ಕೈಕೆಯ ದುಷ್ಟತನವನ್ನು ತಡೆಯುವರು ಯಾರೂ ಇಲ್ಲವೇ’ ಎಂದು ದಶರಥನ ೩೦೦ ಜನ ಪತ್ನಿಯರು ಎದೆ ಬಡಿದುಕೊಂಡು ಅತ್ತರು. ದಶರಥ ಕೈಕೆಗೆ, "ಸೀತೆ ಜನಕನ ಮಗಳು, ನನಗೆ ಸೊಸೆಯಾಗಿ ಬಂದಿದ್ದಾಳೆ. ಅವಳನ್ನು ಅರಣ್ಯಕ್ಕೆ ಕಳಿಸುತ್ತೇನೆಂದು ನಾನು ನಿನಗೆ ಎಂದಿಗೂ ವರ ಕೊಟ್ಟಿಲ್ಲ. ಪತಿಯನ್ನು ಅನುಸರಿಸಿ ತನ್ನ ಪಾತಿವ್ರತ್ಯವನ್ನು ಪಾಲಿಸುತ್ತಿದ್ದಾಳೆ" ಎಂದು ಹೇಳಿ ತನ್ನ ಕೋಶಾಧಿಕಾರಿಯನ್ನು ಕರೆದು, ೧೪ ವರ್ಷಗಳು ಸೀತೆ ಒಮ್ಮೆ ಉಟ್ಟ ಸೀರೆಯನ್ನು ಮತ್ತೆ ಉಡದಿರುವಂತೆ ಎಷ್ಟು ಸೀರೆ ಬೇಕೋ ಅಷ್ಟು ಸೀರೆಗಳನ್ನು ತರಿಸಿದ. ಹಾಗೆಯೇ ಪ್ರತಿದಿನ ಧರಿಸಲು ಒಡವೆಗಳನ್ನೂ, ರತ್ನದಿಂದ ಕೂಡಿದ ಆಭರಣಗಳನ್ನೂ ತರಿಸಿ ಕೊಡಲು ಹೇಳಿದ.

"ರಾಮಾ! ಸೀತೆಗೆ ನಾರು ಸೀರೆ ಉಡಿಸಬೇಡ. ಅವಳು ರೇಷ್ಮೆ ಸೀರೆಯಲ್ಲಿಯೇ ಬರುತ್ತಾಳೆ" ಎಂದು ವಸಿಷ್ಠರು ಹೇಳಿದರು. ರಾಮ ದಶರಥ, ಕೌಸಲ್ಯೆಗೆ ನಮಸ್ಕಾರ ಮಾಡಿ ಹೊರಡಲು ಸಿದ್ದನಾದಾಗ ದಶರಥ "ರಾಮಾ" ಎಂದು ಕರೆದು ಮತ್ತೆ ಮೂರ್ಛೆ ಹೋದ. ಸ್ವಲ್ಪ ಸಮಯದ ನಂತರ ಸುಧಾರಿಸಿ ಕೊಂಡು,ಸುಮಂತ್ರ! ರಾಜ್ಯ ಸರಿಹದ್ದು ದಾಟುವವರೆಗೂ ರಾಮನನ್ನು ರಥದಲ್ಲಿ ಕರೆದು ಕೊಂಡು ಹೋಗು" ಎಂದ. ನಂತರ ಕೋಶಾಧಿಕಾರಿಗಳನ್ನು ಕರೆದು ಸೀತಮ್ಮನು ಉಡಲು ಸೀರೆಗಳನ್ನೂ, ಆಭರಣಗಳನ್ನೂ ರಥದಲ್ಲಿಡಲು ಹೇಳಿದ.

ಸೀತೆಯನ್ನು ಕೌಸಲ್ಯೆ ಆಲಂಗಿಸಿ, "ಅಮ್ಮ ಸೀತಾ, ನಿನಗೆ ತಿಳಿಯದಿರುವುದೇನಲ್ಲ. ಆದರೂ, ನಿನ್ನ ಅತ್ತೆಯಾಗಿ ಅಕ್ಕರೆಯಿಂದ ಹೇಳುತ್ತಿದ್ದೇನೆ. ಇಂದು ರಾಮನಿಗೆ ಯುವರಾಜ್ಯ ಪಟ್ಟಾಭಿಷೇಕ ನಡೆಯಬೇಕಾಗಿತ್ತು. ಆದರೆ ನಾರು ಮಡಿಯುಟ್ಟು ಅಡವಿಗೆ ಹೋಗುತ್ತಿದ್ದಾನೆ. ಇಂತಹ ಸ್ಥಿತಿ ರಾಮನಿಗೆ ಬಂದಿದೆಯೆಂದು ಅವನನ್ನು ಕಡೆಗಣಿಸ ಬೇಡ. ಕುಲ ಸ್ತ್ರೀಗೆ ಸ್ವರ್ಗಕ್ಕಿಂತ, ಧನಕ್ಕಿಂತ, ಧಾನ್ಯಕ್ಕಿಂತ ಪರಮ ಉತ್ಕೃಷ್ಟವಾದುದು ಪತಿಯೊಬ್ಬನೇ" ಎಂದು ಹೇಳಿದಳು.

ಸೀತೆ, "ನೀವು ಹೇಳಿದ ವಿಷಯಗಳನ್ನು ನಾನು ತವರುಮನೆಯಲ್ಲೇ ತಿಳಿದು ಕೊಂಡು ಅತ್ತೆಯವರ ಮನೆಗೆ ಬಂದಿದ್ದೇನೆ. ನಾನು ನಿಮ್ಮ ಮಗನಿಗೆ ಕಷ್ಟ ಕೊಡುವುದಿಲ್ಲ. ಅರಣ್ಯವಾಸದ ಕ್ಲೇಶವು ಅವರಿಗೆ ತಿಳಿಯದಂತೆ ಆನಂದಮಯವಾಗಿ ಮಾಡಲು ನಾನು ಅವರೊಂದಿಗೆ ಹೊರಟಿದ್ದೇನೆ.
ಅತಂತ್ರೀ ವಾದ್ಯತೇ ವೀಣಾ ಅಚಕ್ರಃ ವರ್ತತೇ ರಥಃ |
ಅಪತಿಃ ಸುಖಂ ಏಧತೇ ಯಾ ಸ್ಯಾತ್ ಅಪಿ ಶತ ಆತ್ಮಜಾ ||
ವೀಣೆಯಲ್ಲಿನ ತಂತಿಯು ಇಲ್ಲವಾದರೆ ವೀಣೆಯೇ ಇಲ್ಲ. ಚಕ್ರವಿಲ್ಲದೇ ಹೋದರೆ ರಥವೇ ಇಲ್ಲ, ನೂರು ಮಂದಿ ಕುಮಾರರು ಕೊಡುವ ಸುಖಕ್ಕಿಂತ, ಪತ್ನಿಯು ಪತಿಯಿಂದ ಪಡೆಯುವ ಸುಖವೇ ದೊಡ್ಡದು" ಎಂದಳು.

ನಂತರ ಲಕ್ಷ್ಮಣ ಸುಮಿತ್ರೆಗೆ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದಾಗ ಸುಮಿತ್ರೆ, "ನೀನು ಅರಣ್ಯವಾಸಕ್ಕಾಗಿಯೇ ಹುಟ್ಟಿರುವೆ ಲಕ್ಷ್ಮಣ! ರಾಮನನ್ನು ಪ್ರೀತಿಸುವವರು ಇಷ್ಟು ಜನರಿದ್ದರೂ,  ಅವರಾರೂ ಸಂಸಾರವನ್ನು ಬಿಟ್ಟು ಬರಲಿಲ್ಲ. ರಾಮನ ಸೇವೆ ಮಾಡುವ ಅದೃಷ್ಠ ನಿನಗೆ ಒದಗಿ ಬಂದಿದೆ. ನೀನು ಯಾವುದೇ ತಪ್ಪಿಲ್ಲದೇ ಸರ್ವಕಾಲದಲ್ಲಿಯೂ ಸಿತಾರಾಮರನ್ನು ರಕ್ಷಿಸುತ್ತಿರು.
ರಾಮಂ ದಶರಥಂ ವಿದ್ಧಿ ಮಾಂ ವಿದ್ಧಿಜನಕ ಆತ್ಮಜಾಂ |
ಅಯೋಧ್ಯಾಂ ಅಟವೀಂ ವಿದ್ಧಿ ಗಚ್ಛ ತಾತ ಯಥಾ ಸುಖಂ ||

ನೀನು ರಾಮನನ್ನು ನಿನ್ನ ತಂದೆ, ಸೀತೆಯನ್ನು ತಾಯಿ, ಅವರಿಬ್ಬರೂ ಇರುವ ಅಡವಿಯನ್ನೇ ಅಯೋಧ್ಯೆಯೆಂದುಕೊಂಡು ಸುಖವಾಗಿರು" ಎಂದು ಆಶೀರ್ವದಿಸಿದಳು.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ