೫೫. ರಾಮನ ಪ್ರಲಾಪ
ಇತ್ತ ರಾಮ ಮಾಂಸವನ್ನು ತೆಗೆದುಕೊಂಡು ಬರುತ್ತಿದ್ದಾಗ ಅವನ ಹಿಂದೆ ನರಿಯ ಕೂಗು ಕೇಳಿಸಿತು. ರಾಮನನ್ನು ದೀನ ದೃಷ್ಟಿಯಿಂದ ನೋಡುತ್ತಾ ಅಲ್ಲಿದ್ದ ಪ್ರಾಣಿಗಳು ಎಡಕ್ಕೆ ಪ್ರದಕ್ಷಿಣೆ ಹಾಕಿದವು. ಈ ಶಕುನಗಳನ್ನು ನೋಡಿ ಸೀತೆಗೆ ಏನೋ ತೊಂದರೆಯಾಗಿದೆಯೆಂದುಕೊಂಡು ಓಡಿ ಬರುತ್ತಿದ್ದಾಗ ಲಕ್ಷ್ಮಣ ಅವನ ಎದುರಿಗೆ ಬಂದ. ಅವನನ್ನು ನೋಡಿದ ತಕ್ಷಣ ರಾಮನಿಗೆ ಎದೆ ನಿಂತಂತಾಯಿತು. ಲಕ್ಷ್ಮಣನನ್ನು, "ಸೀತೆಯನ್ನು ಬಿಟ್ಟು ಏಕೆ ಬಂದೆ? ಅವಳಿಗೆ ತೊಂದರೆಯಾಗಿದೆಯೆಂದು ನನಗನಿಸುತ್ತಿದೆ. ಅವಳು ಕ್ಷೇಮವೇ? ಬದುಕಿದ್ದಾಳಾ? ನನಗೇಕೋ ನಂಬಿಕೆ ಬರುತ್ತಿಲ್ಲ. ಖರದೂಷಣರನ್ನು ಕೊಂದ ಮೇಲೆ ರಾಕ್ಷಸರು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಮಾರೀಚ ಸಾಯುತ್ತಾ 'ಹಾ ಸೀತಾ! ಹಾ ಲಕ್ಷ್ಮಣ!' ಎಂದ. ಅದನ್ನು ಕೇಳಿ ಸೀತೆ ನಿನ್ನನ್ನು ಕಳಿಸಿರಬಹುದು. ನೀನು ಬಂದ ಮೇಲೆ ರಾಕ್ಷಸರು ಅವಳನ್ನು ಅಪಹರಿಸಿರಬಹುದು. ಅಥವಾ ಅವಳನ್ನು ಕೊಂದು ತಿಂದಿರಬಹುದು. ಲಕ್ಷ್ಮಣಾ! ಅವಳನ್ನು ಬಿಟ್ಟು ಏಕೆ ಬಂದೆ? ನೀನು ಬರಬಾರದಾಗಿತ್ತು. ಸೀತೆಯಿಲ್ಲದೆ ಅಯೋಧ್ಯೆಗೆ ಹೇಗೆ ಹೋಗಲಿ? ಎಲ್ಲರೂ ಬಂದು ಸೀತೆ ಎಲ್ಲಿ ಎಂದು ಕೇಳಿದರೆ ಏನು ಹೇಳಲಿ? ಗಂಡನ ಜೊತೆ ಅರಣ್ಯಕ್ಕೆ ಬಂದ ಸೀತೆಯನ್ನು ರಕ್ಷಿಸಿಕೊಳ್ಳಲಾಗದವನು ರಾಮ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾಗ ಅದನ್ನು ಕೇಳಿ ನಾನು ಹೇಗೆ ಬದುಕಲಿ? ನಾನು ಹಿಂದೆ ಬರುವುದಿಲ್ಲ. ಆಶ್ರಮದಲ್ಲಿ ಸೀತೆ ಕಾಣಿಸದಿದ್ದರೆ ನನ್ನ ಪ್ರಾಣ ಬಿಟ್ಟುಬಿಡುತ್ತೇನೆ. ಯಾವ ಸೀತೆಯ ಪೋಷಣೆಯಿಂದ ನಾನು ಈ ೧೩ ವರ್ಷ ಕಳೆದೆನೋ ಆ ಸೀತೆಯಿಲ್ಲದಿದ್ದರೆ ನನಗೆ ರಾಜ್ಯ, ಅಂತಃಪುರ ಯಾವುದೂ ಬೇಡ. ನೀನು ಅಯೋಧ್ಯೆಗೆ ಹೋಗಿ ಭರತನಿಗೆ ಪಟ್ಟಾಭಿಷೇಕ ಮಾಡಿಕೊಳ್ಳಲು ಹೇಳು. ಕೌಸಲ್ಯೆಯ ಸೇವೆ ಮಾಡು. ನಾನು ಅಯೋಧ್ಯೆಗೆ ಬಂದರೆ, ಜನಕ ಮಹಾರಾಜ ನನ್ನನ್ನು ನೋಡಿ, 'ರಾಮ! ನಾನು ನಿನಗೆ ಕನ್ಯಾದಾನ ಮಾಡಿದ ಸೀತೆ ಎಲ್ಲಿ?’ ಎಂದು ಕೇಳಿದರೆ ನಾನು ಅವನ ಮುಖ ಹೇಗೆ ನೋಡಲಿ? ನಿನಗೆ ಸೀತೆಯನ್ನು ಬಿಟ್ಟು ಬರಬಾರದೆಂದು ಆಜ್ಞೆ ಮಾಡಿದ್ದೆ. ಆದರೆ ಅದನ್ನು ಪಾಲಿಸದೆ ಅವಳನ್ನು ಬಿಟ್ಟು ಏಕೆ ಬಂದೆ?" ಎಂದು ಕೇಳಿದ.
ಲಕ್ಷ್ಮಣ: "ಅಣ್ಣಾ! ನನ್ನಷ್ಟಕ್ಕೆ ನಾನೇ ಸೀತೆಯನ್ನು ಬಿಟ್ಟು ಬರಲಿಲ್ಲ. ನಿನ್ನ ಮಾತಿನಂತೆ ಅವಳ ಹತ್ತಿರವೇ ಜಾಗ್ರತೆಯಿಂದ ಕಾವಲು ಕಾಯುತ್ತಿದ್ದೆ.
ಆರ್ಯೇಣ ಏವ ಪರಿಕೃಷ್ಟಂ ಪರಾಕೃಷ್ಟಂ ಹಾ ಸೀತೇ ಲಕ್ಷ್ಮಣ ಇತಿ ಚ
ಪರಿತ್ರಾಹಿ ಇತಿ ಯತ್ ವಾಕ್ಯಂ ಮೈಥಿಲ್ಯಾಃ ತತ್ ಶ್ರುತಿಂ ಗತಂ
ಆದರೆ ಯಾವಾಗ ಅರಣ್ಯದಿಂದ 'ಹಾ ಸೀತಾ! ಹಾ ಲಕ್ಷ್ಮಣಾ!' ಎಂಬ ಕೂಗು ಕೇಳಿಸಿತೋ ಆಗ ಸೀತೆ ನಿನ್ನ ಮೇಲಿನ ಅಪಾರವಾದ ಪ್ರೀತಿಯಿಂದ ಭಯಗೊಂಡು ವಿಹ್ವಲಳಾದಳು. ಜೋರಾಗಿ ಅಳುತ್ತಾ ನನ್ನನ್ನು ಒಂದಕ್ಕೆ ಹತ್ತು ಬಾರಿ ಹೋಗಲು ಆತುರ ಪಡಿಸಿದಳು. ನಾನು, 'ಅಣ್ಣ ಇಷ್ಟು ನೀಚವಾಗಿ ಎಂದಿಗೂ ಕೂಗನು. ಇದೆಲ್ಲಾ ರಾಕ್ಷಸರ ಮಾಯೆ' ಎಂದು ಹೇಳಿದರೂ ಕೇಳದೆ, 'ನೀನು ಭರತನ ಜೊತೆ ಸೇರಿ ನನ್ನನ್ನು ಪಡೆಯಲು ಸಂಚು ಮಾಡುತ್ತಿರುವೆ' ಎಂದು ಕಠಿಣವಾದ ಮಾತುಗಳಿಂದ ನಿಂದಿಸಿದಾಗ ನಾನು ಕೇಳಲಾರದೆ ಬಂದುಬಿಟ್ಟೆ. ಇದರಲ್ಲಿ ನನ್ನ ತಪ್ಪಿಲ್ಲ ಅಣ್ಣ! ನನ್ನನ್ನು ಕ್ಷಮಿಸು."
ರಾಮ: "ನೀನು ಏನಾದರೂ ಹೇಳು ಲಕ್ಷ್ಮಣ! ಸೀತೆಯನ್ನು ಒಬ್ಬಳನ್ನೇ ಬಿಟ್ಟು ಬರಬಾರದಾಗಿತ್ತು. ನನ್ನ ಮಾತಿನಂತೆ ರಾಕ್ಷಸರ ಮಾತು ಕೇಳಿದಾಗ ಸೀತೆ ನಿನ್ನನ್ನು ಒಂದು ಮಾತು ಅಂದಿರಬಹುದು. ಅಷ್ಟುಮಾತ್ರಕ್ಕೆ ಸೀತೆಯನ್ನು ಏಕೆ ಬಿಟ್ಟು ಬಂದೆ? ಈಗ ಅವಳು ತೊಂದರೆಯಲ್ಲಿದ್ದಾಳೆ. ನೀನು ಕೋಪಕ್ಕೆ ಬಲಿಯಾಗಿ ಸೀತೆಯನ್ನು ಬಿಟ್ಟು ಬಂದೆ! ಈಗ ನಾನೇನು ಮಾಡಲಿ?"
ಇಬ್ಬರೂ ಪರ್ಣಶಾಲೆಯ ಬಳಿ ಬಂದರು. ರಾಮ ಪರ್ಣಶಾಲೆಯ ಒಳಗೆಲ್ಲಾ ಹುಡುಕಿದ. ಸೀತೆ ಎಲ್ಲೂ ಕಾಣಲಿಲ್ಲ. ಸುತ್ತ ಮುತ್ತಲಿನ ಪ್ರದೇಶಗಳು, ಹತ್ತಿರದಲ್ಲಿದ್ದ ಬೆಟ್ಟ, ನದಿ, ಜಿಂಕೆಗಳಿರುವ ಪ್ರದೇಶಗಳೆಲ್ಲ ಹುಡುಕಿದ. ಹುಲಿಗಳನ್ನು, ಗಿಡಗಳನ್ನು ಕೇಳಿದ. ಆನೆಯ ಬಳಿ ಹೋಗಿ, "ನಿನ್ನ ಸೊಂಡಿಲಂತೆ ಸೀತೆಯ ಜಡೆಯಿರುತ್ತದೆ. ಅವಳನ್ನು ನೋಡಿದರೆ ಹೇಳುತ್ತೀಯಾ?" ಎಂದ. ಗಿಡಗಳ ಬಳಿ ಹೋಗಿ, "ಸೀತೆ ಎಲ್ಲಿದ್ದಾಳೆಂದು ನಿಮಗೆ ತಿಳಿದಿದ್ದರೆ ಹೇಳಿ", ಜಿಂಕೆಗಳ ಬಳಿ ಹೋಗಿ, "ಸೀತೆ ನಿಮ್ಮ ಜೊತೆ ಆಡುತ್ತಿದ್ದಳಲ್ಲವಾ? ಈಗ ಅವಳಿಗೆ ತೊಂದರೆಯಾದಾಗ ನಿಮಗೆ ತಿಳಿದಿರುತ್ತದೆ. ನಿಮಗೆ ಗೊತ್ತಿರುವುದನ್ನು ಹೇಳುತ್ತೀರಾ?" ಎಂದೆಲ್ಲ ಕೇಳಿದ. ಕೊನೆಗೆ ಅಲ್ಲಿಯೇ ಇದ್ದ ಒಂದು ಕಲ್ಲಿನ ಮೇಲೆ ಕೂತು, "ಅಯ್ಯೋ! ರಾಕ್ಷಸರು ಬಂದು ಸೀತೆಯ ಕತ್ತು ಕೊಯ್ದು ಅವಳ ರಕ್ತ ಕುಡಿದು ಅವಳ ಮಾಂಸವನ್ನು ಭಕ್ಷಿಸುತ್ತಿರುವಾಗ 'ರಾಮಾ! ರಾಮಾ!' ಎಂದು ಕೂಗಿರುತ್ತಾಳೆ. ಎಷ್ಟು ಅಸ್ತ್ರ ಶಸ್ತ್ರಗಳಿದ್ದರೂ ನನಗೆ ಏನೂ ಮಾಡಲಾಗಲಿಲ್ಲ. ಸೀತೆಯನ್ನು ಕಾಪಾಡಲು ನನಗೆ ಸಾಧ್ಯವಾಗಲಿಲ್ಲ" ಎಂದು ಪ್ರಲಾಪಿಸಿದ.
ರಾಮನ ದುಃಖವನ್ನು ನೋಡಲಾಗದೆ ಲಕ್ಷ್ಮಣ, "ಅಣ್ಣ! ದುಃಖಿಸಬೇಡ ಅತ್ತಿಗೆ ನೀರು ತರಲು ಗೋದಾವರಿಗೆ ಹೋಗಿರಬಹುದು. ನಾನು ಒಂದು ಬಾರಿ ಅಲ್ಲಿಗೆ ಹೋಗಿ ನೋಡಿಕೊಂಡುಬರುತ್ತೇನೆ" ಎಂದು ಹೇಳಿ ಗೋದಾವರಿ ತೀರಕ್ಕೆ ಹೋಗಿ ಬಂದು ಅಲ್ಲಿಯೂ ಕಾಣಿಸಲಿಲ್ಲ ಎಂದ. ಆಗ ರಾಮ ಗೋದಾವರಿಯ ಬಳಿ ಹೋಗಿ, "ಗೋದಾವರಿ! ನಿಜ ಹೇಳು. ಸೀತೆ ಎಲ್ಲಿದ್ದಾಳೆ? ನೀನು ಈ ಪ್ರಾಂತದಲ್ಲೆಲ್ಲಾ ಹರಿಯುತ್ತೀಯ. ನಿನಗೆ ತಿಳಿದಿರಲೇಬೇಕು" ಎಂದು ಕೇಳಿದ. ಸೀತೆಯ ಜಾಡು ಸಿಕ್ಕಲಿಲ್ಲ!
ಭೂತಾನಿ ರಾಕ್ಷಸೇಂದ್ರೇಣ ವಧ ಅರ್ಹೇಣ ಹೃತಾಂಮಪಿ
ನ ತಾಂ ಶಶಂಸೂ ರಾಮಯ ತಥಾ ಗೋದಾವರೀ ನದಿ
ಅಲ್ಲಿದ್ದ ಪಂಚಭೂತಗಳು ನೋಡಿದ್ದವು. ಆದರೆ ರಾವಣನ ಭಯಂಕರವಾದ ರೂಪವನ್ನು ನೆನಪಿಸಿಕೊಂಡು ಹೇಳದೆ ಸುಮ್ಮನಿದ್ದವು. ಪಂಚಭೂತಗಳು ಗೋದಾವರಿಯನ್ನು ಕುರಿತು, "ಗೋದಾವರೀ ರಾವಣ ಸೀತೆಯನ್ನು ಅಪಹರಿಸಿದ ವಿಷಯವನ್ನು ರಾಮನಿಗೆ ಹೇಳಿಬಿಡು" ಎಂದಾಗ ರಾವಣನ ರೂಪ, ಅವನು ಮಾಡಿದ ಕೆಲಸಗಳನ್ನು ನೋಡಿದ ಗೋದಾವರಿ ಬಾಯಿ ಬಿಡಲಿಲ್ಲ. ಮಾತು ಬರದಿದ್ದ ಪ್ರಾಣಿಗಳು ಆಕಾಶದ ಕಡೆ ನೋಡುತ್ತಾ, ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋದ ದಿಕ್ಕಾದ ದಕ್ಷಿಣದ ಕಡೆ ಓಡಿದವು. ಅವುಗಳನ್ನು ನೋಡಿದ ಲಕ್ಷ್ಮಣ, "ಅಣ್ಣಾ! ಈ ಪ್ರಾಣಿಗಳು ಭಯದಿಂದ ಓಡುತ್ತಿಲ್ಲ. ಸ್ವಲ್ಪ ದೂರ ಓಡಿ, ನಿಂತು, ಆಕಾಶದ ಕಡೆ ನೋಡಿ, ಮತ್ತೆ ಹಿಂದೆ ನೋಡಿ ಓಡುತ್ತಿವೆ. 'ನಮಗೆ ಮಾತು ಬರುವುದಿಲ್ಲ. ಅರ್ಥಮಾಡಿಕೊಳ್ಳಿ' ಎಂದು ಹೇಳಿದಂತಿದೆ. ಬಹುಶಃ ಸೀತೆಯನ್ನು ಯಾರೋ ಈ ದಿಕ್ಕಿನಲ್ಲಿ ಎತ್ತಿಕೊಂಡು ಹೋಗಿರಬೇಕು. ನಮಗೆ ಸುಳಿವು ಸಿಗಬಹುದು. ಈ ಪ್ರಾಣಿಗಳ ಹಿಂದೆ ಹೋಗೋಣ" ಎಂದ.
ರಾಮ ಲಕ್ಷ್ಮಣರು ಪ್ರಾಣಿಗಳ ಹಿಂದೆ ಓಡಿದರು. ಸ್ವಲ್ಪ ದೂರ ಹೋದ ಮೇಲೆ ಸೀತೆ ಮುಡಿದಿದ್ದ ಹೊ ಕಾಣಿಸಿತು. ಅದನ್ನು ತಕ್ಷಣ ಗುರುತಿಸಿದ ರಾಮ, "ಮಾರೀಚ ಬರುವುದಕ್ಕೆ ಮುಂಚೆ ಈ ಹೂವನ್ನು ನಾನೇ ಸೀತೆಗೆ ಮುಡಿಸಿದ್ದೆ. ಇಲ್ಲಿ ನೋಡು ಭೂಷಣಗಳು, ರಕ್ತ ಬಿಂದುಗಳು ಕಾಣಿಸುತ್ತಿವೆ. ಅಂದರೆ ಯಾರೋ ಸೀತೆಯನ್ನು ತಿಂದುಬಿಟ್ಟಿದ್ದಾರೆ. ಮುರಿದಿರುವ ರಥ, ಧನಸ್ಸುಗಳು ಬಿದ್ದಿವೆ. ಯಾರೋ ಸಾರಥಿ ಸತ್ತು ಬಿದ್ದಿದ್ದಾನೆ. ಪಿಶಾಚ ಮುಖದ ಕತ್ತೆಗಳು ಬಿದ್ದಿವೆ. ಅಂದರೆ ಯಾರೋ ಇಬ್ಬರು ಸೀತೆಗಾಗಿ ಯುದ್ಧ ಮಾಡಿರಬೇಕು. ಗೆದ್ದವನು ಸೀತೆಯನ್ನು ತಿಂದುಬಿಟ್ಟಿರಬೇಕು. ಸೀತೆ ಪಾಲಿಸಿದ ಧರ್ಮ ಅವಳನ್ನು ಕಾಪಾಡಲಿಲ್ಲ. ಯಾರು ಶಕ್ತಿಯಿದ್ದೂ ಮೃದುವಾಗಿರುತ್ತಾನೋ ಅವನನ್ನು ಲೋಕ ಕೈಲಾಗದವನೆಂದುಕೊಳ್ಳುತ್ತದೆ. ಲಕ್ಷ್ಮಣಾ! ಈಗ ನೋಡು ನನ್ನ ಪರಾಕ್ರಮ. ಈ ಪರ್ವತದ ಮುಂದೆ ನಿಂತು ಸೀತೆ ಎಲ್ಲಿ ಎಂದು ಕೇಳಿದರೆ ಅದು ನನ್ನ ಧ್ವನಿಯನ್ನೇ ಪ್ರತಿಧ್ವನಿಸಿತು. ಈಗಲೇ ಈ ಪರ್ವತವನ್ನು ನಾಶ ಮಾಡುತ್ತೇನೆ. ಈ ಸೂರ್ಯ ಚಂದ್ರರಿಗೂ ಒಂದು ಗತಿ ಕಾಣಿಸುತ್ತೇನೆ. ದೇವತೆಗಳು ಓಡಾಡದಂತೆ ಮಾಡುತ್ತೇನೆ. ನದಿ, ಸಮುದ್ರಗಳಲ್ಲಿರುವ ನೀರನ್ನು ಇಂಗಿಸುತ್ತೇನೆ. ಭೂಮಿಯಲ್ಲಿ ಅಗ್ನಿಹೋತ್ರವನ್ನು ಹುಟ್ಟಿಸುತ್ತೇನೆ. ಈ ಬ್ರಹ್ಮಾಂಡದಲ್ಲಿ ರಾಕ್ಷಸರು ಯಾರೂ ಇಲ್ಲದಂತೆ ಮಾಡುತ್ತೇನೆ. ನನ್ನ ಕೋಪವನ್ನು ಈ ದೇವತೆಗಳು ನೋಡುತ್ತಾರೆ. ಸೀತೆ ಬದುಕಿದ್ದರೂ, ಸತ್ತಿದ್ದರೂ ದೇವತೆಗಳು ಅವಳನ್ನು ನನ್ನ ಬಳಿ ತಂದರೆ ಮಾತ್ರ ಈ ಬ್ರಹ್ಮಾಂಡವನ್ನು ನಾಶ ಮಾಡದೆ ಬಿಡುತ್ತೇನೆ. ವೃದ್ದಾಪ್ಯ, ಮೃತ್ಯುಗಳನ್ನು ತಡೆಯಲಾಗದಂತೆ ನನ್ನ ಕೋಪವನ್ನು ದೇವತೆಗಳಿಗೂ ತಡೆಯಲಾಗುವುದಿಲ್ಲ" ಎಂದು ಹೇಳಿ ತನ್ನ ಬಿಲ್ಲನ್ನು ಎತ್ತಿದ.
ತಕ್ಷಣ ಲಕ್ಷ್ಮಣ ರಾಮನನ್ನು ಶಾಂತಗೊಳಿಸಲು ಅವನನ್ನು ಹಿಡಿದು ಅಲ್ಲಾಡಿಸಿ, "ಅಣ್ಣಾ! ನೀನು ಸರ್ವ ಭೂತಗಳಿಗೂ ಹಿತವನ್ನು ಕೋರುವವನು. ಅಂತಹ ನೀನೇ ಕೋಪಕ್ಕೆ ವಶನಾದರೆ ಈ ಲೋಕದಲ್ಲಿ ಶಾಂತಿ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ಯಾರೋ ದುಷ್ಟ ತಪ್ಪು ಮಾಡಿದರೆ ಇಡೀ ಲೋಕಕ್ಕೆ ಶಿಕ್ಷೆ ಕೊಡುವುದು ಯಾವ ನ್ಯಾಯ? ಅಣ್ಣ! ಇಲ್ಲಿ ಯಾರೂ ಯುದ್ಧ ಮಾಡಿಲ್ಲ. ಯಾರೋ ರಾಕ್ಷಸ ತನ್ನ ರಥವನ್ನು ಇಲ್ಲಿ ಬಿಸಾಕಿ ಆಕಾಶ ಮಾರ್ಗದಲ್ಲಿ ಹೋಗಿದ್ದಾನೆ. ಅದಕ್ಕೇ ಈ ಪ್ರಾಣಿಗಳು ಆಕಾಶ ನೋಡಿ ಓಡುತ್ತಿವೆ. ನೀನು ದಯವಿಟ್ಟು ಶಾಂತಿಸು. ರಾಮನ ಕೋಪವನ್ನು ಈ ಲೋಕ ತಡೆದುಕೊಳ್ಳುವುದಿಲ್ಲ. ನೀನು ಗೌರವಿಸುವ ಋಷಿಗಳ ಅನುಗ್ರಹದಿಂದ ನಾವಿಬ್ಬರೂ ಸೇರಿ ಸೀತೆಯನ್ನು ಹುಡುಕೋಣ. ಅಷ್ಟು ತಾಳ್ಮೆಯಿಂದ ನಾವು ಹುಡುಕಿದರೂ ಸೀತೆ ಸಿಗದಿದ್ದರೆ ಆಗ ನೀನು ಬಿಲ್ಲು ಹಿಡಿದು ಲೋಕವನ್ನು ಲಯ ಮಾಡಿಬಿಡು. ಆದರೆ ನಿನಗೆ ಖಂಡಿತ ಉಪಕಾರ ಸಿಗುತ್ತದೆ. ಋಷಿಗಳು, ದೇವತೆಗಳು, ಪಂಚಭೂತಗಳು ಸಹಕರಿಸುತ್ತಾರೆ. ಧರ್ಮಮೂರ್ತಿಯಾದ ನಿನ್ನನ್ನು ರಕ್ಷಿಸಿದ ಭೂತವಿಲ್ಲ. ಸೀತೆ ಖಂಡಿತ ಸಿಗುತ್ತಾಳೆ. ಇದು ಸತ್ಯ! ಸತ್ಯ! ಸತ್ಯ! ನಾನು ನಿನ್ನ ಪಕ್ಕದಲ್ಲಿರುವಾಗ ನೀನು ಇಷ್ಟು ಕೋಪ ಪಡಬಾರದು. ಶಾಂತಿಸು" ಎಂದ.
ಲಕ್ಷ್ಮಣನ ಮಾತನ್ನು ಕೇಳಿ ತನ್ನ ಬಾಣವನ್ನು ಬಿಸಾಡಿ ರಾಮ ಶಾಂತಿಸಿದ.
Comments
Post a Comment