೬೪. ತಪ್ಪೊಪ್ಪಿಗೆ

ಲಕ್ಷ್ಮಣ ಬಂದು ಹೊರಗಿದ್ದ ಅಂಗದನಿಗೆ ಹೇಳಿದ: “ನೀನು ಒಳಗೆ ಹೋಗಿ ಸುಗ್ರೀವನಿಗೆ, ‘ರಾಮ ಶೋಕದಿಂದಿದ್ದಾನೆ. ರಾಮನ ಮಾತನ್ನು ತಿಳಿಸಲು ಲಕ್ಷ್ಮಣ ಬಂದಿದ್ದಾನೆ. ಅವನು ನಿನ್ನ ಜೊತೆ ಮಾಡಬೇಕಂತೆ’ ಎಂದು ಹೇಳಿ ಅವನ ಉತ್ತರವನ್ನು ಬಂದು ಹೇಳು.” 

ಅಂಗದನ ಜೊತೆ ಪ್ಲಕ್ಷ, ಪ್ರಭಾವರೆಂಬ ಇಬ್ಬರು ಮಂತ್ರಿಗಳೂ ಹೋದರು. ಅಂಗದ ಸುಗ್ರೀವ, ತಾರೆ, ರುಮೆಯರಿಗೆ ನಮಸ್ಕಾರ ಮಾಡಿ ಸುಗ್ರೀನ ಮಾತನ್ನು ನಿವೇದಿಸಿದ. ಅಮಲಿನಲ್ಲಿದ್ದ ಸುಗ್ರೀವನಿಗೆ ಅವನ ಮಾತುಗಳು ಮನಸ್ಸಿಗೆ ಹೋಗಲಿಲ್ಲ. ಅಷ್ಟರಲ್ಲಿ ಲಕ್ಷ್ಮಣನ ಕೋಪವನ್ನು ನೋಡಿ ಅಲ್ಲಿದ್ದ ಕಪಿಗಳು ಜೋರಾಗಿ ಶಬ್ದಮಾಡಿದವು. ಆ ಶಬ್ದಕ್ಕೆ ಹೆದರಿದ ಸುಗ್ರೀವ ತನ್ನ ಮಂತ್ರಿಗಳನ್ನು ಕರೆದು ಕಪಿಗಳು ಮಾಡುತ್ತಿರುವ ಶಬ್ದಕ್ಕೆ ಕಾರಣವೇನೆಂದು ಕೇಳಿದ. ಅವರು ಕಾರಣ ಹೇಳಿದರು. ಆಗ ಸುಗ್ರೀವ, “ರಾಮನಿಗೆ ನಾನು ಯಾವುದೇ ಅಪಚಾರ ಮಾಡಿಲ್ಲ. ಬಹುಶಃ ನನಗೆ ಆಗದವರು ಯಾರೋ ಅವನಿಗೆ ಸುಳ್ಳುಹೇಳಿರಬೇಕು. ಹಾಗೆ ಹೇಳಿದರೆ ಅವರು ನಂಬಬಾರದಾಗಿತ್ತಲ್ಲ? ಸ್ನೇಹವನ್ನು ಮಾಡುವುದು ಸುಲಭ, ಅದನ್ನು ಉಳಿಸಿಕೊಳ್ಳುವುದು ಕಷ್ಟ. ರಾಮನ ಉಪಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ. ರಾಮನಿಗೆ ತಕ್ಷಣ ಸಹಾಯ ಮಾಡದಿರುವುದೂ ನನ್ನ ತಪ್ಪೇ” ಎಂದ.

ಸರ್ವಥಾ ಪ್ರಣಯಾತ್ ಕ್ರುದ್ಧೋ ರಾಘವೋ ನ ಅತ್ರ ಸಂಶಯಃ
ಭ್ರಾತರಂ ಸಂಪ್ರಹಿತವಾನ್ ಲಕ್ಷ್ಮಣಂ ಲಕ್ಷ್ಮಿವರ್ಧನಂ
ಹನುಮಂತ ಹೇಳಿದ: “ಸುಗ್ರೀವ! ನಿನ್ನ ಮೇಲೆ ರಾಮನಿಗಿರುವ ಕೋಪ ಪ್ರತೀಕಾರದ ಕೋಪವಲ್ಲ. ಪ್ರೀತಿಯಿಂದ ಕೂಡಿದ ಕೋಪ. ನೀನು ಪತ್ನಿ, ರಾಜ್ಯಗಳನ್ನು ಪಡೆದು ಸುಖ ಪಡುತ್ತಿದ್ದೀಯ. ಆದರೆ ರಾಮನಿಗೆ ಹೆಂಡತಿಯಿಲ್ಲ, ರಾಜ್ಯವಿಲ್ಲ. ನಿನಗೆ ಉಪಕಾರ ಮಾಡಿದ್ದಾನೆ, ಸಮಯ ಕೊಟ್ಟಿದ್ದಾನೆ. ನಗರಕ್ಕೂ ಬರದೆ ಒಂದು ಗುಹೆಯಲ್ಲಿದ್ದಾನೆ. ಇಷ್ಟು ಕಾಲ ಎದುರು ನೋಡಿದರೂ ನಿನ್ನಿಂದ ಸಹಕಾರ ಬರದಿದ್ದರಿಂದ ಕೋಪಗೊಂಡಿದ್ದಾನೆ. ಆ ಕೋಪದಲ್ಲಿ ಬಂದ ಮಾತುಗಳನ್ನು ಕೇಳಲು ನಿನಗೆ ಸಹಜವಾಗಿಯೇ ಕಷ್ಟವಾಗುತ್ತದೆ. ಆದ್ದರಿಂದ ನೀನು ಮಾತುಗಳನ್ನಲ್ಲದೆ ಅದರ ಹಿಂದಿನ ಭಾವವನ್ನು ಗ್ರಹಿಸು. ಈಗ ಲಕ್ಷ್ಮಣ ಕೋಪದಿಂದ ಮಾತಾಡಿದರೆ ನೀನು ಅದನ್ನು ಶಾಂತನಾಗಿ ಕೇಳಿ ನಿನ್ನ ತಪ್ಪನ್ನು ಒಪ್ಪಿಕೊ.”

ಹೊರಗಿದ್ದ ಲಕ್ಷ್ಮಣನಿಗೆ ಕೇಳಿಸಿದ ಸ್ತ್ರೀಯರ ಆಭರಣಗಳ, ಕಂಕಣಗಳ ಸದ್ದಿನಿಂದ ಅವನು ಒಳಗೆ ಹೋಗಲಿಲ್ಲ. ಆದರೆ ಜೋರಾಗಿ ಕೇಳಿಸುವಂತೆ ತನ್ನ ಬಿಲ್ಲಿನ ಝೇಂಕಾರ ಮಾಡಿದ. ಗುಡುಗಿನಂತೆ ಬಂದ ಆ ಧ್ವನಿಯನ್ನು ಕೇಳಿ ಸುಗ್ರೀವ ಎಗರಿ ತನ್ನ ಆಸನದಲ್ಲಿ ಕುಳಿತುಕೊಂಡ. ಕುಡಿದ ಮತ್ತಿನಲ್ಲಿ ಮೇಲೇಳಲೂ ಆಗದೆ ಕಷ್ಟಪಡುತ್ತಿದ್ದ ಅವನಿಗೆ ತಕ್ಷಣ ವಾಲಿಯ ಮಾತು ಜ್ಞಾಪಕ ಬಂದು ತಾರೆಯನ್ನು ಕರೆದು, “ತಾರೆ, ಈಗ ಲಕ್ಷ್ಮಣ ಜೊತೆ ಮಾತಾಡುವ ಶಕ್ತಿಯಿರುವವಳು ನೀನೊಬ್ಬಳೇ. ನೀನೇ ಹೊರಗೆ ಹೋಗಿ ಲಕ್ಷ್ಮಣನ ಜೊತೆ ಮಾತಾಡು. ಅವನು ಎಂದಿಗೂ ಧರ್ಮ ತಪ್ಪನು. ನೀನು ಈಗಿರುವ ವೇಷದಲ್ಲೇ ಹೋಗು (ಆ ಸಮಯದಲ್ಲಿ ತಾರೆಯೂ ಮದ್ಯದ ಅಮಲಿನಲ್ಲಿದ್ದಳು). ನಿನ್ನನ್ನು ಈ ರೀತಿಯಲ್ಲಿ ನೋಡಿದರೆ ಲಕ್ಷ್ಮಣ ಎಷ್ಟೇ ಕೋಪದಲ್ಲಿದ್ದರೂ ನಾಚಿಕೆಯಿಂದ ತಲೆ ತಗ್ಗಿಸುತ್ತಾನೆ. ಇಕ್ಷ್ವಾಕು ವಂಶೀಯರು ಸ್ತ್ರೀಯರ ಜೊತೆ ಅಗೌರವವಾಗಿ ವರ್ತಿಸುವುದಿಲ್ಲ. ನಿನ್ನ ಮಾತುಗಳಿಂದ ಅವನನ್ನು ಶಾಂತನನ್ನಾಗಿ ಮಾಡು. ನಂತರ ನಾನು ಬರುತ್ತೇನೆ” ಎಂದ.

ಮದ್ಯದ ಅಮಲಿನಲ್ಲಿದ್ದ ತಾರೆಯ ಕಣ್ಣುಗಳು ಕೆಂಪಾಗಿದ್ದವು. ಒಂದು ಕಡೆ ಸ್ಥಿರವಾಗಿ ನಿಲ್ಲಲೂ ಆಗದಂತೆ ತೂರಾಡುತ್ತಿದ್ದಳು. ಅವಳ ಆಭರಣಗಳು ಸರಿಯಾಗಿ ನಿಲ್ಲುತ್ತಿರಲಿಲ್ಲ. ಮೈಮೇಲಿನ ಸೆರಗು ಜಾರುತ್ತಿತ್ತು. ಆ ಪರಿಸ್ಥಿತಿಯಲ್ಲಿ ತಾರೆ ಹೊರಗೆ ಬಂದು ಲಕ್ಷ್ಮಣನನ್ನು ಕಂಡಳು.
ಸ ತಾಂ ಸಮೀಕ್ಷ್ಯ ಏವ ಹರಿ ಈಶ ಪ ತ್ನೀಂ ತಸ್ಥಾ ಉದಾಸೀನತಯಾ ಮಹಾತ್ಮಾ
ಅವಾಙ್ಮುಖೋ ಆಭೂತ್ ಮನುಜೇಂದ್ರ ಪುತ್ರಃ ಸ್ತ್ರೀ ಸನ್ನಿಕರ್ಷಾತ್ ವಿನಿವೃತ್ತ ಕೋಪಂ
೧೪ ವರ್ಷಗಳಿಂದ ತನ್ನ ಪತ್ನಿಯಂದ ದೂರವಾಗಿದ್ದ ಲಕ್ಷ್ಮಣ ತಾರೆಯನ್ನು ಆ ರೀತಿಯಲ್ಲಿ ನೋಡಿದಾಗ ಅವನ ಕೋಪವೆಲ್ಲ ಹೋಗಿ ಮುಖದಲ್ಲಿ ಯಾವುದೇ ಭಾವವಿಲ್ಲದೆ ತಲೆ ತಗ್ಗಿಸಿ ಭೂಮಿಯನ್ನು ನೋಡುತ್ತಾ ನಿಂತುಬಿಟ್ಟ.

ತಲೆ ಬಗ್ಗಿಸಿ ನಿಂತ ಲಕ್ಷ್ಮಣನನ್ನು ತಾರೆ, "ಲಕ್ಷ್ಮಣಾ, ಇಷ್ಟು ಕೋಪವೇಕೆ? ನಿನಗೆ ಇಷ್ಟು ಕೋಪ ಬರಿಸಿದವರು ಯಾರು? ಒಣ ಎಲೆಗಳಿಂದ ಕೂಡಿದ ವನವನ್ನು ದಾವಾಗ್ನಿ ಸುಡುತ್ತಿದ್ದರೆ, ಅದರ ಎದುರು ಹೋಗುವಷ್ಟು ಧೈರ್ಯ ಮಾಡಿವರು ಯಾರು?" ಎಂದು ಕೇಳಿದಳು.

ಲಕ್ಷ್ಮಣ, "ನಿನ್ನ ಗಂಡನ ವರ್ತನೆ ನಿನಗೆ ತಿಳಿಯುತ್ತಿಲ್ಲವೇ? ಅವನು ಧರ್ಮವನ್ನು ಪಕ್ಕಕ್ಕಿಟ್ಟು ಕಾಮದಿಂದ ಕಾಲ ಕಳೆಯುತ್ತಿದ್ದಾನೆ. ಮಿತ್ರನಿಗೆ ಕೊಟ್ಟ ಮಾತು ತಪ್ಪಿದ್ದಾನೆ. ನಾಲ್ಕು ತಿಂಗಳ ಸಮಯ ಕಳೆದು ಹೋಗಿದೆ. (ಧರ್ಮ, ಅರ್ಥ, ಕಾಮ, ಮೋಕ್ಷ ಇವು ಪುರುಷಾರ್ಥಗಳು. ಧರ್ಮಬದ್ಧವಾದ ಅರ್ಥದಿಂದ (ಕಷ್ಟಪಟ್ಟು ಮಾಡಿದ ಸಂಪಾದನೆ), ಕಾಮದಿಂದ (ಕೇವಲ ತನ್ನ ಪತ್ನಿಯಿಂದ ಪಡೆದ ಕಾಮಭೋಗ) ಮೋಕ್ಷದ ಕಡೆ ಹೋಗುತ್ತೇವೆ. ಧರ್ಮವನ್ನು ಬಿಟ್ಟ ಅರ್ಥ, ಕಾಮಗಳು ತೊಂದರೆಗೆ ದಾರಿ ಮಾಡಿಕೊಡುತ್ತವೆ)
ನ ಚಿಂತಯತಿ ರಾಜ್ಯಾರ್ಥಂ ಸಃ ಅಸ್ಮಾನ್ ಶೋಕ ಪರಾಯಣಾನ್
ಸ ಅಮಾತ್ಯ ಪರಿಷತ್ ತಾರೇ ಕಾಮಂ ಏವ ಉಪಸೇವತೇ
ರಾಜನ ಕೆಲಸ ಕೇವಲ ಕಾಮಭೋಗವಲ್ಲ. ರಾಜ ತನ್ನ ಮಂತ್ರಿವರ್ಗದ ಜೊತೆ ಸೇರಿ ರಾಜಕಾರ್ಯ ನಿರ್ವಹಣೆ ಮಾಡಬೇಕು. ಇವೆಲ್ಲ ನಿನ್ನ ಪತಿ ಮಾಡುತ್ತಿದ್ದಾನಾ? ಮಳೆಗಾಲದ ಕಾರಣದಿಂದ ನಿನ್ನ ಪತಿಗೆ ನಾಲ್ಕು ತಿಂಗಳ ಕಾಲಾವಕಾಶ ಕೊಟ್ಟರೆ, ಅವನು ಮಳೆಗಾಲದ ನಂತರವೂ ಇನ್ನೂ ಸುಖದ ಗುಂಗಲ್ಲೇ ಇರುವುದು ಅವನ ದೋಷವಲ್ಲವೇ? ಮದ್ಯಪಾನದಲ್ಲಿ ನಿರತನಾದ ಸುಗ್ರೀವನ ಮನಸ್ಸು ವಿಕಲವಾಗಿದೆ" ಎಂದ.

"ಲಕ್ಷ್ಮಣಾ, ಇದು ಕೋಪ ಮಾಡಿಕೊಳ್ಳುವ ಕಾಲವಲ್ಲ. ಯಾರೋ ಬೇರೆಯವರಾದರೆ ನೀನು ಕೋಪದಿಂದ ವರ್ತಿಸಬಹುದು, ಕೊಲ್ಲಬಹುದು, ಆದರೆ ಈಗ ಕಾಮಕ್ಕೆ ದಾಸನಾಗಿರುವವನು ನಿನ್ನ ಅಣ್ಣನ ಸಮಾನನಾದ ಸುಗ್ರೀವ. ಅವನ ಮೇಲೆ ನಿನ್ನ ಕೋಪ ಸರಿಯಲ್ಲ. ಸುಗ್ರೀವನದು ದೋಷವೇ. ಅದರಲ್ಲಿ ಸಂದೇಹವಿಲ್ಲ. ನೀನು ಅವನನ್ನು ಕ್ಷಮಿಸಬೇಕು. ನಿನಗೆ ಶಾಸ್ತ್ರ, ಮರ್ಯಾದೆಗಳು ತಿಳಿದಿವೆ. ನನ್ನ ಗಂಡ ಅಲ್ಪಜ್ಞಾನಿ. ಅವನು ಕಾಮಕ್ಕೆ ದಾಸನಾಗಿದ್ದಾನೆ. ನೀನೂ ಕೋಪಕ್ಕೆ ದಾಸನಾಗಿತ್ತೀಯ? ನನಗೆ ರಾಮನ ಬಾಣದ ಪ್ರಭಾವವೂ ತಿಳಿದಿದೆ, ಸುಗ್ರೀವ ತುಂಬಾ ಮುಖ್ಯವಾದ ಸಮಯವನ್ನು ಹಾಳುಮಾಡಿರುವುದೂ ತಿಳಿದಿದೆ, ರಾಮ ಎಷ್ಟು ದುಃಖಪಡುತ್ತಿದ್ದಾನೆಂಬುದೂ ತಿಳಿದಿದೆ. ಇವನ್ನು ಸರಿಪಡಿಸಿ ರಾಮನಿಗೆ ಸಹಾಯ ಮಾಡುವುದು ಹೇಗೆ ಎಂಬುದು ನನಗೆ ಗೊತ್ತು. ಇಂದು ಸುಗ್ರೀವ ಕಾಮದ ಬಲೆಯಲ್ಲಿ ಬಿದ್ದಿದ್ದಾನೆ. ಅಷ್ಟೆಯಾಗಲಿ ರಾಮನ ಮೇಲೆ ಅವನಿಗೆ ದ್ವೇಷವಿಲ್ಲ. ಆದ್ದರಿಂದ ನೀನು ಅವನನ್ನು ಕ್ಷಮಿಸಲೇಬೇಕು.
ಮಹರ್ಷಯೋ ಧರ್ಮ ತಪೋಭಿರಾಮಾಃ ಕಾಮಾ ಅನುಕಾಮಾಃ ಪ್ರತಿ ಬದ್ಧ ಮೋಹಾಃ
ಅಯಂ ಪ್ರಕೃತ್ಯಾ ಚಪಲಃ ಕಪಿಃ ತು ಕಥಂ ನ ಸಜ್ಜೇತ ಸುಖೇಷು ರಾಜಾ
ನಾನು ನಿನಗೆ ಹೊಸದಾಗಿ ಹೇಳಬೇಕಿಲ್ಲ. ಸಂಸಾರವನ್ನು ಬಿಟ್ಟು, ತಪಸ್ಸನ್ನು ಮಾಡುವ ಋಷಿಗಳೇ ಇಂದ್ರನು ಕಳಿಸುವ ಅಪ್ಸರೆಯರನ್ನು ನೋಡಿ ತಪಸ್ಸನ್ನು ಬಿಟ್ಟು ಕಾಮದ ಬಲೆಗೆ ಬಿದ್ದಿರುವ ಉದಾಹರಣೆಗಳಿದ್ದಾಗ, ಇನ್ನು ವಾನರನಾದ ಸುಗ್ರೀವ ತನ್ನ ಕೆಲಸವನ್ನು ಕೆಲವು ಕಾಲ ಮರೆಯುವುದು ದೊಡ್ಡ ವಿಷಯವೇ? ಇಷ್ಟಾದರೂ ಸುಗ್ರೀವ ನಿಮಗೆ ಕೊಟ್ಟ ಮಾತನ್ನು ನೆರವೇರಿಸಲು ಪ್ರಯತ್ನವನ್ನು ಆರಂಭಿಸಿದ್ದಾನೆ. ಇಲ್ಲೇ ನಿಂತಿದ್ದೆಯಲ್ಲ ಲಕ್ಷ್ಮಣಾ, ನೀನು ಹೊರಗಿನವನಲ್ಲ. ಸುಗ್ರೀವನ ಅಂತಃಪುರಕ್ಕೆ ಬಂದರೆ ಕಾಂತೆಯರು ಕಾಣಿಸುತ್ತಾರೆ ಎಂದು ಸಂದೇಹಿಸಬೇಡ. ಒಳ್ಳೆಯ ಚಾರಿತ್ರ, ನಡತೆ ಇರುವವನು ಒಳಗೆ ಬರಬಹುದು. ಒಳಗೆ ಬಾ."

ತಾರೆಯ ಮಾತು ಕೇಳಿ ಲಕ್ಷ್ಮಣ ಒಳಗೆ ಬಂದ. ಒಳಗೆ ಸುಗ್ರೀವ ರುಮೆಯನ್ನು ತನ್ನ ತೊಡೆಯ ಮೇಲೆ ತಬ್ಬಿ ಕೂರಿಸಿಕೊಂಡಿದ್ದ. ಲಕ್ಷ್ಮಣನನ್ನು ನೋಡಿದ ತಕ್ಷಣ ತನ್ನ ತಪ್ಪು ಅರಿವಾಗಿ ಎದ್ದು ಲಕ್ಷ್ಮಣನಿಗೆ ನಮಸ್ಕಾರ ಮಾಡಿದ. ಆದರೆ ಅವನನ್ನು ನೋಡಿದ ತಕ್ಷಣ ಲಕ್ಷ್ಮಣನಿಗೆ ಕೋಪ ಬಂತು. "ಸುಗ್ರೀವ ರಾಜ ಉತ್ತಮ ಜನರ ಮಧ್ಯೆ ಇರಬೇಕು, ಅವನಿಗೆ ಕರುಣೆಯಿರಬೇಕು, ಇಂದ್ರಿಯಗಳನ್ನು ಜಯಿಸಿದನಾಗಿರಬೇಕು, ಮಾಡಿದ ಉಪಕಾರವನ್ನು ಮರೆಯದವನಾಗಿರಬೇಕು. ಅಂತಹವನನ್ನು ಲೋಕ ಗೌರವಿಸುತ್ತದೆ. ಸಹಾಯ ಪಡೆದು ಕೃತಘ್ನನಾಗಿರುವವನನ್ನು ಲೋಕ ಕ್ರೂರಿ ಎಂದು ಕರೆಯುತ್ತದೆ.
ಶತಂ ಅಶ್ವ ಅನೃತೇ ಹಂತಿ ಸಹಸ್ರಂ ತು ಗವ ಅನೃತೇ
ಆತ್ಮಾನಂ ಸ್ವಜನಂ ಹಂತಿ ಪುರುಷಃ ಪುರುಷಃ ಅನೃತೇ
ಯಾರಾದರೂ ಕುದುರೆಯ ವಿಷಯದಲ್ಲಿ ಸುಳ್ಳು ಹೇಳಿದರೆ ಅವರಿಗೆ ೧೦೦ ಕುದುರೆಗಳನ್ನು ಕೊಂದ ಪಾಪ ಬರುತ್ತದೆ. ಹಸುವಿನ ವಿಷಯದಲ್ಲಿ ಸುಳ್ಳು ಹೇಳಿದರೆ ೧೦೦೦ ಹಸುಗಳನ್ನು ಕೊಂದ ಪಾಪ ಬರುತ್ತದೆ. ಉಪಕಾರ ಮಾಡುವುದಾಗಿ ಮಾತು ಕೊಟ್ಟು ತಪ್ಪಿದವನು ತನ್ನ ಬಂಧುಗಳನ್ನು ಕೊಂದು, ಅವರನ್ನು ತಿಂದು, ಮತ್ತೆ ತಾನು ಆತ್ಮಹತ್ಯೆ ಮಾಡಿಕೊಂಡವನ ಸಮಾನ. ಅಂತಹವನನ್ನು ಲೋಕವೆಲ್ಲ ಸೇರಿ ಕೊಲ್ಲುತ್ತದೆ.
ಬ್ರಹ್ಮೇಘ್ನ ಚ ಏವ ಸುರಾಪೇ ಚ ಚೌರೇ ಭಗ್ನ ವ್ರತೇ ತಥಾ
ನಿಷ್ಕೃತಿ್ ಬಿಹಿತಾ ಸದ್ಭಿಃ ಕೃತಘ್ನೇ ನ ಅಸ್ತಿ ನಿಷ್ಕೃತಿ
ಬ್ರಹ್ಮಹತ್ಯೆ ಮಾಡಿದವನಿಗೆ, ಮದ್ಯಪಾನ ಮಾಡಿದವನಿಗೆ, ಕಳ್ಳತನ ಮಾಡಿದವನಿಗೆ, ವ್ರತ ಸಂಕಲ್ಪ ಮಾಡಿ ಅದನ್ನು ಮಾಡದವನಿಗೆ ಪ್ರಾಯಶ್ಚಿತವಿದೆ. ಆದರೆ ಕೃತಘ್ನನಿಗೆ ಪ್ರಾಯಶ್ಚಿತವಿಲ್ಲ. ನಿನ್ನ ಪ್ರವರ್ತನೆಯನ್ನು ನೋಡಿ ನನ್ನ ಅಣ್ಣ ನಿನ್ನನ್ನು ಒಳ್ಳೆಯವನೆಂದು ನಂಬಿದ್ದ. ಆದರೆ ನೀನು ಕಪ್ಪೆಯಂತೆ ಶಬ್ದ ಮಾಡುವ ಹಾವೆಂದು ಅವನಿಗೇನು ಗೊತ್ತು? ನೀನು ಮಾಡಿದ ದ್ರೋಹಕ್ಕೆ ನಿನ್ನನ್ನು ಇಲ್ಲೇ ಕೊಂದುಬಿಡುತ್ತೇನೆ. ಮಾತಿನ ಮೇಲೆ ನಿಲ್ಲು, ಇಲ್ಲದಿದ್ದರೆ ವಾಲಿಗಾದ ಗತಿಯೇ ನಿನಗೂ ಆಗುತ್ತದೆ" ಎಂದ.

ಲಕ್ಷ್ಮಣ ಮಾತಾಡುತ್ತಿದ್ದರೆ ಸುಗ್ರೀವ ಕೈಕಟ್ಟಿಕೊಂಡು ತಲೆತಗ್ಗಿಸಿ ನಿಂತಿದ್ದ. ತಾರೆಯೇ ಮಾತಾಡಿದಳು: "ಲಕ್ಷ್ಮಣಾ! ಸುಗ್ರೀವನ ವಿರುದ್ಧ ನಿನ್ನ ಬಾಯಲ್ಲಿ ಇಂತಹ ಮಾತು ಬರಬಾರದು. ಸುಗ್ರೀವ ಕುಟಿಲನಲ್ಲ, ಅಸತ್ಯವನ್ನು ಆಡುವವನಲ್ಲ, ಇಂದ್ರಿಯ ನಿಗ್ರಹವಿಲ್ಲದವನಲ್ಲ. ರಾಮನ ಉಪಕಾರವನ್ನು ಅವನು ಎಂದಿಗೂ ಮರೆತಿಲ್ಲ. ಅವನು ಈಗ ಪಡೆದ ಗೌರವ, ಐಶ್ವರ್ಯವೆಲ್ಲ ರಾಮನಿಂದ ಬಂದವೇ. ಆದರೆ ತುಂಬಾ ಕಾಲದಿಂದ ಸುಖಕ್ಕೆ ದೂರವಿದ್ದದ್ದರಿಂದ ಇಂದು ಸಮಯವನ್ನು ಮರೆತಿದ್ದಾನೆ ಅಷ್ಟೆ. ಇದು ನನ್ನ ಗಂಡ ಒಬ್ಬನೇ ಮಾಡಿದ ತಪ್ಪಾ? ವಿಶ್ವಾಮಿತ್ರನಂಥವನೇ ಕಾಮಕ್ಕೆ ಸೋತು ಸಮಯವನ್ನು ಮರೆತಿದ್ದ. ರಾಮಕಾರ್ಯಕ್ಕೆ ಅವಶ್ಯಕತೆ ಬಿದ್ದರೆ ಯಾರ ಕಾರಣದಿಂದ ಸುಗ್ರೀವ ಈ ತಪ್ಪು ಮಾಡಿದನೋ ಅವರನ್ನೇ ಬಿಟ್ಟುಬಿಡುತ್ತಾನೆ. ಚಂದ್ರನ ಜೊತೆ ರೋಹಿಣಿ ಕಲೆತಂತೆ ಇನ್ನು ಸ್ವಲ್ಪ ದಿನದಲ್ಲಿ ರಾಮ ಸೀತೆಯ ಜೊತೆ ಕಲಿಯುವುದನ್ನು ಸುಗ್ರೀವ ನೋಡುತ್ತಾನೆ.
ಶತಕೋಟಿ ಸಹಸ್ರಾಣಿ ಲಂಕಾಯಾಂ ಕಿಲ ರಕ್ಷಸಾಂ
ಅಯುತಾನಿ ಚ ಷಟ್ ತ್ರಿಂಶತ್ ಸಹಸ್ರಾಣಿ ಶತಾನಿ ಚ
ಲಂಕೆಯಲ್ಲಿ ೧೦೦ ಸಾವಿರ ಕೋಟಿ ರಾಕ್ಷಸರು ಮತ್ತು ೩೬ ಸಾವಿರ ತುಕಡಿಗಳಿವೆ (ಒಂದು ತುಕಡಿಗೆ ೧೦೦ ಸೈನಿಕರು). ಇದನ್ನು ವಾಲಿ ನನಗೆ ಹೇಳಿದ್ದ. ಆದರೆ ನನಗೂ ಪೂರ್ತಿ ತಿಳಿದಿಲ್ಲ. ಅಷ್ಟು ಜನರನ್ನು ಮಟ್ಟ ಹಾಕಲು ನಮಗೂ ಕೆಲವು ಕೋಟಿ ವಾನರರ ಅವಶ್ಯಕತೆಯಿದೆ. ಸುಗ್ರೀವ ವಾನರ ಸೈನ್ಯಕ್ಕೆ ಸುದ್ದಿ ಮುಟ್ಟಿಸಿದ್ದಾನೆ. ನಿನ್ನನ್ನು ನೋಡಿ ಇಲ್ಲಿನ ಸ್ತ್ರೀಯರೆಲ್ಲರೂ ಭಯ ಪಡುತ್ತಿದ್ದಾರೆ. ನಿನ್ನ ಕೋಪವನ್ನು ಬಿಡು."

ಅವಳ ಮಾತು ಕೇಳಿದ ಲಕ್ಷ್ಮಣ ಶಾಂತನಾಗಿ, "ನಿನ್ನ ಮಾತು ನಿಜ. ಅದನ್ನು ನಾನು ಅಂಗೀಕರಿಸುತ್ತೇನೆ" ಎಂದ.

ಲಕ್ಷ್ಮಣನ ಮಾತು ಕೇಳಿದ ಸುಗ್ರೀವ ಆನಂದದಿಂದ ತನ್ನ ಕೊರಳಿನಲ್ಲಿರುವ ಮಾಲೆಯನ್ನು ತೆಗೆದು, "ಲಕ್ಷ್ಮಣಾ, ನಾನು ರಾಜ್ಯವನ್ನು ಪತ್ನಿಯನ್ನು ಕಳೆದುಕೊಂಡಿದ್ದೆ. ಮತ್ತೆ ರಾಮನ ಅನುಗ್ರಹದಿಂದ ಅವನ್ನು ಪಡೆದೆ. ರಾಮನಿಗೆ ಕೇವಲ ತನ್ನ ದೃಷ್ಟಿಯಿಂದ, ಬಾಣದಿಂದ ಲಂಕೆಯನ್ನು ಸುಟ್ಟುಬಿಡಬಲ್ಲ. ಅವನ ಮುಂದೆ ನನ್ನ ಸಹಾಯ ಎಷ್ಟು ಮಟ್ಟದ್ದು! 'ರಾಮನೇ ಅಲ್ಲವಾ' ಎಂಬ ಪ್ರೀತಿಯಿಂದ ಮರೆತೆನೋ, ಅಥವಾ 'ವಾನರ ಸೈನ್ಯಕ್ಕೆ ಸುದ್ದಿ ಕಳಿಸಿದೆ' ಎಂದು ಮರೆತೆನೋ ಗೊತ್ತಿಲ್ಲ. ಆದರೆ ಮರೆತಿದ್ದೇನೆ. ಪ್ರಪಂಚದಲ್ಲಿ ತಪ್ಪು ಮಾಡದವನು ಯಾರೂ ಇಲ್ಲ. ನನ್ನನ್ನು ಕ್ಷಮಿಸು" ಎಂದ. 

ಲಕ್ಷ್ಮಣನೂ, "ನೀನು ನನ್ನ ಅಣ್ಣನಿಗೆ ಆಶ್ರಯದಾತನಾಗಿರುವೆ. ನಿನ್ನ ನೆರಳಿನಲ್ಲಿ ರಾಮನ ಕೆಲಸ ನಡೆದೇ ನಡೆಯುತ್ತದೆ. ತನ್ನ ತಪ್ಪಿದ್ದಾಗ ಶಕ್ತಿಯಿದ್ದರೂ, ತಿರುಗಿಬೀಳದೆ ಕ್ಷಮೆ ಕೇಳುವ ಗುಣ ನಿನ್ನ ಬಳಿ ಇದೆ. ಪ್ರಸರಣ ಪರ್ವತದ ಗುಹೆಯಲ್ಲಿರುವ ನಿನ್ನ ಸ್ನೇಹಿತನನ್ನು ಸಮಾಧಾನ ಮಾಡು. ಅಣ್ಣನ ದುಃಖವನ್ನು ನೋಡಲಾರದೆ ಕೋಪದಿಂದ ನಾನೇನಾದರೂ ಅನ್ನಬಾರದ ಮಾತಾಡಿದ್ದರೆ ನನ್ನನ್ನು ಕ್ಷಮಿಸು” ಎಂದ.


Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ